ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mirley Chandrashekher Column: ಹರ್ಷದ ಕೂಳಿಗೆ ಆಸೆಗೆ, ವರ್ಷದ ಕೂಳು ಕೈತಪ್ಪದಿರಲಿ

ಸುಮಾರು 30 ವರ್ಷಗಳ ಹಿಂದೆ ಮಂಡ್ಯದಲ್ಲಿ ಸರಕಾರಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭ ದಲ್ಲಿ, ಆಗ ತಾನೆ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಹುಡುಗನೊಬ್ಬ ಟ್ರೈನಿಯಾಗಿ ನಮ್ಮ ಕಚೇರಿಗೆ ನಿಯೋಜಿತಗೊಂಡಿದ್ದ. ಆತ ಭಾರತೀಯ ನಾಗರಿಕ ಸೇವೆಗೆ ಸೇರಲೆಂದು ಯುಪಿ ಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅವನಿಗೋ ಬಹಳವೇ ಆತ್ಮವಿಶ್ವಾಸವಿತ್ತು- ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿಯೇ ಮಾಡುತ್ತೇನೆ ಅಂತ. ಕುಳಿತಲ್ಲಿ ನಿಂತಲ್ಲಿ ಅದೇ ಗುಂಗಿನಲ್ಲಿ ಇರುತ್ತಿದ್ದ

ಹರ್ಷದ ಕೂಳಿಗೆ ಆಸೆಗೆ, ವರ್ಷದ ಕೂಳು ಕೈತಪ್ಪದಿರಲಿ

Profile Ashok Nayak May 5, 2025 10:00 AM

ಕಿವಿಮಾತು

ಮಿರ್ಲೆ ಚಂದ್ರಶೇಖರ

2024ರಲ್ಲಿ ನಡೆದ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ. ಇದರಲ್ಲಿ ಆಯ್ಕೆಯಾದ 1009 ಮಂದಿಯಲ್ಲಿ ಕರ್ನಾಟಕದ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಇರುವುದು ಸಂತೋಷದ ವಿಷಯ. ಅಭ್ಯರ್ಥಿಗಳ ಪರಿಶ್ರಮ ಎಷ್ಟಿತ್ತು ಎಂಬುದನ್ನು ಅವರು ಮಾಧ್ಯಮಗಳಲ್ಲಿ ನೀಡಿದ ಸಂದರ್ಶನ ಗಳಲ್ಲಿ ನೋಡಿದ್ದೇವೆ. ಈಗ ನಮಗೆ ಇವರಷ್ಟೇ ಕಾಣುತ್ತಿರುವುದು. ಆದರೆ ಹಲವಾರು ವರ್ಷಗಳಿಂದ ಹಗಲಿರುಳೂ ಅಭ್ಯಾಸ ಮಾಡಿಯೂ ಯಶಸ್ಸು ಕಾಣದವರು ಲಕ್ಷಾಂತರ ಮಂದಿ ಇದ್ದಾರೆ. ಇಂಥ ಯುವಕ-ಯುವತಿಯರು ಅದೇ ಗುಂಗಿನಲ್ಲಿ ಇರುತ್ತಾರೆ. ಇವರಲ್ಲಿ ಕೆಲವರು ಮುಂದಿನ ಪರೀಕ್ಷೆ ಗಳಲ್ಲಿ ಆಯ್ಕೆ ಆಗಬಹುದು. ಆದರೆ ನಾವೀಗ ಯೋಚಿಸಬೇಕಿರುವುದು ನಿರಾಶರಾಗಿರುವ ಗಣನೀಯ ಸಂಖ್ಯೆಯ ಅಭ್ಯರ್ಥಿಗಳ ಬಗ್ಗೆ. ಅವರಲ್ಲಿ ಸಾಕಷ್ಟು ಮಂದಿ ಯಾವೊಂದು ಕೆಲಸವನ್ನೂ ದಕ್ಕಿಸಿ ಕೊಳ್ಳಲಾಗದೆ ಅತಂತ್ರ ಸ್ಥಿತಿಗೆ ತಲುಪಿಬಿಡುತ್ತಾರೆ ಎಂಬುದು ವಿಷಾದನೀಯ. ಈ ವಿಷಯದ ಬಗ್ಗೆ ನಾವು ಗಮನ ಹರಿಸಬೇಕಿದೆ.

