ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Hegde Column: ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

ಅಮೆರಿಕದಲ್ಲಿ ಜೈಲಿನಲ್ಲಿ ಸರಿಯಾಗಿ ವ್ಯವಹರಿಸದಿದ್ದರೆ, ಇನ್ನೊಬ್ಬ ಖೈದಿಗೆ/ಜೈಲಿನ ಅಧಿಕಾರಿಗಳಿಗೆ ಹಾನಿ ಮಾಡಿದರೆ ಸುಮಾರು ಮೂರು ತಿಂಗಳವರೆಗಿನ ಏಕಾಂತವಾಸದ ಶಿಕ್ಷೆಯಿದೆ. ಅದು ಬಿಟ್ಟು ಇಲ್ಲಿ ದೀರ್ಘಾವಧಿ ಏಕಾಂತ ಜೈಲುಶಿಕ್ಷೆಯೂ ಇದೆ. ಏಕಾಂತ ವೆಂದರೆ ಸಂಪೂರ್ಣ ಏಕಾಂತ. ದಿನದಲ್ಲಿ ಒಂದೇ ತಾಸು ಆ ಜೈಲುಕೋಣೆಯಿಂದ ಹೊರಬರಲು ಅವಕಾಶ.

ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

-

ಶಿಶಿರಕಾಲ

shishirh@gmail.com

(ಅಮೆರಿಕ ಕಾನೂನು ವ್ಯವಸ್ಥೆ ಭಾಗ-5)

ಅಮೆರಿಕದಲ್ಲಿ ಜೈಲಿನಲ್ಲಿ ಸರಿಯಾಗಿ ವ್ಯವಹರಿಸದಿದ್ದರೆ, ಇನ್ನೊಬ್ಬ ಖೈದಿಗೆ/ಜೈಲಿನ ಅಧಿಕಾರಿಗಳಿಗೆ ಹಾನಿ ಮಾಡಿದರೆ ಸುಮಾರು ಮೂರು ತಿಂಗಳವರೆಗಿನ ಏಕಾಂತವಾಸದ ಶಿಕ್ಷೆಯಿದೆ. ಅದು ಬಿಟ್ಟು ಇಲ್ಲಿ ದೀರ್ಘಾವಧಿ ಏಕಾಂತ ಜೈಲು ಶಿಕ್ಷೆಯೂ ಇದೆ. ಏಕಾಂತ ವೆಂದರೆ ಸಂಪೂರ್ಣ ಏಕಾಂತ. ದಿನದಲ್ಲಿ ಒಂದೇ ತಾಸು ಆ ಜೈಲುಕೋಣೆಯಿಂದ ಹೊರ ಬರಲು ಅವಕಾಶ.

ಸಾವರ್ಕರ್ ಅವರನ್ನು ಕಾಲಾಪಾನಿ ಶಿಕ್ಷೆಗೆಂದು ಪೋರ್ಟ್ ಬ್ಲೇರ್ ಜೈಲಿಗೆ ಹಾಕಿದಾಗ ಅವರ ವಯಸ್ಸು ಕೇವಲ 28. ಆಗ ಭಾರತದಲ್ಲಿ ಬೇಕಾದಷ್ಟು ಬ್ರಿಟಿಷ್ ಜೈಲುಗಳಿದ್ದವು. ಆದರೂ ಅಷ್ಟು ದೂರದ, ಏಕಾಂತವಾಸದ ಜೈಲಿಗೆ ಕಳುಹಿಸಬೇಕು ಎಂದರೆ ಸಾವರ್ಕರ್ ಅದ್ಯಾವ ಮಟ್ಟಿಗೆ ಬ್ರಿಟಿಷ ರಿಗೆ ಖತರ್ನಾಕ್ ಆಗಿ ಕಾಣಿಸಿರಬಹುದು ಎಂಬುದನ್ನು ಅಂದಾಜಿಸಬಹುದು!

ಅವರೇ ಬರೆದ ‘ಕಾಲಾಪಾನಿ’ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ಒಂದು ದಶಕದ ಏಕಾಂತವಾಸ ದಲ್ಲಿ ಅವರು ಅನುಭವಿಸಿದ ನರಕಯಾತನೆಗೆ ಸಾಮಾನ್ಯರಾದರೆ ಹುಚ್ಚು ಹಿಡಿದೇ ಸಾಯುತ್ತಿದ್ದರು! ಉತ್ಪ್ರೇಕ್ಷೆಗಲ್ಲ, ಜತೆಯಲ್ಲಿ ಉಳಿದವರನ್ನೂ ಬದುಕಿರುವಂತೆ ಪ್ರೇರೇಪಿಸಿದ್ದು. ಕಾಲಪಾನಿಯ ಕ್ರೌರ್ಯ ಅರ್ಥವಾಗಬೇಕೆಂದರೆ ಸಾವರ್ಕರ್ ಪುಸ್ತಕಗಳನ್ನೇ ಓದಿ ಊಹಿಸಿಕೊಳ್ಳಬೇಕು.

ಸುಮ್ಮನೆ ಒಂದು ಪ್ರಯೋಗವನ್ನು ಕಲ್ಪಿಸಿಕೊಳ್ಳಿ, ಸಾಧ್ಯವಿದೆ ಎಂದೆನಿಸಿದರೆ ಸ್ವಪರೀಕ್ಷಿಸಿ ಕೊಳ್ಳ ಬಹುದು. ಮನೆಯಲ್ಲಿ ಯಾರೂ ಇಲ್ಲದ ಒಂದು ದಿನವನ್ನು ಆಯ್ಕೆಮಾಡಿಕೊಳ್ಳಿ. ಮೂರು ಗಂಟೆ ಮೊಬೈಲ್ ಮತ್ತು ಎಲ್ಲ ರಂಜನೆಯನ್ನೂ ಬದಿಗಿಟ್ಟು, ಮನೆಯಲ್ಲಿನ ಒಂದು ಚಿಕ್ಕ ಕೋಣೆ ಯಲ್ಲಿ ಕುಳಿತುಕೊಳ್ಳಬೇಕು. ಗೋಡೆ ನೋಡುವುದನ್ನು ಬಿಟ್ಟು ಬೇರಿನ್ನೇನೂ ಮಾಡುವಂತಿಲ್ಲ.

ಇದನ್ನೂ ಓದಿ: Shishir Hegde Column: ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು

ಕಿಟಕಿಯಲ್ಲಿ ಹೊರಗೆ ಸಹ ನೋಡುವಂತಿಲ್ಲ. ಎಷ್ಟು ಜನರಿಗೆ ಸಾಧ್ಯವಿದೆ? ಹೆಚ್ಚಿನವರಿಗೆ ಹತ್ತೇ ಹತ್ತು ನಿಮಿಷಕ್ಕೆ ತಲೆ ಕೆಟ್ಟುಹೋಗುತ್ತದೆ. ಇವತ್ತು ಜನರಿಗೆ ಮೊಬೈಲ್ ಇಲ್ಲದೆ ಹತ್ತು ನಿಮಿಷ ಟಾಯ್ಲೆಟ್‌ನಲ್ಲಿ ಕೂರಲೂ ವ್ಯವಧಾನವಿಲ್ಲ. ಹಾಗಿರುವಾಗ ಆ 28 ವಯಸ್ಸಿನ ಯುವಕ ಸಾವರ್ಕರ್, ಜತೆಯಲ್ಲಿ ಇನ್ನೆಷ್ಟೋ ಖೈದಿಗಳು.

ಸಾವರ್ಕರ್ ಬಗ್ಗೆ ಓದಿದರೆ ಆ ಮನುಷ್ಯ ಮಾನಸಿಕವಾಗಿ ಅದೆಷ್ಟು ಚಟುವಟಿಕೆಯುಳ್ಳವರಾಗಿದ್ದರು ಎಂಬುದು ತಿಳಿಯುತ್ತದೆ. ಅಂಥ ದೇಶಭಕ್ತ, ಅಷ್ಟು ಗಟ್ಟಿ ಮನಸ್ಸಿನವರನ್ನು ದೈಹಿಕ ಮತ್ತು ಮಾನಸಿಕವಾಗಿ ಮುಗಿಸಿಬಿಡಬೇಕೆನ್ನುವ ಏಕೈಕ ಉದ್ದೇಶವಿಟ್ಟುಕೊಂಡೇ ರಚಿಸಲ್ಪಟ್ಟ ಸೆರೆಮನೆ ಗಳವು.

ಸಾವರ್ಕರ್ ಅವರನ್ನು ರಾಜಕೀಯಕ್ಕೆ ಬಳಸುವವರು ಬಾಯಿಗೆ ಬಂದದ್ದು ಹೇಳಬಹುದು. ದೇಶಭಕ್ತಿಯ ಜತೆಯಲ್ಲಿ ಹತ್ತು ವರ್ಷ ಏಕಾಂತವಾಸದಲ್ಲಿ ತಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಂಡದ್ದಿದೆಯಲ್ಲ, ಅದು ಜನಸಾಮಾನ್ಯರ ಕಲ್ಪನೆಗೂ ನಿಲುಕದ ಮಟ್ಟದ್ದು. ಏಕೆಂದು ನಿಮಗೆ ಮುಂದೆ ಅಂದಾಜಾಗಬಹುದು.

Shishir Hegde 0509

ಅತ್ತ ಸಾವರ್ಕರ್ ಕಾಲಾಪಾನಿಗೆ ಸೇರುವುದಕ್ಕಿಂತ ಕೆಲವು ದಶಕಗಳ ಹಿಂದೆ ಇತ್ತ ಅಮೆರಿಕದ ಕಾನೂನು ವ್ಯವಸ್ಥೆಯಲ್ಲಿ ಜೈಲಿಗೆ ಸಂಬಂಧಿಸಿದಂತೆ ಹತ್ತಾರು ಪ್ರಯೋಗಗಳು ನಡೆಯುತ್ತಿದ್ದವು. ಅಂಥ ಪ್ರಯೋಗಗಳಲ್ಲಿ ಒಂದು ‘ಏಕಾಂತ ಸೆರೆವಾಸ’ದ ಶಿಕ್ಷೆ. ಆದರೆ ಅಮೆರಿಕದವರ ಉದ್ದೇಶ, ಬ್ರಿಟಿಷರಂತೆ ಬಂದಿಯಾದವರನ್ನು ಸಂಪೂರ್ಣ ಮುಗಿಸುವುದಿರಲಿಲ್ಲ.

