Yagati Raghu Nadig Column: ಚಿಣ್ಣರ ಸುಜ್ಞಾನವೂ, ಅಣ್ಣರ ಅಜ್ಞಾನವೂ..!
ಹಸಿವಿನಿಂದ ಒದ್ದಾಡ್ತಿದ್ದ ಅವುಗಳ ಸಂಕಟ ನೋಡಿ ನನಗೆ ತಡೆಯೋಕ್ಕೆ ಆಗ್ಲಿಲ್ಲ. ಸರಿಯಾಗಿ ಕಣ್ಣು ಕಾಣದೆ ಯಾವ್ದಾದ್ರೂ ಲಾರಿ ಕೆಳಗೆ ಸಿಕ್ಕಿ ಸತ್ತುಬಿಡ್ತಾವೇನೋ ಅಂದ್ಕೊಂಡು ಮನೆಗೆ ತಂದೆ ಅಪ್ಪಾ..
Source : Vishwavani Daily News Paper
ರಸದೌತಣ
ಯಗಟಿ ರಘು ನಾಡಿಗ್
naadigru@gmail.com
ಮಗನೇ ಶಂಕರ ಭಟ್ಟಾ, ದೊಡ್ಡೋನಾಗಿ ನಾನು ಹೇಳಿದ್ದೇನು, ನೀನು ಮಾಡ್ತಿರೋ ದೇನು? ಅಷ್ಟು ಸಲ ಬಿಡಿಸಿ ಹೇಳಿದ್ರೂ ತಪ್ಪು ಮಾಡ್ತಾ ಇದ್ದೀಯಲ್ಲಯ್ಯಾ?
- ನಾನೇನು ತಪ್ಪು ಮಾಡಿದ್ನಪ್ಪಾ?
ಲೋಟದಲ್ಲಿರೋ ಬಿಸಿಹಾಲು ಕುಡಿದು ಮಲಕ್ಕೋ ಅಂತ ಹೇಳಿದ್ರೆ ಅದೇನು ಮಾಡ್ತಿ ದ್ದೀ ಆ ಮೂಲೇಲಿ? ಹೊಟ್ಟು ತುಂಬೋಕೆ ಇಟ್ಟಿದ್ದ ಗೋಣಿಚೀಲಾನ ಅಲ್ಯಾಕೆ ಹಾಕಿದ್ದೀಯ?
- ಅಪ್ಪಾ, 4 ಮರಿ ಹಾಕಿದ್ದ ಆ ಬೀದಿನಾಯಿ ಸತ್ತೋಯ್ತು. ಹುಟ್ಟಿ 2 ದಿನವಷ್ಟೇ ಆಗಿದ್ದ ಮರಿಗಳು ಮಳೇಲಿನೆಂದು ಒದ್ದಾಡ್ತಾ ಇದ್ವು. ಪಾಪ! ಅಮ್ಮ ಇಲ್ಲಾಂತ ಕಂಗಾಲಾಗಿದ್ವು.
ಅದಕ್ಕೇ ಎತ್ಕೊಂಡು ಬಂದು ಗೋಣಿಚೀಲದ ಮೇಲೆ ಮಲಗಿಸಿ, ನನಗಿಟ್ಟಿದ್ದ ಬಿಸಿಹಾಲನ್ನ ಮರಿಗಳಿಗೆ ಕುಡಿಸ್ತಿದ್ದೀನಪ್ಪಾ..
ಅಯ್ಯೋ ಪ್ರಾರಬ್ಧ ಮುಂಡೇದೇ... ಬೀದಿನಾಯಿನ ಮನೆಯೊಳಗೆ ತಂದಿದ್ದಲ್ದೆ, ಅವಕ್ಕೆ ಹಾಲೂ ಕುಡಿಸ್ತಿದ್ದೀಯಾ? ತಲೆ ಕೆಟ್ಟಿದೆಯಾ ನಿಂಗೆ?
