Shishir Hegde Column: ʼರೀಲ್ಸ್ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್
ಕುಡಿದದ್ದು ಹೊಟ್ಟೆಯಿಂದ ರಕ್ತ ಸೇರಿ ಮಿದುಳನ್ನು ತಲುಪುತ್ತದೆ. ಮಿದುಳಿನಲ್ಲಿ ಇರೋದು ನ್ಯೂರಾನ್- ನರಕೋಶಗಳು. ಸರಾಸರಿ 86 ಸಾವಿರ ಕೋಟಿ ನರಕೋಶಗಳು. ಅವುಗಳು ಒಂದಕ್ಕಿನ್ನೊಂದು ಸಂವಹಿಸು ತ್ತಿದ್ದರೆ, ವ್ಯವಹರಿಸುತ್ತಿದ್ದರೆ ಮಾತ್ರ ನಮ್ಮ ಇಡೀ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಗಳು ತಾಳ-ಮೇಳ ಹೊಂದಿ, ಸರಿಯಾಗಿ ಕೆಲಸ ಮಾಡಲು ಸಾಧ್ಯ.
-
ಶಿಶಿರಕಾಲ
ಅತ್ಯಂತ ಸರಳ ಪ್ರಶ್ನೆ. ತಂಬಾಕು, ಸಿಗರೇಟ್, ಆಲ್ಕೋಹಾಲ್ ಇವೆಲ್ಲವುಗಳನ್ನು ಒಬ್ಬ ವ್ಯಕ್ತಿ ಬೇಕೆಂದು ಬಯಸುವುದು ಏಕೆ? ದುಶ್ಚಟಗಳು- ಚಟ ಎಂಬುದೆಲ್ಲ ಸರಿ. ಆದರೆ ಅವನ್ನು ಮತ್ತೆ ಮತ್ತೆ ಪಡೆಯಬೇಕೆಂದು ಬಯಸುವುದು ಏಕೆ? ಚಟಗಳೇ ಹಾಗೆ, ಬೇಕೆನಿಸುತ್ತವೆ ಎಂಬುದು ಉತ್ತರವಲ್ಲ. ಹಾಗಾದರೆ ಏನನ್ನು ಬಯಸಿ? ಪಾನಪ್ರಿಯರ ಉತ್ತರ- ‘ಹಗುರವಾಗಲು’, ‘ರಿಲ್ಯಾಕ್ಸ್’ ಆಗಲು. ಅದು ಹೌದು.
ಎಂದೂ ಕುಡಿಯದವರಿಗೆ ಈ ‘ರಿಲ್ಯಾಕ್ಸ್’ ಏನೆಂಬ ಕಲ್ಪನೆಯಿರುವುದಿಲ್ಲ. ಮದ್ಯಪಾನ ಅದರದೇ ಆದ ರೀತಿಯಲ್ಲಿ ಒಂದು ರೀತಿಯ ಸಡಿಲತೆಯನ್ನು, ಆರಾಮವನ್ನು ತಂದುಕೊಡುತ್ತವೆ ಎನ್ನುವು ದಂತೂ ನೂರು ಪ್ರತಿಶತ ಸತ್ಯ! ಕುಡಿದರೆ ಕೇವಲ ತಲೆಸುತ್ತುತ್ತದೆ, ವಾಂತಿ ಬರುತ್ತದೆ ಎಂದಾಗಿದ್ದರೆ ಯಾರು ಕುಡಿಯುತ್ತಿದ್ದರು? ಇದು ಕೇವಲ ಸುಖದ, ಆರಾಮದ ಮಾತಷ್ಟೇ ಅಲ್ಲ. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ ಸುಖ ದೈಹಿಕವಷ್ಟೇ ಅಲ್ಲ.
ಕುಡಿದು ವಾಲಬೇಕು, ಮೋರಿಗೆ ಬೀಳಬೇಕೆಂದು ಯಾರೂ ಕುಡಿಯುವುದಿಲ್ಲವಲ್ಲ. ಎಲ್ಲವೂ ಅದರಾಚೆಯ ಮಾನಸಿಕ ಸಡಿಲತೆಗೆ ಸಂಬಂಧಿಸಿದ್ದು. ಆಲ್ಕೋಹಾಲ್‌ನ ಮೋಜು ಅಡಗಿರುವುದು ಮಿದುಳಿನ ಅನುಭವದಲ್ಲಿ. ಹಾಗಾದರೆ, ಆಲ್ಕೋಹಾಲ್ ಮಿದುಳಿನಲ್ಲಿ ಹೋಗಿ ಯಾವ ರಸಾಯನ ಶಾಸ್ತ್ರ ಮಾಡುತ್ತದೆ? ಬಹಳ ಸರಳ.
ಕುಡಿದದ್ದು ಹೊಟ್ಟೆಯಿಂದ ರಕ್ತ ಸೇರಿ ಮಿದುಳನ್ನು ತಲುಪುತ್ತದೆ. ಮಿದುಳಿನಲ್ಲಿ ಇರೋದು ನ್ಯೂರಾನ್- ನರಕೋಶಗಳು. ಸರಾಸರಿ 86 ಸಾವಿರ ಕೋಟಿ ನರಕೋಶಗಳು. ಅವುಗಳು ಒಂದಕ್ಕಿ ನ್ನೊಂದು ಸಂವಹಿಸುತ್ತಿದ್ದರೆ, ವ್ಯವಹರಿಸುತ್ತಿದ್ದರೆ ಮಾತ್ರ ನಮ್ಮ ಇಡೀ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಗಳು ತಾಳ-ಮೇಳ ಹೊಂದಿ, ಸರಿಯಾಗಿ ಕೆಲಸ ಮಾಡಲು ಸಾಧ್ಯ.
