ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಪರಸ್ಪರ ಸಹಕಾರ, ಸಕಾರಾತ್ಮಕ ಮನೋಭಾವದಿಂದ ಸಾಧಿಸುವ ಯಶಸ್ಸು

ನಿಸ್ವಾರ್ಥ ಸಂಬಂಧಗಳು, ಇತರರ ಬೆಳವಣಿಗೆಗೆ ಪೂರಕವಾಗಿ ನಿಲ್ಲುವ ಗುಣ ಮತ್ತು ಸಕಾರಾತ್ಮಕ ಸಹಯೋಗಗಳು ಒಬ್ಬ ವ್ಯಕ್ತಿಯನ್ನು ಯಶಸ್ಸಿನ ಉತ್ತುಂಗಕ್ಕೆ ಹೇಗೆ ಕೊಂಡೊಯ್ಯಬಲ್ಲವು ಎಂಬು ದನ್ನು ಈ ನೈಜ ಸನ್ನಿವೇಶವು ನಮಗೆ ಮನವರಿಕೆ ಮಾಡಿಕೊಡುತ್ತದೆ. ಜೆಫ್ ಕೆಲ್ಲರ್ ಆರಂಭದಲ್ಲಿ ಒಬ್ಬ ವಕೀಲ ರಾಗಿದ್ದರು. ಕಾನೂನು ಅಭ್ಯಾಸವು ಅವರಿಗೆ ಆರ್ಥಿಕ ಭದ್ರತೆ ನೀಡುತ್ತಿದ್ದರೂ, ಅವರ ಅಂತರಾತ್ಮಕ್ಕೆ ಅದರಿಂದ ಯಾವುದೇ ತೃಪ್ತಿ ಸಿಗುತ್ತಿರಲಿಲ್ಲ. ‌

ಪರಸ್ಪರ ಸಹಕಾರ, ಸಕಾರಾತ್ಮಕ ಮನೋಭಾವದಿಂದ ಸಾಧಿಸುವ ಯಶಸ್ಸು

-

ಇದೇ ಅಂತರಂಗ ಸುದ್ದಿ

ಅಮೆರಿಕದ ಖ್ಯಾತ ಪ್ರೇರಣಾದಾಯಕ ಭಾಷಣಕಾರ, ಲೇಖಕ ಹಾಗೂ ಮಾರಾಟ ತರಬೇತುದಾರ ಜಿಗ್ ಜಿಗ್ಲರ್ ಅವರ ಪ್ರಸಿದ್ಧ ನುಡಿಯಾದ, ‘ಇತರರು ಬಯಸಿದ್ದನ್ನು ಅವರು ಪಡೆದುಕೊಳ್ಳಲು ನೀವು ಸಾಕಷ್ಟು ನೆರವಾದರೆ, ಜೀವನದಲ್ಲಿ ನೀವು ಬಯಸುವ ಪ್ರತಿಯೊಂದನ್ನೂ ನೀವು ಖಂಡಿತ ವಾಗಿ ಪಡೆದುಕೊಳ್ಳಬಹುದು’ (You can get everything in life you want if you'll just help enough other people get what they want) ಎಂಬ ಮಾತು ಮಾನವ ಸಂಬಂಧಗಳು ಹಾಗೂ ವ್ಯವಹಾರ ಜಗತ್ತಿನ ಪರಮೋಚ್ಚ ಸತ್ಯವನ್ನು ಸಾರುತ್ತದೆ.

ಜೆಫ್ ಕೆಲ್ಲರ್ ತಮ್ಮ ‘ಆಟಿಟ್ಯೂಡ್ ಈಸ್ ಎವೆರಿಥಿಂಗ್’ ಕೃತಿಯಲ್ಲಿ ಉಲ್ಲೇಖಿಸಿರುವ ಘಟನೆ ಈ ತತ್ವಕ್ಕೆ ಜೀವಂತ ಉದಾಹರಣೆಯಾಗಿದೆ. 1990ರಲ್ಲಿ ಜೆಫ್ ಕೆಲ್ಲರ್ ಅವರು ಸ್ವತಂತ್ರ ಕಾಪಿರೈಟರ್ ಆದ ಸ್ಟೂ ಕಾಮೆನ್ ಅವರನ್ನು ಭೇಟಿಯಾದ ಕ್ಷಣ, ಅವರ ಇಡೀ ವೃತ್ತಿಜೀವನದ ಗತಿಯನ್ನೇ ಬದಲಾಯಿಸುವ ಒಂದು ಅದ್ಭುತ ಸರಣಿ ಪ್ರತಿಕ್ರಿಯೆಗೆ (ಚೈನ್ ರಿಯಾಕ್ಷನ್) ಮುನ್ನುಡಿ ಬರೆಯಿತು. ‌

ನಿಸ್ವಾರ್ಥ ಸಂಬಂಧಗಳು, ಇತರರ ಬೆಳವಣಿಗೆಗೆ ಪೂರಕವಾಗಿ ನಿಲ್ಲುವ ಗುಣ ಮತ್ತು ಸಕಾರಾತ್ಮಕ ಸಹಯೋಗಗಳು ಒಬ್ಬ ವ್ಯಕ್ತಿಯನ್ನು ಯಶಸ್ಸಿನ ಉತ್ತುಂಗಕ್ಕೆ ಹೇಗೆ ಕೊಂಡೊಯ್ಯಬಲ್ಲವು ಎಂಬು ದನ್ನು ಈ ನೈಜ ಸನ್ನಿವೇಶವು ನಮಗೆ ಮನವರಿಕೆ ಮಾಡಿಕೊಡುತ್ತದೆ. ಜೆಫ್ ಕೆಲ್ಲರ್ ಆರಂಭದಲ್ಲಿ ಒಬ್ಬ ವಕೀಲ ರಾಗಿದ್ದರು. ಕಾನೂನು ಅಭ್ಯಾಸವು ಅವರಿಗೆ ಆರ್ಥಿಕ ಭದ್ರತೆ ನೀಡುತ್ತಿದ್ದರೂ, ಅವರ ಅಂತರಾತ್ಮಕ್ಕೆ ಅದರಿಂದ ಯಾವುದೇ ತೃಪ್ತಿ ಸಿಗುತ್ತಿರಲಿಲ್ಲ. ‌

ಇದನ್ನೂ ಓದಿ: Vishweshwar Bhat Column: ಈವಿಲ್ ಟ್ವಿನ್ ಅಂದರೆ ಏನು ?

