Sringeri MLA T D Rajegowda Interview: ಶೃಂಗೇರಿ ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯ
ರಾಜಕೀಯ ಪಥದಲ್ಲಿ ಹಲವು ತಿರುವುಗಳನ್ನು ಕಂಡಿರುವೆ. ಜೆಡಿಎಸ್‌ನಿಂದ ಹೊರ ಬಂದು, ಕಾಂಗ್ರೆಸ್‌ಗೆ ಸೇರಿ ಜನಸೇವೆ ಮುಂದುವರಿಸಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರಮುಖ ನಾಯಕರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಮತ್ತಷ್ಟು ಬಲ ಪಡೆದುಕೊಂಡೆ. ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಸ್ಥಳೀಯ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
-
ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಿಭಾಯಿಸುವೆ
ಶಾಸಕ, ಕ್ರೆಡೆಲ್ ಅಧ್ಯಕ್ಷ ಟಿ.ಡಿ. ರಾಜೇಗೌಡ ವಿಶೇಷ ಸಂದರ್ಶನ
ಕ್ಷೇತ್ರದ, ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಜೀವನ ಸಾಗಿಸುತ್ತಿದ್ದೇವೆ. ಶಾಸಕನಾಗಿ ನನ್ನ ಕ್ಷೇತ್ರದ ಅಭಿವೃದ್ಧಿಯೇ ಪ್ರಮುಖ ಧ್ಯೇಯ. ರಾಜ್ಯ ರಾಜಕೀಯದಲ್ಲಿ ಪಕ್ಷದ ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾ ಯಿಸಲು ಸಿದ್ಧ ಎಂದು ಶೃಂಗೇರಿ ಶಾಸಕ, ಕ್ರೆಡೆಲ್ ಅಧ್ಯಕ್ಷ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ. ವಿಶ್ವವಾಣಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ರಾಜಕೀಯವಾಗಿ ನಡೆದು ಬಂದ ಹಾದಿ, ಕ್ಷೇತ್ರದ ಅಭಿವೃದ್ಧಿ, ಅನುದಾನ ಹೊಸ ಯೋಜನೆ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ನಿಮ್ಮ ರಾಜಕೀಯ ಜೀವನವನ್ನು ಹಿಂದಿರುಗಿ ನೋಡಿದರೆ ಏನನಿಸುತ್ತದೆ?
ನಾನು ಮೂಲತಃ ಕೃಷಿಕನಾಗಿದ್ದೆ. ಕಬ್ಬು ತೋಟಗಳನ್ನು ಮಾರಿ ಹೊಸದಾಗಿ ಕೃಷಿ ಜೀವನ ಆರಂಭಿ ಸಿದ್ದೆ. ಇದೇ ಸಮಯದಲ್ಲಿ ಜಿಲ್ಲಾ ಪಂಚಾಯತ್ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ನಡೆಸಿದ್ದೆ. ಮೊದಲಿಗೆ ಆಸಕ್ತಿ ಇರದಿದ್ದರೂ, ಸ್ಥಳೀಯ ಮುಖಂಡರಾದ ಎಸ್.ಯು.ಮಂಜುನಾಥ್, ಎಚ್.ಆರ್.ಶಂಕರ್, ವಿ.ಎಲ್.ಪ್ರಧಾನ ಶೇಖರ್ ಸೇರಿದಂತೆ ಹಲವರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಿದೆ. ಜನರ ಬೆಂಬಲದಿಂದ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿ, ನಂತರ ಜನತಾ ದಳದೊಂದಿಗೆ ರಾಜಕೀಯ ಜೀವನ ಆರಂಭಿಸಿದೆ. ಐದು ವರ್ಷಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಸೇತುವೆ, ಚೆಕ್ ಡ್ಯಾಮ್, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸಿದ್ದರಿಂದ ಆ ಕಾರ್ಯ ಪದ್ಧತಿ ಜನರಲ್ಲಿ ವಿಶ್ವಾಸ ಮೂಡಿಸಿತು.
