Vishweshwar Bhat Column: ಕೆಲವೊಮ್ಮೆ ಸೋಲುಗಳು ನಮ್ಮ ಸಾಮರ್ಥ್ಯವನ್ನು ತೋರಿಸುತ್ತವೆ !
ಇದು ನಮಗೇ ಗೊತ್ತಿಲ್ಲದೇ ನಮ್ಮೊಳಗೆ ನಡೆಯುವ ಹಕೀಕತ್ತು. ನಮ್ಮೊಳಗೆ ನಾವೇ ಸಾಕಿಕೊಂಡು ಪೊರೆಯುವ ಸೋಲಿನ ಅಸಲಿಯತ್ತು. ಅಷ್ಟಕ್ಕೂ ಅಂದು ಆಗಿದ್ದೇನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಗಾರ್ಡ್‌ನ್ ರೂಟ್ ಎಂಬ ಮಾರ್ಗವಿದೆ. ಅದು ಹೆಸರೇ ಸೂಚಿಸುವಂತೆ, ಪ್ರಕೃತಿಯ ಸೊಬಗನ್ನೆಲ್ಲ ತನ್ನ ಮೇಲೆ ಬೋರಲು ಹಾಕಿಕೊಂಡ ನಯನ ಮನೋಹರ ಪ್ರದೇಶ.

-

ನೂರೆಂಟು ವಿಶ್ವ
vbhat@me.com
ಪ್ರಾಯಶಃ ಆ ನೋವು, ವಿಷಾದ ನನ್ನಲ್ಲಿ ಸದಾ ಉಳಿದುಕೊಂಡು ಬಿಟ್ಟಿದೆ. ಅದಾಗಬಾರದು ಅಂತಿ ದ್ದರೆ, ನಾನು ಆದಷ್ಟು ಬೇಗ ಅದನ್ನು ಈಡೇರಿಸಬೇಕು. ಅಲ್ಲಿಯ ತನಕ ಅದು ಒಂದು ಕೊರಗಾಗಿ, ಕಾರುಣ್ಯ ( Pathos ) ಗೀತೆಯಾಗಿ ಉಳಿದುಬಿಡಬಹುದು.
ಕೆಲ ವರ್ಷದ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಹೋಗಿ, ಅಲ್ಲಿಂದ ವಾಪಾಸಾದ ಬಳಿಕ ಅಂಥದ್ದೊಂದು ಭಾವ ನನ್ನನ್ನು ಆವರಿಸಿಕೊಂಡಿತ್ತು. ಕೆಲವು ಭಾವಗಳನ್ನು ಸಂತೈಸುವುದು ಕಷ್ಟ. ಸಂತೈಸಿದಷ್ಟೂ ಪದೇ ಪದೆ ಇಣುಕು ಹಾಕುತ್ತಲೇ ಇರುತ್ತವೆ. ಅಷ್ಟೇ ಅಲ್ಲ. ಇಂಥ ಭಾವನೆಗಳು ನಮ್ಮನ್ನು ಕ್ರಮೇಣ ಆಳತೊಡಗುತ್ತವೆ. ಅಂಥದ್ದೊಂದು ವಿಚಿತ್ರ ಭಾವ ನನ್ನನ್ನು ಸಣ್ಣಗೆ ಕೊರೆಯುತ್ತಲೇ ಇದೆ. ಅಂದುಕೊಂಡಿದ್ದನ್ನು ಸಾಧಿಸಲಾಗದಿದ್ದರೆ, ಅದೊಂದು ಹಲ್ಲಿಗೆ ಸಿಕ್ಕಿದ ಆಹಾರದ ತುಣುಕಿನಂತೆ ಸದಾ ಕಾಡುತ್ತಲೇ ಇರುತ್ತದೆ. ನಾಲಗೆಗಂತೂ ಸಮಾಧಾನವಿಲ್ಲ.
ಏನೇ ಹೇಳಿ, ಅಂದು ನಾನು ಕೈಚೆಲ್ಲಬಾರದಿತ್ತು. ನನ್ನ ಕೈಯಲ್ಲಿ ಆಗೊಲ್ಲ ಎಂದು ಹಿಂದೆ ಸರಿಯಬಾರದಿತ್ತು. ನನ್ನೊಳಗೆ ಅಂಥದ್ದೊಂದು ಆತಂಕ, ಸೋಲು ನನಗೆ ಗೊತ್ತಿಲ್ಲದಂತೆ ಮನೆ ಮಾಡಿಕೊಂಡು ಬೆಚ್ಚಗೆ ಆಶ್ರಯ ಪಡೆದಿತ್ತು ಎಂಬುದು ಇಷ್ಟು ವರ್ಷಗಳವರೆಗೆ ಗೊತ್ತೇ ಇರಲಿಲ್ಲ. ಆದರೆ ಆ ಘಟನೆಯ ಬಳಿಕ ನನ್ನ ಅನುಭವಕ್ಕೆ ಬಂದಿತು.
