Roopa Gururaj Column: ಮಕ್ಕಳಿಗೆ ಇಷ್ಟವಾದ ಕಲಿಕೆ ಆಯ್ಕೆ ಕೊಡಿ
ಶ್ರಮಜೀವಿಗಳು, ರೈತರು ಇಲ್ಲದಿದ್ದರೆ, ನಮ್ಮ ಸಮಾಜ ಇದೆಯೇ? ಓದು ಅವರವರಿಗೆ ಬಿಟ್ಟಿದ್ದು, ಅವರ ವರಿಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿ ಓದಬೇಕಲ್ಲವೇ? ನಿನ್ನ ಮಗ ದೊಡ್ಡ ಮರ ಆಗಿ ಎತ್ತರಕ್ಕೆ ಬೆಳೆಯಬೇಕು ಎನ್ನುವುದು ನಿನ್ನ ಆಸೆ, ಆದರೆ ಅವನಿಗೆ ಬಳ್ಳಿಯಂತೆ ಹಬ್ಬುವ ಆಸೆಯಿದೆ, ಅವನು ಸಮಾಜದ ಸ್ಥಿತಿಗತಿಗಳನ್ನು ತಿಳಿಸಿಕೊಡಬಲ್ಲ ಕಲಾವಿದ ನಾಗಬಯಸಿದ್ದಾನೆ


ಒಬ್ಬ ತಂದೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರು ಆಗಬೇಕೆಂದು ಬಯಸಿದ್ದ. ಆದರೆ ಮಗ ನಿಗೆ ಚಿತ್ರ ಕಲೆಯಲ್ಲಿ ಆಸಕ್ತಿ. ತಂದೆಗೆ, ಚಿತ್ರಕಲೆಯಿಂದ ಏನು ಸಾಧಿಸಲು ಸಾಧ್ಯ? ಮುಂದಿನ ಜೀವನ ನಡೆಸಲು ಹೇಗೆ ಸಾಧ್ಯ, ಎಂದು ಅದರ ಬಗ್ಗೆ ಅಸಡ್ಡೆ. ಹಾಗಾಗಿ ಅವನು ಮಗನಿಗೆ ಇಂಜಿನೀ ಯರ್ ಅಥವಾ ಡಾಕ್ಟರ್ ಆಗಬೇಕೆಂದು ಬಲವಂತ ಮಾಡತೊಡಗಿದ. ತಂದೆಯ ಈ ವರ್ತನೆಯಿಂದ ಮಗ ಮಂಕಾಗುತ್ತಾ ಬಂದ. ತನಗಿಷ್ಟವಿಲ್ಲದ ಓದು ಬರಹದಲ್ಲಿ ಆಸಕ್ತಿ ಕಳೆದುಕೊಂಡ. ಆ ವರ್ಷ ಫೇಲಾಗಿಯೂ ಬಿಟ್ಟ. ಇದನ್ನು ಸಹಿಸಿಕೊಳ್ಳದ ತಂದೆ ‘ನನ್ನ ಮರ್ಯಾದೆಯನ್ನು ಕಳೆದ ನೀನು, ಇನ್ನೆಂದಿಗೂ ನನ್ನನ್ನು ಮಾತನಾಡಿಸ ಬೇಡ’ ಎಂದು ಛೀಮಾರಿ ಹಾಕಿದ. ದುಃಖಗೊಂಡ ಮಗ, ಇನ್ನಷ್ಟು ಖಿನ್ನತೆಗೆ ಒಳಗಾದ.
ಇದೆಲ್ಲ ಗೊತ್ತಾಗಿ ಇವನ ಅಜ್ಜ ಇವನನ್ನು ನೋಡಿಕೊಂಡು ಹೋಗಲೆಂದು ಮನೆಗೆ ಬಂದ. ಮನೆಯ ಪರಿಸ್ಥಿತಿ ಎಲ್ಲವೂ ಅರ್ಥವಾಯಿತು. ಹೇಗಾದರೂ ಮಾಡಿ ಮೊಮ್ಮಗನನ್ನು ಸರಿಪಡಿ ಸಬೇಕು ಎನ್ನುವ ಉದ್ದೇಶದಿಂದ, ತನ್ನ ಮಗನನ್ನು ಕೂರಿಸಿಕೊಂಡು ಮಾತನಾಡತೊಡಗಿದ.