- ಹಸಿವಿನಿಂದ ಒದ್ದಾಡ್ತಿದ್ದ ಅವುಗಳ ಸಂಕಟ ನೋಡಿ ನನಗೆ ತಡೆಯೋಕ್ಕೆ ಆಗ್ಲಿಲ್ಲ. ಸರಿಯಾಗಿ ಕಣ್ಣು ಕಾಣದೆ ಯಾವ್ದಾದ್ರೂ ಲಾರಿ ಕೆಳಗೆ ಸಿಕ್ಕಿ ಸತ್ತುಬಿಡ್ತಾವೇನೋ ಅಂದ್ಕೊಂಡು ಮನೆಗೆ ತಂದೆ ಅಪ್ಪಾ..
ಆಹಾ! ಧರ್ಮರಾಯನ ಮರಿಮಗ! ಬೀದಿನಾಯಿ ಸತ್ರೆ, ಅದರ ಮರಿಗಳು ಹಸಿವಿ ನಿಂದ್ಲೋ, ವಾಹನಕ್ಕೆ ಸಿಲುಕಿಯೋ ಸತ್ರೆ ಅದಕ್ಕೆ ನಾವು ಹೊಣೆಯಾ? ಬೀದೀಲಿ ಬಿದ್ದಿರೋದೇ ಬೀದಿ ನಾಯಿಯ ಪಾಡು, ಅದನ್ನ ಮನೆಗೆ ತಂದು ಸಿಂಹಾಸನದ ಮೇಲೆ ಕೂರಿಸ್ತಾರಾ?!
- ‘ದಯೆ ಇರಬೇಕು ಸಕಲ ಪ್ರಾಣಿಗಳಲ್ಲಿ, ದಯೆಯೇ ಧರ್ಮದ ಮೂಲ’ ಅಂತ ನೀನೇ ಪಾಠ ಮಾಡಿದ್ಯಲ್ಲಪ್ಪಾ? ನಮ್ಮಲ್ಲಿರೋದೂ, ಪ್ರಾಣಿಗಳಲ್ಲಿರೋದೂ ಜೀವವೇ. ಏನಾದ್ರೂ ಬೇಕು ಅಂದ್ರೆ, ಹಸಿವೆ-ನೋವು ಆದ್ರೆ ನಮ್ಮಂಥೋರು ಬಾಯಿಬಿಟ್ಟು ಹೇಳ್ಕೋತೀವಿ. ಆದ್ರೆ ಈ ಮೂಕಪ್ರಾಣಿಗಳು, ಅದರಲ್ಲೂ ತಬ್ಬಲಿಗಳು ಯಾರನ್ನ ಕೇಳ್ಬೇಕಪ್ಪಾ?
ಚೋಟುದ್ದ ಇದ್ದೀಯ, ನಂಗೇ ಬುದ್ಧಿ ಹೇಳ್ತೀಯಾ ಅಯೋಗ್ಯ... ಮರ್ಯಾದೆ ಯಿಂದ ಅವನ್ನ ಹೊರಗೆ ಎಸೆದು ಬಂದ್ರೆ ಸರಿ. ಇಲ್ಲಾಂದ್ರೆ ನಿನ್ನ ಚರ್ಮ ಸುಲಿದು ಬಿಡ್ತೀನಿ...
- ಪ್ಲೀಸ್ ಅಪ್ಪಾ, ಅವಿನ್ನೂ ಮರಿಗಳು, ಸದ್ಯಕ್ಕೆ ಇಟ್ಕೊಂಡಿರೋಣ. ಅವು ದೊಡ್ಡವಾದ ಮೇಲೆ ನೀನಂದಂತೆ ಹೊರಗೆ ಬಿಡ್ತೀನಪ್ಪಾ. ಆಗ ಅವು ಸ್ವತಂತ್ರವಾಗಿ ಆಹಾರ ಹುಡುಕಿ ಕೊಳ್ತವೆ...
