Vishweshwar Bhat Column: ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದ ಜಪಾನಿಯರು !
ಒಂದು ಸಾಕುರಾ ಮರವೇರಿ ಕೊಂಬೆಯನ್ನು ಹಿಡಿದು ಅಡಿಸಿದ ಘಟನೆ ಅವರ ಮನಸ್ಸನ್ನು ಕಲಕಿತ್ತು, ಕುಲುಕಿತ್ತು. ಜಪಾನಿಯರ ಸೂಕ್ಷ್ಮ ಭಾವನೆಗೆ ಈ ಘಟನೆಯೇ ಸಾಕ್ಷಿ. ಇಂದಿಗೂ ಒಂದು ಸಾಕುರಾ ಮರ ವನ್ನು ಕಡಿಯುವ ಪ್ರಸಂಗ ಬಂದರೆ, ಅದಕ್ಕೆ ಪ್ರತಿಯಾಗಿ ನೂರು ಗಿಡಗಳನ್ನು ನೆಡುತ್ತಾರೆ
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಟೋಕಿಯೋದ ಶಾಪಿಂಗ್ ಮಾಲ್‌ನ ಒಂದೆಡೆ ಅಕ್ಕಪಕ್ಕದಲ್ಲಿ ಕೆಂಟುಕಿ ಫುಡ್ ಚಿಕನ್ (ಕೆಎಫ್ ಸಿ), ಸ್ಟಾರ್ ಬಕ್ಸ್, ಮೆಕ್ ಡೊನಾಲ್ಡ್, ಮಿಸ್ಟರ್ ಡೋನಟ, ಬರ್ಗರ್ ಕಿಂಗ್ ಮತ್ತು ಫಿಜ್ಜಾ ಹಟ್ ಔಟ್ ಲೆಟ್‌ಗಳಿದ್ದವು.
ಇವೆಲ್ಲವೂ ಅಮೆರಿಕ ಮೂಲದ - ಫುಡ್ ಬಹುರಾಷ್ಟ್ರೀಯ ಕಂಪನಿಗಳು ತಾನೇ. ಪ್ರಾಯಶಃ ಇವು ಇಲ್ಲದ ದೇಶಗಳಿರಲಿಕ್ಕಿಲ್ಲ. ಅಮೆರಿಕದಲ್ಲಿ ಸರಕಾರಿ ಕಚೇರಿ ಬಾಗಿಲು ಮುಚ್ಚಿದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ -ಫುಡ್ ಅಂಗಡಿಗಳೇನಾದರೂ ಮುಚ್ಚಿದರೆ ಹಾಹಾಕಾರ ಗ್ಯಾರಂಟಿ. ನಾನು ಕುತೂಹಲದಿಂದ ಈ -ಫುಡ್ ಅಂಗಡಿಗಳ ಮುಂದೆ ನಿಂತು ಆಕರ್ಷಕ ಚಿತ್ರಗಳ display ಗಳೊಂದಿಗೆ ಅವುಗಳ ಮೆನು ನೋಡುತ್ತಿದ್ದೆ. ಮೆಕ್ ಡೊನಾಲ್ಡ್ ಔಟ್ ಲೆಟ್‌ನಲ್ಲಿ ವೆಜಿಟೇಬಲ್ ಜ್ಯೂಸು, ರೊಸ್ ಹಿಪ್ - ಹೈಬಿಸ್ಕಸ್ ಟೀ, ಕಾರ್ನ್ ಪೊಟೇಜ್ ಸೂಪ್ ಲಭ್ಯ ಎಂಬ ಫಲಕ ಕಾಣಿಸಿತು!
ಇವ್ಯಾವವೂ ಅಮೆರಿಕದಲ್ಲಿ ಸಿಗಲಿಕ್ಕಿಲ್ಲ. ಕಾರಣ ಇವೆಲ್ಲ ಅಪ್ಪಟ ಜಪಾನೀ ಆಹಾರಗಳು. ಕೆಎಫ್ ಸಿ ಅಂಗಡಿಯ ಮುಂದೆ ಟೊಕುಮಾರಿ ಫಿಶ್ ಕೇಕ್, ಚೈನೀಸ್ ಕೇಕ್, ಬೇಕನ್ ಆ ಗ್ರೆಟಿನ್ ಸಿಗುವುದೆಂಬ ಬೋರ್ಡ್ ಇತ್ತು. ಇವೂ ಸಹ ಶುದ್ಧ ಜಪಾನಿ ಖಾದ್ಯಗಳೇ. ಇಟಾಲಿಯನ್ - ಫುಡ್ ಔಟ್‌ಲೆಟ್ ಮುಂದೆ ‘ಜಪೋಲಿಟನ್’ ಫುಡ್ ಲಭ್ಯ ಎಂಬ ಬೋರ್ಡ್ ಇತ್ತು.