ಸುಮಾರು 30 ವರ್ಷಗಳ ಹಿಂದೆ ಮಂಡ್ಯದಲ್ಲಿ ಸರಕಾರಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭ ದಲ್ಲಿ, ಆಗ ತಾನೆ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಹುಡುಗನೊಬ್ಬ ಟ್ರೈನಿಯಾಗಿ ನಮ್ಮ ಕಚೇರಿಗೆ ನಿಯೋಜಿತಗೊಂಡಿದ್ದ. ಆತ ಭಾರತೀಯ ನಾಗರಿಕ ಸೇವೆಗೆ ಸೇರಲೆಂದು ಯುಪಿ ಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅವನಿಗೋ ಬಹಳವೇ ಆತ್ಮವಿಶ್ವಾಸವಿತ್ತು- ಐಎಎಸ್ ಪರೀಕ್ಷೆ ಯನ್ನು ಪಾಸು ಮಾಡಿಯೇ ಮಾಡುತ್ತೇನೆ ಅಂತ. ಕುಳಿತಲ್ಲಿ ನಿಂತಲ್ಲಿ ಅದೇ ಗುಂಗಿನಲ್ಲಿ ಇರುತ್ತಿದ್ದ.

ಅತೀವ ಆಸೆಯನ್ನೂ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದ ಆ ಯುವಕ ಅದೇ ಉತ್ಸಾಹದಲ್ಲಿ, “ಸರ್, ಇನ್ನೆರಡು ವರ್ಷಗಳಲ್ಲಿ ನಾನು ಡೆಪ್ಯುಟಿ ಕಮಿಷನರ್ ಆಗಿಬಿಡುತ್ತೇನೆ" ಎನ್ನುತ್ತಿದ್ದ. ಅಪರಿಮಿತ ಶ್ರದ್ಧೆ ಮತ್ತು ಪರಿಶ್ರಮ ಇದ್ದಲ್ಲಿ ಯಾರೇ ಆಗಲಿ ಏನನ್ನಾದರೂ ಸಾಧಿಸಬಹುದು ಎಂಬುದು ಸತ್ಯವೇ; ಆದರೆ ಈ ಹುಡುಗನ ವಿಷಯದಲ್ಲಿ ಯಶಸ್ಸು ದೊರಕಲಿಲ್ಲ. ಇವತ್ತಿಗೂ ಆತ ಯಾವುದೇ ಹುದ್ದೆಯನ್ನು ಪಡೆಯುವುದಕ್ಕಾಗಲೀ ಅಥವಾ ಸ್ವಂತ ಉದ್ಯೋಗವನ್ನು ಕೈಗೊಳ್ಳುವುದಕ್ಕಾಗಲೀ ಆಗದೆ ಹಳ್ಳಿಯಲ್ಲಿ ವಾಸವಿದ್ದಾನೆ.

ಇದನ್ನೂ ಓದಿ: Mirley Chandrashekher Column: ನೀರೇ ಎಲ್ಲಾ, ನೀರಿಲ್ಲದೆ ಏನೂ ಇಲ್ಲ

ಅವನು ಓದಿದ ವಿದ್ಯೆಯೂ ಈ ನಿಟ್ಟಿನಲ್ಲಿ ಅವನ ಕೈಹಿಡಿಯಲಿಲ್ಲ. ಇದು ಸಾಲದೆಂಬಂತೆ ಪಿತ್ರಾ ರ್ಜಿತ ಜಮೀನಿನಲ್ಲಿ ವ್ಯವಸಾಯ ಮಾಡುವುದಕ್ಕೂ ಅವನಿಗೆ ಪರಿಣತಿಯಿಲ್ಲ. ಇದೆಂಥಾ ದುರ್ದೈವ ವಲ್ಲವೇ?! ನನ್ನ ಆತ್ಮೀಯ ಗೆಳೆಯರೊಬ್ಬರು ಸರಕಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದರು. ಅವರ ಏಕೈಕ ಪುತ್ರ ಒಂಬತ್ತು ವರ್ಷಗಳ ಹಿಂದೆ ಎಂಜಿನಿಯರಿಂಗ್ ಪದವಿ ಪಡೆದು ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಉದ್ದೇಶಿಸಿದ.

