Vishweshwar Bhat Column: ಆಗಾಗ ಮಾತಿನಲ್ಲಿ ಇಣುಕುವ ರೆಡ್ ಹೆರಿಂಗ್ ಮತ್ತು ಸ್ಟ್ರಾಮ್ಯಾನ್ ಫ್ಯಾಲಸಿ !
ಪತ್ತೇದಾರಿ ಕಾದಂಬರಿಗಳು ಮತ್ತು ಸಸ್ಪೆ ಸಿನಿಮಾಗಳಲ್ಲಿ ‘ರೆಡ್ ಹೆರಿಂಗ್’ ಅತ್ಯಗತ್ಯ. ಓದುಗ ಅಥವಾ ಪ್ರೇಕ್ಷಕ ಸುಲಭವಾಗಿ ಕೊಲೆಗಾರ ಯಾರು ಎಂದು ಕಂಡುಹಿಡಿಯಬಾರದು ಎಂಬ ಉದ್ದೇಶದಿಂದ ಲೇಖಕರು ಇದನ್ನು ಬಳಸುತ್ತಾರೆ. ಕಥೆಯಲ್ಲಿ ಒಬ್ಬ ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳು ವಂತೆ ತೋರಿಸಲಾಗುತ್ತದೆ.
-
ಇದೇ ಅಂತರಂಗ ಸುದ್ದಿ
‘ರೆಡ್ ಹೆರಿಂಗ್’ (Red Herring) ಎಂಬ ಪದಪ್ರಯೋಗವನ್ನು ಕೇಳಿದ್ದೀರಾ? ಇದು ತರ್ಕಶಾಸ್ತ್ರ (ಲಾಜಿಕ್), ಸಾಹಿತ್ಯ ಮತ್ತು ಸಂವಹನ ಕಲೆಗಳಲ್ಲಿ ಬಳಸುವ ಅತ್ಯಂತ ಶಕ್ತಿಶಾಲಿ ತಂತ್ರ. ಸರಳವಾಗಿ ಹೇಳಬೇಕೆಂದರೆ, ಒಂದು ಮುಖ್ಯ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಳಸುವ ಅಪ್ರಸ್ತುತ ಅಥವಾ ದಿಕ್ಕು ತಪ್ಪಿಸುವ ಮಾಹಿತಿಯೇ ‘ರೆಡ್ ಹೆರಿಂಗ್’.
‘ಹೆರಿಂಗ್’ ಎಂಬುದು ಒಂದು ಜಾತಿಯ ಮೀನು. ಇದನ್ನು ಒಣಗಿಸಿ, ಹೊಗೆ ಹಾಕಿದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ ಮತ್ತು ತೀವ್ರವಾದ ವಾಸನೆಯನ್ನು ಬೀರುತ್ತದೆ. ಐತಿಹಾಸಿಕವಾಗಿ, ಬೇಟೆನಾಯಿ ಗಳಿಗೆ ತರಬೇತಿ ನೀಡುವಾಗ ಅಥವಾ ಅವುಗಳ ದಾರಿ ತಪ್ಪಿಸಲು ಈ ವಾಸನೆಯುಳ್ಳ ಮೀನನ್ನು ಬಳಸಲಾಗುತ್ತಿತ್ತು ಎಂಬ ನಂಬಿಕೆಯಿದೆ.
ನಾಯಿಗಳು ಬೇಟೆಯಾಡುವ ಪ್ರಾಣಿಯ ವಾಸನೆಯನ್ನು ಬಿಟ್ಟು ಈ ತೀವ್ರವಾದ ಮೀನಿನ ವಾಸನೆ ಯ ಹಿಂದೆ ಹೋಗಲಿ ಎಂಬುದು ಇದರ ಉದ್ದೇಶವಾಗಿತ್ತು. ಇದೇ ಕಾರಣಕ್ಕೆ, ಚರ್ಚೆಯಲ್ಲಿ ಅಥವಾ ಕಥೆಗಳಲ್ಲಿ ವಿಷಯಾಂತರ ಮಾಡುವುದನ್ನು ‘ರೆಡ್ ಹೆರಿಂಗ್’ ಎಂದು ಕರೆಯಲಾಗುತ್ತದೆ.
ಚರ್ಚೆ ಅಥವಾ ವಾದ ಮಾಡುವಾಗ ಎದುರಾಳಿಯು ಕೇಳಿದ ಕಠಿಣ ಪ್ರಶ್ನೆಗೆ ಉತ್ತರಿಸಲಾಗದಿzಗ, ವಿಷಯವನ್ನು ಬದಲಾಯಿಸಿ ಓದುಗರ ಅಥವಾ ಕೇಳುಗರ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರವಿದು. ಉದಾಹರಣೆಗೆ, ಸಚಿವರೊಬ್ಬರನ್ನು ವರದಿಗಾರ, “ನೀವು ಈ ಯೋಜನೆಯಲ್ಲಿ ಹಣದ ದುರುಪಯೋಗ ಮಾಡಿದ್ದೀರಿ ಎಂದು ಆಪಾದನೆ ಇದೆಯಲ್ಲ?" ಎಂದು ಕೇಳಿದಾಗ, ಸಚಿವರು “ನೋಡಿ, ನಾವು ದೇಶದ ಅಭಿವೃದ್ಧಿಗಾಗಿ ಎಷ್ಟೊಂದು ಶ್ರಮಿಸುತ್ತಿದ್ದೇವೆ ಗೊತ್ತಲ್ಲ? ರಸ್ತೆಗಳನ್ನು ಕಟ್ಟಿದ್ದೇವೆ, ಸೇತುವೆಗಳನ್ನು ನಿರ್ಮಿಸಿದ್ದೇವೆ, ಶಾಲೆಗಳನ್ನು ತೆರೆದಿದ್ದೇವೆ" ಎಂದು ಹೇಳುತ್ತಾರಲ್ಲ, ಅದು ‘ರೆಡ್ ಹೆರಿಂಗ್’.
