Roopa Gururaj Column: ನಮಗೆ ಮುಳುವಾಗುವ ನಮ್ಮ ಕೋಪ
ಬಲರಾಮ ಮತ್ತು ಸಾತ್ಯಕಿಗೆ ಆಶ್ಚರ್ಯವಾಯಿತು. ಇದು ಹೇಗಾಯಿತು ಎಂದಾಗ ಕೃಷ್ಣ ನಗುತ್ತಾ ಹೇಳಿದ ಈ ರಾಕ್ಷಸ ಕೋಪದ ಸಾಕಾರ ಮೂರ್ತಿಯು, ಮತ್ತು ಕೋಪಕ್ಕೆ ಉತ್ತರ ಕೋಪವಲ್ಲ, ನೀವಿಬ್ಬರೂ ಮತ್ತೆ ಮತ್ತೆ ಕೋಪಗೊಳ್ಳುತ್ತಲೇ ಜಗಳವಾಡಿದ್ದೀರಿ. ಅದಕ್ಕಾಗಿಯೇ ನೀವು ಅವನ ಕೈಯಲ್ಲಿ ಸೋತುಬಿಟ್ಟಿರಿ ಎಂದು ಕೃಷ್ಣ ಹೇಳಿದನು


ಒಂದೊಳ್ಳೆ ಮಾತು
rgururaj628@gmail.com
ಒಂದು ಸಂಜೆ, ಶ್ರೀಕೃಷ್ಣ, ಬಲರಾಮ ಮತ್ತು ಸಾತ್ಯಕಿ ವಾಯುವಿಹಾರಕ್ಕೆ ಹೊರಟರು. ಮಾತು ಹರಟೆಗಳಲ್ಲಿ ಮಗ್ನರಾಗಿದ್ದವರಿಗೆ ಕತ್ತಲೆಯಾದುದು ಅರಿವಿಗೆ ಬರಲಿಲ್ಲ. ಅವರು ಮೂವರು ದಟ್ಟವಾದ ಕಾಡಿನೊಳಗೆ ಬಂದುಬಿಟ್ಟಿದ್ದರು. ಅತ್ತ ಮುಂದೆ ಸಾಗುವುದಕ್ಕೂ ಅಲ್ಲ, ಹಿಂದೆ ತಿರುಗು ವುದಕ್ಕೂ ಅನುಕೂಲಕರವಲ್ಲದ ಸಮಯ. ವಿಧಿಯಿಲ್ಲದೆ ಅವರು ಅಲ್ಲೇ ಕಾಡಿನಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದರು. ಕಾಡಿನಲ್ಲಿ ಮೂವರೂ ಒಂದೇ ಸಮಯದಲ್ಲಿ ನಿದ್ರಿಸುವುದು ಸುರಕ್ಷಿತ ವಲ್ಲ ಎಂದು ಯೋಚಿಸಿದ ಅವರು ಯಾರಾದರೂ ಇಬ್ಬರು ಮಲಗಿದ್ದು ಉಳಿದ ಒಬ್ಬರು ಸರದಿ ಯಂತೆ ಎಚ್ಚರವಾಗಿರಲು ನಿರ್ಧರಿಸಿದರು. ಮೊದಲು ಸಾತ್ಯಕಿ ಎಚ್ಚರವಾಗಿದ್ದು ಕಾಯುತ್ತಿದ್ದ. ಅಷ್ಟರಲ್ಲಿ ಒಬ್ಬ ರಾಕ್ಷಸನು ಕೃಷ್ಣ ಮತ್ತು ಬಲರಾಮರ ಕಡೆಗೆ ಬರುತ್ತಿರುವುದು ಕಾಣಿಸಿತು.
ಸಾತ್ಯಕಿ ತಕ್ಷಣ ರಾಕ್ಷಸನನ್ನು ತಡೆದನು. ಆ ರಾಕ್ಷಸನು ಸಾತ್ಯಕಿಯ ಮೇಲೆ ದಾಳಿ ಮಾಡಿದನು. ಸಾತ್ಯಕಿ ಕೋಪದಿಂದ ತನ್ನ ಗದೆಯಿಂದ ಅವನನ್ನು ಎದುರಿಸಿದನು. ಸಾತ್ಯಕಿ ಕೋಪಗೊಂಡಂತೆ, ರಾಕ್ಷಸನ ದೇಹವು ದ್ವಿಗುಣಗೊಂಡಿತು. ಸಾತ್ಯಕಿಯ ಕೋಪ ಇನ್ನೂ ಹೆಚ್ಚಾಯಿತು, ಆ ದೈತ್ಯನ ದೇಹವೂ ಬೆಳೆಯಿತು. ರಾಕ್ಷಸನ ದೇಹದ ಮುಂದೆ ಸಾತ್ಯಕಿ ಆಟಿಕೆಯಂತೆ ಕಾಣುತ್ತಿದ್ದ. ಆ ರಾಕ್ಷಸನು ಸಾತ್ಯಕಿಯನ್ನು ಎತ್ತಿ ಕೊಂಡು ಸುತ್ತು ಹಾಕಿ ಕೆಳಗೆ ಎಸೆದು ಹೊರಟು ಹೋದನು.
