ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shashidhara Halady Column: ಕೊಡಿ ಹಬ್ಬ ಮತ್ತು ವಂಡಾರು ಕಂಬಳ

ಈಗ ಒಂದೆರಡು ವರ್ಷಗಳಿಂದ, ಚಲನಚಿತ್ರದ ಪ್ರಭಾವದಿಂದ ‘ಕಂಬಳ’ ಎಂಬ ಪದ ನಮ್ಮ ರಾಜ್ಯದ ಎಲ್ಲರಿಗೂ ಪರಿಚಿತ ಎನಿಸಿದೆ. ಕೆಲವು ದಶಕಗಳ ಹಿಂದೆ ಕರಾವಳಿಯ ಹೊರಗಿನವರಿಗೆ

ಶಶಿಧರ ಹಾಲಾಡಿ ಶಶಿಧರ ಹಾಲಾಡಿ Dec 13, 2024 8:03 AM

ಶಶಾಂಕಣ

ಶಶಿಧರ ಹಾಲಾಡಿ

ವಂಡಾರು ಕಂಬಳದ ವಿಶೇಷವೆಂದರೆ, ಇಲ್ಲಿ ಕೋಣಗಳ ನಡುವೆ ಸ್ಪರ್ಧೆ ಅಥವಾ ಮಿಂಚಿನ ವೇಗದ ಓಟದ ಪೈಪೋಟಿ ಇಲ್ಲ; ವಿಶಾಲವಾದ ಕೆಸರು ಗದ್ದೆಯಲ್ಲಿ, ಕೋಣಗಳನ್ನು ಅವುಗಳ ಪಾಡಿಗೆ ಓಡಿಸುವುದು ಇಲ್ಲಿನ ಆಚರಣೆ. ವಂಡಾರು ಕಂಬಳದಲ್ಲಿ, ಕೋಣಗಳನ್ನು ಓಡಿಸುವುದು ಒಂದು ಸಂಪ್ರದಾಯ, ಹರಕೆ.

ಹಬ್ಬ ಮತ್ತು ಕಂಬಳ- ಇವೆರಡೂ ಸಂಭ್ರಮಗಳು ತೀರಾ ವಿಭಿನ್ನ ರೀತಿಯಲ್ಲಿ ಆಚರಣೆಗೊಳ್ಳುವಂಥವು; ಆದರೆಇವೆರಡರ ನಡುವೆ ಪುರಾತನ ಕಾಲದಿಂದಲೂ ಆಪ್ತ ಎನಿಸುವ ಬಾಂಧವ್ಯವಿದೆ, ಹಲವು ಸಂಬಂಧಗಳಿವೆ, ಕೃಷಿ ಸಂಬಂಧಿ ದಂತಕಥೆ ಗಳಿವೆ, ಈಗಿನ ದಿನಮಾನದಲ್ಲಿ ಪೂರ್ತಿ ಅರ್ಥವಾಗದಂಥ ಒಡನಾಟವಿದೆ.

ಈಗ ಒಂದೆರಡು ವರ್ಷಗಳಿಂದ, ಚಲನಚಿತ್ರದ ಪ್ರಭಾವದಿಂದ ‘ಕಂಬಳ’ ಎಂಬ ಪದ ನಮ್ಮ ರಾಜ್ಯದ ಎಲ್ಲರಿಗೂ ಪರಿಚಿತ ಎನಿಸಿದೆ. ಕೆಲವು ದಶಕಗಳ ಹಿಂದೆ ಕರಾವಳಿಯ ಹೊರಗಿನವರಿಗೆ, ಕಂಬಳ ಎಂದರೆ ಕರಾವಳಿ ಕರ್ನಾಟಕದ ಒಂದು ಜನಪದ ಆಚರಣೆ ಎಂದಷ್ಟೇ ಅಸ್ಪಷ್ಟ ಮಾಹಿತಿಯಿತ್ತು. ಕಂಬಳ ಎಂದರೆ ಕೆಸರು ಗದ್ದೆಗಳಲ್ಲಿ ಕೋಣ ಗಳನ್ನು ಓಡಿಸುವುದು ಎಂದು ಸರಳಗೊಳಿಸಿ ಹೇಳಿದರೆ, ಅದು ಮೇಲ್ನೋಟಕ್ಕೆ ತಪ್ಪು ಎನ್ನಲಾಗದು. ಆದರೆ,ಕಂಬಳದ ಹಿನ್ನೆಲೆ, ಮುನ್ನೆಲೆ, ಜನಪದ ತಳಹದಿ, ಕೃಷಿಯೊಂದಿಗೆ ಅದು ಹೊಂದಿರುವ ಸಂಬಂಧ ಇಂಥ ಹಲವು ವಿಚಾರಗಳನ್ನು ಗಮನಿಸಿ, ಗುರುತಿಸಿ, ಸಮಗ್ರವಾಗಿ ದಾಖಲಿಸಿದರೆ, ಅದೊಂದು ಪುಸ್ತಕವಾದೀತು!