ಇದನ್ನೂ ಓದಿ: Vishweshwar Bhat Column: ಭೂಕಂಪ ಮತ್ತು ಅನಿಲ ಸೋರಿಕೆ
ಇದೇನಿದು ಜಪೋಲಿ ಟನ್ ಅಂತ ವಿಚಾರಿಸಿದರೆ, ಜಪಾನೀ ಮತ್ತು ಇಟಾಲಿಯನ್ ಎರಡೂ ಆಹಾರಗಳು ಸೇರಿ ಹಾಗೆ (ಜಪೋಲಿಟನ್) ಆಗಿದ್ದವು. ಇಟಾಲಿಯನ್ ಖಾದ್ಯಗಳೆಲ್ಲ ತಮ್ಮ ವ್ಯಕ್ತಿತ್ವ ಕಳೆದುಕೊಂಡು ಜಪಾ ನೀಸ್ ಆಹಾರಗಳಾಗಿದ್ದವು. ಅಪ್ಪಟ ಮಲೆನಾಡಿನ ಪತ್ರೊಡೆ, ಸುಟ್ಟೇವು, ತೊಡೆದೇವು, ಗೆಣಸಲೆ ಗಳನ್ನೂ ಜಪಾನಿಯರು ಅದರ ಮೂಲ ಸ್ವರೂಪ ಮತ್ತು ರುಚಿಯನ್ನು ಬೇರೆ ಮಾಡಿ ಅದಕ್ಕೆ ತಮ್ಮದೇ ಒಗ್ಗರಣೆ ಹಾಕಿ, ಜಪಾನೀ ಹೆಸರಿಟ್ಟು ತಮ್ಮದೇ ಆಹಾರವನ್ನಾಗಿ ಮಾಡಿಕೊಳ್ಳಬಲ್ಲರು.
ಅಂದ ಹಾಗೆ, ಜಪಾನಿನಲ್ಲಿ ಒಂದು ಮಾತಿದೆ - In Japan, nothing seems so foreign and every thing is Japanese . ಜಪಾನಿಯರು ತಮ್ಮ ದೇಶದಲ್ಲಿ ಏನೇ ವಿದೇಶಿ ಅಂಶಗಳನ್ನು ಕಂಡರೂ, ಅದನ್ನು ತಮ್ಮದನ್ನಾಗಿಸಿಕೊಳ್ಳುವ ತನಕ ವಿರಮಿಸುವುದಿಲ್ಲ. ಜಪಾನಿತನ ಅವರ ರಕ್ತದಲ್ಲಿದೆ.
ಮೊದಲನೆಯದಾಗಿ ಅವರು ಎರವಲು ಸಂಸ್ಕೃತಿಯನ್ನು ಇಷ್ಟಪಡುವುದಿಲ್ಲ. ಆದರೆ ಎರವಲು ಅನಿವಾರ್ಯವಾದರೆ, ಅದನ್ನು ಹೇಗೆ ತಮ್ಮದನ್ನಾಗಿ ಮಾಡಿಕೊಳ್ಳುವುದು ಎಂದು ಯೋಚಿಸುತ್ತಾರೆ. ಇದು ಆಹಾರ ಪದಾರ್ಥಗಳಿಗೆ ಮಾತ್ರ ಸೀಮಿತವಲ್ಲ. ತಂತ್ರಜ್ಞಾನಕ್ಕೂ ಈ ಮಾತು ಅನ್ವಯ.
ಅಮೆರಿಕದ ಅಥವಾ ಯೂರೋಪಿನ ಉತ್ತಮ ಗುಣಗಳನ್ನು ಹೀರಿಕೊಳ್ಳಲು ಜಪಾನಿಯರು ಹಿಂದೇಟು ಹಾಕುವುದಿಲ್ಲ. ಆದರೆ ಅಂಧಾನುಕರಣೆಯನ್ನು ಸಹಿಸಿಕೊಳ್ಳುವುದಿಲ್ಲ. ಜಪಾನಿನ ಮೇಲೆ ಚೀನಾದ ಗಾಢವಾದ ಪ್ರಭಾವವಿದೆ. ಹಾಗಂತ ತಮ್ಮ ದೇಶವನ್ನು ಚೀನಾದ ನಕಲು ಪ್ರತಿಯನ್ನಾಗಿ ಮಾಡಿಲ್ಲ. ಚೀನಾ ಮತ್ತು ಜಪಾನಿಗೆ ಅಲ್ಲಲ್ಲಿ ಸಾಮ್ಯ ಕಂಡರೂ, ಜಪಾನಿಯರು ತಮ್ಮ ಅಸ್ಮಿತೆ ಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಮತ್ತು ಚೀನಾ ಇಂದು ಎಲ್ಲ ರಂಗಗಳಲ್ಲೂ ಜಾಗತಿಕ ’ಹಿರಿಯಣ್ಣ’ನ ಸ್ಥಾನಗಳನ್ನು ಗಳಿಸಿಕೊಂಡಿವೆ.