ಇದನ್ನೂ ಓದಿ: Shishir Hegde Column: ರೆಸ್ಟೋರೆಂಟ್ʼಗಳಿಗೆ ಸ್ಟಾರ್ ಪಟ್ಟ ಕೊಡುವ ಟೈರ್ ಕಂಪೆನಿ
ಈ ನರಕೋಶಗಳ ನಡುವಿನ ಸಂವಹನಕ್ಕೆ ಆಲ್ಕೋಹಾಲ್ ಅಡ್ಡಿ ತರುತ್ತದೆ, ನಿಧಾನ ಮಾಡುತ್ತದೆ. ಪರಿಣಾಮವಾಗಿ ಆಲೋಚನೆಗಳು ಕಡಿಮೆಯಾಗುತ್ತವೆ, ನಮ್ಮ ತಲೆ ಶಾಂತವಾಗುತ್ತದೆ, ಆತಂಕ, ಹೆದರಿಕೆ ಕಡಿಮೆಯಾಗುತ್ತದೆ, ಜತೆಯಲ್ಲಿ ದೇಹದ ಸಮತೋಲನ ತಪ್ಪುತ್ತದೆ.
ಹೊರಗಿನ ಜನರಿಗೆ ಅದು, ಕಣ್ಣು ಕೆಂಪಾಗಿರುವುದು ಮಾತ್ರ ಕಾಣಿಸುವುದು. ಕುಡಿದ ಪರಿಣಾಮ ಮುಖ್ಯವಾಗಿ ಸ್ವಯಂ ಅನುಮಾನ ಕಡಿಮೆಯಾಗಿ ಆತ್ಮಸ್ಥೈರ್ಯ ಹೆಚ್ಚಿದ ಅನುಭವವಾಗುತ್ತದೆ. ಅದಕ್ಕೆಂದೇ ಕುಡಿದಾಗ ಇಲಿಯೂ ಹುಲಿಯಾಗುವುದು. ಇರಲಿ. ಮಿದುಳಿನ ಒಟ್ಟಾರೆ ಕಾರ್ಯ ಚಟುವಟಿಕೆ ನಿಧಾನವಾಗುತ್ತಿದ್ದಂತೆ, ಆ ನಿಧಾನವೇ ‘ರಿಲ್ಯಾಕ್ಸಿಂಗ್’ ಅನುಭವ ಕೊಡುತ್ತದೆ.
ನಿರಾಳತೆಯ ಜತೆಯಲ್ಲಿ ಆತ್ಮವಿಶ್ವಾಸದ ಸುಳ್ಳುಭಾವ ಸೃಷ್ಟಿಯಾಗುತ್ತದೆ. ತನ್ಮೂಲಕ ಮಿದುಳು ಆಲ್ಕೋಹಾಲ್ ಅನ್ನು ನಿರಾಳತೆಯ ಸಾಧ್ಯತೆಯಾಗಿ ಕಲ್ಪಿಸಿಕೊಳ್ಳುತ್ತದೆ, ನೆನಪಿಡುತ್ತದೆ. ಆ ಹಗುರ ತನ ಬೇಕೆನ್ನಿಸಿದಾಗಲೆಲ್ಲ, ತಲೆ ಬಿಸಿಯಾದಾಗ, ನಿರಾಳತೆ ಬಯಸಿದಾಗ ಆಲ್ಕೋಹಾಲ, ಬಾರು ನೆನಪಾಗುತ್ತವೆ, ಬೇಕೆನ್ನಿಸುತ್ತದೆ. ಈ ಬಯಕೆ ನಿರಂತರ ಪೂರೈಕೆಯಾದರೆ ಚಟವಾಗುತ್ತದೆ.
ತಂಬಾಕು, ಆಲ್ಕೋಹಾಲ, ಗಾಂಜಾ, ಡ್ರಗ್ಸ್ ಎಲ್ಲವೂ ವಿಜ್ಞಾನಿಗಳ ಪ್ರಕಾರ ಒಂದೊಂದು ರಾಸಾಯ ನಿಕಗಳು. ಅವುಗಳು ತಮ್ಮದೇ ಆದ ರೀತಿ-ನಮೂನೆಗಳಲ್ಲಿ ತಲುಪಿದ ಮಿದುಳಿನ ಭಾಗಗಳ ವ್ಯವಹಾರವನ್ನು ತಗ್ಗಿಸುತ್ತವೆ. ಮಿದುಳು ಇದನ್ನೇ ಖುಷಿಯೆಂದು ಗ್ರಹಿಸುತ್ತದೆ.
ಒಂದು ಮಜವೆಂದರೆ, ಯೋಗದ ಮುಖ್ಯಭಾಗವಾದ ‘ಧ್ಯಾನ’ ಕೂಡ ಮನಸ್ಸಿನ ಕಾರ್ಯ ಕಲಾಪ ವನ್ನು ಗಮನಿಸುವುದು, ಆ ಮೂಲಕ ಯೋಚನೆ, ಮನಸ್ಸು, ಮಿದುಳಿನ ಕೆಲಸವನ್ನು ಕಡಿಮೆ ಮಾಡುವುದೇ ಆಗಿದೆ. ‘ಯೋಗ ಚಿತ್ತವೃತ್ತಿ ನಿರೋಧಃ’- ಇದು ಪತಂಜಲಿ ಯೋಗಸೂತ್ರದ ಎರಡನೇ ಸಾಲು.