ವಕೀಲ ವೃತ್ತಿಯ ದಿನಚರಿ, ವಾದ-ವಿವಾದಗಳು ಮತ್ತು ನಿರಂತರ ಒತ್ತಡ ಅವರಲ್ಲಿ ಒಂದು ಬಗೆಯ ಬೇಸರವನ್ನು ಹುಟ್ಟುಹಾಕಿದ್ದವು. ಜೀವನದಲ್ಲಿ ನಿಜವಾದ ಉದ್ದೇಶವೇನು ಎಂದು ಹುಡುಕು ತ್ತಿದ್ದಾಗ, ಅವರಿಗೆ ಸಕಾರಾತ್ಮಕ ಮನೋಭಾವದ ಶಕ್ತಿಯ ಅರಿವಾಯಿತು. ತಮ್ಮ ಜೀವನದ ದಿಕ್ಕನ್ನು ಬದಲಾಯಿ ಸಲು ನಿರ್ಧರಿಸಿದ ಕೆಲ್ಲರ್, ವಕೀಲ ವೃತ್ತಿಯನ್ನು ತ್ಯಜಿಸಿ ಪ್ರೇರಣಾದಾಯಕ ಭಾಷಣ ಕಾರರಾಗಲು (ಮೋಟಿವೇಶನಲ್ ಸ್ಪೀಕರ್) ಧುಮುಕಿದರು. ಆದರೆ ಹೊಸ ಕ್ಷೇತ್ರದಲ್ಲಿ ನೆಲೆಯೂರು ವುದು ಸುಲಭದ ಮಾತಾಗಿರಲಿಲ್ಲ.

ಹೊಸ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದ್ದ ಆ ಸಂಕಷ್ಟದ ಆರಂಭಿಕ ದಿನಗಳಲ್ಲಿ, 1990ರಲ್ಲಿ ಅವರಿಗೆ ಕಾಪಿ ರೈಟರ್ ಸ್ಟೂ ಕಾಮೆನ್ ಅವರ ಪರಿಚಯವಾಯಿತು. ಪರಸ್ಪರ ಗೌರವ ಮತ್ತು ಸ್ನೇಹದಿಂದ ಆರಂಭವಾದ ಈ ಭೇಟಿ ಮುಂದೆ ದೊಡ್ಡ ತಿರುವನ್ನೇ ಸೃಷ್ಟಿಸಿತು. ವ್ಯವಹಾರದಲ್ಲಿ ಅಥವಾ ಬದುಕಿನಲ್ಲಿ ನೆಟ್‌ವರ್ಕಿಂಗ್ ಎಂದರೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಳಸಿಕೊಳ್ಳುವು ದಲ್ಲ, ಬದಲಾಗಿ ಪರಸ್ಪರ ಮೌಲ್ಯವನ್ನು ವೃದ್ಧಿಸಿಕೊಳ್ಳುವುದು ಎಂಬುದಕ್ಕೆ ಸ್ಟೂ ಕಾಮೆನ್ ಅತ್ಯುತ್ತಮ ನಿದರ್ಶನ.

1992ರ ಹೊತ್ತಿಗೆ ಸ್ಟೂ ಕಾಮೆನ್ ಅವರು ವಿಶ್ವವಿಖ್ಯಾತ ‘ಥಿಂಕ್ - ಗ್ರೋ ರಿಚ್’ ನ್ಯೂಸ್‌ ಲೆಟರ್‌ನಲ್ಲಿ ಅರೆಕಾಲಿಕ ಲೇಖಕರಾಗಿ ಕೆಲಸ ಮಾಡುತ್ತಿದ್ದರು. ನೆಪೋಲಿಯನ್ ಹಿಲ್ ಅವರ ಶಾಶ್ವತ ತತ್ವಗಳ ಮೇಲೆ ಆಧಾರಿತವಾಗಿದ್ದ ಆ ಪತ್ರಿಕೆಗೆ ಸಾವಿರಾರು ನಿಷ್ಠಾವಂತ ಓದುಗರಿದ್ದರು. ಸ್ಟೂ ಕಾಮೆನ್ ಮನಸ್ಸು ಮಾಡಿದ್ದರೆ ತಮ್ಮ ಕೆಲಸವನ್ನಷ್ಟೇ ಮುಗಿಸಿ ಸುಮ್ಮನಾಗಬಹುದಿತ್ತು. ಆದರೆ, ಅವರು ತಮ್ಮ ಸ್ನೇಹಿತ ಜೆಫ್ ಕೆಲ್ಲರ್ ಅವರಲ್ಲಿದ್ದ ಪ್ರತಿಭೆ, ಅವರ ಪ್ರೇರಣಾದಾಯಕ ಸಂದೇಶಗಳು ಮತ್ತು ಅವರ ವಿಶಿಷ್ಟ ಜೀವನ ಪಯಣವನ್ನು ಗುರುತಿಸಿದ್ದರು.

V Bhat

ಕೆಲ್ಲರ್ ಅವರ ಸಾಮರ್ಥ್ಯ ಜಗತ್ತಿಗೆ ತಲುಪಬೇಕೆಂದು ಅವರು ಪ್ರಾಮಾಣಿಕವಾಗಿ ಬಯಸಿದ್ದರು. ಸ್ಟೂ ಕಾಮೆನ್ ಅವರ ಶಿಫಾರಸಿನ ಮೇರೆಗೆ, ‘ಥಿಂಕ್ - ಗ್ರೋ ರಿಚ್’ ನ್ಯೂಸ್‌ಲೆಟರ್ ತನ್ನ ಮುಖಪುಟ ದ ಜೆಫ್ ಕೆಲ್ಲರ್ ಅವರ ಕುರಿತು ವಿಶೇಷ ಕಥನವನ್ನು ಪ್ರಕಟಿಸಿತು. ಒಬ್ಬ ಯಶಸ್ವಿ ವಕೀಲ ತನ್ನ ವೃತ್ತಿಯನ್ನು ತೊರೆದು, ಜನರ ಬದುಕಿನಲ್ಲಿ ಭರವಸೆ ತುಂಬುವ ಪ್ರೇರಣಾದಾಯಕ ಭಾಷಣಕಾರ ನಾಗಿ ಹೇಗೆ ಬದಲಾ ದರು ಎಂಬ ರೋಚಕ ಹಾಗೂ ಸ್ಫೂರ್ತಿದಾಯಕ ಯಶೋಗಾಥೆ ಅದಾಗಿತ್ತು. ಆ ಒಂದು ಮುಖಪುಟ ಲೇಖನವು ಕೆಲ್ಲರ್ ಅವರ ವೃತ್ತಿಪರ ಬದುಕಿನಲ್ಲಿ ಹೊಸ ಸಂಚಲನವನ್ನು ಮೂಡಿಸಿತು.