ತಂತ್ರಜ್ಞಾನ ಮತ್ತು ಸುಧಾರಿತ ಜೀವನ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಅಮೆರಿ ಕನ್ನರು ಮತ್ತು ಚೀನಿಯರು ಜಪಾನಿಗೆ ಬಂದರೆ ಒಂದು ಕ್ಷಣ Cultural Shock ನಿಂದ ಆವಾಕ್ಕಾಗು ತ್ತಾರೆ. ಜಪಾನಿನಲ್ಲಿರುವ ಅತಿಯಾದ ಸ್ವಚ್ಛತೆಯೂ ಅಮೆರಿಕನ್ನರನ್ನು ಗರಬಡಿಯುವಂತೆ ಮಾಡು ತ್ತದೆ.
ಜಪಾನಿಯರ ಮೆಂಟಾಲಿಟಿ ಬಹಳ ವಿಚಿತ್ರ. ಅವರು ಪ್ರತಿಯೊಂದರಲ್ಲೂ ಶ್ರೇಷ್ಠತೆಯನ್ನು, ಪರಿ ಪೂರ್ಣತೆಯನ್ನು ಕಾಣುವವರು. ಅಗ್ಗದ ದರಕ್ಕೆ ಮುಗ್ಗಲು ಅಕ್ಕಿ ಸಿಗುವುದೆಂದು ಅದನ್ನು ತಿನ್ನುವ ಮನೋಭಾವದವರಲ್ಲ. ಟೋಕಿಯೋ ಪ್ರಪಂಚದಲ್ಲಿಯೇ ಅತ್ಯಂತ ಜನನಿಬಿಡ ನಗರ. ಆದರೆ ಇಡೀ ನಗರವನ್ನು ಅವರು ಕೊಳಗೇರಿಗಳನ್ನಾಗಿ ಮಾಡಿಲ್ಲ. ನಗರ ಜೀವನದ ಎಲ್ಲ ಅನಿಷ್ಠಗಳನ್ನು ಸುರುವಿಕೊಂಡು functional anarchy ಯನ್ನಾಗಿ ಮಾಡಿಲ್ಲ.
ನ್ಯೂಯಾರ್ಕ್ ನಗರಕ್ಕಿಂತ ಸುಂದರವಾಗಿಟ್ಟುಕೊಂಡಿದ್ದಾರೆ. ’ನಮ್ಮನ್ನು ನ್ಯೂಯಾರ್ಕಿಗೆ ಹೋಲಿಸ ಬೇಡಿ. ನಾವು ಅದಕ್ಕಿಂತ ಎಷ್ಟೋ ಪಾಲು ಚೆನ್ನಾಗಿದ್ದೇವೆ’ ಎಂದು ಟೋಕಿಯೊವಾಸಿಗಳು ಅಭಿಮಾನದಿಂದ ಹೇಳುತ್ತಾರೆ. ಟೋಕಿಯೋ ಜಗತ್ತಿನಲ್ಲಿಯೇ ಸುರಕ್ಷಿತ ನಗರ. ಅಲ್ಲಿ ಕ್ರೈಂ ರೇಟ್ ಇಲ್ಲ ಎನ್ನುವಷ್ಟು ಕಮ್ಮಿ. ಇದಕ್ಕಾಗಿ Tokyo is a very safe city. At night it becomes quiet the way New York never does ಎಂದು ಹೇಳುವುದುಂಟು.
ನಗರೀಕರಣದ ಎಲ್ಲ ಅಪಸವ್ಯಗಳನ್ನು ನುಂಗಿ ನೀರು ಕುಡಿದು ಜೀರ್ಣಿಸಿಕೊಂಡಿರುವ ಟೋಕಿ ಯೋ, ಒಂದು ಜನನಿಬಿಡನಗರ ಎಷ್ಟು ಸುಂದರವಾಗಿ ಇರಲು ಸಾಧ್ಯವಿದೆ ಎಂಬುದನ್ನು ತೋರಿಸಿ ಕೊಟ್ಟಿದೆ. ಇಡೀ ನಗರದಲ್ಲಿ ಒಂದು ಗುಲಗಂಜಿಯಷ್ಟು ಕಸವನ್ನು ಕಾಣಲು ಸಾಧ್ಯವಿಲ್ಲ. ಇಡೀ ನಗರದಲ್ಲಿ ಒಂದು ಸುತ್ತು ಹಾಕಿದರೆ, ಎಲ್ಲೂ ಅಸಹನೀಯ ಎನಿಸುವ ಯಾವ ಸಂಗತಿಗಳೂ ಗೋಚ ರಿಸುವುದಿಲ್ಲ.
ಎಲ್ಲವೂ ಹೇಗಿರಬೇಕೋ, ಹಾಗೆ ಇವೆ. ಒತ್ತಡದ ನಗರ ಜೀವನದ ಮಧ್ಯೆಯೂ ಟೋಕಿಯೊವಾಸಿಗಳು ಸೌಜನ್ಯ, ಅಂತಃಕರಣವಿರುವ ಮನುಷ್ಯರಂತೆ ವರ್ತಿಸುತ್ತಿರುವುದು ಅಚ್ಚರಿ ಹುಟ್ಟಿಸುತ್ತದೆ. 3.71 ಕೋಟಿ ಜನ ವಾಸಿಸುವ ಟೋಕಿಯೋ ನಗರ, ಗಡಿಯಾರದ ಮುಳ್ಳುಗಳಂತೆ ಕರಾರುವಾಕ್ಕಾಗಿ ಅದರ ಪಾಡಿಗೆ ನಡೆಯುತ್ತಿರುತ್ತದೆ. ಆ ಜನದಟ್ಟಣೆಯಲ್ಲೂ ಎರಡಕ್ಕಿಂತ ಹೆಚ್ಚು ಜನ ಹೋಗುತ್ತಿದ್ದರೆ ಕ್ಯೂದಲ್ಲಿ ಸಾಗುತ್ತಾರೆ.
