ಭಾರತದ ಕ್ರೂರ ಸೈಕೋಪಾತ್ ಇವಳು; ತನಗಿಂತ ಸುಂದರವಾಗಿದ್ದಕ್ಕೆ ಮೂವರು ಬಾಲಕಿಯರ ಹತ್ಯೆ: ಮಗನನ್ನೂ ಕೊಂದ ಪಾಪಿ
Haryana Crime: ಮದುವೆಗೆ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ಮೃತಪಟ್ಟಿದ್ದು, ಕೊನೆಗೆ ಅದು ಕೊಲೆ ಎಂದು ದೃಢಪಟ್ಟ ಘಟನೆ ಹರಿಯಾಣದಲ್ಲಿ ನಡೆದಿದೆ. ತನಗಿಂತ ಸುಂದರವಾಗಿದ್ದಕ್ಕೆ ಮಹಿಳೆಯೊಬ್ಬಳು ಈ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಅದಕ್ಕೂ ಮೊದಲು ಈಕೆ ತನ್ನ ಮಗ ಹಾಗೂ ಇಬ್ಬರು ಬಾಲಕಿಯರನ್ನು ಕೊಂದಿರುವುದು ಕೂಡ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ -
ಚಂಡೀಗಢ, ಡಿ. 4: ತನಗಿಂತ ಸುಂದರವಾಗಿ ಯಾರೂ ಇರಬಾರದು ಎಂದು ಮಹಿಳೆಯೊಬ್ಬಳು ತನ್ನ ಮಗ ಹಾಗೂ ಮೂವರು ಬಾಲಕಿಯರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ (Haryana) ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧಿ ಎಂಬ ಬಾಲಕಿಯನ್ನು ಹತ್ಯೆಯ ನಂತರ ಆಕೆಯ ಪುತ್ರ ಹಾಗೂ ಇಬ್ಬರು ಬಾಲಕಿಯರ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ (Crime News).
ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ತನಗಿಂತ ಸುಂದರವಾಗಿ ಯಾರೂ ಇರಬಾರದು ಎಂಬ ಕಾರಣಕ್ಕಾಗಿ ಮೂವರು ಹುಡುಗಿಯರನ್ನು ಕೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಸುಂದರ ಹುಡುಗಿಯರು ತನ್ನ ಗುರಿಯಾಗಿದ್ದರು. ಆದರೆ ಅನುಮಾನ ಬರದಂತೆ ತನ್ನ ಸ್ವಂತ ಮಗನನ್ನೂ ಕೊಂದಿದ್ದಾಗಿ ಮಹಿಳೆ ಹೇಳಿದ್ದಾಳೆ.
ಮದುವೆ ಆಗಲು 2 ವರ್ಷ ಕಾಯುವಂತೆ ಹೇಳಿದ ಮನೆಯವರು; ಮನನೊಂದು 19 ವರ್ಷದ ಯುವಕ ಆತ್ಮಹತ್ಯೆ
ಸೋನಿಪತ್‌ನಲ್ಲಿ ವಾಸಿಸುತ್ತಿದ್ದ ಬಾಲಕಿ ವಿಧಿ, ತನ್ನ ಕುಟುಂಬದೊಂದಿಗೆ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ಬಂದಿದ್ದಳು. ಆಕೆಯ ಅಜ್ಜ ಪಾಲ್ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ್, ತಾಯಿ ಮತ್ತು 10 ತಿಂಗಳ ಕಿರಿಯ ಸಹೋದರ ಅವಳೊಂದಿಗೆ ಇದ್ದರು. ಸೋಮವಾರ (ಡಿಸೆಂಬರ್ 1) ಮಧ್ಯಾಹ್ನ ನೌಲ್ತಾದಲ್ಲಿ ಮದುವೆ ಮೆರವಣಿಗೆಯೊಂದಿಗೆ ಕುಟುಂಬ ಹೊರಟ ಬಳಿಕ ವಿಧಿ ನಾಪತ್ತೆಯಾಗಿದ್ದಳು.
ಬಲಿಕ ಎಲ್ಲರೂ ಸೇರಿ ಆಕೆಗಾಗಿ ಹುಡುಕಾಟ ತೊಡಗಿದರು. ಒಂದು ಗಂಟೆಯ ನಂತರ ಆಕೆಯ ಅಜ್ಜಿ ತಮ್ಮ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಕೋಣೆಗೆ ಹೊರಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿದರು. ಅದನ್ನು ತೆರೆದಾಗ ವಿಧಿ ಒಳಗೆ ಇರುವುದು ಕಂಡು ಬಂದಿತು.
ಕೂಡಲೇ ಆಕೆಯನ್ನು ಎನ್‌ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದರು. ವಿಧಿಯ ತಂದೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದರು. ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ ಭೂಪೇಂದ್ರ ಸಿಂಗ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆದಾಗ ಇದರ ಹಿಂದೆ ಪೂನಂ ಕೈವಾಡ ಇರುವುದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ಬಾಡಿಗೆ ಮನೆಯಲ್ಲಿ ಇದ್ದ ದಂಪತಿ ಶವವಾಗಿ ಪತ್ತೆ
ಸುಂದರವಾಗಿದ್ದಾಳೆ ಎನ್ನುವ ಕಾರಣಕ್ಕೆ 2023ರಲ್ಲಿ ಪೂನಂ ತನ್ನ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದೇ ವರ್ಷ ಅನುಮಾನ ಬರದಂತೆ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಳು. ಈ ವರ್ಷದ ಆಗಸ್ಟ್‌ನಲ್ಲಿ ಪೂನಂ ಸಿವಾ ಗ್ರಾಮದಲ್ಲಿ ಮತ್ತೊಬ್ಬ ಬಾಲಕಿಯನ್ನು ಕೊಲೆ ಮಾಡಿದ್ದಳು. ಈ ಮಕ್ಕಳು ತನಗಿಂತ ಸುಂದರವಾಗಿದ್ದರು ಎಂದು ಎಂಬ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದ್ದಾಳೆ.
ವಿಧಿ ಕೊಲೆ ಪ್ರಕರಣದಲ್ಲಿ ಪೂನಂ ಸತ್ಯವನ್ನು ಒಪ್ಪಿಕೊಳ್ಳುವವರೆಗೂ ಈ ಮಕ್ಕಳ ಸಾವು ಆಕಸ್ಮಿಕವೆಂದು ಭಾವಿಸಲಾಗಿತ್ತು. ಪೂನಂಳನ್ನು ಬುಧವಾರ (ಡಿಸೆಂಬರ್ 3) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.