ಅಪಾರ ಸಂಖ್ಯೆಯ ಗಣ್ಯರು, ಉದ್ಯಮಿಗಳು ಹಾಗೂ ಸಕಾರಾತ್ಮಕ ಚಿಂತನೆಯ ಓದುಗರು ಕೆಲ್ಲರ್ ಅವರ ವ್ಯಕ್ತಿತ್ವ ಹಾಗೂ ಅವರ ಆಲೋಚನೆಗಳತ್ತ ಆಕರ್ಷಿತರಾದರು. ಇದು ಜಿಗ್ಲರ್ ಹೇಳಿದಂತೆ, ಇತರರ ಬೆಳವಣಿಗೆಗೆ ನೆರವಾಗುವ ಮೂಲಕ ಇಬ್ಬರಿಗೂ ಸಮೃದ್ಧಿ ತಂದುಕೊಡುವ ಕ್ರಿಯೆಯ ಮೊದಲ ದೊಡ್ಡ ಹೆಜ್ಜೆಯಾಗಿತ್ತು. ಮುಖಪುಟ ಲೇಖನ ಪ್ರಕಟವಾಗುವುದರ ಜತೆಗೆ, ಕೆಲ್ಲರ್ ಮತ್ತೊಂದು ಮಹತ್ವದ ವ್ಯಾಪಾರ ಒಪ್ಪಂದವನ್ನು ಆ ನ್ಯೂ ಸ್ಲೆಟರ್ ಜತೆ ಮಾಡಿಕೊಂಡರು. ಅವರ ಪ್ರಸಿದ್ಧ ‘ಆಟಿಟ್ಯೂಡ್ ಈಸ್ ಎವೆರಿಥಿಂಗ್’ (ಮನೋಭಾವವೇ ಎಲ್ಲವೂ) ಎಂಬ ಪರಿಕಲ್ಪನೆಯ ವ್ಯಾಪಾರ ಸರಕುಗಳನ್ನು (ಮರ್ಚಂಡೈಸ್) ತಮ್ಮ ಪ್ರಕಟಣೆಯ ಮೂಲಕ ಮಾರಾಟ ಮಾಡಲು ನ್ಯೂಸ್ಲೆಟರ್ ಒಪ್ಪಿಕೊಂಡಿತು. ಈ ಸಹಭಾಗಿತ್ವವು ಅದ್ಭುತ ಫಲಿತಾಂಶವನ್ನು ನೀಡಿತು.

ಸಾವಿರಾರು ಪ್ರೇರಣಾದಾಯಕ ವಸ್ತುಗಳು, ಆಡಿಯೋಗಳು ಮತ್ತು ಸಾಮಗ್ರಿಗಳು ದೇಶಾದ್ಯಂತ ಮಾರಾಟ‌ ವಾದವು. ಇದು ಕೇವಲ ಜೆಫ್ ಕೆಲ್ಲರ್ ಅವರಿಗೆ ಆರ್ಥಿಕವಾಗಿ ಬಲ ನೀಡಿದ್ದಷ್ಟೇ ಅಲ್ಲ, ಅವರ ‘ಆಟಿಟ್ಯೂಡ್ ಈಸ್ ಎವೆರಿಥಿಂಗ್’ ಎಂಬ ಬ್ರ್ಯಾಂಡ್ ಜನಸಾಮಾನ್ಯರ ಮನೆ-ಮನಗಳನ್ನು ತಲುಪಲು ಹೆದ್ದಾರಿಯಾಯಿತು. ಸಣ್ಣದೊಂದು ನಂಬಿಕೆ ಮತ್ತು ಸಕಾಲಿಕ ಸಹಾಯ ಹೇಗೆ ಬೃಹತ್ ವ್ಯಾಪಾರ ಅವಕಾಶವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಾಯಿತು. ಈ ಯಶಸ್ಸಿನ ಸರಣಿ ಇಲ್ಲಿಗೇ ನಿಲ್ಲಲಿಲ್ಲ. ‌

‘ಥಿಂಕ್ & ಗ್ರೋ ರಿಚ್’ ನ್ಯೂ ಸ್ಲೆಟರ್‌ನ ಸಂಪಾದಕರು ಕೆಲ್ಲರ್ ಅವರ ಬರವಣಿಗೆಯ ಶಕ್ತಿಯನ್ನು ಮನಗಂಡು, ಅವರ ಸ್ವಂತ ಲೇಖನಗಳನ್ನೇ ತಮ್ಮ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟಿಸಲು ಆರಂಭಿಸಿದರು. ಕೆಲ್ಲರ್ ಬರೆದ ಪ್ರತಿಯೊಂದು ಲೇಖನವೂ ಓದುಗರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ದೃಷ್ಟಿಕೋನ ಮತ್ತು ಗುರಿ ಸಾಧನೆಯ ಛಲವನ್ನು ಬಡಿದೆಬ್ಬಿಸಿತು. ಈ ಲೇಖನಗಳು ಓದುಗರ ಮೇಲೆ ಎಷ್ಟೊಂದು ಆಳವಾದ ಪ್ರಭಾವ ಬೀರಿದವೆಂದರೆ, ಕೆಲ್ಲರ್ ಅವರಿಗೆ ನಿರಂತರವಾಗಿ ಮೆಚ್ಚುಗೆಯ ಕರೆಗಳು ಮತ್ತು ಪತ್ರಗಳು ಬರಲಾರಂಭಿಸಿದವು.

ಪತ್ರಿಕೆಯ ಓದುಗ ವೃಂದವು ಅವರ ವಿಚಾರಗಳನ್ನು ಮೆಚ್ಚಿ, ಅವರನ್ನು ಕೇವಲ ಲೇಖಕರನ್ನಾಗಿ ಮಾತ್ರವಲ್ಲ, ತಮ್ಮ ಸಂಸ್ಥೆಗಳು ಮತ್ತು ಸಮಾರಂಭಗಳಿಗೆ ಭಾಷಣಕಾರರನ್ನಾಗಿ ಆಹ್ವಾನಿಸಲು ಮುಗಿಬಿದ್ದರು. ಈ ಬೆಳವಣಿಗೆಯಿಂದಾಗಿ ಜೆಫ್ ಕೆಲ್ಲರ್ ಅವರಿಗೆ ಸಾಲುಸಾಲು ಭಾಷಣದ ಅವಕಾಶ ಗಳು (ಸ್ಪೀಕಿಂಗ್ ಎಂಗೇಜ್‌ಮೆಂಟ್ಸ್) ಅರಸಿ ಬಂದವು. ‌

ಕೇವಲ ಸ್ಥಳೀಯ ಮಟ್ಟದಲ್ಲಿ ಭಾಷಣ ಮಾಡುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ರಾಷ್ಟ್ರಮಟ್ಟದ ಪ್ರೇರಕ ವ್ಯಕ್ತಿಯಾಗಿ ಹೊರಹೊಮ್ಮಿದರು. ಕಾರ್ಪೊರೇಟ್ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ವೇದಿಕೆಗಳು ಕೆಲ್ಲರ್ ಅವರ ಮಾತುಗಳನ್ನು ಕೇಳಲು ತುದಿಗಾಲಲ್ಲಿ ನಿಂತವು. ಈ ಎಲ್ಲ ಪ್ರಗತಿಯ ಬೇರುಗಳು ಎಲ್ಲಿದ್ದವು ಎಂದು ಅವಲೋಕಿಸಿದರೆ, ಅದು 1990ರಲ್ಲಿ ಸ್ಟೂ ಕಾಮೆನ್ ಅವರೊಂದಿಗೆ ಬೆಸೆದ ಆ ಪ್ರಾಮಾಣಿಕ ಸ್ನೇಹ ಮತ್ತು ಸಹಯೋಗದಲ್ಲಿ.