ಅಷ್ಟೇ ಅಲ್ಲ, ಅಷ್ಟರ ಮಟ್ಟಿಗೆ ನನ್ನ ಕೊರತೆಯಾಗಿ, ದೌರ್ಬಲ್ಯವಾಗಿ, ಪರಾಭವವಾಗಿ ಕಂಡಿತು. ಕೆಲವೊಮ್ಮೆ ಸೋಲಿನಲ್ಲೂ ನಮ್ಮ ಸಾಮರ್ಥ್ಯವೇನೆಂಬುದು ಗೊತ್ತಾಗುತ್ತದೆ. ನಮಗೆ ನಮ್ಮ ಪರಿಚಯವೇ ಆಗಿರುವುದಿಲ್ಲ. ನಮ್ಮೊಳಗೊಬ್ಬ ಪುಕ್ಕಲನಿದ್ದಾನೆಂಬುದು ಅಂಥ ಸೋಲಿನ ಸಂದರ್ಭ ದಲ್ಲಿ ಅನುಭವಕ್ಕೆ ಬರುತ್ತದೆ. ಹಗ್ಗ ತುಳಿದು ಧೈರ್ಯ ಮೆರೆಯುವವರು, ಹಾವನ್ನು ಕಂಡು ಬೆಚ್ಚಿ ಬೀಳುವಾಗ ತಮ್ಮೊಳಗೆ ಆಶ್ರಯಪಡೆದ ಆ ಪುಕ್ಕಲನ ದರ್ಶನ ಪಡೆದು ವಿಷಣ್ಣರಾಗುತ್ತಾರೆ.
ಇದನ್ನೂ ಓದಿ: Vishweshwar Bhat Column: ಹೆಸರಿನ ಬಗ್ಗೆ ಮತ್ತಷ್ಟು
ಇದು ನಮಗೇ ಗೊತ್ತಿಲ್ಲದೇ ನಮ್ಮೊಳಗೆ ನಡೆಯುವ ಹಕೀಕತ್ತು. ನಮ್ಮೊಳಗೆ ನಾವೇ ಸಾಕಿಕೊಂಡು ಪೊರೆಯುವ ಸೋಲಿನ ಅಸಲಿಯತ್ತು. ಅಷ್ಟಕ್ಕೂ ಅಂದು ಆಗಿದ್ದೇನೆಂದರೆ, ದಕ್ಷಿಣ ಆಫ್ರಿಕಾದಲ್ಲಿ ಗಾರ್ಡ್‌ನ್ ರೂಟ್ ಎಂಬ ಮಾರ್ಗವಿದೆ. ಅದು ಹೆಸರೇ ಸೂಚಿಸುವಂತೆ, ಪ್ರಕೃತಿಯ ಸೊಬಗನ್ನೆಲ್ಲ ತನ್ನ ಮೇಲೆ ಬೋರಲು ಹಾಕಿಕೊಂಡ ನಯನ ಮನೋಹರ ಪ್ರದೇಶ.
ಎಷ್ಟು ನೋಡಿದರೂ, ಎತ್ತ ನೋಡಿದರೂ ಮುಗಿಯದ ನಿಸರ್ಗ ಚಿತ್ರಶಾಲೆ. ಈಸ್ಟರ್ನ್ ಕೇಪ್ ಹಾಗೂ ವೆಸ್ಟರ್ನ್ ಕೇಪ್ ಪ್ರಾಂತಗಳು ಸೇರುವ ಜಾಗದಲ್ಲಿ ತ್ಸಿತ್ಸಿಕಾಮ ಎಂಬ ಪ್ರದೇಶವಿದೆ. ಅಲ್ಲಿ ಬ್ಲೋಕ್ರಾನ್ಸ್ ಎಂಬ ನದಿ ಊರಲೆಲ್ಲ ವೈಯಾರ ಮಾಡಿ ಅಟ್ಲಾಂಟಿಕ್ ಮಹಾಸಾಗರ ಸೇರುತ್ತದೆ. ಈ ನದಿ ಆಳ ಕಣಿವೆಯನ್ನು ಬಳಸಿ ಹರಿದು ಹೋಗುತ್ತದೆ. ಈ ನದಿಗೆ ಅಡ್ಡವಾಗಿ ಒಂದು ಸುಂದರ ಸೇತುವೆ ಕಟ್ಟಿದ್ದಾರೆ. ಇದು ಜಗತ್ತಿನ ಸುಂದರ ಸೇತುವೆಗಳಲ್ಲೊಂದು. ಇದರ ಉದ್ದ ಸುಮಾರು ಎರಡೂಕಾಲು ಕಿಮಿ. ಜಗತ್ತಿನಲ್ಲಿ ಇಂಥ ಅನೇಕ ಸೇತುವೆಗಳಿರಬಹುದು. ಆದರೆ ಅವು ಯಾವುವೂ ಪ್ರಸಿದ್ಧವಾಗಿಲ್ಲ.