ಹಾಗಾಗಿಯೇ ಧ್ಯಾನಕ್ಕೂ ದುಶ್ಚಟದ ಪರಿಣಾಮದ ನಿರಾಳತೆಗೂ ಕೆಲವು ಸಾಮ್ಯತೆಗಳು ಕಾಣಿಸು ತ್ತವೆ. ಸಾಧಕರು ಧ್ಯಾನವೊಂದು ನಶೆ ಎನ್ನುವುದು ಆ ಹೋಲಿಕೆಯಿಂದ. ವ್ಯತ್ಯಾಸವೆಂದರೆ ಆಲ್ಕೋ ಹಾಲ್ ಕೃತಕ, ನಿರಂಕುಶ ಮತ್ತು ತಾತ್ಕಾಲಿಕ. ಇದೆಲ್ಲ ಹೇಳಿದ್ದೇಕೆ ಎಂದರೆ- ಯಾವುದೇ ದುಶ್ಚಟ ದೈಹಿಕದಾಚೆ ಮಿದುಳು-ಮನಸ್ಸಿಗೆ ಸಂಬಂಧಿಸಿದವು ಎಂಬುದನ್ನು ಸ್ಪಷ್ಟಪಡಿಸಲು.
ಯಾರೂ ಓಲಾಡಲು, ಕಣ್ಣು ಕೆಂಪು ಮಾಡಿಕೊಳ್ಳಲು, ಗಟಾರಕ್ಕೆ ಬೀಳಲು ಬಯಸಿ ಕುಡಿಯುವುದು ಇತ್ಯಾದಿ ಮಾಡುವುದಿಲ್ಲ ತಾನೆ? ಬಯಕೆ ನರವ್ಯವಸ್ಥೆಯದು- ಮನಸ್ಸನ್ನು ಮೀರುವ ಮಿದುಳಿ ನದು. ಇತ್ತೀಚೆಗೆ ಸ್ನೇಹಿತರೊಬ್ಬರ ಜತೆ ಫೋನಿನಲ್ಲಿ ಮಾತನಾಡುತ್ತಿದ್ದೆ.
ಮಾತು ಮಾತಿನಲ್ಲಿ ಅವರದ್ದೊಂದು ಸಮಸ್ಯೆ ಹಂಚಿಕೊಂಡರು. “ಶಿಶಿರ್, ಬೆಳಗ್ಗೆ ಹಲ್ಲುಜ್ಜುವಾಗ, ಸ್ನಾನಕ್ಕೆ ಇಳಿಯುವ ಮೊದಲು, ತಿಂಡಿ ತಿನ್ನುವಾಗ ಹೀಗೆ ಒಂದೆರಡು ಕ್ಷಣ ಬಿಡುವಾದಾಗ ರೀಲ್ಸ್ ನೋಡುತ್ತೇನೆ. ಆದರೆ ಈಗೀಗ ಎದ್ದು ಟಾಯ್ಲೆಟ್‌ನಲ್ಲಿ ಕೂತಾಗಲೇ ‘ರೀಲ್ಸ್’ ನೋಡಬೇಕೆನ್ನಿಸುತ್ತದೆ. ಮೊದಲೆಲ್ಲ ಐದೇ ನಿಮಿಷದಲ್ಲಿ ಮುಗಿಯುತ್ತಿದ್ದ ಕೆಲಸಕ್ಕೆ ಈಗ ಅರ್ಧಗಂಟೆ ಬೇಕಾಗುತ್ತಿದೆ.
ಈಗೀಗ ಬಿಡುವಾದಾಗಲ್ಲ ರೀಲ್ಸ್ ನೋಡುವುದು ಅಭ್ಯಾಸವಾಗಿದೆ. ಮೊದಲೆಲ್ಲ ಇಂಟರ್‌ವ್ಯೂ, ಪಾಡ್‌ಕಾಸ್ಟ್ ಇತ್ಯಾದಿ ನೋಡುತ್ತಿದ್ದೆ. ಈಗ ರೀಲ್ಸ್ ಮಾತ್ರ ರಂಜಿಸುತ್ತದೆ. ಸಮಸ್ಯೆ ಅಷ್ಟೇ ಅಲ್ಲ. ಈಗೀಗ ಯಾರ ಜತೆಗಾದರೂ ಮಾತನಾಡುವಾಗಲೂ ಯಾವುದೇ ಮುಜುಗರವಿಲ್ಲದೆ ಮೊಬೈಲ್ ಅನ್‌ಲಾಕ್ ಮಾಡುತ್ತೇನೆ. ಅವರಿಗೆ ಕಾಣದಂತೆ ರೀಲ್ಸ್ ನೋಡುತ್ತೇನೆ.
ಈಗೀಗ ಆಫೀಸಿನಲ್ಲಿ ಬಿಡುವಾದಾಗಲೆಲ್ಲ ರೀಲ್ಸ್ ನೋಡುವುದಾಗಿದೆ, ಸೆಳೆತ. ಕೆಲಸ ಜಾಸ್ತಿಯಿದ್ದಾಗ ನಡುವೆ ಹಗುರವಾಗಲು ನೋಡುತ್ತೇನೆ. ಕೆಲಸವಿಲ್ಲದಿದ್ದಾಗ ಬಿಡುವೆಂದು ರೀಲ್ಸ್ ನೋಡುತ್ತೇನೆ. ಕುಟುಂಬದವರ ಜತೆ ಮಾತನಾಡುವಾಗ, ಊಟಕ್ಕೆ ಕೂತಾಗ ರೀಲ್ಸ್ ಬೇಕು. ಫೋನ್ ಮಾಡಿ ಬೇರೆ ಯವರ ಹತ್ತಿರ ಮಾತನಾಡುವಾಗ ಕೂಡ ರೀಲ್ಸ್ ನೋಡದಿದ್ದರೆ ಬೇಸರಬರುತ್ತದೆ.