ಏಕಾಂತದಿಂದ ಮನಃಪರಿವರ್ತನೆ. ಒಬ್ಬ ವ್ಯಕ್ತಿಯನ್ನು ಏಕಾಂತದಲ್ಲಿ ಕೂಡಿಹಾಕಿ ಆತನ ಕೈಯಲ್ಲಿ ಬೈಬಲ್ ಕೊಟ್ಟರೆ, ಆತ ಮಾಡಲು ಬೇರಿನ್ನೇನೂ ಕೆಲಸವಿಲ್ಲದೆ ಬೈಬಲ್ ಓದಲು ಆರಂಭಿಸುತ್ತಾನೆ. ಆ ಮೂಲಕ ತನ್ನನ್ನು ತಾನು ಎದುರಿಸುತ್ತಾನೆ, ಪ್ರಶ್ನಿಸಿಕೊಳ್ಳುತ್ತಾನೆ, ಆತ್ಮವಿಮರ್ಶೆಯಿಂದ ಒಳ್ಳೆಯ ವನಾಗುತ್ತಾನೆ ಎಂದಾಗಿತ್ತು.

ಭಾರತದಲ್ಲಿಯೂ ಜೈಲಿನೊಳಗೆ ಅಪರಾಧವೆಸಗಿದರೆ ಏಕಾಂತ ಸೆರೆವಾಸದ ಶಿಕ್ಷೆಯಿದೆ. ಆದರೆ ಕಾನೂನಿನಲ್ಲಿ ಅದಕ್ಕೊಂದಿಷ್ಟು ಮಿತಿಯಿದೆ. ಒಬ್ಬ ಖೈದಿಯ ಶಿಕ್ಷಾವಧಿಯಲ್ಲಿ ಹೆಚ್ಚೆಂದರೆ ಮೂರು ತಿಂಗಳು ಏಕಾಂತವಾಸಕ್ಕೆ ಹಾಕಬಹುದು. ಅದು ಕೂಡ ಒಂದೇ ಹೊಡೆತಕ್ಕೆ ಕೇವಲ ಎರಡು ವಾರ- ಹದಿನಾಲ್ಕು ದಿನ ಮಾತ್ರ. ಡಿಸ್ಕವರಿ ಚಾನಲ್ಲಿನವರು ಒಂದು ಡಾಕ್ಯುಮೆಂಟರಿಯಲ್ಲಿ ತಿಹಾರಿನ ಜೈಲು ಅಧಿಕಾರಿಯೊಬ್ಬರನ್ನು ಸಂದರ್ಶಿಸುತ್ತಿದ್ದರು.

ಆ ಅಧಿಕಾರಿ ಹೇಳುವಂತೆ ‘ನಾಲ್ಕೇ ದಿನಕ್ಕೆ’ ಹುಚ್ಚು ಹಿಡಿದುಬಿಡುತ್ತದೆ, ಖೈದಿಗಳು ಚೀರಾಡಿ ತಮಗೆ ತಾವೇ ನೋವು/ಹಾನಿ ಮಾಡಿಕೊಳ್ಳಲು ಆರಂಭಿಸುತ್ತಾರಂತೆ. ಅಮೆರಿಕದಲ್ಲಿಯೂ ಜೈಲಿನಲ್ಲಿ ಸರಿಯಾಗಿ ವ್ಯವಹರಿಸದಿದ್ದರೆ, ಇನ್ನೊಬ್ಬ ಖೈದಿಗೆ, ಜೈಲಾಧಿಕಾರಿಗಳಿಗೆ ಹಾನಿ ಮಾಡಿದರೆ ಸುಮಾರು ಮೂರು ತಿಂಗಳವರೆಗಿನ ಏಕಾಂತವಾಸದ ಶಿಕ್ಷೆಯಿದೆ.

ಅದು ಬಿಟ್ಟು ಇಲ್ಲಿ ದೀರ್ಘಾವಧಿ ಏಕಾಂತ ಜೈಲು ಶಿಕ್ಷೆಯೂ ಇದೆ. ಏಕಾಂತವೆಂದರೆ ಸಂಪೂರ್ಣ ಏಕಾಂತ. ದಿನದ ಇಪ್ಪತ್ತಮೂರು ಗಂಟೆ 6X9 ಅಡಿಯ ಕೋಣೆಯಲ್ಲಿ ಕಳೆಯಬೇಕು. ಕಲ್ಲಿನ ಬೆಂಚು, ತೆಳ್ಳನೆಯ ಹಾಸಿಗೆ, ಸಿಂಕ್, ಟಾಯ್ಲೆಟ್, ಬ್ರಷ್, ಪೇ ಮತ್ತು ಒಂದು ಪುಸ್ತಕ. ಮೇಲೊಂದು ಟ್ಯೂಬ್‌ ಲೈಟ್. ಮೂರು ಇಂಚಿನ ಉದ್ದದ ಗಾಜಿನ ಕಿಟಕಿ. ಅದು ಕೂಡ ಬೆಳಕಿಗಷ್ಟೆ.

