Yagati Raghu Nadig Column: ಗರುಡನ ಮಂತ್ರವನು ಕಲಿತಿರುವಾತಗೆ ಉರಗ ಕಚ್ಚಿದರೆ...
ಸ್ವಾಮೀಜಿ ತಮ್ಮಲ್ಲಿದ್ದ ದೈವಿಕ ಶಕ್ತಿಯಿಂದಾಗಿ ಭಕ್ತರನ್ನು ಮಠದೆಡೆಗೆ ಸೆಳೆದು ಅವರ ಉದ್ಧಾರಕ್ಕೆ ಕಾರಣರಾಗಿ, ಅರಿವಿನ ಹಣತೆಯನ್ನೂ ಹಚ್ಚುತ್ತಿದ್ದುದರಿಂದ, ಅವರ ಪಾದಪೂಜೆಗೆ
Ashok Nayak
December 29, 2024
ರಸದೌತಣ
ಯಗಟಿ ರಘು ನಾಡಿಗ್
ಅದು ದೈವಸನ್ನಿಧಿಯ ಆವರಣದಲ್ಲಿದ್ದ ಸುಪ್ರಸಿದ್ಧ ಮಠ. ಅಲ್ಲಿದ್ದವರು ಮಹಾನ್ ಆಧ್ಯಾತ್ಮಿಕ ಸಾಧಕರು (ಅವರನ್ನು ಸದ್ಯಕ್ಕೆ ‘ಸ್ವಾಮೀಜಿ’ ಎನ್ನೋಣ). ದೇವರ ಪೂಜೆ-ಪುನಸ್ಕಾರಗಳ ಜತೆಗೆ ಭಕ್ತರ ಕುಂದುಕೊರತೆಗಳನ್ನೂ ಆಲಿಸಿ, ತಮಗಾದ ಪ್ರೇರಣೆಯಂತೆ ಪರಿಹಾರ ಸೂಚಿಸುತ್ತಿದ್ದುದು ಅವರ ವಾಡಿಕೆ. ಆ ಮಠಕ್ಕೊಂದು ಆಡಳಿತ ಮಂಡಳಿಯಿತ್ತು. ಈ ವ್ಯವಸ್ಥೆಯಲ್ಲೊಂದು ಪದ್ಧತಿ ನಡೆದುಕೊಂಡು ಬಂದಿತ್ತು. ಅದೆಂದರೆ- ಸ್ವಾಮೀಜಿಯ ಪಾದಪೂಜೆ ಮಾಡಲು ಬಯಸುವ ಭಕ್ತರಿಂದ ನಿರ್ದಿಷ್ಟ ಮೊತ್ತವನ್ನು ದಕ್ಷಿಣೆಯಾಗಿ ಪಡೆಯಲಾಗುತ್ತಿತ್ತು ಮತ್ತು ಅದು ಸಂಪೂರ್ಣವಾಗಿ ಮಠಕ್ಕೆ ಸೇರುತ್ತಿತ್ತು. ಆ ಹಣದ ಮೇಲೆ ಸ್ವಾಮೀಜಿಗೆ ಯಾವುದೇ ಹಕ್ಕು ಇರುತ್ತಿರಲಿಲ್ಲ. ಆದರೆ, ಪೂಜೆ-ಪುನಸ್ಕಾರ, ಹಬ್ಬ-ಹರಿದಿನದ ವೇಳೆ ಸ್ವಾಮೀಜಿ ತೀರ್ಥ ನೀಡುವಾಗ ಭಕ್ತರು ಅರ್ಪಿಸುವ ದಕ್ಷಿಣೆ ಸ್ವಾಮೀಜಿಯ ಸುಪರ್ದಿಗೆ ಸೇರುತ್ತಿತ್ತು. “ಸರ್ವಸಂಗ ಪರಿತ್ಯಾಗಿಗಳಿಗೆ ದುಡ್ಡೇಕೆ? ಅದು ಮತ್ತೊಮ್ಮೆ ಲೌಕಿಕಕ್ಕೆ ಅಂಟಿಕೊಳ್ಳುವುದರ ದ್ಯೋತಕವಲ್ಲವೇ?" ಎಂದು ನೀವು ಕೇಳಬಹುದು. ಆದರೆ ಸ್ವಾಮೀಜಿ ಅದನ್ನು ಬಳಸು ತ್ತಿದ್ದುದು ಸ್ವಂತಕ್ಕಲ್ಲ; ಲೋಕಕಲ್ಯಾಣಕ್ಕೆಂದು ತಾವು ಹಮ್ಮಿಕೊಳ್ಳುತ್ತಿದ್ದ ಹವನ-ಹೋಮಗಳಿಗೆ ಅದನ್ನು ವಿನಿಯೋಗಿಸುತ್ತಿದ್ದರು. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬಂತೆ ಸಮಾಜಕ್ಕೇ ಅದು ಸೇರುತ್ತಿತ್ತು. “ತೀರ್ಥದ ತಟ್ಟೆಗೆ ಬಿದ್ದ ಕಾಸನ್ನು ಹೀಗೇಕೆ ಹೋಮಕ್ಕೆ ವಿನಿಯೋಗಿಸಿದಿರಿ? ಅಷ್ಟೊಂದು ಖರ್ಚು ಮಾಡುವ ಅಗತ್ಯವೇನಿತ್ತು?" ಎಂದು ಆಡಳಿತ ಮಂಡಳಿಯು ಸ್ವಾಮೀಜಿಯನ್ನು ಕೇಳುವಂತಿರಲಿಲ್ಲ. ಇದು ಅಲ್ಲಿ ನಡೆದುಕೊಂಡು ಬಂದ ಪರಿಪಾಠ.
ಸ್ವಾಮೀಜಿ ತಮ್ಮಲ್ಲಿದ್ದ ದೈವಿಕ ಶಕ್ತಿಯಿಂದಾಗಿ ಭಕ್ತರನ್ನು ಮಠದೆಡೆಗೆ ಸೆಳೆದು ಅವರ ಉದ್ಧಾರಕ್ಕೆ ಕಾರಣರಾಗಿ, ಅರಿವಿನ ಹಣತೆಯನ್ನೂ ಹಚ್ಚುತ್ತಿದ್ದುದರಿಂದ, ಅವರ ಪಾದಪೂಜೆಗೆ ಮುಂದಾಗುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ತತ್ಪರಿಣಾಮವಾಗಿ, ಪಾದಪೂಜೆ ನಿಮಿತ್ತ ಸಂದಾಯವಾಗುವ ದಕ್ಷಿಣೆ ಮಾತ್ರವಲ್ಲದೆ, ದವಸ-ಧಾನ್ಯ, ಹಣ್ಣು-ಹಂಪಲು, ಸೀರೆ-ರವಿಕೆ ಕಣ, ಪಂಚೆ-ಶಲ್ಯ ಮುಂತಾದ ವೈವಿಧ್ಯಮಯ ವಸ್ತುಗಳಿಂದ ತುಂಬಿ ತುಳುಕುತ್ತಿತ್ತು ಮಠದ ಉಗ್ರಾಣ. ಒಟ್ಟಾರೆಯಾಗಿ, ಆರ್ಥಿಕವಾಗಷ್ಟೇ ಅಲ್ಲದೆ ಯಾವ ತೆರನಾದ ಸಂಪನ್ಮೂಲಕ್ಕೂ ಮಠದಲ್ಲಿ ಕೊರತೆಯಿರಲಿಲ್ಲ. ಮೊದಲೇ ತಿಳಿಸಿದಂತೆ, ಇವಿಷ್ಟಕ್ಕೂ ಹಕ್ಕುದಾರನಾಗಿದ್ದುದು ಮಠದ ಆಡಳಿತ ಮಂಡಳಿಯೇ ವಿನಾ, ಸ್ವಾಮೀಜಿಯಲ್ಲ.