ಆದರೆ ಬ್ಲೋಕ್ರಾನ್ಸ್ ಬ್ರಿಡ್ಜ್ ಮಾತ್ರ ಸಾಹಸಿಗರ, ಎದೆಗಾರರ ಅಚ್ಚುಮೆಚ್ಚಿನ ತಾಣ. ಈ ಬ್ರಿಡ್ಜನ್ನು ಹುಡುಕಿಕೊಂಡು ಜಗತ್ತಿನ ಎಲ್ಲೆಡೆಗಳಿಂದಲೂ ಪ್ರತಿದಿನ ಜನ ಬರುತ್ತಾರೆ. ತಾವೆಷ್ಟು ಧೈರ್ಯ ವಂತರು, ಪುಕ್ಕಲರು ಎಂಬುದನ್ನು ಇಲ್ಲಿ ಸಾಕ್ಷಾತ್ ಪರೀಕ್ಷಿಸಿ, ಮನವರಿಕೆ ಮಾಡಿಕೊಂಡು ಹೋಗು ತ್ತಾರೆ.
ಕಾರಣ ಇಷ್ಟೆ. ಈ ಸೇತುವೆಯ ಮಧ್ಯ ಭಾಗದಲ್ಲಿ ವಿಶೇಷವಾಗಿ ನಿರ್ಮಿಸಲಾದ ಅಟ್ಟಣಿಗೆಯಿಂದ ಸಾಹಸಿಗಳು ಬಂದು ‘ಬಂಗೀ (ಬಂಜೀ) ಜಂಪ್’ ಮಾಡುತ್ತಾರೆ. ಇದು ಜಗತ್ತಿನ ಅತಿ ಎತ್ತರದ ಕಮರ್ಷಿಯಲ್ ಬ್ರಿಡ್ಜ್ ಬಂಗೀ ಜಂಪ್ ತಾಣ. ಸುಮಾರು 709 ಅಡಿ ಎತ್ತರದಿಂದ ಕಾಲಿಗೆ ಹಗ್ಗ ಕಟ್ಟಿಕೊಂಡು ಮುಖ ಕೆಳಗೆ ಮಾಡಿ, ಜೀವದ ಹಂಗು ತೊರೆದು, ಸಾವಿನ ಬೆನ್ನು ಬಡಿದು ಬರಲು ಜಿಗಿಯಬೇಕು.
ಸುಮಾರು ನಲವತ್ತಾರರಿಂದ ನಲವತ್ತೆಂಟು ಸೆಕೆಂಡುಗಳ ಫ್ರೀ ಫಾಲ್! ಆ ನಲವತ್ತೆಂಟು ಸೆಕೆಂಡು ಗಳಲ್ಲಿ ಸಾವು-ಬದುಕಿನ ಸಮೀಪ ದರ್ಶನವಾಗುತ್ತದೆ. ಬದುಕಿರುವಾಗಲೇ ಸಾವಿನ ಸಾಂಗತ್ಯದೆಡೆಗೆ ಹೋಗಬೇಕೆನಿಸಿದರೆ, ಅಂಥದ್ದೊಂದು ಸೇತುವೆಯಿಂದ ಜಿಗಿಯಬೇಕು. ಸಾವು ಎಂಥ ಕ್ರೂರ, ಭಯಾನಕ, ಬೀಭತ್ಸ ಎಂಬುದನ್ನು ಸಾಕ್ಷಾತ್ ಅನುಭವಿಸಬೇಕೆಂದರೆ ಅಲ್ಲಿಂದ ಜಿಗಿಯಬೇಕು. ಸಾವಿನ ತುಟಿ ಚುಂಬಿಸಿ, ಬದುಕಿನ ಆನಂದ ಅತಿರೇಕದ ಏಳಿಗೆಗಳ ಮೆಟ್ಟಿಲುಗಳನ್ನೆಣಿಸಲು ಬಂಗೀ ಜಂಪ್ ಮಾಡಬೇಕು.
ಒಂದು ರೀತಿಯಲ್ಲಿ ನೀವು ಫ್ರೀ ಪಾಲ್‌ನಲ್ಲಿದ್ದಾಗ ಜೀವಚ್ಛವ. ಸಾವಿನ ಕ್ಷಣಗಳನ್ನು ಆನಂದದ ಪರಮ ಅನುಭೂತಿಯಾಗಿ ಸಾಕ್ಷಾತ್ಕರಿಸಿಕೊಳ್ಳಲು ಬಂಗೀ ಜಂಪ್ ಮಾಡಬೇಕು. ಅಲ್ಲಿಂದ ಜಿಗಿಯುವಾಗ ಏನೂ ಆಗುವುದಿಲ್ಲವೆಂದು ನಮ್ಮನ್ನೇ ನಂಬಿಸಿಕೊಂಡು, ಆ ನಂಬಿಕೆ ನಮ್ಮನ್ನು ಬಿಟ್ಟು ಹೋಗದಂತೆ ಉಳಿಸಿಕೊಂಡು, ಎಲ್ಲವನ್ನೂ ಪರಮಾತ್ಮನ ಪಾದಕ್ಕೆ ಅರ್ಪಿಸಿ, ‘ಜೈ’ ಎಂದು ಜಿಗಿದುಬಿಡಬೇಕು.
