ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

ಸರಕಾರದ ಪ್ರಕಾರ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ-2025 ಮತ್ತು ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ-2025 ಸಹಕಾರಿ ವಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆ ಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ. ಈ ವಿಚಾರದಲ್ಲಿ ಯಾರಿಗೂ ತಕರಾರೂ ಇಲ್ಲ. ಆದರೆ ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎನ್ನುವ ವಿಚಾರದಲ್ಲಿ ಸಹಕಾರಿ ವಲಯದಲ್ಲಿ ಆತಂಕವಿದೆ.

‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

-

ಲೋಕಮತ

ಸಹಕಾರ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಗಳು ಕಳೆದ ಕೆಲವು ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇವೆ. ಅನೇಕ ಬಾರಿ ನ್ಯಾಯಾಲಯದ ಮಧ್ಯಪ್ರವೇಶದ ಕಾರಣದಿಂದ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಆದರೂ ಸರಕಾರಗಳು ತಮ್ಮ ಪ್ರಯತ್ನ ಕೈ ಬಿಟ್ಟಿಲ್ಲ. ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರಕಾರವು ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ರಚಿಸಿದೆ. ಸಹಕಾರ ವಿಷಯ ರಾಜ್ಯ ಪಟ್ಟಿಯಲ್ಲಿದ್ದರೂ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಲು ಹೊರಟಿದೆ ಎನ್ನುವ ಆರೋಪ ರಾಜ್ಯ ಸರಕಾರಗಳದ್ದಾಗಿತ್ತು.

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ಸಹಕಾರ ಸಂಘಗಳ ಕಾಯಿದೆ ಮೂರರಿಂದ ನಾಲ್ಕು ಬಾರಿ ತಿದ್ದುಪಡಿ ಕಂಡಿವೆ. ಆದರೆ ನ್ಯಾಯಾಲಯ ಇಲ್ಲವೇ ರಾಜ್ಯಪಾಲರ ಮಧ್ಯಪ್ರವೇಶದ ಕಾರಣ ಇದಾವುದೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಛಲ ಬಿಡದ ರಾಜ್ಯ ಸರಕಾರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ-1959 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಕಾಯಿದೆ-1997ಕ್ಕೆ ಮತ್ತೊಮ್ಮೆ ತಿದ್ದುಪಡಿ ಮಾಡಿ ಕಾನೂನು ರೂಪಿಸಿದೆ. ಕಳೆದ ವರ್ಷ ( 2024) ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿದ್ದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಈ ಬಾರಿ ಒಂದೇ ತಿಂಗಳಲ್ಲಿ ಅಂಕಿತ ಹಾಕಿದ್ದಾರೆ. ಇವೆರಡೂ ಈಗ ಕಾನೂನು ರೂಪ ಪಡೆದಿವೆ.

ಸಹಕಾರ ಸಂಘಗಳ ಸ್ಥಾಪನೆ ನಾಗರಿಕರ ಮೂಲಭೂತ ಹಕ್ಕಿನಲ್ಲಿ ಸ್ಥಾನ ಪಡೆದಿದೆ. ಇವೆಲ್ಲವನ್ನೂ ಸರಕಾರ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವಂತಿಲ್ಲ. ಹಾಗೆಂದು ಸಹಕಾರಿ ಸಂಘಗಳ ನಿಯಮಗಳನ್ನು ಆಗಾಗ ಪರಿಷ್ಕರಿಸಿ ಸದಸ್ಯರಿಗೆ ಅನುಕೂಲ ಮಾಡಿ ಕೊಡುವುದು ಸರಕಾರದ ಕರ್ತವ್ಯ. ಆದರೆ ಯಾವುದೇ ಪಕ್ಷ ಸಹಕಾರ ಸಂಘಗಳಲ್ಲಿ ತಿದ್ದುಪಡಿ ತಂದರೂ ಸದಸ್ಯರ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿ ಇಲ್ಲವೇ ಸರಕಾರದ ನಿಯಂತ್ರಣ ಸಾಧಿಸುವ ಉದ್ದೇಶವೇ ಎದ್ದು ಕಾಣುತ್ತದೆ.

