Vishweshwar Bhat Column: ‘ಫೈನಾನ್ಷಿಯಲ್ ಟೈಮ್ಸ್’ನ ಆ ಬಣ್ಣ
ನಸುಗೆಂಪು ಅಥವಾ ತಿಳಿ ಗುಲಾಬಿ ಬಣ್ಣದ (Salmon Pink) ಕಾಗದದ ಮೇಲೆ ಕಡುಕಪ್ಪು ಅಕ್ಷರ ಗಳಲ್ಲಿ ಮುದ್ರಿತವಾಗಿ ಹೊರಬರುವ ಈ ಪತ್ರಿಕೆ, ವಿಶ್ವದ ಯಾವುದೇ ಮೂಲೆಯಲ್ಲಾದರೂ ಸರಿಯೇ, ನೂರಾರು ದಿನಪತ್ರಿಕೆಗಳ ನಡುವೆ ಎದ್ದು ಕಾಣುತ್ತದೆ. ಇಂದು ಜಾಗತಿಕ ಹಣಕಾಸು ಜಗತ್ತಿನ ಅತ್ಯುನ್ನತ ಮೌಲ್ಯ ಮತ್ತು ದರ್ಜೆಯ ಸಂಕೇತವಾಗಿರುವ ಈ ಸಾಲ್ಮನ್ ಬಣ್ಣದ ಕಾಗದದ ಜನನದ ಹಿಂದೆ ಯಾವುದೇ ದುಬಾರಿ ಬ್ರ್ಯಾಂಡಿಂಗ್ ತಜ್ಞರ ಆಲೋಚನೆಯಾಗಲಿ ಅಥವಾ ಮಾರುಕಟ್ಟೆ ಸಂಶೋಧನೆಯಾಗಲಿ ಇರಲಿಲ್ಲ.
-
ಸಂಪಾದಕೀಯ ಸದ್ಯಶೋಧನೆ
ಜಾಗತಿಕ ಪತ್ರಿಕೋದ್ಯಮದ ಇತಿಹಾಸವನ್ನು ಗಮನಿಸಿದರೆ, ಕೆಲವು ಪತ್ರಿಕೆಗಳು ತಮ್ಮ ಸುದ್ದಿ ವೈಖರಿ, ರಾಜಕೀಯ ನಿಲುವು ಅಥವಾ ತನಿಖಾ ವರದಿಗಾರಿಕೆಯಿಂದ ಜನಮಾನಸದಲ್ಲಿ ನಿಲ್ಲುತ್ತವೆ. ಆದರೆ ಲಂಡನ್ ಮೂಲದ ಪ್ರತಿಷ್ಠಿತ ‘ಫೈನಾನ್ಷಿಯಲ್ ಟೈಮ್ಸ್’ (FT) ಪತ್ರಿಕೆಯು ಇವೆಲ್ಲವುಗಳ ಜತೆಗೆ, ತಕ್ಷಣ ಗುರುತಿಸಬಹುದಾದ ತನ್ನದೇ ಅಪರೂಪದ ದೃಶ್ಯ ವೈಶಿಷ್ಟ್ಯದಿಂದ ಜಗದ್ವಿಖ್ಯಾತ ವಾಗಿದೆ.
ನಸುಗೆಂಪು ಅಥವಾ ತಿಳಿ ಗುಲಾಬಿ ಬಣ್ಣದ (Salmon Pink) ಕಾಗದದ ಮೇಲೆ ಕಡುಕಪ್ಪು ಅಕ್ಷರ ಗಳಲ್ಲಿ ಮುದ್ರಿತವಾಗಿ ಹೊರಬರುವ ಈ ಪತ್ರಿಕೆ, ವಿಶ್ವದ ಯಾವುದೇ ಮೂಲೆಯಲ್ಲಾದರೂ ಸರಿಯೇ, ನೂರಾರು ದಿನಪತ್ರಿಕೆಗಳ ನಡುವೆ ಎದ್ದು ಕಾಣುತ್ತದೆ. ಇಂದು ಜಾಗತಿಕ ಹಣಕಾಸು ಜಗತ್ತಿನ ಅತ್ಯುನ್ನತ ಮೌಲ್ಯ ಮತ್ತು ದರ್ಜೆಯ ಸಂಕೇತವಾಗಿರುವ ಈ ಸಾಲ್ಮನ್ ಬಣ್ಣದ ಕಾಗದದ ಜನನದ ಹಿಂದೆ ಯಾವುದೇ ದುಬಾರಿ ಬ್ರ್ಯಾಂಡಿಂಗ್ ತಜ್ಞರ ಆಲೋಚನೆಯಾಗಲಿ ಅಥವಾ ಮಾರುಕಟ್ಟೆ ಸಂಶೋಧನೆಯಾಗಲಿ ಇರಲಿಲ್ಲ.
