Vinayak M Bhat Column: ವಿನಾಯಕನೇ ಸುಂದರ, ನಿಜಾರ್ಥದಲ್ಲಿ ಧುರಂಧರ
ಪಾರ್ವತಿ ದೇವಿ ಸ್ನಾನಕ್ಕೆ ಹೋಗುವಾಗ ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿ, ಬಾಗಿಲು ಕಾಯಲು ನಿಯಮಿಸಿದಾಗ ಬಂದ ಈಶ್ವರನನ್ನೂ ಆತ ಒಳಗೆ ಬಿಡದಿದ್ದಾಗ ಆತನ ತಲೆ ಕತ್ತರಿಸ ಲಾಗುತ್ತದೆ, ಮುಂದೆ ಪಾರ್ವತಿಯ ಕೋಪಕ್ಕೆ ಮಣಿದ ಶಿವ ಉತ್ತರದಿಕ್ಕಿಗೆ ತಲೆಯಿಟ್ಟು ಮಲಗಿದ ಆನೆಯ ತಲೆಯನ್ನು ಕತ್ತರಿಸಿ ತಂದು ಕೂಡಿಸಿದಾಗ ಗಜವದನನಾದ ಪುರಾತನ ಕಥೆಯೇ ನಮಗೆ ಆಪ್ಯಾಯ ಮಾನವಾಗುತ್ತದೆ
-
ವಿದ್ಯಮಾನ
ಪ್ರತಿ ವರ್ಷ ಚೌತಿ ಹಬ್ಬ ಬಂತೆಂದರೆ, ‘ಮಣ್ಣ ದೇವರು ದೇವರ’ ಎನ್ನುವವರು, ಗಣಪತಿಯ ಹಬ್ಬ ವನ್ನು ಹೇಗೆ ಆಚರಿಸಬೇಕು ಹೇಗೆ ಆಚರಿಸಬಾರದು ಎಂದು ಆದೇಶ/ಉಪದೇಶ ನೀಡುವವ ನಿಜಗುಣಾನ್ವಿತರು, ಪಂಡಿತರಿಂದ ಆರಾಧಿಸಲ್ಪಡುವವರು ಮುಂತಾದ ಧರ್ಮಾತೀತರೆಲ್ಲ ಮೈಕೊಡವಿಕೊಂಡು ಎದ್ದುನಿಂತು ಬಿಡುತ್ತಾರೆ. ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ ಎಂಬಂತೆ ಇಂಥವರನ್ನು ಅಲಕ್ಷ್ಯ ಮಾಡಿ ಬಿಡುವುದೊಳಿತು.
ಗೌರೀ ಗಣೇಶ ಹಬ್ಬದ ನಮ್ಮ ಸಂಭ್ರಮವನ್ನು ಇಂಥವರಿಗಾಗಿ ಹಾಳು ಮಾಡಿಕೊಳ್ಳುವುದಲ್ಲ. ಬದಲಿಗೆ ಜಗಮೆಚ್ಚಿದ ದೇವರಾದ ಪ್ರಸನ್ನವದನ ಗಣೇಶನ ಸ್ವರೂಪಾನುಸಂಧಾನದಲ್ಲಿ ತೊಡಗುವು ದೊಳಿತು. ಗಣಪತಿಯ ಸ್ವರೂಪವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಗಣಪತಿ ಉಪನಿಷತ್ತನ್ನು ಅರಿಯ ಬೇಕು. ಅದರಲ್ಲಿ ಅವನ ಸ್ವರೂಪ, ಅವನಿಗೆ ಯಾವ ಯಾವ ಪೂಜೆ ಮಾಡಿದರೆ ಏನು ಫಲ ಇತ್ಯಾದಿ ಎಲ್ಲ ವಿವರಗಳೂ ಇವೆ.
ಗಣಪತಿಯ ಮಂತ್ರಗಳ ಪ್ರಸಿದ್ಧವಾದದ್ದು ಗಣಪತ್ಯಥರ್ವಶೀರ್ಷ ಮಂತ್ರ. ಈ ಮಂತ್ರಗುಚ್ಛವನ್ನು ಅಥರ್ವಣವೇದದ ಶೀರ್ಷ ಎಂದು ಕರೆಯಲಾಗಿದೆ. ಆದರೆ ವೇದದ ಭಾಷೆ ಎಲ್ಲರಿಗೂ ದಕ್ಕುವಂಥಾ ದ್ದಲ್ಲ. ಉಮಾಮಹೇಶರು ಆಕಾಶತತ್ವದ ದೇವತೆಗಳು, ಅವರ ತಮೋಗುಣದಿಂದ ಉದ್ಭವನಾದ್ದ ರಿಂದ ಗಣಪತಿಯೂ ಆಕಾಶ ತತ್ವದ ದೇವತೆಯೇ ಆಗಿದ್ದಾನೆ ಮುಂತಾಗಿ ತಾತ್ವಿಕವಾಗಿ ಹೇಳಿದರೂ ನಮಗೆ ಅರ್ಥವಾಗುವುದಿಲ್ಲ.