ಹೆತ್ತಪ್ಪನಿಗೇ ಬುದ್ಧಿ ಹೇಳೋವಷ್ಟು ಪೊಗರೇನೋ ನಿಂಗೆ? ಅವನ್ನ ಈಗಿಂದೀಗ್ಲೇ ಹೊರ ಗೆಸೆಯದಿದ್ರೆ ನಿನ್ನ ಅವಸ್ಥೆಯನ್ನ ನಾಯಿಪಾಡು ಮಾಡ್ತೀನಿ ನೋಡ್ತಿರು...
- ಅಪ್ಪಾ....??
***
ಲೋ ರಾಮೂ, ಮೇಷ್ಟ್ರಾಗಿ ನಾನು ಹೇಳಿದ್ದೇನು, ನೀನು ಮಾಡಿದ್ದೇನು?
- ನಾನೇನ್ ಮಾಡ್ದೇ ಮೇಷ್ಟ್ರೇ?
ಸೀಬೆಗಿಡಕ್ಕೆ ನೀರುಣಿಸಿದ್ದಕ್ಕೆ ನಾನು ನಿಂಗೊಂದು ಸೀಬೆಕಾಯಿ ಕೊಟ್ಟು, ‘ಒಬ್ಬನೇ ಮರೆಯಲ್ಲಿ ತಿಂದು ಬಾ’ ಅಂದಿದ್ದೆ. ನೀನು ಈ ಶಾಮನ ಹತ್ರ ಬಂದಿದ್ದೇಕೆ?
- ಮೇಷ್ಟ್ರೇ, ನನ್ ಜತೆ ಶಾಮನೂ ಗಿಡಕ್ಕೆ ನೀರು ಹಾಕಿದ್ದ, ಹೀಗಾಗಿ ಅವನೊಂದಿಗೆ ಹಣ್ಣು ಹಂಚಿಕೊಳ್ಳೋಣ ಅಂತ ಬಂದೆ...
ಆಹಾಹ, ದಾನಶೂರ ಕರ್ಣನ ಮೊಮ್ಮಗ! ಲೇಯ್ ಅಯೋಗ್ಯ, ಹಂಗೆ ಕೊಡೋ ದಾದ್ರೆ ಸ್ಟಾಫ್ ರೂಮ್‌ನಿಂದ ಚಾಕು ತಂದು ಕತ್ತರಿಸಿ ಕೊಡಬೇಕಿತ್ತು, ಹೀಗೆ ಎಂಜಲು ಮಾಡಿ ಕಚ್ಚಿಕೊಡ್ತಾರಾ?
- ಮೇಷ್ಟ್ರೇ, ‘ಮತ್ತೊಬ್ಬರಿಗೆ ಏನಾದ್ರೂ ಕೊಡಬೇಕು ಅನಿಸಿದಾಕ್ಷಣ ಮನಃಪೂರ್ತಿಯಾಗಿ ಕೂಡಲೇ ಕೊಟ್ಟುಬಿಡ್ಬೇಕು, ಮೀನ-ಮೇಷ ಎಣಿಸಬಾರದು’ ಅಂತ ನೀವೇ ಹೇಳಿದ್ರಿ. ಚಾಕು ತರೋವಷ್ಟರಲ್ಲಿ ನನ್ ಮನಸ್ಸು ಬದಲಾಗಿಬಿಟ್ರೆ ಏನ್ಮಾಡೋದು? ಅದಕ್ಕೇ ಹೀಗೆ ಮಾಡಿದೆ. ಅಷ್ಟಕ್ಕೂ, ನೇರವಾಗಿ ಬಾಯಲ್ಲಿ ಕಚ್ಚಿಕೊಟ್ರೆ ಅದು ಎಂಜಲು; ಸೀಬೆಕಾಯಿನ ನನ್ನ ಅಂಗಿ ಒಳಗೆ ತೂರಿಸಿ, ಬಟ್ಟೆಯ ಮೇಲ್ಭಾಗದಿಂದ ಕಚ್ಚಿ ತುಂಡುಮಾಡಿದ್ರೆ ಅದು ‘ಕಾಗೆ ಎಂಜಲು’. ಸ್ನೇಹದಲ್ಲಿ ‘ಕಾಗೆ ಎಂಜಲು’ ನಡೆಯುತ್ತಲ್ವಾ ಮೇಷ್ಟ್ರೇ...