ಈ ಸಂಬಂಧವಾಗಿ ದೆಹಲಿಗೆ ತೆರಳಿ ಅಲ್ಲಿನ ಕೇಂದ್ರವೊಂದರಲ್ಲಿ ತರಬೇತಿ ಪಡೆದು ಹಲವು ಬಾರಿ ಪರೀಕ್ಷೆಯನ್ನು ಬರೆದ. ಆದರೆ ಇಲ್ಲಿಯವರೆಗೂ ಪ್ರಿಲಿಮಿನರಿ ಪರೀಕ್ಷೆಯನ್ನು ಕೂಡ ಅವನಿಗೆ ಪಾಸುಮಾಡಲಾಗಿಲ್ಲ. ರಾಜ್ಯ ಸರಕಾರದ ಮಟ್ಟದಲ್ಲಿ ನಡೆಸುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಹೇಳಿದರೂ ಒಪ್ಪದೆ, ಐಎಎಸ್ ಅನ್ನೇಪಾಸು ಮಾಡುವುದಾಗಿ ಹಠ ಹಿಡಿದು ಕೂತಿದ್ದಾನೆ. ಅವನ ಮದುವೆಯ ವಯಸ್ಸು ಮೀರುತ್ತಿದೆ, ಉದ್ಯೋಗವೂ ಇಲ್ಲ. ಹೀಗಾಗಿ ಅವನ ಹೆತ್ತವರು, ‘ಮಗ ಇನ್ನೂ ದುಡಿಯುತ್ತಿಲ್ಲ, ಅವನ ಭವಿಷ್ಯದ ಬದುಕು ಹೇಗೆ?’ ಎಂಬ ಚಿಂತೆಯಲ್ಲೇ ದಿನ ದೂಡುತ್ತಿದ್ದಾರೆ.

ನಿಗದಿತ ಗುರಿ ಸಾಧಿಸಲು ಹಠ, ಶ್ರದ್ಧೆ, ಶ್ರಮ, ನಿರಂತರ ಓದು ಎಲ್ಲವೂ ಬೇಕು. ಮೇಲಿನ ಎರಡೂ ಪ್ರಸಂಗಗಳಲ್ಲಿ ಉಲ್ಲೇಖಿಸಿರುವ ಅಭ್ಯರ್ಥಿಗಳನ್ನು ಮೆಚ್ಚಬೇಕಾದ್ದೇ. ಆದರೆ ಗುರಿ ಮುಟ್ಟುವಲ್ಲಿ ಇಬ್ಬರೂ ವಿಫಲರಾಗಿದ್ದಾರೆ. ಇದಕ್ಕೆ ಕಾರಣ ಅವರುಗಳು ಪಡೆದುಕೊಂಡ ಮಾರ್ಗದರ್ಶನ ಸರಿಯಿಲ್ಲದಿರುವುದು. ಇವರಂತೆ ಲಕ್ಷಾಂತರ ಮಕ್ಕಳು ಪ್ರಯತ್ನದ ಹಾದಿಯಲ್ಲಿ ತೊಡಗಿಸಿಕೊಂಡಿ ದ್ದರೂ ಎಡವುತ್ತಿದ್ದಾರೆ.