ಇದನ್ನೂ ಓದಿ: Roopa Gururaj Column: ಭಕ್ತಿ ಒಂದಿದ್ದರೆ, ಭಗವಂತ ಕೈ ಬಿಡುವುದಿಲ್ಲ
‘ಮಗನೇ, ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ. ನನ್ನ ಮಗ ಹೇಗೆ ದೊಡ್ಡ ಮನುಷ್ಯನಾಗಬೇಕೆಂದು ನಾನು ಆಸೆ ಪಟ್ಟೆನೊ, ಹಾಗೆಯೇ, ನೀನೂ ಕೂಡ ನಿನ್ನ ಮಗನ ಬಗೆ ಆಸೆ ಪಡುತ್ತಿದ್ದೀಯ, ಅದೇನು ತಪ್ಪಲ್ಲಾ. ಆದರೆ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೆಂದರೆ ಹೇಗೆ? ಚಿಂತನೆ ಮಾಡು ವವರು, ಮಕ್ಕಳಿಗೆ ವಿದ್ಯೆ ಕಲಿಸುವವರು, ಸಮಾಜ ಸುಧಾರಕರು, ಕಲಾವಿದರು, ಶ್ರಮಜೀವಿಗಳು, ರೈತರು ಇಲ್ಲದಿದ್ದರೆ, ನಮ್ಮ ಸಮಾಜ ಇದೆಯೇ? ಓದು ಅವರವರಿಗೆ ಬಿಟ್ಟಿದ್ದು, ಅವರವರಿಗೆ ಆಸಕ್ತಿ ಇರುವ ವಿಷಯವನ್ನು ಆಯ್ಕೆ ಮಾಡಿ ಓದಬೇಕಲ್ಲವೇ? ನಿನ್ನ ಮಗ ದೊಡ್ಡ ಮರ ಆಗಿ ಎತ್ತರಕ್ಕೆ ಬೆಳೆಯಬೇಕು ಎನ್ನುವುದು ನಿನ್ನ ಆಸೆ, ಆದರೆ ಅವನಿಗೆ ಬಳ್ಳಿಯಂತೆ ಹಬ್ಬುವ ಆಸೆಯಿದೆ, ಅವನು ಸಮಾಜದ ಸ್ಥಿತಿಗತಿಗಳನ್ನು ತಿಳಿಸಿಕೊಡಬಲ್ಲ ಕಲಾವಿದ ನಾಗಬಯಸಿದ್ದಾನೆ.
ಇದು ದೊಡ್ಡದೇ ಅಲ್ಲವೇ? ಇವತ್ತಿಗೂ ಚಿತ್ರ ಕಲಾವಿದ ರವಿವರ್ಮ, ಲಿಯೋನಾರ್ಡ್ ಡಾವಿಂಚಿ ಯಂಥ ಕಲಾವಿದರನ್ನು ಜಗತ್ತು ನೆನಪಿಸಿಕೊಳ್ಳದೆ? ನಿನ್ನ ಮಗನದ್ದೂ ಬೆಳವಣಿಗೆಯೇ ಅಲ್ಲವೇ, ಮಕ್ಕಳ ಮೇಲೆ ನಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇರಬಾರದು. ಅವರನ್ನು ಸ್ವತಂತ್ರವಾಗಿ ಬಿಡಬೇಕು’ ಎಂದು ಹೇಳಿದ. ಅಪ್ಪನ ಮಾತುಗಳನ್ನು ಕೇಳಿದ ಮಗನಿಗೆ, ತನ್ನಪ್ಪನ ಮಾತು ಸರಿ ಎನಿಸಿತು. ತಂದೆಯು ಇನ್ನೆಂದಿಗೂ ಮಗನ ಆಸೆಗೆ ಅಡ್ಡಗಾಲು ಹಾಕಬಾರದೆಂದು ತೀರ್ಮಾನಿಸಿದ.