ರಾಜಕೀಯ ಪಥದಲ್ಲಿ ಹಲವು ತಿರುವುಗಳನ್ನು ಕಂಡಿರುವೆ. ಜೆಡಿಎಸ್‌ನಿಂದ ಹೊರ ಬಂದು, ಕಾಂಗ್ರೆಸ್‌ಗೆ ಸೇರಿ ಜನಸೇವೆ ಮುಂದುವರಿಸಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯ ದಲ್ಲಿ ಪ್ರಮುಖ ನಾಯಕರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಮತ್ತಷ್ಟು ಬಲ ಪಡೆದುಕೊಂಡೆ. ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಸ್ಥಳೀಯ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಆರಂಭದಲ್ಲಿ ಯಾವುದೇ ವಿಶೇಷ ಯೋಜನೆಗಳಿಲ್ಲದೇ ಸರಳವಾಗಿ ಸಾರ್ವಜನಿಕರ ಜತೆ ಸಂಪರ್ಕ ಸಾಧಿಸಿದ ನಾಯಕತ್ವವು, ನಂತರ ಹಂತ ಹಂತವಾಗಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.
ಇದನ್ನೂ ಓದಿ: State BJP Vice President Rupali Naik Interview: ಸೋತ ದುಃಖ ಇಲ್ಲ , ಜನರ ಜತೆಗಿರುವ ಖುಷಿ ಇದೆ
ಹಳೆಯ ಕಾಲದಲ್ಲಿ ನಿರ್ಮಾಣಗೊಂಡಿದ್ದ ಕಾಲುವೆಗಳು ಮುಚ್ಚಿಕೊಂಡು ರೈತರಿಗೆ ನೀರಿನ ಕೊರತೆ ಉಂಟಾಗಿತ್ತು. ಈ ಸಮಸ್ಯೆಯನ್ನು ಗುರುತಿಸಿ ಕಾಲುವೆಗಳ ಶುದ್ಧೀಕರಣ ಹಾಗೂ ಪುನರ್‌ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದ್ದು, ಕೃಷಿಗೆ ನೀರಿನ ಹರಿವು ಸುಗಮಗೊಂಡಿದೆ. ಇದರಿಂದ ಸ್ಥಳೀಯ ರೈತರಿಗೆ ದೊಡ್ಡ ಮಟ್ಟದಲ್ಲಿ ನೆರವು ಲಭಿಸಿದೆ. ರಸ್ತೆ ನಿರ್ಮಾಣ, ಬಸ್ ಸೌಲಭ್ಯ, ಕುಡಿಯುವ ನೀರು ಸೇರಿದಂತೆ ಅನೇಕ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ರಾಜಕೀಯದಲ್ಲಿ ನೀವು ಎದುರಿಸಿದ ಸವಾಲುಗಳೇನು?
ಮೊದಲ ಅವಧಿಯಲ್ಲಿ ಮಡ ಬುದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಗಳನ್ನು ಮನವೊಲಿಸಿ ಪ್ರತಿಯೊಬ್ಬ ಶಾಸಕರಿಗೂ ಒಂದು ಕೋಟಿ ರುಪಾಯಿ ಅನುದಾನ ತಂದು ಕೊಟ್ಟದ್ದು ಮಹತ್ವದ ಸಾಧನೆ. ರಾಜಕೀಯ ಜಂಜಾಟ ಮತ್ತು ಶಾಸಕರ ಖರೀದಿ ಯತ್ನಗಳ ನಡುವೆಯೂ ಪಕ್ಷದ ನಿಷ್ಠೆಯನ್ನು ಕಾಯ್ದುಕೊಂಡು ಯಾವುದೇ ಒತ್ತಡಕ್ಕೆ ಮಣಿಯದೇ ಕಾರ್ಯ ನಿರ್ವಹಿಸಿದ್ದೇನೆ.