ಒಮ್ಮೆ ವಯೋವೃದ್ಧ ಭಕ್ತರೊಬ್ಬರಿಗೆ ಸ್ವಾಮೀಜಿ ತೀರ್ಥ ನೀಡಿ ಯೋಗಕ್ಷೇಮ ವಿಚಾರಿಸಿ ದಾಗ, ಗದ್ಗದಿತರಾದ ಭಕ್ತರಿಂದ ಮಾತು ಹೊರಡಲಿಲ್ಲ. ಅವರು ಸಂಕಟದಲ್ಲಿರುವುದನ್ನು ಅರಿತ ಸ್ವಾಮೀಜಿ, “ಏನಾಯ್ತು ಹೇಳಿ…" ಎಂದು ಆಪ್ಯಾಯತೆಯಿಂದಲೇ ಕೇಳಿದಾಗ ಆ ವಯೋವೃದ್ಧರು, “ಮಹಾಸ್ವಾಮೀ, ನಾಲ್ವರು ಹೆಣ್ಣು ಮಕ್ಕಳಿರುವ, ಊಟಕ್ಕೂ ತತ್ವಾರವಾಗಿರುವ ಬಡಕುಟುಂಬ ನಮ್ಮದು. ಹೀಗಿರುವಾಗ ಮಗಳ ಮದುವೆ ಮಾಡಬೇಕಾಗಿ ಬಂದಿದೆ, ಒಳ್ಳೆಯ ಕಡೆ ಸಂಬಂಧವೂ ಸಿಕ್ಕಿದೆ. ಆದರೆ ದವಸ-ಧಾನ್ಯ ತರುವುದಕ್ಕೂ ದುಡ್ಡಿಲ್ಲ. ತಾವು ಕೃಪೆತೋರಿ ಮಠದ ಕಡೆಯಿಂದ ಸ್ವಲ್ಪ ಆರ್ಥಿಕ ನೆರವು ಕೊಡಿಸಬೇಕು. ತಮ್ಮಿಂದ ಹಾಗೆಯೇ ತೀರ್ಥ ಸ್ವೀಕರಿಸಬಾರದು, ಆದರೆ ಇಷ್ಟೇ ನನ್ನಲ್ಲಿರೋದು…" ಅಂತ ಹೇಳಿ ಸ್ವಾಮೀಜಿಯ ಮುಂದಿದ್ದ ತಟ್ಟೆಗೆ 25 ಪೈಸೆಯ ನಾಣ್ಯವನ್ನು ಹಾಕಿದರು. ಆಗ ಸ್ವಾಮೀಜಿ, “ನೊಂದುಕೊಳ್ಳಬೇಡಿ, ಮಠದ ಆಡಳಿತಾಧಿಕಾರಿಗಳಿಗೆ ನಾವು ಒಂದು ಮಾತು ಹೇಳುತ್ತೇವೆ. ಅವರನ್ನು ಸಂಜೆ ಭೇಟಿಯಾಗಿ ನಂತರ ಊರಿಗೆ ಹೊರಡಿ. ಹೆದರಬೇಡಿ, ದೇವರಿದ್ದಾನೆ" ಎಂದು ಭರವಸೆಯಿತ್ತು ಕಳಿಸಿದರು. ಮರುದಿನ ಮುಂಜಾನೆ ಸ್ವಾಮೀಜಿ ವಾಡಿಕೆಯಂತೆ ಭಕ್ತರಿಗೆ ತೀರ್ಥವನ್ನು ವಿತರಿಸತೊಡಗಿದರು, ಒಬ್ಬರಾದ ಮೇಲೊಬ್ಬರು ಬಂದು ತಟ್ಟೆಗೆ ದಕ್ಷಿಣೆ ಹಾಕಿ ತೀರ್ಥ ಸ್ವೀಕರಿಸಿ ತೆರಳುತ್ತಿದ್ದರು. ಕೊನೆಯಲ್ಲಿದ್ದವರು ತಟ್ಟೆಗೆ 5 ರುಪಾಯಿ ನೋಟು ಹಾಕಿ ತೀರ್ಥಕ್ಕೆ ಕೈಯೊಡ್ಡಿದಾಗ ಸ್ವಾಮೀಜಿ ಅದೇಕೋ ಒಮ್ಮೆ ಕತ್ತೆತ್ತಿ ನೋಡಿದರೆ- “ಇಷ್ಟೇ ನನ್ನಲ್ಲಿರೋದು.." ಅಂತ ಹೇಳಿ ಹಿಂದಿನ ದಿನ ತಟ್ಟೆಗೆ 25 ಪೈಸೆ ಹಾಕಿದ್ದ ಅದೇ ವಯೋವೃದ್ಧ ಭಕ್ತರು!