ಓಹೋ ಚಾಣಕ್ಯನ ತುಂಡು ಇವನು, ನನಗೇ ನೀತಿಸೂತ್ರ ಬೋಧಿಸ್ತಾನೆ! ಅಲ್ವೋ, ಹಾಗೆ ಕೊಡೋದನ್ನಾದ್ರೂ ಬಲಗೈಲಿ ಕೊಡಬೇಕು ತಾನೇ? ಯಾರಾದ್ರೂ ಎಡಗೈಲಿ ಕೊಡ್ತಾರಾ?
- ಮೇಷ್ಟ್ರೇ, ಬಲಭಾಗದಲ್ಲಿದ್ದ ಮಾತ್ರಕ್ಕೆ ಬಲಗೈ ಶ್ರೇಷ್ಠವಲ್ಲ, ಎಡಭಾಗದಲ್ಲಿದೆ ಅಂತ ಎಡಗೈ ಕನಿಷ್ಠವಲ್ಲ. ದೇಹಕ್ಕೆ ಎರಡೂ ಬೇಕು. ಜತೆಗೆ, ಸೀಬೆ ಕಾಯಿನ ಎಡಗೈಯಿಂದ ಬಲಗೈಗೆ ತಗೊಳ್ಳೋವಷ್ಟರಲ್ಲಿ ನನ್ ಮನಸ್ಸು ಭ್ರಷ್ಟವಾಗಿ, ‘ಇದನ್ನ ನಾನೊಬ್ಬನೇ ತಿನ್ನಬಹುದಲ್ಲ?’ ಅನ್ನೋ ಸ್ವಾರ್ಥ ಚಿಮ್ಮಬಹುದು. ಅದಕ್ಕೆ ಅವಕಾಶವಾಗಬಾರದು ಅಂತ ಎಡಗೈಯಲ್ಲೇ ಶಾಮನಿಗೆ ಸೀಬೆಕಾಯಿ ಕೊಟ್ಟುಬಿಟ್ಟೆ ಮೇಷ್ಟ್ರೇ...
ನಿನ್ನನ್ನ ಹೀಗೇ ಬಿಟ್ರೆ, ನಾನು ರಜೆಯಲ್ಲಿದ್ದಾಗ ನನ್ ಕುರ್ಚೀಲೇ ಕೂತುಬಿಡ್ತೀಯೋ ಏನೋ?! ಮೇಷ್ಟ್ರಿಗೆ ಎದುರುತ್ತರ ಕೊಟ್ಟ ತಪ್ಪಿಗೆ ಹೊಡಿಯೋ 50 ಬಸ್ಕಿ...
- ಮೇಷ್ಟ್ರೇ....?
***
ಅರೆ ಬೇಟಾ, ಎಲ್ಲಿ ಹೋಗಿದ್ದೆ?
- ಅಯ್ಯಂಗಾರರ ಮನೆಯಿಂದ ಈಗಷ್ಟೇ ಬರ‍್ತಿದ್ದೀನಿ ಅಬ್ಬಾಜಾನ್...
ತುಮ್ಹಾರಿ ಅಕಲ್ ಕೊ ಕ್ಯಾ ಹುವಾ ಬೇಟಾ? ಇದು ರಂಜಾನ್ ಹಬ್ಬದ ಉಪವಾಸದ ಟೈಮು ಅಂತ ಗೊತ್ತಿಲ್ವಾ? ಅಲ್ಲಾಹುವಿನ ಸ್ಮರಣೆ ಮಾಡ್ತಾ ಮನೇಲಿ ಇರಬೇಕಾ ದೋನು, ಆ ಹಾರವರ ಮನೆಗೆ ಬೆಳಗ್ಗೇನೇ ಹೋಗಿ ಈಗ ರಾತ್ರಿ ಮನೆಗೆ ಬಂದ್ಯಲ್ಲಾ? ನಿಯಮ ಮುರಿದ್ರೆ ಅಲ್ಲಾಹು ಏನ್ ಮಾಡ್ತಾನೆ, ಮಾಲುಮ್ ಹೈ ಕ್ಯಾ?