ಇದನ್ನೂ ಓದಿ: Lokesh Kaayarga Column: ಏನೇ ಇರಲಿ, ಬರುವುದೆಲ್ಲವನ್ನೂ ಎದುರಿಸಲೇಬೇಕು

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ಸರಕಾರ ಚುನಾವಣೆಗೆ ಮುನ್ನ ಅಂಗೀಕರಿಸಿದ ತಿದ್ದುಪಡಿ ವಿಧೇಯಕವು ಸಹಕಾರಿ ಸಂಘಗಳ ನೌಕರರ ನೇಮಕಾತಿಯನ್ನು ತನ್ನ ಹತೋಟಿಗೆ ಪಡೆಯುವ ಉದ್ದೇಶ ಹೊಂದಿತ್ತು. 2023ರ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ಕ್ಕೆ ಸೇರ್ಪಡೆ ಮಾಡಲಾದ ಸೆಕ್ಷನ್ 128ಎ ಪ್ರಕಾರ ಸಹಕಾರಿ ಸಂಘಗಳಲ್ಲಿನ ಉದ್ಯೋಗಿಗಳ ನೇಮಕ , ವರ್ಗಾವಣೆ ಮತ್ತು ಶಿಸ್ತು ಕ್ರಮಗಳನ್ನು ನಿರ್ವಹಿಸಲು ಸಹಕಾರ ಸಂಘಗಳ ನಿಬಂಧಕರಿಗೆ ಅಧಿಕಾರ ನೀಡಲಾಗಿತ್ತು. ಕಾಯಿದೆ ಜಾರಿಗೆ ಬರುತ್ತಿದ್ದರೆ ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಿಗೆ ತಮ್ಮದೇ ಸಂಘದ ನೌಕರರ ಮೇಲೆ ಯಾವ ಹತೋಟಿಯೂ ಇರುತ್ತಿರಲಿಲ್ಲ. ಆದರೆ ಹೈಕೋರ್ಟ್ ಸಕಾಲದಲ್ಲಿ ಮಧ್ಯಪ್ರವೇಶ ಮಾಡಿ ಈ ಕಾಯಿದೆಯನ್ನು ಅನೂರ್ಜಿತಗೊಳಿಸಿತ್ತು. ಇದರ ವಿರುದ್ಧ ರಾಜ್ಯಸರಕಾರ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಭಾಗೀಯ ಪೀಠದ ಮುಂದೆ ವಿಚಾರಣೆಯಲ್ಲಿರು ವಾಗಲೇ ಹಾಲಿ ಸರಕಾರ ಮತ್ತೊಮ್ಮೆ ಕಾಯಿದೆಗೆ ತಿದ್ದುಪಡಿ ಮಾಡಿದೆ.

ಕಳೆದ ತಿಂಗಳು ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಎರಡೂ ಸದನಗಳಲ್ಲಿ ಈ ತಿದ್ದುಪಡಿ ಕಾಯಿದೆಯ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಮೇಲ್ಮನೆಯಲ್ಲಿ ವಿಧೇಯಕ ಒಂದು ಬಾರಿ ಬಿದ್ದು ಹೋದರೂ, ಎರಡನೇ ಬಾರಿ ಮಂಡಿಸುವ ಮೂಲಕ ಸದನದ ಅನುಮೋದನೆ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ. ಕಳೆದ ವರ್ಷ ಇಂಥದ್ದೇ ವಿಧೇಯಕವನ್ನು ರಾಜ್ಯಪಾಲರು ತಡೆ ಹಿಡಿದಿದ್ದರು ಎನ್ನುವುದು ಗಮನಾರ್ಹ.

2024ರ ತಿದ್ದುಪಡಿ ಕಾಯಿದೆ ಪ್ರಕಾರ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸಿ ಸಹಕಾರ ಸೊಸೈಟಿಗಳ ರಿಜಿಸ್ಟ್ರಾರ್ ನೇತೃತ್ವದಲ್ಲಿ ಚುನಾವಣೆ ನಡೆಸಲು ಸರಕಾರ ಉದ್ದೇಶಿಸಿತ್ತು. ಅಲ್ಲದೇ ಸಹಕಾರ ಸಂಘಗಳಲ್ಲಿ ಪ್ರಾತಿನಿಧ್ಯವಿಲ್ಲದ ಸಮುದಾಯಗಳಿಗೆ ಅವಕಾಶ ಕಲ್ಪಿಸಲು ನಾಮ ನಿರ್ದೇಶನ ಸಂಖ್ಯೆ ಹೆಚ್ಚಿಸಲಾಗಿತ್ತು. ಜತೆಗೆ ನಾಮನಿರ್ದೇಶಿತರಿಗೆ ಮತದಾನದ ಅವಕಾಶವನ್ನೂ ಕಲ್ಪಿಸಲಾಗಿತ್ತು.