ಇದನ್ನೂ ಓದಿ: Vinayaka M Bhat Column: ಸಂಗೀತ, ಸಾಹೋದರ್ಯದ ಅನನ್ಯ ಜುಗಲಬಂದಿ
ಪಾರ್ವತಿ ದೇವಿ ಸ್ನಾನಕ್ಕೆ ಹೋಗುವಾಗ ತನ್ನ ಮೈಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿ, ಬಾಗಿಲು ಕಾಯಲು ನಿಯಮಿಸಿದಾಗ ಬಂದ ಈಶ್ವರನನ್ನೂ ಆತ ಒಳಗೆ ಬಿಡದಿದ್ದಾಗ ಆತನ ತಲೆ ಕತ್ತರಿಸ ಲಾಗುತ್ತದೆ, ಮುಂದೆ ಪಾರ್ವತಿಯ ಕೋಪಕ್ಕೆ ಮಣಿದ ಶಿವ ಉತ್ತರದಿಕ್ಕಿಗೆ ತಲೆಯಿಟ್ಟು ಮಲಗಿದ ಆನೆಯ ತಲೆಯನ್ನು ಕತ್ತರಿಸಿ ತಂದು ಕೂಡಿಸಿದಾಗ ಗಜವದನನಾದ ಪುರಾತನ ಕಥೆಯೇ ನಮಗೆ ಆಪ್ಯಾಯಮಾನವಾಗುತ್ತದೆ. ಗಣೇಶ ಯಾರಿಗೆ ಇಷ್ಟ ಇಲ್ಲ ಹೇಳಿ? ನಮ್ಮ ದೇಶದಲ್ಲಿ ಆಬಾಲ ವೃದ್ಧರವರೆಗೆ ಎಲ್ಲರಿಗೂ ಗಣೇಶ ಇಷ್ಟವೇ.
ಇನ್ನು ಗಣೇಶನ ಜೊತೆಗೆ ಸಣ್ಣ ಮಕ್ಕಳ ‘ಅಟ್ಯಾಚ್‌ಮೆಂಟ್’ ಅಂತೂ ಹೇಳತೀರದು. ಅಂತೂ, ವಿಶ್ವ ವಿನಾಯಕನನ್ನು ಯಾಕೆ ಜನ ಅಷ್ಟಾಗಿ ಮೆಚ್ಚುತ್ತಾರೆ ಎನ್ನುವುದು ನಿಜಕ್ಕೂ ಕೌತುಕವೇ! ಒಂದು, ಬಾಲಗಣಪನ ಮುಗ್ಧತೆಯಲ್ಲಿ, ಆತನ ತುಂಟತನದಲ್ಲಿ, ತಿಂಡಿಪೋತತನದಲ್ಲಿ, ವಿಶಿಷ್ಟ ರೂಪ ಸೌಂದರ್ಯದಲ್ಲಿ, ಬುದ್ಧಿವಂತಿಕೆಯಲ್ಲಿ ನಮ್ಮನ್ನು ನಾವು ಕಾಣುತ್ತೇವೆ ಅಥವಾ ಆತ ಶೀಘ್ರ-ಫಲದಾಯಕ ಎನ್ನುವ ಕಾರಣಕ್ಕೆ ಆತನನ್ನು ಹೆಚ್ಚಾಗಿ ಪ್ರೀತಿಸುತ್ತೇವೆ ಅಂತ ಕಾಣುತ್ತೆ!
ನಮಗೆ ಗಣಪನನ್ನುಕಂಡರೆ ಅದೇನೋ ಪ್ರೀತಿ, ವಿವರಿಸಲಾಗದ ಭಾವದ ಬಾಂಧವ್ಯ. ಹಾಗಾಗಿ ಗಣಪತಿ ಗಿಂತ ಹೆಚ್ಚು ಜನಪ್ರಿಯ ದೇವರೇ ನಮ್ಮಲ್ಲಿಲ್ಲವೆಂತಲೇ ಹೇಳಬೇಕು. ಜನಪ್ರಿಯತೆಯ ವಿಷಯದಲ್ಲಿ ಪ್ರಾಯಶಃ ಗಣಪತಿಗೆ ಸ್ಪರ್ಧೆಯಿದ್ದರೆ ಅದು ಆಂಜನೇಯನಿಂದ ಮಾತ್ರ. ನಮ್ಮ ದೇಶದಲ್ಲಿ ಆಂಜನೇಯ ನಿಗೆ ಹಾಗೂ ಗಣಪತಿಗೆ ಇದ್ದಷ್ಟು ಭಕ್ತರು ಹಾಗೂ ದೇವಾಲಯಗಳು ಶ್ರೀರಾಮನಿಗೂ ಹಾಗೂ ಪರಮೇಶ್ವರನಿಗೂ ಇಲ್ಲ.