ಆಚೆಯದೇನೂ ಕಾಣದು. ದಿನದಲ್ಲಿ ಒಂದೇ ತಾಸು ಆ ಜೈಲುಕೋಣೆಯಿಂದ ಹೊರ ಬರಲು ಅವಕಾಶ. ಅದು ಕೂಡ ಕೈಕಾಲಿಗೆ ಬೇಡಿ ಹಾಕಿ ಹತ್ತು ಮೀಟರ್ ಎತ್ತರದ ನಾಲ್ಕು ಗೋಡೆಯೊಳಗಿನ ಚಿಕ್ಕ ಮೈದಾನದಲ್ಲಿ ಓಡಾಡಬಹುದು. ಆಗ ಕೂಡ ಏಕಾಂತವೇ. ಆ ಗೋಡೆಯ ಮೈದಾನದಾಚೆ ಆಕಾಶ ಬಿಟ್ಟರೆ ಹೊರಗಿನ ಪ್ರಪಂಚ ಕಾಣದು. ಅವರ ಏಕೈಕ ಮನುಷ್ಯ ಸಂವಹನವೆಂದರೆ ಜೈಲಿ ನಿಂದ ಈ ಜಾಗಕ್ಕೆ ಬರುವಾಗ ಎರಡು ನಿಮಿಷ ಸಾಥ್ ನೀಡುವ ಜೈಲಿನ ಅಧಿಕಾರಿಯ ಜತೆಗಿ ನದು. ಆತ ಕೂಡ ಆ ಖೈದಿಯ ಮಾತನ್ನು ಕೇಳದಂತೆ ವಿಶೇಷ ತರಬೇತಿ ಪಡೆದವನು!

ಅಮೆರಿಕದ ಜೈಲುಗಳಲ್ಲಿ ಇವಿಷ್ಟೇ ದಿನಚರಿಯುಳ್ಳ, ಮನುಷ್ಯ ಸಂಪರ್ಕವೇ ಇಲ್ಲದ ಖೈದಿಗಳು ಲಕ್ಷದ ಮೇಲಿದ್ದಾರೆ. ಕೆಲವರು ಒಂದೆರಡು ವರ್ಷ, ಇನ್ನು ಕೆಲವರು ಕೆಲವು ದಶಕಗಳಿಂದ. ಮಾರ್ಕ್ ಡೇವಿಡ್ ಚಾಪ್‌ಮನ್ ಎಂಬ ಖೈದಿ ಕಳೆದ 43 ವರ್ಷದಿಂದ ಏಕಾಂತ ಸೆರೆಯಲ್ಲಿದ್ದಾನೆ. 1982ರಿಂದ ಆತ ವಕೀಲರನ್ನು ಬಿಟ್ಟು ಹೊರಜಗತ್ತಿನ ಯಾರನ್ನೂ ನೋಡಿಲ್ಲ, ಮುಟ್ಟಿಲ್ಲ, ಮೂಸಿಲ್ಲ!

ಈಗ ಇಪ್ಪತ್ತು ವರ್ಷದಿಂದ ವಕೀಲರನ್ನೂ ನೋಡಿಲ್ಲ. ಅಕ್ಷರಶಃ ಏಕಾಂತ. ಅಮೆರಿಕದ ಜೈಲಿನ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ 500ಕ್ಕಿಂತ ಜಾಸ್ತಿ ಮಂದಿ ಅಲ್ಲಿನ ಜೈಲುಗಳಲ್ಲಿ ಹದಿನೈದು ವರ್ಷಕ್ಕಿಂತ ಜಾಸ್ತಿ ಏಕಾಂತ ಸೆರೆವಾಸದಲ್ಲಿದ್ದಾರೆ. ಹತ್ತಿರತ್ತಿರ 8 ಸಾವಿರದಷ್ಟು ಖೈದಿಗಳು ಐದು ವರ್ಷಕ್ಕಿಂತ ಜಾಸ್ತಿ ಏಕಾಂತ ಜೈಲನ್ನು ಅನುಭವಿಸುತ್ತಿದ್ದಾರೆ.

ಒಟ್ಟಾರೆ ಒಬ್ಬ ಖೈದಿ ಉಳಿದ ಖೈದಿಗಳಿಗೆ ಹಾನಿ ಮಾಡಬಹುದೆಂದೆನಿಸಿದರೆ ಅನಿರ್ದಿಷ್ಟಾವಧಿ ಏಕಾಂತದಲ್ಲಿಡಲಾಗುತ್ತದೆ. ನಮ್ಮಲ್ಲಿನ ಋಷಿ-ಮುನಿಗಳು, ಸಾಧು-ಸನ್ಯಾಸಿಗಳು ಹಿಮಾಲಯದಲ್ಲಿ, ಗುಹೆಗಳಲ್ಲಿ ಏಕಾಂತವಾಸ, ಧ್ಯಾನಕ್ಕೆ ಕೂರುವ ಪದ್ಧತಿ ಇವತ್ತಿಗೂ ನಡೆದುಬಂದಿದೆ. ಅದು ಬಿಟ್ಟರೆ ಉಳಿದವರೆಲ್ಲ ಸಂಘಜೀವಿಗಳು. ತಪಸ್ವಿಗಳ ಏಕಾಂತ ಬೇರೆ.

ಅದು ಬಯಸಿದ್ದು. ಒಂದು ಹಂತದ ನಂತರದ ಸಾಧನೆಗೆ ಅಂಥ ಏಕಾಂತದ ಬದುಕು ಅವಶ್ಯಕತೆ. ಅಷ್ಟಾಗಿಯೂ ತಪಸ್ವಿಗಳೆಂದರೆ ಮನಸ್ಸಿನ ಮೇಲೆ ಎಲ್ಲಿಲ್ಲದ ಹಿಡಿತ ಸಾಧಿಸಿದವರು. ಅವರದು ಮನಸ್ಸಿನದೇ ಕಸರತ್ತು. ಆದರೆ ಈ ರೀತಿ ಏಕಾಂತ ಬದುಕುವುದಕ್ಕೂ, ವರ್ಷಾನುಗಟ್ಟಲೆಯ ಜೈಲಿನ ಏಕಾಂತ ವಾಸಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಏಕಾಂತವನ್ನು ಎದುರಿಸುವುದು ಸನ್ಯಾಸಿಯ ಮನಸ್ಸಲ್ಲ- ಕ್ರಿಮಿನಲ್ ಒಬ್ಬನ ಮನಸ್ಸು. ಹಿಡಿತವಿಲ್ಲದ ಮನಸ್ಸು ಅಲ್ಲಾವುದ್ದೀನನ ಭೂತದಂತೆ, ಅದಕ್ಕೆ ನಿರಂತರ ಕೆಲಸ ಕೊಡುತ್ತಲೇ ಇರಬೇಕು. ಕೆಲಸವಿಲ್ಲದ ಮನಸ್ಸು ತನ್ನನ್ನು ತಾನೇ ತಿನ್ನಲು ಆರಂಭಿಸಿಬಿಡುತ್ತದೆ.