ನಾಮನಿರ್ದೇಶಿತರಿಗೆ ಮತದಾನದ ಅವಕಾಶ ಹಿಂಬಾಗಿಲಿನಿಂದ ಅಧಿಕಾರ ಪಡೆಯುವ ತಂತ್ರ ಎನ್ನುವುದು ಸ್ಪಷ್ಟವಿತ್ತು. ರಾಜ್ಯಪಾಲರ ಅನುಮೋದನೆ ದೊರೆಯದ ಕಾರಣ ವಿಧೇಯಕವು ಜಾರಿಗೆ ಬಂದಿರಲಿಲ್ಲ. ಈ ಬಾರಿ ಇನ್ನಷ್ಟು ತಿದ್ದುಪಡಿಗಳೊಂದಿಗೆ ಬಂದ ವಿಧೇಯಕವು ಈಗ ಕಾಯಿದೆ ಸ್ವರೂಪ ಪಡೆದು ಜಾರಿಗೆ ಬಂದಿದೆ. ನಾಮನಿರ್ದೇಶಿತರಿಗೆ ಮತದಾನದ ಅವಕಾಶ ನೀಡುವ ಪ್ರಸ್ತಾಪ ವನ್ನು ಸರಕಾರ ಕೈ ಬಿಟ್ಟಿದೆ. ಆದರೆ ಸಹಕಾರ ವ್ಯವಸ್ಥೆಯಲ್ಲಿ ಕೋಲಾಹಲ ಸೃಷ್ಟಿಸುವ ಹಲವು ತಿದ್ದುಪಡಿ ಅಂಶಗಳು ಹೊಸ ಕಾನೂನಿನಲ್ಲಿವೆ.

ಸರಕಾರದ ಪ್ರಕಾರ ಸಹಕಾರ ಸಂಘಗಳ (ತಿದ್ದುಪಡಿ) ಅಧಿನಿಯಮ-2025 ಮತ್ತು ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ-2025 ಸಹಕಾರಿ ವಲಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿವೆ. ಈ ವಿಚಾರದಲ್ಲಿ ಯಾರಿಗೂ ತಕರಾರೂ ಇಲ್ಲ. ಆದರೆ ಈ ನಿಯಮಗಳನ್ನು ಹೇಗೆ ಜಾರಿಗೆ ತರಲಾಗುತ್ತದೆ ಎನ್ನುವ ವಿಚಾರದಲ್ಲಿ ಸಹಕಾರಿ ವಲಯದಲ್ಲಿ ಆತಂಕವಿದೆ.

ಹೊಸ ಕಾಯಿದೆಯು ಸಹಕಾರಿ ಸಂಘಗಳ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತಂದಿದೆ. ನಿರ್ದೇಶಕರ ಚುನಾವಣೆಯಲ್ಲಿ ಈಗಾಗಲೇ ಮೀಸಲು ಅವಕಾಶವಿತ್ತು. ಇನ್ನು ಮುಂದೆ ಆಡಳಿತ ಮಂಡಳಿಯಲ್ಲೂ ಮೀಸಲು ಸೌಲಭ್ಯ ದೊರೆಯಲಿದೆ.

ಗ್ರಾಮಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮತ್ತು ಪೌರಾ ಡಳಿತ ಸಂಸ್ಥೆಗಳಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಇದರ ಉಪಯೋಗ/ದುರುಪಯೋಗ ಎರಡನ್ನೂ ನಾವು ಕಂಡಿದ್ದೇವೆ. ಆಳುವ ಸರಕಾರಗಳು ಬಹುಮತ ಇಲ್ಲದ ಪಂಚಾಯಿತಿಗಳಲ್ಲಿ, ಬೆಂಬಲಿಗ ಸದಸ್ಯರ ಜಾತಿಗನುಗುಣವಾಗಿ ಮೀಸಲು ವ್ಯವಸ್ಥೆ ಕಲ್ಪಿಸುವುದು ಹೊಸದೇನಲ್ಲ. ಮುಂದೆ ಸಹಕಾರ ಸಂಘಗಳಲ್ಲೂ ಈ ಪದ್ಧತಿ ಜಾರಿಗೆ ಬರಬಹುದೆಂಬ ಆತಂಕ ಇದ್ದೇ ಇದೆ.