ಕರಾವಳಿಯ ಹಳ್ಳಿ ಹೈದರಿಗೆ, ಗ್ರಾಮೀಣ ಯುವಕ ಯುವತಿಯರಿಗಂತೂ ತಮ್ಮ ಊರಿನ ಸನಿಹದಲ್ಲಿ ನಡೆಯುವ ಕಂಬಳ ಎಂದರೆ, ಅದೊಂದು ವಾರ್ಷಿಕ ಸಂಭ್ರಮ, ವರ್ಷದ ಅತಿ ದೊಡ್ಡ ಆಚರಣೆ! ಮನೆಯಲ್ಲಿ ಸಾಕಿದ ಕೋಣಗಳನ್ನು ಓಡಿಸುವ ಈ ಜಾತ್ರೆಯು, ಅವಶ್ಯವಾಗಿ ಶ್ರಮಜೀವಿಗಳ ಹಬ್ಬ, ಕೃಷಿಕರು ತಮ್ಮ ಜಾನುವಾರುಗಳೊಂದಿಗೆ ಸಂಭ್ರಮಿಸಿ ಆಚರಿಸುವ ಹಬ್ಬ. ನಮ್ಮ ಹಳ್ಳಿಯ ಸುತ್ತಲೂ ಹಲವು ಊರುಗಳಲ್ಲಿ ಕಂಬಳಗಳು ನಡೆಯುತ್ತವೆ.

ಡಿಸೆಂಬರ್ ತಿಂಗಳು ಅಥವಾ ಚಳಿಗಾಲ ಬಂದ ಕೂಡಲೆ, “ಹ್ವಾಯ್, ನಾಡಿದ್ದು ಚೋರಾಡಿ ಕಂಬಳ, ಆಮೇಲೆ ವಂಡಾರು ಕಂಬಳ, ಇಂಥ ದಿನ ಗುಲ್ವಾಡಿ ಕಂಬಳ…" ಹೀಗೆ ಗ್ರಾಮೀಣರು ಪರಸ್ಪರ ಮಾತನಾಡಿಕೊಳ್ಳುವುದುಸಾಮಾನ್ಯ. ಬತ್ತದ ಕೃಷಿಮಾಡುವ ಗದ್ದೆಗಳಿರುವ ಹಳ್ಳಿಗಳಲ್ಲಿ, ಒಂದಾದರೂ ಕಂಬಳ ಗದ್ದೆ ಇರುತ್ತದೆ, ವರ್ಷ ಕ್ಕೊಂದು ಸಲ ಅಲ್ಲಿ ಕೋಣಗಳನ್ನು ಓಡಿಸಿ ಕಂಬಳ ಮಾಡುತ್ತಾರೆ. ನಮ್ಮ ಹಳ್ಳಿಯ ಮನೆಯ ಎದುರಿನಲ್ಲಿ, ಗುಳಿನ ಬೈಲು ಕಂಬಳ ಗದ್ದೆ ಇದೆ; ಎಡಭಾಗದಲ್ಲಿ ದೃಷ್ಟಿ ಹಾಯಿಸಿದರೆ, ಗರಡಿ ಜಡ್ಡು ಕಂಬಳಗದ್ದೆಯೂ ಇದೆ! ಇವೆರಡೂ ಒಂದು ಕಾಲದಲ್ಲಿ ನಡೆಯುತ್ತಿದ್ದ ಕೋಣಗಳ ಕಂಬಳಕ್ಕೆ ಸಿದ್ಧವಾಗಿದ್ದ ಗದ್ದೆಗಳು. ಬಹುಶಃ, ನಮ್ಮ ಹಳ್ಳಿಯನ್ನು ಸುಮಾರು ೪೦೦ ವರ್ಷಗಳ ಹಿಂದೆ ಆಳುತ್ತಿದ್ದ ಮುದ್ದಳ ಎಂಬ ರಾಜ (ಸಾಮಂತ)ನ ಕಾಲದಲ್ಲಿ ಅಲ್ಲಿ ಕಂಬಳಗಳು ನಡೆಯುತ್ತಿದ್ದವು; ಆತನು ವಾಸವಿದ್ದ ಕೋಟೆಯಿದ್ದ ಜಾಗವು, ಕಂಬಳ ಗದ್ದೆಯ ಸನಿಹದಲ್ಲೇ ಕೋಟೆ ಹಕ್ಕಲು ಎಂಬ ಹೆಸರಿನಿಂದ, ಇಂದು ಪಾಳುಬಿದ್ದ ಮೈದಾನದಂತಿದೆ.