ಮೊದಲೆಲ್ಲ ನಿದ್ರೆ ಬಾರದು ಎಂದು ಮಲಗುವುದಕ್ಕಿಂತ ಮೊದಲು ರೀಲ್ಸ್ ನೋಡೊದಿತ್ತು. ಸ್ವಲ್ಪ ಕಣ್ಣಿಗೆ ಸುಸ್ತಾಗಿ ನಿದ್ರೆ ಬರುತ್ತಿತ್ತು. ಈಗ ಅರ್ಧಗಂಟೆಯಾದರೂ ರೀಲ್ಸ್ ನಿಲ್ಲುವುದಿಲ್ಲ, ಕಣ್ಣು ಮುಚ್ಚುವುದಿಲ್ಲ. ಎಲ್ಲದರಲ್ಲೂ ಏಕಾಗ್ರತೆ ಕಡಿಮೆಯಾದದ್ದು ತಿಳಿಯುತ್ತಿದೆ. ಕೆಲಸದೆಡೆಗೆ ಮೊದ ಲಿನ ಆಸ್ಥೆ ಉಳಿದಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನನ್ನ ಎಲ್ಲ ಒಳ್ಳೆಯ ಹವ್ಯಾಸ, ಓದುವುದು ಇತ್ಯಾದಿ ತೀರಾ ಸಪ್ಪೆಯೆನಿಸುತ್ತಿದೆ. ನನ್ನ ತಾಳ್ಮೆ ಕಡಿಮೆಯಾಗಿದೆ ಎನಿಸುತ್ತಿದೆ.
ನನಗೆ ಡೋಪಮೈನ್ ಇತ್ಯಾದಿ ಎಲ್ಲ ಗೊತ್ತು. ಆದರೆ ರೀಲ್ಸ್ ನೋಡುವುದನ್ನು ನಿಲ್ಲಿಸಲಿಕ್ಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾ ಬಿಟ್ಟರೆ ಜಗತ್ತಿನಿಂದ ಕೊಂಡಿ ಕಳಚಿ ಕೊಂಡಂ ತಾಗುತ್ತದೆ. ಆದರೆ ತೆರೆದರೆ ರೀಲ್ಸ್". ಇದನ್ನು ಕೇಳಿದ ನನಗೆ ಯಾವುದೇ ಆಶ್ಚರ್ಯವಾಗಲಿಲ್ಲ.
ಏಕೆಂದರೆ ಇದೆಲ್ಲ ನನ್ನ ಸ್ನೇಹಿತನೊಬ್ಬನದ್ದೇ ಸಮಸ್ಯೆಯಲ್ಲ. ಸದ್ಯ ಒಂದಿಡೀ ತಲೆಮಾರಿನ ಸಮಸ್ಯೆ ಇದು. ಚಟದ ಪ್ರಮಾಣ ಬೇರೆ ಬೇರೆ. ನಿರಂತರ ರೀಲ್ಸ ನೋಡಬೇಕೆಂಬ ಬಯಕೆ, ನೆಮ್ಮದಿ ಒದಗದ ಪೂರೈಕೆ ಸರ್ವವ್ಯಾಪಿ. ಒಂದಿಷ್ಟು ವ್ಯಕ್ತಪಡಿಸಲಾಗದ ಖಾಲಿ ಭಾವವನ್ನು ಮುಂದಿನ ರೀಲ್ಸ್ ಮಾತ್ರ ತಣಿಸಬಹುದು ಎಂಬ ನಿರಂತರ ಬಯಕೆ, ನಿರಂತರ ಮರೀಚಿಕೆ.
ನಮಗೆಲ್ಲರಿಗೂ ಈ ಅನುಭವ ಆಗಿಯೇ ಇರುತ್ತದೆ. ಒಂದಾದ ಮೇಲೊಂದರಂತೆ ರೀಲ್ಸ್, ಅದೊಂದು ದಿವ್ಯಗಳಿಗೆಯಲ್ಲಿ ಸಮಯ ವ್ಯರ್ಥವಾದ ಸಾಕ್ಷಾತ್ಕಾರ. ಇನ್ನೊಂದೆರಡು ನೋಡಿ ನಿಲ್ಲಿಸೋಣ ಎಂಬ ಸಮಜಾಯಿಷಿ. ರೀಲ್ಸ್ʼನ ಅಲ್ಗಾರಿಥಮ್- ಯಾವುದನ್ನು ನಿಮ್ಮ ಮೊದಲ ಪೇಜ್‌ನಲ್ಲಿ ತೋರಿ ಸಬೇಕು, ಯಾವುದು ಮುಗಿದಾಕ್ಷಣ ಇನ್ಯಾವುದನ್ನು ತೋರಿಸಬೇಕು ಎಂಬ ಲೆಕ್ಕಾಚಾರ ಅತ್ಯಂತ ಜಾಣತನದಿಂದ ತಯಾರಿಸಿದ್ದು ಎಂಬುದು ನಿಮಗೆ ಗೊತ್ತಿರುತ್ತದೆ. ಆದರೆ ಈ ಜಾಣತನ ಯಾವ ಮಟ್ಟಿಗಿನದು ಎಂಬ ಅಂದಾಜಿದೆಯೇ? ನೀವು ಯಾವ ರೀತಿಯ ರೀಲ್ಸ್, ಎಷ್ಟು ಸೆಕೆಂಡ್ ನೋಡಿ ದ್ದೀರಿ, ನೀವು ನೋಡಿದ ರೀಲ್ಸ್ʼನ ಆರಂಭ ಹೇಗಿದೆ, ನೀವು ಇಡಿಯಾಗಿ ನೋಡಿದ ರೀಲ್ಸ್ ಯಾವುದು ಎಂಬುದೆಲ್ಲ ಲೆಕ್ಕಾಚಾರದ ಭಾಗ.
