ನಾಮಫಲಕವಷ್ಟೇ ಅಲ್ಲ, ಊರಿನ ಮೂಲ ಹೆಸರಿಡಿ
ಒಂದು ವೇಳೆ ಊರುಗಳ ಮೂಲ ಹೆಸರುಗಳು ಜಾರಿಗೆ ಬಂದರೆ ಆ ಊರಿನ ಇತಿಹಾಸ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಹಿನ್ನೆಲೆ ತಿಳಿಯುವುದು ಸುಲಭ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಈ ಸಂಬಂ ಧ ಕ್ರಮವಹಿಸಬೇಕು ಎನ್ನುವ ಮನವಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ.


ಜಯಂತ್ ಬಸವರಾಜ್ ಬೆಂಗಳೂರು
ರಾಜ್ಯ ಸರಕಾರಕೆ ಪ್ರಸ್ತಾವನೆ ಸಲ್ಲಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಹಲವು ಭಾಗದ ಊರುಗಳ ಹೆಸರೇ ಬದಲಾಗಿದೆ
ಯಾವುದೇ ಒಂದು ಊರಿಗೆ ಸುಖಾಸುಮ್ಮನೆ ಹೆಸರು ಬರುವುದಿಲ್ಲ. ಊರಿನ ಹೆಸರಿನ ನಾಮಕರಣದ ಹಿಂದೆ ಐತಿಹಾಸಿಕ, ಪ್ರಾದೇಶಿಕ, ಪಾಕೃತಿಕ ಸೇರಿ ಹಲವು ಕಾರಣಗಳಿರುತ್ತವೆ. ಆದರೆ ಆಧುನಿಕ ಸಮಾಜದಲ್ಲಿ ರಾಜ್ಯದ ಅನೇಕ ಊರುಗಳ ಹೆಸರನ್ನೇ ಬದಲಾಯಿಸಿರುವ ನಿರ್ದಶನಗಳಿವೆ. ಆದ್ದ ರಿಂದ ಇದೀಗ ಕರ್ನಾಟಕದಲ್ಲಿ ಬದಲಾಗಿರುವ ಕನ್ನಡ ಊರುಗಳ ಹೆಸರನ್ನು ಮರುನಾಮ ಕರಣ ಮಾಡಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಕಳೆದ ವರ್ಷ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಕಣ್ಮರೆ ವಿಷಯಕ್ಕೆ ಸಂಬಂಧಿಸಿದಂತೆ ಬಹುದೊಡ್ಡ ವಿವಾದದ ಬಳಿಕ, ರಾಜ್ಯ ಸರಕಾರ ಕರ್ನಾಟಕದಲ್ಲಿ ವಾಣಿಜ್ಯ ಕಟ್ಟಡಗಳ ಮೇಲೆ ಶೇ.60 ರಷ್ಟು ಕನ್ನಡದ ನಾಮಫಲಕವನ್ನು ಅಳವಡಿಸಬೇಕು ಎನ್ನುವ ಕಾನೂನ್ನು ಜಾರಿಗೊಳಿಸಿತ್ತು.
ಇದೀಗ ಈ ಕಾನೂನಿಗೆ ಪೂರಕವಾಗಿ, ಕರ್ನಾಟಕದಲ್ಲಿ ಬದಲಾಗಿರುವ ಊರುಗಳ ಹೆಸರನ್ನು ಮರು ನಾಮಕರಣ ಮಾಡಿ, ಈ ಹಿಂದಿನ ಹೆಸರನ್ನೇ ಇಡಬೇಕು ಎನ್ನುವ ಆಗ್ರಹಗಳು ಶುರುವಾಗಿದೆ. ಈ ಸಂಬಂಧ ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ.
ಇದನ್ನೂ ಓದಿ: K Shashikumar Column: ಪೀಳಿಗೆಯ ಪರಿ ಇಂತಿದೆ ನೋಡಾ...
ಒಂದು ವೇಳೆ ಊರುಗಳ ಮೂಲ ಹೆಸರುಗಳು ಜಾರಿಗೆ ಬಂದರೆ ಆ ಊರಿನ ಇತಿಹಾಸ, ಸಾಂಸ್ಕೃತಿಕ ಹಾಗೂ ಪಾರಂಪರಿಕ ಹಿನ್ನೆಲೆ ತಿಳಿಯುವುದು ಸುಲಭ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ಈ ಸಂಬಂಧ ಕ್ರಮವಹಿಸಬೇಕು ಎನ್ನುವ ಮನವಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ.