ಕಾಲಕ್ರಮೇಣ, ಮುದ್ದಳ ರಾಜ ಮತ್ತು ಆತನ ಸಂತತಿಯು, ಆ ಪ್ರದೇಶವನ್ನು ತೊರೆದು ಹೋಗಬೇಕಾಯಿತು. ಆತನ ಆಳ್ವಿಕೆ ನಶಿಸಿತು; ಕೋಣಗಳನ್ನು ಓಡಿಸುವ ಕಂಬಳಗಳೂ ನಿಂತುಹೋದವು. ಆದರೆ, ನಮ್ಮ ಹಳ್ಳಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಚೋರಾಡಿ ಕಂಬಳ ಮತ್ತು 8 ಕಿ. ಮೀ. ದೂರದಲ್ಲಿರುವ ವಂಡಾರು ಕಂಬಳ ಇಂದಿಗೂ ನಡೆಯುತ್ತಿವೆ. ವಂಡಾರು ಕಂಬಳದ ವಿವರ ತಿಳಿದುಕೊಂಡರೆ, ನಮ್ಮ ಸುತ್ತಲಿನ ಎಲ್ಲಾ ಕಂಬಳಗಳ ಪರಿಚಯ ಮಾಡಿಕೊಂಡಂತಾದೀತು. ಕಳೆದ ವಾರ ವಂಡಾರಿನಲ್ಲಿ ಈ ವರ್ಷದ ಕಂಬಳ ನಡೆಯಿತು. ವಂಡಾರು ಒಂದು ಪುಟ್ಟ ಹಳ್ಳಿ; ಆಧುನಿಕತೆಯ ಪ್ರವಾಹ ಇನ್ನೂ ಆ ಊರಿಗೆ ಕಾಲಿಟ್ಟಿಲ್ಲ. ಬಹು ಹಿಂದಿನಿಂದಲೂ ಆಚರಿಸಿ ಕೊಂಡು ಬಂದ ಪದ್ಧತಿ, ಸಂಪ್ರದಾಯದಂತೆ ಅಲ್ಲಿ ಕಂಬಳ ವನ್ನು ನಡೆಸಿಕೊಂಡು ಬರುತ್ತಿದ್ದಾರೆ.

ವಂಡಾರು ಕಂಬಳದ ವಿಶೇಷವೆಂದರೆ, ಇಲ್ಲಿ ಕೋಣಗಳ ನಡುವೆ ಸ್ಪರ್ಧೆ ಅಥವಾ ಮಿಂಚಿನ ವೇಗದ ಓಟದ ಪೈಪೋಟಿ ಇಲ್ಲ; ವಿಶಾಲವಾದ ಕೆಸರು ಗದ್ದೆಯಲ್ಲಿ, ಕೋಣಗಳನ್ನು ಅವುಗಳ ಪಾಡಿಗೆ ಓಡಿಸುವುದು ಇಲ್ಲಿನ ಆಚರಣೆ. ದಕ್ಷಿಣ ಕನ್ನಡದ ಕೆಲವು ಕಡೆ, ಜೋಡುಕೆರೆ ಕಂಬಳ ಎಂಬ ಆಚರಣೆಯಲ್ಲಿ, ಕೋಣಗಳನ್ನು ಪೈಪೋಟಿ ಯಿಂದ ಓಡಿಸುವುದು, ಅವು ಎಷ್ಟು ನಿಮಿಷ
ಗಳಲ್ಲಿ ಗುರಿ ಮುಟ್ಟಿದವು ಎಂದು ಲೆಕ್ಕಹಾಕುವುದು, ಆವುಗಳನ್ನು ಓಡಿಸಿದವರು ಜಗತ್ತಿನಲ್ಲೇ ಎಷ್ಟನೆಯ ವೇಗದ ಓಟಗಾರರು ಎಂದು ಸಂಭ್ರಮಿಸುವುದು ಎಲ್ಲಾ ಉಂಟು.

ಆದರೆ ವಂಡಾರು ಕಂಬಳದಲ್ಲಿ, ಕೋಣಗಳನ್ನು ಓಡಿಸುವುದು ಒಂದು ಸಂಪ್ರದಾಯ, ಹರಕೆ. ‘ಕೋಣಗಳನ್ನು ವಂಡಾರು ಕಂಬಳ ಗದ್ದೆಯಲ್ಲಿ ಓಡಿಸುತ್ತೇನೆ’ ಎಂದು ಕೃಷಿಕರು ಹರಕೆ ಹೊತ್ತುಕೊಂಡು, ಕಂಬಳದ ದಿನ ಅವುಗಳ ಮೈಗೆ ಎಣ್ಣೆ ಹಚ್ಚಿ, ತಮ್ಮ ಕೈಲಾದಷ್ಟು ಸಿಂಗರಿಸಿ, ವಂಡಾರಿಗೆ ಹೊಡೆದುಕೊಂಡು ಬಂದು, ಕೆಸರು ಗದ್ದೆಯಲ್ಲಿ ಓಡಿಸುತ್ತಾರೆ; ಅವುಗಳ ಓಟವು ಕೆಲವೇ ಹೆಜ್ಜೆಯೂ ಆಗಬಹುದು, ಇಡೀ ಕಂಬಳ ಗದ್ದೆಯುದ್ದಕ್ಕೂ ಓಡಿಸಬಹುದು ಅಥವಾ ಒಂದು ಭಾಗದಲ್ಲಿ ಮಾತ್ರ ಓಡಿಸಲೂಬಹುದು.

ಅಂದರೆ, ಕೋಣಗಳನ್ನು ಓಡಿಸುವ ತಾಕತ್ತು ಇರುವವರು, ಬಲಿಷ್ಠ ಕೋಣಗಳಿದ್ದರೆ ಜಾಸ್ತಿ ದೂರ ಓಡಿಸಬಹುದು; ಇಲ್ಲವಾದರೆ, ಕೆಸರು ಗದ್ದೆಯಲ್ಲಿ ಒಂದಷ್ಟು ದೂರ ನಡೆಸಿದರೂ ಆಯ್ತು, ಹೊತ್ತುಕೊಂಡ ಹರಕೆ ತೀರಿದಂತೆ.ಸಾಮಾನ್ಯವಾಗಿ, ತಾವು ಸಾಕಿದ ಕೋಣಗಳಿಗೆ ಕಾಯಿಲೆ ಬಂದಾಗ, ಅವು ನಿತ್ರಾಣಗೊಂಡರೆ, ‘ಈ ವರ್ಷ ವಂಡಾರು ಕಂಬಳ ಗದ್ದೆಯಲ್ಲಿ ಓಡಿಸುತ್ತೇನೆ, ನಮ್ಮ ಕೋಣಗಳು ಬೇಗನೆ ಹುಷಾರಾಗಲಿ’ ಎಂಬ ಹರಕೆ ಹೊತ್ತುಕೊಳ್ಳುವುದು ಸುತ್ತಲಿನ ಕೃಷಿಕರ ನಂಬಿಕೆ. ವಂಡಾರು ಹಳ್ಳಿಯಿಂದ ಹತ್ತಾರು ಕಿ.ಮೀ. ದೂರದಲ್ಲಿರುವ ಕೃಷಿಕರು ಸಹ ವಂಡಾರಿ ನಲ್ಲಿ ತಮ್ಮ ಕೋಣಗಳನ್ನು ಓಡಿಸುವುದುಂಟು.