ನನ್ನ ಅಧಿಕಾರಾವಧಿಯಲ್ಲಿ ಸುಮಾರು 22 ಕೋಟಿ ರು. ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿಸಿಕೊಂಡರೂ, ರಾಜಕೀಯ ದ್ವೇಷದಿಂದಾಗಿ ಅದನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾ ಗಿದೆ. ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ನಂತರದ ಅವಧಿಯಲ್ಲಿ ವಿರೋಧಿಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟಾಯಿತು, ಅಪಪ್ರಚಾರಗಳು ನಡೆದವು ಮತ್ತು ಅನುದಾನ ಬಿಡುಗಡೆಗೂ ತೊಂದರೆ ತಂದರು. ಈ ಎಲ್ಲ ಅಡೆತಡೆಗಳ ನಡುವೆ ಯೂ ಜನರ ವಿಶ್ವಾಸದಿಂದ ಮತ್ತೆ ಗೆಲುವು ಸಾಧಿಸಿದೆ. ಇದೀಗ ನಮ್ಮ ಕ್ಷೇತ್ರದಲ್ಲಿ ಮಾನವ-ಪ್ರಾಣಿ ಸಂಘರ್ಷ, ಒತ್ತುವರಿ ಸಮಸ್ಯೆಗಳು ಮತ್ತು ಅತಿವೃಷ್ಟಿಯಿಂದ ಉಂಟಾದ ಹಾನಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಾಮಾಣಿಕವಾಗಿ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಸರಕಾರದಿಂದ ಸಂಪೂರ್ಣ ಸಹಕಾರ ದೊರೆಯುತ್ತಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಕ್ಷೇತ್ರದ ಅಭಿವೃದ್ಧಿಗೆ ವೇಗ ಬಂದಿದೆ. ತಮ್ಮ ಮೊದಲ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳ ಸುಧಾರಣೆಯಲ್ಲಿ ಸಹಕಾರ ದೊರಕಿತ್ತು.
ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಏನು ಹೇಳಲು ಬಯಸುವಿರಿ?
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಆರೋಗ್ಯ, ಶಿಕ್ಷಣ, ನೀರಾವರಿ, ರಸ್ತೆ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಆಲೋಚನೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, ಶೃಂಗೇರಿಯಲ್ಲಿ 100 ಹಾಸಿಗೆಗಳ ಆಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಸುಮಾರು 37.65 ಕೋಟಿ ರು. ಅನುದಾನ ಮಂಜೂ ರಾಗಿದೆ. ಈಗಾಗಲೇ ಜಾಗ ಗುರುತಿಸಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ.
ಕೊಪ್ಪದಲ್ಲಿ ತಾಯಿ-ಮಕ್ಕಳ ಆಸ್ಪತ್ರೆಯನ್ನು 12 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ಜಯಪುರದಲ್ಲಿ 12.40 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಗೊಂಡಿದೆ. ಕೊಪ್ಪದ ಹಳೆಯ ಆಸ್ಪತ್ರೆಯ ದುರಸ್ತಿಗೆ 1.47 ಕೋಟಿ ರು. ವೆಚ್ಚ ಮಾಡಲಾಗಿದೆ. ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರದಲ್ಲಿ ಸ್ಥಾಪಿಸ ಲಾಗಿದ್ದು, ಕೇಂದ್ರ ಸರಕಾರದಿಂದ ರಿಫಿಲ್ಲಿಂಗ್ ಘಟಕಕ್ಕೂ ಅನುಮೋದನೆ ದೊರೆತಿದೆ. ಜತೆಗೆ ಶೃಂಗೇರಿ ಮತ್ತು ಬಾಳೆಹೊನ್ನೂರಿನಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲೂ ಪ್ರಮುಖ ಅಭಿವೃದ್ಧಿ ನಡೆಯುತ್ತಿದೆ. ಕೊಪ್ಪ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮಂಜೂರಾಗಿದೆ. ಹರಿಹರಪುರ ಮತ್ತು ಜಯಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳು ಸುಮಾರು 30-34 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿವೆ.
