ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಸಣ್ಣ ದೇಹ, ಅಗಾಧ ವೇಗ: ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

ಹಮ್ಮಿಂಗ್ ಬರ್ಡ್‌ಗಳು ಸಾಮಾನ್ಯವಾಗಿ ಕೇವಲ ಎಂಟರಿಂದ ಇಪ್ಪತ್ತು ಗ್ರಾಮ್ ತೂಕ ವಿರುತ್ತವೆ. ಅಂದರೆ, ನಮ್ಮ ಕೈಯಲ್ಲಿರುವ ಹತ್ತು ರುಪಾಯಿ ನಾಣ್ಯಕ್ಕಿಂತಲೂ ಇವು ಹಗುರ! ಆದರೆ, ಈ ಪುಟ್ಟ ದೇಹದೊಳಗೆ ಒಬ್ಬ ದೀರ್ಘಾವಧಿ ಓಟಗಾರನಿಗೆ ಇರಬೇಕಾದ ಸರ್ವ ಸಾಮರ್ಥ್ಯವೂ ಅಡಗಿದೆ. ಇವುಗಳ ಹೃದಯ ಬಡಿತ ಮತ್ತು ಶಕ್ತಿಯ ವ್ಯಯದ ಪ್ರಮಾಣವು ಭೂಮಿಯ ಮೇಲಿನ ಯಾವುದೇ ಪ್ರಾಣಿಗಿಂತಲೂ ಹೆಚ್ಚು.

ವಿಜ್ಞಾನವೇ ಬೆರಗಾಗುವ ಹಮ್ಮಿಂಗ್‌ ಬರ್ಡ್‌ ಲೋಕ

-

ಇದೇ ಅಂತರಂಗ ಸುದ್ದಿ

ಒಂದು ಖಾಸಗಿ ವಿಮಾನ ಹಾರಲು ರನ್‌ವೇ, ಪೈಲಟ್, ಇಂಧನ ಮತ್ತು ಸಂಕೀರ್ಣ ತಂತ್ರಜ್ಞಾನ ಬೇಕು. ಆದರೆ ಹಮ್ಮಿಂಗ್ ಬರ್ಡ್ ಕೇವಲ ತನ್ನ ಸಹಜ ಪ್ರವೃತ್ತಿ ಮತ್ತು ವಿಕಸನಗೊಂಡ ದೇಹದ ರಚನೆಯನ್ನು ನಂಬಿ ಹಾರುತ್ತದೆ. ಇವುಗಳಿಗೆ ಯಾವುದೇ ನಕ್ಷೆ ಅಥವಾ ಜಿಪಿಎಸ್ ಇಲ್ಲದಿದ್ದರೂ, ಸಾವಿರಾರು ಮೈಲಿಗಳ ದಾರಿಯನ್ನು ಚೂರೂ ದಾರಿ ತಪ್ಪದೇ ಕ್ರಮಿಸ ಬಲ್ಲವು. ಇವುಗಳ ಮೆಟಬಾಲಿಸಂ ಎಷ್ಟು ವೇಗ ವಾಗಿದೆಯೆಂದರೆ, ಅವು ನಿರಂತರವಾಗಿ ಶಕ್ತಿಯನ್ನು ಉತ್ಪಾದಿಸುತ್ತಲೇ ಇರುತ್ತವೆ.

ಪ್ರಕೃತಿಯ ಸೃಷ್ಟಿಯಲ್ಲಿ ಗಾತ್ರಕ್ಕೂ ಶಕ್ತಿಗೂ ಸಂಬಂಧವಿಲ್ಲ ಎಂಬುದಕ್ಕೆ ಹಮ್ಮಿಂಗ್ ಬರ್ಡ್ (ಮಧುಪಕ್ಕಿ) ಅತ್ಯುತ್ತಮ ಉದಾಹರಣೆ. ಒಂದು ಚಾಕಲೇಟ್‌ನಷ್ಟು ತೂಕವಿರುವ ಈ ಪುಟ್ಟ ಹಕ್ಕಿ, ಸಾವಿರಾರು ಕಿ.ಮೀ. ಹಾರಾಟ ನಡೆಸುವ ಸಾಹಸಗಾಥೆಯನ್ನು ಕೇಳಿದರೆ ಅಚ್ಚರಿ ಯಾಗುವುದು ಸಹಜ. ಹಮ್ಮಿಂಗ್ ಬರ್ಡ್‌ಗಳು ಸಾಮಾನ್ಯವಾಗಿ ಕೇವಲ ಎಂಟರಿಂದ ಇಪ್ಪತ್ತು ಗ್ರಾಮ್ ತೂಕ ವಿರುತ್ತವೆ. ಅಂದರೆ, ನಮ್ಮ ಕೈಯಲ್ಲಿರುವ ಹತ್ತು ರುಪಾಯಿ ನಾಣ್ಯಕ್ಕಿಂತಲೂ ಇವು ಹಗುರ!

ಆದರೆ, ಈ ಪುಟ್ಟ ದೇಹದೊಳಗೆ ಒಬ್ಬ ದೀರ್ಘಾವಧಿ ಓಟಗಾರನಿಗೆ ಇರಬೇಕಾದ ಸರ್ವ ಸಾಮರ್ಥ್ಯವೂ ಅಡಗಿದೆ. ಇವುಗಳ ಹೃದಯ ಬಡಿತ ಮತ್ತು ಶಕ್ತಿಯ ವ್ಯಯದ ಪ್ರಮಾಣವು ಭೂಮಿಯ ಮೇಲಿನ ಯಾವುದೇ ಪ್ರಾಣಿಗಿಂತಲೂ ಹೆಚ್ಚು.