ಹಾಗಾಗಿ ನಮಗೆ ಇಷ್ಟವಾಗುವ ರೀಲ್ಸಗಳೇ ಕಣ್ಣೆದುರು ರಾರಾಜಿಸುತ್ತವೆ. ಆ ಕಾರಣಕ್ಕೇ ರೀಲ್ಸ್ ನೋಡುವುದನ್ನು ನಿಲ್ಲಿಸಲಿಕ್ಕೆ ಸುಲಭದಲ್ಲಿ ಆಗುವುದಿಲ್ಲ. ನೀವು ಅರ್ಧ ಸೆಕೆಂಡ್ ಒಂದು ರೀಲ್ಸ್ ಅನ್ನು ಹೆಚ್ಚಿಗೆ ಅಥವಾ ಕಡಿಮೆ ನೋಡಿದರೂ ನಿಮ್ಮ ವಿಷಯದ ಒಲವನ್ನು ಅದು ಗ್ರಹಿಸುತ್ತದೆ. ನಿಮ್ಮ ಲೆಕ್ಕಾಚಾರಕ್ಕೆ ಅದನ್ನು ಸೇರಿಸಿಕೊಳ್ಳುತ್ತದೆ. ಅಲ್ಲದೆ ನಡುನಡುವೆ ಕೆಲವೇ ವಿಷಯಗಳಿಗೆ ಅಂಟಿಕೊಂಡು ಬೇಸರ ಬರಬಾರದು ಎಂದು ಹೊಸ ನಮೂನೆಯ ರೀಲ್ಸ್ ಅನ್ನು ನಮಗೆ ತೋರಿಸ ಲಾಗುತ್ತದೆ.
ವಯಸ್ಸು, ಜಾಗ, ಲಿಂಗ ಇತ್ಯಾದಿ ಗ್ರಹಿಸಿ ದರ್ಜಿ ಹೊಲಿದುಕೊಟ್ಟ ಅಂಗಿಯಂತೆ ರೀಲ್ಸ್ʼಗಳು. ಹೆಚ್ಚಿಗೆ ಸಮಯ ಕಳೆದಂತೆ ‘ಅಳತೆ’ ಇನ್ನಷ್ಟು ಸರಿಯಾಗುತ್ತ ಹೋಗುತ್ತದೆ. ಹೀಗೆ ಮಿದುಳಿನ ಜತೆ ತಂತ್ರ ಜ್ಞಾನ ‘ಕ್ರೂರವಾದ’ ಆಟಕ್ಕಿಳಿದುಬಿಡುತ್ತವೆ. ಮಿದುಳು ಮಾತ್ರ ಇದನ್ನು ‘ಮುಗ್ಧರಂಜನೆ’ - ‘ಟೈಮ್ ಪಾಸ್’ ಎಂದೇ ವಾದ ಮಾಡುತ್ತಿರುತ್ತದೆ.
ರೀಲ್ಸ್ʼಗಳಲ್ಲಿ ಕೆಲವೇ ಪ್ರಕಾರದವು ಹೆಚ್ಚು ಪ್ರಚಲಿತದಲ್ಲಿವೆ. ಮನುಷ್ಯ ಭಾವಗಳೆಷ್ಟಿವೆಯೋ ಅಷ್ಟೇ ಪ್ರಕಾರಗಳಿವೆ. ಮೊದಲನೆಯದು ಕ್ರೋಧ, ಆಕ್ರೋಶಗಳಿಗೆ ಸಂಬಂಧಿಸಿದ್ದು. ರಾಜಕೀಯ, ದಂಗೆ, ಭಯೋತ್ಪಾದನೆ, ಅನೈತಿಕತೆ ಇತ್ಯಾದಿ ವಿಷಯಕ್ಕೆ ಸೇರಿದವು. ಇವೆಲ್ಲವನ್ನೂ ನೋಡಿದಾಕ್ಷಣ ನಮ್ಮಂದು ಕೃತಕ ಸಿಟ್ಟು ಹುಟ್ಟುತ್ತದೆ.
ಸಹಜ ಸಿಟ್ಟು ಬಂದಾಗ ಎದೆಬಡಿತ ಹೆಚ್ಚಾಗುವುದು ಇತ್ಯಾದಿಗಳ ಜತೆ ಮಿದುಳಂದಿಷ್ಟು ರಾಸಾ ಯನಿಕಗಳ ಉತ್ಪತ್ತಿಯಾಗುತ್ತದೆ. ಅವು ನಮ್ಮನ್ನು ಜಾಗೃತಗೊಳಿಸುತ್ತದೆ. ಆ ರಾಸಾಯನಿಕಗಳು ಈ ರೀತಿಯ ಆಕ್ರೋಶ ಹುಟ್ಟಿಸುವ ರೀಲ್ಸಗಳನ್ನು ಕಂಡಾಗ ಕೂಡ ಸಂಭವಿಸುತ್ತದೆ. ಆ ಮೂಲಕ ಮಿದುಳಿನಂದು ‘ಕಿಕ್’ಗೆ ಕಾರಣವಾಗುತ್ತದೆ. ಇವೆಲ್ಲವನ್ನು ಮಿದುಳು ಒಳ್ಳೆಯದೆಂದು ಇಷ್ಟಪಡು ತ್ತದೆ. ಕ್ರಮೇಣ, ‘ನೋಡಿ ಹುಟ್ಟುವ ಮುಗ್ಧ ಕ್ರೋಧ’ ಅಂತರ್ಯದಂದು ಮನೆಕಟ್ಟಿಕೊಳ್ಳುತ್ತದೆ.