ವಂಡಾರು ಕಂಬಳ ಗದ್ದೆಯ ಕುರಿತು ನಾನಾ ನಂಬಿಕೆಗಳು, ದಂತಕಥೆಗಳಿವೆ. ಅವುಗಳ ಪೈಕಿ ಬಹಳ ಕುತೂಹಲಕಾರಿ ನಂಬಿಕೆ ಎಂದರೆ, ಕಂಬಳಗದ್ದೆಯ ಪಕ್ಕದಲ್ಲೇ ಇರುವ ಬಾವಿಯೊಂದರಲ್ಲಿ ‘ನೆಗಳ’ ಎಂಬ ಪ್ರಾಣಿ ಇದೆ ಎಂಬ ನಂಬಿಕೆ. ನೆಗಳ ಎಂದರೆ ಒಂದು ರೀತಿಯ ಮೊಸಳೆ, ಬಹುಶಃ ದೊಡ್ಡ ಗಾತ್ರದ್ದು. ಹಳ್ಳ, ತೊರೆ, ತೋಡುಗಳಲ್ಲಿ ವಾಸಿಸಿದ್ದಿರಬಹುದಾದ ಅದು, ಬಹು ಹಿಂದಿನ ಕಾಲದಲ್ಲಿ, ನೀರು ಕುಡಿಯಲು ಬರುತ್ತಿದ್ದ ಕೋಣಗಳ ಮತ್ತುಜಾನುವಾರುಗಳ ಕಾಲಿಗೆ ಬಾಯಿ ಹಾಕಿ ಹಿಡಿಯು ತ್ತಿತ್ತು. ಅದನ್ನು ವಂಡಾರು ಕಂಬಳ ಗದ್ದೆಯ ಪಕ್ಕದಲ್ಲಿರುವ ಬಾವಿಯಲ್ಲಿ ಬಂಧಿಸಿರಬೇಕು.

ವಂಡಾರು ಕಂಬಳದ ದಿನ ನೆಗಳನಿಗೆ ಆಹಾರವನ್ನು (ಅನ್ನವನ್ನು) ನೀಡುವ, ಪೂಜೆ ಮಾಡುವ ಪದ್ಧತಿ ಇಂದಿಗೂ ಇದೆ. ಕಂಬಳದ ದಿನಕ್ಕೆ ಸರಿಯಾಗಿ ಗದ್ದೆಯನ್ನು ಹದ ಮಾಡಿ, ಎಲ್ಲರೂ ಕೋಣಗಳನ್ನು ಓಡಿಸಿದ ನಂತರ, ಕಂಬಳ ಗದ್ದೆಯ ಯಜಮಾನರ ಕೋಣಗಳು ಓಡುತ್ತವೆ; ಆ ಸಂಬಂಧವಾಗಿ ಭಕ್ತಿಯಿಂದ ಕೋಣಗಳಿಗೆ ಮತ್ತು ಗದ್ದೆಗೆ ಪೂಜೆ ಮಾಡುವು ದುಂಟು. ನಂತರ, ಕಂಬಳಗದ್ದೆಯಲ್ಲಿ ಬತ್ತದ ಕೃಷಿ ನಡೆಯುತ್ತದೆ. ಕಂಬಳ ಗದ್ದೆಯಲ್ಲಿ ಕೋಣಗಳು ಓಡುವುದು, ಅವಶ್ಯವಾಗಿ ಕೃಷಿ ಸಂಬಂಧಿ ಚಟುವಟಿಕೆ ಎಂಬುದು ಇದರಿಂದ ಸ್ಪಷ್ಟ.