- ಮಾಫ್ ಕರೋ ಅಬ್ಬಾಜಾನ್... ಅಯ್ಯಂಗಾರರ ಮಗ ನನ್ ದೋಸ್ತು, ಇಂಗ್ಲಿಷ್ ನೋಟ್ಸ್ ಇಸ್ಕೊಳ್ಳೋಕ್ಕೆ ಹೋಗಿದ್ದೆ. ಆದ್ರೆ ಅವರ ಮನೇಲಿ ಪೂಜೆ ಇದೆ ಅಂತ ಗೊತ್ತಿರ‍್ಲಿಲ್ಲ. ‘ಪೂಜೆ ಹೊತ್ತಿಗೆ ಸಾಕ್ಷಾತ್ ಬಾಲಕೃಷ್ಣನ ಥರ ಬಂದಿದ್ದೀಯ’ ಅಂತ ಅವರಮ್ಮ ಬಲವಂತ ಮಾಡಿ
ಕೂರಿಸಿಕೊಂಡ್ರು ಅಬ್ಬಾಜಾನ್...
ಅರೆ ಬೇಟಾ, ಅವರ ಕೃಷ್ಣ ಸ್ತೋತ್ರವೇ ಬೇರೆ, ರಂಜಾನ್ ನಲ್ಲಿ ಅಲ್ಲಾಹುವಿಗೆ ನಾವು ಮಾಡೋ ‘ತರಾವೀಹ್’ ಪ್ರಾರ್ಥನೆಯೇ ಬೇರೆ. ಜತೆಗೆ, ರಂಜಾನ್‌ನ ದಿನವಿಡೀ ಉಪವಾಸ ವಿರೋ ನಾವು ಸಂಜೆ ಹಣ್ಣು ತಿಂದು ಉಪವಾಸ ಮುರೀಬೇಕಾಗುತ್ತೆ ಅಂತ ನಿಂಗೆ ಹೇಳಿದ್ದೆ ಅಲ್ವಾ?
- ಹೇಳಿದ್ರಿ ಅಬ್ಬಾಜಾನ್, ಆದ್ರೆ ಅಯ್ಯಂಗಾರರ ಮನೇಲಿದ್ದ ಆ ಕೃಷ್ಣನ ಫೋಟೋ ನೋಡ್ತಾ ಇದ್ದ ಹಾಗೆ, ‘ನಮ್ ಅಲ್ಲಾಹು ಬೇರೆ ಅಲ್ಲ, ಈ ಕೃಷ್ಣ ಬೇರೆ ಅಲ್ಲ’ ಅನ್ಸೋಕೆ
ಶುರು ವಾಯ್ತು. ಅವರು ಭಜನೆಗೆ ಶುರುವಿಟ್ಟುಕೊಂಡ್ರು, ನಂಗೆ ಅದು ಬರದಿದ್ರೂ ಕೈ ಮುಗಿದು ಕೊಂಡು ಕೃಷ್ಣನ ಕಣ್ಣಲ್ಲೇ ಅಲ್ಲಾಹುವಿನ ಬೆಳಕನ್ನ ಕಾಣತೊಡಗಿದೆ ಅಬ್ಬಾ ಜಾನ್..
ಅವರ-ನಮ್ಮ ಆಚಾರವಿಚಾರದಲ್ಲಿ, ನಂಬಿಕೆಯಲ್ಲಿ ‘ಫರಕ್’ ಇದೆ ಬೇಟಾ. ನಿಂಗ್ಯಾಕೆ ಇದು ಅರ್ಥವಾಗ್ತಿಲ್ಲ?