ಏಕಾಂತವಾಸ ಹೇಗೆ ಕಾಡುತ್ತದೆ ಎಂಬುದರ ಬಗ್ಗೆ ಸಾಕಷ್ಟು ವರದಿಗಳು, ಪ್ರಯೋಗಗಳು, ನಿರೀಕ್ಷಣೆ ಗಳು, ಪುಸ್ತಕಗಳು, ಡಾಕ್ಯುಮೆಂಟರಿಗಳು ಲಭ್ಯವಿವೆ. ಅದೆಲ್ಲವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಖೈದಿಯೊಬ್ಬ ಏಕಾಂತ ಬಂಧಿಯಾದಾಗ ಮೊದಲ 24 ಗಂಟೆವರೆಗೆ ಅತ್ಯಂತ ಆತಂಕ, ಒತ್ತಡ ಅನುಭವಿಸುತ್ತಾನೆ. ನನಗೇಕೆ ಹೀಗಾಯ್ತು? ನಾನೇ ಏಕೆ? ಇತ್ಯಾದಿ ಪ್ರಶ್ನೆಗಳು. ಒಂದು ದಿನ ಕಳೆಯು ವುದರೊಳಗೆ ಮಾನಸಿಕ ದೊಂಬರಾಟದಿಂದಾಗಿ ದೈಹಿಕ ಸಮತೋಲನ ತಪ್ಪುತ್ತದೆ.

ಎಚ್ಚರತಪ್ಪಿ ಬೀಳುವುದು ಸಾಮಾನ್ಯ. ಎರಡನೇ ದಿನಕ್ಕೆ ಎಲ್ಲಾ ಇಂದ್ರಿಯಗಳ ಸೆನ್ಸಿಟಿವಿಟಿ- ಸೂಕ್ಷ್ಮತೆ ಹೆಚ್ಚುತ್ತದೆ. ಬೆಳಕಿಗೆ, ಎ.ಸಿ. ಗಾಳಿಗೆ ಇಂದ್ರಿಯಗಳು ಭಾವಾತಿರೇಕ ಮುಟ್ಟುತ್ತವೆ. ಪರಿಣಾಮ ಚಿಕ್ಕದೊಂದು ಶಬ್ದಕ್ಕೆ ದೇಹ ಬೆಚ್ಚಿ ಬೀಳುತ್ತದೆ, ಬೆಳಕನ್ನು ನೋಡಲಾಗುವುದಿಲ್ಲ ಇತ್ಯಾದಿ. ಇಡೀ ದೇಹದ ಎಚ್ಚರಿಕೆಯ ವ್ಯವಸ್ಥೆ ಜಾಗೃತವಾಗಿ ಅದರಿಂದ ನಿದ್ರಾಹೀನತೆ ಶುರುವಾಗುತ್ತದೆ.

ತರುವಾಯ ದೇಹದ ಅಸಮತೋಲನ. ಇದೆಲ್ಲ ದಾಟಿ ಒಂದುವಾರ ಕಳೆಯುವಾಗ ಕ್ರಿಮಿನಲ್ ಮನಸ್ಸಿನ ನಿಜ ಅವತಾರದ ದರ್ಶನವಾಗುವುದು. ಖಿನ್ನತೆ, ಕಿರಿಕಿರಿ, ಮೂಡ್ ಸ್ವಿಂಗ್- ಮನಸ್ಸಿನ ತ್ವರಿತ ಏರುಪೇರು. ಈ ಕ್ಷಣ ಬೇಸರ, ಮರುಕ್ಷಣ ಸಿಟ್ಟು, ಮರುಕ್ಷಣ ಸಮಾಧಾನ. ಎರಡನೇ ವಾರ ತಲುಪುವಾಗ ಭ್ರಮೆ ಮತ್ತು ವಿರೂಪ ಗ್ರಹಿಕೆಗಳು ಆರಂಭವಾಗುತ್ತವೆ.

