RBI MPC Meeting April 2026: ಶೇಕಡಾ 5.25ರಲ್ಲಿಯೇ ಮುಂದುವರಿಯಲಿದೆ ರೆಪೋ ದರ; ಆರ್‌ಬಿಐಯಿಂದ ಘೋಷಣೆ
RBI MPC Meeting: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಅಥವಾ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ರೆಪೋ ದರ ಹಿಂದಿನಂತೆ ಶೇ. 5.25ರಲ್ಲಿಯೇ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ -
ದೆಹಲಿ, ಏ. 8: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆ ರೆಪೋ ದರ (Repo Rate) ಅಥವಾ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ರೆಪೋ ದರ ಹಿಂದಿನಂತೆ ಶೇ. 5.25ರಲ್ಲಿಯೇ ಮುಂದುವರಿಯಲಿದೆ. ರೆಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬ ಮಾನಿಟರಿ ಪಾಲಿಸಿ ಕಮಿಟಿಯ (Monetary Policy Committee) ಬಹುತೇಕ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ತಿಳಿಸಿದ್ದಾರೆ.
6 ಸದಸ್ಯರ ಹಣಕಾಸು ನೀತಿ ಸಮಿತಿಯು 2 ದಿನಗಳ ಕಾಲ ಚರ್ಚೆ ನಡೆಸಿದ ನಂತರ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆ ದ್ವಿಮುಖ ಕದನ ವಿರಾಮ ಘೋಷಿಸಿದ ಕೆಲವೇ ಗಂಟೆಗಳ ನಂತರ ರೆಪೋ ದರ ಘೋಷಣೆಯಾಗಿದೆ. ಎರಡು ವಾರಗಳ ಒಪ್ಪಂದವು ಜಾಗತಿಕ ಮಾರುಕಟ್ಟೆ ಏರಿಕೆಗೆ ಕಾರಣವಾಗಿದ್ದು, ಭಾರತೀಯ ಷೇರು ಮಾರುಕಟ್ಟೆಯಲ್ಲೂ ಸಕಾರಾತ್ಮಕ ಫಲಿತಾಂಶ ಕಂಡು ಬಂದಿದೆ. ಆರ್‌ಬಿಐ ಗವರ್ನರ್ ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿಯು ಪ್ರತಿ 2 ತಿಂಗಳಿಗೊಮ್ಮೆ ಸಭೆ ಸೇರಿ ಪ್ರಮುಖ ಆರ್ಥಿಕ ಸೂಚಕಗಳನ್ನು ಪರಿಶೀಲಿಸಲು ಸಭೆ ಸೇರುತ್ತದೆ. ಆರ್‌ಬಿಐ 2025ರ ಆಗಸ್ಟ್, ಅಕ್ಟೋಬರ್ ಮತ್ತು 2026ರ ಫೆಬ್ರವರಿಯ ಹಣಕಾಸು ನೀತಿಗಳಲ್ಲಿ ಘೋಷಿಸಿದ ಅದೇ ದರವನ್ನು ಈ ಬಾರಿಯೂ ಮುಂದುವರಿಸಿದೆ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುದ್ದಿಗೋಷ್ಠಿ:
#RBI announces its first bi-monthly Monetary Policy Statement for financial year 2026-27.@RBI
— SansadTV (@sansad_tv) April 8, 2026
Watch Here: https://t.co/m2Vc6AyXbC pic.twitter.com/rG5A72856h
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದೇನು?
- ಈ ಹಣಕಾಸು ವರ್ಷದಲ್ಲಿ (2026-27) ಹಣದುಬ್ಬರ ಶೇ. 4.6 ಇರಬಹುದು. ಆದರೆ ಏರಿಕೆಯಾಗುವ ಅಪಾಯವಿದೆ.
- ಹವಾಮಾನ ವೈಪರೀತ್ಯದಿಂದಾಗಿ ಆಹಾರ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ.
- ಕಚ್ಚಾ ತೈಲದ ಬೆಲೆ ಏರಿಕೆಯಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಾಗಬಹುದು.
2027ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 6.9ರಷ್ಟಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಅಂದರೆ ಶೇ 7.4ರ ಅಂದಾಜಿಗಿಂತ ಕಡಿಮೆ ದಾಖಲಾಗಿದೆ. ಆರ್‌ಬಿಐ ಎಂಪಿಸಿ 2027ನೇ ಹಣಕಾಸು ವರ್ಷದಲ್ಲಿ ಮೊದಲ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.9ರಿಂದ ಶೇಕಡಾ 6.8ಕ್ಕೆ ಪರಿಷ್ಕರಿಸಿದೆ.
ಇರಾನ್ ಯುದ್ಧ ಹೊರತಾಗಿಯೂ ಬಂಗಾರದ ದರ ಇಳಿದಿದ್ದೇಕೆ?
ರೆಪೋ ದರ ಎಂದರೇನು?
ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಅಂದರೆ ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದುವೇ ರೆಪೋ ರೇಟ್. ಕೆಲವೊಮ್ಮೆ ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.
ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.