ಇದನ್ನೂ ಓದಿ: Vishweshwar Bhat Column: ವಿಶ್ವದಲ್ಲಿ ಸ್ಟಾರ್‌ಬಕ್ಸ್ ಇಲ್ಲದ ದೇಶವಿಲ್ಲ, ಇಸ್ರೇಲ್ʼನಲ್ಲಿ ಅದೂ ಇಲ್ಲ !
ಪತ್ತೇದಾರಿ ಕಾದಂಬರಿಗಳು ಮತ್ತು ಸಸ್ಪೆ ಸಿನಿಮಾಗಳಲ್ಲಿ ‘ರೆಡ್ ಹೆರಿಂಗ್’ ಅತ್ಯಗತ್ಯ. ಓದುಗ ಅಥವಾ ಪ್ರೇಕ್ಷಕ ಸುಲಭವಾಗಿ ಕೊಲೆಗಾರ ಯಾರು ಎಂದು ಕಂಡುಹಿಡಿಯಬಾರದು ಎಂಬ ಉದ್ದೇಶದಿಂದ ಲೇಖಕರು ಇದನ್ನು ಬಳಸುತ್ತಾರೆ. ಕಥೆಯಲ್ಲಿ ಒಬ್ಬ ವ್ಯಕ್ತಿಯು ಸಂಶಯಾಸ್ಪದವಾಗಿ ನಡೆದುಕೊಳ್ಳು ವಂತೆ ತೋರಿಸಲಾಗುತ್ತದೆ.
ಅವನು ಕೊಲೆಗಾರನಿರಬಹುದು ಎಂದು ನಮಗೆ ಅನಿಸುತ್ತದೆ. ಆದರೆ ಕೊನೆಯಲ್ಲಿ ಅವನು ನಿರಪರಾಧಿ ಎಂದು ಸಾಬೀತಾಗುತ್ತದೆ. ಆ ಪಾತ್ರವೇ ಇಲ್ಲಿ ‘ರೆಡ್ ಹೆರಿಂಗ್’. ಉದಾಹರಣೆಗೆ, ಶೆರ್ಲಾಕ್ ಹೋಮ್ಸ್ ಅಥವಾ ಅಗಾಥಾ ಕ್ರಿಸ್ಟಿ ಕಾದಂಬರಿಗಳಲ್ಲಿ ಇಂಥ ಹತ್ತಾರು ಪಾತ್ರಗಳು ಸಿಗುತ್ತವೆ.
ರಾಜಕೀಯ ನಾಯಕರ ‘ರೆಡ್ ಹೆರಿಂಗ್’ ಬಹಳ ಪ್ರಸಿದ್ಧ. ರಾಜಕಾರಣಿಗಳು ಮತ್ತು ವಕ್ತಾರರು ಮಾಧ್ಯಮಗಳ ಕಠಿಣ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಈ ತಂತ್ರವನ್ನು ನಿರಂತರವಾಗಿ ಬಳಸುತ್ತಾರೆ. ಆರ್ಥಿಕ ಕುಸಿತ ಅಥವಾ ನಿರುದ್ಯೋಗದಂಥ ಮೂಲಭೂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿರು ವಾಗ, ಇದ್ದಕ್ಕಿದ್ದಂತೆ ಯಾವುದೇ ಸಂಬಂಧವಿಲ್ಲದ ಧಾರ್ಮಿಕ ಅಥವಾ ಭಾವನಾತ್ಮಕ ವಿವಾದ ವೊಂದನ್ನು ಮುನ್ನೆಲೆಗೆ ತರುವುದು. ಇದರಿಂದ ಜನರ ಗಮನ ಮೂಲ ಸಮಸ್ಯೆಯಿಂದ ದೂರ ಸರಿಯುತ್ತದೆ. ಸದನದಲ್ಲಿ ಉತ್ತರಿಸುವಾಗ ‘ರೆಡ್ ಹೆರಿಂಗ್’ ಎಂಬುದು ಸಾಮಾನ್ಯವಾಗಿ ಎಲ್ಲರೂ ಬಳಸುವ ತಂತ್ರ.
ಇದು ರಾಜಕಾರಣಿಗಳಿಗೆ ಮಾತ್ರ ಸೀಮಿತ ಎಂದು ಭಾವಿಸಬೇಕಿಲ್ಲ. ಮನೆಯಲ್ಲಿ ಮಕ್ಕಳು ತಮ್ಮ ಪೋಷಕರಿಂದ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಸಹ ಇದನ್ನು ಬಳಸುತ್ತಾರೆ. ತಾಯಿ “ಯಾಕೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ?" ಎಂದು ಕೇಳಿದಾಗ ಮಗ, “ಅಮ್ಮ, ನಿನ್ನೆ ನೆರೆಮನೆಯವರು ನಮ್ಮ ಮನೆಯ ಮೇಲೆ ಕಲ್ಲು ಎಸೆದಿದ್ದರು ಗೊತ್ತಾ?" ಅಂತ ಪ್ರತಿಕ್ರಿಯಿಸುತ್ತಾನಲ್ಲ ಅದು ‘ರೆಡ್ ಹೆರಿಂಗ್’.
