ಕುಸಿದ ಬೆಲೆ: ಮಾರುಕಟ್ಟೆ ಅಂಗಳಕ್ಕೆ ಈರುಳ್ಳಿ ತಂದು ಸುರಿಯುತ್ತಿರುವ ರೈತರು
ಪಶ್ಚಿಮ ಏಷ್ಯಾ ಭಾಗದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮವಾಗಿ ದೇಶದಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದೆ. ಇದರಿಂದ ಕಂಗೆಟ್ಟಿರುವ ರೈತರು ಈರುಳ್ಳಿಯನ್ನು ಮಾರುಕಟ್ಟೆಯ ಅಂಗಳಕ್ಕೆ ತಂದು ಸುರಿಯುತ್ತಿದ್ದಾರೆ. ಈರುಳ್ಳಿ ಬೆಲೆಗಳು ಪ್ರತಿ ಕೆಜಿಗೆ ಸುಮಾರು 1– 4 ರೂ. ಕುಸಿದಿದ್ದು, ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಈರುಳ್ಳಿ ಆಗಮಿಸುತ್ತಲೇ ಇದೆ. ಹೀಗಾಗಿ ಈರುಳ್ಳಿ ಬೆಲೆಗಳು ಮತ್ತಷ್ಟು ಕುಸಿತವಾಗುವ ಆತಂಕ ಎದುರಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಯುಎಸ್ ಮತ್ತು ಇರಾನ್ ನಡುವಿನ ಸಂಘರ್ಷದ (US-Iran war) ಪರಿಣಾಮ ಈರುಳ್ಳಿ ಮಾರುಕಟ್ಟೆ (Onion market) ಮೇಲೆ ತಟ್ಟಿದೆ. ಈರುಳ್ಳ ಬೆಲೆಯೂ (Onion prices) ತೀವ್ರವಾಗಿ ಕುಸಿತವನ್ನು ಕಾಣುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಒತ್ತಡವನ್ನು ಉಂಟು ಮಾಡಿದೆ. ರೈತರು ಭಾರಿ ಪ್ರಮಾಣದಲ್ಲಿ ಈರುಳ್ಳಿಯನ್ನು ತಂದು ಮಂಡಿಯಲ್ಲಿ ಸುರಿಯುತ್ತಿದ್ದಾರೆ. ಈರುಳ್ಳಿ ಬೆಲೆಯು ಪ್ರತಿ ಕೆಜಿಗೆ ಸುಮಾರು 1– 4 ರೂ. ಕುಸಿತವಾಗಿದ್ದು, ಕ್ವಿಂಟಾಲ್‌ಗೆ ಸರಿಸುಮಾರು 300 ರೂ. ನಿಂದ 1,000 ರೂ. ವರೆಗೆ ಇಳಿಕೆ ಕಂಡಿದೆ. ಆದರೂ ಮಂಡಿಗಳಿಗೆ ಈರುಳ್ಳಿಯ ಆಗಮನವು ನಿರಂತರವಾಗಿ ಮುಂದುವರಿದಿದೆ.
ದೇಶದ ಮಂಡಿಗಳಲ್ಲಿ ಈರುಳ್ಳಿ ಪ್ರವಾಹ ಉಂಟಾಗಿದೆ. ಬೆಲೆಗಳಲ್ಲಿ ತೀವ್ರ ಕುಸಿತವಾಗುತ್ತಿದ್ದು, ಪೂರೈಕೆ ನಿರಂತರವಾಗಿ ಮುಂದುವರಿದಿದೆ. ದೇಶೀಯ ಪೂರೈಕೆ ಸ್ಥಿರವಾಗಿದ್ದು, ಸಂಘರ್ಷದ ಪರಿಣಾಮ ವಿದೇಶಗಳಿಗೆ ರಫ್ತು ಮಾಡಲು ತೊಂದರೆಗಳು ಉಂಟಾಗಿವೆ. ಇದು ಮಾರುಕಟ್ಟೆ ಮೇಲೆ ಹೆಚ್ಚಿನ ಒತ್ತಡವನ್ನು ಉಂಟು ಮಾಡಿದೆ. ಒಂದೆಡೆ ಕುಸಿಯುತ್ತಿರುವ ಬೆಲೆ, ಇನ್ನೊಂದೆಡೆ ಮಾರಾಟಕ್ಕೆ ತೊಂದರೆ, ಮತ್ತೊಂದೆಡೆ ಪೂರೈಕೆಯಲ್ಲಿ ಹೆಚ್ಚಳ ಮಾರುಕಟ್ಟೆಯಲ್ಲಿ ಒತ್ತಡ ಸೃಷ್ಟಿಸಿದೆ.