ಸಣ್ಣ ಸಹಾಯ, ಉಪಕಾರಕ್ಕೂ ನಡುಬಗ್ಗಿಸಿ ಕೃತಜ್ಞತೆ ಸಲ್ಲಿಸಿ ಕೃತಾರ್ಥತೆ ಕಾಣುತ್ತಾರೆ. ಸಣ್ಣ ಅಚಾ ತುರ್ಯಕ್ಕೆ ಅದೇನೋ ದೊಡ್ಡ ಅಪರಾಧ ಮಾಡಿದವರಂತೆ ಪದೇ ಪದೆ ಕ್ಷಮೆಯಾಚಿಸಿ ಪ್ರಾಯಶ್ಚಿತ ಭಾವ ಮೆರೆಯುತ್ತಾರೆ. ಯಾವುದೇ ಸಂಗತಿ ಹೇಗಿರಬೇಕೋ, ಹಾಗಿರಬೇಕು. ಹೇಗಿದ್ದರೂ ನಡೆದೀತು ಎಂಬುದಕ್ಕೆ ಜಪಾನಿನಲ್ಲಿ ಆಸ್ಪದವಿಲ್ಲ.
ಒಂದು ನಗರ ಅಥವಾ ದೇಶದ ಚರಂಡಿಯ ಮುಚ್ಚಳ (ಮ್ಯಾನ್ ಹೋಲ್) ವೂ ಕಲಾತ್ಮಕವಾಗಿರ ಬೇಕು ಎಂದು ಜಪಾನಿಯರು ಯೋಚಿಸುವವರು. ಇಡೀ ನಗರದ ಮ್ಯಾನ್ ಹೋಲ್ ಮೇಲೆ ಯಾವ ರೀತಿ ಡಿಸೈನ್ ಇರಬೇಕು ಎಂಬುದನ್ನು Japan Society for Manhole Covers ಎಂಬ ಸಂಸ್ಥೆ ನಿರ್ಧ ರಿಸುತ್ತದೆ. ಅದು ಅನುಮೋದಿಸಿದ ವಿನ್ಯಾಸದ ಮ್ಯಾನ್ ಹೋಲ್ ಮುಚ್ಚಳವನ್ನೇ ಬಳಸಬೇಕು.
ಅಂಥ ಸಣ್ಣ-ಪುಟ್ಟ ಸಂಗತಿಗಳ ಬಗ್ಗೆಯೂ ಜಪಾನಿಯರು ಎಚ್ಚರವಹಿಸುತ್ತಾರೆ. ಒಂದು ರಸ್ತೆಯನ್ನು ಅಗೆಯುವ ಪ್ರಸಂಗ ಬಂದರೆ ಅದನ್ನು ಹದಿನೆಂಟು ಗಂಟೆಯೊಳಗೆ ಮುಚ್ಚಿ, ಮೊದಲು ಹೇಗಿತ್ತೋ ಹಾಗೆ ಮಾಡಿಟ್ಟಿರಬೇಕು. ಅದಕ್ಕಿಂತ ಹೆಚ್ಚಿನ ಸಮಯ ಹಿಡಿದರೆ, ಆ ಪ್ರದೇಶದ ವಾಸಿಗಳಿಗೆ ಮುಂಚಿತವಾಗಿಯೇ ತಿಳಿಸಬೇಕು. ಇಂಥ ಸಂಗತಿಗಳ ಬಗ್ಗೆ ಕೂಡ ಅಲ್ಲಿನ ಆಡಳಿತ ಸಂವೇದಿ ಯಾಗಿದೆ ಅಂದರೆ ಅಲ್ಲಿ ಸ್ಥಾಪಿತವಾಗಿರುವ ಮನಸ್ಥಿತಿ ಅದೆಷ್ಟು ಸೂಕ್ಷ್ಮವಾಗಿರಬಹುದು ಎಂಬು ದನ್ನು ಊಹಿಸಬಹುದು.
