Roopa Gururaj Column: ಪ್ರಶ್ನೆ ಕೇಳುವ ಮಕ್ಕಳನ್ನು ಸುಮ್ಮನಾಗಿಸಬೇಡಿ
ನನಗೆ ನನ್ನ ಮಗನ ಮೇಲೆ ನಂಬಿಕೆ ಇದೆ, ಅಸಾಧಾರಣವಾದದ್ದನ್ನು ಸಾಧಿಸುವ ಚೈತನ್ಯ ಅವನ ಲ್ಲಿದೆ, ನಿಮ್ಮ ಶಿಕ್ಷಣ ಅವನಿಗೆ ಬೇಡ, ನಾನೇ ಅವನಿಗೆ ನನ್ನ ಕೈಲಾದಷ್ಟನ್ನು ಹೇಳಿಕೊಡುತ್ತೇನೆ. ನೀವು ಅವನಿಗೆ ಗಿಳಿಯ ಪಾಠ ಒಪ್ಪಿಸುವ ಅವಶ್ಯಕತೆ ಇಲ್ಲ’ ಎಂದು ಮಗನನ್ನು ಮನೆಗೆ ಕರೆ ತಂದಳು.


ಒಂದೊಳ್ಳೆ ಮಾತು
ಮಗನ ಶಾಲೆಗೆ ಬಂದ ತಾಯಿಗೆ, ಮಗ ತರಗತಿಯ ಕೊನೆಯ ಮೂಲೆಯೊಂದರಲ್ಲಿ ಬಾಯಿಯ ಮೇಲೆ ಬೆರಳನ್ನು ಇಟ್ಟುಕೊಂಡು ಕುಳಿತಿರುವುದು ಕಾಣುತ್ತದೆ. ಅವನಿಗೆ ಮಾತನಾಡದಿರುವಂತೆ ಆತನ ಅಧ್ಯಾಪಕಿ ಶಿಕ್ಷೆವಿಽಸಿದ್ದರು. ತಾಯಿ ಮಗನನ್ನು ಎಂದೂ ಕೂಡ ಈ ರೀತಿಯಲ್ಲಿ ನೋಡಿರ ಲಿಲ್ಲ. ಅವಳಿಗೆ ಬಹಳ ಸಂಕಟವಾಯಿತು. ತನ್ನ ಮಗ ಅಂತಹ ತಪ್ಪನ್ನು ಏನು ಮಾಡಿರಬಹುದು? ಎಂದು ಅಧ್ಯಾಪಕಿಯನ್ನು ವಿಚಾರಿಸಿದಳು. ಆಗ ಆ ಮಹಿಳಾ ಅಧ್ಯಾಪಕಿ, ‘ನಿಮ್ಮ ಮಗನನ್ನು ನೀವು ಯಾವ ರೀತಿಯಲ್ಲಿ ಬೆಳೆಸಿದ್ದೀರಿ? ಅವನಿಗೆ ನಾವು ಹೇಳಿಕೊಡುವುದನ್ನು ಕಲಿಯಬೇಕೆಂಬುದೇ ಇಲ್ಲ, ಇಲ್ಲಸಲ್ಲದ ಬೇಡದ ಪ್ರಶ್ನೆಗಳನ್ನು ಕೇಳಿ, ನಮಗೆ ಮುಜುಗರವನ್ನುಂಟು ಮಾಡುತ್ತಾನೆ. ಮೊಟ್ಟೆಗೆ ನಾವೇ ಕಾವು ಕೊಟ್ಟರೆ, ಯಾಕೆ ಮರಿ ಯಾಗುವುದಿಲ್ಲ, ಅದೇಕೆ ಒಡೆದು ಹಾಳಾಗುತ್ತದೆ, ಈ ರೀತಿಯ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾನೆ, ಇವನಿಂದಾಗಿ ಎಲ್ಲಾ ಮಕ್ಕಳೂ ಹಾಳಾಗುತ್ತಿದ್ದಾರೆ.
