ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಪ್ರಾರ್ಥನೆಯಲ್ಲಿ ತೊಡಗಿದ್ದ ಆಕೆಯ ಕಂಠಸಿರಿಗೆ ಹೆಚ್ಚಿನವರು ತಲೆದೂಗುತ್ತಿದ್ದರೆ, ಸದರಿ ‘ಕಳ್ಳಬೆಕ್ಕು’ ಅವಳ ದೇಹಸಿರಿಯ ಮೇಲೆ ಕಳ್ಳಗಣ್ಣು ಹಾಕಿತ್ತು. ಕಾರ್ಯಕ್ರಮವೆಲ್ಲ ಸಂಪನ್ನಗೊಂಡು ಸಂಜೆಯ ಲಘು ಉಪಹಾರವೂ ಮುಗಿದ ನಂತರ, ಶಾರದೆ ವಿದ್ಯಾರ್ಥಿ ನಿಲಯದ ತನ್ನ ಕೋಣೆಯಲ್ಲಿದ್ದಳು. ಮ್ಯಾನೇಜರ್‌ ರಿಂದ ಆಕೆಗೆ ‘ಬುಲಾವ್’ ಬಂತು. ಅಂತೆಯೇ ಸಂಸ್ಥೆಯ ಕಚೇರಿಗೆ ಅವಳು ತೆರಳಿದಾಗ, ಮ್ಯಾನೇಜರ್, ಅಡುಗೆಭಟ್ಟ ‘ನಳಪಾಕ’ ಮುಂತಾದವರ ಜತೆಯಲ್ಲಿ ‘ಕಳ್ಳಬೆಕ್ಕು’ ಮಾತಿನಲ್ಲಿ ತೊಡಗಿತ್ತು.

ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

-

ರಸದೌತಣ

naadigru@gmail.com

ಸಂಸ್ಥೆಯ ಆವರಣದಲ್ಲಿ ಅನಾಚಾರದ ಸರಣಿ ಶುರುವಾಗುವುದಕ್ಕೆ ಅಡುಗೆಭಟ್ಟ ‘ನಳಪಾಕ’ನೇ ಮೂಲಕಾರಣವೇ? ಎಂಬ ಶಿಷ್ಯರೊಬ್ಬರ ಪ್ರಶ್ನೆಗೆ ಸಹಮತವೆಂಬಂತೆ ಅವಧೂತರು ಗೋಣು ಹಾಕಿದ್ದು, ಅರೆಕ್ಷಣ ಕಣ್ಣು ಮುಚ್ಚಿ ‘ಶಿವ ಶಿವಾ...’ ಎಂದು ವಿಷಾದದ ನಿಟ್ಟುಸಿರು ಬಿಟ್ಟಿದ್ದು ‘ಕಥಾಸಕ್ತ’ ಶಿಷ್ಯರಲ್ಲಿನ ತವಕವನ್ನೂ, ಕುತೂಹಲವನ್ನೂ ಮತ್ತಷ್ಟು ಹೆಚ್ಚಿಸಿತು. ಜತೆಗೆ ಅವಧೂತರು ಶಾರದೆಯ ಕಥನವನ್ನು ಒಂದೇ ಗುಕ್ಕಿಗೆ ನೇರವಾಗಿ ಹೇಳಿ ಮುಗಿಸದೆ, ಉಪಕಥೆ ಗಳೊಂದಿಗೆ ಅದನ್ನು ಮತ್ತಷ್ಟು ಲಂಬಿಸುತ್ತಿದ್ದಾರೆ ಎಂಬ ಹುಸಿಕೋಪವೂ ಅವರ ಮುಖದಲ್ಲಿ ಹೊಮ್ಮುತ್ತಿತ್ತು. ಅದನ್ನು ಥಟ್ಟನೆ ಗ್ರಹಿಸಿದ ಅವಧೂತರು, “ಅಲ್ರಯ್ಯಾ, ಕಥೆಯಲ್ಲಿ ಸಸ್ಪೆನ್ಸ್ ತುಂಬುತ್ತಾ ಹೋಗುತ್ತಿರುವ ‘ಪತ್ತೇದಾರ ಪುರುಷೋತ್ತಮ’ ಅಂತ ಎರಡು ದಿನದ ಹಿಂದೆ ನನಗೆ ಹಣೆ ಪಟ್ಟಿ ಕಟ್ಟಿದ್ರಿ! ಅದು ಸಾಲದು ಅಂತ ಈಗ, ‘ಈ ಗುರುಗಳು ಶಾರದೆಯ ಕೆಟ್ಟ ಅನುಭವಕ್ಕೆ ಕಾರಣ ವಾದ ಕಳ್ಳಬೆಕ್ಕು ಯಾವುದು ಎಂಬುದನ್ನು ನೇರವಾಗಿ ತಿಳಿಸದೆ, ಊಟೋಪಚಾರದ ನೆಪದಲ್ಲಿ, ವ್ಯಕ್ತಿತ್ವ ನಿರ್ಮಾಣದಲ್ಲಿ ಆಹಾರದ ಪಾತ್ರವೇನು ಎಂಬ ಬಗ್ಗೆ ಉಪಕಥೆ ಹೇಳಿಸ್ತಾರೆ’ ಅಂತ ನೀವು ಒಳಗೊಳಗೇ ಆರೋಪ ಮಾಡ್ತಾ ಇರೋ ಹಾಗಿದೆ?" ಎಂದು ನಗುತ್ತಾ ಪ್ರಶ್ನಿಸಿದರು.