ಇಲ್ಲಿ ಮಗ ತನ್ನ ವೈಫಲ್ಯಕ್ಕಿಂತ ನೆರೆಮನೆಯವರ ಘಟನೆಯನ್ನು ದೊಡ್ಡದಾಗಿ ಬಿಂಬಿಸಿ ತಾಯಿಯ ಸಿಟ್ಟನ್ನು ಬೇರೆಡೆಗೆ ತಿರುಗಿಸುತ್ತಾನೆ. ಹೆಂಡತಿ ಕೇಳುವ ಕಠಿಣ ಪ್ರಶ್ನೆಗಳಿಗೆ ಗಂಡನನ್ನು ಬಚಾವ್ ಮಾಡುವುದೇ ‘ರೆಡ್ ಹೆರಿಂಗ್’.
‘ರೆಡ್ ಹೆರಿಂಗ್’ ಎಂಬುದು ಒಂದು ಚತುರ ತಂತ್ರ. ಸಾಹಿತ್ಯದಲ್ಲಿ ಇದು ಓದುಗನ ಕುತೂಹಲ ಹೆಚ್ಚಿಸಿದರೆ, ಸಾರ್ವಜನಿಕ ಚರ್ಚೆಗಳಲ್ಲಿ ಇದು ಸತ್ಯವನ್ನು ಮುಚ್ಚಿಡುವ ಕೆಲಸ ಮಾಡುತ್ತದೆ. ಇಂಗ್ಲಿಷಿನಲ್ಲಿ ಇನ್ನೊಂದು ಪದಪ್ರಯೋಗವಿದೆ. ಅದು ‘ಸ್ಟ್ರಾಮ್ಯಾನ್’.
ಕೆಲವರು ಹೆಚ್ಚಾಗಿ ‘ಸ್ಟ್ರಾ ಮ್ಯಾನ್’ ಮತ್ತು ‘ರೆಡ್ ಹೆರಿಂಗ್’ ನಡುವೆ ಗೊಂದಲ ಮಾಡಿಕೊಳ್ಳುತ್ತಾರೆ. ಮೊದಲನೆಯದು, ವಿಷಯವನ್ನೇ ಸಂಪೂರ್ಣವಾಗಿ ಬದಲಾಯಿಸುವುದಾದರೆ, ಸ್ಟ್ರಾಮ್ಯಾನ್ ಎದುರಾಳಿಯ ವಾದವನ್ನು ತಿರುಚಿ, ಆ ವಾದ ದುರ್ಬಲ ಎಂದು ಬಿಂಬಿಸುವುದು.
ನಮ್ಮ ನಡುವೆ ನಡೆಯುವ ಬಹುತೇಕ ವಾದಗಳಲ್ಲಿ ಒಂದು ವಿಚಿತ್ರ ಪ್ರವೃತ್ತಿಯನ್ನು ಗಮನಿಸಿರ ಬಹುದು. ಎದುರಾಳಿ ಹೇಳಿದ್ದನ್ನು ಕೇಳಿಸಿಕೊಳ್ಳುವುದಕ್ಕಿಂತ, ಅವರು ಹೇಳಿದ್ದನ್ನು ನಮಗೆ ಅನುಕೂಲವಾಗುವಂತೆ ತಿರುಚಿ ಅದರ ಮೇಲೆ ದಾಳಿ ಮಾಡುವುದು ನಮಗೆ ತುಂಬಾ ಸುಲಭ ಅನ್ನಿಸುತ್ತದೆ.
ಇದನ್ನೇ ತರ್ಕಶಾಸ್ತ್ರದಲ್ಲಿ ‘ಸ್ಟ್ರಾಮ್ಯಾನ್ ಫ್ಯಾಲಸಿ’ (Straw Man Fallacy) ಎಂದು ಕರೆಯುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯ ನಿಜವಾದ ವಾದವನ್ನು ಎದುರಿಸುವ ಶಕ್ತಿ ಇಲ್ಲದಿದ್ದಾ, ಆ ವಾದದ ಒಂದು ವಿಕೃತ ರೂಪವನ್ನು ಸೃಷ್ಟಿಸಿ, ಅದನ್ನು ಸುಲಭವಾಗಿ ಹೊಡೆದುರುಳಿಸಿ, ‘ನೋಡಿ ನಾನು ಗೆದ್ದೆ’ ಎಂದು ಬೀಗುವುದೇ ಈ ಸ್ಟ್ರಾಮ್ಯಾನ್ ತಂತ್ರ.
ಹಳೆಯ ಕಾಲದಲ್ಲಿ ಯುದ್ಧದ ತರಬೇತಿ ನೀಡುವಾಗ ನಿಜವಾದ ಮನುಷ್ಯರ ಬದಲಿಗೆ ಹುಲ್ಲಿನಿಂದ ಮಾಡಿದ ಗೊಂಬೆಗಳನ್ನು (Straw Man) ನಿಲ್ಲಿಸಿ ಅದರ ಮೇಲೆ ಕತ್ತಿವರಸೆ ಮಾಡಲಾಗುತ್ತಿತ್ತು. ಯಾಕೆಂದರೆ ಹುಲ್ಲಿನ ಗೊಂಬೆ ಮರುದಾಳಿ ಮಾಡುವುದಿಲ್ಲವಲ್ಲ? ಹಾಗೆಯೇ, ಚರ್ಚೆಯಲ್ಲಿ ಒಬ್ಬರ ವಾದವನ್ನು ಎದುರಿಸಲಾಗದಿದ್ದಾಗ, ಅವರ ವಾದಕ್ಕೆ ಸಂಬಂಧವೇ ಇಲ್ಲದ ಒಂದು ದುರ್ಬಲ ವಾದವನ್ನು ಸೃಷ್ಟಿಸಿ ಅದಕ್ಕೆ ಹೊಡೆಯುವುದು ಅಸಲಿ ಯುದ್ಧವಲ್ಲ, ಅದು ಕೇವಲ ಪ್ರದರ್ಶನ ವಷ್ಟೆ. ಒಂದು ಮನೆಯಲ್ಲಿ ಅಪ್ಪ ಮತ್ತು ಮಗನ ನಡುವೆ ಸಂಭಾಷಣೆ ನಡೆಯುತ್ತಿದೆ ಎಂದು ಭಾವಿಸೋಣ.