ಕೆಳಗೆ ನೋಡಿದರೆ ಪ್ರಪಾತ, ಹರಿಯುವ ನೀರು! ನಿಮ್ಮನ್ನು ಬದುಕಿಸಲು, ರಕ್ಷಿಸಲು ಯಾರೂ ಬರಲೊಲ್ಲರು. ನೀವುಂಟು ಮತ್ತು ನೀವುಂಟು. ಎಷ್ಟೇ ಕಿರುಚಿಕೊಂಡರೂ ಸಹಾಯಕ್ಕೆ ಮತ್ತೊಬ್ಬ ಜೀವ ಪಿಳ್ಳೆ ಎಂಬುದು ಬರುವುದಿಲ್ಲ. ನುಣುಪಾದ ನೆಲದಲ್ಲಿ ಕಾಲು ಜಾರಿ ಬಿದ್ದರೆ ಆಘಾತವಾಗು ತ್ತದೆ.
ಜಾರಿದ ದೇಹ ಗಾಳಿಯಲ್ಲಿ ಒಂದು ಸೆಕೆಂಡ್ ಇದ್ದು, ನೆಲಕ್ಕೆ ಅಪ್ಪಳಿಸುವ ಹೊತ್ತಿಗೆ ಆ ಆಘಾತದ ತೀವ್ರತೆ ಎಷ್ಟಿರುತ್ತದೆಂದರೆ, ಸರಿಯಾಗಿ ಅಂಪಾಯಿಸಿಕೊಳ್ಳಲು ಕನಿಷ್ಠ ಅರ್ಧಗಂಟೆಯಾದರೂ ಬೇಕು. ಹೀಗಿರುವಾಗ ನಲವತ್ತೆಂಟು ಸೆಕೆಂಡುಗಳ ಕಾಲ 709 ಅಡಿ ಎತ್ತರದಿಂದ ಬೀಳುವಾಗ ಏನೇನೆಲ್ಲ ಆಗಬಹುದು... ಅಬ್ಬಬ್ಬಾ... ಯೋಚಿಸಲೂ ಆಗದು. ಅಷ್ಟು ಕಡಿಮೆ ಅವಧಿಯಲ್ಲಿ ಸಾವು ಬದುಕಿನ ದರ್ಶನ ಪಡೆಯಲು ಸಾಧ್ಯವೇ ಇಲ್ಲವೇನೋ? ಎರಡು ಮಹಡಿ ಕಟ್ಟಡದಿಂದ ಕೆಳಕ್ಕೆ ಗುದುಕಲು ಎಂಟೆದೆ ಬೇಕು. ಆದರೆ 709 ಅಡಿ ಎತ್ತರದಿಂದ ಕೆಳಗೆ ಮುಖ ಮಾಡಿ ಜಿಗಿಯಲು ಸಾವಿರದೆಂಟೆದೆಯೇ ಬೇಕು.
ಅಷ್ಟು ಎತ್ತರದಿಂದ ಬೀಳಬೇಕು ಎನ್ನುವುದೇ ಮೈನಡುಕ ಹುಟ್ಟಿಸುವ ಸಂಗತಿ. ಯಾಕಾದರೂ ಜಿಗಿದೆನೋ, ನನಗ್ಯಾಕೆ ಬೇಕಿತ್ತು ಈ ಉಸಾಬರಿ, ಬದುಕಿದ್ದರೆ ಬೆಲ್ಲವೋ, ಗಂಜಿಯೋ ತಿಂದುಕೊಂಡು ಹಾಯಾಗಿರಬಹುದು, ನಾನ್ಯಾಕೆ ಈ ಹರಸಾಹಸಕ್ಕೆ ಕೈ ಹಾಕಿದೆ ಎಂದು ಎಂಥವರಿಗಾದರೂ ಅನಿಸದೇ ಹೋಗುವುದಿಲ್ಲ. ಕಾಲಿಗೆ ಇಲೆಸ್ಟಿಕ್ ಹಗ್ಗ ಕಟ್ಟಿಕೊಂಡು ಜಿಗಿದು, ಕೆಲಕ್ಷಣ ಫ್ರೀ ಫಾಲ್ ಆದ ಬಳಿಕ ಪುನಃ ಮೇಲಕ್ಕೆ ಹೋಗಿ ಕೆಳಕ್ಕೆ ಬರುತ್ತೇವೆ.