ಗಣೇಶ ಮತ್ತುಆಂಜನೇಯನನ್ನು ಮೆಚ್ಚುವಷ್ಟು ಇನ್ನಾವ ದೇವರನ್ನೂಜನ ಮೆಚ್ಚುವುದಿಲ್ಲ. ಅದರಲ್ಲೂ ಗಣೇಶನೆಂದರೆ ಒಂಥರಾ ನಮ್ಮನೆ ಹುಡುಗನಿದ್ದ ಹಾಗೆ. ಹೀಗೆ ಲೋಕಮಾನ್ಯರಾದ ಈ ಎರಡು ದೇವರು ಗಳಲ್ಲಿ ಸಾಮ್ಯತೆಗಳೂ ಇವೆ, ಒಬ್ಬ ಮಹಾ ವ್ಯಾಕರಣ ಪಂಡಿತ ಇನ್ನೊಬ್ಬ ವಿದ್ಯಾಧಿಪತಿ. ಇಬ್ಬರೂ ಬಾಲ್ಯದ ತುಂಟತನಗಳಿಗೆ ಹೆಸರಾದವರು ಹಾಗೂ ಇಬ್ಬರೂ ಮದುವೆ ಮಾಡಿಕೊಂಡವರಲ್ಲ. ಇನ್ನು, ಇವರೀರ್ವರನ್ನೂ ಸುಂದರ ಅಂತ ಕರೆಯುತ್ತಾರೆ. ಗಣೇಶನಿಗೆ ಆನೆಯ ತಲೆ ಮತ್ತು ದೊಡ್ಡ ಹೊಟ್ಟೆ, ಸಣ್ನ ಕಣ್ಣು, ಮೊರದ ಕಿವಿ, ಒಂದೇ ಹಲ್ಲು, ಇಲಿಯಮೇಲಿನ ಪಯಣ. ಇನ್ನು ಹನುಮಂತ, ಉಬ್ಬಿದ ದವಡೆ, ಉದ್ದ ಬಾಲ ಮೈತುಂಬಾ ರೋಮರಾಜಿ. ಹೇಗೆ ಇವರೀರ್ವರನ್ನು ಸುಂದರ ಅಂತ ಕರೆದರು ಎನ್ನುವುದೇ ತಿಳಿಯುವುದಿಲ್ಲ. ವಿಚಿತ್ರವಾದ ದೈಹಿಕ ರೂಪವನ್ನು ಹೊಂದಿದ್ದರೂ, ಹಲವಾರು ಸಾಂಕೇತಿಕ ಮತ್ತು ಆಧ್ಯಾತ್ಮಿಕ ತತ್ವಗಳ ಕಾರಣ ಗಳಿಂದಾಗಿ ಅವರನ್ನು ಸುಂದರರೆಂದು ಪರಿಗಣಿಸಲಾಗುತ್ತದೆ.
‘ವಿನಾಯಕಾಯ ವೈತುಭ್ಯಂ ವಿಕೃತಾಯ ನಮೋನಮ ಎನ್ನುವ ಸ್ತವವಿದ್ದರೂ ನಮಗಾರಿಗೂ ಎಂದೂ ಆತ ವಿಕೃತನಾಗಿ ಕಂಡಿದ್ದಿಲ್ಲ ವಿಶೇಷಕೃತನಾಗಿಯೇ ಕಾಣುತ್ತಾನೆ. ಕೇವಲ ನಮ್ಮ ದೇಶ ವೊಂದರ ಅಲ್ಲ, ಅನ್ಯದೇಶಗಳಲ್ಲೂ ಗಣಪತಿಯನ್ನು ಪ್ರೀತಿಸುವವರಿದ್ದಾರೆ, ಪೂಜಿಸುವವ ರಿದ್ದಾರೆ. ಜೈನ ಬೌದ್ಧ ಧರ್ಮ ಗಳಲ್ಲೂ ಗಣೇಶನನ್ನು ಪ್ರೀತಿಸುವವರಿದ್ದಾರೆ. ಆ ದೃಷ್ಟಿಯಿಂದ ನೋಡುವಾಗ ಗಣಪತಿ ನಿಜವಾದ ಜಾತ್ಯತೀತ ರಾಷ್ಟ್ರಾತೀತ ದೇವರು ಅಂತಲೂ ಹೇಳಬಹುದು. ಕೆಲವರು ಶಿವನನ್ನು, ಕೆಲವರು ಕೇಶವನನ್ನೂ ನಿರಾಕರಣೆ ಮಾಡುತ್ತಾರೆ ಆದರೆ ಗಣಪತಿ ಮಾತ್ರ ಎಲ್ಲರಿಗೂ ಓಕೆ.