ಹಾಗೆ ಆಗದಿರಲೆಂಬುದೇ ಈ ಲೇಖನದ ಉದ್ದೇಶ. ಕನಸುಗಳು ದೊಡ್ಡದಿರಬೇಕು, ನಿಜ. ‘ಮಲಗಿ ಕನಸು ಕಾಣುವುದಲ್ಲ, ಎಚ್ಚರವಿದ್ದು ಕನಸು ಕಾಣಬೇಕು’ ಎನ್ನುವ ಮಾತೂ ಸತ್ಯವೇ. ಆದರೆ ಕಾಣುವ ಕನಸುಗಳನ್ನು ನನಸಾಗಿಸಿಕೊಳ್ಳಲು ಇರುವ ಸಾಧಕ-ಬಾಧಕಗಳನ್ನು ತಿಳಿದು ಹೆಜ್ಜೆ ಇಡಬೇಕು. ಮೊದಲು ಜೀವನೋಪಾಯಕ್ಕೆ ಒಂದು ದಾರಿಯನ್ನು ಕಂಡುಕೊಂಡು, ನಂತರದಲ್ಲಿ ಅದರ ಜತೆಜತೆಗೇ ಐಎಎಸ್ ಪಾಸು ಮಾಡುವ ಪ್ರಯತ್ನದಲ್ಲೂ ತೊಡಗಿಸಿಕೊಳ್ಳುವುದು ಕೆಲವರ ವಿಷಯದಲ್ಲಿ ಜಾಣನಡೆ ಎನಿಸಿಕೊಳ್ಳುತ್ತದೆ. ಈ ಯತ್ನದಲ್ಲಿ ಯಶಸ್ಸು ಸಿಕ್ಕಿದರೆ ಅದು ‘ಬಂಪರ್ ಲಾಟರಿ’ ಹೊಡೆದಂತೆ; ಒಂದೊಮ್ಮೆ ಯಶಸ್ಸು ಸಿಗದಿದ್ದರೂ ಜೀವನೋಪಾಯಕ್ಕೆಂದು ಒಂದು ಉದ್ಯೋಗ ಇರುತ್ತದಲ್ಲಾ? ಹಾಗೆ ನೋಡಿದರೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿನ ಜಯವು ಇನ್ನೊಂದು ಅರ್ಥದಲ್ಲಿ ‘ಬಂಪರ್ ಲಾಟರಿ’ಯೇ ಆಗಿರುತ್ತದೆ ಎನ್ನಿ. ಪೂರ್ಣವಾಗಿ ಅಭ್ಯರ್ಥಿಯ ಬುದ್ಧಿವಂತಿಕೆ ಯಿಂದಲೇ ಇದು ದಕ್ಕಿರುತ್ತದೆ ಎನ್ನಲಾಗದು.

ಏಕೆಂದರೆ, ಪರೀಕ್ಷೆಯನ್ನು ಬರೆದವರಲ್ಲಿ ಹೆಚ್ಚಿನವರು ಬುದ್ಧಿವಂತರೇ ಆಗಿರುತ್ತಾರೆ, ಕಠಿಣವಾದ ತರಬೇತಿಯನ್ನೂ ಪಡೆದಿರುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ನಪಾಸಾಗುವವರ ಪ್ರಮಾಣ ಗಣನೀಯವಾಗಿರುತ್ತದೆಯಾದ್ದರಿಂದ ಇದು ‘ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕುವ’ ಕಸರತ್ತಿನಂತೆ ಎನಿಸಿಬಿಡುತ್ತದೆ. ಹುಡುಕಿದ ಎಲ್ಲರಿಗೂ ಸೂಜಿ ಸಿಗದು!

ಆದರೆ, ಅಭ್ಯರ್ಥಿಗಳ ಇಂಥ ಬಲಹೀನತೆಯನ್ನು ಅರಿತ ಕೆಲವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರುಮಾಡುವುದಾಗಿ ಬಿಂಬಿಸಿಕೊಂಡು ತರಬೇತಿ ಕೇಂದ್ರಗಳನ್ನು ತೆರೆದು, ಅದನ್ನು ಹಣ ಮಾಡುವ ದಂಧೆಯಾಗಿಸಿಕೊಂಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಯಮದಲ್ಲಿ ಪ್ರತಿವರ್ಷ ಅಂದಾಜು 58000 ಕೋಟಿ ರು. ವ್ಯವಹಾರ ನಡೆಯುತ್ತಿದ್ದು, ಐಎಎಸ್ ಕೋಚಿಂಗ್ ಒಂದೇ ಇದರಲ್ಲಿ 3000 ಕೋಟಿ ರು.ಗೂ ಹೆಚ್ಚಿನ ಪಾಲನ್ನು ಹೊಂದಿದೆ.

2024ರ ವರ್ಷದಲ್ಲಿ ಭಾರತೀಯ ನಾಗರಿಕ ಸೇವೆಯ ಪರೀಕ್ಷೆಯನ್ನು ಬರೆದವರು 13.40 ಲಕ್ಷ ಅಭ್ಯರ್ಥಿಗಳು. ಆದರೆ ಇವರ ಪೈಕಿ ಮುಖ್ಯ ಪರೀಕ್ಷೆಗೆ ಆಯ್ಕೆಯಾದವರು 14627 ಅಭ್ಯರ್ಥಿಗಳು ಮಾತ್ರ. ಅಂತಿಮವಾಗಿ ನೇರ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದು 2845 ಮಂದಿಯಾದರೆ, ಎಲ್ಲಾ ಹಂತಗಳನ್ನು ಪೂರೈಸಿದ ನಂತರ ಕಟ್ಟಕಡೆಯದಾಗಿ ಸೇವೆಗೆ ಆಯ್ಕೆಯಾದವರು 10009 ಅಭ್ಯರ್ಥಿ ಗಳು. ಅಂದರೆ ಆಕಾಂಕ್ಷಿಗಳ ಪ್ರಮಾಣವು ಮಿಲಿಯನ್‌ಗಿಂತಲೂ ಹೆಚ್ಚು, ಆದರೆ ಆಯ್ಕೆಯಾದವರು ಸಾವಿರ- ಇದು ಎತ್ತಣಿಂದೆತ್ತ ಸಂಬಂಧವಯ್ಯಾ? ಅಲ್ಲಿಗೆ ಯಶಸ್ಸಿನ ಪ್ರಮಾಣ ಶೇ.1ನ್ನೂ ದಾಟುವು ದಿಲ್ಲ. 1000-1200 ಹುದ್ದೆಗಳಿಗಾಗಿ ಉಳಿದುದೆಲ್ಲವನ್ನೂ ಬಿಟ್ಟು ಹೋರಾಟ ಮಾಡುವ ಉದ್ದೇಶ ವಾದರೂ ಏನು?

ವಿಪರ್ಯಾಸವೆಂದರೆ, ಈ ಮೊದಲು ಆಯ್ಕೆಯಾಗಿ ಕೆಳ ಹಂತದ ಉದ್ಯೋಗದಲ್ಲಿ ಕೆಲಸ ಮಾಡು ತ್ತಿರುವವರು ಅಥವಾ ತರಬೇತಿಯಲ್ಲಿರುವವರು ಕೂಡ ಉನ್ನತ ಹುದ್ದೆಯನ್ನು ಗಳಿಸುವುದಕ್ಕಾಗಿ ಮತ್ತೆ ಪರೀಕ್ಷೆ ಬರೆದು ಪಾಸು ಮಾಡುತ್ತಾರೆ. ಇವರ ಮುಖ್ಯ ಉದ್ದೇಶವಾದರೂ ಏನಿರಬಹುದು? ಮಾಧ್ಯಮಗಳಲ್ಲಿ ಈ ಸಂಬಂಧವಾಗಿ ಕೇಳುವ ಪ್ರಶ್ನೆಗಳಿಗೆ ಇವರುಗಳು ನೀಡುವ ಉತ್ತರ- “ಐಎಎಸ್ ಶ್ರೇಣಿಗೆ ಆಯ್ಕೆಯಾದರೆ ಜಿಲ್ಲಾಧಿಕಾರಿಯಾಗಿ ಸಾರ್ವಜನಿಕರ ಸೇವೆ ಮಾಡಲು ಹೆಚ್ಚು ಅವಕಾಶ ಸಿಗುತ್ತದೆ" ಎಂಬುದು.