ಅದಕ್ಕೆ ಶಿಷ್ಯರೊಬ್ಬರು ತಲೆ ಕೆರೆದುಕೊಳ್ಳುತ್ತಾ, “ನಿಮ್ಮ ಗ್ರಹಿಕೆ ನಿಜ ಗುರುಗಳೇ, ನಾನಂತೂ ಹಾಗೇ ಅಂದುಕೊಂಡೆ. ಮಿಕ್ಕವರಲ್ಲೂ ಅದೇ ಭಾವ ಮೂಡಿರಬಹುದೇನೋ..." ಎಂದು ಮಾತಲ್ಲಿ ತಡವರಿಸಿದರು.

ಇದನ್ನೂ ಓದಿ: Yagati Raghu Naadig Column: ಪ್ರೀತಿ ನೀತಿ ಇಲ್ಲದ ಮೇಲೆ, ಹೂವು ಅರಳಿತು ಹೇಗೆ...?

ಆ ಶಿಷ್ಯರ ತಲೆಯನ್ನೊಮ್ಮೆ ತಡವಿದ ಅವಧೂತರು, “ಅಯ್ಯಾ, ಒಂದು ಹಂತದ ಸಾಂಪ್ರದಾಯಿಕ ಶಾಲಾ- ಕಾಲೇಜು ಶಿಕ್ಷಣವನ್ನು ಮುಗಿಸಿರುವ ನೀವೆಲ್ಲರೂ, ಅಧ್ಯಾತ್ಮದ ಮಗ್ಗುಲುಗಳನ್ನು ಅರಿಯಲು ಈಗ ನನ್ನ ತೆಕ್ಕೆಯನ್ನು ಸೇರಿದ್ದೀರಿ. ಅಧ್ಯಾತ್ಮ ಎಂಬುದು ಈ ಸಮಾಜಕ್ಕೆ ಅಥವಾ ಸಾಮಾಜಿಕ ಜೀವನಕ್ಕೆ ಹೊರತಾದ ಗಗನಕುಸುಮವಲ್ಲ, ಗಹನ-ಗಣಿತವಲ್ಲ ಅಥವಾ ಕಬ್ಬಿಣದ ಕಡಲೆಯಲ್ಲ; ಹೀಗಾಗಿ ಬದುಕಿನ ಒಂದಿಷ್ಟು ಸತ್ಯಗಳನ್ನು ನಿಮಗೆ ಪ್ರಾಯೋಗಿಕವಾಗಿ ತೋರಿಸಲು ನಾನು ಯತ್ನಿಸುತ್ತಿರುವೆ ಅಷ್ಟೇ. ಪಟ್ಟಣದ ಸಂಸ್ಥೆಯಲ್ಲಿ ಶಿವರಾತ್ರಿ ಜಾಗರಣೆ ಮುಗಿಸಿಕೊಂಡು ಮರಳುವಾಗ ಮಾರ್ಗಮಧ್ಯದ ಹಳ್ಳಿಯಲ್ಲಿ ಶಾರದೆಯ ಹೆತ್ತವರ ಭೇಟಿ ಮತ್ತು ಆತಿಥ್ಯ ನಿಮಗೆ ಸಿಗುವಂತೆ ಮಾಡಿದ್ದು, ಶಾರದೆಯ ಪ್ರಕರಣವು ದೈವನಿರ್ಮಿತ ನ್ಯಾಯಾಲಯದಲ್ಲಿ ಮುನ್ನೆಲೆಗೆ ಬಂದಾಗಿನಿಂದ ಸಾಕ್ಷ್ಯ ಹೇಳುವವರಂತೆ ಒಬ್ಬರಾದ ಮೇಲೊಬ್ಬರು ಆಸಾಮಿಗಳು ಬಂದಿದ್ದನ್ನು ನಿಮಗೆ ದರ್ಶನ ಮಾಡಿಸಿದ್ದು ಇವೆಲ್ಲಾ ಅಂಥ ಪ್ರಾತ್ಯಕ್ಷಿಕೆಗಳೇ. ಈಗ ಶಾರದೆಯ ಸಂಕಷ್ಟದಲ್ಲಿ ವಿದ್ಯಾರ್ಥಿನಿಲಯದ ಅಡುಗೆಭಟ್ಟ ‘ನಳಪಾಕ’ ವಹಿಸಿದ ಪಾತ್ರವನ್ನು ವಿವರಿಸುವುದಕ್ಕೆ ಪೂರ್ವ ಭಾವಿಯಾಗಿ, ವ್ಯಕ್ತಿತ್ವ ನಿರ್ಮಾಣದಲ್ಲಿ ನಾವು ಸೇವಿಸುವ ನ್ನವು ವಹಿಸುವ ಪಾತ್ರದ ಕುರಿತು ನಮ್ಮ ಅಮ್ಮನಿಂದ ನಿಮಗೆ ಸೂಚ್ಯವಾಗಿ ಹೇಳಿಸಿದೆ, ಅಷ್ಟೇ. ಮೇಲ್ನೋಟಕ್ಕೆ ಇದು ಕೆಲವರಿಗೆ ‘ಉಪಕಥೆ’ ಎನಿಸಬಹುದು, ಅಥವಾ ಶಾರದೆಯ ಕಥನವನ್ನು ವಿನಾಕಾರಣ ಎಳೆಯುತ್ತಿದ್ದಾರೆ ಎನಿಸಬಹುದು. ಆದರೆ, ಅಂಥ ತೆವಲು ನನಗಿಲ್ಲ. ಆಹಾರಕ್ಕೆ, ಅದರ ತಯಾರಿಕೆಗೆ ಮತ್ತು ಹಸಿದವರಿಗೆ ಅದನ್ನು ಬಡಿಸುವಿಕೆಗೆ ಇರುವ ಮಹತ್ವವನ್ನು ಅರಿಯದಿದ್ದುದೇ ‘ನಳಪಾಕ’ನು ಕುಕೃತ್ಯವನ್ನು ಎಸಗುವುದಕ್ಕೆ ಕಾರಣವಾಯಿತು ಎಂಬುದನ್ನು ಒತ್ತಿಹೇಳಲೆಂದೇ ಅಮ್ಮನಿಂದ ನಿಮಗೆ ಬೋಧೆಯನ್ನು ಮಾಡಿಸ ಬೇಕಾಯಿತು. ಅನ್ಯಥಾ ಭಾವಿಸದಿರಿ" ಎಂದರು.

ಅದಕ್ಕೆ ಶಿಷ್ಯರು, “ಅರಿವಾಯಿತು ಗುರುಗಳೇ" ಎಂದು ಕೈಮುಗಿದರು. ಅವಧೂತರು ಕಥನವನ್ನು ಮುಂದುವರಿಸಿದರು...

