ಹೆತ್ತವರನ್ನು ಹೊರಗಟ್ಟಿ ಗಂಗೆಯಲ್ಲಿ ಮಿಂದರೇನು ಫಲ ?
ಬದಲಾದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾಲ ಘಟ್ಟದಲ್ಲಿ ಅತ್ಯಂತ ಹೆಚ್ಚು ಶಿಥಿಲ ವಾಗಿರುವುದು ನಮ್ಮ ಕುಟುಂಬ ವ್ಯವಸ್ಥೆ. ಈ ಕುಟುಂಬ ವ್ಯವಸ್ಥೆಯನ್ನು ಪರಸ್ಪರ ಪ್ರೀತಿ, ವಿಶ್ವಾಸ, ಕಾಳಜಿ, ಗೌರವಗಳಿಂದಷ್ಟೇ ಬಲಪಡಿಸಲು ಸಾಧ್ಯ. ಸಹಾಯವಾಣಿ, ದೂರಿನ ವ್ಯವಸ್ಥೆ, ಕಾನೂನುಗಳು ಹಿರಿಯ ನಾಗರಿಕರಿಗೆ ತಾತ್ಕಾಲಿಕ ಉರುಗೋಲುಗಳಾಗಬಹುದೇ ವಿನಾ ಮನಸ್ಸಿಗೆ ನೆಮ್ಮದಿ, ಸಾಂತ್ವನ ನೀಡಲಾರದು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರೀತಿ, ವಿಶ್ವಾಸದ ಒರತೆ ತುಂಬಿ ಮಾನವೀಯ ಮೌಲ್ಯಗಳು ಬತ್ತಿ ಹೋಗದಂತೆ ನೋಡಿಕೊಳ್ಳಬೇಕಿದೆ. ಹೆತ್ತವರ ಕೈಯಲ್ಲಿ ಆಸ್ತಿ ಬರೆಸಿಕೊಂಡು, ಹೊರ ತಳ್ಳುವ ಮಕ್ಕಳ ಸಂತಾನ ಹೆಚ್ಚಾಗದಿರಲೆಂದು ಪ್ರಾರ್ಥಿಸಬೇಕಿದೆ.