ತಿದ್ದುಪಡಿ ಕಾಯಿದೆಯ ಪ್ರಮುಖ ಅಂಶ ಆಸ್ತಿ ಘೋಷಣೆಗೆ ಸಂಬಂಧಿಸಿದ್ದು. ಇನ್ನು ಮುಂದೆ ಸಹಕಾರಿ ಸಂಘಗಳ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಪ್ರತಿ ವರ್ಷ ತಮ್ಮ ಮತ್ತು ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸುವುದು ಕಡ್ಡಾಯ. ಈ ನಿಯಮವು ಸಹಕಾರಿ ವಲಯದಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎನ್ನುವುದು ಸರಕಾರದ ವಿವರಣೆ. ನೂರಾರು ಸಹಕಾರ ಸಂಘಗಳಲ್ಲಿ ಹಣಕಾಸು ದುರುಪಯೋಗ ನಡೆದು ಸದಸ್ಯರು ತಮ್ಮ ಠೇವಣಿ ಹಣವನ್ನೂ ಕಳೆದುಕೊಂಡ ಉದಾಹರಣೆಗಳಿವೆ. ಸದಸ್ಯರ ಆಸ್ತಿ ಘೋಷಣೆಯಿಂದ ಈ ದುರುಪಯೋಗ ತಪ್ಪಲಿದೆ ಎನ್ನುವುದಾದರೆ ವಿಧಾನಸಭೆ ಮತ್ತು ಸಂಸತ್ ಮಟ್ಟದಲ್ಲಿ ಭ್ರಷ್ಟಾಚಾರ ಕಡಿಮೆಯಾಗಬೇಕಿತ್ತು.

ಗ್ರಾಮೀಣ ಪತ್ತಿನ ಸಹಕಾರಿ ಸಂಘಗಳು ಸೇರಿದಂತೆ ರಾಜ್ಯದಲ್ಲಿ 45 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳಿವೆ. ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾದವರೆಲ್ಲರೂ ಶ್ರೀಮಂತರಾಗಿರುವುದಿಲ್ಲ. ಗ್ರಾಮೀಣ ಭಾಗಗಳಲ್ಲಿ ಅನ್ಯರಿಂದ ಸಾಲ ಪಡೆದು ನಿರ್ದೇಶಕರ ಸಂಘದ ಚುನಾವಣೆಗಳಲ್ಲಿ ಭಾಗವಹಿಸುವವರಿದ್ದಾರೆ. ಬಿಪಿಎಲ್ ಕಾರ್ಡ್‌ದಾರನಾಗಿದ್ದರೂ ಆಸ್ತಿ ಘೋಷಣೆ ಮಾಡಬೇಕಿದ್ದರೆ ಕಾನೂನು ತಜ್ಞರು ಮತ್ತು ಚಾರ್ಟೆಡ್ ಅಕೌಂಟೆಂಟ್‌ಗಳ ನೆರವು ಪಡೆಯಲೇಬೇಕು. ಇವರಿಗೆ ದುಡ್ಡು ನೀಡಿ ಆಸ್ತಿ ಘೋಷಿಸುವ ಚೈತನ್ಯ ಗ್ರಾಮೀಣ ಭಾಗದ ಸಹಕಾರಿಗಳಿಗೆ ಇರಬಹುದೇ ಎನ್ನುವುದು ಕೇಳಲೇಬೇಕಾದ ಪ್ರಶ್ನೆ.

ಹೊಸ ಕಾಯಿದೆಯ ಪ್ರಕಾರ ಸಹಕಾರ ಸಂಘಗಳಲ್ಲಿ ಕನಿಷ್ಠ 13 ನಿರ್ದೇಶಕರು ಇರಬೇಕು. ಅಂದರೆ ಆರು ಲಕ್ಷಕ್ಕೂ ಹೆಚ್ಚು ನಿರ್ದೇಶಕರು ಪ್ರತಿ ವರ್ಷ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಇಷ್ಟು ದೊಡ್ಡ ಪ್ರಮಾಣದ ಮಾಹಿತಿ ನಿರ್ವಹಿಸಲು ಲೋಕಾಯುಕ್ತ ಅಥವಾ ಸಹಕಾರ ಇಲಾಖೆಯಲ್ಲಿ ಸಿಬ್ಬಂದಿಗಳಿದ್ದಾರೆಯೇ? ಸದಸ್ಯರು ಕೊಟ್ಟ ಮಾಹಿತಿಯನ್ನು ಪರಿಶೀಲಿಸದೆ ಹೋದರೆ ಈ ಕಸರತ್ತು ವ್ಯರ್ಥ. ಇನ್ನು ಮುಂದೆ ಸಹಕಾರಿಗಳ ಅಫಿಡವಿಟ್‌ನಲ್ಲಿ ಲೋಪ ಹುಡುಕಿ ಕೋರ್ಟ್ ಮೆಟ್ಟಿಲೇರುವವರ ಸಂಖ್ಯೆಯೂ ಏರಬಹುದು.