ಹಾಸ್ಯ ಮತ್ತು ನಮಗೆ ಹತ್ತಿರವಾಗುವ ಘಟನೆಗಳ ರೀಲ್ಸ್ ಇನ್ನೊಂದು ಪ್ರಕಾರದ್ದು. ಅದೆಲ್ಲಿಯೋ ಚೀನಾದಲ್ಲಿ ಮಳೆ ನೀರಿಗೆ ಜಾರಿ ಬಿದ್ದ ಯುವತಿಯ ರೀಲ್ಸ್ ತಕ್ಷಣ ನಮ್ಮದೇ ಹಾಸ್ಯವೆನಿಸುತ್ತದೆ. ಕಟ್ಟುನಿಟ್ಟು ‘ಗುರ್’ ಎನ್ನುವ ಅಪ್ಪ, ಕಿರುಚಾಡುವ ಟೀಚರು, ದಡ್ಡ ಬಾಸ್, ಹೀಗೆ ಎಲ್ಲ ಹಾಸ್ಯ ಘಟನೆಗಳ ರೀಲ್ಸ್ʼಗಳು ಹೇಗೋ ಒಂದು ಕೋನದಲ್ಲಿ ನಮಗೆ ಆಪ್ತವೆನಿಸುತ್ತವೆ.
ಇನ್ನೊಂದು ಜನಪ್ರಿಯ ಪ್ರಕಾರದ್ದೆಂದರೆ ‘ರೂಪಾಂತರದ ರೀಲ್ಸ್’. ಚರ್ಮ, ತೂಕ, ದೇಹ, ಮನೆ, ಕಚೇರಿ ಇವೆಲ್ಲವುಗಳ ರೂಪಾಂತರಿಸುವ ರೀಲ್ಸ್. ಹೀಗೆ ಸ್ಥೂಲವಾಗಿ ಕೆಲವೇ ಪ್ರಕಾರಗಳು. ಒಂದೊಂ ದನ್ನೂ ಕಂಡಾಗ ಅವು ಕೊಡುವ ‘ಟಿಂಗ್’, ಮಿದುಳನ್ನು, ಮನಸ್ಸನ್ನು ಕುಟುಕುವ ರೀತಿ ಪ್ರತ್ಯೇಕ.
ಇದೆಲ್ಲದಕ್ಕಿಂತ ಹೆಚ್ಚಾಗಿ ನೋಡಲ್ಪಡುವ ಇನ್ನೊಂದು ‘ರೀಲ್ಸ್’ ಪ್ರಕಾರವಿದೆ. ಅದು ಆಹಾರಕ್ಕೆ ಸಂಬಂಧಿಸಿದ ರೀಲ್ಸ್. ಗರಿಮುರಿಯಾದ ತಿಂಡಿ-ತಿನಿಸುಗಳ ತಯಾರಿಕಾ ವಿಧಾನದ ರೀಲ್ಸ್. ಮೆಲ್ಲಗೆ ಳೆಯುವ, ಬಿಸಿಗೆ ಕರಗುವ ಚೀಸ್, ಹಾರಿ ಬೀಳುವ ಪನೀರ್, ಉಬ್ಬು ಪೂರಿ, ಎಣ್ಣೆ ಬಂಡಿಯಿಂದ ಈಗತಾನೇ ಹೊರಬಂದ ಸಮೋಸ, ಹಬೆಯಾಡುವ ಚಿಕನ್ ಕಬಾಬಿನ ರೀಲ್ಸ್. ಹರಿತವಾದ ಚಾಕು ಆಹಾರವನ್ನು ಕತ್ತರಿಸುವಾಗ ಬರುವ ಆ ಸೂಕ್ಷ್ಮ ಶಬ್ದಗಳ ರೀಲ್ಸ್.
ಉಪಾಹಾರಗೃಹದ ಮೈಸೂರು ಮಸಾಲೆ, ಅಸಂಖ್ಯ ಗ್ರಹಿಣಿಯರ ಅಡುಗೆ ರೀಲ್ಸ್, ರಸ್ತೆ ಬದಿಯ ಹಕ್ಕಾ ನೂಡಲ್ಸ್ ಇತ್ಯಾದಿ. ಇದೆಲ್ಲ ರಂಜನೆಯಾಗಿ ಕೆಲಸ ಮಾಡುವುದು ಹೇಗೆ? ನಮ್ಮ ಮಿದುಳು ಮತ್ತು ನರಮಂಡಲಕ್ಕೆ ಆನುವಂಶಿಕ ಪ್ರವೃತ್ತಿಯಿದೆ.
ಅದಕ್ಕೆ Zಠಿಜ್ಚಿಜಿmZಠಿಟ್ಟqs mಛಿZoಛಿ ಎಂದು ಹೆಸರು. ನಾವು ಆಹಾರವನ್ನು ಪಡೆಯುವುದಕ್ಕಿಂತ ಮೊದಲು ನಿರೀಕ್ಷಿಸಿದಾಗಲೇ ಖುಷಿಯ ಅನುಭವ ಶುರುವಾಗಿಬಿಡುತ್ತದೆ. ಹಸಿವಿನಿಂದ ಕಾದು ಸಿಕ್ಕ ಆಹಾರ ಕೊಡುವ ತೃಪ್ತಿ ಹೆಚ್ಚಲ್ಲವೇ? ಆಹಾರ ಬಯಸಿದಾಗ ಅದನ್ನು ಪಡೆಯುವುದಕ್ಕೆ ಹೊರಡಲು ಇರಲೇಬೇಕಾದ ಉತ್ತೇಜನ ಅದು. ಆಹಾರದ ನೆನಪಾದಾಗ, ಕಂಡಾಗ ಆಗೆಲ್ಲ ಅದಕ್ಕೆ ಸಂಬಂಧಿಸಿದ ಒಂದಿಷ್ಟು ರಸಾಯನ ಮಿದುಳಿನಲ್ಲಿ ಉತ್ಪಾದನೆಯಾಗುತ್ತದೆ.