ಗಾಯಗೊಂಡ ಸಾತ್ಯಕಿ ಸ್ವಲ್ಪ ಹೊತ್ತಿನಲ್ಲಿಯೇ ತನ್ನ ಶಕ್ತಿಯನ್ನು ಮರಳಿ ಪಡೆದು ಎದ್ದು ನಿಂತನು. ಅದೇ ಸಮಯಕ್ಕೆ ಎಚ್ಚರಗೊಂಡ ಬಲರಾಮ, ಇನ್ನು ತಾನು ಕಾವಲು ಕಾಯುತ್ತೇನೆಂದು ಹೇಳಿ, ಸಾತ್ಯಕಿಗೆ ಮಲಗಲು ಹೇಳಿದನು. ರಾಕ್ಷಸನೊಂದಿ ಗಿನ ಹೋರಾಟದಿಂದ ದಣಿದ ಸಾತ್ಯಕಿ ನಿಧಾನ ವಾಗಿ ಮರದ ಬುಡವನ್ನು ತಲುಪಿ, ವಿಶ್ರಾಂತಿ ಪಡೆದು ನಿದ್ರೆಗೆ ಜಾರಿದನು.
ಬಲರಾಮನು ಕಾವಲು ಕಾಯುತ್ತಾ ಅಲ್ಲಿಯೇ ಓಡಾಡುತ್ತಿದ್ದನು. ಮತ್ತೆ ರಾಕ್ಷಸ ಎದುರಾದನು. ಮೊದಲೇ ಮುಂಗೋಪಿಯಾಗಿದ್ದ ಬಲರಾಮನು ಕೋಪದಿಂದ ತನ್ನ ಕತ್ತಿಯನ್ನು ಎತ್ತಿ ಆ ರಾಕ್ಷಸನ ಮೇಲೆ ಆಕ್ರಮಣ ಮಾಡಿದನು. ಆ ರಾಕ್ಷಸನು ವಿಕಟಾಟ್ಟಹಾಸ ಮಾಡುತ್ತಾತನ್ನ ದೇಹವನ್ನು ಬೆಳೆಸದನು. ಕೊನೆಗೆ, ಉಗ್ರ ರೂಪವನ್ನು ತಾಳಿದ ರಾಕ್ಷಸನು ಬಲರಾಮನನ್ನು ನೆಲಕ್ಕೆ ಕೆಡವಿ ಹಿಂದಕ್ಕೆ ಹೊರಟನು.
ಇದನ್ನೂ ಓದಿ: Roopa Gururaj Column: ಏಕಲವ್ಯನ ಶ್ರದ್ಧೆಗೆ ಒಲಿದ ಬಿಲ್ವಿದ್ಯೆ
ಅಷ್ಟರಲ್ಲಿ, ಕೃಷ್ಣ ಪರಮಾತ್ಮನು ಎಚ್ಚರಗೊಂಡು ತನ್ನ ಕಾವಲು ಕಾರ್ಯವನ್ನು ಶುರು ಮಾಡಿ ದನು. ಸ್ವಲ್ಪ ಸಮಯದ ನಂತರ, ಸಾತ್ಯಕಿ ಮತ್ತು ಬಲರಾಮರನ್ನು ಎದುರಿಸಿ ಸೋಲಿಸಿದ ಅದೇ ರಾಕ್ಷಸನು ಶ್ರೀ ಕೃಷ್ಣನನ್ನೂ ಹೋರಾಡಲು ಪ್ರಚೋದಿಸಿದನು. ಆ ರಾಕ್ಷಸನು ಕೃಷ್ಣನ ಮೇಲೆ ಆಕ್ರಮಣ ಮಾಡಿದನು. ಕೃಷ್ಣ ಅಷ್ಟೇ ಶಾಂತವಾಗಿ ಅವನೊಂದಿಗೆ ಮಲ್ಲಯುದ್ಧಕ್ಕೆ ನಿಂತನು. ಇದ್ದಕ್ಕಿದಂತೆ ಆ ದೈತ್ಯನ ದೇಹವು ಅರ್ಧದಷ್ಟು ಕುಗ್ಗಿತು.