ಕಠಿಣ ನಿಯಮ ಮತ್ತು ಕಾನೂನಿನ ತೂಗುಗತ್ತಿಯ ಭಯದಿಂದ, ಅರ್ಹ ಮತ್ತು ಪ್ರಾಮಾಣಿಕ ವ್ಯಕ್ತಿಗಳು ಸಹಕಾರ ಸಂಘಗಳ ನಿರ್ದೇಶಕರಾಗಲು ಹಿಂದೇಟು ಹಾಕಬಹುದು. ಗೌರವಧನವನ್ನೂ ಪಡೆಯದೆ ‘ನಮ್ಮ ಸೊಸೈಟಿ’ ಎಂಬ ಅಭಿಮಾನದಲ್ಲಿ ಸೇವೆ ಸಲ್ಲಿಸುವ ನಿರ್ದೇಶಕರಿಗೆ ಇದು ಅನಗತ್ಯ ಖರ್ಚಿನ ದಾರಿಯಾಗಬಹುದು. ವಿಧಾನಸಭೆಯಲ್ಲಿ ಚರ್ಚೆ ನಡೆದಾಗ ಈ ನಿಯಮವನ್ನು ಸಡಿಲಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಅಧಿಸೂಚನೆಯಲ್ಲಿ ಪ್ರತೀ ವರ್ಷ ಪ್ರಮಾಣ ಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸ ಲಾಗಿದೆ.

ಈ ಹಿಂದಿನ ತಿದ್ದುಪಡಿ ಕಾಯಿದೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕನ್ನು ನೀಡಲಾಗಿತ್ತು. ಆದರೆ, ರಾಜ್ಯಪಾಲರ ಸಲಹೆ ಮೇರೆಗೆ ಈ ತಿದ್ದುಪಡಿಯನ್ನು ತೆಗೆದುಹಾಕಲಾಗಿದೆ. ಇದರ ಪ್ರಕಾರ, ನಾಮನಿರ್ದೇಶಿತ ಸದಸ್ಯರು ಕೇವಲ ಮಂಡಳಿಯ ಭಾಗವಾಗಿರುತ್ತಾರೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಇಲ್ಲೂ ಒಂದು ಕಾನೂನಿನ ಸುಳಿ ಇದೆ. ‘ಅಗತ್ಯ ಎಂದು ಕಂಡುಬಂದರೆ’ ಸರಕಾರ ಸಂಘದ ಸದಸ್ಯರ ಪೈಕಿ ಮೂವರನ್ನು ಆಡಳಿತ ಮಂಡಳಿಗೆ ನಾಮನಿರ್ದೇಶನ ಮಾಡಬಹುದು. ಚುನಾವಣೆ ಮೂಲಕ ಆಯ್ಕೆಯಾಗುವ ಸಹಕಾರಿ ಗಳಲ್ಲಿ ಪರಸ್ಪರ ಜಿದ್ದು, ಪೈಪೋಟಿ ಸಾಮಾನ್ಯ. ಆಡಳಿತ ಮಂಡಳಿಗೆ ಕಿರಿಕಿರಿ ಮಾಡಲೇಬೇಕೆಂದು ಬಯಸಿದರೆ ಸರಕಾರ ಇಂಥವರನ್ನೇ ಹುಡುಕಿ ನಾಮ ನಿರ್ದೇಶನ ಮಾಡಬಹುದು !