ಸ್ವಾಮೀಜಿಗೆ ಅರೆಕ್ಷಣ ಅಯೋಮಯ! ‘ನಿನ್ನೆ ತಟ್ಟೆಗೆ ನಾಲ್ಕಾಣೆ ಹಾಕಿದ್ದವರು ಇಂದು ಅದರ 20 ಪಟ್ಟು ಹೆಚ್ಚು ಹಾಕಿದ್ದಾರೆಂದರೆ ಏನೋ ಕರಾಮತ್ತಾಗಿರಬೇಕು’ ಎಂದುಕೊಳ್ಳುತ್ತಲೇ, “ಮಠದ ಅಧಿಕಾರಿಗಳ ಬಳಿ ನಿಮ್ಮ ಸಂಕಷ್ಟ ವನ್ನೆಲ್ಲಾ ವಿವರಿಸಿ ನೆರವಾಗುವಂತೆ ತಿಳಿಸಿದ್ದೆ. ನಿಮ್ಮ ಕೆಲಸವಾಯಿತೇ?" ಎಂದು ಕೇಳಿದರು ಸ್ವಾಮೀಜಿ. ಒಮ್ಮೆಲೇ ಭೋರಿಟ್ಟು ಅಳತೊಡಗಿದ ಆ ವಯೋವೃದ್ಧರು, “ಮಹಾಸ್ವಾಮೀ, ಭೇಟಿಯಾಗಿದ್ದೆ. ಆದರೆ ಅವರು, ‘ಈ ಊರಲ್ಲಿ ಹೆಣ್ಣು ಹೆತ್ತೋರು ಸಾಕಷ್ಟಿದ್ದಾರೆ… ಅವರಿಗೆಲ್ಲಾ ಹೀಗೆ ಮದುವೆಗೆ ದುಡ್ಡು ಕೊಟ್ಕೊಂಡು ಕೂರೋಕ್ಕಾ ಗುತ್ತೇನ್ರೀ? ಸ್ವಾಮೀಜಿ ಹೇಳಿದಾಕ್ಷಣ ದುಡ್ಡು ಕೊಟ್ಟುಬಿಡೋಕೆ ನಮ್ಮ ಮಠವೇನು ಧರ್ಮಛತ್ರವಾ? ತಗೊಳ್ಳಿ ಇಷ್ಟೇ ಆಗೋದು’ ಅಂತ ಹೇಳಿ ನನ್ನ ಕೈಗೆ ೫ ರುಪಾಯಿ ಹಾಕಿದರು. ಅದನ್ನೇ ನಾನೀಗ ತೀರ್ಥದ ತಟ್ಟೆಗೆ ಹಾಕಿದ್ದು. ಮಗಳ ಮದುವೆ ಮಾಡೋದು ನನ್ನ ಹಣೇಲಿ ಬರೆದಿಲ್ಲ ಅನ್ಸುತ್ತೆ" ಎನ್ನುತ್ತ ಅಲ್ಲಿಂದ ಹೊರಡಲು ಅನುವಾದರು…
ಸ್ವಾಮೀಜಿಗೆ ಅದೇನನ್ನಿಸಿತೋ… “ಇರಿ, ದುಡುಕಬೇಡಿ" ಎಂದವರು ಕಣ್ಣರೆಪ್ಪೆಗಳನ್ನು ಜೋಡಿಸಿಕೊಂಡರು. ಅರೆಕ್ಷಣದ ನಂತರ ತೆರೆದಾಗ ಕಂಗಳಲ್ಲಿ ಅಸೀಮ ಕಾಂತಿ! ಅದೇನು ಅನುಸಂಧಾನವೋ, ಸಂಕಲ್ಪವೋ…. ಪ್ರಾಯಶಃಅವರು ಭಗವಂತನೊಂದಿಗೆ ‘ಮೌನ-ಸಂವಹನ’ಕ್ಕೆ ಇಳಿದಿದ್ದಿರಬೇಕು! ನಂತರ, ಹಸನ್ಮುಖಿ ಸ್ವಾಮೀಜಿ ಮಧುರದನಿಯಲ್ಲಿ, “ಈಗಾಗಲೇ ರಾತ್ರಿಯಾಯಿತು. ನೀವು ನಮ್ಮೊಂದಿಗೆ ಬಿಡಾರದಲ್ಲೇ ಉಳಿದಿದ್ದು, ನಾಳಿನ ಪೂಜೆ-ಪ್ರಸಾದ ಸ್ವೀಕರಿಸಿ ಊರಿಗೆ ತೆರಳುವಿರಂತೆ" ಎಂದರು. ಒಪ್ಪಿಗೆ ಎಂಬಂತೆ ವಯೋವೃದ್ಧರು ತಲೆಯಾಡಿಸಿದರು.
ಮರುದಿನ ಬೆಳಗ್ಗೆಯ ಪೂಜೆ ಮುಗಿಸಿದ ಸ್ವಾಮೀಜಿ ವಾಡಿಕೆಯಂತೆ ತೀರ್ಥ ವಿತರಣೆಗೆ ಸಜ್ಜಾಗಿ ಪೀಠದಲ್ಲಿ ಕೂತು,ಅರೆಕ್ಷಣ ರೆಪ್ಪೆಮುಚ್ಚಿ ನೀಳವಾಗಿ ಉಸಿರೆಳೆದುಕೊಂಡರು. ಪ್ರಾಯಶಃ ಅದು ಭಗವಂತನೊಂದಿಗಿನ ಮತ್ತೊಂದು ಕಂತಿನ ‘ಮೌನ-ಸಂವಹನ’ ಇದ್ದಿರಬೇಕು. ಅಂದು ಹಬ್ಬವಾಗಿದ್ದರಿಂದ ಸ್ಥಳೀಕರು ಮಾತ್ರವಲ್ಲದೆ ರಾಜ್ಯದೆಲ್ಲೆಡೆಯ ಭಕ್ತರೂ ಜಮಾಯಿಸಿದ್ದರು. ಅಂದರೆ ವಾಡಿಕೆಗಿಂತ 6-7 ಪಟ್ಟು ಹೆಚ್ಚು ಜನರು ಮಠದ ಮಡಿಲಲ್ಲಿ! ತೀರ್ಥದ ಬಟ್ಟಲ ಎದುರು ಇಟ್ಟುಕೊಳ್ಳುತ್ತಿದ್ದ ಮಾಮೂಲಿನ ತಟ್ಟೆಯ ಬದಲಿಗೆ, ಬೋಗುಣಿಯಂಥ ದೊಡ್ಡ ಬೆಳ್ಳಿಯ ಹರಿವಾಣ ವನ್ನಿಡಲು (ಅದು ಮಾಮೂಲಿ ತಟ್ಟೆಗಿಂತ ಸಾಕಷ್ಟು ಆಳದ್ದೂ, ಹೆಚ್ಚು ಗಾತ್ರದ್ದೂ ಆಗಿತ್ತು!) ಶಿಷ್ಯರಿಗೆ ಸೂಚಿಸಿದರು. ಶಿಷ್ಯರಿಗೆ ಮೊದಮೊದಲು ಅರ್ಥವಾಗದಿದ್ದರೂ, ಗುರುವಾಜ್ಞೆಯಂತೆ ಅವರೆದುರು ಹರಿವಾಣವನ್ನಿಟ್ಟರು. ನಂತರ, ತೀರ್ಥಕ್ಕೆ ಬರುವಂತೆ ಭಕ್ತರಿಗೆ ಸ್ವಾಮೀಜಿಯ ಕಣ್ಣ ಇಶಾರೆ. ಭಕ್ತರಾ ಅವರು…? ಭಕ್ತರ ರೂಪದಲ್ಲಿದ್ದ ಮಹಾಸಾಗರ ವದು! ಅದೇನೋ ಗೊತ್ತಿಲ್ಲ, ಒಬ್ಬೊಬ್ಬರೂ ಹರಿವಾಣಕ್ಕೆ ನಾಣ್ಯದ ಬದಲು ದೊಡ್ಡ ನೋಟುಗಳನ್ನೇ ಹಾಕಿ ಸ್ವಾಮೀಜಿಯಿಂದ ತೀರ್ಥ ಸ್ವೀಕರಿಸಿ ಕೃತಾರ್ಥರಾದರು. ಉಗಮಸ್ಥಾನದಿಂದ ಹೊರಟ ನದಿಗೆ ಒಂದೊಂದೇ ಉಪನದಿ ಸೇರುತ್ತಾ ಮಹಾ ನದಿಯೇ ಆಗಿ ಸಾಗರವನ್ನು ಸೇರುವ ಭವ್ಯನೋಟದಂತೆ, ತೀರ್ಥಾಕಾಂಕ್ಷಿಗಳ ಸಾಲಿಗೆ ಹೊಸಬರ ಸೇರ್ಪಡೆಯಾಗುತ್ತಲೇ ಹೋಯಿತು. ಅವರೆಡೆಗೆ ದೃಷ್ಟಿ ಹೊರಳಿಸಿ ಹೊರಳಿಸಿ ಆ ವಯೋವೃದ್ಧ ಭಕ್ತರ ಕತ್ತು ನೋಯತೊಡಗಿತೇ ವಿನಾ, ಅಂಥ ಒಬ್ಬೊಬ್ಬರಿಗೂ ತೀರ್ಥ ವಿತರಿಸುತ್ತಿದ್ದ ಸ್ವಾಮೀಜಿಯ ಕೈ ನೋಯಲಿಲ್ಲ! ಈ ‘ತೀರ್ಥ-ತಪಸ್ಸು’ ಸಾಕಷ್ಟು ಕಾಲದವರೆಗೆ ನಡೆಯಿತು! ಕೊನೆಯಲ್ಲಿ ಉಳಿದ ವಯೋವೃದ್ಧ ಭಕ್ತರಿಗೆ ತೀರ್ಥ ನೀಡಲು ಸ್ವಾಮೀಜಿ ಮುಂದಾದರು, ಹರಿವಾಣಕ್ಕೆ ದಕ್ಷಿಣೆ ಹಾಕಲು ವಯೋವೃದ್ಧರು ತಡಕಾಡಿದರು… ಅದು ಎಲ್ಲಿಂದ ಬರಬೇಕು? ಇದ್ದ ೫ ರುಪಾಯಿಯನ್ನೂ ಹಿಂದಿನ ದಿನವೇ ಸ್ವಾಮೀಜಿಗೆ ಅವರು ಸಮರ್ಪಿಸಿಬಿಟ್ಟಿದ್ದರು! ಅವರ ಕಂಗಾಲು ಕಂಡ ಸ್ವಾಮೀಜಿ, “ಪರವಾಗಿಲ್ಲ… ಕೈಯೊಡ್ಡಿ" ಎಂದು ಹೇಳಿ ತೀರ್ಥವನ್ನು ಹಾಕಿದರು. ಅದನ್ನು ಸ್ವೀಕರಿಸಿ ಸ್ವಾಮೀಜಿಯ ಪಾದಕ್ಕೆ ಹಣೆಯೊತ್ತಿದ ವಯೋವೃದ್ಧರು ಕೆಲಕ್ಷಣದ ನಂತರ ಕತ್ತೆತ್ತಿ ನೋಡಿದರೆ, ಸ್ವಾಮೀಜಿ ಪುಟ್ಟಮಗುವಿನಂತೆ ನಗುತ್ತಿದ್ದಾರೆ… ಅವರ ಕೈಯಲ್ಲಿ ಗಜಗಾತ್ರದ ಬೆಳ್ಳಿ ಹರಿವಾಣ, ಅದರಿಂದ ಉಕ್ಕಿ ಹರಿಯುತ್ತಿರುವ ನೋಟುಗಳು…
