ಗಡಿಯಾಚೆಗಿನ ಭಯೋತ್ಪಾದನೆ ಸಂಚು: ಅಸ್ಸಾಂನಲ್ಲಿ ಇಬ್ಬರ ಬಂಧನ, ಬಂಗಾಳ, ಕೇರಳಂನಲ್ಲಿ ತೀವ್ರ ಶೋಧ
ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿ ಸಂಚು ರೂಪಿಸುವ ಜಾಲದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ರಾಷ್ಟ್ರೀಯ ತನಿಖಾ ಸಂಸ್ಥೆ ಅಸ್ಸಾಂ, ಬಂಗಾಳ, ಕೇರಳಂನಲ್ಲಿ ತೀವ್ರ ಶೋಧ ನಡೆಸಿದೆ. ಒಟ್ಟು 16 ಸ್ಥಳಗಳಲ್ಲಿ ದಾಳಿ ನಡೆಸಿರುವ ತನಿಖಾ ಸಂಸ್ಥೆಯ ಅಧಿಕಾರಿಗಳು ಅಸ್ಸಾಂನಲ್ಲಿ ಜಿಹಾದಿ ಸಂಘಟನೆಯ ಸಂಪರ್ಕ ಹೊಂದಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಅಸ್ಸಾಂ (assam), ಪಶ್ಚಿಮ ಬಂಗಾಳ (west bengal) ಮತ್ತು ಕೇರಳಂನ (keralam) ಒಟ್ಟು 16 ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (National Investigation Agency) ಅಧಿಕಾರಿಗಳು ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನಾ ಸಂಚು ಕುರಿತು ಹೆಚ್ಚಿನ ಮಾಹಿತಿ ಪಡೆಯುವ ಸಲುವಾಗಿ ಈ ದಾಳಿ ನಡೆದಿದೆ. ಅಸ್ಸಾಂನಲ್ಲಿ ಜಿಹಾದಿ ಸಂಘಟನೆಯ ಸಂಪರ್ಕ ಹೊಂದಿದ್ದ ಇಬ್ಬರನ್ನು ಬಂಧಿಸಲಾಗಿದೆ. ಬಾಂಗ್ಲಾದೇಶದ ಜಮಾತ್ ಉಲ್ ಮುಜಾಹಿದ್ದೀನ್ (Jamaat-ul-Mujahideen Bangladesh)ನ ಶಾಖೆಯಾಗಿ ಗುರುತಿಸಿಕೊಂಡಿರುವ ಇಮಾಮ್ ಮಹ್ಮದರ್ ಕಾಫಿಲಾಕ್ಕೆ (Imam Mahmuder Kafila) ಸಂಬಂಧಿಸಿದ ಚಟುವಟಿಕೆಗಳು, ಶಂಕಿತ ಸಂಪರ್ಕಗಳನ್ನು ಪತ್ತೆ ಮಾಡಲು ಶೋಧ ಕಾರ್ಯವನ್ನು ನಡೆಸಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳವಾರ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಕೇರಳಂನಾದ್ಯಂತ ಒಟ್ಟು 16 ಸ್ಥಳಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ನಿಷೇಧಿತ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶದ ಶಾಖೆಯಾಗಿರುವ ಇಮಾಮ್ ಮಹ್ಮದರ್ ಕಾಫಿಲಾಕ್ಕೆ ಸಂಬಂಧಿಸಿ ನಡೆಯುತ್ತಿರುವ ಚಟುವಟಿಕೆಗಳನ್ನು ಪತ್ತೆ ಮಾಡಲು ಈ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಅಸ್ಸಾಂನ ಬಾರ್ಪೇಟಾ ರಸ್ತೆ ಬಳಿ ನಡೆಸಿದ ಕಾರ್ಯಾಚರಣೆ ವೇಳೆ ಜಿಹಾದಿ ಭಯೋತ್ಪಾದಕ ಸಂಪರ್ಕಗಳ ಆರೋಪದ ಮೇಲೆ ಇಯಾಕುಬ್ ಅಲಿ ಮತ್ತು ಮುಸ್ತಫಿಜುರ್ ರೆಹಮಾನ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಶೀಘ್ರದಲ್ಲೇ ರದ್ದಾಗಲಿದೆ 1.58 ಕೋಟಿ ಪಡಿತರ ಚೀಟಿ; ಯಾಕೆ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ರಾಷ್ಟ್ರೀಯ ತನಿಖಾ ಸಂಸ್ಥೆಯು ದಾಳಿ ನಡೆಸಿರುವ 16 ಸ್ಥಳಗಳಲ್ಲಿ 10 ಅಸ್ಸಾಂ, ಐದು ಪಶ್ಚಿಮ ಬಂಗಾಳ ಮತ್ತು ಒಂದು ಕೇರಳಂನಲ್ಲಿವೆ. ಇಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು, ಐಎಂಕೆ ನೆಟ್‌ವರ್ಕ್‌ನೊಂದಿಗೆ ಸಂಬಂಧಿಸಿದ ಸಂಪರ್ಕಗಳ ಕುರಿತು ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ.