- ಫರಕ್ ಎಲ್ಲಿದೆ ಅಬ್ಬಾಜಾನ್? ಪೂಜೆ-ನೈವೇದ್ಯ ಆಗೋ ವರೆಗೂ ಅವರ ಮನೆಯವರೂ ಉಪವಾಸವಿದ್ರು, ನಾನೂ ಉಪವಾಸದಲ್ಲಿದ್ದೆ. ಅವರು ಪೂಜೆಯ ನಡುವೆ ‘ಯಜ್ಞೋ ಪವೀತ’ ಅಂತ ಹೇಳಿ ಅದೇನೋ ದಾರವನ್ನು ದೇವರಿಗೆ ತೊಡಿಸಿದ್ರು, ಅಂಥ ದಾರದಿಂದಲೇ ಮಾಡಿದ ‘ಚಾದರ’ ವನ್ನ ನಮ್ಮಲ್ಲಿ ದರ್ಗಾದಲ್ಲಿ ಹೊದಿಸ್ತೇವೆ. ಹಾಂ, ಒಂದು ವ್ಯತ್ಯಾಸವಿದೆ, ಉಪವಾಸ ಮುರಿಯುವಾಗ ನಾವು ಖರ್ಜೂರದಂಥ ‘ಡ್ರೈ ಫ್ರೂಟ್ಸ್’ ತಿಂತೀವಿ, ಆದರೆ
ಅಯ್ಯಂಗಾರರ ಮನೇಲಿ ಬಾಳೆಹಣ್ಣು ಕೊಟ್ರು, ಅಷ್ಟೇ ಅಬ್ಬಾಜಾನ್...
ನಿಂಗೆ ನಾಲ್ಕಕ್ಷರ ಕಲಿಯೋಕ್ಕೆ ಬಿಟ್ಟಿದ್ದೇ ನನ್ ತಪ್ಪಾಯ್ತು, ತುಮ್ ಅಂದರ್ ಮತ್ ಆವೋ, ಉಧರೀಚ್ ಠೆಹರೋ...
- ಅಬ್ಬಾಜಾನ್....?
***
Sonny, what happened to you? ನಿನ್ನೆ ನೀನು Confession ಇಟ್ಞ್ಛಛಿooಜಿಟ್ಞ ಮಾಡಿಕೊಳ್ಳಲಿಕ್ಕೆ ಚರ್ಚಿಗೆ ಹೋಗಲಿಲ್ವಂತೆ? ಫಾದರ್ ಹೇಳಿದ್ರು...
- ಡ್ಯಾಡ್, ನಂಗೆ ಚರ್ಚಿಗಿಂತ ಪಕ್ಕದ ಮನೆ ಆರಾಧ್ಯ ಅಂಕಲ್ ಹತ್ರ Confession ಮಾಡಿ ಕೊಳ್ಳೋದಿತ್ತು. ಅವರಲ್ಲಿಗೆ ಹೋಗಿದ್ದೆ.
What...? You had been to a NonChristian to make a confession? ಅವರು ನಮ್ ಜನ ಅಲ್ಲ, ಲಿಂಗಾಯತರು ಅಂತ ನಿಂಗೆ ಗೊತ್ತಿಲ್ವಾ? ಅವರ ಹತ್ರ ‘ಕನ್ ಫ್ಯೂಷನ್’ ಮಾಡಿಕೊಳ್ಳುವಂಥದ್ದು ಏನಿತ್ತು?
- ಡ್ಯಾಡ್, ತುಂಬಾ ಆಸೆಯಾಗಿದ್ದಕ್ಕೆ ಆರಾಧ್ಯ ಅಂಕಲ್‌ಗೆ ಗೊತ್ತಾಗದಂತೆ ಅವರ ಮನೆಯ
ಗಿಡದಿಂದ ಒಂದೆರಡು ಸಪೋಟಾ ಹಣ್ಣು ಕದ್ದು ತಿಂದುಬಿಟ್ಟೆ. ಆಮೇಲೆ ಗೊತ್ತಾಯ್ತು, ಅದು ಮೊದಲ ಫಲವಾಗಿತ್ತಂತೆ, ಅದನ್ನ ಶಿವಲಿಂಗಕ್ಕೆ ಮೊದಲು ಸಮರ್ಪಿಸಿ ನಂತರ ಮನೆಯವರು ತಿನ್ನಬೇಕು ಅಂದ್ಕೊಂಡ್ರಿದ್ದಂತೆ. ನಾನು ಕದ್ದುತಿಂದು ಅವರ ನಂಬಿಕೆಗೆ ಘಾಸಿಮಾಡ್ಬಿಟ್ಟೆ ಅಂತ ತಪ್ಪಿತಸ್ಥ ಭಾವನೆ ಕಾಡೋಕ್ಕೆ ಶುರುವಾಯ್ತು. ಹೀಗಾಗಿ ಅವರಲ್ಲಿ
ತಪ್ಪೊಪ್ಪಿಗೆಗೆ ಹೋಗಿದ್ದೆ ಡ್ಯಾಡ್...