ಜಪಾನಿಯರ ಮನಸ್ಥಿತಿಯ ಪ್ರಧಾನ ತಂತು ಅಂದರೆ ಜೀವನಮಟ್ಟವನ್ನು ದಿನದಿಂದ ದಿನಕ್ಕೆ ಉತ್ತಮ ಪಡಿಸಿಕೊಳ್ಳಲು ಶ್ರಮಿಸುವುದು. ಒಂದು ವ್ಯವಸ್ಥೆಯಲ್ಲಿ ದೋಷವಿದೆ ಎಂಬುದು ಕಂಡು ಬಂದರೆ ಅದನ್ನು ಅವರು ತಕ್ಷಣ ಬದಲಿಸುತ್ತಾರೆ ಅಥವಾ ಸುಧಾರಿಸುತ್ತಾರೆ. ಯಾವ ಕಾರಣಕ್ಕೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ಅವ್ಯವಸ್ಥೆಗೇ ಒಗ್ಗಿಕೊಳ್ಳುವುದಿಲ್ಲ. ಟೋಕಿಯೊ ದಲ್ಲಿರುವ ನನ್ನ ಸ್ನೇಹಿತರೊಬ್ಬರು ಹೇಳಿದ್ದು - If transportation technology was moving along as fast as microprocessor technology, then the day after tomorrow I would be able to get in a taxi cab and be in Tokyo in 30 seconds .
ಜಪಾನಿಯರು ಅದನ್ನೂ ಸಾಧಿಸಬಲ್ಲರು. ನಮ್ಮಲ್ಲಿ ದುರಸ್ಥಿಗೆಂದು ರಸ್ತೆ ಅಗೆದು ಒಂದು ವರ್ಷ ವಾದರೂ ಅದನ್ನು ಸರಿಪಡಿಸಿರುವುದಿಲ್ಲ. ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿರುವುದಿಲ್ಲ. ಇಂಥ ಅಸಹ್ಯಗಳನ್ನು ಅಲ್ಲಿ ನೋಡಲು ಸಾಧ್ಯವೇ ಇಲ್ಲ. ರಸ್ತೆಗಳಿಗೆ ಬಳಿದ ಬಣ್ಣ ಮಾಸಿದಾಗ, ತಕ್ಷಣ ಬಣ್ಣ ಬಳಿಯುವಂತೆ ಸೂಚಿಸುವ ಸೆನ್ಸರ್‌ಗಳನ್ನು ಅಭಿವೃದ್ಧಿಪಡಿಸಬೇಕು, ಅದೊಂದು ಕಾರಣಕ್ಕೆ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆಯಾಗಬಾರದು ಎಂದು ಯೋಚಿಸು ವಷ್ಟು ಜಪಾನಿಯರು ಸಣ್ಣ ಸಂಗತಿಗಳ ಮೇಲೆ ಕಣ್ಣಿಡುವವರು.
ಈ ಕಾರಣಕ್ಕಾಗಿಯೇ ಒಂದು ಬೀದಿ ದೀಪ ಕೆಟ್ಟು ಹೋದರೂ, ಅದನ್ನು ಅದೇ ದಿನ ಸರಿಪಡಿಸು ತ್ತಾರೆ. ಕಂಬ ವಾಲಿದರೆ, ತಂತಿ ಜಗ್ಗಿದರೆ ತಕ್ಷಣ ಸರಿಪಡಿಸುತ್ತಾರೆ. ಹೀಗೆ ಸುಮ್ಮನೆ ನೋಡಿದರೂ ಎಲ್ಲೂ ಸಹ ಒಂದು ಸಣ್ಣ ದೋಷವನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಜನಜೀವನದ ಪ್ರತಿ ಅಂಶಗಳ ಬಗ್ಗೆಯೂ ಜಪಾನಿಯರು ಗಮನ ನೀಡುತ್ತಾರೆ. ಟೋಕಿಯೋ ನಗರದ ಟ್ಯಾಕ್ಸಿ ಚಾಲಕ, ಪ್ರಯಾಣಿಕರಿಗೆ ಬಾಗಿಲು ತೆರೆದು ಸ್ವಾಗತಿಸುವಷ್ಟು ಸೂಕ್ಷ್ಮ ಮನಸ್ಸಿನವನು. ಪ್ರಯಾಣ ಮುಗಿಸಿ, ನೀವು ನೋಟನ್ನು ನೀಡಿದರೆ ಅವನು ಒಂದೇ ಕೈಯಲ್ಲಿ ಸ್ವೀಕರಿಸುವುದಿಲ್ಲ. ಎರಡೂ ಕೈಯಲ್ಲಿ ತೆಗೆದುಕೊಂಡು, ಎರಡೂ ಕೈಗಳಲ್ಲಿ ಟ್ರೇ ಹಿಡಿದು ಅದರಲ್ಲಿ ಚಿಲ್ಲರೆ ಹಣವನ್ನು ಇಟ್ಟು ಕೊಡು ತ್ತಾನೆ. ಆತ ಅಷ್ಟು ನಯ-ವಿನಯ, ಶಿಷ್ಟಾಚಾರ ಮತ್ತು ಮೃದು ಸ್ವಭಾವದವ.