“ನೀವು ಹೊದ್ದಿರುವ ಶಲ್ಯವನ್ನು ಅಗಲವಾಗಿ ಬಿಡಿಸಿಟ್ಟುಕೊಳ್ಳಿ" ಎಂದರು ಸ್ವಾಮೀಜಿ. ಅಯೋಮಯ ಸ್ಥಿತಿಯಿಂದ ಇನ್ನೂ ಹೊರಬಂದಿರದ ವಯೋವೃದ್ಧರು, ಹಾವಾಡಿಗನ ಪುಂಗಿಯಾಟದ ವರಸೆಗೆ ತಲೆದೂಗುವ ಹಾವಿನಂತೆ ಹಾಗೇ ಮಾಡಿದರು. ಹರಿವಾಣದಲ್ಲಿದ್ದ ಅಷ್ಟೂ ಹಣವನ್ನು ಆ ಶಲ್ಯದೊಳಕ್ಕೆ ಸುರಿದು “ಲೋಕಾ ಸಮಸ್ತಾ ಸುಖೀನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು" ಎಂದು ಉದ್ಗರಿಸಿದ ಸ್ವಾಮೀಜಿ, “ಇನ್ನು ಹೊರಡಿ,ಮದುವೆ ಹತ್ತಿರ ಬರ್ತಾ ಇದೆ; ಸಿದ್ಧತೆ ಮಾಡಿಕೊಳ್ಳಿ" ಎಂದು ಹೇಳಿದ್ದರ ಜತೆಗೆ, “ಮದುವೆ ಸಮಾರಂಭದಲ್ಲಿಅರಿಸಿನ-ಕುಂಕುಮ ಸೇರಿದಂತೆ ಮಂಗಳದ್ರವ್ಯಗಳನ್ನು ಇರಿಸಿಕೊಳ್ಳಲು ಇದನ್ನೇ ಬಳಸಿಕೊಳ್ಳಿ" ಎನ್ನುತ್ತಾ ಆ ಬೆಳ್ಳಿಯಹರಿವಾಣವನ್ನೂ ವಯೋವೃದ್ಧ ಭಕ್ತರಿಗೆ ನೀಡಿಬಿಟ್ಟರು. ‘ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೋ’ ಎಂಬ ದಾಸರ ಪದವನ್ನು ಸಾಕಾರಗೊಳಿಸಿಬಿಟ್ಟರು! ಇಷ್ಟೂ ಘಟನಾವಳಿಯನ್ನು ಮಠದ ಆಡಳಿತಾ ಧಿಕಾರಿ ಕಣ್ಣಗಲಿಸಿಕೊಂಡು ನೋಡುತ್ತಿದ್ದರು, ಆದರೆ ಅವರೇನೂ ಮಾತಾಡುವಂತಿರಲಿಲ್ಲ. ಏಕೆಂದರೆ, ಅದು ಭಕ್ತರು ಸ್ವಾಮೀಜಿಗೆ ಪಾದಪೂಜೆಯ ಬಾಬ್ತು ನೀಡಿದ ದುಡ್ಡಾಗಿರಲಿಲ್ಲ, ತೀರ್ಥದ ಹರಿವಾಣಕ್ಕೆ ಧಾರೆಯಾಗಿ ಇಳಿದ ಭಕ್ತರ ‘ಹೃದಯಸಂಪತ್ತು’ ಆಗಿತ್ತು. ಮಠದ ನಿಯಮದಂತೆ ಅದು ಸ್ವಾಮೀಜಿಗಳ ಸ್ವತ್ತಾಗಿದ್ದು, ಅದನ್ನು ತಮ್ಮಿಷ್ಟದ ‘ಲೋಕಕಲ್ಯಾಣ’ದ ಬಾಬತ್ತಿಗೆ ಬಳಸುವ ವಿವೇಚನಾಧಿಕಾರ ಸ್ವಾಮೀಜಿಗಿತ್ತು! ಅಂತೆಯೇ ಅವರು ನಡೆದುಕೊಂಡಿದ್ದರು….