ಬದಲಿಗೆ, ಪತ್ರಿಕಾ ಪ್ರಪಂಚದ ಒಂದು ಕಠಿಣ ಆರ್ಥಿಕ ಅನಿವಾರ್ಯತೆ ಹಾಗೂ ಖರ್ಚು ಉಳಿಸುವ ತಂತ್ರಗಾರಿಕೆಯೇ ಈ ಬಣ್ಣಕ್ಕೆ ಜನ್ಮ ನೀಡಿತು. 1888ರ ಜನವರಿಯಲ್ಲಿ ‘ಲಂಡನ್ ಫೈನಾನ್ಷಿಯಲ್ ಗೈಡ್’ ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದಾಗ ಕೇವಲ ನಾಲ್ಕು ಪುಟಗಳ ಪ್ರಕಟಣೆಯಾಗಿತ್ತು. ಅದೇ ವರ್ಷ ಫೆಬ್ರವರಿಯಲ್ಲಿ ಪತ್ರಿಕೆಯನ್ನು ‘ಫೈನಾನ್ಷಿಯಲ್ ಟೈಮ್ಸ್’ ಎಂದು ಮರು ನಾಮಕರಣ ಮಾಡಲಾಯಿತು. ಆ ದಿನಗಳಲ್ಲಿ ಲಂಡನ್ನ ಫ್ಲೀಟ್ ಸ್ಟ್ರೀಟ್ನಿಂದ ಪ್ರಕಟ ವಾಗುತ್ತಿದ್ದ ಪ್ರತಿ ದಿನಪತ್ರಿಕೆಯೂ ಬಿಳಿ ಕಾಗದದ ಅಚ್ಚಾಗುತ್ತಿತ್ತು.
ಇದನ್ನೂ ಓದಿ: Vishweshwar Bhat Column: ವೈಟ್ ಹೌಸ್ ಕರೆಸ್ಪಾಂಡೆಂಟ್ಸ್
ಫೈನಾನ್ಷಿಯಲ್ ಟೈಮ್ಸ್ ಕೂಡ ಅದೇ ಹಾದಿಯಲ್ಲಿ ಬಿಳಿ ಕಾಗದದ ಮೇಲೆಯೇ ತನ್ನ ಮೊದಲ ಐದು ವರ್ಷಗಳ ಕಾಲ ಓದುಗರ ಕೈ ಸೇರಿತು. ಪತ್ರಿಕೆಯು ಆರಂಭದಿಂದಲೂ ನಿಖರವಾದ ಷೇರು ಮಾರುಕಟ್ಟೆ ವರದಿಗಳು, ಹೂಡಿಕೆದಾರರಿಗೆ ಅಗತ್ಯವಾದ ವಿಶ್ಲೇಷಣೆಗಳು ಮತ್ತು ಪ್ರಾಮಾಣಿಕ ಹಣಕಾಸು ಮಾಹಿತಿಯನ್ನು ನೀಡುವ ಗುರಿ ಹೊಂದಿತ್ತು. ಆದರೆ ಆರಂಭದ ದಿನಗಳಲ್ಲಿ ಪತ್ರಿಕೆಗೆ ಓದುಗರ ಸಂಖ್ಯೆ ಮತ್ತು ಜಾಹೀರಾತುಗಳ ಆದಾಯ ಎರಡೂ ಅತ್ಯಂತ ಸೀಮಿತವಾಗಿದ್ದವು. ಆ ಕಾಲಘಟ್ಟದಲ್ಲಿ ಲಂಡನ್ನ ಹಣಕಾಸು ಜಗತ್ತಿನಲ್ಲಿ ಈಗಾಗಲೇ ಆಳವಾಗಿ ಬೇರೂರಿದ್ದ ಮತ್ತೊಂದು ಪ್ರಬಲ ದಿನಪತ್ರಿಕೆ ಇತ್ತು.
ಅದೇ 1884ರಲ್ಲಿ ಸ್ಥಾಪನೆಯಾಗಿದ್ದ ‘ಫೈನಾನ್ಷಿಯಲ್ ನ್ಯೂಸ್’. ಈ ಪತ್ರಿಕೆಯು ಆರ್ಥಿಕ ಪತ್ರಿಕೋ ದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಗಣನೀಯ ಮಾರುಕಟ್ಟೆ ಪಾಲನ್ನು ತನ್ನ ಹಿಡಿತದಲ್ಲಿಟ್ಟು ಕೊಂಡಿತ್ತು. ಇಂಥ ದೈತ್ಯ ಪ್ರತಿಸ್ಪರ್ಧಿಯ ಎದುರು ಹೊಸದಾಗಿ ಹುಟ್ಟಿಕೊಂಡ ‘ಫೈನಾನ್ಷಿಯಲ್ ಟೈಮ್ಸ್’ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಬೆಳೆಯಲು ಹೆಣಗಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿತ್ತು.