ಸದಸ್ಯರು ನಿಯಮಿತವಾಗಿ ಸಂಘದ ಸಾಮಾನ್ಯ ಸಭೆಗಳಿಗೆ ಹಾಜರಾಗುವುದು ಮತ್ತು ಸಂಘ ದೊಂದಿಗೆ ಆರ್ಥಿಕ ವ್ಯವಹಾರಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ಐದು ವಾರ್ಷಿಕ ಮಹಾಸಭೆಗಳಲ್ಲಿ ಕನಿಷ್ಠ ಎರಡಕ್ಕೆ ಹಾಜರಾಗದ ಸದಸ್ಯರನ್ನು ಅನರ್ಹ ಗೊಳಿಸಲು ಅವಕಾಶ ನೀಡಲಾಗಿದೆ. ಆದರೆ ಸಾವಿರಾರು ಸದಸ್ಯರನ್ನು ಹೊಂದಿರುವ ಸಹಕಾರಿ ಸಂಘಗಳಲ್ಲಿ ಈ ನಿಯಮ ಪಾಲನೆ ಕಷ್ಟವಾಗಬಹುದು. ತಕ್ಷಣದಿಂದ ಈ ನಿಯಮ ಜಾರಿಗೆ ಬಂದರೆ ಸಾವಿರಾರು ಸದಸ್ಯರು ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ಸೌಹಾರ್ದ ಸಹಕಾರ ಅಧಿನಿಯಮ-1997ಕ್ಕೆ ತಂದಿರುವ ತಿದ್ದುಪಡಿ ಈ ಸಂಘಗಳ ಅಳಿವು ಉಳಿವಿನ ಪ್ರಶ್ನೆಯಾಗುವ ಸಾಧ್ಯತೆ ಇದೆ. ಇನ್ನು ಮುಂದೆ ಸೌಹಾರ್ದ ಸಹಕಾರಿ ಸಂಘಗಳು ತಮ್ಮ ಒಟ್ಟು ಠೇವಣಿಯ ಶೇ.20ರಷ್ಟು ಮೊತ್ತವನ್ನು ಜಿಲ್ಲಾ ಸಹಕಾರ ಬ್ಯಾಂಕ್ ಇಲ್ಲವೇ ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ಮೀಸಲಿಡುವುದು ಕಡ್ಡಾಯ. ಸದಸ್ಯರಿಂದ ಸಂಗ್ರಹಿಸಿದ ಠೇವಣಿ ಪೈಕಿ ಶೇ. 20ರಷ್ಟು ಮೊತ್ತವನ್ನು ಕನಿಷ್ಠ ಬಡ್ಡಿಗೆ ಠೇವಣಿ ಇರಿಸಿದ ಬಳಿಕ ಈ ಸಂಘಗಳು ಲಾಭದ ದಾರಿಯಲ್ಲಿ ಸಾಗಬಹುದೇ ಎನ್ನುವುದು ಚರ್ಚೆಯ ವಿಷಯ. ಆದರೆ ಗ್ರಾಹಕರ ಹಿತರಕ್ಷಣೆ ದೃಷ್ಟಿಯಿಂದ ಇಂಥಹ ನಿಯಮವೊಂದರ ಅವಶ್ಯಕತೆ ಇತ್ತು.

ಇನ್ನುಳಿದಂತೆ ಪ್ರತೀ ಮೂರು ವರ್ಷಕ್ಕೊಮ್ಮೆ ಸಹಕಾರಿ ಸಂಘಗಳ ಲೆಕ್ಕಪರಿಶೋಧಕರಿಂದ ಕಡ್ಡಾಯ ಲೆಕ್ಕ ತಪಾಸಣೆ, ಕಾರ‌್ಯನಿರ್ವಹಣಾಧಿಕಾರಿ ಮೇಲೆ ಶಿಸ್ತುಕ್ರಮಕ್ಕೆ ಅವಕಾಶ, ಸಿಇಒಗೆ ಚುನಾವಣೆ ನಡೆಸುವ ಅಧಿಕಾರ ಸೇರಿದಂತೆ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ಮತ್ತು ಪಾರದರ್ಶಕ ವ್ಯವಸ್ಥೆಯನ್ನು ತಂದು ಸದಸ್ಯರ ಹಿತ ಕಾಪಾಡು ವುದು ಈ ವಿಧೇಯಕಗಳ ಗುರಿ ಎಂದು ಸರಕಾರ ಹೇಳಿಕೊಂಡಿದೆ. ರಾಜ್ಯದ ಕೋಟ್ಯಂತರ ಜನರ ಬದುಕಿಗೆ ಆಧಾರವಾದ ಸಹಕಾರ ಕ್ಷೇತ್ರಕ್ಕೆ ಈ ತಿದ್ದುಪಡಿಗಳು ಅನುಕೂಲವಾದರೆ ಸರಿ. ಇವು ಮತ್ತೊಮ್ಮೆ ರಾಜಕೀಯ ಹಿತಾಸಕ್ತಿಗಳನ್ನು ಕಾಯುವ ಮಾರ್ಗಗಳಾಗದಿರಲಿ ಎನ್ನುವುದು ಪ್ರಾಮಾಣಿಕ ಸಹಕಾರಿಗಳ ಆಶಯ.