Y G N

“ಕೆಲ ತಿಂಗಳ ಹಿಂದೆ ಪಟ್ಟಣದ ಆ ಸಮಾಜಸೇವಾ ಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಮುಖ್ಯ ಅತಿಥಿಯಾಗಿ ಬಂತು ‘ಕಳ್ಳಬೆಕ್ಕು’. ಆ ಕಾರ್ಯ ಕ್ರಮದ ಶುರುವಿನಲ್ಲಿ ದೇವರ ಪ್ರಾರ್ಥನೆ ಮಾಡಲು ಬಂದಾಕೆಯೇ ನಮ್ಮ ಶಾರದೆ. ದೈವದತ್ತ ಶಾರೀರ,ವಯೋಸಹಜ ಲಾವಣ್ಯಭರಿತ ಶರೀರವಿದ್ದ ಕೂಸು ಆಕೆ. ಪ್ರಾರ್ಥನೆಯಲ್ಲಿ ತೊಡಗಿದ್ದ ಆಕೆಯ ಕಂಠಸಿರಿಗೆ ಹೆಚ್ಚಿನವರು ತಲೆದೂಗುತ್ತಿದ್ದರೆ, ಸದರಿ ‘ಕಳ್ಳಬೆಕ್ಕು’ ಅವಳ ದೇಹಸಿರಿಯ ಮೇಲೆ ಕಳ್ಳಗಣ್ಣು ಹಾಕಿತ್ತು. ಕಾರ್ಯಕ್ರಮವೆಲ್ಲ ಸಂಪನ್ನಗೊಂಡು ಸಂಜೆಯ ಲಘು ಉಪಹಾರವೂ ಮುಗಿದ ನಂತರ, ಶಾರದೆ ವಿದ್ಯಾರ್ಥಿ ನಿಲಯದ ತನ್ನ ಕೋಣೆಯಲ್ಲಿದ್ದಳು. ಮ್ಯಾನೇಜರ್‌ರಿಂದ ಆಕೆಗೆ ‘ಬುಲಾವ್’ ಬಂತು. ಅಂತೆಯೇ ಸಂಸ್ಥೆಯ ಕಚೇರಿಗೆ ಅವಳು ತೆರಳಿದಾಗ, ಮ್ಯಾನೇಜರ್, ಅಡುಗೆಭಟ್ಟ ‘ನಳಪಾಕ’ ಮುಂತಾದವರ ಜತೆಯಲ್ಲಿ ‘ಕಳ್ಳಬೆಕ್ಕು’ ಮಾತಿನಲ್ಲಿ ತೊಡಗಿತ್ತು. ಒಳ ಬಂದ ಶಾರದೆಯನ್ನು ಹತ್ತಿರಕ್ಕೆ ಕರೆದ ಮ್ಯಾನೇಜರ್, ‘ಕಾರ್ಯಕ್ರಮದ ಮುಖ್ಯ ಅತಿಥಿಯಾದ ಇವರು ನಿನ್ನನ್ನು ಭೇಟಿಯಾಗಬೇಕು ಅಂದ್ರು, ಅದಕ್ಕೇ ಕರೆಸಿದೆ ಕಣಮ್ಮಾ’ ಎಂದರು. ಕಳ್ಳಬೆಕ್ಕಿನ ಕಡೆಗೆ ನೋಡಿ ಶಾರದೆ ನಸುನಕ್ಕಳು, ಅಷ್ಟೇ! ಅದಕ್ಕೆ ಪ್ರತಿಯಾಗಿ ನಗುಬೀರಿದ ಕಳ್ಳಬೆಕ್ಕು, ‘ನೈಸ್ ಟು ಮೀಟ್ ಯೂ..’ ಎಂದು ಹೇಳುತ್ತಾ ಹಸ್ತಲಾಘವ ನೀಡಲು ಕೈಚಾಚಿತು. ಆದರೆ ಶಾರದೆ ಸಂಸ್ಕಾರಭರಿತ ಕೂಸು, ಇಂಥ ‘ಕಾಳು’ ಗಳನ್ನೆಲ್ಲಾ ಕೊಕ್ಕಲ್ಲಿ ಹೆಕ್ಕಿ ಹೊಟ್ಟೆಗಿಳಿಸುವ ಕೋಳಿಯಲ್ಲ ಅವಳು. ಕಳ್ಳಬೆಕ್ಕಿನ ಕಡೆಯಿಂದ ಹೊಮ್ಮಿದ ಹಸ್ತಲಾಘವದ ಆಹ್ವಾನವನ್ನು ಡಿಪ್ಲೊಮ್ಯಾಟಿಕ್ ಮುಖಭಾವದಲ್ಲೇ ನಯವಾಗಿ ನಿರಾಕರಿಸಿ, ಎರಡೂ ಕೈಗಳನ್ನು ಜೋಡಿಸಿ ‘ನಮಸ್ತೆ’ ಎಂದಳು. ‘ನಿನ್ನ ಹಾಡುಗಾರಿಕೆ ನನಗೆ ತುಂಬಾ ಇಷ್ಟವಾಯಿತು. ನಿನಗೇನಾದರೂ ಕೊಡುಗೆ ನೀಡಬೇಕೆನಿಸಿತು’ ಎಂದು ಹೇಳುತ್ತಾ ಕಳ್ಳಬೆಕ್ಕು ತನ್ನ ಜೇಬಿನಿಂದ ಗರಿಗರಿಯಾದ ನೋಟುಗಳನ್ನು ಹೊರತೆಗೆದು ಶಾರದೆಗೆ ನೀಡಲು ಮುಂದಾಯಿತು....

