Union Budget 2026: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅನುದಾನ ಹೆಚ್ಚಳ? ಬಜೆಟ್‌ನಲ್ಲಿ ರೈತರಿಗೆ ಗುಡ್‌ನ್ಯೂಸ್ ನೀಡುತ್ತ ಮೋದಿ ಸರ್ಕಾರ?
ಸತತ 9ನೇ ಅವಧಿಗೆ ಕೇಂದ್ರ ಮುಂಗಡಪತ್ರವನ್ನು ಸಂಸತ್‌ನಲ್ಲಿ ಮಂಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಜ್ಜಾಗಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಕೇಂದ್ರ ಹೆಚ್ಚಿಸಲಿದ್ದು, ಬಜೆಟ್‌ನಲ್ಲಿ ಈ ಕುರಿತ ಘೋಷಣೆ ಹೊರ ಬೀಳಲಿದೆ ಎನ್ನುವ ನಿರೀಕ್ಷೆ ಮೂಡಿದೆ. ವಾರ್ಷಿಕ 6 ಸಾವಿರ ರುಪಾಯಿ ಧನ ಸಹಾಯ 9 ಸಾವಿರ ರುಪಾಯಿಗೆ ಹೆಚ್ಚಾಗಲಿದೆ.
ಸಾಂದರ್ಭಿಕ ಚಿತ್ರ. -
ದೆಹಲಿ, ಜ. 31: ಕೇಂದ್ರ ಬಜೆಟ್ ಮಂಡನೆಗೆ (Union Budget 2026) ಕ್ಷಣಗಣನೆ ಆರಂಭವಾಗಿದೆ. ಭಾನುವಾರ (ಫೆಬ್ರವರಿ 1) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡಿಸಲಿದ್ದಾರೆ. ಎನ್‌ಡಿಎ ಸರ್ಕಾರದ 3ನೇ ಅವಧಿಯಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಈ ಬಾರಿ ಸತತ 9ನೇ ಅವಧಿಗೆ ಕೇಂದ್ರ ಮುಂಗಡಪತ್ರವನ್ನು ಸಂಸತ್‌ನಲ್ಲಿ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಆಯವ್ಯಯ ಮಂಡನೆಯಾಗಲಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ಸಿಗುವ ಸಾಧ್ಯತೆ ಇದೆ. ಈ ಬಾರಿ ʼವಿಕಸಿತ ಭಾರತ-2027ʼರತ್ತ ಗುರಿಯಾಗಿಸಿಕೊಂಡು ಬಜೆಟ್ ಸಿದ್ಧಪಡಿಲಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ ಹಣ ಹೆಚ್ಚಿಸಲಿದ್ದು, ಬಜೆಟ್‌ನಲ್ಲಿ ಈ ಕುರಿತ ಘೋಷಣೆ ಹೊರ ಬೀಳಲಿದೆ ಎನ್ನುವ ಚರ್ಚೆ ನಡೆಯುತ್ತಿದೆ.
ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಸುಮಾರು 9 ಕೋಟಿ ಫಲಾನುಭವಿಗಳಿದ್ದು, ಬಾರಿಯ ಬಜೆಟ್ ಮೂಲಕ ಮೋದಿ ಸರ್ಕಾರ ಅವರಿಗೆ ಗಡ್‌ನ್ಯೂಸ್ ನೀಡಲಿದೆ ಎನ್ನಲಾಗಿದೆ. ಹಣಕಾಸಿನ ನೆರವನ್ನು ವಾರ್ಷಿಕ 6,000 ರುಪಾಯಿಯಿಂದ 9,000 ರುಪಾಯಿಗೆ ಹೆಚ್ಚಿಸುವ ಸಾಧ್ಯತೆ ಇದೆ. ಹಾಗೆ ನೋಡಿದರೆ 2024ರಲ್ಲೇ ಪಾರ್ಲಿಮೆಂಟರಿ ಸ್ಟಾಡಿಂಗ್ ಕಮಿಟಿ ಅನುದಾನವನ್ನು 12,000 ರುಪಾಯಿಗೆ ಹೆಚ್ಚಿಸುವಂತೆ ಸೂಚಿಸಿತ್ತು. ಜತೆಗೆ ಕೃಷಿ ಸಂಘಟನೆಗಳು ಅನುದಾನವನ್ನು ದ್ವಿಗುಣಗೊಳಿಸುವಂತೆ ಮನವಿ ಸಲ್ಲಿಸಿದ್ದವು.
ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟವು ಚುನಾವಣೆಯಲ್ಲಿ ಗೆದ್ದ ನಂತರ ಕರ್ಪೂರಿ ಠಾಕೂರ್ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಈ ಯೋಜನೆಯಡಿ ಪಿಎಂ ಕಿಸಾನ್ ಫಲಾನುಭವಿಗಳು ವಾರ್ಷಿಕವಾಗಿ ಹೆಚ್ಚುವರಿಯಾಗಿ 3,000 ರುಪಾಯಿ ಪಡೆಯಲಿದ್ದಾರೆ. ಇದೀಗ ಕೇಂದ್ರ ಸರ್ಕಾರವೇ ದೇಶಾದ್ಯಂತ ಧನ ಸಹಾಯದ ಮೊತ್ತವನ್ನು 9,000 ರುಪಾಯಿಗೆ ಹೆಚ್ಚಿಸಬಹುದು ಎಂಬ ನಿರೀಕ್ಷೆ ಮೂಡಿದೆ. ವಿಶ್ವದ ಅತಿದೊಡ್ಡ ಡಿಬಿಟಿ (ನೇರ ಲಾಭ ವರ್ಗಾವಣೆ) ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಈ ಮೊತ್ತವನ್ನು ಒಮ್ಮೆಯೂ ಹೆಚ್ಚಿಸಿಲ್ಲ. ಆದ್ದರಿಂದ ಈ ಬಾರಿ ಅನುದಾನ ಜಾಸ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.
ಆರ್ಥಿಕ ಸಮೀಕ್ಷೆ ಉದ್ದೇಶ, ಮಹತ್ವ ಗೊತ್ತಾ? ಇದನ್ನು ತಯಾರಿಸುವವರು ಯಾರು?
ಹೆಚ್ಚುವರಿ ಅನುದಾನ
ಕೇಂದ್ರ ಸರ್ಕಾರ 4 ತಿಂಗಳಿಗೆ 2 ಸಾವಿರ ರುಪಾಯಿಯಂತೆ ವರ್ಷಕ್ಕೆ 6,000 ರುಪಾಯಿ ಒದಗಿಸುತ್ತಿದೆ. ಅದರ ಜತೆಗೆ ಹಲವು ರಾಜ್ಯಗಳು ರೈತರಿಗೆ ಹೆಚ್ಚುವರಿ ಧನ ಸಹಾಯ ನೀಡುತ್ತಿವೆ. ಮಧ್ಯ ಪ್ರದೇಶ (ಸಿಎಂ ಕಿಸಾನ್ ಕಲ್ಯಾಣ್ ಯೋಜನೆ) ಮತ್ತು ಮಹಾರಾಷ್ಟ್ರ (ನಮೋ ಶೇತ್ಕರಿ ಯೋಜನೆ) ಸರ್ಕಾರಗಳು ಪಿಎಂ ಕಿಸಾನ್ ಫಲಾನುಭವಿಗಳಿಗೆ ತಲಾ 6,000 ರುಪಾಯಿ ಹೆಚ್ಚುವರಿಯಾಗಿ ನೀಡುತ್ತವೆ. ಛತ್ತೀಸ್‌ಗಢ, ಒಡಿಶಾ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನದ ರೈತರಿಗೂ ಹೆಚ್ಚುವರಿ ಸಹಾಯ ಒದಗಿಸಲಾಗುತ್ತಿದೆ.
ಫೆಬ್ರವರಿಯಲ್ಲಿ 22ನೇ ಕಂತು
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಸರ್ಕಾರ ಪ್ರತಿ ವರ್ಷ 3 ಕಂತುಗಳಲ್ಲಿ ಒಟ್ಟು 6,000 ರುಪಾಯಿ ರೈತರಿಗೆ ನೀಡುತ್ತಿದೆ. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಹಾಯದ ಮೊತ್ತವನ್ನು ಹೆಚ್ಚಿಸುವುದಾಗಿ ಘೋಷಿಸಿದರೆ, ಫೆಬ್ರವರಿಯಲ್ಲಿ ಬರಲಿರುವ 22ನೇ ಕಂತಿನಲ್ಲಿ ಹೆಚ್ಚುವರಿ ಹಣ ಲಭಿಸಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಬಜೆಟ್‌ನಲ್ಲಿ ಈ ಘೋಷಣೆ ಮಾಡಿದರೂ, ಅಧಿಸೂಚನೆ ಹೊರಡಿಸಬೇಕಾಗಿರುವುದರಿಂದ ಅದರ ಅನುಷ್ಠಾನಕ್ಕೆ ಸಮಯ ತೆಗೆದುಕೊಳ್ಳಬಹುದು ಎನ್ನವ ವಾದವೂ ಇದೆ. 22ನೇ ಕಂತು ಫೆಬ್ರವರಿ ಅಂತ್ಯಕ್ಕೆ ರೈತರ ಕೈ ಸೇರುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ ರೈಲ್ವೇ ಷೇರುಗಳು
60 ಲಕ್ಷ ಕೋಟಿ ರುಪಾಯಿ ಗಾತ್ರ?
ಈ ಬಾರಿ ನಿರ್ಮಲಾ ಸೀತಾರಾಮನ್ 60 ಲಕ್ಷ ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ಕಳೆದ ವರ್ಷದ ಗಾತ್ರ 50.65 ಲಕ್ಷ ಕೋಟಿ ರುಪಾಯಿ ಆಗಿತ್ತು. ಹೀಗಾಗಿ ಈ ಬಾರಿ 60 ಲಕ್ಷ ಕೋಟಿ ರುಪಾಯಿ ಗಡಿ ದಾಟುವ ಸಾಧ್ಯತೆ ಇದೆ.