ಅವನು ಎಷ್ಟೇ ಕೀಟಲೆ ಮಾಡಿದರೂ, ಪ್ರಚೋದಿಸಿದರೂ, ಪ್ರೇರೇಪಿಸಿದರೂ ಕೃಷ್ಣ ಒಂದಿನಿತೂ ಕೋಪಗೊಳ್ಳದೆ, ಅಚಲವಾದ ನಗುವಿನೊಂದಿಗೆ ಅವನನ್ನು ಎದುರಿಸಿದನು. ಹೀಗೆ ಚಿಕ್ಕದಾಗುತ್ತಿದ್ದ ಆ ದೈತ್ಯನ ದೈತ್ಯಾಕಾರದ ದೇಹ ಮುಷ್ಠಿಯಲ್ಲಿ ಹಿಡಿಯುವಷ್ಟು ಚಿಕ್ಕದಾಯಿತು. ಕೃಷ್ಣನು ಆ ರಾಕ್ಷಸನನ್ನು ತನ್ನ ಅಂಗೈಯಲ್ಲಿ ಹಿಡಿದು ತನ್ನ ಉತ್ತರೀಯದ ಅಂಚಿಗೆ ಕಟ್ಟಿಕೊಂಡನು.
ಬೆಳಗಾಯಿತು ಸಾತ್ಯಕಿ ಮತ್ತು ಬಲರಾಮರು ಎಚ್ಚರಗೊಂಡರು.ಅವರು ತಮ್ಮ ದೇಹದ ಮೇಲಿನ ಗಾಯಗಳನ್ನು ನೋಡಿಕೊಂಡರು ಮತ್ತು ರಾತ್ರಿಯಲ್ಲಿ ಕಂಡ ದೈತ್ಯನ ಬಗ್ಗೆ ಶ್ರೀ ಕೃಷ್ಣನಿಗೆ ಹೇಳಿದರು.ಇವನೇನಾ ಆ ರಾಕ್ಷಸ? ಎನ್ನುತ್ತಾ ಕೃಷ್ಣನು ತನ್ನ ಉತ್ತರೀಯದ ಅಂಚಿನಲ್ಲಿ ಕಟ್ಟಿದ್ದ ಗಂಟನ್ನು ಬಿಚ್ಚಿದನು. ಆಗ ಮುಷ್ಟಿಯ ಗಾತ್ರದ ದೈತ್ಯ ಹೊರ ಜಿಗಿದ.
ಬಲರಾಮ ಮತ್ತು ಸಾತ್ಯಕಿಗೆ ಆಶ್ಚರ್ಯವಾಯಿತು. ಇದು ಹೇಗಾಯಿತು ಎಂದಾಗ ಕೃಷ್ಣ ನಗುತ್ತಾ ಹೇಳಿದ ಈ ರಾಕ್ಷಸ ಕೋಪದ ಸಾಕಾರ ಮೂರ್ತಿಯು, ಮತ್ತು ಕೋಪಕ್ಕೆ ಉತ್ತರ ಕೋಪವಲ್ಲ, ನೀವಿಬ್ಬರೂ ಮತ್ತೆ ಮತ್ತೆ ಕೋಪಗೊಳ್ಳುತ್ತಲೇ ಜಗಳವಾಡಿದ್ದೀರಿ. ಅದಕ್ಕಾಗಿಯೇ ನೀವು ಅವನ ಕೈಯಲ್ಲಿ ಸೋತುಬಿಟ್ಟಿರಿ ಎಂದು ಕೃಷ್ಣ ಹೇಳಿದನು. ನಮ್ಮ ಕೋಪ ನಮ್ಮ ಶತ್ರುಗಳನ್ನು ಬಲಿಷ್ಠರನ್ನಾಗಿಸುತ್ತದೆ. ಶಾಂತ ಚಿತ್ತದಿಂದ ಎದುರಿಸಿದಾಗ ಎಂತಹವರನ್ನೂ ಮಂಡಿಯೂರುವಂತೆ ಮಾಡಬಹುದು.