ಜಪಾನಿಯರು ಒಂದೇ ಕೈಯಲ್ಲಿ ಉಡುಗೊರೆಯನ್ನು ಕೊಡುವುದೂ ಇಲ್ಲ, ಸ್ವೀಕರಿಸುವುದೂ ಇಲ್ಲ. ಬಹುಪಾಲು ಟ್ಯಾಕ್ಸಿ ಚಾಲಕರು ಜಪಾನಿ ಭಾಷೆಯಲ್ಲಿಯೇ ಮಾತಾಡುತ್ತಾರೆ. 2020ರ ಟೋಕಿಯೋ ಒಲಿಂಪಿಕ್ಸ್ ಸಂದರ್ಭದಲ್ಲಿ ಐವತ್ತು ಸಾವಿರ ಟ್ಯಾಕ್ಸಿ ಚಾಲಕರಿಗೆ ಇಂಗ್ಲಿಷ್ ನಲ್ಲಿ ವ್ಯವಹರಿಸಲು ತರಬೇತಿ ನೀಡಲಾಯಿತು. ಆದರೆ ಇಂದಿಗೂ ಅಲ್ಲಿನ ಟ್ಯಾಕ್ಸಿ ಚಾಲಕರಿಗೆ ಚೂರುಪಾರು ಇಂಗ್ಲಿಷ್ ಬಂದರೂ, ಅರ್ಥವಾದರೂ ಅವರು ಮಾತಾಡುವುದು ಜಪಾನೀ ಭಾಷೆಯ.
ಯಾವ ದೇಶದ ಜನ ಉಳಿದವುಗಳಿಗಿಂತ ತಮ್ಮ ಮಾತೃಭಾಷೆಯ ಮಾತಾಡಲು, ವ್ಯವಹರಿಸಲು ಇಷ್ಟಪಡುತ್ತಾರೋ, ಅವರು ಹೆಚ್ಚು ಆತ್ಮವಿಶ್ವಾಸಿಗಳಾಗಿರುತ್ತಾರಂತೆ. ಜಪಾನಿಯರು ತಮಗೆ ಇಂಗ್ಲಿಷ್ ಬರುವುದಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳುತ್ತಾರೆ. ಅದು ತಮ್ಮ ಆತ್ಮಬಲ ಎಂದು ಅವರು ಪರಿಗಣಿಸುತ್ತಾರೆ.
ಇಂದು ಇಂಗ್ಲಿಷ್ ಭಾಷೆ ಆ ದೇಶದ ಎದೆಯಭಾಗವನ್ನು ಹೊಕ್ಕಿದ್ದರೂ, ಜಪಾನಿಯರ ಹೃದಯ ದೊಳಗಿಳಿದಿಲ್ಲ. ಜಪಾನೀ ಭಾಷೆಯ ಸಮಾಧಿಯ ಮೇಲೆ ಇಂಗ್ಲಿಷ್ ಅರಳುತ್ತಿಲ್ಲ. ಇಂದಿಗೂ ಅಲ್ಲಿ ಇಂಗ್ಲಿಷ್ ಒತ್ತಾಯದ, ಒತ್ತಡದ, ಒಲ್ಲದ ಮನದ ಭಾಷೆಯೇ. ಯಾವ ದೇಶದ ಜನ ತನ್ನಿಂದಾಗಿ ಬೇರೆಯವರ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎಂದು ಭಾವಿಸುತ್ತಾರೋ, ಅವರು ತಮ್ಮಷ್ಟೇ ಬೇರೆ ಯವರ ಖಾಸಗಿತನವನ್ನು ಗೌರವಿಸುತ್ತಾರೆಂದರ್ಥ.
ಸಾರ್ವಜನಿಕ ಸ್ಥಳಗಳಲ್ಲಿ ಊರಿಗೇ ಕೇಳುವ ಹಾಗೆ ಮೊಬೈಲಿನಲ್ಲಿ ಗಟ್ಟಿದನಿಯಲ್ಲಿ ಮಾತಾಡುತ್ತಾ ಹೋಗುವುದಿಲ್ಲ. ರೈಲಿನಲ್ಲಿ ಸಂಚರಿಸುವಾಗಂತೂ ಮೊಬೈಲನ್ನು ಸೈಲಂಟ್ ಮೋಡ್‌ನಲ್ಲಿಯೇ ಇಟ್ಟಿರುತ್ತಾರೆ. ಕರೆಗಳು ಬಂದರೂ ಸ್ವೀಕರಿಸುವುದಿಲ್ಲ, ತೀರಾ ತುರ್ತು ಕರೆಯನ್ನು ಹೊರತುಪಡಿಸಿ. ಟ್ರೇನಿನಲ್ಲಿ ಕುಳಿತಾಗ ಆಹಾರಗಳನ್ನು ಸಹ ಸೇವಿಸುವುದಿಲ್ಲ. (ಭಾರತದಲ್ಲಿ ರೈಲಿನಲ್ಲಿಯೇ ಅಡುಗೆ ಮಾಡಿ ದಾಸೋಹ ಮಾಡುವ ಚಿತ್ರಣವನ್ನು ಒಮ್ಮೆ ಚಿತ್ರಿಸಿಕೊಳ್ಳಿ) ಇವನ್ನೆಲ್ಲ ಯಾರೋ ನಿಯಮ ಮಾಡಿ ಜಾರಿಗೆ ತಂದಿದ್ದಲ್ಲ.