ವಂಡಾರು ಕಂಬಳದ ದಿನ ಆ ವಿಶಾಲವಾದ ಗದ್ದೆಯ ಸುತ್ತಲೂ, ಗದ್ದೆಯ ಅಂಚಿನ ಮೇಲೆ ಅಕ್ಕಿಯನ್ನು ಸಾಲಾಗಿ ಚೆಲ್ಲುತ್ತಾ ಹೋಗುವ ಒಂದು ಆಚರಣೆ ಇದೆ; ಇದೊಂದು ರೀತಿಯ ‘ಮುಷ್ಠ’ (ಜನಪದ ವೈದ್ಯ ಪದ್ಧತಿ). ಹಳ್ಳಿಯ ಜನರ ಮೈಮೇಲೆ ಸಿಬ್ಬು (ಚಿಬ್ಬು), ಬಿಳಿ ಕಲೆ ಕಂಡುಬಂದಾಗ, ‘ವಂಡಾರು ಕಂಬಳ ಗದ್ದೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುತ್ತೇನೆ, ಆ ಸಿಬ್ಬು ವಾಸಿಯಾ ಗಲಿ’ ಎಂದು ಹರಕೆ ಹೊರುತ್ತಾರೆ!

ಗದ್ದೆಯಲ್ಲಿದ್ದಿರಬಹುದಾದ ಮೀನುಗಳು, ಜಲಚರಗಳು ಆ ಅಕ್ಕಿಯನ್ನು ತಿಂದಾಗ ಸಿಬ್ಬು ವಾಸಿಯಾಗುತ್ತದೆ ಎಂಬನಂಬಿಕೆ. ಇದಕ್ಕೆ ಹೋಲಿಕೆಯಾಗಿ, ತೀರ್ಥಹಳ್ಳಿಯ ಸನಿಹದ ಚಿಬ್ಬಲುಗುಡ್ಡೆ ಎಂಬಲ್ಲಿ, ತುಂಗಾ ನದಿಯಲ್ಲಿರುವ ಮೀನುಗಳಿಗೆ ಅಕ್ಕಿಯನ್ನು, ಮಂಡಕ್ಕಿಯನ್ನು ತಿನಿಸಿದಾಗ, ಚಿಬ್ಬು ವಾಸಿಯಾದೀತು ಎಂಬ ನಂಬಿಕೆಯೂ ಇದೆ! ಅದಕ್ಕೆಂದೇ ಅಲ್ಲಿನ ಮಡುವಿಗೆ ಚಿಬ್ಬಲು ಗುಡ್ಡೆ ಎಂಬ ಹೆಸರು.

ವಂಡಾರು ಕಂಬಳ ಗದ್ದೆಯು ಹತ್ತಾರು ಎಕರೆ ವಿಶಾಲವಾದ ಗದ್ದೆ. ಇದರ ಜತೆ ಇರುವ ಇನ್ನೊಂದು ಪುರಾತನ ನಂಬಿಕೆ ಎಂದರೆ, ಇದನ್ನು ಬಹು ಹಿಂದೆ ಪಾಂಡವರು (ದೇವತೆಗಳು) ನಿರ್ಮಿಸಿದರು ಎಂಬುದು. ಇದು ಮೂಲತಃ ಕೆರೆಯಾಗಿತ್ತಂತೆ. ನಂತರ ಗದ್ದೆಯನ್ನಾಗಿ ಪರಿವರ್ತಿಸಿದರಂತೆ!