🚨 BREAKING: NIA launches operation in Barpeta Road, Assam. Two persons, identified as Iyakub Ali and Musatfizur Rehman, arrested in connection with alleged jihadi terror links. Further details awaited.#Assam #NIA #BarpetaRoad pic.twitter.com/X2D6GC1V5a
— atanu bhuyan (@atanubhuyan) September 29, 2026
ಇಮಾಮ್ ಮಹ್ಮುದರ್ ಕಫಿಲಾವು ಭಾರತದಾದ್ಯಂತ ಯುವಕರನ್ನು ಉಗ್ರಗಾಮಿ ಸಿದ್ಧಾಂತದತ್ತ ಪ್ರೇರೇಪಿಸುವುದು ಮತ್ತು ಭಾರತದಲ್ಲಿ ಸಂಘಟನೆಯ ಜಾಲವನ್ನು ವಿಸ್ತರಿಸುವ ಪ್ರಯತ್ನ ನಡೆಸುತ್ತಿದೆ ಎನ್ನುವುದು ಗುಪ್ತಚರ ವಿಭಾಗದ ಮಾಹಿತಿ ದೊರೆತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಅಸ್ಸಾಂನಲ್ಲಿ ಐಎಂಕೆ ನೆಟ್‌ವರ್ಕ್‌ನ ಚಟುವಟಿಕೆ, ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳೊಂದಿಗೆ ಅದರ ಶಂಕಿತ ಸಂಪರ್ಕಗಳ ಕುರಿತು ತೀವ್ರ ಶೋಧ ನಡೆಸಲಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತನಿಖಾಧಿಕಾರಿಗಳು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಹಿಂದೆ ಏನಾಗಿತ್ತು?
ಇಮಾಮ್ ಮಹ್ಮದರ್ ಕಾಫಿಲಾಕ್ಕೆ ಸಂಬಂಧಿಸಿ ಗುವಾಹಟಿಯಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದಲ್ಲಿ 11 ಮಂದಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇದೀಗ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ. 11 ಮಂದಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, 1967ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಿಷೇಧಿತ ಸಂಘಟನೆಯ ಚಟುವಟಿಕೆಗಳನ್ನು ಭಾರತದಲ್ಲಿ ಮುಂದುವರಿಸುವ ಸಲುವಾಗಿ ಜೆಎಂಬಿಯ ಹಿರಿಯ ಸದಸ್ಯ ಇಮಾಮ್ ಮಹ್ಮುದ್ ಹಬೀಬುಲ್ಲಾ ಇಎಂಕೆಯನ್ನು ಸ್ಥಾಪಿಸಿದ್ದಾನೆ . ಇದು ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ತ್ರಿಪುರಾ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಭಾರತ ವಿರೋಧಿ ಪ್ರಚಾರವನ್ನು ಹರಡಲು ರಹಸ್ಯ ಸಭೆಗಳು, ಧಾರ್ಮಿಕ ಬೋಧನೆ ಸ್ಥಳಗಳು, ಉಗ್ರಗಾಮಿ ಸಾಹಿತ್ಯ ಮತ್ತು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಆರೋಪಿಸಿದೆ.
ಉ.ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಭಾಗಕೆ ಪ್ರತ್ಯೇಕ ತಂಡ: ಬರ ಅಧ್ಯಯನಕ್ಕೆ ಕೇಂದ್ರದ 3 ತಂಡ
ಹಿಂದಿನ ಬಾರಿ ತನಿಖೆಯ ವೇಳೆ ಪಿತೂರಿಗೆ ಸಂಬಂಧಿಸಿ ಸಾಕ್ಷ್ಯಗಳನ್ನು ಒದಗಿಸುವ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಸ್ಸಾಂನಲ್ಲಿ ಐಎಂಕೆ ಚಟುವಟಿಕೆಗಳನ್ನು ನಸಿಮುದ್ದೀನ್, ತ್ರಿಪುರಾದಲ್ಲಿ ಜಗೀರ್ ಮಿಯಾ ಮುನ್ನಡೆಸುತ್ತಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.