ವಿದ್ಯೆ ಬುದ್ಧಿಯ ವಿಷಯ ಬಂದಾಗ, ಕಾವ್ಯ ಪ್ರವರ್ತನೆಯ ಸಂದರ್ಭದಲ್ಲಿ, ಹೊಸ ಕೆಲಸದ ಪ್ರಾರಂಭದಲ್ಲಿ ವಿಘ್ನಗಳು ಬಾರದಂತೆ ಪ್ರಾರ್ಥಿಸುವುದು ಗಣೇಶನನ್ನೇ, ವಿಘ್ನಗಳ ಮೇಲೆ ಪ್ರಭುತ್ವ ವಿರುವುದರಿಂದ ಆತ ವಿಘ್ನರಾಜ ಎನಿಸಿಕೊಂಡಿದ್ದಾನೆ. ಬರೆಯುವವರಿಗೆ, ವಾಗ್ಮಿಗಳಿಗೆ ಹಾಗೂ ಕಲಾವಿದರಿಗೆ ಗಣಪತಿಯೇ ಸರ್ವಸ್ವ. ಸನಾತನ ಸಾಹಿತ್ಯ ಸಂಪ್ರದಾಯದಲ್ಲಿ ಯಾವುದೇ ಮಹಾ ಕಾವ್ಯವನ್ನು ಆರಂಭಿಸುವ ಮುನ್ನ ಮಂಗಲಾಚರಣ ಮಾಡುವ ಪದ್ಧತಿ ಇದೆ.
ಸಂಸ್ಕೃತ ಕಾವ್ಯ, ಗದ್ಯ, ಚಂಪೂಗಳಿಂದ ಹಿಡಿದು ಕನ್ನಡದ ಕುಮಾರವ್ಯಾಸ ರನ್ನರವರೆಗೆ ಆದಿಯಲ್ಲಿ ಗಣಪತಿಯನ್ನು ಸ್ಮರಿಸಿಯೇ ಮುಂಬರಿದಿದ್ದಾರೆ. ಈ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ವೇದವ್ಯಾಸರು ಮಹಾಭಾರತದ ಆದಿಯಲ್ಲಿ ಗಣಪತಿಗೆ ಅಥವಾ ಇನ್ನಾವ ದೇವತಾ ಶಕ್ತಿಗಳಿಗೆ ಮಂಗಳಾಶಾಸನ ಮಾಡಿದಂತೆ ಕಾಣುವುದಿಲ್ಲ. ಆತನೇ ಪಕ್ಕಕ್ಕೆ ಲಿಪಿಕಾರನಾಗಿ ಕುಳಿತಿರುವಾಗ ಮತ್ತೇನು ಹೆಚ್ಚಿಗೆ ಪಾಡುವುದು ಎನಿಸಿರಬೇಕು ಅವರಿಗೆ. ಆದರೆ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾವ್ಯದ ಆದಿಯಲ್ಲಿ ಯಾವುದೇ ದೇವತಾ ಸ್ತುತಿ ಮಾಡದಿರುವುದು ಸ್ವಲ್ಪ ವಿಚಿತ್ರವೆನಿಸುತ್ತದೆ.
ಇರಲಿ, ‘ಕವಿಂಕವೀನಾಮ’ ಎನ್ನುವ ಬಿರುದಿರುವ ವಿನಾಯಕನ ಕುರಿತು ನಮ್ಮ ಕವಿಗಳು ಏನು ಹೇಳಿದ್ದಾರೆ ಎನ್ನುವುದನ್ನು ಈ ಅಂಕಣದಲ್ಲಿ ಸ್ವಲ್ಪ ನೋಡೋಣ. ಸಂತಶ್ರೇಷ್ಠ ಗೋಸ್ವಾಮಿ ತುಳಸಿದಾಸರು ತಮ್ಮ ರಾಮಚರಿತಮಾನಸ ಮಹಾಕಾವ್ಯವನ್ನು, ವರ್ಣಾನಾಮರ್ಥಸಂಘಾನಾಂ ರಸಾನಾಂ ಛಂದಸಾಮಪಿ ಮಂಗಳಾನಾಂ ಚ ಕರ್ತಾರೌ ವಂದೇ ವಾಣಿ ವಿನಾಯಕೌ ಎನ್ನುವ ಶ್ಲೋಕದೊಂದಿಗೆ ಆರಂಭಿಸುತ್ತಾರೆ.