ಬ್ಲಡಿ ಫೂಲ್, ಪುಟಗೋಸಿ 2 ಸಪೋಟಾಕ್ಕೆ ಕನ್ ಫೆಷನ್ನಾ? ಅಷ್ಟಾದ ಮೇಲೆ ಮನೆಗೆ ಬರದೆ ರಾತ್ರಿ 12 ಗಂಟೆಗೆ ಮರಳಿದ್ದೀಯಲ್ಲಾ, ಇವತ್ತು ಕ್ರಿಸ್‌ಮಸ್ ಸೆಲೆಬ್ರೇಷನ್, ಸಾಂಟಾಕ್ಲಾಸ್ ಗಿಫ್ಟ್ ತಂದುಕೊಡ್ತಾನೆ ಅಂತ ನಿಂಗೆ ನಾನು ಹೇಳಿರಲಿಲ್ವಾ?
- ಡ್ಯಾಡ್, ನನ್ನ ತಪ್ಪೊಪ್ಪಿಗೆ ಆಗ್ತಿದ್ದಂತೆ ಆರಾಧ್ಯ ಅಂಕಲ್ 8-10 ಸಪೋಟಾ ತಂದು ನನ್ನ ಕೈಗಿಟ್ಟು, “ಹಾಗೆಲ್ಲಾ Guilty feeling ಇಟ್ಕೋಬೇಡ ಮರೀ. ಏನೋ ಆಸೆ ಪಟ್ಟು ಗೊತ್ತಿಲ್ಲದೇ ತಪ್ಪು ಮಾಡಿದ್ದೀಯ. ಅದಕ್ಕೆ ಪಶ್ಚಾತ್ತಾಪ ಪಟ್ಟೆ ನೋಡು? ಅದೇ ನಿನ್ನ ತಪ್ಪನ್ನ ಕರಗಿಸಿಬಿಡ್ತು. ನೀನೇ ‘ಬಾಲಶಿವ’, ದೇವರಿಗೆ ನೈವೇದ್ಯ ಆಯ್ತು ಅಂದ್ಕೊಂ ಡ್ರಾಯ್ತು" ಅಂದ್ರು ಡ್ಯಾಡ್. ಅವರು ನಗುತ್ತಾ ನನ್ನ ಕೈಗಳಿಗೆ ಸಪೋಟಾ ತುರುಕೋವಾಗ
ಸಾಕ್ಷಾತ್ ಸಾಂಟಾಕ್ಲಾಸ್ ಥರಾನೆ ಕಾಣಿಸಿಬಿಟ್ರು... ಹೀಗಾಗಿ ‘ಈ ಸಲ ನನ್ನ ಕ್ರಿಸ್‌ಮಸ್ ಇಲ್ಲೇ ಆಯ್ತು’ ಅಂದ್ಕೊಂಡುಬಿಟ್ಟೆ ಡ್ಯಾಡ್...
ಓಹೋ, ನನಗೇ ಧರ್ಮಸೌಹಾರ್ದ ಹೇಳಿಕೊಡ್ತೀಯಾ. You stay there in Aradhya's home only -
ಡ್ಯಾಡ್....??
ಇದನ್ನೂ ಓದಿ: Yagati Raghu Nadig Column: ಗರುಡನ ಮಂತ್ರವನು ಕಲಿತಿರುವಾತಗೆ ಉರಗ ಕಚ್ಚಿದರೆ...