ಎಲ್ಲರಿಗೂ ಇವನು ತಮಾಷೆಯ ವಸ್ತುವಾಗಿದ್ದಾನೆ’ ಎಂದು ಹೇಳಿದರು. ಹುಡುಗನ ತಾಯಿಗೆ ಕೋಪ ಬಂತು, ‘ನಿಮಗೆ ಅವನ ಪ್ರಶ್ನೆಗೆ ಉತ್ತರ ಕೊಡಲಾಗಲಿಲ್ಲ ಎಂದರೆ, ಗೊತ್ತಿಲ್ಲ ಎಂದು ಒಪ್ಪಿಕೊಳ್ಳಿ, ಅದು ಬಿಟ್ಟು ನನ್ನ ಮಗನದೇ ತಪ್ಪು ಎಂದು ಹೇಳಿ ಸುಮ್ಮನೆ ಶಿಕ್ಷೆ ವಿಧಿಸಬೇಡಿ’ ಎನ್ನುತ್ತಾಳೆ.
ಇದನ್ನೂ ಓದಿ: Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿಮಂಡವ್ಯ ಋಷಿ
ಅಧ್ಯಾಪಕಿಗೂ ಕೋಪ ಬರುತ್ತದೆ. ‘ಬಾಯಿಗೆ ಬಂದಂತೆ ಪ್ರಶ್ನೆ ಕೇಳುವ ನಿಮ್ಮ ಮಗನಿಗೆ ಬುದ್ಧಿ ಹೇಳುವುದನ್ನು ಬಿಟ್ಟು, ಅವನನ್ನೇ ವಹಿಸಿಕೊಂಡು ಬರುತ್ತೀರಲ್ಲಾ, ಅವನಿಗೆ ನೀವೇ ಪಾಠ ಹೇಳಿ ಕೊಡಿ, ನಿಮ್ಮ ಪ್ರಕಾರ ಅವನು ಮಹಾ ಬುದ್ದಿವಂತ, ಅವನಿಗೆ ನಮ್ಮ ಶಾಲೆಯ ಅಗತ್ಯವಿಲ್ಲ’ ಎನ್ನು ತ್ತಾರೆ.
ಇದರಿಂದ ಹುಡುಗನ ತಾಯಿಗೆ ಬಹಳವಾಗಿ ನೋವು ಹಾಗೂ ಅವಮಾನವಾಗುತ್ತದೆ. ಆಕೆಗೆ ಗೊತ್ತು, ಅವಳ ಮಗನ ಪ್ರಶ್ನೆಗಳಾವುದೂ ಉದ್ದಟತನದಿಂದ ಬಂದಿದ್ದಲ್ಲ ಎಂದು. ಒಂದು ನಿರ್ಧಾರಕ್ಕೆ ಬಂದ ತಾಯಿ, ‘ಗಾಳಿ ಹೊತ್ತು ತರುವ ಪುಟ್ಟ ಬೀಜದಲ್ಲಿ ವೃಕ್ಷವಾಗುವ ಶಕ್ತಿ ಇದೆ ಎಂಬುದನ್ನು ನೀವು ನಂಬುವುದಿಲ್ಲ. ಈ ಸಣ್ಣ ಹುಡುಗನ ಪ್ರಶ್ನೆಗೆ ದೊಡ್ಡದನ್ನು ಹುಡುಕುವ ಶಕ್ತಿ ಇದೆ ಎಂದು ನೀವು ಅಂದುಕೊಳ್ಳುವುದಿಲ್ಲ.
ನನಗೆ ನನ್ನ ಮಗನ ಮೇಲೆ ನಂಬಿಕೆ ಇದೆ, ಅಸಾಧಾರಣವಾದದ್ದನ್ನು ಸಾಧಿಸುವ ಚೈತನ್ಯ ಅವನ ಲ್ಲಿದೆ, ನಿಮ್ಮ ಶಿಕ್ಷಣ ಅವನಿಗೆ ಬೇಡ, ನಾನೇ ಅವನಿಗೆ ನನ್ನ ಕೈಲಾದಷ್ಟನ್ನು ಹೇಳಿಕೊಡುತ್ತೇನೆ. ನೀವು ಅವನಿಗೆ ಗಿಳಿಯ ಪಾಠ ಒಪ್ಪಿಸುವ ಅವಶ್ಯಕತೆ ಇಲ್ಲ’ ಎಂದು ಮಗನನ್ನು ಮನೆಗೆ ಕರೆ ತಂದಳು.