ಹಮ್ಮಿಂಗ್ ಬರ್ಡ್‌ಗಳ ವಲಸೆಯ ಹಾದಿಯಲ್ಲಿ ಅತ್ಯಂತ ಕಠಿಣವಾದ ಹಂತವೆಂದರೆ ಮೆಕ್ಸಿಕೋ ಕೊಲ್ಲಿಯನ್ನು (Gulf of Mexico) ದಾಟುವ ಅದರ ಪ್ರಯತ್ನ. ಸುಮಾರು 800 ಕಿ.ಮೀ.ಗಳಿಗೂ ಅಧಿಕ ವಿಸ್ತಾರವಿರುವ ಈ ಸಮುದ್ರದ ಮೇಲೆ ಹಾರುವಾಗ ವಿಶ್ರಾಂತಿ ಪಡೆಯಲು ಅವುಗಳಿಗೆ ಎಲ್ಲಿಯೂ ಜಾಗವಿರುವುದಿಲ್ಲ.

ಗಾಳಿ ಮತ್ತು ಹವಾಮಾನದ ಏರುಪೇರುಗಳನ್ನು ಎದುರಿಸುತ್ತಾ, ಈ ಹಕ್ಕಿಗಳು ಸುಮಾರು 20 ಗಂಟೆಗಳ ಕಾಲ ಸತತವಾಗಿ ಹಾರುತ್ತವೆ. ಹಾರಾಟದ ಸಮಯದಲ್ಲಿ ಇವು ರೆಕ್ಕೆಗಳನ್ನು ಸೆಕೆಂಡಿಗೆ ಸುಮಾರು 80 ಬಾರಿ ಬಡಿಯುತ್ತವೆ.

ಇದನ್ನೂ ಓದಿ: Vishweshwar Bhat Column: ಆಗಾಗ ಮಾತಿನಲ್ಲಿ ಇಣುಕುವ ರೆಡ್‌ ಹೆರಿಂಗ್‌ ಮತ್ತು ಸ್ಟ್ರಾಮ್ಯಾನ್‌ ಫ್ಯಾಲಸಿ !

ಇದು ವಿಜ್ಞಾನಕ್ಕೂ ನಿಲುಕದ ಅದ್ಭುತ ಸಂಗತಿ. ಒಂದು ಸಣ್ಣ ವಿಮಾನವು ಸುದೀರ್ಘ ಹಾರಾಟ ನಡೆಸಲು ಇಂಧನ ಬೇಕು. ಹಮ್ಮಿಂಗ್ ಬರ್ಡ್ ಕೂಡ ತನ್ನ ಸುದೀರ್ಘ ಪ್ರಯಾಣ ಕ್ಕೆ ಮೊದಲು ತಯಾರಿಯನ್ನು ನಡೆಸುತ್ತದೆ.

ವಲಸೆ ಆರಂಭಿಸುವ ಮುನ್ನ ಈ ಹಕ್ಕಿಗಳು ಹೂವಿನ ಮಕರಂದ ಮತ್ತು ಸಣ್ಣ ಕೀಟಗಳನ್ನು ಅತಿಯಾಗಿ ಸೇವಿಸುತ್ತವೆ. ಅಂದರೆ ತಮ್ಮ ದೇಹದ ತೂಕವನ್ನು ಇವು ಸುಮಾರು ಎರಡು ಪಟ್ಟು ಹೆಚ್ಚಿಸಿಕೊಳ್ಳುತ್ತವೆ. ಹೀಗೆ ಸಂಗ್ರಹವಾದ ಕೊಬ್ಬು (Fat), ಅವು ಸಮುದ್ರ ದಾಟುವಾಗ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ.

ಒಂದು ಖಾಸಗಿ ವಿಮಾನ ಹಾರಲು ರನ್‌ವೇ, ಪೈಲಟ್, ಇಂಧನ ಮತ್ತು ಸಂಕೀರ್ಣ ತಂತ್ರಜ್ಞಾನ ಬೇಕು. ಆದರೆ ಹಮ್ಮಿಂಗ್ ಬರ್ಡ್ ಕೇವಲ ತನ್ನ ಸಹಜ ಪ್ರವೃತ್ತಿ ಮತ್ತು ವಿಕಸನಗೊಂಡ ದೇಹದ ರಚನೆಯನ್ನು ನಂಬಿ ಹಾರುತ್ತದೆ.

ಇವುಗಳಿಗೆ ಯಾವುದೇ ನಕ್ಷೆ ಅಥವಾ ಜಿಪಿಎಸ್ ಇಲ್ಲದಿದ್ದರೂ, ಸಾವಿರಾರು ಮೈಲಿಗಳ ದಾರಿಯನ್ನು ಚೂರೂ ದಾರಿ ತಪ್ಪದೇ ಕ್ರಮಿಸಬಲ್ಲವು. ಇವುಗಳ ಮೆಟಬಾಲಿಸಂ ಎಷ್ಟು ವೇಗವಾಗಿದೆಯೆಂದರೆ, ಅವು ನಿರಂತರವಾಗಿ ಶಕ್ತಿಯನ್ನು ಉತ್ಪಾದಿಸುತ್ತಲೇ ಇರುತ್ತವೆ.

humming bird R

ವಿಜ್ಞಾನಿಗಳು ಇಂದಿಗೂ ಹಮ್ಮಿಂಗ್ ಬರ್ಡ್‌ನ ಸಾಮರ್ಥ್ಯದ ಬಗ್ಗೆ ಸಂಶೋಧನೆ ನಡೆಸು ತ್ತಲೇ ಇದ್ದಾರೆ. ಇಷ್ಟು ಸಣ್ಣ ಹೃದಯವು ಅಷ್ಟು ದೊಡ್ಡ ಪ್ರಯಾಣವನ್ನು ಹೇಗೆ ಸಂಭಾಳಿಸುತ್ತದೆ? ದಾರಿ ತಪ್ಪದೇ ಅದೇ ಜಾಗಕ್ಕೆ ಪ್ರತಿ ವರ್ಷ ಹೇಗೆ ಮರಳುತ್ತದೆ? ಎಂಬುದು ಕುತೂಹಲಕಾರಿ ವಿಷಯ. ಈ ಹಕ್ಕಿಗಳ ಹಾರಾಟದ ವಿನ್ಯಾಸವನ್ನು ನೋಡಿ ವಿಮಾನಗಳ ವಿನ್ಯಾಸದಲ್ಲಿ ಬದಲಾವಣೆ ತರುವ ಬಗ್ಗೆಯೂ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ.