ಕೊಪ್ಪ ಪ್ರಥಮ ದರ್ಜೆ ಕಾಲೇಜಿನ ಒಳಾಂಗಣ ಕ್ರೀಡಾಂಗಣಕ್ಕೆ 2.5 ಕೋಟಿ ರು. ವೆಚ್ಚ ಮಾಡಲಾ ಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮುಖ್ಯಮಂತ್ರಿಗಳಿಂದ 50 ಕೋಟಿ ರು., 22 ಕೋಟಿ ರು. ಹಾಗೂ 10 ಕೋಟಿ ರು. ವಿಶೇಷ ಅನುದಾನ ದೊರೆತಿದ್ದು, ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ನರಸಿಂಹರಾಜಪುರ ರಸ್ತೆ ಅಗಲೀಕರಣಕ್ಕೆ 60 ಕೋಟಿ ರು. ಮಂಜೂರಾಗಿದೆ. ಅತಿವೃಷ್ಟಿ ಹಾನಿ ಪರಿಹಾರಕ್ಕೆ 14 ಕೋಟಿ ರು. ಹಾಗೂ ಹೆಚ್ಚುವರಿ 10 ಕೋಟಿ ರು. ಬಿಡುಗಡೆಯಾಗಿ, ಭೂಕುಸಿತ ಪ್ರದೇಶಗಳಲ್ಲಿ ಪುನರ್ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ.
ಲೋಕೋಪಯೋಗಿ ಇಲಾಖೆಯ ರಸ್ತೆಗಳಿಗೆ ಸುಮಾರು 75 ಕೋಟಿ ರು. ವೆಚ್ಚ ಮಾಡಲಾಗಿದೆ. ಹೊನ್ನಕೆರೆಯ ಸೇತುವೆ ನಿರ್ಮಾಣಕ್ಕೆ 23 ಕೋಟಿ ರು. ವೆಚ್ಚವಾಗಿದ್ದು, ಶೀಘ್ರದ ಲೋಕಾರ್ಪಣೆ ಆಗಲಿದೆ. ಶೃಂಗೇರಿ ಮತ್ತು ಬಾಳೆಹೊನ್ನೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಒತ್ತು ನೀಡಲಾಗಿದ್ದು, 4 ಕೋಟಿ ರು. ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗುತ್ತಿದೆ.
ಮಾನವ-ಪ್ರಾಣಿ ಸಂಘರ್ಷದ ಕುರಿತು ನಿಮ್ಮ ಮಾತು?
ಮಾನವ-ಪ್ರಾಣಿ ಸಂಘರ್ಷ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕ್ಷೇತ್ರದಲ್ಲಿ ಆರು ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗಿದೆ. ಮತ್ತೊಂದು ಆನೆಗೆ ಅನುಮತಿ ದೊರೆತಿದೆ. ಕಾಡುಕೋಣಗಳ ಹಾವಳಿ ತೀವ್ರವಾಗಿದ್ದು, ಈಗಾಗಲೇ 13-14 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ 20 ಲಕ್ಷ ರು. ಪರಿಹಾರ ಹಾಗೂ ಶಾಶ್ವತ ಗಾಯಗೊಂಡವರಿಗೆ 10 ಲಕ್ಷ ರು. ಪರಿಹಾರ ನೀಡಲಾಗುತ್ತಿದೆ. ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುತ್ತಿದ್ದು, ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ.