ಮಗ: “ಅಪ್ಪಾ, ನನಗೆ ಈ ಭಾನುವಾರ ಹೊರಗಡೆ ಹೋಗಿ ಸಿನಿಮಾ ನೋಡಲು ಸ್ವಲ್ಪ ಹಣ ಬೇಕು".ಅಪ್ಪ: (ಸ್ಟ್ರಾ ಮ್ಯಾನ್ ತಂತ್ರ ಬಳಸಿ): “ಓಹೋ! ಅಂದರೆ ನಿನಗೆ ಓದುವ ಆಸಕ್ತಿಯೇ ಇಲ್ಲ ಅಂತಾಯ್ತು. ನಿನಗೆ ನಾನು ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಕೇವಲ ಮೋಜು-ಮಸ್ತಿಗೇ ಖರ್ಚು ಮಾಡಿ, ಪರೀಕ್ಷೆಯಲ್ಲಿ ಫೇಲ್ ಆಗಿ, ಬೀದಿಯಲ್ಲಿ ಅಲೆಯಬೇಕು ಅಂತ ಆಸೆಯೇ?" ಇಲ್ಲಿ ಮಗ ಕೇಳಿದ್ದು ಕೇವಲ ಒಂದು ಸಿನಿಮಾಗೆ ಹಣ. ಆದರೆ ಅಪ್ಪ ಏನು ಮಾಡಿದರು? ಸಿನಿಮಾದ ವಿಷಯ ವನ್ನು ‘ಓದುವ ಆಸಕ್ತಿ ಇಲ್ಲ’ ಮತ್ತು ‘ಜೀವನ ಹಾಳುಮಾಡಿಕೊಳ್ಳುವುದು’ ಎಂಬ ದೊಡ್ಡ ಮಟ್ಟದ ವಿರೂಪಕ್ಕೆ ಕೊಂಡೊಯ್ದರು. ಮಗ ಹೇಳದ ಮಾತುಗಳನ್ನು ಅವನ ಬಾಯಿಗೆ ತುರುಕಿ, ಆ ಸುಳ್ಳು ವಾದದ ಮೇಲೆ ದಾಳಿ ಮಾಡಿದರು. ಇದು ಅಪ್ಪಟ ‘ಸ್ಟ್ರಾಮ್ಯಾನ್’.
ಇದು ಮೂರು ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು, ವಾದವನ್ನು ತಿರುಚುವುದು. ಅಂದರೆ ಎದುರಾಳಿ ಹೇಳಿದ ವಿಷಯದ ಮೂಲ ಅರ್ಥವನ್ನು ಸ್ವಲ್ಪ ಬದಲಿಸುವುದು ಅಥವಾ ಅತಿಯಾಗಿ ಸರಳೀಕರಿಸುವುದು. ಎರಡನೆಯದು, ಹುಲ್ಲಿನ ಗೊಂಬೆ ನಿಲ್ಲಿಸುವುದು. ಅಂದರೆ ಆ ತಿರುಚಿದ ವಿಷಯವನ್ನೇ ಎದುರಾಳಿಯ ಅಂತಿಮ ವಾದ ಎಂದು ಬಿಂಬಿಸುವುದು ಹಾಗೂ ಮೂರನೆಯದು, ಧ್ವಂಸ ಮಾಡುವುದು. ಅಂದರೆ ಆ ಸುಳ್ಳು ವಾದದ ವಿರುದ್ಧ ಅಬ್ಬರದ ಭಾಷಣ ಮಾಡಿ, ತಾನು ವಾದದಲ್ಲಿ ಗೆದ್ದೆ ಎಂದು ತೋರಿಸಿಕೊಳ್ಳುವುದು.
ರಾಜಕೀಯ ಮತ್ತು ಟಿವಿ ಡಿಬೇಟ್‌ಗಳಲ್ಲಿ ಈ ತಂತ್ರವನ್ನು ಗಮನಿಸಬಹುದು. ಅದರಲ್ಲೂ ಟಿವಿ ಚರ್ಚೆಗಳನ್ನು ಗಮನಿಸಿದರೆ ಈ ಸ್ಟ್ರಾಮ್ಯಾನ್ ಪ್ರತಿ ನಿಮಿಷಕ್ಕೂ ಕಾಣಿಸಿಕೊಳ್ಳುತ್ತದೆ. ಪರಿಸರವಾದಿ “ನಾವು ಕಾಡುಗಳನ್ನು ಉಳಿಸಲು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು" ಎಂದು ಹೇಳಿದರೆ, ಅವರ ವಿರೋಧಿ, “ನೋಡಿ, ಇವರಿಗೆ ದೇಶ ಅಭಿವೃದ್ಧಿಯಾಗುವುದು ಬೇಕಿಲ್ಲ.