ಎರಡು ಮೂರು ಸಲ ಹೀಗೆ ಆಗಿ ಕೊನೆಗೆ ತಲೆ ಕೆಳಗಾಗಿ ನೇತಾಡುತ್ತಿರುತ್ತೇವೆ. ಎಷ್ಟೇ ಎತ್ತರದಿಂದ ಬಂಗೀ ಜಂಪ್ ಮಾಡಿದರೂ, ನೆಲಕ್ಕಂತೂ ಬೀಳುವುದಿಲ್ಲ. ಪ್ರಾಣವಂತೂ ಹೋಗುವುದಿಲ್ಲ. ಆದರೆ ಎತ್ತರದಿಂದ ಜಿಗಿದು ಕೆಳಗೆ ಬೀಳುವಾಗಲೇ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗಿರುತ್ತದೆ. ಇಲ್ಲವೇ ಚಡ್ಡಿ ರಾಡಿಯಾಗಿರುತ್ತದೆ. ಆ ನಲವತ್ತೆಂಟು ಸೆಕೆಂಡ್ ಗಳಲ್ಲಿ ಏನು ಬೇಕಾದರೂ ಆಗಬಹುದು.
ಅಷ್ಟೆಲ್ಲ ಮಾಡಿ, ಧೈರ್ಯ ಮಾಡಿ ಜಿಗಿದರೆ, ರಾಷ್ಟ್ರಪತಿ ಪ್ರಶಸ್ತಿ ಕೊಡುವುದಿಲ್ಲವಲ್ಲ. ಅದಕ್ಕಿಂತ ಹೆಚ್ಚಾಗಿ, ಇದೊಂದು ದುಸ್ಸಾಹಸ. ಪ್ರಾಣವನ್ನು ಪಣಕ್ಕಿಟ್ಟು ಜಿಗಿಯಬೇಕು. ಹೀಗಿದ್ದರೂ ಇಲೆಸ್ಟಿಕ್ ಹಗ್ಗವನ್ನು ಕಾಲಿಗೆ ಕಟ್ಟಿರುವುದರಿಂದ ಏನೂ ಆಗುವುದಿಲ್ಲ, ಖರೆ. ಆದರೆ ನಮ್ಮ ಗ್ರಹಚಾರಕ್ಕೆ ನಾವು ಜಿಗಿದಾಗಲೇ ಹಗ್ಗ ಕಟ್ ಆದರೆ? ಮೇಲಿಂದ ಜಿಗಿಯುವಾಗ ಹಾರ್ಟ್ ಅಟ್ಯಾಕ್ ಆದರೆ? ದೇಹದ ಯಾವುದಾದರೂ ಭಾಗಕ್ಕೆ ಏಟು ಬಿದ್ದರೆ? ಇನ್ನೇನೋ ಆಗಿ ಆಘಾತಕ್ಕೊಳಗಾದರೆ? ಮತ್ತಿನ್ನೇನೋ ಆದರೆ? ಅಂದು ನಾನು ಬ್ಲೋಕ್ರಾನ್ಸ್ ನದಿ ಸೇತುವೆಯಂಚಿನ ಬಂಗೀ ಜಂಪ್ ಬೇಸ್ ಕ್ಯಾಂಪ್‌ನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಮನಸ್ಸಿನಲ್ಲಿ ಹತ್ತಾರು, ನೂರಾರು ಪ್ರಶ್ನೆಗಳು ಮುಕರಿಕೊಂಡಿದ್ದವು.
ಇವೆಲ್ಲಕ್ಕಿಂತ ಮುಖ್ಯವಾಗಿ ಕಾಡಿದ ಪ್ರಶ್ನೆಯೆಂದರೆ, ಜಿಗಿಯಲು ಹೋದಾಗ ಏನೋ ಯಡವಟ್ಟಾ ದರೆ, ಈ ಭಟ್ಟರಿಗೆ ಇದೆಲ್ಲ ಯಾಕೆ ಬೇಕಿತ್ತು, ಅವರಿಗೆ ಸ್ವಲ್ಪವೂ ಬುದ್ಧಿ ಇಲ್ಲವಾ, ಎಲ್ಲ ಬಿಟ್ಟ ಬಂಗಿ ನೆಟ್ಟ ಎಂಬಂತೆ ಎಲ್ಲ ಬಿಟ್ಟು, ಬಂಗೀ ಜಂಪ್ ಮಾಡು ಅಂತ ಯಾರು ಹೇಳಿದ್ರು, ಅವರ ಪಾಡಿಗೆ ಅವರು ವಾರಕ್ಕೆ ನಾಲ್ಕು ಕಾಲಮ್ಮು ಬರಕೊಂಡು ಇರೋದನ್ನು ಬಿಟ್ಟು ಆಫ್ರಿಕಾದ ಕಾಡಿನಲ್ಲಿ ಮೇಲಿಂದ ಜಿಗಿಯಲು ಹೋಗಿ, ಏನೋ ಪರಾಮಶಿ ಮಾಡಿಕೊಂಡು ಪ್ರಾಣ ಕಳೆದುಕೊಂಡರೆ, ‘ಬಂಗೀ ಜಂಪ್ ಮಾಡಲು ಹೋದ ಸಂಪಾದಕನ ದಾರುಣ ಸಾವು’ ಎಂದು ಸುದ್ದಿ ಪ್ರಕಟವಾದರೆ, ನನ್ನ ಪೋಟೋಕ್ಕೆ ‘ಜಂಪ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಸಂಪಾದಕರ ಭಂಗಿ’ ಎಂಬ ಕ್ಯಾಪ್‌ಶನ್ ಕೊಟ್ಟರೆ, ಸಂಪಾದಕರಾದವರಿಗೆ ಇವೆಲ್ಲ ಶೋಭೆ ತರುವುದಾ ಎಂದು ಜನ ಆಡಿ ಕೊಳ್ಳದೇ ಬಿಡ್ತಾರಾ... ಈ ಪ್ರಶ್ನೆಗಳೆಲ್ಲ ಅಲೆಅಲೆಯಾಗಿ ತೇಲಿ ಮನಸ್ಸಿನ ಗೋಡೆಗೆ ಡಿಕ್ಕಿ ಹೊಡೆಯು ತ್ತಿದ್ದರೆ, ನನ್ನ ಜಂಘಾಬಲವೇ ಉಡುಗಿ ಹೋಯಿತು.