ದೆವ್ವ-ಭೂತವೆಲ್ಲ ಕಾಣಿಸುವುದು ಆಗ. ಮೂರನೇ ವಾರಕ್ಕೆ ಭಾವತಿರೇಕ, ದಿಗಿಲು ಬೀಳುವುದು, ಜತೆಯಲ್ಲಿ ಮತಿವಿಕಲ್ಪತೆ. ಒಂದು ತಿಂಗಳಿ ನಾಚೆಯ ಏಕಾಂತದ ಪ್ರತಿ ಕ್ಷಣವೂ ಅಸಾಮಾನ್ಯ ಹಿಂಸೆ. ಬಹುತೇಕರ ಮತಿಭ್ರಮಣೆಯಾಗುವುದು ಈ ಒಂದು ತಿಂಗಳ ಆಸುಪಾಸಿನಲ್ಲಿ. ಈ ಸಮಯ ದಲ್ಲಿಯೇ ಹೆಚ್ಚಿನವರು ಆತ್ಮಹತ್ಯೆಗೆ ಪ್ರಯತ್ನಿಸುವುದು, ನಾಲಿಗೆ ಕಚ್ಚಿ ತುಂಡು ಮಾಡುಕೊಳ್ಳು ವುದು, ತನಗೆ ತಾನೇ ಹೊಡೆದುಕೊಳ್ಳುವುದು, ಗೋಡೆಗೆ ತಲೆ ಚಚ್ಚಿ ಕೊಳ್ಳುವುದು ಇತ್ಯಾದಿ.

ಮನುಷ್ಯನಿಗೆ ಸಂಗ ವೆನ್ನುವುದು ಅದೆಷ್ಟು ಮುಖ್ಯ, ಅದಿಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಬೇರಿನ್ನೊಂದು ಪ್ರತ್ಯೇಕ ಪ್ರಯೋಗ ಬೇಕಿಲ್ಲ. ಅಮೆರಿಕದ ಏಕಾಂತ ಸೆರೆ ವಾಸದ ವಿಡಿಯೋ ನೋಡಿ ದರೆ ಸಾಕಾಗುತ್ತದೆ. ಅಲ್ಲಿನ ಬಹು ತೇಕರು ನಿರಂತರ ಆತ್ಮಹತ್ಯೆಗೆ ಪ್ರಯತ್ನಿಸುತ್ತಲೇ ಇರುತ್ತಾರೆ. ಇದು ಒಂದು ತಿಂಗಳ ಏಕಾಂತದ ಪರಿಣಾಮವಾದರೆ, ಅಮೆರಿಕದಲ್ಲಿ ಒಂದು ವರ್ಷ ಕ್ಕಿಂತ ಜಾಸ್ತಿ ಏಕಾಂತ ಅನುಭವಿಸುತ್ತಿರುವವರ ಸಂಖ್ಯೆ 30 ಸಾವಿರಕ್ಕಿಂತ ಜಾಸ್ತಿ!

ಇನ್ನು, ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟು ಕಾಯುತ್ತಿರುವವರಲ್ಲಿ ಹೆಚ್ಚಿನವರನ್ನು ಏಕಾಂತ ಸೆರೆಯಲ್ಲಿಯೇ ಇರಿಸಲಾಗುತ್ತದೆ. ಕೆಲವು ರಾಜ್ಯಗಳಲ್ಲಂತೂ ಅವರಿಗೆ ಬೇಷಕ್ ಏಕಾಂತ ಸೆರೆ. ಇಲ್ಲಿ ಮರಣದಂಡನೆ ಶಿಕ್ಷೆ ಘೋಷಣೆಯಾದ ಮೇಲೆ ನಮ್ಮ ದೇಶದಂತೆ ಮೇಲ್ಮನವಿ, ಕೊನೆಯಲ್ಲಿ ರಾಷ್ಟ್ರಾಧ್ಯಕ್ಷರವರೆಗೂ ಕ್ಷಮಾದಾನಕ್ಕೆ ಹೋಗಬಹುದು. ಇದು ಕೋರ್ಟ್-ಕಚೇರಿ, ಮೇಜಿಂದ ಮೇಜಿಗೆಂದು ವಕೀಲರು ಕೆಲವೊಮ್ಮೆ ಹತ್ತಿಪ್ಪತ್ತು ವರ್ಷ ಎಳೆದುಬಿಡುತ್ತಾರೆ. ಅಥವಾ ಖೈದಿ ಪೂರ್ಣ ಏಕಾಂತವಾದರೂ ಸರಿ, ಸಾವಿನ ನಿರೀಕ್ಷೆಯಲ್ಲಿಯಾದರೂ ಸರಿ, ಬದುಕಿರಬೇಕೆಂದು ಬಯಸುತ್ತಾನೆ!

ಕಾರಾಗೃಹವಿರುವುದು ಸುಧಾರಣೆಗೆ, ಆದರೆ ಸುಧಾರಿಸಲು ಸಾಧ್ಯವೇ ಆಗದವರನ್ನು ಈ ವ್ಯವಸ್ಥೆ ಇನ್ನಷ್ಟು ಹದಗೆಡಿಸುವುದಂತೂ ಸುಳ್ಳಲ್ಲ. ಅವರದೂ ಒಂದು ಬದುಕು!

ಭಾರತದಲ್ಲಿ ಮರಣ ದಂಡನೆ ಎಂದರೆ ಅದು Hang Until Death - ಫಾಸಿ. ಅದು ಬಿಟ್ಟು ಮಿಲಿಟರಿ ಕಾನೂನಿನಲ್ಲಿ ಫೈರಿಂಗ್ ಸ್ಕ್ವಾಡ್- ಗುಂಡಿಟ್ಟು ಕೊಲ್ಲುವ ಶಿಕ್ಷೆ ನೀಡುವ ಅವಕಾಶವಿದೆಯಂತೆ.