ಹಮ್ಮಿಂಗ್ ಬರ್ಡ್ ಜೀವನಶೈಲಿಯನ್ನು ಆಳವಾಗಿ ಅಭ್ಯಾಸ ಮಾಡಿದಾಗ, ಇವು ಕೇವಲ ಹಕ್ಕಿಗಳಲ್ಲ, ಬದಲಿಗೆ ಪ್ರಕೃತಿಯ ‘ಹೈ-ಟೆಕ್’ ವಿಮಾನಗಳು ಎಂಬುದು ಸ್ಪಷ್ಟವಾಗುತ್ತದೆ. ಹಮ್ಮಿಂಗ್ ಬರ್ಡ್‌ಗಳು ತಮ್ಮ ಗಾತ್ರಕ್ಕೆ ಹೋಲಿಸಿದರೆ ಜಗತ್ತಿನ ಅತಿ ಉದ್ದದ ಪ್ರಯಾಣ ಮಾಡುವ ಜೀವಿಗಳಲ್ಲಿ ಒಂದು. ಇವುಗಳ ವಲಸೆಯು ಕೇವಲ ಸ್ಥಳ ಬದಲಾವಣೆಯಲ್ಲ, ಅದು ಬದುಕುಳಿಯುವಿಕೆಗಾಗಿ ಮಾಡುವ ಒಂದು ಸಾಹಸ.

ಉತ್ತರ ಅಮೆರಿಕದಂಥ ಪ್ರದೇಶಗಳಲ್ಲಿ ಚಳಿಗಾಲ ಆರಂಭವಾದಾಗ ಹೂವುಗಳು ಬಾಡಿ ಹೋಗುತ್ತವೆ ಮತ್ತು ಕೀಟಗಳ ಸಂಖ್ಯೆ ಕಡಿಮೆಯಾಗುತ್ತದೆ. ಹಮ್ಮಿಂಗ್ ಬರ್ಡ್‌ಗಳಿಗೆ ಬದುಕಲು ನಿರಂತರ ಆಹಾರದ ಅವಶ್ಯಕತೆ ಇರುವುದರಿಂದ, ಅವು ಬೆಚ್ಚಗಿನ ವಾತಾವರಣ ವಿರುವ ದಕ್ಷಿಣದತ್ತ (ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ) ಮುಖ ಮಾಡುತ್ತವೆ.

ರೂಬಿ-ಥ್ರೋಟೆಡ್ ಹಮ್ಮಿಂಗ್ ಬರ್ಡ್ (Ruby-throated Hummingbird) ಪೂರ್ವ ಉತ್ತರ ಅಮೆರಿಕದಿಂದ ಮೆಕ್ಸಿಕೋ ಕೊಲ್ಲಿಯವರೆಗೆ ಪ್ರಯಾಣಿಸುತ್ತವೆ. ಇವುಗಳ ದಾರಿಯಲ್ಲಿ ಯಾವುದೇ ಮರಗಿಡಗಳಿಲ್ಲದ ಸುಮಾರು 800 ಕಿಲೋಮೀಟರ್ʼಗಳ ವಿಶಾಲವಾದ ಸಮುದ್ರ ವಿದೆ. ಈ ದೂರವನ್ನು ಅವು ಒಂದೇ ಸಮನೆ ಹಾರುತ್ತಾ ದಾಟುತ್ತವೆ. ರೂಫಸ್ ಹಮ್ಮಿಂಗ್ ಬರ್ಡ್ (Rufus Hummingbird) ಅಲಾಸ್ಕಾದಿಂದ ಮೆಕ್ಸಿಕೋವರೆಗೆ ಸುಮಾರು 6000 ಕಿ.ಮೀ.ಗಳಿಗಿಂತ ಹೆಚ್ಚು ದೂರ ಪ್ರಯಾಣಿಸುತ್ತವೆ. ಇಷ್ಟು ಚಿಕ್ಕ ಹಕ್ಕಿಗೆ ಇದು ಜಗತ್ತಿನ ಅರ್ಧದಷ್ಟು ಸುತ್ತು ಬಂದಂತೆ!

ಇವುಗಳಿಗೆ ಜಿಪಿಎಸ್ ಇಲ್ಲದಿದ್ದರೂ, ಪ್ರತಿ ವರ್ಷ ಹಳೆಯ ಜಾಗವನ್ನೇ ಹುಡುಕಿಕೊಂಡು ಬರುತ್ತವೆ. ಸಂಶೋಧನೆಯ ಪ್ರಕಾರ, ಇವು ಭೂಮಿಯ ಕಾಂತೀಯ ಕ್ಷೇತ್ರ (Magnetic Field ), ಸೂರ್ಯನ ಸ್ಥಾನ ಮತ್ತು ತಮ್ಮ ಅದ್ಭುತ ನೆನಪಿನ ಶಕ್ತಿಯನ್ನು ಬಳಸಿ ದಾರಿ ಗುರುತಿಸು ತ್ತವೆ. ಕಳೆದ ವರ್ಷ ಈ ದಿನ ನಾವು ಯಾವ ಹೋಟೆಲಿನಲ್ಲಿ ಆಹಾರ ಸೇವಿಸಿದ್ದೆವು ಎಂಬುದು ನಮಗೆ ನೆನಪಿರುವುದಿಲ್ಲ. ಆದರೆ ಅವು ಕಳೆದ ವರ್ಷ ಯಾವ ಹೂವಿನ ಗಿಡದಲ್ಲಿ ಮಕರಂದ ಹೀರಿದ್ದೆವು ಎಂಬುದನ್ನು ಸಹ ನೆನಪಿಟ್ಟುಕೊಳ್ಳುತ್ತವೆಯಂತೆ.