ಸುದ್ದಿ ನೀಡುವ ವಿಚಾರದಲ್ಲಿ ಎಷ್ಟೇ ಚುರುಕಾಗಿದ್ದರೂ, ಮಾರಾಟ ಮಳಿಗೆಗಳಲ್ಲಿ ಮತ್ತು ಲಂಡನ್ ನ ರೈಲ್ವೆ ನಿಲ್ದಾಣಗಳ ಬುಕ್ಸ್ಟಾಲ್ಗಳಲ್ಲಿ ಒಂದೇ ರೀತಿಯ ಬಿಳಿ ಕಾಗದದಲ್ಲಿ ಮುದ್ರಿತವಾಗುತ್ತಿದ್ದ ಎರಡೂ ಪತ್ರಿಕೆಗಳನ್ನು ಸಾಮಾನ್ಯ ಓದುಗರು ಮೇಲ್ನೋಟಕ್ಕೆ ಬೇರ್ಪಡಿಸುವುದು ಕಷ್ಟಕರ ವಾಗಿತ್ತು. ಹೀಗಾಗಿ ತನ್ನ ಪ್ರತಿಸ್ಪರ್ಧಿಗಿಂತ ಭಿನ್ನವಾಗಿ ನಿಲ್ಲುವುದರ ಜತೆಗೆ, ಮುದ್ರಣ ವೆಚ್ಚ ಕಡಿತಗೊಳಿಸುವುದು ಎಫ್ʼಟಿಯ ಮಾಲೀಕರಿಗೆ ಅನಿವಾರ್ಯ ಪರಿಣಮಿಸಿತು.
1893ರಲ್ಲಿ ಪತ್ರಿಕೆಯ ನಿರ್ವಹಣಾ ಮಂಡಳಿಯು ಈ ಎರಡೂ ಸಮಸ್ಯೆಗಳಿಗೆ ಒಂದೇ ಏಟಿಗೆ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಿತು. ಆ ಕಾಲದಲ್ಲಿ ಮುದ್ರಣಕ್ಕಾಗಿ ಬಳಸುತ್ತಿದ್ದ ಕಾಗದದ ತಯಾರಿಕೆಯಲ್ಲಿ ಬ್ಲೀಚಿಂಗ್ (Bleaching) ಪ್ರಕ್ರಿಯೆ ಅತ್ಯಂತ ದುಬಾರಿ ಹಂತವಾಗಿತ್ತು. ಮರದ ನೈಸರ್ಗಿಕ ತಿರುಳಿನಿಂದ ಕಾಗದ ತಯಾರಿಸುವಾಗ ಮೂಲತಃ ಮಾಸಲು ಬಣ್ಣ ಅಥವಾ ನಸುಕಂದು ಛಾಯೆಯಲ್ಲಿ ಇರುತ್ತಿತ್ತು. ಅದನ್ನು ಸಂಪೂರ್ಣ ಬಿಳಿಯಾಗಿಸಲು ರಾಸಾಯನಿಕ ಬಳಸಿ ಬ್ಲೀಚ್ ಮಾಡಬೇಕಾಗಿತ್ತು ಮತ್ತು ಈ ಸಂಸ್ಕರಣೆಗೆ ಹೆಚ್ಚಿನ ಹಣ ಖರ್ಚಾಗುತ್ತಿತ್ತು.
ಎಫ್ʼಟಿಯ ನಿರ್ವಾಹಕರು ಒಂದು ಸರಳ ಲೆಕ್ಕ ಹಾಕಿದರು- ಕಾಗದವನ್ನು ಸಂಪೂರ್ಣವಾಗಿ ಬ್ಲೀಚ್ ಮಾಡುವ ಬದಲು, ಅನ್ಬ್ಲೀಚ್ಡ್ ನೈಸರ್ಗಿಕ ತಿರುಳಿಗೆ ಅತ್ಯಲ್ಪ ಪ್ರಮಾಣದ ಕೆಂಪು ಛಾಯೆಯ ಡೈ ( Dye) ಬೆರೆಸಿದರೆ, ಅದು ಮರದ ಕಂದು ಬಣ್ಣದೊಂದಿಗೆ ಬೆರೆತು ಒಂದು ವಿಶಿಷ್ಟವಾದ ತಿಳಿ ಸಾಲ್ಮನ್ ಬಣ್ಣ ಪಡೆಯುತ್ತದೆ. ಹೀಗೆ ತಯಾರಾಗುವ ಕಾಗದವು ಮಾಮೂಲಿ ಬಿಳಿ ನ್ಯೂಸ್ಪ್ರಿಂಟ್ ಗಿಂತ ಪ್ರತಿ ಟನ್ಗೆ ಗಣನೀಯವಾಗಿ ಅಗ್ಗವಾಗಿತ್ತು. ಹೀಗೆ ವೆಚ್ಚ ಕಡಿತದ ಭಾಗವಾಗಿ 1893ರ ಜನವರಿ 2ರಂದು ಫೈನಾನ್ಷಿಯಲ್ ಟೈಮ್ಸ್ ಇತಿಹಾಸದ ಮೊದಲ ಬಾರಿಗೆ ತನ್ನ ಸಾಲ್ಮನ್-ಪಿಂಕ್ ಕಾಗದದ ಆವೃತ್ತಿ ಯನ್ನು ಹೊರ ತಂದಿತು