ಆದರೆ ಹಾಗೆ ಶಿಕ್ಷಿಸಿದ ಯಾವುದೇ ಮಾಹಿತಿಯಿಲ್ಲ. ಅಮೆರಿಕದಲ್ಲಿ ಮರಣದಂಡನೆಯೆಂದರೆ ಸಾಮಾನ್ಯವಾಗಿ lethal injection - ಅರಿವಳಿಕೆ, ಪಾರ್ಶ್ವವಾಯು ಮತ್ತು ಹೃದಯಾಘಾತವಾಗುವ ವಿಷಗಳ ಮಿಶ್ರಣವನ್ನು ಕೊಡುವ ಮೂಲಕ. ಇದು ಆದರೆ ಅದು ಮಾತ್ರವಲ್ಲ.

ಅಮೆರಿಕ ಎಂದರೆ ಯುನೈಟೆಡ್ ಸ್ಟೇಟ್ಸ್- ರಾಜ್ಯಗಳ ಗಣ. ಹಿಂದಿನ ಲೇಖನಗಳಲ್ಲಿ ಹೇಳಿದಂತೆ ಇಲ್ಲಿನ ಒಂದೊಂದು ರಾಜ್ಯದಲ್ಲಿ ಅವರದೇ ಕಾನೂನಿದೆ. ಎಲ್ಲ ರಾಜ್ಯಗಳ ಮೇಲಿನ ಕಾನೂನು ರಾಷ್ಟ್ರದ್ದು- ಫೆಡರಲ್. ಆದರೆ ಫೆಡರಲ್ ಕಾನೂನನ್ನು ಮೀರುವ ಕಾನೂನನ್ನು ರಾಜ್ಯಗಳು ಮಾಡಿ ಕೊಳ್ಳು‌ವುದಿದೆ.

ಉದಾಹರಣೆಗೆ ಫೆಡರಲ್- ರಾಷ್ಟ್ರಮಟ್ಟದಲ್ಲಿ ಗಾಂಜಾ ಸೇವನೆ, ಮಾರಾಟ ಕಾನೂನುಬಾಹಿರ. ಆದರೆ ಅಮೆರಿಕದ ಅರ್ಧಕ್ಕರ್ಧ ರಾಜ್ಯಗಳಲ್ಲಿ ಗಾಂಜಾ ಮಾರಾಟ, ಸೇವನೆ ಎಲ್ಲಕ್ಕೂ ಕಾನೂನಿನ ಸಹಾಯವಿದೆ. ಅಮೆರಿಕದಲ್ಲಿ ಒಟ್ಟು ಐವತ್ತು ರಾಜ್ಯಗಳಿವೆ. ಅದರಲ್ಲಿ 23 ರಾಜ್ಯಗಳು ಮರಣ ದಂಡನೆಯನ್ನು ನಿಷೇಧಿಸಿವೆ.

ಇನ್ನುಳಿದ 27 ರಾಜ್ಯಗಳಲ್ಲಿ ವಿಷದ ಇಂಜೆಕ್ಷನ್ ಬಿಟ್ಟು ಅನ್ಯ ನಮೂನೆಯ ಮರಣದಂಡನೆಗಳು ಕೂಡ ಚಾಲ್ತಿಯಲ್ಲಿವೆ. ಹಲವಾರು ರಾಜ್ಯಗಳಲ್ಲಿ ‘ಇಲೆಕ್ಟ್ರಿಕ್ ಚೇರ್’ ಮರಣದಂಡನೆಯಿದೆ. ಕಬ್ಬಿಣ ದ ಕುರ್ಚಿಯಲ್ಲಿ ಕೂಡ್ರಿಸಿ, ಕಬ್ಬಿಣದ ಹೆಲ್ಮೆಟ್ ತೊಡಿಸಿ, ಕೈಕಾಲು ಕಟ್ಟಿ ಸುಮಾರು 2000 ವೋಲ್ಟ್ ವಿದ್ಯುತ್ ಹರಿಸುವುದು. ಇಷ್ಟೊಂದು ವಿದ್ಯುತ್ ಹರಿದಾಗ ವಿದ್ಯುತ್‌ ಶಾಕ್‌ನ ಬದಲಾಗಿ ದೇಹಕ್ಕೆ ಬೆಂಕಿ ಬೀಳುವುದಿದೆ.

ಒಟ್ಟಾರೆ ಇದು ವಿಷದ ಇಂಜೆಕ್ಷನ್ನಿಗಿಂತ ಯಾತನಾಮಯ. ಅದು ಬಿಟ್ಟು ನಾಲ್ಕಾರು ರಾಜ್ಯಗಳಲ್ಲಿ Gas Chamber - ಚಿಕ್ಕ ಹವಾ ನಿಯಂತ್ರಿತ ಕೊಠಡಿಯಲ್ಲಿ ಕೂರಿಸಿ ವಿಷಾನಿಲ ಹರಿಸುವ ಕಾನೂನಿದೆ. ಇನ್ನು ಕೆಲವು ರಾಜ್ಯಗಳಲ್ಲಿ Firing Squad - ಗುಂಡಿಟ್ಟು ಕೊಲ್ಲುವ ಶಿಕ್ಷೆಯಿದೆ. ಅದು ಬಿಟ್ಟರೆ ಕೇವಲ ಎರಡೇ ರಾಜ್ಯಗಳಲ್ಲಿ ಫಾಸಿ ಶಿಕ್ಷೆ ಇರುವುದು. ಬಹಳಷ್ಟು ರಾಜ್ಯಗಳಲ್ಲಿ ಖೈದಿಗೆ ಮರಣ ದಂಡನೆಯಲ್ಲಿ ಆಯ್ಕೆ ನೀಡಲಾಗುತ್ತದೆ.