ಮನುಷ್ಯನ ನಾಗರಿಕ ವಿಕಾಸದ ಇತಿಹಾಸದಲ್ಲಿ, ಕೆರೆಗಳನ್ನು ಗದ್ದೆಗಳನ್ನಾಗಿ, ಕೃಷಿಭೂಮಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಬಹು ಪುರಾತನವಾದದ್ದು ಎಂಬ ಹಿನ್ನೆಲೆಯಲ್ಲಿ ಈ ನಂಬಿಕೆಯನ್ನು ಗಮನಿಸಬಹುದು.

ಅಂದ ಹಾಗೆ, ಈ ದಂತಕಥೆಯ ಪ್ರಕಾರ ಪುರಾತನ ಕಾಲದಲ್ಲಿ ಇಷ್ಟು ವಿಶಾಲವಾದ ಗದ್ದೆಯನ್ನು ಅಥವಾ ಕೆರೆಯನ್ನು ಪಾಂಡವರು (ದೇವತೆಗಳು) ಏಕೆ ನಿರ್ಮಿಸಿರಬಹುದು? ಅದಕ್ಕೆ ಸ್ಪಷ್ಟ ಉತ್ತರ ಈಗ ಹೊಳೆಯುತ್ತಿಲ್ಲ; ಆದರೆ, ವಂಡಾರಿನಿಂದ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿರುವ (ಹಕ್ಕಿ ಹಾರಿದಂತೆ) ಕೋಟೇಶ್ವರದಲ್ಲಿ ಇಂದಿಗೂ ಇರುವ ವಿಶಾಲ ಕೆರೆಯನ್ನು ಸಹ, ಅದೇ ದೇವತೆಗಳು ನಿರ್ಮಿಸಿದರು ಎಂಬ ನಂಬಿಕೆಯಿದೆ. ಜತೆಗೆ, ಕೋಟೇಶ್ವರ ಕೆರೆ ಮತ್ತು ವಂಡಾರು ಕಂಬಳಗದ್ದೆಯ ನಡುವೆ, ಒಂದು ಸುರಂಗ ಮಾರ್ಗವನ್ನೂ ಅಂದು ನಿರ್ಮಿಸ ಲಾಗಿದ್ದು, ಅವೆರಡರ ನಡುವೆ ಸಂಪರ್ಕ ಇದೆ ಎಂಬ ನಂಬಿಕೆಯೂ ಇದೆ!

ಇಂಥದೊಂದು ನಂಬಿಕೆಯನ್ನು ಈ ಕಾಲದಲ್ಲಿ ನಂಬಲು ಕಷ್ಟ. ಆದರೆ, ಸುಮಾರು 20 ಕಿ.ಮೀ. ದೂರದ ವ್ಯಾಪ್ತಿ ಯಲ್ಲಿ, ಆ ಕೆರೆಯನ್ನು ನಿರ್ಮಿಸಿದವರು ಸುರಂಗ ಮಾರ್ಗವನ್ನು ಸಹ ನಿರ್ಮಿಸಿದ್ದರು ಎಂಬ ನಂಬಿಕೆಯ ಹಿನ್ನೆಲೆಯೂ ಬಹಳ ಕುತೂಹಲ ಕಾರಿ. ಬಹುಶಃ, ಅವೆರಡೂ ಹಿಂದೆ ಕೆರೆಗಳಾಗಿದ್ದು, ಒಂದು ಕೆರೆಯಿಂದಇನ್ನೊಂದು ಕೆರೆಗೆ ನೀರು ಸಂಚರಿಸುವಂಥ ವ್ಯವಸ್ಥೆ ಮಾಡಿದ್ದರು ಎಂಬ ನಂಬಿಕೆಯೆ? ಸ್ಪಷ್ಟವಿಲ್ಲ. ಕಳೆದ ವಾರ ವಂಡಾರು ಕಂಬಳ ನಡೆಯಿತು. ಅದಾಗಿ ಕೆಲವೇ ದಿನಗಳಲ್ಲಿ ಪ್ರತಿವರ್ಷ ನಡೆಯುವ ಕೋಟೇಶ್ವರ ಹಬ್ಬವು (ಜಾತ್ರೆ),15.12.2024ರಂದು ಸಂಪನ್ನಗೊಳ್ಳಲಿದೆ.

