ಐಟಿ ವಲಯದಲ್ಲಿ ಶುರುವಾಗಿದೆ ಉದ್ಯೋಗ ಕಳೆದುಕೊಳ್ಳುವ ಆತಂಕ
ಐಟಿ ವಲಯದಲ್ಲೀಗ ತಲ್ಲಣ ಶುರುವಾಗಿದೆ. ಉದ್ಯೋಗ ಕಡಿತದ ಭೀತಿ ಎಲ್ಲರನ್ನೂ ಕಾಡಲಾರಂಭಿಸಿದೆ. ಇದರ ಪರಿಣಾಮ ಈಗ ವಸತಿ ಮಾರುಕಟ್ಟೆಗೂ ತಟ್ಟಿದೆ. ಬೆಂಗಳೂರು, ಹೈದರಾಬಾದ್, ಪುಣೆ, ಎನ್‌ಸಿಆರ್‌ನಾದ್ಯಂತ ಅನೇಕ ಐಟಿ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈಗಾಗಲೇ ಒರಾಕಲ್ ಕಂಪೆನಿಯು ವಜಾ ಪ್ರಕ್ರಿಯೆಯನ್ನು ಆರಂಭಿಸಿದ್ದು, ದೇಶಾದ್ಯಂತ ಈಗಾಗಲೇ 12,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಐಟಿ ಆದಾಯ (IT sector) ಕೇಂದ್ರಿತ ಪ್ರದೇಶವಾಗಿರುವ ಬೆಂಗಳೂರು (Bengaluru), ಹೈದರಾಬಾದ್ (Hyderabad), ಪುಣೆ (Pune), ಎನ್‌ಸಿಆರ್‌ನಾದ್ಯಂತ (NCR) ಈಗ ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ (layoffs) ಭೀತಿಯಲ್ಲಿದ್ದಾರೆ. ಇದು ಈಗ ವಸತಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಮಂದಗತಿಯ ನೇಮಕಾತಿ, ನಿರಂತರ ವಜಾ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಇದು ವಸತಿ ಮಾರುಕಟ್ಟೆ ಮೇಲೆ ಒತ್ತಡವನ್ನು ಉಂಟು ಮಾಡುತ್ತಿದೆ. ಐಟಿ ಕ್ಷೇತ್ರದ ಪ್ರಮುಖ ಸಂಸ್ಥೆ ಎಂದು ಗುರುತಿಸಲ್ಪಟ್ಟಿರುವ ಒರಾಕಲ್ ಕಂಪೆನಿಯಲ್ಲಿ ವಜಾ ಪ್ರಕ್ರಿಯೆಯನ್ನು (Oracle Layoffs) ಹೆಚ್ಚಿಸಲಾಗಿದ್ದು ಟೆಕ್ ಕೇಂದ್ರಗಳಲ್ಲಿ ಆತಂಕ ಹೆಚ್ಚಿಸಿದೆ.
ದೇಶದಲ್ಲಿ ಕಳೆದ ಎರಡು ದಶಕಗಳ ಬಳಿಕ ಐಟಿ ಉದ್ಯೋಗ ರಂಗದಲ್ಲಿ ಬೆಳವಣಿಗೆ ಕುಂಠಿತವಾಗುತ್ತಿದೆ. ಒರಾಕಲ್ ಕಂಪೆನಿಯಲ್ಲಿನ ವಜಾ ಪ್ರಕ್ರಿಯೆಯು ದೇಶಾದ್ಯಂತ ಟೆಕ್ ಉದ್ಯೋಗ ಕೇಂದ್ರಿತ ಪ್ರದೇಶಗಳಲ್ಲಿ ಕಳವಳವನ್ನು ಹೆಚ್ಚಿಸಿದೆ. ವಿಶ್ವದಾದ್ಯಂತ ಕಂಪನಿಯು ಸುಮಾರು 30,000 ಹುದ್ದೆಗಳ ಕಡಿತಕ್ಕೆ ಯೋಜಿಸಿದ್ದು, ಇದರ ಭಾಗವಾಗಿ ಭಾರತದಲ್ಲಿ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾ ಪ್ರಕ್ರಿಯೆಯು ಇನ್ನು ಕೆಲವು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಹೆಚ್ಚಾಗಿ ಐಟಿ ಉದ್ಯೋಗಿಗಳನ್ನೇ ಅವಲಂಬಿಸಿರುವ ವಸತಿ ಮಾರುಕಟ್ಟೆ ಮೇಲೂ ಇದು ಒತ್ತಡವನ್ನು ಉಂಟು ಮಾಡಿದೆ.