ಇತ್ತೀಚೆಗೆ ಅಪರಾಧಿಯೊಬ್ಬ ಮರಣದಂಡನೆಗೆ Firing Squad ಆಯ್ಕೆ ಮಾಡಿಕೊಂಡದ್ದು ದೊಡ್ಡ ಸುದ್ದಿಯಾಗಿತ್ತು. ಸಾಮಾನ್ಯವಾಗಿ ಎಲ್ಲರೂ ವಿಷದ ಇಂಜೆಕ್ಷನ್ ಅನ್ನೇ ದಂಡನೆಗೆ ಕೇಳಿ ಆಯ್ಕೆ ಮಾಡಿಕೊಳ್ಳುವುದು.

ಭಾರತಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಮರಣದಂಡನೆ ಶಿಕ್ಷೆಯ ಪ್ರಮಾಣ ಜಾಸ್ತಿ. ಭಾರತದಲ್ಲಿ ಮರಣದಂಡನೆ ನೀಡುವ ಸರಾಸರಿ ವಾರ್ಷಿಕ ಒಂದು ಅಥವಾ ಪರಮಾವಧಿ ಎರಡು. ಆದರೆ ಅಮೆರಿಕದಲ್ಲಿ ಸರಾಸರಿ 25-30. ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ಮರಣದಂಡನೆಯಿಲ್ಲದೆಯೂ ಇದು ಸರಾಸರಿ. ಏಕಾಂತವಾಸವಿರಬಹುದು ಅಥವಾ ಮರಣ ದಂಡನೆಯಿರಬಹುದು, ಅದು ಅಮೆರಿಕದ ಕಾನೂನು ವ್ಯವಸ್ಥೆಯ ಬಹುಚರ್ಚಿತ ವಿಷಯ.

ಜನಸಂಖ್ಯೆ ಇತ್ಯಾದಿ ಉಳಿದ ಲೆಕ್ಕಾಚಾರವನ್ನು ಪರಿಗಣಿಸಿದರೆ ಮರಣದಂಡನೆ ಎಂದಲ್ಲ, ಜೈಲಿ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜನಸಂಖ್ಯೆಯ ಪ್ರಮಾಣ ಅಮೆರಿಕದಲ್ಲಿ ಅತ್ಯಂತ ಜಾಸ್ತಿ. ಅಂದಾಜಿ ಗೊಂದು ಚಿಕ್ಕ ಲೆಕ್ಕ ಕೊಡುತ್ತೇನೆ. ನಮ್ಮ ದೇಶದ ಜನಸಂಖ್ಯೆ 145 ಕೋಟಿ. ನಮ್ಮಲ್ಲಿ ಜೈಲಿನಲ್ಲಿರುವ ಖೈದಿಗಳ ಒಟ್ಟೂ ಸಂಖ್ಯೆ ಹತ್ತಿರತ್ತಿರ 6 ಲಕ್ಷ. ಅಮೆರಿಕದ ಜನಸಂಖ್ಯೆ 34 ಕೋಟಿ. ಆದರೆ ಇಲ್ಲಿನ ಜೈಲಿನಲ್ಲಿರುವವರ ಸಂಖ್ಯೆ 20 ಲಕ್ಷದ ಆಸುಪಾಸು. ಈ ಪ್ರಮಾಣ ಕೇವಲ ಹೋಲಿಕೆ ಗಷ್ಟೇ. ಈ ರೀತಿಯ ಸಂಖ್ಯೆಯ ಹೋಲಿಕೆಯಿಂದ ಯಾವ ದೇಶ, ಎಲ್ಲಿನ ವ್ಯವಸ್ಥೆ ಒಳ್ಳೆಯದು ಎಂದು ಅಭಿಪ್ರಾಯಕ್ಕೆ ಬರುವಂತಿಲ್ಲ.

ಸಂಖ್ಯೆಯನ್ನು ದೇಶದ ಕಾನೂನು ವ್ಯವಸ್ಥೆಯ ಸೂಚಕವಾಗಿ ನೋಡಬಹುದು. ಸಾಮಾಜಿಕ ಸುಭಿಕ್ಷೆಯ ದ್ಯೋತಕವಾಗಿ ನೋಡಬಹುದು, ಅಥವಾ ಕಾಠಿಣ್ಯದ, ವೇಗದ ನ್ಯಾಯ ವರ್ಸಸ್ ಕುಂಟುವ ಕಾನೂನು ವ್ಯವಸ್ಥೆ, ವಿಳಂಬಿತ ನ್ಯಾಯ ವಿಲೇವಾರಿ ಎಂದು ಬೇಕಾದರೂ ಹೇಳಬಹುದು. ಎರಡು ಸಮಾಜವನ್ನು ಹೋಲಿಸುವಾಗ- ಭಾರತೀಯರಲ್ಲಿ ಬದಲಾಗುವ ಅಮೆರಿಕ ದೆಡೆಗಿನ ಸೆಂಟಿ ಮೆಂಟಿನಂತೆ ತಕ್ಕಡಿ ಇತ್ತಿಂದತ್ತ-ಅತ್ತಿಂದಿತ್ತ ವಾಲುವುದು ಸಹಜ. ಹಾಗಾಗಿ ಈ ಲೇಖನ ಸರಣಿಯಲ್ಲಿ ಗ್ರಹಿಸಬೇಕಾದುದು ಕೇವಲ ವ್ಯತ್ಯಾಸ ವಿಶೇಷಗಳನ್ನು ಮಾತ್ರ.