ಒಬ್ಬ ವ್ಯಕ್ತಿ ತೋರಿದ ಪುಟ್ಟ ಸಹೃದಯತೆ ಮತ್ತು ಸಹಕಾರದ ಕಿಡಿ, ಇಡೀ ವಿಶ್ವವನ್ನೇ ಬೆಳಗುವ ಜ್ಯೋತಿ ಯಾಗಿ ಮಾರ್ಪಟ್ಟಿತ್ತು. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಯಶಸ್ಸು ಎಂಬುದು ಒಂಟಿ ಹೋರಾಟವಲ್ಲ. ನಾವು ಏಕಾಂಗಿಯಾಗಿ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ನಮ್ಮ ಜತೆಗಿರು ವವರನ್ನು ನಾವು ಮೇಲೆತ್ತಿದಾಗ, ನಾವೂ ಅವರೊಂದಿಗೆ ಮೇಲೇರುತ್ತೇವೆ. ಸ್ಟೂ ಕಾಮೆನ್ ತಮ್ಮ ಸಂಪರ್ಕ ವನ್ನು ಕೆಲ್ಲರ್ ಅವರೊಂದಿಗೆ ಹಂಚಿಕೊಂಡರು,

ನ್ಯೂಸ್ಲೆಟರ್ ಕೆಲ್ಲರ್ ಅವರ ಜ್ಞಾನವನ್ನು ತನ್ನ ಓದುಗರೊಂದಿಗೆ ಹಂಚಿಕೊಂಡಿತು ಮತ್ತು ಕೆಲ್ಲರ್ ತಮ್ಮ ಪ್ರೇರಣಾದಾಯಕ ವಿಚಾರಗಳಿಂದ ಜನರ ಜೀವನವನ್ನು ಉಜ್ವಲಗೊಳಿಸಿದರು. ಈ ಪ್ರಕ್ರಿಯೆ ಯಲ್ಲಿ ಪ್ರತಿಯೊಬ್ಬರೂ ಗೆದ್ದರು (ವಿನ್-ವಿನ್ ಸಿಚುವೇಶನ್). ಯಾವ ಸ್ವಾರ್ಥವಿಲ್ಲದೇ ಇನ್ನೊಬ್ಬರ ಹಿತ ಬಯಸಿದಾಗ, ಪ್ರಕೃತಿಯ ನಿಯಮದಂತೆ ಆ ಒಳಿತು ನೂರರಷ್ಟು ಮರಳಿ ನಮ್ಮ ಬಳಿಗೇ ಬರುತ್ತದೆ ಎಂಬುದನ್ನು ಈ ಇಡೀ ಪ್ರಸಂಗವು ನಮಗೆ ಮನದಟ್ಟು ಮಾಡುತ್ತದೆ.

ಇಂದಿನ ತೀವ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರು ಇತರರನ್ನು ತುಳಿದು ಮೇಲೆ ಬರಲು ಪ್ರಯತ್ನಿಸು ತ್ತಾರೆ. ಆದರೆ ಅಂಥ ಯಶಸ್ಸು ಕ್ಷಣಿಕವಾಗಿರುತ್ತದೆ. ದೀರ್ಘಕಾಲಿಕ ಮತ್ತು ಅರ್ಥಪೂರ್ಣ ಯಶಸ್ಸು ಸಿಗುವುದು ಸಹಕಾರ, ನಂಬಿಕೆ ಮತ್ತು ಪರಸ್ಪರ ಸಹಯೋಗದಿಂದ ಮಾತ್ರ. ಜಿಗ್ ಜಿಗ್ಲರ್ ಹೇಳಿದ ಸೂತ್ರವು ಕೇವಲ ಪುಸ್ತಕದ ಮಾತಲ್ಲ, ಅದು ಜೀವನದ ಸಾರ್ವಕಾಲಿಕ ನಿಯಮ. ನಮಗೆ ಅವಕಾಶ ಗಳು ಸಿಗುತ್ತಿಲ್ಲ ಎಂದು ಕೊರಗುವ ಬದಲು, ನಾವು ಇತರರಿಗೂ ಅವಕಾಶಗಳನ್ನು ಸೃಷ್ಟಿಸಿಕೊಡ ಬಹುದು, ಇತರರ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂದು ಯೋಚಿಸತೊಡಗಿದರೆ, ನಮ್ಮ ಅಗತ್ಯಗಳು ತಾನಾಗಿಯೇ ಈಡೇರುತ್ತವೆ.

ಜೆಫ್ ಕೆಲ್ಲರ್ ಅವರ ಬದುಕಿನಲ್ಲಿ ನಡೆದ ಈ ಘಟನಾವಳಿಗಳು ನಮಗೆ ಇದೇ ಬಲವಾದ ಪಾಠವನ್ನು ಬೋಧಿಸುತ್ತವೆ. ಜೆಫ್ ಕೆಲ್ಲರ್ ಮತ್ತು ಸ್ಟೂ ಕಾಮೆನ್ ನಡುವಿನ ಈ ಅನುಭವವು ಪ್ರತಿಯೊಬ್ಬ ಮಹತ್ವಾ‌ ಕಾಂಕ್ಷಿಗೂ ದಾರಿದೀಪ. ಬದುಕಿನಲ್ಲಿ ಸರಿಯಾದ ವ್ಯಕ್ತಿಗಳ ಜತೆ ಸ್ನೇಹ ಬೆಳೆಸುವುದು, ಸದಾ ಸಕಾರಾತ್ಮಕ ಮನೋಭಾವವನ್ನು ಹೊಂದಿರುವುದು ಮತ್ತು ನಮಗೆ ಸಿಕ್ಕ ವೇದಿಕೆಯನ್ನು ಇತರರ ಒಳಿತಿಗಾಗಿ ಬಳಸುವುದು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇತರರ ಕನಸುಗಳನ್ನು ನನಸು ಮಾಡಲು ನಾವು ಸೇತುವೆಯಾದರೆ, ನಮ್ಮ ಕನಸುಗಳನ್ನು ನನಸು ಮಾಡುವ ಹತ್ತಾರು ಸೇತುವೆಗಳು ನಮಗರಿವಿಲ್ಲ ದಂತೆಯೇ ನಿರ್ಮಾಣವಾಗುತ್ತವೆ. ಆದ್ದರಿಂದ, ಇತರರ ಯಶಸ್ಸಿನಲ್ಲಿ ಸಂತೋಷ ಕಾಣುತ್ತಾ, ಪ್ರತಿಯೊಬ್ಬರ ಏಳಿಗೆಗೂ ಕೈಜೋಡಿಸುತ್ತಾ ಮುನ್ನಡೆ ಯುವುದೇ ನಿಜವಾದ ಯಶಸ್ಸಿನ ಹೆದ್ದಾರಿಯಾಗಿದೆ.