ಇದನ್ನು ನಂಬಲಿಕ್ಕೆ ನಾವು ಕಿವಿಯಲ್ಲಿ ಹೂವಿಟ್ಟುಕೊಂಡಿರಬೇಕು, ಹೌದಲ್ಲವೇ? ಕಾರಣ ಇಂಥ ಸೇವಾಮನೋಭಾವದವರು ಸಿಗುವುದು ಬೆರಳೆಣಿಕೆಯಷ್ಟು ಮಾತ್ರ! ಇಲ್ಲಿ ಸೇವಾ ಮನೋಭಾವ ಕ್ಕಿಂತ ಹುದ್ದೆಯ ಆಕರ್ಷಣೆಯೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ‘ಉನ್ನತ ಹುದ್ದೆ ದಕ್ಕಿದರೆ ಒಂದಿಡೀ ವ್ಯವಸ್ಥೆಯೇ ನನಗೆ ಸೆಲ್ಯೂಟ್ ಹೊಡೆಯುತ್ತದೆ, ಸಾರ್ವಜನಿಕರು ಗೌರವ ನೀಡುತ್ತಾರೆ,

ದೊಡ್ಡ ಕಾರಿನಲ್ಲಿ ಓಡಾಡಬಹುದು, ವಾಸಿಸಲು ಬಂಗಲೆ ಕೊಡುತ್ತಾರೆ, ಮದುವೆಗೆ ಶ್ರೀಮಂತ ಸಂಬಂಧಗಳು ಸಿಗುತ್ತವೆ’ ಎಂಬುದೇ ಬಹುತೇಕ ಅಭ್ಯರ್ಥಿಗಳ ಆಂತರ್ಯದಲ್ಲಿ ಕೆನೆಗಟ್ಟಿರುವ ಆಕಾಂಕ್ಷೆಗಳಾಗಿರುತ್ತವೆ. ಸಾರ್ವಜನಿಕ ಸೇವೆ ಮಾಡಲು ಐಎಎಸ್ ಹುದ್ದೆಯೊಂದೇ ಸಾಧನವಲ್ಲ, ಇನ್ನೂ ನೂರೆಂಟು ಮಾರ್ಗಗಳಿವೆ. ಐಎಎಸ್/ ಐಪಿಎಸ್‌ನಂಥ ಉನ್ನತ ಗುರಿಗಳನ್ನು ಬೆನ್ನತ್ತಿ ಹೊರಟವರಲ್ಲಿ ಸಾಕಷ್ಟು ಮಂದಿ ಯಶಸ್ಸು ಕಾಣುತ್ತಾರೆ; ಆದರೆ ಇವರ ಪ್ರಮಾಣ ತುಲನಾತ್ಮಕ ವಾಗಿ ಕಮ್ಮಿ ಎಂಬುದು ಕಹಿಸತ್ಯ.

ಇಂಥ ಉನ್ನತ ಪರೀಕ್ಷೆಗಳಲ್ಲಿ ಯಶಸ್ಸು ಕಂಡವರು ಮಾಧ್ಯಮಗಳಲ್ಲೇನೋ ಮಿಂಚುತ್ತಾರೆ; ಆದರೆ ಮಿಕ್ಕ ಗಣನೀಯ ಸಂಖ್ಯೆಯ ಆಕಾಂಕ್ಷಿಗಳು ಮುಂದೆ ಏನಾದರು ಎಂಬುದರ ಬಗ್ಗೆ ವರದಿಯನ್ನು ಯಾರಾದರೂ ಪ್ರಕಟಿಸಿದ್ದಾರೆಯೇ? ಅವರ ಸಂದರ್ಶನಗಳನ್ನು ನಡೆಸಿದ್ದಾರೆಯೇ? ವಿಪರ್ಯಾಸ ವೆಂದರೆ, ಇಂಥ ಉನ್ನತ ಹುದ್ದೆಗಳಿಗೆ ಆಯ್ಕೆಯಾದವರಲ್ಲಿ ಹೆಚ್ಚಿನವರು ವೈದ್ಯರು ಹಾಗೂ ಎಂಜಿನಿ ಯರ್‌ಗಳೇ ಆಗಿರುತ್ತಾರೆ.