ಇವರು ನಮ್ಮನ್ನು ಮತ್ತೆ ಶಿಲಾಯುಗಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಬಟ್ಟೆ-ಬರೆ ಬಿಟ್ಟು ನಾರುಮಡಿ ಉಟ್ಟುಕೊಂಡು ಗುಹೆಯಲ್ಲಿ ಇರಬೇಕೆಂದು ಇವರು ಬಯಸುತ್ತಿದ್ದಾರೆ" ಎಂದು ಅಬ್ಬರಿಸುವುದು ‘ಸ್ಟ್ರಾಮ್ಯಾನ್ ಫ್ಯಾಲಸಿ’. ಇಲ್ಲಿ ಪರಿಸರವಾದಿ “ಗುಹೆಯಲ್ಲಿ ವಾಸಿಸೋಣ" ಎಂದು ಎಲ್ಲಿಯೂ ಹೇಳಿಲ್ಲ.
ಆದರೆ ವಿರೋಧಿ ಅವನ ವಾದವನ್ನು ವಿಕೃತಗೊಳಿಸಿ ಅಣಕ ಮಾಡುವುದರ ಮೂಲಕ ವೀಕ್ಷಕರನ್ನು ದಾರಿ ತಪ್ಪಿಸುತ್ತಾನೆ. ಯಾರಾದರೂ ನಿಮ್ಮ ಜತೆ ವಾದ ಮಾಡುವಾಗ, “ಅಂದರೆ ನಿಮ್ಮ ಪ್ರಕಾರ...", “ಹಾಗಾದರೆ ನಿಮಗೆ ಇದು ಇಷ್ಟವಿಲ್ಲ ಎಂದರ್ಥವೇ?", “ನೀವು ಹೇಳುತ್ತಿರುವುದನ್ನು ನೋಡಿದರೆ ನಿಮಗೆ ದೇಶದ ಮೇಲೆ ಪ್ರೀತಿಯೇ ಇಲ್ಲ ಎನ್ನಿಸುತ್ತದೆ" ಎಂದು ಹೇಳಿದರೆ, ಅದು ನಿಮ್ಮ ಮೂಲ ವಾದವನ್ನು ಬಿಟ್ಟು ಬೇರೆ ಕರೆದೊಯ್ಯುವ ದಾರಿಗಳು ಎಂಬ ನಿರ್ಧಾರಕ್ಕೆ ಬರಬಹುದು.
ಜೀವನದಲ್ಲಿ ನಾವೂ ಅನೇಕ ಬಾರಿ ಅರಿವಿಲ್ಲದೆಯೇ ಸ್ಟ್ರಾ ಮ್ಯಾನ್ ಸೃಷ್ಟಿಸುತ್ತಿರುತ್ತೇವೆ. ನಿಮ್ಮ ಮಕ್ಕಳು ಲೈಟ್ ಆರಿಸದಿzಗ ನೀವು “ನಿನಗೆ ಜವಾಬ್ದಾರಿಯೇ ಇಲ್ಲ, ನೀನು ದೇಶದ ಸಂಪತ್ತನ್ನೇ ನಾಶಮಾಡುತ್ತಿದ್ದೀಯಾ" ಎಂದು ಅತಿಯಾಗಿ ಹೇಳಿದರೆ, ಅಲ್ಲಿಯೂ ಈ ‘ಹುಲ್ಲಿನ ಗೊಂಬೆ’ ಇರುತ್ತದೆ! ವಿಷಯವನ್ನು ಸಣ್ಣದಾಗಿ, ಚೊಕ್ಕವಾಗಿ ಹೇಳುವುದರಲ್ಲಿ ಇರುವ ಸೊಬಗು, ಈ ವಿಕೃತ ಗೊಂಬೆಗಳಾಟದಲ್ಲಿ ಇಲ್ಲ.
ಹೀಗಿದ್ದರು ವಿಜಯಭಾಸ್ಕರ ರೆಡ್ಡಿ
ಒಮ್ಮೆ ಪ್ರಧಾನಿ ಪಿ.ವಿ.ನರಸಿಂಹರಾಯರ ಪುತ್ರ ಪಿ.ವಿ.ರಂಗಾರಾವ್ (ಅವರು ಆಂಧ್ರದ ಶಿಕ್ಷಣ ಸಚಿವರೂ ಆಗಿದ್ದರು) ಅವರ ಜತೆ ಮಾತಾಡುವಾಗ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೋಟ್ಲ ವಿಜಯಭಾಸ್ಕರ ರೆಡ್ಡಿ ಅವರ ಕುರಿತು ಒಂದು ಸ್ವಾರಸ್ಯವಾದ ಮಾಹಿತಿಯನ್ನು ಹಂಚಿ ಕೊಂಡಿದ್ದರು. ರಾಜಕಾರಣ ಎಂದರೆ ಗಂಟೆಗಟ್ಟಲೆ ಭಾಷಣ, ಅಂತ್ಯವಿಲ್ಲದ ಚರ್ಚೆ ಮತ್ತು ಪೊಳ್ಳು ಭರವಸೆಗಳ ಸರಣಿ ಎಂದು ಭಾವಿಸುವವರಿಗೆ ರೆಡ್ಡಿಯವರ ಕಾರ್ಯವೈಖರಿ ಅಚ್ಚರಿ ಎನಿಸಬಹುದು.