ಸುಳ್ಳು ನಿಜವಾದ ಅಪರೂಪದ ಕಥೆ

ಭೂಗೋಳಶಾಸ್ತ್ರ ಮತ್ತು ನಕ್ಷೆ ತಯಾರಿಕೆಯ (Cartography) ಇತಿಹಾಸದಲ್ಲಿ ‘ಅಗಾಲ್ಗೋ’ (Agloe) ಎಂಬುದು ಒಂದು ವಿಸ್ಮಯಕಾರಿ ಅಧ್ಯಾಯ. ಕೇವಲ ಕೃತಿಸ್ವಾಮ್ಯ (ಕಾಪಿರೈಟ್) ರಕ್ಷಣೆಗಾಗಿ ಮತ್ತು ಪ್ರತಿಸ್ಪರ್ಧಿಗಳ ಕೃತಿಚೌರ್ಯವನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲು ಸೃಷ್ಟಿಸಲಾದ ಒಂದು ಕಾಲ್ಪನಿಕ ಊರು, ಕಾಲಕ್ರಮೇಣ ಜನರ ನಂಬಿಕೆಯಿಂದಾಗಿ ಭೌತಿಕ ಜಗತ್ತಿನಲ್ಲಿ ನೈಜ ರೂಪ ಪಡೆದುಕೊಂಡಿತು.

ಕಲ್ಪನೆಗೂ, ವಾಸ್ತವಕ್ಕೂ ನಡುವಿನ ಗೆರೆಯನ್ನು ಅಳಿಸಿಹಾಕಿದ ಈ ಘಟನೆಯು ವಿಚಿತ್ರ ಹಾಗೂ ಸ್ವಾರಸ್ಯ ಕರ ಸತ್ಯಕಥೆಗಳಲ್ಲಿ ಒಂದಾಗಿ ಇಂದಿಗೂ ದಾಖಲಾಗಿದೆ. 1930ರ ದಶಕದಲ್ಲಿ ಅಮೆರಿಕದಲ್ಲಿ ಕಾರುಗಳ ಬಳಕೆ ಹೆಚ್ಚಾಗುತ್ತಿದ್ದಂತೆ ರಸ್ತೆ ನಕ್ಷೆಗಳಿಗೆ ಭಾರೀ ಬೇಡಿಕೆ ಉಂಟಾಯಿತು. ಆ ಕಾಲದಲ್ಲಿ ನಕ್ಷೆ ತಯಾರಿಸು ವುದು ಸುಲಭದ ಮಾತಾಗಿರಲಿಲ್ಲ.

ಸರ್ವೇಯರ್‌ಗಳು ಮೈಲುಗಟ್ಟಲೆ ಸಂಚರಿಸಿ ರಸ್ತೆಗಳು, ತಿರುವುಗಳು, ಸಣ್ಣ ಹಳ್ಳಿಗಳನ್ನು ಗುರುತಿಸ ಬೇಕಿತ್ತು. ‘ಜನರಲ್ ಡ್ರಾಫ್ಟಿಂಗ್ ಕಂಪನಿ’ ಎಂಬ ಪ್ರಸಿದ್ಧ ಸಂಸ್ಥೆಯು ‘ಎಸ್ಸೊ’ (Esso - ಇಂದಿನ ExxonMobil) ಪೆಟ್ರೋಲಿಯಂ ಸಂಸ್ಥೆಗಾಗಿ ನ್ಯೂಯಾರ್ಕ್ ರಾಜ್ಯದ ಅತ್ಯಂತ ವಿವರವಾದ ರಸ್ತೆ ನಕ್ಷೆಯನ್ನು ತಯಾರಿಸುವ ಜವಾಬ್ದಾರಿ ಹೊತ್ತಿತ್ತು. ಆದರೆ ಇಷ್ಟೊಂದು ಪರಿಶ್ರಮದ ನಕ್ಷೆಯನ್ನು ಪ್ರತಿಸ್ಪರ್ಧಿ ಕಂಪನಿಗಳು ಕದ್ದುಬಿಡಬಹುದು ಎಂಬ ಭೀತಿ ಸಂಸ್ಥೆಯ ಮುಖ್ಯಸ್ಥರಿಗಿತ್ತು. ಕೃತಿ ಚೌರ್ಯವನ್ನು ತಡೆಯಲು ಜನರಲ್ ಡ್ರಾಫ್ಟಿಂಗ್ ಕಂಪನಿಯ ನಿರ್ದೇಶಕ ಒಟ್ಟೊ ಜಿ.ಲಿಂಡ್‌ಬರ್ಗ್ ಮತ್ತು ಅವರ ಮುಖ್ಯ ಸಹಾಯಕ ಅರ್ನೆಸ್ಟ್ ಆಲ್ಪರ್ಸ್ ಒಂದು ಚತುರ ಉಪಾಯ ಹೂಡಿದರು.

ನ್ಯೂಯಾರ್ಕ್‌ನ ಕ್ಯಾಟ್‌ಸ್ಕಿಲ್ ಪರ್ವತ ಶ್ರೇಣಿಯ ರಾಕ್‌ಲ್ಯಾಂಡ್ ಮತ್ತು ರೋಸ್ಕೋ ನಡುವಿನ ಒಂದು ಮಣ್ಣಿನ ರಸ್ತೆಯ ನಿರ್ಜನ ಜಂಕ್ಷನ್‌ನಲ್ಲಿ ತತ್ವದ ಇಲ್ಲದ ಒಂದು ಊರನ್ನು ಗುರುತಿಸಲು ನಿರ್ಧರಿಸಿದರು. ತಮ್ಮಿಬ್ಬರ ಹೆಸರುಗಳ ಮೊದಲ ಅಕ್ಷರಗಳನ್ನು ಬೆರೆಸಿ-Otto G. Lindberg ಮತ್ತು Ernest Alpers-ಅದಕ್ಕೆ AGLOE’ (ಅಗಾಲ್ಗೋ/ಆಗ್ಲೋ) ಎಂದು ನಾಮಕರಣ ಮಾಡಿದರು. ಈ ‘ಅಗಾಲ್ಗೋ’ ಸಂಪೂರ್ಣವಾಗಿ ಕಾಗದದ ಮೇಲಿನ ಊರಾಗಿತ್ತು (ಪೇಪರ್ ಟೌನ್). ವಾಸ್ತವದಲ್ಲಿ ಆ ನಿರ್ಜನ ಜಂಕ್ಷನ್ ನಲ್ಲಿ ದಟ್ಟ ಮರಗಳು, ಹುಲ್ಲುಗಾವಲು ಮತ್ತು ಕಚ್ಚಾ ರಸ್ತೆಗಳ ಹೊರತಾಗಿ ಯಾವುದೇ ಮನುಷ್ಯ ವಾಸವಾಗಲೀ, ಮನೆಯಾಗಲೀ ಇರಲಿಲ್ಲ.