ಹಮ್ಮಿಂಗ್ ಬರ್ಡ್‌ಗಳ ಆಹಾರದ ಶೇ. 90ರಷ್ಟು ಭಾಗ ಹೂವಿನ ಮಕರಂದದಿಂದ ಕೂಡಿರು ತ್ತದೆ. ಮಕರಂದವು ಸಕ್ಕರೆಯ ಅಂಶದಿಂದ ತುಂಬಿದ್ದು, ಇವುಗಳ ವೇಗದ ಹಾರಾಟಕ್ಕೆ ಬೇಕಾದ ‘ತ್ವರಿತ ಶಕ್ತಿ’ಯನ್ನು ನೀಡುತ್ತದೆ. ಒಂದು ಹಮ್ಮಿಂಗ್ ಬರ್ಡ್ ಪ್ರತಿದಿನ ತನ್ನ ದೇಹದ ತೂಕಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು ಮಕರಂದವನ್ನು ಸೇವಿಸುತ್ತದೆ. ಮನುಷ್ಯರಿಗೆ ಹೋಲಿಸಿದರೆ, ನಾವು ದಿನಕ್ಕೆ ಐದಾರು ಕೆ.ಜಿ. ಆಹಾರ ಸೇವಿಸಿದಂತೆ!

ಇವುಗಳಿಗೆ ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳೆಂದರೆ ಪಂಚಪ್ರಾಣ. ದೀರ್ಘವಾದ ಕೊಳವೆಯಂಥ ಹೂವುಗಳನ್ನು ಇವು ಸುಲಭವಾಗಿ ಹೀರುತ್ತವೆ. ಕೇವಲ ಸಕ್ಕರೆಯಿಂದಲೇ ಜೀವಿಸಲು ಸಾಧ್ಯವಿಲ್ಲ. ಸ್ನಾಯುಗಳ ಬೆಳವಣಿಗೆ ಮತ್ತು ಮೊಟ್ಟೆ ಇಡಲು ಇವುಗಳಿಗೆ ಪ್ರೋಟೀನ್ ಬೇಕು. ಇದಕ್ಕಾಗಿ ಇವು ಸಣ್ಣ ಜೇಡಗಳು, ಸೊಳ್ಳೆಗಳು ಮತ್ತು ಹಾರುವ ಕೀಟ ಗಳನ್ನು ತಿನ್ನುತ್ತವೆ. ಗಾಳಿಯಲ್ಲಿ ಹಾರುತ್ತಿರುವಾಗಲೇ ಕೀಟಗಳನ್ನು ಹಿಡಿಯುವ ಕಲೆ ಇವುಗಳಿಗೆ ಸಿದ್ಧಿಸಿದೆ.

ಇವುಗಳ ನಾಲಿಗೆಯು ದಾರದ ಎಳೆಯಂತೆ ಇರುತ್ತದೆ ಮತ್ತು ತುದಿಯಲ್ಲಿ ಎರಡು ಭಾಗ ಗಳಾಗಿ ಸೀಳಿರುತ್ತದೆ. ಮಕರಂದವನ್ನು ಹೀರುವಾಗ ಇವುಗಳ ನಾಲಿಗೆಯು ಸೆಕೆಂಡಿಗೆ ಸುಮಾರು 15-20 ಬಾರಿ ಹೂವಿನೊಳಗೆ ಹೋಗಿ ಬರುತ್ತದೆ. ಇದು ಪೈಪ್ ಮೂಲಕ ನೀರು ಕುಡಿದಂತೆ ಇರದೇ, ಒಂದು ಸ್ಪಂಜು ದ್ರವವನ್ನು ಹೀರಿದಂತೆ ಕೆಲಸ ಮಾಡುತ್ತದೆ.

ಇಷ್ಟು ವೇಗವಾಗಿ ಶಕ್ತಿಯನ್ನು ವ್ಯಯಿಸುವ ಈ ಹಕ್ಕಿಗಳಿಗೆ ರಾತ್ರಿಯ ವೇಳೆ ಆಹಾರವಿಲ್ಲದೇ ಬದುಕುವುದು ಕಷ್ಟ. ಹೀಗಾಗಿ ಇವು ಒಂದು ಅದ್ಭುತ ತಂತ್ರವನ್ನು ಬಳಸುತ್ತವೆ, ಅದಕ್ಕೆ ‘ಟಾರ್ಪರ್’ ಎಂದು ಹೆಸರು. ರಾತ್ರಿಯ ಸಮಯದಲ್ಲಿ ಇವು ತಮ್ಮ ದೇಹದ ಉಷ್ಣತೆಯನ್ನು ಮತ್ತು ಹೃದಯ ಬಡಿತವನ್ನು ತೀವ್ರವಾಗಿ ಕಡಿಮೆ ಮಾಡಿಕೊಳ್ಳುತ್ತವೆ.

ಹಾರುವಾಗ ನಿಮಿಷಕ್ಕೆ 1200ರಷ್ಟಿರುವ ಹೃದಯ ಬಡಿತವು, ಟಾರ್ಪರ್ ಸ್ಥಿತಿಯಲ್ಲಿ ನಿಮಿಷಕ್ಕೆ 50ಕ್ಕೆ ಇಳಿಯುತ್ತದೆ. ಇದು ಸತ್ತಂತೆ ಕಾಣುವ ಒಂದು ಗಾಢನಿದ್ರೆಯ ಸ್ಥಿತಿ. ಬೆಳಗ್ಗೆ ಸೂರ್ಯನ ಬಿಸಿಲು ತಾಕಿದ ತಕ್ಷಣ ಇವು ಮತ್ತೆ ಚೈತನ್ಯ ಪಡೆದು ಎದ್ದೇಳುತ್ತವೆ.