ಮನೆಗೆ ಬಂದು ಅವನ ಪ್ರಶ್ನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾ ಉತ್ತರ ಹೇಳುತ್ತಾಳೆ. ಗೊತ್ತಿಲ್ಲದಿದ್ದರೆ ಹುಡುಕುತ್ತಾಳೆ. ಹೀಗೆ ಅವನ ಶಕ್ತಿಗೆ ಅವಳೇ ಬಲವಾಗುತ್ತಾಳೆ. ಜಗತ್ತನ್ನೇ ಬದಲಿಸಿದ ಅವನ ಲೆಕ್ಕವಿರದಷ್ಟು ಸಂಶೋಧನೆಗೆ ದಾರಿ ಮಾಡಿಕೊಡುತ್ತಾಳೆ. ಆ ಹುಡುಗ ಬೇರೆ ಯಾರೂ ಅಲ್ಲ , ಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ವಿದ್ಯುತ್ ಬಲ್ಬ್ ಕಂಡುಹಿಡಿದವನು.
ಮಗನ ಬಗ್ಗೆ ತಾಯಿಗಿರುವ ನಂಬಿಕೆ, ಕೊನೆಗೂ ನಿಜವಾಗುತ್ತದೆ. ಅವನನ್ನು ರೂಪಿಸಿದ ಅವನ ತಾಯಿಯ ಹೆಸರು, ನ್ಯಾನ್ಸಿ ಸ್ಕಾಟಿಸ್ ಅವಳು ಕೂಡ ಅವನಂತೆಯೇ ಅಜರಾಮರಳಾಗಿದ್ದಾಳೆ. ನಮ್ಮ ಮಕ್ಕಳ ಬಗ್ಗೆ ಮೊದಲು ನಮಗೆ ನಂಬಿಕೆ ಇರಬೇಕು. ಚಿಕ್ಕಂದಿನಲ್ಲಿ ಮಕ್ಕಳು ಅದೇಕೆ, ಇದೇಕೆ ಎಂದು ಪ್ರಶ್ನೆ ಕೇಳುವುದು ಸಹಜ.
ಉತ್ತರ ಗೊತ್ತಿದ್ದರೆ ಸಮಾಧಾನವಾಗಿ ಅವರ ಪ್ರಶ್ನೆಗೆ ಉತ್ತರಿಸಬೇಕು, ಗೊತ್ತಿಲ್ಲದಿದ್ದರೆ, ಬಲ್ಲವರಿಂದ ಕೇಳಿ ತಿಳಿದಾದರೂ ಉತ್ತರಿಸುವುದು ಉತ್ತಮ. ಪ್ರಶ್ನೆ ಕೇಳುವ ಮಕ್ಕಳನ್ನು ಬಾಯಿ ಮುಚ್ಚಿಸುವು ದರಿಂದ ಅವರ ಮನಸ್ಸಿನಲ್ಲಿರುವ ಕ್ರಿಯಾತ್ಮಕತೆಯನ್ನು ಹಾಳು ಮಾಡಿ ಬಿಡುತ್ತೇವೆ. ಪ್ರಶ್ನೆಗಳಿಗೆ ಉತ್ತರಿಸುತ್ತಾ ದೊಡ್ಡವರು ಕಲಿಯುವ ಪಾಠವೂ ಬಹಳಷ್ಟಿರುತ್ತದೆ. ಬಹಳ ಪ್ರಶ್ನೆ ಕೇಳುವ ಮಕ್ಕ ಳನ್ನು ಗದರಿಸಿ ಸುಮ್ಮನಾಗಿಸಬೇಡಿ.
ಆ ಪ್ರಶ್ನೆ ಕೇಳುವ ಮನಸ್ಸೇ ನಾಳೆ ಹೊಸ ಹೊಸ ವಿಚಾರವನ್ನು ತಿಳಿದುಕೊಳ್ಳುವ ಕುತೂಹಲದಿಂದ ಹೆಚ್ಚು ಅರಿಯುವತ್ತ, ಜ್ಞಾನ ಪಡೆಯುವತ್ತ ತೊಡಗಿ ಕೊಳ್ಳುತ್ತದೆ.