Share Market: ಸೆನ್ಸೆಕ್ಸ್ 1,200 ಅಂಕ ಜಿಗಿತ, ನಿಫ್ಟಿ 350 ಅಂಕ ಏರಿಕೆ; ಕಾರಣವೇನು?
ಉದ್ಯೋಗಿಗಳ ವಜಾ ಪ್ರಕ್ರಿಯೆಗೆ ಸಂಬಂಧಿಸಿ ಇದೊಂದು ಸಾಂಸ್ಥಿಕ ಬದಲಾವಣೆ ಎಂದು ಹೇಳಿರುವ ಕಂಪೆನಿಯು ತಕ್ಷಣದಿಂದ ಜಾರಿಗೆ ಬರುವಂತೆ ಉದ್ಯೋಗಗಳನ್ನು ತೆಗೆದುಹಾಕುತ್ತಿದೆ. ಈ ಕುರಿತು ಹಲವು ಉದ್ಯೋಗಿಗಳಿಗೆ ಮಂಗಳವಾರ ಬೆಳಗ್ಗೆ 6 ಗಂಟೆಗೆ ಇ- ಮೇಲ್ ಸಂದೇಶವನ್ನು ಕಳುಹಿಸಲಾಗಿದ್ದು, ಇದರಲ್ಲಿ "ಇಂದು ನಿಮ್ಮ ಕೊನೆಯ ಕೆಲಸದ ದಿನ" ಎಂದು ಉಲ್ಲೇಖಿಸಿದೆ ಎನ್ನಲಾಗಿದೆ.
2005 ಮತ್ತು 2020 ರ ನಡುವೆ,ಐಟಿ ಸಂಸ್ಥೆಗಳು ವಾರ್ಷಿಕವಾಗಿ ಸುಮಾರು ಶೇ. 15ರಷ್ಟು ಆದಾಯವನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿದವು. ಬಳಿಕ ನೇಮಕಾತಿ ಪ್ರಕ್ರಿಯೆಗಳು ಶೇ. 5 ರಿಂದ 6ಕ್ಕೆ ಇಳಿಕೆಯಾದರೂ ಕೋವಿಡ್ ಸಾಂಕ್ರಾಮಿಕದ ಬಳಿಕ ಇದು ಮತ್ತಷ್ಟು ಕಡಿಮೆಯಾಗಿದೆ.
ಐಟಿ ವಲಯದಲ್ಲಿನ ಉದ್ಯೋಗ ಕಡಿತಕ್ಕೆ ಕೃತಕ ಬುದ್ಧಿಮತ್ತೆ ಮುಖ್ಯ ಕಾರಣ ಎನ್ನಲಾಗುತ್ತಿದೆ. 2025ರ ನೀತಿ ಆಯೋಗದ ವರದಿಯ ಪ್ರಕಾರ ಯಾಂತ್ರೀಕರಣದ ಕಾರಣದಿಂದ 2031ರ ವೇಳೆಗೆ ಐಟಿ ಮತ್ತು ಕಾಲ್ ಸೆಂಟರ್‌ಗಳಲ್ಲಿನ ಶೇ. 20ರಷ್ಟು ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಐಟಿ ವಲಯದಲ್ಲಿನ ಉದ್ಯೋಗ ಕಡಿತ ಬೆಂಗಳೂರಿನ ಆಸ್ತಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದೆ. ಈಗಾಗಲೇ ಅನೇಕ ಐಟಿ ಉದ್ಯೋಗಿಗಳು ದೊಡ್ಡ ವಸತಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಹೆಚ್ಚಿನ ಮೌಲ್ಯದ ಆಸ್ತಿ ಖರೀದಿಗಳನ್ನು ಮುಂದೂಡುತ್ತಿದ್ದಾರೆ. ಇನ್ನು ಕೆಲವರು ಹಣಕಾಸಿನ ವಹಿವಾಟುಗಳನ್ನು ಮಿತಿಗೊಳಿಸಲು ಕಡಿಮೆ ವೆಚ್ಚದ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.
ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಎನ್ ಸಿಆರ್ ನಲ್ಲಿ ಐಟಿ ವಲಯವೇ ಈವರೆಗೆ ವಸತಿ ಮಾರುಕಟ್ಟೆಯ ಮುಖ್ಯ ಆದಾಯದ ಮೂಲವಾಗಿತ್ತು. ಆದರೆ ಈಗ ಅದರಲ್ಲಿ ನೇಮಕಾತಿ ನಿಧಾನಗತಿ, ನಿರಂತರ ವಜಾ ಕಾರಣದಿಂದ ವಸತಿ ಮಾರುಕಟ್ಟೆ ಮೇಲೆ ಇದು ಪ್ರಭಾವ ಬೀರಿದೆ. ಈಗಾಗಲೇ ಇದು ಹಣಕಾಸು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.
2026ರಲ್ಲಿ ನಿಫ್ಟಿ ಐಟಿ ಸೂಚ್ಯಂಕವು ಈವರೆಗೆ ಸುಮಾರು ಶೇ. 25ರಷ್ಟು ಕುಸಿತವಾಗಿದೆ. ಇದು ಮುಂದೆ ಐಟಿ, ವಸತಿ ವಲಯದಲ್ಲಿ ಹಣ ದುಬ್ಬರ ಇಳಿತಕ್ಕೆ ಕಾರಣವಾಗಲಿದೆ. ಯಾಂತ್ರೀಕರಣವು ಮಾನವ ಪ್ರಯತ್ನವನ್ನು ಕಡಿಮೆ ಮಾಡುತ್ತದೆ, ಬಿಲ್ ಮಾಡಬಹುದಾದ ಸಮಯಗಳಿಗೆ ಸಂಬಂಧಿಸಿದ ಆದಾಯವನ್ನು ಕುಗ್ಗಿಸುತ್ತದೆ.
ಹೊಸ ಆದಾಯ ತೆರಿಗೆ ಹೊಸ ನಿಯಮ 2026: ಟ್ಯಾಕ್ಸ್‌ನಲ್ಲಿ ಆದ ಬದಲಾವಣೆಗಳು ಏನು? ಇಲ್ಲಿದೆ ಸಂಪೂರ್ಣ ವಿವರ
ಇದರಿಂದ ಅಲ್ಪಾವಧಿಯಲ್ಲಿ ವಾರ್ಷಿಕ ಆದಾಯದಲ್ಲಿ ಶೇ. 2 ರಿಂದ 3 ರಷ್ಟು ಹಣದುಬ್ಬರವಿಳಿತ ಉಂಟಾಗುತ್ತದೆ. ಇದರಿಂದ ಉದ್ಯಮದಲ್ಲಿ ಶೇ. 30ರಷ್ಟು ಉದ್ಯೋಗ ಕಡಿತ ಸಾಧ್ಯತೆಗಳಿವೆ. ಭಾರತೀಯ ಐಟಿ ವಲಯದಿಂದ ಬರುವ ಆದಾಯದಲ್ಲಿ ಸುಮಾರು 80 ಬಿಲಿಯನ್ ಡಾಲರ್ ಕಡಿಮೆಯಾಗಲಿದೆ. 2030ರ ವೇಳೆಗೆ ಇದು 300 ರಿಂದ 400 ಬಿಲಿಯನ್ ಡಾಲರ್ ಹೆಚ್ಚಾಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.