ಅದೇ ಕೆಲಸ ಆಹಾರದ ರೀಲ್ಸ್ ನೋಡಿದಾಗಲೂ ಆಗುತ್ತದೆ. ರುಚಿಯಾದ, ಬಣ್ಣದ, ರಸಪೂರಿತ ಆಹಾರ ಕಂಡಾಗ ಜೊಲ್ಲು ಬರುವುದು ಇದೆಲ್ಲ ಪ್ರಕ್ರಿಯೆ ಮಿದುಳಲ್ಲಿ ನಡೆದ ನಂತರ. ಹುಣಿಸೆ ಹಣ್ಣು ಕಂಡಾಗ ಬಾಯಲ್ಲಿ ನೀರೂರುವುದಕ್ಕಿಂತ ಮೊದಲು ಕ್ಷಣಿಕ ಖುಷಿಯ ಅನುಭವವಾಗುತ್ತದೆ.
ಇದೆಲ್ಲ ಕೇವಲ ಕಣ್ಣಿನ, ಇಂದ್ರಿಯಗಳ ರಂಜನೆಯಲ್ಲ. ಅದರಾಚೆಯ ಹಸಿವು, ಪಚನ ವ್ಯವಸ್ಥೆ ಮತ್ತು ಜಾಗ್ರತಾ ವ್ಯವಸ್ಥೆಯ ಜತೆಗಿನ ಆಟ. ತಿನ್ನಲಾಗುವುದಿಲ್ಲ ಎಂಬುದು ಗೊತ್ತು. ಇನ್ನೊಬ್ಬರು ಸ್ಕ್ರೀನಿನಲ್ಲಿ ಅಡುಗೆಯನ್ನು ತಿಂದು ರಸ ಹೀರಿ ‘ಆಹಾ’ ಎನ್ನುವುದನ್ನು ನೋಡಿ ನಮಗೇಕೆ ತೃಪ್ತಿ ಯೆನಿಸಬೇಕು? ತೃಪ್ತಿಯೆನಿಸುತ್ತದೆ.
ಆಫ್ರಿಕಾದ ಕಾಡುಜನರು ಅರೆಬೆಂದ ಮಂಗ, ಹಸಿಹಾವಿನ ಮಾಂಸ ಕತ್ತರಿಸುವುದು, ಚರ್ಮ ಸುಲಿ ಯುವುದು, ತಿನ್ನುವುದು ಒಬ್ಬ ರೀಲ್ಸ್ ಮಾಡಿ ಹಾಕುತ್ತಾನೆ. ಅವನ ರೀಲ್ಸ್ ಅನ್ನು ಕೋಟಿ ಕೋಟಿ ಜನ ನೋಡುತ್ತಾರೆ. ರೀಲ್ಸ್ ಎಲ್ಲವೂ ಒಂದೇ ಅಲ್ಲ. ಒಂದೊಂದು ನಮೂನೆಯ ರೀಲ್ಸ್ ಮಿದುಳಿನ ಒಂದೊಂದು ಭಾಗ, ಮನಸ್ಸಿನ ಭಾವವನ್ನು ಮೀಟುತ್ತವೆ.
ಪ್ರತಿಯೊಂದು ಪ್ರಭೇದಕ್ಕೂ, ರಸಕ್ಕೂ ಮಿದುಳಿನಲ್ಲಿ ಪ್ರತ್ಯೇಕ ರಾಸಾಯನಿಕ ಸೂಸುವ ಗುಣ ಪರಿಣಾಮವಿದೆ. ಹಾಗೆ ನೋಡಿದರೆ ಎಲ್ಲ ಕಲಾಪ್ರಭೇದದಲ್ಲಿಯೂ ಅದೇ ಗುಣಗಳಿವೆ. ಧಾರಾವಾಹಿ, ನಾಟಕ, ಯಕ್ಷಗಾನ ಇತ್ಯಾದಿ ನವರಸಾನುಭವ ಕೊಡುತ್ತವೆ.
ಆದರೆ ರೀಲ್ಸ್ʼನ ಸಮಸ್ಯೆಯೆಂದರೆ ಆದಷ್ಟೂ ಭಾವನೆ, ರಾಸಾಯನಿಕ ಏರಿಳಿತಗಳು ಐದರಿಂದ ಇಪ್ಪತ್ತು ಸೆಕೆಂಡಿಗೆ ಸಿಗುತ್ತದೆ, ಬದಲಾಗುತ್ತದೆ. ಒಂದು ದುಃಖದ್ದು, ಒಂದು ಸಿಟ್ಟಿನದ್ದು, ಒಂದು ಹಾಸ್ಯದ್ದು, ಒಂದು ರೋದನೆಯದು, ಒಂದು ಸಾವಿನದು, ಇನ್ನೊಂದು ಯುದ್ಧದ ನೋವಿನದು. ಅವು ಉಕ್ಕಿಸುವ ರಸಾಯನ ಪಾಕವಿದೆಯಲ್ಲ ಅದು ಇಲ್ಲಿನ ಅಸಲಿ ಸಮಸ್ಯೆ.
ಇಲೆಕ್ಟ್ರಿಕ್ ಕೆಲಸ ಮಾಡುವವರಿಗೆ ಕ್ರಮೇಣ ಕರೆಂಟ್ ಶಾಕ್ ಅನುಭವವೇ ಕಡಿಮೆಯಾದಂತೆ. ಕ್ರಮೇಣ ಸಿಟ್ಟು, ಖುಷಿ, ಆತಂಕ, ಧೈರ್ಯ, ಹಸಿವು, ಆಸೆ, ತೃಪ್ತಿ, ಆಶ್ಚರ್ಯ ಇವೆಲ್ಲದರೆಡೆಗಿನ ಜಾಡ್ಯತೆ ಹೆಚ್ಚುತ್ತದೆ. ಇದು ಮಾನಸಿಕವಲ್ಲ, ಬದಲಿಗೆ ಭೌತಿಕ- ರಾಸಾಯನಿಕ ಜಾಡ್ಯ..