ಹೊರ್ಮುಜ್ ಜಲ ಮಾರ್ಗದಲ್ಲಿ ಉಂಟಾಗಿರುವ ಅಡೆತಡೆಗಳ ಪರಿಣಾಮವಾಗಿ ಪಶ್ಚಿಮ ಏಷ್ಯಾ ಭಾಗಕ್ಕೆ ಈರುಳ್ಳಿ ರಫ್ತು ನಿಧಾನವಾಗಿದೆ. ಸಾಮಾನ್ಯವಾಗಿ ಗಲ್ಫ್ ರಾಷ್ಟ್ರಗಳು ಭಾರತೀಯ ಈರುಳ್ಳಿಗೆ ಅತ್ಯಂತ ಪ್ರಮುಖ ಮತ್ತು ಸ್ಥಿರ ಮಾರುಕಟ್ಟೆಯಾಗಿದೆ.
ಇವು ದೇಶದಿಂದ ಹೆಚ್ಚುವರಿ ಉತ್ಪಾದನೆಯನ್ನು ಖರೀದಿ ಮಾಡಿ ಈರುಳ್ಳಿ ಬೆಲೆ ಕುಸಿತವಾಗದಂತೆ ತಡೆಯುತ್ತದೆ. ಆದರೆ ಈಗ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಈರುಳ್ಳಿ ವ್ಯಾಪಾರಕ್ಕೆ ಅಡ್ಡಿಯಾಗಿದೆ. ಇದರಿಂದ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಹೀಗಾಗಿ ಭಾರತದ ಈರುಳ್ಳಿ ಕೊಯ್ಲಿನ ಹೆಚ್ಚಿನ ಪಾಲು ದೇಶೀಯ ಮಾರುಕಟ್ಟೆಗಳಿಗೆ ಆಗಮಿಸಿದ್ದು, ಅತಿಯಾದ ಪೂರೈಕೆಯಿಂದ ಬೆಲೆ ಕುಸಿತವಾಗಿದೆ.
ಈರುಳ್ಳಿ ಬೆಲೆ ಕುಸಿತವಾಗಿರುವುದರಿಂದ ರೈತರು ಅಪಾರ ಪ್ರಮಾಣದ ಈರುಳ್ಳಿಗಳನ್ನು ತಂದು ಮಂಡಿಗಳಿಗೆ ಸುರಿಯುತ್ತಿದ್ದಾರೆ. ಉತ್ಪಾದನೆ, ಕೊಯ್ಲು ಮತ್ತು ಸಾರಿಗೆ ವೆಚ್ಚ ಭರಿಸುವುದು ಅವರಿಗೆ ಕಷ್ಟವಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ಪ್ರದೇಶಗಳಲ್ಲಿನ ರೈತರು ದಾಸ್ತಾನಿನ ಸಂಪೂರ್ಣ ವೆಚ್ಚವನ್ನು ಭರಿಸಲಾಗದೆ ಮಾರುಕಟ್ಟೆ ಅಂಗಳಗಳಿಗೆ ಈರುಳ್ಳಿಯನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ಅಪಾರ ಪ್ರಮಾಣದ ಈರುಳ್ಳಿಗಳು ವ್ಯರ್ಥವಾಗಿವೆ.
ಭಾರತದಲ್ಲಿ ಈರುಳ್ಳಿ ಬಿಕ್ಕಟ್ಟಿಗೆ ಕೇವಲ ಜಾಗತಿಕ ಸಂಘರ್ಷ ಮಾತ್ರ ಕಾರಣವಲ್ಲ. ದೇಶದಲ್ಲಿ ಹೆಚ್ಚಿನ ಉತ್ಪಾದನೆ, ದಾಸ್ತಾನು ವ್ಯವಸ್ಥೆಯ ಕೊರತೆ, ಹವಾಮಾನ ಪರಿಸ್ಥಿತಿಗಳು ಕೂಡ ಕಾರಣವಾಗಿದೆ.