ಹಾಗೆ ಮಾಡಿದ್ದಿದ್ದರೆ ಅನೇಕರು ನಿತ್ಯವೂ ಉಲ್ಲಂಘಿಸಿರುತ್ತಿದ್ದರು ಅಥವಾ ಅವರನ್ನು ಕಾಯಲು ಪೊಲೀಸರನ್ನು ನೇಮಿಸಿರಬೇಕಾಗುತ್ತಿತ್ತು. ಆದರೆ ಈ ಎಲ್ಲ ಸಾರ್ವಜನಿಕ ವರ್ತನೆಗಳು, ಅಭ್ಯಾಸ ಗಳು, ಶಿಷ್ಟಾಚಾರಗಳು ಅವರಲ್ಲಿ ರಕ್ತಗುಣವಾಗಿ ಅಂತರ್ಗತವಾಗಿವೆ. ಮೂರ್ನಾಲ್ಕು ಜನರಿರುವ ಒಂದು ಮನೆಯಲ್ಲಿ ಜಾರಿಯಲ್ಲಿರುವ ನಿಯಮಗಳು ಉಲ್ಲಂಘನೆಯಾಗಬಹುದು, ಆದರೆ ಸಾರ್ವ ಜನಿಕವಾಗಿ ಯಾರೂ ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸುವುದಿಲ್ಲ.
ನಗರದ ನಿಯಮವನ್ನು ಉಲ್ಲಂಸುವುದು ಹೇಗೆ ಎಂದು ಯಾರೂ ಯೋಚಿಸುವುದಿಲ್ಲ. ಅವನ್ನು ಪಾಲಿಸುವುದು ಹೇಗೆ ಎಂದೇ ಬಯಸುತ್ತಾರೆ. ಟೋಕಿಯೋದಲ್ಲಿ 44 21 ಅಡಿ (ಅಂದರೆ 924 ಚದರ ಅಡಿ) ವಿಸ್ತೀರ್ಣದ ಜಾಗದಲ್ಲಿ ಇಪ್ಪತ್ತೊಂದು ಮಹಡಿ ಕಟ್ಟಡವನ್ನು ಕಾನೂನು ಬದ್ಧವಾಗಿ ನಿರ್ಮಿಸಿರುವುದೇ ಇದಕ್ಕೊಂದು ನಿದರ್ಶನ.
ಜಪಾನಿಯರು ಹಬ್ಬ-ಹರಿದಿನಗಳ ಆಚರಣೆ ಪ್ರಿಯರು. ಆ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ದೊಡ್ಡ ಪ್ರಮಾಣದ ಜನದಟ್ಟಣೆ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿ-ಆತಂಕ ಆಗುವು ದಿಲ್ಲ. ಧಾರ್ಮಿಕ ಆಚರಣೆ ಸಂದರ್ಭದಲ್ಲಿ ಐವತ್ತು ಸಾವಿರ ಜನ ಸೇರಿದರೆ, ಅವರನ್ನು ನಿಯಂತ್ರಿ ಸಲು ಹೆಚ್ಚೆಂದರೆ ಮೂವತ್ತು ಪೊಲೀಸರು ಸಾಕು! ಮೂವರು ಜನರಿರುವಾಗಲೇ ಕ್ಯೂನಲ್ಲಿ ನಿಲ್ಲುವ ಅಲ್ಲಿನ ಜನ, ಅಷ್ಟೊಂದು ಪ್ರಮಾಣದಲ್ಲಿ ಸೇರಿದಾಗ ಹೇಗೆ ವರ್ತಿಸಬಹುದು ಊಹಿಸಿ.
ಇಲ್ಲಿ 2017ರಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ಪ್ರಸ್ತಾಪಿಸಬೇಕು. ಟೋಕಿಯೋ ನಗರದಲ್ಲಿ ಚೆರ್ರಿ ಹೂವು (ಸಾಕುರಾ) ಅರಳುವ ಸಂದರ್ಭದಲ್ಲಿ ಅದನ್ನು ನೋಡಲು ಜಗತ್ತಿನೆಡೆಗಳಿಂದ ಲಕ್ಷಾಂತರ ಜನ ಆಗಮಿಸುತ್ತಾರೆ. ಆ ವರ್ಷ ಸುಮಾರು ಹತ್ತು-ಹದಿನೈದು ಚೀನೀ ಪ್ರವಾಸಿಗರ ಪೈಕಿ ಕೆಲವರು ಸೆಲ್ಫಿ ತೆಗೆದುಕೊಳ್ಳುವಾಗ ಹಿನ್ನೆಲೆ ದೃಶ್ಯ (ಬ್ಯಾಕ್ ಡ್ರಾಪ್) ವನ್ನು ಸುಂದರವಾಗಿ ಸೆರೆ ಹಿಡಿಯಲೆಂದು ಚೆರ್ರಿ ಮರವನ್ನೇರಿ ಟೊಂಗೆಗಳನ್ನು ಜೋರಾಗಿ ಅಲುಗಾಡಿಸಿದರು.