ಸಂಸ್ಕೃತದ ಭೋಜಕವಿ ತನ್ನ ಪ್ರಸಿದ್ಧ ಚಂಪೂ ರಾಮಾಯಣವನ್ನು ‘ಲಕ್ಷ್ಮೀಂ’ ಎಂದು ಪ್ರಾರಂಭ ವಾಗುವ ವಿಶಿಷ್ಟವಾದ ಗಣೇಶ ಸ್ತವದ ಮೂಲಕ ಪ್ರಾರಂಭಿಸುತ್ತಾನೆ. ಲಕ್ಷ್ಮೀಂ ತನೋತು ನಿತರಾ ಮಿತರಾನಪೇಕ್ಷಂ ಅಂದ್ವಯಂ ನಿಗಮಶಾಖಿಶಿಖಾ ಪ್ರವಾಲಮ್ ಹೈರಂಬಮಂಬುರು ಹಡಂಬರ ಚೌರ್ಯನಿಘ್ನಂ ವಿಘ್ನಾದ್ರಿಭೇದ ಶತಧಾರ ಧುರಂಧರಂ ನಃ ಇತರ ಬಾಹ್ಯ ಕಾರಣಗಳ ಅಪೇಕ್ಷೆ ಯಿಲ್ಲದೆ ತಾನಾಗಿಯೇ ಸಕಲ ಶ್ರೇಯಸ್ಸು ಹಾಗೂ ಮಂಗಳವನ್ನು ಕರುಣಿಸುವವ, ವೇದಗಳೆಂಬ ವೃಕ್ಷಗಳ ಕೊಂಬೆಗಳ ಕೊನೆಯಲ್ಲಿ ಚಿಗುರೊಡೆದ ಕೆಂಪು ಚಿಗುರೆಲೆಯಂತಿರುವ, ತಾವರೆ ಹೂವುಗಳ ಸೌಂದರ್ಯದ ಗರ್ವವನ್ನು ಅಪಹರಿಸುವಷ್ಟು ಸುಂದರವಾದ ಆತನ ಪಾದದ್ವಯಗಳು ವಿಘ್ನ ಗಳೆಂಬ ಪರ್ವತಗಳನ್ನು ಪುಡಿ ಮಾಡಲು ಸಾವಿರ ಅಲುಗಿನ ವಜ್ರಾಯುಧದಂತೆ ಸಮರ್ಥವಾಗಿವೆ, ಅಂಥಾ ಗಣೇಶನ ಪಾದಗಳು ನಮಗೆ ಸದಾ ಮಂಗಳವನ್ನು ಉಂಟು ಮಾಡಲಿ ಎನ್ನುವುದು ಈ ಸ್ತೋತ್ರದ ತಾತ್ಪರ್ಯ.
ಭೋಜ ಕವಿ ಈ ಸ್ತೋತ್ರವನ್ನು ಲಕ್ಷ್ಮೀಯಿಂದ ಪ್ರಾರಂಭ ಮಾಡಿ ಧುರಂಧರ ಎನ್ನುವಲ್ಲಿಗೆ ನಿಲ್ಲಿಸುತ್ತಾನೆ. ಸಾಮಾನ್ಯ ದೃಷ್ಟಿಯಿಂದ ನೋಡುವಾಗ ಇದು ಗಣಪತಿಯ ಸ್ತುತಿ ಅಂತ ಅನಿಸು ವುದೇ ಇಲ್ಲ. ಈ ಶ್ಲೋಕ ವನ್ನು ನೋಡಿದಾಗ ಆದಿ ಧುರಂಧರ ನಮ್ಮ ಗಣಪನೇ ಎನ್ನುವುದು ತಿಳಿದು ಬರುತ್ತೆ. ಇನ್ನಾವ ದೇವರಿಗೂ ಧುರಂಧರ ಎನ್ನುವ ಹೆಸರಿನಿಂದ ಕರೆದಿರುವುದು ನನಗಂತೂ ತಿಳಿಯದು. ಇನ್ನು ನಮ್ಮ ಕುಮಾರ ವ್ಯಾಸನು ತನ್ನ ಭಾರತ ಕೃತಿಯ ಆದಿಯಲ್ಲಿ ಮಾಡಿದ ಪ್ರಸಿದ್ಧ ಗಣೇಶ ಸ್ತುತಿ ಹೀಗಿದೆ.