ಒಬ್ಬ ವೈದ್ಯರನ್ನು ತಯಾರು ಮಾಡಲು ಸರಕಾರವು ಬಹಳಷ್ಟು ಹಣವನ್ನು ಖರ್ಚು ಮಾಡುತ್ತದೆ ಹಾಗೂ ವೈದ್ಯವೃತ್ತಿಯು ಈ ಸಮಾಜಕ್ಕೆ ದಕ್ಕಬಹುದಾದ ನಿಜವಾದ ಸೇವಾಮಾರ್ಗವಾಗಿರುತ್ತದೆ. ಜತೆಗೆ, ವೈದ್ಯರ ಕೆಲಸವನ್ನು ಬೇರೆಯವರು ಮಾಡಲಾಗದು. ಸಮಾಜಸೇವೆಯ ನೆಪವನ್ನು ಮುಂದು ಮಾಡಿ ಐಎಎಸ್ ಆಕರ್ಷಣೆಗೆ ಒಳಗಾಗಿರುವ ವೈದ್ಯರು ಈ ಸೂಕ್ಷ್ಮವನ್ನು ಗ್ರಹಿಸಬೇಕು, ಐಎಎಸ್ ಹುದ್ದೆಗೇರಬೇಕು ಎಂಬ ಆಶಯಕ್ಕೆ ನಿಯಂತ್ರಣವನ್ನು ಹೇರಿಕೊಳ್ಳಬೇಕು.

ಹಾಗೆ ನೋಡಿದರೆ, ಸಾರ್ವಜನಿಕರು ಅಂದುಕೊಂಡಷ್ಟು ಉನ್ನತ ಹುದ್ದೆಗಳಾಗಿ ಇಂದಿನ ಐಎಎಸ್ ಮತ್ತು ಐಪಿಎಸ್ ಗಳು ಉಳಿದಿಲ್ಲ. ಇತ್ತೀಚೆಗೆ ಕೆಲವೊಂದು ಜನಪ್ರತಿನಿಧಿಗಳು ಅವರನ್ನು ನಿಕೃಷ್ಟ ವಾಗಿ ನಡೆಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿಯೇ ಅವರನ್ನು ಏಕವಚನಗಳಲ್ಲಿ ನಿಂದಿಸು ವವರು, ನಾಲ್ಕು ಗೋಡೆಗಳ ಒಳಗೆ ಹೇಗೆಲ್ಲಾ ವರ್ತಿಸಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಆಗದು.

ಕೆಲವಷ್ಟು ಉನ್ನತಾಧಿಕಾರಿಗಳು ಹೇಳಿಕೊಳ್ಳುವಂತೆ, ನಾಗರಿಕ ಸೇವಾ ಹುದ್ದೆಗಳ ಕುರ್ಚಿಗಳು ‘ಇಂಡಕ್ಷನ್ ಸ್ಟವ್’ ಇದ್ದಂತೆ, ಕುಳಿತವರಿಗಷ್ಟೇ ಗೊತ್ತು ಅದರ ಬಿಸಿ; ದಿನದ 24 ಗಂಟೆಯೂ ಕೆಲಸ. ಮನೆ-ಮಠ, ಸಂಸಾರ ಯಾವುದಕ್ಕೂ ಸಮಯ ಕೊಡಲಾಗದು ಹಾಗೂ ಒಂದೇ ಸ್ಥಳದಲ್ಲಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಇರಲಾಗದು. ಹಾಗಂತ, ಇಲ್ಲಿ ಹೇಳಲಾಗಿರುವ ಅಪ್ರಿಯ ಸತ್ಯಗಳ ಉದ್ದೇಶವು ಪರೀಕ್ಷಾರ್ಥಿಗಳ ಉತ್ಸಾಹವನ್ನು ಕುಂದಿಸುವುದಲ್ಲ.

ವ್ಯವಸ್ಥೆಯಲ್ಲಿರುವ ವಾಸ್ತವತೆಯನ್ನು ಅರಿತುಕೊಂಡು, ಯುಪಿಎಸ್‌ಸಿ ಪರೀಕ್ಷೆಯ ಜತೆಜತೆಗೆ ಬದುಕನ್ನೂ ಕಟ್ಟಿಕೊಳ್ಳುವತ್ತ ಇಂಥವರು ಗಮನ ಹರಿಸಬೇಕು, ಪರ್ಯಾಯವಾಗಿ ಗಳಿಕೆಗೊಂದು ಮಾರ್ಗವನ್ನು ಕಂಡುಕೊಂಡಿರಬೇಕು ಎಂಬುದಷ್ಟೇ ಇಲ್ಲಿನ ಆಶಯ. ಇದನ್ನು ಗಮನದಲ್ಲಿ ಇರಿಸಿಕೊಂಡರೆ, ಒಂದೊಮ್ಮೆ ‘ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗುವುದಿಲ್ಲ!’.