ನಾಮಫಲಕದಲ್ಲಿ ಊರಿನ ಹೆಸರು ಸೇರಿಸಿ: ನಾಮ ಫಲದಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಎನ್ನುವ ಕಾನೂನಿನೊಂದಿಗೆ, ಆ ನಾಮಫಲಕದಲ್ಲಿ ಊರಿನ ಮೂಲ ಹೆಸರನ್ನು, ಕನ್ನಡದಲ್ಲಿಯೇ ಬರೆಯಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಒಂದು ನಿರ್ದಿಷ್ಟ ಪ್ರದೇಶದ ಭಾಷೆ, ಸಂಸ್ಕೃತಿ, ಚರಿತ್ರೆ ಸ್ವರೂಪವನ್ನು ತಿಳಿಯುವಲ್ಲಿ ಊರಿನ ಮೂಲ ಹೆಸರು ಪ್ರಾಮುಖ್ಯತೆ ಪಡೆಯುತ್ತದೆ. ಊರಿನ ಹೆಸರು ಉಳಿದರೆ ಅಲ್ಲಿನ ಸಂಸ್ಕೃತಿ ಉಳಿಯುತ್ತದೆ. ಪ್ರತಿ ನಾಮಫಲಕದಲ್ಲಿ ಆ ಊರಿನ ಹೆಸರು ಸಮರ್ಪಕವಾಗಿ ದಾಖಲಾಗುವಂತೆ ಮಾಡಲು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕತೆಗೆ ತೆರೆದುಕೊಳ್ಳುತ್ತಿರುವ ವಾಣಿಜ್ಯ, ವ್ಯಾಪಾರ ಕ್ಷೇತ್ರಗಳು ಅದಕ್ಕೆ ತಕ್ಕಂತೆ ಒಗ್ಗಿ ಕೊಳ್ಳುತ್ತಿವೆ. ಈ ಹಿಂದೆ ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆಯ ಜತೆಗೆ ಕೆಳ ಭಾಗದಲ್ಲಿ ಊರಿನ ಮೂಲ ಹೆಸರು ಇರುತ್ತಿದ್ದವು. ಆದರೀಗ ಜಾಗತೀಕರಣದ ಹೆಸರಲ್ಲಿ ನಾಮಫಲಕ ಗಳ ಚಿತ್ರಣ ಬದಲಾಯಿಸಲಾಗುತ್ತಿದೆ. ಕನ್ನಡದ ಬಳಕೆ ದಿನೇ ದಿನೇ ಕ್ಷೀಣಿಸುತ್ತಿದ್ದರೆ ಊರಿನ ಮೂಲ ಹೆಸರು ಬಳಸುವುದು ಮಾಯವಾಗಿದೆ. ಉದಾಹರಣೆಗೆ ಜಯ ಪ್ರಕಾಶ ನಗರ ಈಗ ಜೆಪಿ ನಗರವಾಗಿ, ಕೃಷ್ಣರಾಜ ಮಾರುಕಟ್ಟೆ ಕೆಆರ್ ಮಾರ್ಕೆಟ್ ಆಗುವ ಮೂಲಕ ಮೂಲ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಆದ್ದರಿಂದ ಇದನ್ನು ಬದಲಾಯಿಸಬೇಕಿದೆ ಎನ್ನಲಾಗುತ್ತಿದೆ.
ಯೋಜನೆ ಜಾರಿಗೆ ಎನ್‌ಎಸ್‌ಎಸ್ ಮಕ್ಕಳ ಸಹಕಾರ
ನಾಮಫಲಕಗಳಲ್ಲಿ ಊರಿನ ಹೆಸರು ಉಳಿಸುವ ಅಭಿಯಾನ ಜಾರಿಗೆ ತರಲು ಪ್ರಾಧಿಕಾರ ತಜ್ಞರ ತಂಡ ರಚಿಸಿ ಈಗಾಗಲೇ ಚರ್ಚೆ ನಡೆಸಿದೆ. ತಜ್ಞರ ಪ್ರಕಾರ, ಪ್ರತಿ ಗ್ರಾಮದ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ನಾಮಫಲಕಗಳಲ್ಲಿ ಊರಿನ ಹೆಸರು, ಶೇ.60ರಷ್ಟು ಕನ್ನಡ ಬಳಕೆ ಮಾಡಲು ಎನ್ ಎಸ್‌ಎಸ್ ವಿದ್ಯಾರ್ಥಿಗಳ ಸಹಾಯ ಪಡೆಯುವುದಾಗಿ ತಿಳಿಸಿದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಅಂಗಡಿ -ಮುಂಗಟ್ಟುಗಳಿಗೆ ತೆರಳಿ ಅಲ್ಲಿ ಶೇ.60ರಷ್ಟು ಕನ್ನಡ ಬಳಕೆಯಾಗಿದೆಯೇ ಮತ್ತು ಊರಿನ ಮೂಲ ಹೆಸರು ಬಳಸಿದ್ದಾರೆಯೇ ಎಂದು ಪರಿಶೀಲಿಸಿ, ಹಾಗೊಂದು ವೇಳೆ ಬಳಸದಿದ್ದಲ್ಲಿ ಆ ಮಾಲೀ ಕರ ಗಮನಕ್ಕೆ ತಂದು ಕೂಡಲೇ ಬದಲಾಯಿಸಲು ತಿಳಿಸುವುದು ಎನ್ನಲಾಗಿದೆ.
*
ಕರ್ನಾಟಕದಲ್ಲಿ ಸುಮಾರು 65 ಸಾವಿರ ಊರುಗಳ ಕನ್ನಡ ಹೆಸರುಗಳಿವೆ. ಪ್ರಾಕೃತಿಕ ಗುಣಗಳಿಂದ ಆ ಹೆಸರುಗಳು ಬಂದಿವೆ. ಮೊದಲೆಲ್ಲಾ ಊರು ಸಿಗುವುದು ಊರಿನ ಹೆಸರಿನಿಂದಾಗಿ, ಆದರೆ ಇಂದು ಊರು ಸಿಕ್ಕರೂ ಊರಿನ ಹೆಸರು ಸಿಗುತ್ತಿಲ್ಲ. ಪ್ರಾಕೃತಿಕ, ಸಾಂಸ್ಕೃತಿಕ ಪದ ಬಳಕೆ ನಿಂತು ಹೋಗು ತ್ತಿವೆ. ಹೀಗಾಗಿ ಊರುಗಳಿಗೆ ಅವುಗಳ ಮೂಲ ಹೆಸರೇ ಇಡಬೇಕು ಎಂದು ಪ್ರಸ್ತಾಪಿಸಿದ್ದೇವೆ.
- ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