ವರಮಣಿಗಳಿಂದೆಸೆವ ಮೌಳಿಯ ಸರಸಿಜಾರಿಯ ಕಿರಣದೋಳಿಯ ವಿರಚಿಸಿದ ಸಿಂಧೂರ ಭಾಳದಿ ಕುಣಿವ ಕುಂತಳದ ಕರಿ ನಿಭಾಕೃತಿಯೆನಿಪ ವದನದ ಕರದ ಪಾಶದ ಮೋದಕದ ವಿಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ಗಜಮುಖನೆ ಮೆರೆವೇಕದಂತನೆ ನಿಜಗುಣಾನ್ವಿತ ಪರಶುಧಾರನೆ ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ ಅಜನು ಹರಿ ರುದ್ರಾದಿಗಳು ನೆರೆ ಭಜಿಸು ತಿಹರನವರತ ನಿನ್ನನು ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಲವ ಕವಿ ರನ್ನನು ತನ್ನ ಸಾಹಸ ಭೀಮ ವಿಜಯ ಕಾವ್ಯವು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳಲು ವಿಘ್ನೇಶ್ವರ ನನ್ನು ಹೀಗೆ ಸ್ತುತಿಸಿದ್ದಾನೆ.
ನೆರೆ ಮದವೊಸರುತುಮಿರ್ಪೊಡೆ ಮುರಹರನಂತಾವತಾರಮಂ ತಾಳದ ನೃ ಹರಿ ರೂಪನಲ್ಲ ವಿಘ್ನೇಶ್ವರನಂ ಕವಿ ರನ್ನನೆರಗಿ ಸನ್ನುತಿಸುವನು ಶಕ್ತಿ ಶೌರ್ಯಗಳಿದ್ದರೂ ಮುರಹರನಾದ ವಿಷ್ಣು ವಿನಂತೆ ಬೇರೆ ಬೇರೆ ಅವತಾರಗಳನ್ನು ತಾಳಿದವನಲ್ಲ ಮತ್ತು ಹಿರಣ್ಯಕಶಿಪುವನ್ನು ಕೊಂದ ಉಗ್ರ ನರಸಿಂಹ ರೂಪದವನೂ ಅಲ್ಲ, ನಿತಾಂತ ಶಾಂತಮೂರ್ತಿಯಾದ ವಿಘ್ನೇಶ್ವರನನ್ನು ಕವಿ ರನ್ನನು ಸ್ತುತಿಸುತ್ತಾನೆ. ಕನ್ನಡದ ಇನ್ನೊಬ್ಬ ಕವಿ ಕುಮಾರ ವಾಲ್ಮೀಕಿ (ತೊರವೆಯ ನರಹರಿ) ತನ್ನ ತೊರವೆ ರಾಮಾಯಣದಲ್ಲಿ, ಹರಿಮುಖದ ಸುರರೆಲ್ಲ ನಮಿಸಲು ಚರಣಯುಗಳದ ನಖಪ್ರಭೆಯ ರಂಜನೆ ಕರಣಗೋಚರವೆನಿಸಿ ಬುಧಜನಕಭಿಮತಾರ್ಥವನು ಕರುಣಿಸುವ ವರದಾತನಖಿಳ ಸ್ಮರಣಮಾತ್ರದಿ ವಿಘ್ನಸಂತತಿ ಹರಣ ಚತುರನಂ ಭಜಿಸುವೆನೇಕದಂತನನು ಎಂದು ನುತಿಸುತ್ತಾನೆ.
ದೇವೇಂದ್ರ ಮುಂತಾದ ಸಕಲ ದೇವತೆಗಳು ಭಕ್ತಿಯಿಂದ ತಲೆಬಾಗಿ ನಮಸ್ಕರಿಸುವಾಗ ದೇವತೆಗಳ ಕಿರೀಟ ಗಳ ಮೇಲೆ ಗಣೇಶನ ಪಾದದ ಉಗುರುಗಳ ಕಾಂತಿಯು ಮನೋಹರವಾಗಿ ಪ್ರತಿಫಲಿಸುತ್ತದೆ. ಜ್ಞಾನಿಗಳಿಗೆ ಪ್ರತ್ಯಕ್ಷನಾಗಿ ಅವರು ಬಯಸಿದ ಇಷ್ಟಾರ್ಥಗಳನ್ನು ಕರುಣಿಸುವ ಆ ಮಹಾ ವರದಾತ ನನ್ನು ಕೇವಲ ನೆನೆದ ಮಾತ್ರಕ್ಕೆ ಜೀವನದಲ್ಲಿ ಎದುರಾಗುವ ಸಕಲ ವಿಘ್ನಗಳ ಸಮೂಹವನ್ನೇ ನಾಶಮಾಡುವಲ್ಲಿ ಚತುರನಾದ ಆ ಏಕದಂತನ ಪಾದಕಮಲಗಳನ್ನು ನಾನು ಭಕ್ತಿಯಿಂದ ಭಜಿಸುತ್ತೇನೆ ಎನ್ನುತ್ತಾನೆ ಕನ್ನಡದ ರಾಮಾಯಣದ ಕವಿ.