ವಿಜಯಭಾಸ್ಕರ ರೆಡ್ಡಿ ಅವರು ಫೋನಿನಲ್ಲಿ ಎರಡು ನಿಮಿಷಕ್ಕಿಂತ ಹೆಚ್ಚು ಮಾತನಾಡುತ್ತಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಅವರ ನೇರ ನಡೆ-ನುಡಿ. ಯಾವುದೇ ಒಬ್ಬ ಶಾಸಕ ಅಥವಾ ಅಧಿಕಾರಿ ಫೋನ್ ಮಾಡಿದರೆ, ರೆಡ್ಡಿಯವರು ಮೊದಲು ಕೇಳುತ್ತಿದ್ದುದು- “ವಿಷಯವೇನು ಎಂಬುದನ್ನು ಸಂಕ್ಷಿಪ್ತವಾಗಿ ಹೇಳಿ". ಹರಟೆ ಅಥವಾ ಕುಶಲೋಪರಿ ವಿಚಾರಿಸಲು ಅಲ್ಲಿ ಅವಕಾಶವಿರುತ್ತಿರಲಿಲ್ಲ. ವಿಷಯ ತಿಳಿದ ತಕ್ಷಣ, “ಆಯಿತು", “ಮಾಡುವಂತೆ ಹೇಳುತ್ತೇನೆ" ಅಥವಾ “ಇದು ಸಾಧ್ಯವಿಲ್ಲ" ಎಂದು ಖಡಾಖಂಡಿತವಾಗಿ ಹೇಳಿ ಫೋನ್ ಇಟ್ಟುಬಿಡುತ್ತಿದ್ದರು.
ಒಬ್ಬ ಮುಖ್ಯಮಂತ್ರಿಯ ಬಳಿ ದಿನಕ್ಕೆ ನೂರಾರು ಜನರು ಕೆಲಸಕ್ಕಾಗಿ ಬರುತ್ತಾರೆ. ಪ್ರತಿಯೊಬ್ಬರ ಜತೆ ಹತ್ತು ನಿಮಿಷ ಮಾತನಾಡಿದರೂ ದಿನದ ಬಹುಪಾಲು ಸಮಯ ಕೇವಲ ಸಂಭಾಷಣೆಯ ಕಳೆದು ಹೋಗುತ್ತದೆ ಎಂದು ಅವರು ನಂಬಿದ್ದರು. ರೆಡ್ಡಿ ಅವರು ಕೇವಲ ಫೋನಿನಲ್ಲಿ ಮಾತ್ರವಲ್ಲ, ಕಡತಗಳನ್ನು ವಿಲೇವಾರಿ ಮಾಡುವುದರಲ್ಲೂ ಅಷ್ಟೇ ವೇಗವಾಗಿದ್ದರು.
ಮೇಜಿನ ಮೇಲೆ ಫೈಲುಗಳು ರಾಶಿ ಬೀಳುವುದನ್ನು ಅವರು ಸಹಿಸುತ್ತಿರಲಿಲ್ಲ. ವಿಳಂಬ ಧೋರಣೆ ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ. ಒಂದು ಕೆಲಸ ಆಗಬೇಕೆಂದರೆ ಅದು ಆಗಲೇಬೇಕು, ಇಲ್ಲವಾ ದರೆ ಅದಕ್ಕೆ ಕಾರಣವೇನು ಎಂಬುದು ತಕ್ಷಣವೇ ತಿಳಿಯಬೇಕಿತ್ತು. ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಸಾಮಾನ್ಯವಾದರೂ, ರೆಡ್ಡಿಯವರು ಅವುಗಳಿಂದ ದೂರವಿದ್ದರು.
ಫೋನಿನಲ್ಲಿ ಕಡಿಮೆ ಮಾತನಾಡುವುದರಿಂದ ಅನಗತ್ಯ ಲಾಬಿ ಅಥವಾ ಶಿಫಾರಸುಗಳಿಗೆ ಅವರು ಅವಕಾಶ ಕೊಡುತ್ತಿರಲಿಲ್ಲ. ಯಾರಿಗಾದರೂ ಅಡ್ಡಹಾದಿಯಲ್ಲಿ ಕೆಲಸ ಮಾಡಿಸಿಕೊಳ್ಳುವ ಉದ್ದೇಶ ವಿದ್ದರೆ, ರೆಡ್ಡಿಯವರ ಅಲ್ಪಾವಧಿಯ ಫೋನ್ ಕರೆ ಅವರಿಗೆ ಆ ಧೈರ್ಯವನ್ನೇ ನೀಡುತ್ತಿರಲಿಲ್ಲ.
ಅವರ ಕಾಲದಲ್ಲಿ ಅಧಿಕಾರಿಗಳು ಫೋನ್ ಮಾಡುವ ಮುನ್ನ ಸಂಪೂರ್ಣ ತಯಾರಿ ಮಾಡಿಕೊಳ್ಳು ತ್ತಿದ್ದರು. ಏಕೆಂದರೆ ಮುಖ್ಯಮಂತ್ರಿಗಳು ಕೇಳುವ ಪ್ರಶ್ನೆಗೆ ತಕ್ಷಣ ಉತ್ತರ ನೀಡದಿದ್ದರೆ ಅಥವಾ ವಿಷಯವನ್ನು ಎಳೆಯಲು ಪ್ರಯತ್ನಿಸಿದರೆ ರೆಡ್ಡಿಯವರು ಫೋನ್ ಕೆಳಗಿಡುತ್ತಿದ್ದರು. ಇದು ಇಡೀ ಆಡಳಿತ ಯಂತ್ರದಲ್ಲಿ ಒಂದು ರೀತಿಯ ಶಿಸ್ತನ್ನು ತಂದಿತ್ತು.