‘ಫೇಸ್ ಅಡ್ರನಲಿನ್’ ಎಂಬ ಸಂಸ್ಥೆ ಆ ಜಾಗದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬಂಗೀ ಜಂಪ್ ನಡೆಸಿಕೊಂಡೇ ಬರುತ್ತಿದೆ. ಪ್ರತಿದಿನ ಕನಿಷ್ಠ ಇನ್ನೂರು ಮಂದಿ ಬಂಗೀ ಜಂಪ್ ಮಾಡುತ್ತಾರೆ. ಸುಮಾರು ಆರು ನೂರು ಮಂದಿ ಜಿಗಿಯದೇ ವಾಪಸ್ ಹೋಗುತ್ತಾರೆ. ಇನ್ನು ಕೆಲವರು ಜಿಗಿಯುವ ಎಲ್ಲ ತಯಾರಿ ಮಾಡಿಕೊಂಡು ಕಾಲಿಗೆ ಹಗ್ಗವನ್ನೂ ಕಟ್ಟಿಕೊಂಡು, ಇಬ್ಬರು ಸಹಾಯಕರು ಇನ್ನೇನು ತಳ್ಳಬೇಕು ಎನ್ನುವಷ್ಟರೊಳಗೆ, ತಮ್ಮ ಮುಂದಿನ ಕಣಿವೆ, ಕೆಳಗಿನ ಪ್ರಪಾತ, ಹರಿವ ನದಿ, ಹರಡಿದ ಬಂಡೆ, ಆವರಿಸಿಕೊಂಡ ಕಾಡು, ನೀರವತೆ, ಸಾವಿನ ಭೀಕರತೆ, ಹೆದರಿಕೆಯ ಅಬ್ಬರ... ಎಲ್ಲವನ್ನೂ ನೆನೆದು, ಸಾಹಸಕ್ಕಿಂತ ಜೀವ ಉಳಿದುಕೊಂಡರೆ ಸಾಕು ಎಂದು ತಕ್ಷಣ ಹಿಂದಕ್ಕೇ ಸರಿದು ಬಿಡುತ್ತಾರೆ.
ಯಾವುದೋ ಒಂದು ಶಕ್ತಿ ಅವರನ್ನು ಜಿಗಿಯದಂತೆ ಹಿಂದಕ್ಕೆ ಎಳೆದು ಬಿಡುತ್ತದೆ. ಮತ್ತೆ ಕೆಲವರು ತಮ್ಮನ್ನು ಜಿಗಿಯಲು ಅಣಿಗೊಳಿಸುವ ಸಹಾಯಕರನ್ನು ಸೇರಿಸಿಕೊಂಡೇ ಜಿಗಿಯುವ ಪ್ರಯತ್ನ ವನ್ನೂ ಮಾಡುತ್ತಾರೆ (ಆದರೆ ಸಹಾಯಕರು ಇಂಥ ಪ್ರಸಂಗವನ್ನು ಊಹಿಸಿಯೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬೀಳದಂತೆ ಎಚ್ಚರ ವಹಿಸುತ್ತಾರೆನ್ನಿ).
ಬೇಸ್ ಕ್ಯಾಂಪ್‌ನಲ್ಲಿ ಜಿಗಿಯಲು ಹೋಗುವವರ ಇಡೀ ದೇಹಕ್ಕೆ ಬೆಲ್ಟ್ ಕಟ್ಟಿ, ತೂಕ ನೋಡಿ, ಫೇಸ್ ಫಿಯರ್ ಎಂಬ ಸ್ಟಿಕ್ಕರ್ ಅಂಟಿಸಿ, ಮಾನಸಿಕವಾಗಿ ಅಣಿಗೊಳಿಸಿ ಸಿದ್ಧ ಮಾಡಿ ಕಳಿಸುತ್ತಾರೆ. ಅದಾದ ಬಳಿಕ ಒಬ್ಬ ಗೈಡ್ ಒಂದು ತಂಡವನ್ನು ಜಂಪ್ ಮಾಡುವಾಗ ಅನುಸರಿಸಬೇಕಾದ ಕ್ರಮ, ಎಚ್ಚರಿಕೆ, ವಿಧಾನ, ಸಂಭಾವ್ಯ ಪ್ರಸಂಗ, ಆಗಾಗ ಏಳುವ ಪ್ರಶ್ನೆಗಳಿಗೆಲ್ಲ ಸಮಾಧಾನಕರ ಉತ್ತರ ನೀಡುತ್ತಾನೆ. ಬಂಗೀ ಜಂಪ್‌ನ ರೋಮಾಂಚನಕಾರಿ ಅನುಭವ ಹೇಳಿ ಪ್ರೇರೇಪಿಸುತ್ತಾನೆ.