“ಆದರೆ, ಅದನ್ನೂ ನಯವಾಗಿ ನಿರಾಕರಿಸಿದ ಶಾರದೆ, ‘ಗಾಯನವನ್ನು ನೀವು ಮೆಚ್ಚಿಕೊಂಡ್ರಲ್ಲಾ ಸರ್, ಅಷ್ಟೇ ಸಾಕು’ ಎಂದಷ್ಟೇ ಚುಟುಕಾಗಿ ಹೇಳಿ ತನ್ನ ಕೋಣೆಗೆ ಹಿಂದಿರುಗಿದಳು. ಅವಳನ್ನು ಹಿಂಬಾಲಿಸಿಕೊಂಡು ಕಚೇರಿಯಿಂದ ಹೊರಬಂದ ಕಳ್ಳಬೆಕ್ಕು, ಶಾರದೆಯು ತನ್ನ ಕೋಣೆಯನ್ನು ಸೇರುವುದನ್ನೇ ದಿಟ್ಟಿಸಿ ನೋಡುತ್ತಿತ್ತು.

‘ವಾವ್! ಇದು ಹೆಣ್ಣಲ್ಲ, ರಸಭರಿತ ಹಣ್ಣು’ ಎಂಬ ಸ್ವಗತವು ಕಳ್ಳಬೆಕ್ಕಿನ ಬಾಯಿಂದ ಅಪ್ರಯತ್ನ ವಾಗಿ ಹೊರಬಿತ್ತು. ‘ಅದ್ಯಾವ ಮಹಾ ಕಷ್ಟ ಬುದ್ಧೀ.... ಚಿಟಿಕಿ ಹೊಡೆದರೆ ಸಾಕು ಆ ‘ರಸಭರಿತ ಹಣ್ಣು’ ನಿಮ್ಮ ಬುಟ್ಟಿಗೆ ಬೀಳುತ್ತೆ... ನೀವು ಹೂಂ ಅನ್ನಿ ಸಾಕು’ ಎಂಬ ದನಿ ಹಿಂದಿನಿಂದ ಕೇಳಿ ಬಂತು. ಕಳ್ಳಬೆಕ್ಕು ತಿರುಗಿ ನೋಡಿದರೆ ಅಡುಗೆಭಟ್ಟ ‘ನಳಪಾಕ’ ಹಲ್ಲುಕಿಸಿಯುತ್ತಾ ನಿಂತಿದ್ದ. ಆತ ಕಳ್ಳಬೆಕ್ಕಿನ ಬಾಲ್ಯ ಸ್ನೇಹಿತನೂ ಹೌದು, ಒಂದು ಹಂತಕ್ಕೆ ‘ಕ್ರೈಮ್ ಪಾರ್ಟ್‌ನರ್’ ಕೂಡ ಹೌದು! ನಳಪಾಕನ ಮಾತಿನಿಂದ ಉತ್ತೇಜಿತಗೊಂಡ ಕಳ್ಳಬೆಕ್ಕು, ‘ಆದರೆ, ನಾನು ದುಡ್ಡು ಕೊಡೋಕೆ ಹೋಗಿದ್ದಕ್ಕೆ ಅವಳು ಬೇಡ ಅಂದುಬಿಟ್ಳು? ಅಷ್ಟು ಸುಲಭಕ್ಕೆ ಬುಟ್ಟಿಗೆ ಬೀಳೋ ಹಣ್ಣಲ್ಲ ಬಿಡು ಅದು..’ ಎನ್ನುತ್ತಾ ತನ್ನ ಲೋಕಜ್ಞಾನ ವನ್ನು ಹರವಿಟ್ಟಿತು. ಅದಕ್ಕೆ ನಳಪಾಕ, ‘ಅಯ್ಯೋ ಬುದ್ಧೀ, ಕಚೇರಿಯೊಳಗೆ ಎದುರಿಗೆ ನಾವೆಲ್ಲಾ ಇದ್ವಲ್ಲಾ ಅಂತ ಅವಳು ದುಡ್ಡು ತಗೊಂಡಿಲ್ಲ ಅಷ್ಟೇ!