ಈ ಬಾರಿ ಆಯ್ಕೆಯಾದವರಲ್ಲಿ ಗ್ರಾಮೀಣ ಪ್ರತಿಭೆಗಳು ಹಾಗೂ ಸರಕಾರಿ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಬೆಳಕಿಗೆ ಬಂದಿರುವುದು ಶ್ಲಾಘನೀಯ ಬೆಳವಣಿಗೆ. ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸಲು ಪ್ರತಿಷ್ಠಿತ ಶಾಲೆಗಳಲ್ಲೇ, ಇಂಗ್ಲಿಷ್ ಮಾಧ್ಯಮದಲ್ಲೇ ಓದಬೇಕು ಎಂದೇನಿಲ್ಲ ಎಂಬುದಕ್ಕೆ ಇವರು ತಾಜಾ ನಿದರ್ಶನಗಳಾಗಿದ್ದಾರೆ. ಸ್ಮರ್ಧಾತ್ಮಕ ಪರೀಕ್ಷೆಗಳ ಕುರಿತಾಗಿ ಯುಟ್ಯೂಬ್ ವಿಡಿಯೋಗಳಲ್ಲಿ ತೋರಿಸುವುದೆಲ್ಲ ಸತ್ಯವಲ್ಲ.

ರಾಷ್ಟ್ರಕ್ಕೆ/ ರಾಜ್ಯಕ್ಕೆ ಸೇವೆ ಮಾಡಬೇಕು, ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎನ್ನುವ ಹಂಬಲ ಇರುವವರಿಗೆ, ಭಾರತೀಯ ನಾಗರಿಕ ಸೇವೆಯಲ್ಲದೆ ಇನ್ನೂ ಹಲವಾರು ಕ್ಷೇತ್ರಗಳಿವೆ/ಮಾರ್ಗಗಳಿವೆ. ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಆಯ್ಕೆಯಾದಲ್ಲಿ ಸಂತೋಷ; ಆದರೆ ಮಹತ್ವಾಕಾಂಕ್ಷಿಗಳು ಅದೊಂದನ್ನೇ ನಂಬಿಕೊಂಡು ಅಥವಾ ಆ ಪರೀಕ್ಷೆಗಳಲ್ಲಿ ವಿಫಲರಾಗಿದ್ದಕ್ಕೆ ಹತಾಶರಾಗಿ ಅತಂತ್ರ ಸ್ಥಿತಿಗೆ ಬರುವುದು ಬೇಡ ಎಂಬುದಷ್ಟೇ ಇಲ್ಲಿನ ಆಶಯ.

ಸಮೃದ್ಧ ಮತ್ತು ಸ್ವಾಭಿಮಾನಿ ಬದುಕನ್ನು ಕಟ್ಟಿಕೊಳ್ಳಲು ನೂರೆಂಟು ಹಾದಿಗಳಿವೆ. ಈ ಮಾತು ಸಮಾಜ ಸೇವೆಗೂ ಅನ್ವಯಿಸುವಂಥದ್ದು. ಬದುಕು ಎಂಬುದು, ಮೆರವಣಿಗೆ ಹೊರಟಿರುವ ಉತ್ಸವ ಮೂರ್ತಿಯ ಪಲ್ಲಕ್ಕಿಯನ್ನು ಶ್ರದ್ಧಾಭಕ್ತಿಯಿಂದ ಹೊತ್ತು ಮುನ್ನಡೆಸುವ ಕೈಂಕರ್ಯವಿದ್ದಂತೆ. ಹೊರುವವರು ಪಲ್ಲಕ್ಕಿಯ ಮುಂದಿದ್ದರೂ ಸರಿ, ಹಿಂದಿದ್ದರೂ ಸರಿ, ಅದೇ ಭಕ್ತಿ-ಭಾವ ಇದ್ದರೆ ಸಾಕಲ್ಲವೇ?!

(ಲೇಖಕರು ನಿವೃತ್ತ ಎಂಜಿನಿಯರ್ ಮತ್ತು ಸಾಹಿತಿ)