ಒಂದು ವೇಳೆ ಯಾವುದೇ ಪ್ರತಿಸ್ಪರ್ಧಿ ನಕ್ಷೆ ತಯಾರಕರು ಈ ನಕ್ಷೆಯನ್ನು ಕದ್ದು ನಕಲು ಮಾಡಿದರೆ, ಅವರು ಖಂಡಿತವಾಗಿಯೂ ಈ ‘ಅಗಾಲ್ಗೋ’ ಹೆಸರನ್ನೂ ತಮ್ಮ ನಕ್ಷೆಯಲ್ಲಿ ಮುದ್ರಿಸುತ್ತಾರೆ, ಆಗ ನ್ಯಾಯಾಲಯದಲ್ಲಿ ಅಸ್ತಿತ್ವದ ಇಲ್ಲದ ಈ ಊರು ನಿಮ್ಮ ನಕ್ಷೆಗೆ ಹೇಗೆ ಬಂತು?’ ಎಂದು ಸಾಬೀತು ಪಡಿಸಿ ದಂಡ ವಸೂಲಿ ಮಾಡುವುದು ಅವರ ಮಾಸ್ಟರ್ ಪ್ಲಾನ್ ಆಗಿತ್ತು.

ಕೆಲವು ವರ್ಷಗಳ ನಂತರ, ಅಮೆರಿಕದ ದಿಗ್ಗಜ ನಕ್ಷೆ ತಯಾರಿಕಾ ಸಂಸ್ಥೆಯಾದ ‘ರ್ಯಾಂಡ್ ಮೆಕ್‌ನಾಲಿ’ (Rand McNally) ನ್ಯೂಯಾರ್ಕ್ ನಕ್ಷೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಜನರಲ್ ಡ್ರಾಫ್ಟಿಂಗ್ ಕಂಪನಿಯು ಆ ನಕ್ಷೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ತಾವು ಇಟ್ಟಿದ್ದ ಬಲೆಗೆ ಬೃಹತ್ ಮೀನೇ ಸಿಲುಕಿರುವುದು ಸ್ಪಷ್ಟವಾಯಿತು! ರ್ಯಾಂಡ್ ಮೆಕ್‌ನಾಲಿಯ ನಕ್ಷೆಯಲ್ಲಿ ಕ್ಯಾಟ್‌ಸ್ಕಿಲ್ ಪರ್ವತದ ಅದೇ ನಿರ್ಜನ ಜಾಗದಲ್ಲಿ ದಪ್ಪ ಅಕ್ಷರಗಳಲ್ಲಿ ‘Agloe’ ಎಂದು ಮುದ್ರಿಸ ಲಾಗಿತ್ತು.

ತಮ್ಮ ಬೌದ್ಧಿಕ ಆಸ್ತಿಯನ್ನು ಕದ್ದಿದ್ದಾರೆಂಬ ಖಚಿತ ವಿಶ್ವಾಸದೊಂದಿಗೆ ಜನರಲ್ ಡ್ರಾಫ್ಟಿಂಗ್ ಕಂಪನಿಯು ರ್ಯಾಂಡ್ ಮೆಕ್‌ನಾಲಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯ ದಲ್ಲಿ ಜನರಲ್ ಡ್ರಾಫ್ಟಿಂಗ್ ಕಂಪನಿಯ ವಕೀಲರು ಜಯದ ನಗೆಯೊಂದಿಗೆ, ‘ಅಗಾಲ್ಗೋ ಎಂಬುದು ಜಗತ್ತಿನ ಇಲ್ಲದ, ನಾವು ನಕಲು ಹಿಡಿಯಲು ಸೃಷ್ಟಿಸಿದ ಕಾಲ್ಪನಿಕ ಹೆಸರು. ರ್ಯಾಂಡ್ ಮೆಕ್‌ನಾಲಿ ನಮ್ಮ ನಕ್ಷೆಯನ್ನು ಕದ್ದು ಅದೇ ಹೆಸರನ್ನು ಮುದ್ರಿಸಿದೆ, ಆದ್ದರಿಂದ ಅವರು ಕೃತಿಚೌರ್ಯ ಎಸಗಿ ದ್ದಾರೆ’ ಎಂದು ನೇರ ಆರೋಪ ಮಾಡಿದರು.

ರ್ಯಾಂಡ್ ಮೆಕ್‌ನಾಲಿ ಈ ಬಲೆಗೆ ಸಂಪೂರ್ಣವಾಗಿ ಸಿಕ್ಕಿಬಿದ್ದಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ರ್ಯಾಂಡ್ ಮೆಕ್‌ನಾಲಿಯ ಪರ ವಕೀಲರು ನೀಡಿದ ಉತ್ತರ ಇಡೀ ಕೋರ್ಟ್ ಅನ್ನೇ ಬೆರಗು ಗೊಳಿಸಿತು. ಅವರು ‘ಅಗಾಲ್ಗೋ ಎಂಬುದು ಕೇವಲ ಕಾಗದದ ಮೇಲಲ್ಲ, ನೈಜ ಜಗತ್ತಿನಲ್ಲೂ ಅಸ್ತಿತ್ವದಲ್ಲಿದೆ’ ಎಂದು ವಾದಿಸಿದರು. ರ್ಯಾಂಡ್ ಮೆಕ್‌ನಾಲಿ ಸಂಸ್ಥೆಯು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ತಮ್ಮ ಸರ್ವೇಯರ್‌ಗಳು ತೆಗೆದ ಛಾಯಾಚಿತ್ರಗಳನ್ನು ಸಲ್ಲಿಸಿತು. ಆಶ್ಚರ್ಯವೆಂದರೆ, ನಕ್ಷೆಯಲ್ಲಿ ಗುರುತಿಸಲಾಗಿದ್ದ ಅದೇ ಜಾಗದಲ್ಲಿ ನಿಜವಾಗಿಯೂ ಕಟ್ಟಡವೊಂದು ತಲೆಯೆತ್ತಿತ್ತು ಮತ್ತು ಅದರ ಫಲಕದ ಮೇಲೆ ‘Agloe General Store’ (ಅಗಾಲ್ಗೋ ಜನರಲ್ ಸ್ಟೋರ್) ಎಂದು ಬರೆಯಲಾಗಿತ್ತು!