ಅವಳ ಮನೆಯಲ್ಲಿ ಬಡತನ ಅನ್ನೋದು ಹಾಸಿ- ಹೊದ್ದುಕೊಂಡರೂ ಹಳ್ಳಿಗೆಲ್ಲಾ ಹಂಚು ವಷ್ಟಿದೆ. ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಅನ್ನೋ ಪರಿಸ್ಥಿತಿ ಅವಳ ಮನೆಯಲ್ಲಿ. ಹೀಗಾಗಿಯೇ ಅವಳನ್ನು ಇಲ್ಲಿ ಹಾಸ್ಟೆಲ್‌ಗೆ ಸೇರಿಸಿರೋದು. ಅವಳೊಬ್ಬಳೇ ಇರೋವಾಗ ಕೊಟ್ರೆ ದುಡ್ಡನ್ನ ಎರಡೂ ಕೈಗಳಿಂದ ಬಾಚಿ ಇಸ್ಕೋತಾಳೆ ನೋಡಿ ಬೇಕಿದ್ರೆ. ನೀವೇನೂ ಯೋಚನೆ ಮಾಡ ಬೇಡಿ. ಆ ರಸಭರಿತ ಹಣ್ಣನ್ನು ನಿಮ್ಮ ಬುಟ್ಟಿಗೆ ಕೆಡವೋ ಹೊಣೆ ನನ್ನದು’ ಎನ್ನುತ್ತಾ ಹುಸಿನಗೆ ನಕ್ಕ.

ಕೆಲ ಕ್ಷಣದ ಹಿಂದೆ ಶಾರದೆಗೆ ಕೊಡಲೆಂದು ಗರಿಗರಿ ನೋಟುಗಳನ್ನು ಹೊರ ತೆಗೆದಿದ್ದ ಕಳ್ಳಬೆಕ್ಕಿನ ಕೈ, ಮತ್ತೊಮ್ಮೆ ಜೇಬಿಗಿಳಿದು ಅದೇ ನೋಟುಗಳನ್ನು ಹೆಕ್ಕಿ ತೆಗೆಯಿತು, ನಳಪಾಕನೆಡೆಗೆ ಚಾಚಿತು. ಪ್ರಸಾದವೆಂಬಂತೆ ನಳಪಾಕ ಅದನ್ನು ಸ್ವೀಕರಿಸಿ, ನಿಂತ ನಿಲುವಿನಲ್ಲೇ ಪಂಚೆಯನ್ನು ಮೇಲೆತ್ತಿ ಸರಿಸಿ ಒಳಜೇಬಿನಲ್ಲಿ ಇಟ್ಟುಕೊಂಡ. ಜತೆಗೆ, ‘ನೀವೇನೂ ಯೋಚನೆ ಮಾಡಬೇಡಿ ಬುದ್ಧೀ, ನಾನು ಮನಸ್ಸು ಮಾಡಿದೆ ಅಂದ್ರೆ ಹಣ್ಣು ನಿಮ್ಮ ಬುಟ್ಟಿಗೆ ಬಿದ್ದೇ ಬೀಳುತ್ತೆ. ನೀವು ಮಾತ್ರ ಏನಾದರೂ ನೆಪ ಹಾಕ್ಕೊಂಡು ಇಲ್ಲಿಗೆ ಆಗಾಗ ಬರ‍್ತಾ ಇರಿ, ಬಂದು ಇಲ್ಲೇ ಉಳಿದುಕೊಳ್ಳುತ್ತಿರಿ’ ಎಂಬ ಕುಬೋಧನೆ ಯನ್ನೂ ಕಳ್ಳಬೆಕ್ಕಿಗೆ ಮಾಡಿದ ನಳಪಾಕ...!