ಹಮ್ಮಿಂಗ್ ಬರ್ಡ್‌ಗಳು ಹಾರುವ ರೀತಿ ಪಕ್ಷಿ ಲೋಕದ ವಿಶಿಷ್ಟ. ಇವು ಕೇವಲ ಮುಂದಕ್ಕೆ ಮಾತ್ರವಲ್ಲ, ಹಿಂದಕ್ಕೆ, ಪಕ್ಕಕ್ಕೆ ಮತ್ತು ತಲೆಕೆಳಗಾಗಿಯೂ ಹಾರಬಲ್ಲವು. ಹೆಲಿಕಾಪ್ಟರ್‌ ನಂತೆ ಒಂದೇ ಕಡೆ ಸ್ಥಿರವಾಗಿ ಗಾಳಿಯಲ್ಲಿ ನಿಲ್ಲುವ (Hovering) ಸಾಮರ್ಥ್ಯ ಇವುಗಳಿಗಿದೆ.

ಬೇರೆ ಹಕ್ಕಿಗಳು ರೆಕ್ಕೆಯನ್ನು ಕೆಳಕ್ಕೆ ಬಡಿದಾಗ ಮಾತ್ರ ಶಕ್ತಿ ಪಡೆಯುತ್ತವೆ, ಆದರೆ ಹಮ್ಮಿಂಗ್ ಬರ್ಡ್‌ಗಳು ರೆಕ್ಕೆಯನ್ನು ಮೇಲೆ ಮತ್ತು ಕೆಳಗೆ ಎರಡೂ ಬಾರಿ ಬಡಿದಾಗಲೂ ಶಕ್ತಿಯನ್ನು ಪಡೆಯುತ್ತವೆ. ಇವುಗಳ ರೆಕ್ಕೆಗಳು ‘8’ ಆಕಾರದ ಮಾದರಿಯಲ್ಲಿ ಚಲಿಸುತ್ತವೆ.

ಹಮ್ಮಿಂಗ್ ಬರ್ಡ್‌ಗಳ ಜೀವನವು ನಮಗೆ ಏನನ್ನು ಕಲಿಸುತ್ತದೆ? ಮೊದಲಿಗೆ, ಸವಾಲು ಗಳನ್ನು ಎದುರಿಸುವ ಹಠವನ್ನು ಕಲಿಸುತ್ತದೆ. ಈ ಹಕ್ಕಿ ನಮಗೆ ಇನ್ನೊಂದು ದೊಡ್ಡ ಪಾಠ ವನ್ನು ಕಲಿಸುತ್ತದೆ- ಸಾಮರ್ಥ್ಯವು ಗಾತ್ರದಲ್ಲಿಲ್ಲ, ಸಂಕಲ್ಪದಲ್ಲಿದೆ. ಇಡೀ ಜಗತ್ತು ಹಗುರ ವಾಗಿ ಕಾಣುವ ಈ ಹಕ್ಕಿ, ಪ್ರಕೃತಿಯ ಅತಿ ಕಠಿಣ ಪ್ರಯಾಣವನ್ನು ಪೂರೈಸುತ್ತದೆ.

ಒಂದು ಸಣ್ಣ ಗಾಳಿಗೂ ಹಾರಿ ಹೋಗಬಹುದಾದ ಇಷ್ಟು ನಾಜೂಕಾದ ಹಕ್ಕಿ, ಸಾವಿರಾರು ಮೈಲಿಗಳ ಸಮುದ್ರವನ್ನು ದಾಟುತ್ತದೆ ಎಂದರೆ ಅದಕ್ಕೆ ಕಾರಣ ಅದರ ಅದಮ್ಯ ಇಚ್ಛಾಶಕ್ತಿ. ಇವುಗಳ ಆಹಾರ ಪದ್ಧತಿ ಮತ್ತು ವಲಸೆಯ ಕ್ರಮವು ಪರಿಸರ ವ್ಯವಸ್ಥೆಯಲ್ಲಿ ಪರಾಗ ಸ್ಪರ್ಶಕ್ಕೂ ಬಹಳ ಮುಖ್ಯವಾಗಿದೆ. ಈ ಸುಂದರ, ಪುಟ್ಟ ಹಕ್ಕಿ ಪರಿಸರ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯಿಂದಾಗಿ ಅಪಾಯ ಎದುರಿಸುತ್ತಿದೆ. ಇದನ್ನು ಸಂರಕ್ಷಿಸುವುದು ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳಲು ಅತಿ ಅವಶ್ಯಕ.

ತಪ್ಪು ಮಾಡದಿದ್ದರೂ ಸೋಲಬಹುದು!

ನೋಕಿಯಾ ಸಂಸ್ಥೆಯ ಸಿಇಒ ಸ್ಟೀಫನ್ ಎಲೋಪ್ ಅವರು ಮೈಕ್ರೋಸಾಫ್ಟ್ ಕಂಪನಿಯು ನೋಕಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯ ಕೊನೆಯಲ್ಲಿ, ಪತ್ರಿಕಾಗೋಷ್ಠಿ ಯಲ್ಲಿ ಕಣ್ಣೀರು ಹಾಕುತ್ತಾ ಹೇಳಿದ ಆ ಮಾತು, ಇಂದಿಗೂ ಕಾರ್ಪೊರೇಟ್ ಜಗತ್ತಿನಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಕಾರ್ಪೊರೇಟ್ ಲೋಕ ಈ ಮಾತನ್ನು ಮರೆಯುವುದು ಸಾಧ್ಯವೇ ಇಲ್ಲ.