ಸಾರಾಯಿ ಇತ್ಯಾದಿಗಳು ನರಸಂದೇಶಗಳನ್ನು ತಗ್ಗಿಸಿದರೆ ರೀಲ್ಸ್ʼನದು ಅದಕ್ಕೆ ಉಲ್ಟಾ. ಇದು ಮಿದುಳಿನ ಇದ್ದ ಬದ್ದ ನರಗಳನ್ನೆಲ್ಲ ಬೇಕಾಬಿಟ್ಟಿಯಾಗಿ ರಾಸಾಯನಿಕವಾಗಿ ಉದ್ರೇಕಿಸುವ ಕೆಲಸ ಮಾಡುತ್ತದೆ. ಅದೂ ಕೆಲವೇ ಸೆಕೆಂಡುಗಳ ಅಂತರದಲ್ಲಿ ರಾಸಾಯನಿಕಗಳ ಕಲಸುಮೇಲೋರಗ.
ಆದರೆ ಎರಡೂ ಚಟಗಳು ನರಮಂಡಲ ವ್ಯವಸ್ಥೆಯನ್ನು ಹೈಜಾಕ್ ಮಾಡುವ ರೀತಿ ಮಾತ್ರ ಒಂದೇ. ವೇಗದಲ್ಲಿ ಹಾದುಹೋಗುವ ರೀಲ್ಸ್ʼಗಳು ಹುಟ್ಟುಹಾಕುವ ಭಾವೋತ್ಕಟತೆಗಳು ಅವನ್ನು ನೋಡು ವಷ್ಟು ಹೊತ್ತು ನಮ್ಮಿಂದ ಹೊರಪ್ರಪಂಚದ ಆತಂಕ, ಹೆದರಿಕೆ, ಒತ್ತಡ, ಏಕಾಂತ, ಬೇಸರ, ಖಿನ್ನ ಭಾವ ಇವೆಲ್ಲವನ್ನೂ ಮರೆಯುವಂತೆ ಮಾಡುತ್ತವೆ.
ಅದರ ರೀಲ್ಸ್ ಎಂದರೆ ‘ಹಾಜ್‌ಮೋಲಾ’ ತಿಂದಾಗಿನಂತೆ ಸರ್ವರಸಪಾಕಡಾ ಅನುಭವ. ಈಗ ಇದೆಲ್ಲ ಸಾಕಾಗಿಲ್ಲ ಎಂದು ಹೊಸತೊಂದು ನಮೂನೆಯ ರೀಲ್ಸ್ ಲೋಕವೇ ತಯಾರಾಗಿದೆ. ಇತ್ತೀಚೆ ಫೇಸ್‌ಬುಕ್- ‘ಮೆಟಾ ಎಐ’ ಎಂದೊಂದು ಅಪ್ಲಿಕೇಷನ್ ತಯಾರು ಮಾಡಿಬಿಟ್ಟಿದೆ.
ಅಲ್ಲಿ ಎಲ್ಲವೂ ಕೃತಕ ಬುದ್ಧಿಮತ್ತೆಯ ರೀಲ್ಸ್ʼಗಳು. ಅಲ್ಲಂತೂ ಕಲ್ಪಿಸಿಕೊಂಡದ್ದಕ್ಕೆಲ್ಲ ಚಿತ್ರರೂಪ, ರೀಲ್ಸ ರೂಪ. ಅದು ಮುಂದಿನ ಹಂತದ ನಶೆ. ಪ್ರತಿಯೊಂದೂ ಅತಿ ರಂಜನೀಯ. ಸ್ವಲ್ಪ ಹೊರ ನಿಂತು ನೋಡಿದರೆ ಎಲ್ಲವೂ ಅಸಹ್ಯ ರೂಪಗಳು. ರೀಲ್ಸ್- ನಾವಂದುಕೊಂಡಷ್ಟು ಪಾಪದ ಚಟವಲ್ಲ..!
ಇಲ್ಲಿ ಪ್ರಶ್ನೆ ಕೇವಲ ತಿಳಿದುಕೊಳ್ಳುವ ಕುತೂಹಲದ್ದಷ್ಟೇ ಅಲ್ಲ. ರೀಲ್ಸ್ ಎಂಬುದು ‘ರಂಜನೆಗೆ, ಟೈಮ್ ಪಾಸ್’ಗೆ ಎಂದು ತಿಳಿದುಕೊಳ್ಳುವುದು, ಜೂಜು ಕೂಡ ಒಂದು ಮೋಜು ಎಂದು ಕೊಂಡಂತೆ. ಹೀಗಿರುವಾಗ ಇತ್ತೀಚೆಗೆ ಚಿಕ್ಕ ಶಾಲೆಗೆ ಹೋಗುವ ಮಕ್ಕಳಿಗೆಲ್ಲ ಅವರ ತಂದೆ-ತಾಯಂದಿರು ಗಂಟೆಗಟ್ಟಲೆ ರೀಲ್ಸ್ ನೋಡಲು ಕೊಡುತ್ತಿದ್ದಾರಲ್ಲ. ಏನನ್ನಬೇಕು? ಪರಿಣಾಮ ಏನಾದೀತು? ಮಕ್ಕಳಿಗೆ ರೀಲ್ಸ್ ನೋಡಲು ಬಿಡುವುದೆಂದರೆ ಅದು ವಿಷ ಕೊಟ್ಟಂತೆ. ಈ ಅಗ್ಗದ ರಂಜನೆಯ ಬಗ್ಗೆ ಗಮನ ವಿರಲಿ. ಯಾರು ಏನೇ ಹೇಳಲಿ, ಎಚ್ಚರಿಕೆ ನಿಮ್ಮಲ್ಲಿರಲಿ. ರೀಲ್ಸ್ ನಾವಂದುಕೊಂಡಷ್ಟು ಮುಗ್ಧ ರಂಜನೆಯಲ್ಲ! ಇದು ಹೊಸತಲೆಮಾರಿನ ‘ಸಸ್ತಾ ನಶಾ’!