***
ಇಂಥ ದೊಡ್ಡತನ ಮೆರೆದ ಮಹಾನ್ ಅಧ್ಯಾತ್ಮ ಸಾಧಕರ, ಅವರಿದ್ದ ದೈವಸನ್ನಿಧಿಯ ಮತ್ತು ಮಠದ ಹೆಸರನ್ನು ಮೇಲಿನ ‘ಅಕ್ಷರ ರಂಗೋಲಿ’ಯಲ್ಲಿ ಬೇಕೆಂದೇ ಉಲ್ಲೇಖಿಸಿಲ್ಲ; ಕಾರಣ, ಅದು ಇಲ್ಲಿನ ಉದ್ದೇಶವೂ ಅಲ್ಲ. ಗುರುವಿನಮಹಿಮೆಯನ್ನು ಮನವರಿಕೆ ಮಾಡಿಕೊಡುವುದಷ್ಟೇ ಇಲ್ಲಿನ ನಮ್ರ ಬಯಕೆ. “ನಿಮ್ಮ ಮುಂದೆ ದೇವರು ಮತ್ತು ಗುರುಇಬ್ಬರೂ ಕಾಣಿಸಿಕೊಂಡರೆ ಮೊದಲು ಯಾರಿಗೆ ನಮಿಸುತ್ತೀರಿ?" ಎಂದು ಅನುಭಾವಿಯೊಬ್ಬರನ್ನು ಪ್ರಶ್ನಿಸಿದ್ದಕ್ಕೆ,“ಗುರುವಿಗೇ ಮೊದಲು ನಮಿಸುವೆ; ಏಕೆಂದರೆ, ದೇವರೆಡೆಗೆ ಸಾಗುವ ದಾರಿಯನ್ನು ತೋರಿದ್ದು ಅವನೇ ಅಲ್ಲವೇ?"ಎಂಬ ಉತ್ತರ ಬಂತಂತೆ! ಸದ್ಗುರುವು ದೇವರಿಗಿಂತಲೂ ಮಿಗಿಲಾದವನು. ‘ಗುರುವೇ ನಿಮ್ಮಾಜ್ಞೆಯನು ಮೀರದೆ ನಡೆವವನು..’ ಎಂಬ ಗೀತೆಯಲ್ಲಿ, “ಗರುಡನ ಮಂತ್ರವನು ಕಲಿತಿರುವಾತಗೆ, ಉರಗ ಕಚ್ಚಿದರೆ ವಿಷವೇರುವುದೇ..?" ಎಂಬ ಸಾಲು ಬರುತ್ತದೆ. ನಿಜಾರ್ಥದ ಗುರುಗಳು ಮತ್ತು ಅವಧೂತರು ಸರ್ವಶಕ್ತರು, ಅವರನ್ನು ಲೌಕಿಕದ ಯಾವ ವ್ಯವಸ್ಥೆಯೂ ಕಟ್ಟಿಹಾಕಲಾಗದು. ಹಣವೂ ಸೇರಿದಂತೆ ಅಷ್ಟಸಿದ್ಧಿಗಳೂ ಅವರಿಗೆ ತೃಣಕ್ಕೆ ಸಮಾನ; ಆದರೆ ನಂಬಿದ ಆರ್ತರಿಗೆ ಬೇಕೆಂದಾಗ ಅವನ್ನು ಅವರು ಮೊಗೆಮೊಗೆದು ತೆಗೆದು ಕೊಡಬಲ್ಲರು…
ಇದನ್ನೂ ಓದಿ: Yagati Raghu Nadig Column: ಅಕ್ಷರಗಳು ಆಚೀಚೆ ಆದಾಗಿನ ಎಡವಟ್ಟುಗಳು