ಕವಿಗಳಂತೆ ನಮ್ಮ ಆಚಾರ್ಯರೂ ಗಣೇಶನನ್ನು ವಿಧವಿಧವಾಗಿ ಪೊಗಳಿದ್ದಾರೆ. ಮಧ್ವಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದಲ್ಲಿ ಗಣೇಶನನ್ನು ಹೀಗೆ ಸ್ತುತಿಸಿದ್ದಾರೆ: ಆದಿಪೂಜ್ಯಂ ಗಣಾಧ್ಯಕ್ಷಂ ಉಮಾಪುತ್ರಂ ವಿನಾಯಕಂ ಮಂಗಲಂ ಪರಮಂ ರೂಪಂ ಶ್ರೀಗಣೇಶಂ ನಮಾಮ್ಯಹಂ ಇನ್ನು ಶಂಕರ ಭಗವತ್ಪಾದಾ ಚಾರ್ಯರ ಗಣೇಶ ಸ್ತುತಿಯ ಕುರಿತು ಹೇಳುವುದೇ ಬೇಡ, ಅವರ ‘ಮುದಾಕ ರಾತ್ತ ಮೋದಕಂ’ನಿಂದ ಪ್ರಾರಂಭವಾಗುವ ಶ್ರೀಗಣೇಶ ಪಂಚರತ್ನ ಎನ್ನುವ ಶ್ಲೋಕಮಾಲಿಕೆಯು ಎಲ್ಲ ಗಣೇಶ ಸ್ತುತಿಗಳ ಶಿರೋರತ್ನವೇ ಆಗಿದೆ.
ಗಣೇಶ, ಅಪ್ಪನಿಗಿಂತ ಹೆಚ್ಚು ಅಮ್ಮನ ಮಗ, ಅದಕ್ಕೇ ‘ಗೌರೀ ಪುತ್ರಂ ವಿನಾಯಕಂ’, ‘ಅಗಜೆಸುತ ಕರಿಮೊಗಗೆ ವಂದಿಸಿ ಎಂದೆ ಕವಿಗಳು ತಾಯಿಯನ್ನು ಮೊದಲ್ಗೊಂಡು ಹಾಡಿರುವುದೇ ಹೆಚ್ಚು. ಗೌರಿಗೆ ಗಣೇಶನನ್ನು ಕಂಡರೆ ಎಷ್ಟು ಪ್ರೀತಿಯಿತ್ತು ಎನ್ನುವುದನ್ನು ಸಾರುವ, ಬಹಳ ಪ್ರಚಲಿತ ದಲ್ಲಿರುವ ಇನ್ನೊಂದು ಗಣೇಶ ಸ್ತುತಿಯನ್ನು ನೋಡುವುದಾದರೆ, ಅಗಜಾನನ ಪದ್ಮಾರ್ಕಂ ಗಜಾನನಮಹರ್ನಿಷಂ ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ ಒಂದುಕಡೆ ‘ಅನೇಕದಂತಂ’ ಅಂತಿದೆ ಮುಂದೆ ‘ಏಕದಂತಂ ಅಂತ ಬರುತ್ತೆ, ಗಜಾನನ ನಮಗೆ ಗೊತ್ತು ಆದರೆ ಅಗಜಾನನ ಅಂದರೆ ಯಾರು? ಎನ್ನುವ ಪ್ರಶ್ನೆ ಬರುವುದು ಸ್ವಾಭಾವಿಕವಾಗಿದೆ.