ಸಮಯದ ಮೌಲ್ಯವನ್ನು ಅವರು ಕೇವಲ ಇತರರಿಗೆ ಬೋಧಿಸಲಿಲ್ಲ, ಸ್ವತಃ ಪಾಲಿಸಿ ತೋರಿಸಿದರು. ರೆಡ್ಡಿ ಅವರು ರಾಯಲಸೀಮೆಯ ಪ್ರಭಾವಿ ನಾಯಕರಾಗಿದ್ದರೂ, ಅವರ ವ್ಯಕ್ತಿತ್ವದಲ್ಲಿ ಒಂದು ರೀತಿಯ ಗಾಂಭೀರ್ಯವಿತ್ತು. ರಾಜಕೀಯದಲ್ಲಿ ಜನಪ್ರಿಯತೆ ಗಳಿಸಲು ಎಲ್ಲರ ಜತೆ ನಗುತ್ತಾ, ಗಂಟೆ ಗಟ್ಟಲೆ ಮಾತನಾಡುವುದು ಅಗತ್ಯ ಎಂದು ಅವರು ಭಾವಿಸಿರಲಿಲ್ಲ.
ಬದಲಿಗೆ, ‘ಕೆಲಸ ಮಾತನಾಡಬೇಕು, ನಾವಲ್ಲ’ ಎಂಬ ತತ್ವ ಅವರದಾಗಿತ್ತು. ಈಗಿನ ರಾಜಕಾರಣಿ ಗಳಿಗೆ ಮೊಬೈಲ್ ಒಂದು ಶಾಪ. ದಿನದ ಬಹುಪಾಲು ಮೊಬೈಲಿನಲ್ಲಿಯೇ ಕಳೆದುಹೋಗುತ್ತದೆ. ಈ ಕಾಲದ ಸಾಮಾಜಿಕ ಜಾಲತಾಣಗಳು ಮತ್ತು ಪ್ರಚಾರದ ಅಬ್ಬರದ ನಡುವೆ, ಕೋಟ್ಲ ವಿಜಯ ಭಾಸ್ಕರ ರೆಡ್ಡಿಯವರಂಥ ವ್ಯಕ್ತಿತ್ವಗಳು ಅಪರೂಪವೆನಿಸುತ್ತವೆ.
ಎರಡು ನಿಮಿಷದ ಸಂಭಾಷಣೆಯ ಮೂಲಕವೇ ಇಡೀ ರಾಜ್ಯದ ಆಡಳಿತವನ್ನು ನಿಯಂತ್ರಿಸುವ ಅವರ ಕಲೆ ಅದ್ಭುತವಾಗಿತ್ತು. ಅವರ ಈ ಶಿಸ್ತು ಇಂದಿನವರಿಗೆ ಅನುಕರಣೀಯ.
ಶೌಚಾಲಯದಲ್ಲಿ ಅರಳಿದ ನಾಗರಿಕತೆ
ಇತ್ತೀಚಿಗೆ ನಾನು ’The Truly Terrible History of the Toilet' ಎಂಬ ಪುಸ್ತಕ ಓದುತ್ತಿದ್ದೆ. ಈ ಹೆಸರು ಸ್ವಲ್ಪ ವಿಚಿತ್ರ ಮತ್ತು ತಮಾಷೆ ಅನ್ನಿಸಬಹುದು. ಆದರೆ, ಮನುಕುಲದ ನಾಗರಿಕತೆಯ ಇತಿಹಾಸ ವನ್ನು ಅತ್ಯಂತ ಆಸಕ್ತಿದಾಯಕವಾಗಿ, ಹಾಸ್ಯದ ಲೇಪನದೊಂದಿಗೆ ವಿವರಿಸುವ ಪುಸ್ತಕವಿದು.
ಶೀರ್ಷಿಕೆಯಲ್ಲಿ ’Terrible’ (ಭಯಾನಕ) ಎಂಬ ಪದವಿದ್ದರೂ, ಓದುಗರಿಗೆ ಇದು ’Terrific’ (ಅದ್ಭುತ) ಅನುಭವ ನೀಡುತ್ತದೆ. ವಿಶ್ವದ ಅತ್ಯಂತ ಅಗತ್ಯವಾದ, ಆದರೆ ಯಾರೂ ಬಹಿರಂಗವಾಗಿ ಚರ್ಚಿಸದ ‘ಶೌಚಾಲಯ’ದ ಇತಿಹಾಸದ ಕುರಿತಾದ ಸ್ವಾರಸ್ಯಕರ ವಿವರಣೆ ಈ ಕೃತಿಯಲ್ಲಿದೆ.
ನಾವು ಇಂದು ಬಳಸುವ ಅತ್ಯಾಧುನಿಕ ಫ್ಲಶ್ ಶೌಚಾಲಯಗಳು ಕೇವಲ ನೂರು-ನೂರೈವತ್ತು ವರ್ಷಗಳ ಇತಿಹಾಸ ಹೊಂದಿರಬಹುದು. ಆದರೆ ಮನುಷ್ಯ ಅಲೆಮಾರಿಯಾಗಿದ್ದ ಕಾಲದಿಂದ ಹಿಡಿದು ಇಂದಿನವರೆಗೆ ‘ತ್ಯಾಜ್ಯ ವಿಲೇವಾರಿ’ ಎನ್ನುವುದು ದೊಡ್ಡ ಸವಾಲಾಗಿತ್ತು. ಲೇಖಕರು ಈ ಪುಸ್ತಕದಲ್ಲಿ ಪುರಾತನ ರೋಮ, ಈಜಿಪ್ಟ್ ಮತ್ತು ಮಧ್ಯಕಾಲೀನ ಯುರೋಪಿನ ಅಸಹ್ಯಕರ ಹಾಗೂ ಆಶ್ಚರ್ಯಕರ ಪದ್ಧತಿಗಳನ್ನು ತೆರೆದಿಟ್ಟಿದ್ದಾರೆ.