ನ್ಯಾಯಾಲಯವು ಸ್ಥಳೀಯ ವಿಚಾರಣೆ ನಡೆಸಿದಾಗ, ಅಲ್ಲಿ ನಿಜವಾಗಿಯೂ ಜನರಲ್ ಸ್ಟೋರ್ ಅಸ್ತಿತ್ವ ದಲ್ಲಿದೆ ಎಂಬುದು ದೃಢಪಟ್ಟಿತು. ಕಾಗದದಲ್ಲಿದ್ದ ಸುಳ್ಳು ಭೂಮಿಯ ಮೇಲೆ ಸತ್ಯವಾಗಿದ್ದ ಆ ವಿಚಿತ್ರ ತಿರುವು ನ್ಯಾಯಾಧೀಶರನ್ನೂ ದಂಗಾಗಿಸಿತು. ಈ ಪವಾಡ ನಡೆದದ್ದು ಹೇಗೆಂದರೆ, 1950ರ ದಶಕದಲ್ಲಿ ಸ್ಥಳೀಯ ವ್ಯಾಪಾರಿಯೊಬ್ಬರು ಆ ರಸ್ತೆಯ ಜಂಕ್ಷನ್‌ನಲ್ಲಿ ದಿನಸಿ, ಮೀನುಗಾರಿಕೆ ಸಾಮಗ್ರಿಗಳು ಮತ್ತು ತಿಂಡಿ-ತಿನಿಸುಗಳ ಅಂಗಡಿಯೊಂದನ್ನು ತೆರೆಯಲು ನಿರ್ಧರಿಸಿದ್ದರು. ತಾವು ಅಂಗಡಿ ಆರಂಭಿಸುತ್ತಿರುವ ಪ್ರದೇಶದ ಅಽಕೃತ ಹೆಸರೇನು ಎಂದು ತಿಳಿಯಲು ಅವರು ‘ಎಸ್ಸೊ’ ಸಂಸ್ಥೆಯ ರಸ್ತೆ ನಕ್ಷೆಯನ್ನು ಪರಿಶೀಲಿಸಿದ್ದರು. ನಕ್ಷೆಯಲ್ಲಿ ಆ ಜಾಗಕ್ಕೆ ’ Agloe’ ಎಂದು ನಮೂದಾ ಗಿದ್ದುದನ್ನು ಕಂಡು, ಇದೇ ಈ ಪ್ರದೇಶದ ಅಧಿಕೃತ ಹೆಸರು ಇರಬೇಕು’ ಎಂದು ಭಾವಿಸಿ ತಮ್ಮ ಅಂಗಡಿಗೆ ‘ಅಗಾಲ್ಗೋ ಜನರಲ್ ಸ್ಟೋರ್’ ಎಂದು ನಾಮಕರಣ ಮಾಡಿದ್ದರು.

ಜನರು ಆ ರಸ್ತೆಯಲ್ಲಿ ಹಾದು ಹೋಗುವಾಗ ನಕ್ಷೆ ನೋಡಿ ಅಗಾಲ್ಗೋ ತಲುಪುತ್ತಿದ್ದರು ಮತ್ತು ಅಗಾಲ್ಗೋ ಜನರಲ್ ಸ್ಟೋರ್ ನಲ್ಲಿ ಖರೀದಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಅದರ ಪಕ್ಕದ ‘ಅಗಾಲ್ಗೋ ಲಾಡ್ಜ್’ ಎಂಬ ವಸತಿ ಗೃಹವೂ ಆರಂಭವಾಯಿತು.

ರ್ಯಾಂಡ್ ಮೆಕ್‌ನಾಲಿಯ ಸರ್ವೇಯರ್‌ಗಳು ಆ ಮಾರ್ಗದಲ್ಲಿ ಸಂಚರಿಸಿದಾಗ, ಕಣ್ಣೆದುರೇ ಅಂಗಡಿ ಮತ್ತು ಬೋರ್ಡ್ ಕಂಡು ಅದನ್ನು ನೈಜ ಊರೆಂದೇ ದಾಖಲಿಸಿಕೊಂಡಿದ್ದರು. ಆದ್ದರಿಂದ, ಯಾವುದೇ ಕೃತಿಚೌರ್ಯ ಸಾಬೀತಾಗದೆ ಪ್ರಕರಣ ವಜಾಗೊಂಡಿತು!

ಒಂದು ಕಾಲ್ಪನಿಕ ಕೃತಿಸ್ವಾಮ್ಯ ಟ್ರ್ಯಾಪ್, ಜನಸಾಮಾನ್ಯರ ಮುಗ್ಧ ನಂಬಿಕೆಯಿಂದಾಗಿ ಭೌತಿಕ ಊರಾಗಿ ರೂಪಾಂತರಗೊಂಡ ಅಪರೂಪದ ವಿದ್ಯಮಾನ ಇದಾಗಿತ್ತು. ಕಾಲಾನಂತರದಲ್ಲಿ ಅಗಾಲ್ಗೋ ಜನರಲ್ ಸ್ಟೋರ್ ಮುಚ್ಚಿಹೋಯಿತು ಮತ್ತು ಆ ಕಟ್ಟಡವೂ ಶಿಥಿಲಗೊಂಡು ಕಣ್ಮರೆಯಾಯಿತು. ಆದರೂ, ಗೂಗಲ್ ಮ್ಯಾಪ್ಸ್‌ನಂಥ ಆಧುನಿಕ ಜಿಪಿಎಸ್ ವ್ಯವಸ್ಥೆಗಳಲ್ಲೂ ಅನೇಕ ವರ್ಷಗಳ ಕಾಲ ಅಗಾಲ್ಗೋ ಕಾಣಿಸಿಕೊಳ್ಳುತ್ತಿತ್ತು.

ಜಾನ್ ಗ್ರೀನ್ (John Green) ಅವರ ‘ಪೇಪರ್ ಟೌನ್ಸ್’ ಎಂಬ ವಿಶ್ವಪ್ರಸಿದ್ಧ ಕಾದಂಬರಿ ಮತ್ತು ಹಾಲಿವುಡ್ ಚಲನಚಿತ್ರಕ್ಕೆ ಇದೇ ಅಗಾಲ್ಗೋ ಪ್ರಮುಖ ಕಥಾವಸ್ತುವಾಯಿತು. ಮಾನವನ ಕಲ್ಪನೆ ಮತ್ತು ನಕ್ಷೆಯ ಶಕ್ತಿ ಹೇಗೆ ವಾಸ್ತವ ಜಗತ್ತನ್ನೇ ಸೃಷ್ಟಿಸಬಲ್ಲದು ಎಂಬುದಕ್ಕೆ ‘ಅಗಾಲ್ಗೋ’ ಇತಿಹಾಸದ ಶಾಶ್ವತ ಸಾಕ್ಷಿಯಾಗಿ ಉಳಿದಿದೆ.

ಕಾಂಗರೂಗೆ ಆ ಹೆಸರು ಹೇಗೆ?