ಸರಿಯಾಗಿ ತಿಳಿದಾಗ ಸ್ತೋತ್ರಕಾರ ಎಷ್ಟೊಂದು ಸುಂದರವಾಗಿ ಉಪಮೆಗಳನ್ನು ಬಳಸಿ ಸ್ತೋತ್ರ ಮಾಡಿzನೆ ಎನ್ನುವುದು ತಿಳಿದುಬರುತ್ತದೆ. ಸಂಸ್ಕೃತದಲ್ಲಿ ‘ಅಗ’ ಅಂದರೆ ಪರ್ವತ, ‘ಅಗಜಾ’ ಅಂದರೆ ಪರ್ವತನ ಮಗಳು ಪಾರ್ವತಿ. ಆನನವೆಂದರೆ ಮುಖ, ಪದ್ಮ ಅಂದರೆ ಕಮಲ, ಅರ್ಕ ಅಂದರೆ ಸೂರ್ಯ. ಗಜಾನನಂ ಅಂದರೆ ಆನೆಯ ಮುಖವುಳ್ಳವ, ಅಹರ್ನಿಷಂ ಅಂದರೆ ಹಗಲುರಾತ್ರಿ, ಇನ್ನು ಅನೇಕದಂತ ಅಂದರೆ ಬಹಳ ಹಲ್ಲುಳ್ಳವ ಅಂತಲ್ಲ, ಅನೇಕದಂ ತಂ ಭಕ್ತಾನಾಂ ಎಂದು ಬಿಡಿಸ ಬೇಕಾಗುತ್ತದೆ, (ಅನೇಕದಂ ದದಾತಿ ಇತಿ ಅನೇಕದಃ) ತನ್ನ ಭಕ್ತರಿಗೆ ಅನೇಕ ಫಲಗಳನ್ನು ಕೊಡುವವ ಎಂದರ್ಥ.
ಏಕದಂತಂ ಉಪಾಸ್ಮಹೇ ಎನ್ನುವಲ್ಲಿಯೂ ಮುಮುಕ್ಷುಗಳ ಏಕಮಾತ್ರ ಗುರಿಯಾದ ಮೋಕ್ಷವನ್ನು ಕೊಡುವವ ಎನ್ನುವ ಅರ್ಥದಲ್ಲಿ ‘ಏಕದಂ ತಂ’ ಅಂತ ಬಿಡಿಸುವ ಅವಕಾಶವಿದ್ದರೂ, ಇಲ್ಲಿ ಏಕದಂತ ಎನ್ನುವುದನ್ನು ಗಣಪತಿಯ ಹಲ್ಲಿಗೇ ಹೇಳಲಾಗಿದೆ, ಒಂದೇ ಹಲ್ಲುಳ್ಳವನಲ್ಲವೇ ಆತ! ಕಮಲವರಳಲು ಸೂರ್ಯ ಕಾರಣನಾದಂತೆ ತಾಯಿ ಪಾರ್ವತಿಯ ಮುಖವೆಂಬ ಕಮಲವನ್ನು ಅಹರ್ನಿಷಿ ಅರಳಿರುವಂತೆ ಮಾಡುವ ಗಜಾನನನ್ನು, ಭಕ್ತರ ಅನೇಕ ವಾಂಛೆಗಳನ್ನು ಪೂರೈಸುವ ಏಕದಂತನನ್ನು ಉಪಾಸಿಸುತ್ತೇನೆ ಎನ್ನುವುದು ಈ ಸ್ತೋತ್ರದ ಸರಳ ಅರ್ಥ. ಇನ್ನು ಆಂಜನೇಯನಿಗೆ ಚಾಲೀಸಾ ಸ್ತೋತ್ರವಿರುವಂತೆ ಗಣೇಶನಿಗೂ ಚಾಲೀಸಾ ಸ್ತೋತ್ರವಿದೆಯಂತೆ ಮತ್ತು ಅದನ್ನು ಸಂತ ಸುಂದರ ದಾಸರು ರಚಿಸಿದ್ದಾರಂತೆ. ಇನ್ನು ನಮ್ಮ ಹರಿದಾಸರ ವಿಘ್ನರಾಜನ ಪರವಾದ ರಚನೆ ಗಳಂತೂ ನೂರಾರಿವೆ. ಹೀಗೆ ಕವಿಗಳಿಗಷ್ಟೇ ಅಲ್ಲದೇ ಜಾತಿ ಧರ್ಮಗಳನ್ನು ಮೀರಿ ಸರ್ವಜನ ಪ್ರಿಯನಾದ, ಕವಿಗಳಿಗೂ ಕವಿಯಾದ, ಧುರಂಧರ ಗಣೇಶನನ್ನು ಈ ಅಂಕಣದಲ್ಲಿ ನಮ್ಮ ಇತಿಮಿತಿ ಯಲ್ಲಿ ಅನುಸಂಧಾನ ಮಾಡಿದ ಹಾಗಾಯಿತು. ಓದುಗರೆಲ್ಲರಿಗೂ ಗೌರೀಗಣೇಶ ಹಬ್ಬದ ಶುಭಾಶಯಗಳು.