ಆನಂತರ ಸೇತುವೆಯ ಒಂದು ಪಾರ್ಶ್ವದಲ್ಲಿ ಕಟ್ಟಿದ ಕಬ್ಬಿಣದ ಜಾಲರಿ ( mesh ) ಸೇತುವೆಯ ಮೇಲೆ ಕರೆದುಕೊಂಡು ಹೋಗುತ್ತಾನೆ. ಈ ಸೇತುವೆ ಮೇಲೆ ನಡೆಯುವಾಗ ಕೆಳಗೆ ನೋಡಿದರೆ, ಒಂದು ಹೆಜ್ಜೆಯನ್ನೂ ಇಡಲಾಗುವುದಿಲ್ಲ. ಮುಂದೆ ನೋಡುತ್ತಲೇ ನಡೆಯಬೇಕು. ಕೆಳಗೆ ನೋಡಿದರೆ ತಲೆ ಚಕ್ಕರ್ ಹೊಡೆಸುವ ಪ್ರಪಾತ. ಮುಂದೆ ನೋಡುತ್ತಾ ನಡೆಯುವಾಗ ಕಾಲಿಡುವಾಗ ಜಾಲರಿ ತೂತಾಗಿದ್ದರೆ, ಕೆಳಕ್ಕೆ ಬೀಳುತ್ತವೇವಲ್ಲ ಎಂಬ ಭಯದಿಂದ ಅಪ್ರಯತ್ನಪೂರ್ವಕವಾಗಿ ಲಕ್ಷ್ಯವೆಲ್ಲ ಕಾಲಬುಡಕ್ಕೇ ಹೋಗುತ್ತದೆ.
ಕೆಳಗಿನ ಪ್ರಪಾತ ಕಂಡು ಹೆಜ್ಜೆ ಕಿತ್ತಿಡಲು ಆಗುವುದಿಲ್ಲ. ಈ ಸೇತುವೆ ಮೇಲೆ ನಡೆಯುವುದೇ ಒಂದು ದೊಡ್ಡ ಸಾಹಸ, ಬಂಗಿ ಜಂಪ್ ಮಾಡುವುದಿರಲಿ, ಕೆಲವರು ಜಂಪ್ ಮಾಡುವ ಸ್ಥಳಕ್ಕೆ ಹೋಗ ಬೇಕಾದ ಈ ಸೇತುವೆ ಮೇಲೆ ನಡೆಯಲಾಗದೇ ಹೆದರಿ ವಾಪಸ್ ಬಂದು ಬಿಡುತ್ತಾರೆ. ಇಷ್ಟೆಲ್ಲ ಮಾಡಿ, ಬಂಗಿ ಜಂಪ್ ಮಾಡುವ ಸಾಹಸಕ್ಕೆ ಬಂದರೆ, ಅದಕ್ಕಿಂತ ಮುನ್ನ ಜಿಗಿದವರ ಕಿರುಚಾಟ, ರೌದ್ರ ನರ್ತನ, ಆಕ್ರಂದನಗಳನ್ನು ಅಲ್ಲಿ ಇಟ್ಟಿರುವ ಟಿವಿ ಪರದೆಯಲ್ಲಿ ನೋಡಿದರೆ, ಕರುಳೆಲ್ಲ ಕೈಗೆ ಬಂದಂತಾಗುತ್ತದೆ.
ನಾಲಗೆ ಒಣಗಿ, ಮಾತು ಮರೆತು ಹೋದಂತೆನಿಸುತ್ತದೆ. ಇನ್ನೇನು ಜಂಪ್ ಮಾಡಬೇಕು ಎನ್ನುವ ತಾಣದಲ್ಲಿ ನಿಂತು ಸುತ್ತಲ ದಿಗಂತ ದಿಟ್ಟಿಸಿ, ಮುಂದಿನ ನಲವತ್ತೆಂಟು ಸೆಕೆಂಡುಗಳನ್ನು ಮನಸ್ಸಿ ನಲ್ಲಿ ಊಹಿಸಿದೆ. ನಿಂತ ಅಟ್ಟಣಿಗೆಯೇ ಕುಸಿದು ಹೋದಂತಾಯಿತು. ಬದುಕಿದರೆ ಬೇಡಿಕೊಂಡಾ ದರೂ ಬದುಕಬಹುದು, ಇಂಥ ದುಸ್ಸಾಹಸಕ್ಕೆ ಹೋಗಬೇಡ ಎಂದು ಒಳಮನಸ್ಸು ಕೈ ಜಗ್ಗಿ ಹಿಂದಕ್ಕೆ ಎಳೆದಂತಾಯಿತು.