ಕ್ಯಾಪ್ಟನ್ ಜೇಮ್ಸ್ ಕುಕ್ ಆಸ್ಟ್ರೇಲಿಯಾದ ಕಡಲತೀರಕ್ಕೆ ಮೊದಲ ಬಾರಿಗೆ ಬಂದಿಳಿದಾಗ ನಡೆದದ್ದು ಎನ್ನಲಾದ ಜಗತ್ಪ್ರಸಿದ್ಧ ಪ್ರಸಂಗವೊಂದನ್ನು ನಿನ್ನೆ Words are Sacred ಎಂಬ ಪುಸ್ತಕದಲ್ಲಿ ಓದುತ್ತಿದ್ದೆ. ಹಡಗಿನಿಂದ ಇಳಿದ ಬ್ರಿಟಿಷ್ ನಾವಿಕರಿಗೆ ಆ ನೆಲದ ಮೇಲಿದ್ದ ವಿಚಿತ್ರ ಪ್ರಾಣಿಯೊಂದು ಕಣ್ಣಿಗೆ ಬಿತ್ತು. ಹೊಟ್ಟೆಯಂದು ಚೀಲ, ಅದರೊಳಗೆ ಮರಿ, ಮನುಷ್ಯನಷ್ಟೇ ಎತ್ತರಕ್ಕೆ ಜಿಗಿಯುತ್ತಾ ಸಾಗುವ ಆ ಜೀವಿಯನ್ನು ನೋಡಿ ಬ್ರಿಟಿಷ್ ನಾವಿಕರಿಗೆ ಕಣ್ಣುಗಳೇ ಹೊರಬಂದವು. ಅವರು ತಮ್ಮ ಜೀವನದಲ್ಲಿ ಅಂಥ ಪ್ರಾಣಿಯನ್ನು ನೋಡಿರಲಿಲ್ಲ.

ಇಂಗ್ಲಿಷಿನ ಯಾವ ನಿಘಂಟಿನಲ್ಲೂ ಇಂಥ ಪ್ರಾಣಿಗೆ ಹೆಸರಿರಲಿಲ್ಲ. ಕೂಡಲೇ ಕುಕ್, ಪಕ್ಕದ ಬೆತ್ತಲೆಯಾಗಿ ನಿಂತಿದ್ದ ಸ್ಥಳೀಯ ಆಸ್ಟ್ರೇಲಿಯನ್ ಆದಿವಾಸಿಯೊಬ್ಬನನ್ನು ಕರೆದು, ಆ ಜಿಗಿಯುವ ಪ್ರಾಣಿಯ ಕಡೆಗೆ ಕೈತೋರಿಸಿ, ‘ವಾಟ್ ಈಸ್ ದಟ್ ಅನಿಮಲ?’ ಎಂದು ಕೇಳಿದರು. ಆ ಹಳ್ಳಿಗ ಕಣ್ಣು ಕಿರಿದು ಮಾಡಿ, ಸಾಹೇಬನ ಬಟ್ಟೆ, ಅವನ ಗಡ್ಡ, ಕೈತೋರಿಸಿದ ದಿಕ್ಕು ಎಲ್ಲವನ್ನೂ ದಿಟ್ಟಿಸಿ ನೋಡಿ, ಹೆಗಲು ಕುಲುಕುತ್ತಾ ‘ಕಂಗರೂ’ ಅಂದ. ಕ್ಯಾಪ್ಟನ್ ಕುಕ್ ಖುಷಿಯಿಂದ ಬೀಗಿದರು. ಡೈರಿ ತೆರೆದು, ಆ ಪ್ರಾಣಿಯ ಚಿತ್ರ ಬಿಡಿಸಿ, ಕೆಳಗೆ ದಪ್ಪ ಅಕ್ಷರಗಳಲ್ಲಿ ‘KANGAROO’ ಎಂದು ಬರೆದುಕೊಂಡರು.

ಇಡೀ ಜಗತ್ತಿಗೆ ಆ ಜಿಗಿಯುವ ಪ್ರಾಣಿಯ ಹೆಸರು ‘ಕಂಗರೂ’ ಎಂದೇ ಪರಿಚಿತವಾಯಿತು. ವರ್ಷಗಳ ನಂತರ, ಭಾಷಾತಜ್ಞರು ಆ ಬುಡಕಟ್ಟಿನ ಜನರ ಮೂಲ ನುಡಿಯನ್ನು ಆಳವಾಗಿ ಅಧ್ಯಯನ ಮಾಡಲು ಹೋದಾಗ ಅಸಲಿ ಸತ್ಯ ಹೊರಬಿತ್ತು. ಸ್ಥಳೀಯ ಬುಡಕಟ್ಟು ಜನಾಂಗದವ ಅಸಲಿಗೆ ‘ಗಂಗುರು’ (Gangurru) ಎಂದು ಹೇಳಿದ್ದು, ಬ್ರಿಟಿಷ್ ನಾವಿಕ ಮುಖ್ಯಸ್ಥನಿಗೆ ‘ಕಂಗರೂ’ ಎಂದು ಕೇಳಿತ್ತು. ಆ ಭಾಷೆಯಲ್ಲಿ ‘ಗಂಗರು’ಎಂದರೆ ’ಜಿಗಿಯುವ ಪ್ರಾಣಿ’ ಎಂಬ ಅರ್ಥವೂ ಅಲ್ಲ. ಅಂದು ಆ ಮುಗ್ಧ ಆದಿವಾಸಿ, ವಿಚಿತ್ರ ಸೂಟುಬೂಟು ಧರಿಸಿ ಇಂಗ್ಲಿಷಿನಲ್ಲಿ ಏನೋ ಬಡಬಡಿಸುತ್ತಿದ್ದ ಬಿಳಿಯ ಸಾಹೇಬನ ಮುಖ ನೋಡಿ ಹೇಳಿದ್ದು ಇಷ್ಟೇ -‘ಗಂಗುರು...’ ಅಂದರೆ, ನನಗೆ ನೀನು ಹೇಳುತ್ತಿರುವುದು ಏನೂ ಅರ್ಥ ವಾಗುತ್ತಿಲ್ಲ!’ ಭಾಷೆಯ ಅಹಂ ಹೊತ್ತ ನಾಗರಿಕ ಜಗತ್ತು, ಆ ‘ಅರ್ಥವಾಗುತ್ತಿಲ್ಲ’ ಎಂಬ ಮುಗ್ಧ ಅಸಹಾಯಕತೆಯನ್ನೇ ಪ್ರಾಣಿಯ ಹೆಸರನ್ನಾಗಿಸಿ ಶತಮಾನಗಳಿಂದ ಜಪಿಸುತ್ತಿದೆ. ‘ನನಗೇನೂ ಅರ್ಥವಾಗುತ್ತಿಲ್ಲ’ ಎಂಬುದೇ ಒಂದು ಪ್ರಾಣಿಯ ಹೆಸರಾಗಿ ಜಗತ್ತಿನಾದ್ಯಂತ ಪರಿಚಿತ ವಾಗಿ ಹೋಯಿತು.