ಪುರಾತನ ರೋಮನ್ನರು ಅತ್ಯಂತ ಬುದ್ಧಿವಂತರು ಎಂದು ನಾವು ಭಾವಿಸುತ್ತೇವೆ. ಆದರೆ ಅವರ ಶೌಚಾಲಯ ಪದ್ಧತಿ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಅಲ್ಲಿ ಶೌಚಾಲಯಗಳು ‘ಸಾಮಾಜಿಕ ಕೇಂದ್ರ’ಗಳಾಗಿದ್ದವು!
ಸಾಲಾಗಿ ಕುಳಿತು ಜನರು ಮಲವಿಸರ್ಜನೆ ಮಾಡುತ್ತಾ ಅಂದಿನ ರಾಜಕೀಯ ಮತ್ತು ವ್ಯವಹಾರಗಳ ಬಗ್ಗೆ ಚರ್ಚಿಸುತ್ತಿದ್ದರು. ಅಲ್ಲಿ ಯಾವುದೇ ಪ್ರೈವಸಿ ಇರಲಿಲ್ಲ. ಅಷ್ಟೇ ಅಲ್ಲ, ಸ್ವಚ್ಛತೆಗಾಗಿ ಅವರು ಬಳಸುತ್ತಿದ್ದ ‘ಸ್ಪಾಂಜ್’ ಅನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದರು!
ಮಧ್ಯಕಾಲೀನ ಲಂಡನ್ ಅಥವಾ ಪ್ಯಾರಿಸ್ ನಗರಗಳ ಬೀದಿಯಲ್ಲಿ ನಡೆಯುವುದು ಸಾಹಸದ ಕೆಲಸವಾಗಿತ್ತು. ಅಂದು ಶೌಚಾಲಯಗಳಿರಲಿಲ್ಲ. ಜನರು ತಮ್ಮ ಮನೆಯ ಕಿಟಕಿಗಳ ಮೂಲಕ ತ್ಯಾಜ್ಯವನ್ನು ನೇರವಾಗಿ ಬೀದಿಗೆ ಎಸೆಯುತ್ತಿದ್ದರು. ಎಸೆಯುವ ಮುನ್ನ ‘ಗಾರ್ಡಿಲೂ’ (ಎಚ್ಚರಿಕೆ, ನೀರು ಬರುತ್ತಿದೆ!) ಎಂದು ಕಿರುಚುತ್ತಿದ್ದರು.
ಈ ಕೊಳಕು ಪದ್ಧತಿಯಿಂದಲೇ ಜಗತ್ತಿನಲ್ಲಿ ಪ್ಲೇಗ್ ಹಾಗೂ ಕಾಲರಾದಂಥ ಭೀಕರ ಸಾಂಕ್ರಾಮಿಕ ರೋಗಗಳು ಹರಡಿದ್ದು ಎನ್ನುವುದನ್ನು ಪುಸ್ತಕವು ಗಂಭೀರವಾಗಿ ದಾಖಲಿಸಿದೆ.
ಪುಸ್ತಕವು ಕೇವಲ ಗಲೀಜು ಸಂಗತಿಗಳನ್ನಷ್ಟೇ ಹೇಳುವುದಿಲ್ಲ, ಬದಲಾಗಿ ವಿಜ್ಞಾನದ ಬೆಳವಣಿಗೆ ಯನ್ನು ತೋರಿಸುತ್ತದೆ. ಎಲಿಜಬೆತ್ ರಾಣಿಯ ಆಪ್ತ ಸರ್ ಜಾನ್ ಹ್ಯಾರಿಂಗ್ಟನ್ ಮೊದಲ ಬಾರಿಗೆ ‘ಫ್ಲಶ್’ ವ್ಯವಸ್ಥೆಯನ್ನು ಕಂಡುಹಿಡಿದ. ಆದರೆ ಅಂದು ಜನರು ಅವನನ್ನು ನೋಡಿ ನಕ್ಕಿದ್ದರು. ಇಂದಿನ ಆಧುನಿಕ ಶೌಚಾಲಯದ ವಿನ್ಯಾಸಕ್ಕೆ ದೊಡ್ಡ ಕೊಡುಗೆ ನೀಡಿದವನು ಥಾಮಸ್ ಕ್ರಾಪ್ಪರ್. ಇವನ ಹೆಸರಿನಿಂದಲೇ ಇಂಗ್ಲಿಷ್‌ನಲ್ಲಿ ಕೆಲವು ಶಬ್ದಗಳು ಹುಟ್ಟಿಕೊಂಡವು.
ಈ ಪುಸ್ತಕವು ನಮಗೆ ಕಲಿಸುವುದು ಇಷ್ಟೇ- ನಾವು ಇಂದು ಅನುಭವಿಸುತ್ತಿರುವ ಸಣ್ಣ ಪುಟ್ಟ ಸೌಲಭ್ಯಗಳ ಹಿಂದೆ ಸಾವಿರಾರು ವರ್ಷಗಳ ಕೊಳಕು ಇತಿಹಾಸ ಮತ್ತು ನೂರಾರು ವಿಜ್ಞಾನಿಗಳ ಪರಿಶ್ರಮವಿದೆ. ನಮ ನಾಗರಿಕತೆ ಟಾಯ್ಲೆಟ್‌ನಲ್ಲಿ ಬೆಳೆದಿದೆ ಎಂಬುದಕ್ಕೆ ಈ ಕೃತಿ ಸಾಕಷ್ಟು ನಿದರ್ಶನಗಳನ್ನು ನೀಡುತ್ತದೆ.