ಆ ಕ್ಷಣದಲ್ಲಿಯೇ ಹಿಂದೆ ಹೆಜ್ಜೆ ಹಾಕಿದೆ ! ಅದು ನನ್ನ ವೈಯಕ್ತಿಕ ಸೋಲು. ಈಗಲೂ ಆ ಸೋಲು ನನ್ನನ್ನು ವಿಪರೀತ ಕಾಡುತ್ತಿದೆ. ಏನೇ ಆದರೂ ಕೈಚೆಲ್ಲಬಾರದಿತ್ತು. ಜಿಗಿಯಬೇಕಿತ್ತು. ಸಾವಿನ ದವಡೆ ಯೊಳಗೆ ಹೊಕ್ಕಿ, ಆನಂದದ ಅತಿರೇಕದ ಅಬ್ಬರದ ಅಲೆಯಲ್ಲಿ ತೇಲುವ ಒಂದು ಅನೂಹ್ಯ ಅನುಭವ ತಪ್ಪಿಸಿಕೊಂಡ ಒಂದು ದಿವ್ಯನೋವು ಈಗಲೂ ವಿಪರೀತ ಬಾಧಿಸುತ್ತಿದೆ.
Those who don't jump will never fly ಎಂಬ ಮಾತಿದೆ. ಈ ಮಾತು ನನ್ನಂಥವರಿಗಾಗಿಯೇ ಹೇಳಿರಬೇಕು. ‘ಜೀವನದಲ್ಲಿ ತಾನು ಏನೇ ಆದರೂ ಸೋಲಲಾರೆ ಎಂಬ ಪಾಠದ ನೀತಿ ಅರ್ಥವಾಗ ಬೇಕಾದರೆ ನೀವು ಬಂಗೀ ಜಂಪ್ ಮಾಡಬೇಕು. ಆದರೆ ಬಹುತೇಕ ಮಂದಿ (ಸೋಲುತ್ತೇನೆಂಬ) ಹೆದರಿಕೆಯಿಂದ ಜಂಪ್ ಮಾಡುವುದೇ ಇಲ್ಲ. ಅಂಥವರಿಗೆ ಬದುಕಿರುವಾಗ ಸಾವನ್ನು ನೋಡುವ ಅನುಭವವೇ ಆಗುವುದಿಲ್ಲ’ ಎಂದ ನಮ್ಮ ಜತೆಗಿದ್ದ ಬಂಗೀ ಜಂಪ್ ಗೈಡ್. ನನ್ನನ್ನು ಅಣಕಿಸಲೆಂದೇ ಆ ಮಾತುಗಳನ್ನು ಹೇಳಿದ ಎಂದು ಭಾವಿಸಿದೆ.
If it scares you, it might be a good thing to try ಎಂದ. ನನಗೆ ತೀವ್ರ ವಿಷಾದವೆನಿಸಿತು. ನಾವು ಯಾವುದನ್ನು ಎಲ್ಲಿ ಕಳೆದುಕೊಂಡಿದ್ದೇವೋ, ಅಲ್ಲಿಯೇ ಹುಡುಕ ಬೇಕಂತೆ. ಅದನ್ನು ಅಲ್ಲಿಯೇ ಪಡೆಯಲು ಸಾಧ್ಯ. ದಕ್ಷಿಣ ಆಫ್ರಿಕಾದ ಬ್ಲೋಕ್ರಾನ್ಸ್ ಕಣಿವೆಯಲ್ಲಿ ಕಳೆದು ಹೋದ ನನ್ನನ್ನು ಹಾಗೂ ನನ್ನ ಧೈರ್ಯವನ್ನು ಅಲ್ಲಿಯೇ ಪಡೆಯಬೇಕೆಂದು ನಿರ್ಧರಿಸಿದೆ. ಈ ಕಿಚ್ಚಿನಲ್ಲೇ ಕೆಳಗೆ ಕಣಿವೆ, ದುರ್ಗಮ ಪ್ರಪಾತ, ತಂತಿಯ ಮೇಲೆ ಜಾರುವ ಜಿಪ್ ಲೈನಿಂಗ್ ಮಾಡಲೇಬೇಕೆಂದು ನಿರ್ಧರಿಸಿ ತಂತಿಯ ಮೇಲೆ ಜಾರಿದೆ. ಏಕೋ ಬಂಗೀ ಜಂಪ್‌ನ ಕ್ರೂರ ಅಣಕ ಎಂದೆನಿಸಿಬಿಟ್ಟಿತು.
If you want something you never had, you have to do something you have never done ಎಂಬ ಮಾತು ಎಷ್ಟೊಂದು ಸತ್ಯ ! I do. Certainly!