ಹೂವುಗಳು ಬೀಳುವ ದೃಶ್ಯವನ್ನು ಸೆರೆ ಹಿಡಿಯುವುದು ಅವರ ಉದ್ದೇಶವಾಗಿತ್ತು. ಆದರೆ ಆ ಘಟನೆ ದೊಡ್ಡ ವಿವಾದವನ್ನೇ ಸೃಷ್ಟಿಸಿಬಿಟ್ಟಿತು. ಜಪಾನಿನ ಸಾಂಸ್ಕೃತಿಕ ಸಾಂಪ್ರದಾಯಿಕತೆಯ ದೃಷ್ಟಿ ಯಿಂದ ಸಾಕುರಾ ಹೂವುಗಳಿಗೆ ವಿಶೇಷ ಮಹತ್ವ. ಅವುಗಳನ್ನು ಗೌರವಪೂರ್ವಕವಾಗಿ ನೋಡ ಲಾಗುತ್ತದೆ. ಈ ಘಟನೆಯು ಜಪಾನಿ ನಾಗರಿಕರಲ್ಲಿ ಅಸಮಾಧಾನ ಹಾಗೂ ವಿದೇಶಿ ಪ್ರವಾಸಿಗರ ಆಚಾರ- ವಿಚಾರ, ವರ್ತನೆ ಬಗ್ಗೆ ಆಕ್ರೋಶವನ್ನು ಹೊರಹಾಕಿತು.
ಸಾಕುರಾ ಹೂವುಗಳನ್ನು ಕೇವಲ ಅಲಂಕಾರಿಕವಾಗಿ ಮಾತ್ರವಲ್ಲ, ಶಾಶ್ವತತೆ ಮತ್ತು ಜೀವನದ ಕ್ಷಣಭಂಗುರತೆಯ ಸಂಕೇತವೂ ಹೌದು. ಸಾಕುರಾ ಹೂಗಳು ಅರಳುವ ಸೀಸನ್ ನಲ್ಲಿ ‘ಹನಾಮಿ’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಕುಟುಂಬ, ಸ್ನೇಹಿತರು ಒಟ್ಟಾಗಿ ಸೇರಿ ಚೆರ್ರ ಹೂಗಳ ಡಿ ಹಬ್ಬದ ಸಡಗರದಲ್ಲಿ ಭಾಗವಹಿಸುತ್ತಾರೆ.
ಹೀಗಾಗಿ ಈ ಹೂವುಗಳಿಗೆ ಹಾನಿ ಉಂಟಾಗುವುದನ್ನು ಜಪಾನೀ ಸಂಸ್ಕೃತಿಯಲ್ಲಿ ಅವಹೇಳನವೆಂದೇ ಪರಿಗಣಿಸಲಾಗುತ್ತದೆ. ಈ ಘಟನೆಯ ನಂತರ, ಟೋಕಿಯೋ ಹಾಗೂ ಇತರ ಪ್ರವಾಸಿ ಕೇಂದ್ರಗಳಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಯಿತು. ಈ ಘಟನೆಗೆ ಪ್ರತಿಕ್ರಿಯೆಯಾಗಿ, ಚೀನೀ ಪ್ರವಾ ಸೋದ್ಯಮ ಸಂಸ್ಥೆಗಳು ತಮ್ಮ ಪ್ರವಾಸಿಗರಿಗೆ ವಿದೇಶಿ ಸಂಸ್ಕೃತಿಯ ಗೌರವದ ಬಗ್ಗೆ ಅಭಿಯಾನ ಗಳನ್ನು ಆರಂಭಿಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಚೀನಿಯರು ಈ ಘಟನೆಗೆ ಕ್ಷಮೆಯಾಚಿಸಿದರು.
ಒಂದು ಸಾಕುರಾ ಮರವೇರಿ ಕೊಂಬೆಯನ್ನು ಹಿಡಿದು ಅಡಿಸಿದ ಘಟನೆ ಅವರ ಮನಸ್ಸನ್ನು ಕಲಕಿತ್ತು, ಕುಲುಕಿತ್ತು. ಜಪಾನಿಯರ ಸೂಕ್ಷ್ಮ ಭಾವನೆಗೆ ಈ ಘಟನೆಯೇ ಸಾಕ್ಷಿ. ಇಂದಿಗೂ ಒಂದು ಸಾಕುರಾ ಮರವನ್ನು ಕಡಿಯುವ ಪ್ರಸಂಗ ಬಂದರೆ, ಅದಕ್ಕೆ ಪ್ರತಿಯಾಗಿ ನೂರು ಗಿಡಗಳನ್ನು ನೆಡುತ್ತಾರೆ.
ಇದು ಜಪಾನಿಯರ ಮೆಂಟಾಲಿಟಿ. ಜಪಾನ್ ಇಂದು ಜಾಗತಿಕ ಶಕ್ತಿಯಾಗಿ, ಒಂದು ಅನೂಹ್ಯ, ಅಪರೂಪದ ದೇಶವಾಗಿ ತಲೆಯೆತ್ತಿ ನಿಂತಿದ್ದರೆ ಈ ಮೆಂಟಾಲಿಟಿಯೇ ಕಾರಣ.