ಈ ಗ್ರಾಮದಲ್ಲಿ ಹೆಣ್ಣು ಹುಟ್ಟಿದರೆ 5500 ರು. ಠೇವಣಿ !
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿ ತನ್ನ ವಿನೂತನ ಕಾರ್ಯದಿಂದ ರಾಜ್ಯದ ಗಮನ ಸೆಳೆದಿದೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಹಾಗೂ ಸಮಾಜಿಕವಾಗಿ ಭದ್ರತೆ ನೀಡುವ ಉದ್ದೇಶ ದಿಂದ ‘ಕುಮಾರಿ ಸಮೃದ್ಧಿ’ ಎಂಬ ವಿನೂತನ ಯೋಜನೆ ಮೂಲಕ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಇದರ ಫಲವಾಗಿ ಈವರೆಗೂ 49 ಹೆಣ್ಣುಮಕ್ಕಳು ಆರ್ಥಿಕ ಭದ್ರತೆ ಪಡೆದುಕೊಂಡಿದ್ದಾರೆ.
-
ವಿನಾಯಕ ಮಠಪತಿ ಬೆಳಗಾವಿ
ಮಕ್ಕಳ ಭವಿಷ್ಯಕ್ಕಾಗಿ ʼಕುಮಾರಿ ಸಮೃದ್ಧಿʼ ಯೋಜನೆ
ಮಗುವಿನ ಭವಿಷ್ಯ ರೂಪಿಸುವ ಹೊಣೆ ಹೊತ್ತ ಹೂಲಿ ಗ್ರಾಮ
ಬೆಳಗಾವಿ: ಹೆಣ್ಣು ಇರುವ ಮನೆ ನಂದನವನ ಎಂಬ ಮಾತಿದೆ. ಜತೆಗೆ ಹೆಣ್ಣನ್ನು ದೇವತೆಗಳಿಗೆ ಹೋಲಿಸುವ ಸಮಾಜ ನಮ್ಮದು. ಇದರ ನಡುವೆ ಅದೇ ಹೆಣ್ಣು ಹುಟ್ಟಿತೆಂದರೆ ಮೂಗು ಮುರಿಯುವ ಕೆಟ್ಟ ಮನಸ್ಥಿತಿಯೂ ಅನೇಕರಿಂದ ದೂರವಾಗಿಲ್ಲ. ಆದರೆ ಇಲ್ಲೊಂದು ಗ್ರಾಮ ಪಂಚಾಯತಿ ತನ್ನ ವ್ಯಾಪ್ತಿಯಲ್ಲಿ ಜನಿಸುವ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಹೊಣೆ ಹೊತ್ತಿದೆ ಎಂದರೆ ನೀವು ನಂಬಬೇಕು.
ಹೌದು... ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿ ತನ್ನ ವಿನೂತನ ಕಾರ್ಯದಿಂದ ರಾಜ್ಯದ ಗಮನ ಸೆಳೆದಿದೆ. ಹೆಣ್ಣು ಮಕ್ಕಳಿಗೆ ಆರ್ಥಿಕ ಹಾಗೂ ಸಮಾಜಿಕವಾಗಿ ಭದ್ರತೆ ನೀಡುವ ಉದ್ದೇಶದಿಂದ ‘ಕುಮಾರಿ ಸಮೃದ್ಧಿ’ ಎಂಬ ವಿನೂತನ ಯೋಜನೆ ಮೂಲಕ ಮಹತ್ವದ ಯೋಜನೆ ಜಾರಿಗೆ ತಂದಿದ್ದು, ಇದರ ಫಲವಾಗಿ ಈವರೆಗೂ 49 ಹೆಣ್ಣುಮಕ್ಕಳು ಆರ್ಥಿಕ ಭದ್ರತೆ ಪಡೆದುಕೊಂಡಿದ್ದಾರೆ.
ಈ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣುಮಗು ಸದ್ಯ ಆರ್ಥಿಕ ನೆರವು ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ಗ್ರಾಮದಲ್ಲಿ ಹೆಣ್ಣು ಜನಿಸಿದರೆ ಸಂಭ್ರಮಿಸುವ ವಾತಾವರಣ ಕಳೆದ ನಾಲ್ಕು ವರ್ಷಗಳಿಂದ ನಿರ್ಮಾಣವಾಗಿದೆ.