ಕಾಡುಕೋಣಗಳ ನಿಯಂತ್ರಣಕ್ಕಾಗಿ ಬೇರೆ ರಾಜ್ಯಗಳಿಂದ ತಜ್ಞರನ್ನು ಕರೆಸಿ ತರಬೇತಿ ನೀಡಲಾಗು ತ್ತಿದೆ. ಶೀಘ್ರದ ಅವುಗಳನ್ನು ಸೆರೆ ಹಿಡಿದು ಕಾಡಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಪ್ರಾಣಿಗಳ ಹಾವಳಿ ತಡೆಗಟ್ಟಲು 12.77 ಕೋಟಿ ರು. ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳು, ಆನೆ ಕಂದಕಗಳು ಮತ್ತು ಟೆಂಟಿಕಲ್ ಫೆನ್ಸಿಂಗ್ ನಿರ್ಮಾಣ ನಡೆಯುತ್ತಿದೆ. 7.64 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಎಕೋ-ಸೆನ್ಸಿಟಿವ್ ವಲಯವನ್ನು 10 ಕಿಲೋ ಮೀಟರ್‌ನಿಂದ 1 ಕಿಲೋಮೀಟರ್‌ಗೆ ಇಳಿಸಲು ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಹಿಂದೆ ನಡೆದ ಭೂ ವರ್ಗಾವಣೆಯ ಪ್ರಕರಣ ಗಳ ಪರಿಶೀಲನೆ ನಡೆಯುತ್ತಿದ್ದು, ಅಕ್ರಮವಾಗಿ ಕಾಡುಭೂಮಿಗೆ ಸೇರಿಸಿದ ಜಾಗಗಳನ್ನು ಗುರುತಿಸಿ ಹಕ್ಕುಪತ್ರ ನೀಡುವ ಕಾರ್ಯ ನಡೆಯುತ್ತಿದೆ.
ಗ್ರಾಮೀಣ ರಸ್ತೆ ಅಭಿವೃದ್ಧಿಗಾಗಿ ಮುಖ್ಯ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಬಹುತೇಕ ಪೂರ್ಣ ಗೊಂಡಿದೆ. ಎಸ್‌ಎಸ್ʼಜಿಪಿ ಮತ್ತು ಸಿಆರ್‌ಎಫ್ ಯೋಜನೆಗಳಡಿ ಹಾಳಾದ ರಸ್ತೆಗಳನ್ನು ಮರು ಡಾಮರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.
ಅರಣ್ಯ ಹಕ್ಕು ಕಾಯ್ದೆಯಡಿ ಪಾರಂಪರಿಕವಾಗಿ ಕಾಡಿನಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ವಿಸ್ತರಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿದೆ. ಇದನ್ನು ಇತರ ಸಮುದಾಯಗಳಿಗೂ ಅನ್ವಯಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನನ್ನ ಮೇಲೆ ನಡೆದ ತನಿಖೆಗಳು, ದಾಳಿಗಳು ಹಾಗೂ ರಾಜಕೀಯ ಕಿರುಕುಳಗಳಿಂದಾಗಿ ಕ್ಷೇತ್ರದಲ್ಲಿ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿಲ್ಲ.
ಇದಕ್ಕಾಗಿ ಜನರ ಕ್ಷಮೆ ಯಾಚಿಸುವೆ. ನನ್ನ ಮೇಲೆ ಜನರ ವಿಶ್ವಾಸವೇ ನನ್ನ ಶಕ್ತಿ. ಅವರ ನಿರೀಕ್ಷೆ ಗಳಿಗೆ ಸ್ಪಂದಿಸಲು ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು ಶ್ರಮಿಸುತ್ತೇನೆ.
ಸಂದರ್ಶನದ ಪ್ರಮುಖಾಂಶ
- ಚಿಕ್ಕಮಗಳೂರಿನಲ್ಲಿ ಪಕ್ಷದ ಬಲ ಹೆಚ್ಚಿದ್ದು, ಕಳೆದ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಸಾಧ್ಯವಾಗಿದೆ.
- ರಾಜ್ಯ ರಾಜಕೀಯದಲ್ಲಿ ಹೈಕಮಾಂಡ್ ಏನೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ.
- ನಾಯಕತ್ವ ಬದಲಾವಣೆ ಹೈಕಮಾಂಡ್ ತೀರ್ಮಾನ. ನಾವು ಅಭಿವೃದ್ಧಿ ಕೆಲಸಗಳ ಕಡೆ ಗಮನ ಕೊಡುತ್ತೇವೆ.
- ಸುಳ್ಳು ಅಪಪ್ರಚಾರಗಳಿಂದ ಮನಸ್ಸಿಗೆ ನೋವಾಗುತ್ತದೆ. ಆದರೆ ಜನಸೇವೆಯೇ ನನ್ನ ಉದ್ದೇಶ.