“ನಾವು ತಪ್ಪೇನೂ ಮಾಡಲಿಲ್ಲ... ಆದರೆ ಹೇಗೋ, ನಾವು ಸೋತೆವು" (We didn't do anything wrong but somehow, we lost). ಈ ಮಾತು ಕೇವಲ ಒಂದು ಕಂಪನಿ ತನ್ನ ಸೋಲನ್ನು ಒಪ್ಪಿಕೊಂಡ ಹೇಳಿಕೆಯಲ್ಲ. ಇದು ಇಡೀ ಜಗತ್ತಿಗೆ, ಪ್ರತಿಯೊಬ್ಬ ಉದ್ಯಮಿಗೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ನೀಡಿದ ಗಂಭೀರ ಎಚ್ಚರಿಕೆ.

ನೋಕಿಯಾದ ಪತನವು ಸೋಮಾರಿತನದಿಂದಾಗಲಿ ಅಥವಾ ಪ್ರತಿಭೆಯ ಕೊರತೆಯಿಂದಾ ಗಲಿ ಆಗಿದ್ದಲ್ಲ. ಅದು ಪತನವಾಗಿದ್ದು, ಜಗತ್ತು ತನಗಿಂತ ವೇಗವಾಗಿ ಬದಲಾದಾಗ, ಆ ಬದಲಾವಣೆಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳದ ಕಾರಣಕ್ಕಾಗಿ. 1990 ಮತ್ತು 2000ರ ದಶಕದಲ್ಲಿ ಮೊಬೈಲ್ ಫೋನ್ ಎಂದರೆ ಅದು ‘ನೋಕಿಯಾ’ ಮಾತ್ರವಾಗಿತ್ತು.

ಜಗತ್ತಿನ ಅತಿ ದೊಡ್ಡ ಮೊಬೈಲ್ ಕಂಪನಿ ಅದಾಗಿತ್ತು. ಭಾರತವನ್ನೂ ಒಳಗೊಂಡಂತೆ ಪ್ರಪಂಚದಾದ್ಯಂತ ಪ್ರತಿಯೊಬ್ಬರ ಜೇಬಿನಲ್ಲೂ ನೋಕಿಯಾ ಫೋನ್ ಇರುತ್ತಿತ್ತು. ಅದರ ಬ್ಯಾಟರಿ ಬಾಳಿಕೆ, ಕೆಳಗೆ ಬಿದ್ದರೂ ಒಡೆಯದ ಗಟ್ಟಿತನ ಮತ್ತು ಜನಪ್ರಿಯ ‘ಸ್ನೇಕ್ ಗೇಮ್’ ಎಲ್ಲರ ಮನ ಗೆದ್ದಿತ್ತು. ಅಷ್ಟಕ್ಕೂ ನೋಕಿಯಾ ಕೇವಲ ಒಂದು ಫೋನ್ ಆಗಿರಲಿಲ್ಲ,

ಅದೊಂದು ಅಂತಸ್ತು ಮತ್ತು ವಿಶ್ವಾಸದ ಸಂಕೇತವಾಗಿತ್ತು. ಆ ಸಮಯದಲ್ಲಿ ನೋಕಿಯಾ ಸಂಸ್ಥೆಯ ಬಳಿ ಹಣವಿತ್ತು, ಜಗತ್ತಿನ ಶ್ರೇಷ್ಠ ಎಂಜಿನಿಯರ್ʼಗಳಿದ್ದರು ಮತ್ತು ಮಾರುಕಟ್ಟೆ ಯ ಮೇಲೆ ಏಕಚಕ್ರಾಧಿಪತ್ಯವಿತ್ತು. ಅವರು ತಮ್ಮ ಕ್ಷೇತ್ರದಲ್ಲಿ ‘ರಾಜ’ರಾಗಿದ್ದರು. ಆದರೆ ಅದೇ ಯಶಸ್ಸು ಅವರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿತ್ತು.

2007ರಲ್ಲಿ ಸ್ಟೀವ್ ಜಾಬ್ಸ್ ‘ಐಫೋನ್’ ಅನ್ನು ಬಿಡುಗಡೆ ಮಾಡಿದಾಗ ಜಗತ್ತು ಬದಲಾ ಯಿತು. ಅದು ಕೇವಲ ಫೋನ್ ಆಗಿರಲಿಲ್ಲ. ಅದೊಂದು ಕಂಪ್ಯೂಟರ್ ಆಗಿತ್ತು. ಟಚ್ ಸ್ಕ್ರೀನ್, ಇಂಟರ್ನೆಟ್ ಮತ್ತು ಆಪ್‌ಗಳು ಮೊಬೈಲ್ ಪ್ರಪಂಚದ ಭವಿಷ್ಯ ಎಂದು ಆಪಲ್ ಸಾರಿ ಹೇಳಿತು. ಸ್ವಲ್ಪ ಸಮಯದ ನಂತರ ಗೂಗಲ್ ‘ಆಂಡ್ರಾಯ್ಡ್’ ಮೂಲಕ ಸ್ಮಾರ್ಟ್‌ʼ ಫೋನ್ ಕ್ರಾಂತಿಗೆ ಕೈಜೋಡಿಸಿತು.ಆದರೆ ನೋಕಿಯಾ ಏನು ಮಾಡಿತು?‌ ನೋಕಿಯಾ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

‘ಜನರು ಕೀಪ್ಯಾಡ್ ಫೋನ್‌ಗಳನ್ನೇ ಇಷ್ಟಪಡುತ್ತಾರೆ, ಟಚ್ ಸ್ಕ್ರೀನ್ ಫೋನ್‌ಗಳು ಬಿದ್ದು ಹೋದರೆ ಒಡೆಯುತ್ತವೆ, ಬ್ಯಾಟರಿ ನಿಲ್ಲುವುದಿಲ್ಲ’ ಎಂಬ ಹಳೆಯ ನಂಬಿಕೆಯ ನೋಕಿಯಾ ಮುಂದುವರಿಯಿತು. ಕಂಪನಿಯವರು ತಮ್ಮ ಹಳೆಯ ಸಾಫ್ಟ್‌ʼವೇರ್ ಆದ ‘ಸಿಂಬಿಯಾನ್’ ಅನ್ನೇ ನೆಚ್ಚಿಕೊಂಡರು.