ಹಾಗೇನಾದರೂ ತಾನು ಒತ್ತಾಯ ಮಾಡಿದರೆ, ಮಗ ತನ್ನ ಕೈ ಬಿಟ್ಟು ಹೋಗಬಹುದೆಂದೆನಿಸಿತು ಅವನಿಗೆ. ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳು, ಹೀಗೇ ಆಗಬೇಕೆಂಬ ಕನಸು ಇದ್ದೇ ಇರುತ್ತದೆ. ಮಕ್ಕಳಿಗೂ ಕೂಡಾ ಅವರ ಇಚ್ಛೆಯಂತೆ ನೆಡೆದುಕೊಳ್ಳುವ ಮನಸ್ಸಿದ್ದರೆ ತೊಂದರೆ ಯೇನೂ ಇಲ್ಲ, ಆದರೆ ಮಕ್ಕಳ ಇಚ್ಛೆ ಬೇರೆಯಾಗಿದ್ದಾಗ ಅವರನ್ನು ತಮ್ಮಿಷ್ಟದಂತೆ ಒತ್ತಾಯಿಸು ವುದು ಸಮಂಜಸವಲ್ಲ.
ಇಂದಿನ ದಿನಗಳಲ್ಲಿ ಇಂತಹ ಸಾಕಷ್ಟು ಪ್ರಕರಣಗಳನ್ನು ನಾವು ನೋಡುತ್ತಾ ಬಂದಿದ್ದೇವೆ. ಇದು ಕಾಲೇಜಿನ ಮಟ್ಟಕ್ಕಿರಲಿ ಶಾಲೆಯ ಮಟ್ಟಕ್ಕೆ ಪ್ರಾರಂಭವಾಗಿ ಬಿಡುತ್ತದೆ. ಶಾಲೆಯಲ್ಲಿರುವಾಗಲೇ ಮಕ್ಕಳು ಒಳ್ಳೆಯ ಅಂಕಗಳನ್ನು ಪಡೆಯುತ್ತಿಲ್ಲ ಎಲ್ಲಾ ಸ್ಪರ್ಧೆಗಳಲ್ಲೂ ಭಾಗವಹಿಸಿ, ಹೆಸರು ಮಾಡುತ್ತಿಲ್ಲ ಎಂದು ತಂದೆ ತಾಯಿ ಬೇಡದ ಒತ್ತಡಕ್ಕೆ ಒಳಗಾಗಿ ಮಕ್ಕಳನ್ನೂ ಒತ್ತಡಕ್ಕೆ ತಳ್ಳುತ್ತಾರೆ. ಎಳೆಯ ಮನಸ್ಸುಗಳು ತಾವಾಗೇ ಅರಳುವ ಅವಕಾಶ ಸಿಗದೇ, ಬಲವಂತದ ಒತ್ತಡದಿಂದ ಚಟುವಟಿಕೆಯನ್ನೇ ಕಳೆದುಕೊಂಡು ಖಿನ್ನತೆಗೆ ಜಾರುತ್ತಾರೆ.
ಆಗ ಮತ್ತೆ ಮನೋವೈದ್ಯರ ಸಲಹೆ ಥೆರಪಿ ಎಂದು ವರ್ಷಾನುಗಟ್ಟಲೆ ಓದು ಬರಹ ಎಲ್ಲವನ್ನು ಬಿಟ್ಟು ಅಲೆದಾಡಬೇಕಾಗುತ್ತದೆ. ಇಂತಹ ಅನಾಹುತಗಳಾಗುವ ಮುಂಚೆ ಎಚ್ಚೆತ್ತುಕೊಳ್ಳಿ. ಒಂದು ಸಾಮಾನ್ಯ ಜೀವನವೂ ಕೂಡ ದೊಡ್ಡವರ ಎಂಬುದು ತಿಳಿದಿರಲಿ. ಮಕ್ಕಳಿಗೆ ಅವರಿಷ್ಟದ ಬದು ಕನ್ನು ಕಂಡುಕೊಳ್ಳಲು ಪ್ರೋತ್ಸಾಹ ನೀಡಿ ಅಲ್ಲಿ ಇಬ್ಬರಿಗೂ ಗೆಲುವಿದೆ.