- ಜನಸೇವೆಗೆ ನಮ್ಮ ಆಸ್ತಿಗಳನ್ನು ಬಳಕೆ ಮಾಡಿದ್ದೇವೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ನಾಗಿದ್ದಾಗಿನಿಂದ ಪಡೆದ ಟಿಎ/ಡಿಎ ಹಣವನ್ನು ಅನಾಥ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದೇನೆ.
- ರಾಜಕೀಯದಲ್ಲಿ ಧರ್ಮ ತರಬಾರದು. ಎಲ್ಲ ಧರ್ಮಗಳನ್ನೂ ಸಮಾನವಾಗಿ ಗೌರವಿಸುವುದು ನಮ್ಮ ಕರ್ತವ್ಯ. ದೇಶದಲ್ಲಿ ಜಾತಿ-ಧರ್ಮಗಳ ನಡುವೆ ವಿಭಜನೆ ಸೃಷ್ಟಿಸುವ ರಾಜಕೀಯ ತಪ್ಪು.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಬಗ್ಗೆ ಕನಸೇನು?
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವಾಗ, ಪಾವಗಡದಲ್ಲಿ 2000 ಮೆಗಾವಾಟ್ ಸೌರ ವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ರಾಜ್ಯದ ವಿದ್ಯುತ್ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು 2030ರೊಳಗೆ 50 ಗಿಗಾವಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದ್ದು, ಇದಕ್ಕಾಗಿ 27 ಸಬ್‌ಸ್ಟೇಷನ್‌ಗಳನ್ನು ಗುರುತಿಸಿ, ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ಜತೆಗೆ ಬ್ಯಾಟರಿ ಸಂಗ್ರಹ ವ್ಯವಸ್ಥೆ ಮೂಲಕ ವಿದ್ಯುತ್ ಸಂಗ್ರಹಿಸಿ ಪೀಕ್ ಅವಽಯಲ್ಲಿ ಬಳಸುವ ಯೋಜನೆ ರೂಪಿಸಲಾಗಿದೆ.
ರೈತರಿಗೆ ಸಹಾಯವಾಗುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದಲ್ಲಿ ಕುಸುಮ್ ಯೋಜನೆಯಡಿ 40,000 ಪಂಪೆಸೆಟ್‌ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ 24*7 ವಿದ್ಯುತ್ ಪೂರೈಕೆ ನೀಡುವ ಗುರಿ ಹೊಂದಿದ್ದು, ವಿಶೇಷವಾಗಿ ರೈತರಿಗೆ ದಿನದ ವೇಳೆ ನಿರಂತರ ವಿದ್ಯುತ್ ಒದಗಿಸಲು ಯೋಜನೆಗಳು ರೂಪಿಸಲಾಗುತ್ತಿವೆ.
![]()
ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದು ಯಾವುದೇ ರಾಜಕೀಯ ಲಾಭ ಕ್ಕಾಗಿ ಅಲ್ಲ. ನಿರಂತರ ಕಿರುಕುಳ ಮತ್ತು ಒತ್ತಡದಿಂದ ಭಾವನಾತ್ಮಕವಾಗಿ ಆ ಕ್ಷಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಕ್ಷೇತ್ರದ ಅಭಿವೃದ್ಧಿಗೆ ಹಾನಿ ಯಾಗಬಾರದು. ಜನರ ಹಿತವೇ ಮೊದಲ ಆದ್ಯತೆ. ಮುಂದಿನ ಚುನಾವಣೆ ಸ್ಪರ್ಧಿಸಬೇಕಾ ಬೇಡವೇ ಎನ್ನುವ ತೀರ್ಮಾನವನ್ನು ಜನರು ಮತ್ತು ಪಕ್ಷದ ಹೈಕಮಾಂಡ್ʼಗೆ ಬಿಟ್ಟಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ, ಇಲ್ಲ ಹೊಸಬರಿಗೆ ಅವಕಾಶ ಕೊಡಲು ಸಹ ಸಿದ್ಧನಿದ್ದೇನೆ.
- ಟಿ.ಡಿ ರಾಜೇಗೌಡ, ಶಾಸಕ, ಶೃಂಗೇರಿ