ಆಂಡ್ರಾಯ್ಡ್‌ ಜತೆ ಕೈಜೋಡಿಸಲು ನಿರಾಕರಿಸಿದರು. ಯಾವಾಗ ಅವರು ಎಚ್ಚೆತ್ತು ಕೊಂಡರೋ, ಆಗಲೇ ಕಾಲ ಮಿಂಚಿಹೋಗಿತ್ತು. ಸ್ಯಾಮ್ಸಂಗ್ ಮತ್ತು ಆಪಲ್ ಮಾರುಕಟ್ಟೆ ಯನ್ನು ಆವರಿಸಿಕೊಂಡುಬಿಟ್ಟಿದ್ದವು. ನೋಕಿಯಾ ಸಿಇಒ ಹೇಳಿದ “ನಾವು ತಪ್ಪೇನೂ ಮಾಡಲಿಲ್ಲ" ಎಂಬ ಮಾತು ತಾಂತ್ರಿಕವಾಗಿ ನಿಜವಿರಬಹುದು. ಅವರು ಗುಣಮಟ್ಟದ ಫೋನ್‌ಗಳನ್ನು ತಯಾರಿಸುವುದನ್ನು ನಿಲ್ಲಿಸಿರಲಿಲ್ಲ.

ಅವರು ತಮ್ಮ ಉದ್ಯೋಗಿಗಳಿಗೆ ಸಂಬಳ ಕೊಡುವುದನ್ನು ನಿಲ್ಲಿಸಿರಲಿಲ್ಲ. ಅವರು ತಮ್ಮ ಹಳೆಯ ಬಿಸಿನೆಸ್ ಪ್ಲಾನ್ ಅನ್ನು ಸರಿಯಾಗಿಯೇ ಪಾಲಿಸುತ್ತಿದ್ದರು. ಆದರೆ ಉದ್ಯಮದಲ್ಲಿ ಮತ್ತು ಜೀವನದಲ್ಲಿ, ‘ಸರಿಯಾದದ್ದನ್ನೇ ಮಾಡುತ್ತಾ ಇರುವುದು’ ಕೂಡ ಕೆಲವೊಮ್ಮೆ ತಪ್ಪಾಗುತ್ತದೆ!

ಯಾವಾಗ ಅಂದ್ರೆ, ಆಟದ ನಿಯಮಗಳೇ ಬದಲಾದಾಗ, ನೀವು ಹಳೆಯ ನಿಯಮದಂತೆ ಆಡುತ್ತಿದ್ದರೆ ನೀವು ಸೋಲುತ್ತೀರಿ. ನೋಕಿಯಾ ಮಾಡಿದ್ದು ಇದನ್ನೇ. ಅವರು ವರ್ತಮಾನ ದಲ್ಲಿ ಬದುಕುತ್ತಿದ್ದರು, ಆದರೆ ಜಗತ್ತು ಭವಿಷ್ಯದತ್ತ ಓಡುತ್ತಿತ್ತು. ಅವರು ಯಾವ ತಪ್ಪನ್ನೂ ಮಾಡಲಿಲ್ಲ, ಬದಲಿಗೆ ಏನೂ ಮಾಡದಿರುವುದೇ ಅವರ ದೊಡ್ಡ ತಪ್ಪಾಗಿತ್ತು.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಉನ್ನತ ಮಟ್ಟಕ್ಕೆ ಏರಿದಾಗ, ಅಲ್ಲಿ ಒಂದು ರೀತಿಯ ಆಲಸ್ಯ ಮತ್ತು ಅಹಂಕಾರ ಬರುತ್ತದೆ. ‘ನಾವೇ ನಂಬರ್ ಒನ್, ನಮಗೆ ಯಾರೂ ಸಾಟಿ ಯಿಲ್ಲ, ನಾವು ಮಾಡಿದ್ದೇ ಸರಿ’ ಎಂಬ ಮನಸ್ಥಿತಿ ಬೆಳೆಯುತ್ತದೆ. ನೋಕಿಯಾ ಕೂಡ ಇದೇ ಭ್ರಮೆಯಲ್ಲಿತ್ತು. ತಮಗೆ ಎದುರಾಳಿಗಳೇ ಇಲ್ಲ ಎಂದು ಅವರು ಭಾವಿಸಿದ್ದರು.

ನಾವು ವಿಶ್ರಮಿಸುತ್ತಿರುವಾಗ, ನಮ್ಮ ಪ್ರತಿಸ್ಪರ್ಧಿ ಎಚ್ಚರವಾಗಿರುತ್ತಾನೆ, ಮೂಲೆಯಲ್ಲಿ ಕುಳಿತು ಹೊಸ ಆವಿಷ್ಕಾರ ಮಾಡುತ್ತಿರುತ್ತಾನೆ. ನಾವೀನ್ಯ (Innovation) ಎಂಬುದು ಭವಿಷ್ಯ ದ ಭಾಷೆ. ಯಾರು ಹೊಸದನ್ನು ಕಲಿಯುವುದಿಲ್ಲವೋ, ಯಾರು ಬದಲಾವಣೆಗೆ ತೆರೆದು ಕೊಳ್ಳುವುದಿಲ್ಲವೋ ಅವರು ಎಷ್ಟೇ ದೊಡ್ಡವರಾಗಿದ್ದರೂ ಕಾಲಗರ್ಭದಲ್ಲಿ ಕಣ್ಮರೆಯಾಗು ತ್ತಾರೆ.