ಕರಾವಳಿಯ ಆ ಭಾಗದಲ್ಲಿ ಕೋಟೇಶ್ವರ ಹಬ್ಬವು ‘ಕೊಡಿ ಹಬ್ಬ’ ಎಂದೇ ಪ್ರಸಿದ್ಧ. ಆ ವರ್ಷ ಮದುವೆಯಾದ ದಂಪತಿಗಳು, ಕಬ್ಬಿನ ಕೊಡಿಯನ್ನು ಹಿಡಿದು, ಕೋಟೇಶ್ವರ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂಬ ಪದ್ಧತಿ ಇದೆ. ಇಂದು ಕೋಟೇಶ್ವರದಲ್ಲಿರುವ ಕೋಟಿಲಿಂಗೇಶ್ವರ ದೇಗುಲದ ಹಬ್ಬ ಅಥವಾ ಜಾತ್ರೆಯು, ಆ ಸುತ್ತಲಿನ ಬೇರೆಲ್ಲಾ ಜಾತ್ರೆ ಗಳಂತೆ ಸಾಮಾನ್ಯೀಕರಣ ಗೊಂಡಿದ್ದು, ಬಹು ವಿಜೃಂಭಣೆಯಿಂದ ನಡೆಯುತ್ತದೆ. ಆದರೆ, ಹಿಂದೆ, ಈ ಜಾತ್ರೆಯು ಅನನ್ಯ ಎನಿಸಿರಲೇಬೇಕು. ಇಲ್ಲಿನ ಕೋಟಿಲಿಂಗೇಶ್ವರ ದೇಗುಲದ ಹೆಸರು ಸಹ ಕುತೂಹಲಕಾರಿ ಎನಿಸಿದ್ದು, 12ನೆಯ ಶತಮಾನದಲ್ಲಿ ದೂರದ ಕಲ್ಯಾಣದಲ್ಲಿ ನಡೆದ ಕ್ರಾಂತಿಗೂ ಈ ಹೆಸರನ್ನು ಜೋಡಿಸುವ ದಂತಕಥೆಗಳಿವೆ.

ಅದೇನೇ ಇದ್ದರೂ, ಕೋಟೇಶ್ವರ ದೇಗುಲದ ಪಕ್ಕದಲ್ಲೇ ಇರುವ ಬೃಹದಾಕಾರದ ಕೆರೆಯು ಇಂದಿಗೂ ಸುಸ್ಥಿತಿಯಲ್ಲಿದೆ. ಕಾಲದಿಂದ ಕಾಲಕ್ಕೆ ಅದನ್ನು ದುರಸ್ತಿಗೊಳಿಸಿದ್ದಾರೆ. ಅದು ದೊಡ್ಡ ಪ್ರಮಾಣದ ನೀರಿನ ಆಶ್ರಯ ಎನಿಸಿದೆ. ಜನಪದನಂಬಿಕೆಗಳಂತೆ, ವಂಡಾರು ಗ್ರಾಮದಲ್ಲಿರುವ ಕಂಬಳಗದ್ದೆ ಸಹ ಇಷ್ಟೇ ವಿಸ್ತೀರ್ಣ ಹೊಂದಿದೆಯಂತೆ; ಇಲ್ಲಿಂದ ಅಲ್ಲಿಗೆ ಪುರಾತನ ಕಾಲದ ಸುರಂಗವಿದೆಯಂತೆ!

ಇಂಥ ನಂಬಿಕೆಗಳು ಬಹಳ ಕೌತುಕ ಹುಟ್ಟಿಸುತ್ತವೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ, ಈ ಸುರಂಗದ ನಂಬಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಮ್ಮ ಬಳಿ ಸೂಕ್ತ ವೈಜ್ಞಾನಿಕ ಸಾಧನಗಳಿವೆ. ಯಾರಾದರೂ ಕುತೂಹಲಿಗಳು ಅದನ್ನು ಪತ್ತೆ ಹಚ್ಚುವ ಸಾಹಸ ಮಾಡಬೇಕಷ್ಟೇ!

ಇದನ್ನೂ ಓದಿ: Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