“ವಾಸ್ತವವಾಗಿ, ಸದರಿ ಸಮಾಜಸೇವಾ ಸಂಸ್ಥೆಯ ನಿಯಮದ ಪ್ರಕಾರ, ಸಿಬ್ಬಂದಿಯನ್ನು ಹೊರತು ಪಡಿಸಿ ಹೊರಗಿನವರಾರೂ ಸಂಸ್ಥೆಯ ಆವರಣದಲ್ಲಿ ರಾತ್ರಿ ಹೊತ್ತು ತಂಗುವಂತಿರಲಿಲ್ಲ. ಅದು ನೆನಪಾಗಿ ಕಳ್ಳಬೆಕ್ಕು, ‘ನಾನು ಇಲ್ಲಿಗೆ ಆಗಾಗ ಬಂದುಹೋಗ ಬಹುದಷ್ಟೇ, ಆದರೆ ರಾತ್ರಿ ಉಳಿಯೋ ಹಾಗಿಲ್ವೇ..?’ ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು. ಆಗ ನಳಪಾಕ, ‘ಅದಕ್ಕೂ ನಾನೇ ದಾರಿ ಹೇಳಿಕೊಡ್ಬೇಕಾ..?’ ಎಂದು ಗೊಣಗುತ್ತಾ ಕಳ್ಳಬೆಕ್ಕಿನ ಕಿವಿಯಲ್ಲಿ ಒಂದು ಉಪಾಯ ವನ್ನು ‘ಪಿಸಿಪಿಸಿ’ ಅಂದ. ಗೋಣುಹಾಕುತ್ತಲೇ ಅದನ್ನು ಕೇಳಿಸಿ ಕೊಂಡ ಕಳ್ಳಬೆಕ್ಕು, ‘ಇದು ಸಾಧ್ಯ ವಾ? ಆ ಮಾರ್ಗದಲ್ಲಿ ಹೋದರೆ ಕೆಲಸವಾಗುತ್ತಾ?’ ಎಂದು ತವಕದಲ್ಲಿ ಕೇಳಿತು. ಅದಕ್ಕೆ ನಳಪಾಕ, ‘ಇಲ್ಲಿ ಅಡುಗೆಭಟ್ಟನಾಗಿ ನಾನಿರೋದು ಯಾಕೆ? ನೀವು ನಾನು ಹೇಳಿದಂತೆ ಮಾಡಿ, ಮಿಕ್ಕ ವಿಚಾರ ನನಗೆ ಬಿಡಿ’ ಎಂದು ಅಭಯವಿತ್ತ. ಕಳ್ಳಬೆಕ್ಕಿನ ಕೈ ಮತ್ತೊಮ್ಮೆ ಜೇಬಿಗಿಳಿ ಯಿತು, ಉಳಿದಿದ್ದ ಅಷ್ಟೂ ಗರಿಗರಿ ನೋಟುಗಳನ್ನು ಹೆಕ್ಕಿ ತೆಗೆದು ನಳಪಾಕನ ಜೇಬಿಗೆ ತುರುಕಿತು, ಅಪಸವ್ಯವು ಶುರುವಾಗುವು ದಕ್ಕೆ ಅದೇ ನಾಂದಿಯಾಯಿತು..." ಎಂದು ಹೇಳಿ ಅವಧೂತರು ನಿಡಿದಾದ ಉಸಿರು ಬಿಟ್ಟರು.

“ಮುಂದೇನಾಯ್ತು ಗುರುಗಳೇ?" ಎಂದು ಹೊಸಶಿಷ್ಯರು ಪ್ರಶ್ನಿಸಿದಾಗ, ಅವಧೂತರು ಮೌನವಾಗಿ ಆ ಶಿಷ್ಯರ ಕೈಗಡಿಯಾರದ ಕಡೆಗೆ ಬೆರಳುಮಾಡಿ ತೋರಿಸಿದರು. ಅದು ರಾತ್ರಿ ೧೨ ಗಂಟೆಯ ಸಮಯ ವನ್ನು ತೋರಿಸುತ್ತಿತ್ತು...

“ಕಥನದ ಮುಂದಿನ ಭಾಗ ನಾಳೆ. ನೀವು ಎಂದಿನಂತೆ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸಾಧನೆ ಮಾಡಬೇಕಲ್ಲವಾ ರಾಜಾ?" ಎಂದು ಅವಧೂತರು ಆ ಶಿಷ್ಯರ ತಲೆಯನ್ನು ಆಪ್ಯಾಯತೆ ಯಿಂದ ಸವರಿದರು. ಶಿಷ್ಯರೆಲ್ಲರ ಕಂಗಳು ಬೆಳಗಿದವು...

(ಮುಂದುವರಿಯುವುದು)