ನೋಕಿಯಾದ ಪತನ ಕೇವಲ ಬಿಸಿನೆಸ್ ಸ್ಟಡಿ ಮಾತ್ರವಲ್ಲ, ಇದು ನಮ್ಮ ವೈಯಕ್ತಿಕ ಜೀವನ ಕ್ಕೂ ಅನ್ವಯಿಸುವ ಪಾಠ. ನಾವು ಇಂದು ನಮ್ಮ ಕೆಲಸದಲ್ಲಿ ಎಷ್ಟೇ ನಿಪುಣರಾಗಿರ ಬಹುದು. ಆದರೆ ಐದು ವರ್ಷಗಳ ನಂತರ ನಮ್ಮ ಈಗಿನ ಕೌಶಲಗಳಿಗೆ ಬೆಲೆ ಇರುತ್ತದೆಯೇ? ಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನ ಬೆಳೆಯುತ್ತಿರುವ ವೇಗ ನೋಡಿದರೆ, ನಾವು ಪ್ರತಿದಿನ ಹೊಸದನ್ನು ಕಲಿಯಲೇಬೇಕು.

ಇಲ್ಲದಿದ್ದರೆ ನಾವು ಉದ್ಯೋಗ ಮಾರುಕಟ್ಟೆಯಲ್ಲಿ ನೋಕಿಯಾದಂತೆ ಆಗುತ್ತೇವೆ. ಬದಲಾವಣೆ ಜಗದ ನಿಯಮ. ಹಳೆಯದಕ್ಕೇ ಜೋತುಬೀಳಬಾರದು. ಹೊಸ ತಂತ್ರeನ, ಹೊಸ ಆಲೋಚನೆಗಳು ಮತ್ತು ಹೊಸ ಪದ್ಧತಿಗಳನ್ನು ಸ್ವಾಗತಿಸಬೇಕು. ‘ನಾನು ಹೀಗೆಯೇ ಇರುವುದು’ ಎಂಬ ಹಠ ನಮ್ಮನ್ನು ಸೋಲಿಸುತ್ತದೆ.

ನಿನ್ನೆಯ ಗೆಲುವು ಇಂದಿಗೆ ಸಾಲದು. ನೀವು ಕಾಲೇಜಿನಲ್ಲಿ ಟಾಪರ್ ಆಗಿರಬಹುದು ಅಥವಾ ಕಳೆದ ವರ್ಷದ ‘ಬೆಸ್ಟ್‌ ಎಂಪ್ಲಾಯ್’ ಆಗಿರಬಹುದು. ಆದರೆ ಅದು ಇತಿಹಾಸ. ಜಗತ್ತು ನಿಮ್ಮಿಂದ ‘ಈಗ’ ಮತ್ತು ‘ಮುಂದೇನು’ ಎಂಬುದನ್ನು ನಿರೀಕ್ಷಿಸುತ್ತದೆ.‌

ಬದಲಾಗದಿದ್ದರೆ ಉಳಿಗಾಲವಿಲ್ಲ. ನೋಕಿಯಾದ ಕಥೆ ಒಂದು ದುರಂತವಲ್ಲ, ಅದೊಂದು ಎಚ್ಚರಿಕೆಯ ಗಂಟೆ. ಡೈನೋಸಾರ್ʼಗಳು ಅಳಿದುಹೋದವು, ಆದರೆ ಊಸರವಳ್ಳಿಗಳು ಉಳಿದುಕೊಂಡವು. ಯಾಕೆಂದರೆ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಶಕ್ತಿ ಸರವಳ್ಳಿಗೆ ಇತ್ತು.

ಬಲಶಾಲಿಗಳು ಮಾತ್ರ ಉಳಿಯುವುದಿಲ್ಲ, ಬುದ್ಧಿವಂತರು ಮಾತ್ರ ಗೆಲ್ಲುವುದಿಲ್ಲ. ಯಾರು ಬದಲಾವಣೆಗೆ ವೇಗವಾಗಿ ಸ್ಪಂದಿಸುತ್ತಾರೋ ಅವರು ಮಾತ್ರ ಉಳಿಯುತ್ತಾರೆ ಎಂದು ಚಾರ್ಲ್ಸ್ ಡಾರ್ವಿನ್ ಹೇಳಿದ್ದು ಉದ್ಯಮಕ್ಕೂ ಮತ್ತು ಜೀವನಕ್ಕೂ ಸತ್ಯ.‌

ನೋಕಿಯಾ ಸಿಇಒ ಅವರ ಕಣ್ಣೀರ ಪ್ರಸಂಗ ನಮಗೆ ಹೇಳುವುದು ಇಷ್ಟೇ- ‘ನೀವು ತಪ್ಪು ಮಾಡದಿದ್ದರೂ ಸೋಲಬಹುದು, ಆದರೆ ಹೊಸದನ್ನು ಕಲಿಯಲು ನಿಲ್ಲಿಸಿದರೆ ಖಂಡಿತ ವಾಗಿಯೂ ಸೋಲುತ್ತೀರಿ’.

ಆದ್ದರಿಂದ, ಕಲಿಯುತ್ತಿರಿ, ಬದಲಾಗುತ್ತಿರಿ ಮತ್ತು ಬೆಳೆಯುತ್ತಿರಿ. ಏಕೆಂದರೆ, ನಿಂತ ನೀರು ಕೊಳೆಯುತ್ತದೆ, ಹರಿಯುವ ನೀರು ಮಾತ್ರ ಶುದ್ಧವಾಗಿರುತ್ತದೆ.