ಏನಿದು ಕುಮಾರಿ ಸಮೃದ್ಧಿ ಯೋಜನೆ?: ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾ ಯತಿ 2022ರ ಆಗಸ್ಟ್ 15 ರಿಂದ ‘ಕುಮಾರಿ ಸಮೃದ್ಧಿ’ ಎಂಬ ಯೋಜನೆ ಜಾರಿಗೊಳಿಸಿದೆ. ಇದರ ಅನ್ವಯ ಹೂಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ ಪಂಚಾ ಯತಿ ವತಿಯಿಂದ 5500 ರು. ಠೇವಣಿ ಮಾಡಲಾಗುತ್ತಿದೆ. ಈವರೆಗೆ ಸುಮಾರು 49 ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಲಾಗಿದೆ. ಸತತವಾಗಿ ಎರಡನೇ ಬಾರಿಗೂ ಹೆಣ್ಣು ಮಗು ಜನಿಸಿದರೂ ಈ ಯೋಜನೆ ಲಾಭ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ:Harish Kera Column: ಅರಣ್ಯದಲ್ಲಿ ಶರಣ್ಯ ಮತ್ತು ಇತರ ಕತೆಗಳು
ಹೆಚ್ಚಳವಾಯಿತು ಠೇವಣಿ ಮೊತ್ತ: ಹೂಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2022ರಲ್ಲಿ ಜಾರಿಗೊಳಿಸಲಾದ ಕುಮಾರಿ ಸಮೃದ್ಧಿ ಯೋಜನೆ ಮೊದಲಿಗೆ 5 ಸಾವಿರ ಮೊತ್ತದ ಠೇವಣಿ ಮಾಡಲಾಗಿತ್ತು. ಆದರೆ 2025ರ ಆಗಸ್ಟ್ 16ರಿಂದ ಠೇವಣಿ ಮೊತ್ತ 5500ಕ್ಕೆ ಏರಿಸುವ ಮೂಲಕ ಯೋಜನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಮದ ಜನರ ಸಹಕಾರದಿಂದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಽಗಳು ಯೋಜನೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಸಾಗಿದ್ದು ವಿಶೇಷ.
ಠೇವಣಿ ಹಣದಿಂದ ಆಗುವ ಲಾಭ: ಒಂದು ಕಡೆ ‘ಕುಮಾರಿ ಸಮೃದ್ಧಿ’ ಯೋಜನೆಯಿಂದ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸವಾದರೆ ಮತ್ತೊಂದೆಡೆ ಅವರ ಆರ್ಥಿಕ ಭದ್ರತೆ ಹೆಚ್ಚಿಸುವ ಮಹತ್ವದ ಉದ್ದೇಶ ಇದರಲ್ಲಿ ಅಡಗಿದೆ. ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿನ ಹೆಸರಿನಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹೂಲಿ ಶಾಖೆಯಲ್ಲಿ ಠೇವಣಿ ಇರಿಸಲಾಗುತ್ತದೆ. ಹೆಣ್ಣು ಮಗುವಿಗೆ 18 ವರ್ಷ ವಯಸ್ಸು ದಾಟಿದ ನಂತರ ಠೇವಣಿ ಮೊತ್ತ ಹಾಗೂ ಬಡ್ಡಿಯನ್ನು ಪಡೆದು ಕೊಳ್ಳಬಹುದಾಗಿದೆ. ಸದ್ಯ ಹೂಲಿ ಗ್ರಾಮದಲ್ಲಿ 12 ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ 18 ಲಕ್ಷಕ್ಕೂ ಅಧಿಕ ಆದಾಯ ಸಂಗ್ರಹವಾಗುತ್ತಿದೆ.
ಸಚಿವ ಪ್ರಿಯಾಂಕ್ ಶ್ಲಾಘನೆ
‘ಕುಮಾರಿ ಸಮೃದ್ಧಿ’ ಹೆಸರಿನಡಿಯಲ್ಲಿ 5500 ರು. ಠೇವಣಿ ಇಡುವ ವಿನೂತನ ಯೋಜನೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದು ಸಚಿವರಿಂದ ಶ್ಲಾಘನೆ ಪಡೆದಿದೆ. ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಗ್ರಾಮ ಪಂಚಾಯತಿ ವತಿಯಿಂದ 5500 ರು. ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು, ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ಸಂತೋಷ ತರಿಸಿದೆ.
ಸ್ವಯಂ ಸರಕಾರಗಳಾದ ಗ್ರಾಮ ಪಂಚಾಯತಿಗಳು ರಾಜ್ಯದಲ್ಲಿ ಕ್ರಿಯಾಶೀಲವಾಗಿ ತಮ್ಮದೇ ಆದ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೇರಣಾತ್ಮಕವಾಗಿ ಕೆಲಸ ಮಾಡುತ್ತಿವೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಇರುವ ಪೂರ್ವಗ್ರಹವನ್ನು ನಿವಾರಿಸಲು ಹಾಗೂ ಹೆಣ್ಣುಮಕ್ಕಳ ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬಲು ಹೂಲಿ ಗ್ರಾಮ ಪಂಚಾಯತಿ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರ ರಾಜ್ಯದ ಇತರ ಗ್ರಾಮ ಪಂಚಾಯತಿಗಳಿಗೆ ಸ್ಪೂರ್ತಿಯಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಶಿಸಿದ್ದಾರೆ.
*
2022ರ ಆಗಸ್ಟ್ 15ರಿಂದ ‘ಕುಮಾರಿ ಸಮೃದ್ಧಿ’ ಎಂಬ ಯೋಜನೆ ಜಾರಿ
ಈವರೆಗೆ ಗ್ರಾಮದ ಸುಮಾರು 49 ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗಿದೆ
ಸತತವಾಗಿ ಎರಡನೇ ಬಾರಿಗೂ ಹೆಣ್ಣು ಮಗು ಜನಿಸಿದರೂ ಯೋಜನೆಗೆ ಅರ್ಹ