ಹುಟ್ಟು ಹಬ್ಬ ಆಚರಿಸಿ ಐದು ವರ್ಷದ ಪುತ್ರಿಯನ್ನು ಕೊಂದು ಶವ ಫ್ರಿಡ್ಜ್‌ನಲ್ಲಿಟ್ಟ ತಂದೆ; ತಾನೂ ಆತ್ಮಹತ್ಯೆಗೆ ಶರಣು
Crime News: 40 ವರ್ಷದ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಪುತ್ರಿಯನ್ನು ಕೊಂದು ಮೃತದೇಹವನ್ನು ಫ್ರಿಡ್ಜ್‌ನಲ್ಲಿರಿಸಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಪುತ್ರಿ ಹಿಮಾಂಶಿಯನ್ನು ಉಸಿರುಗಟ್ಟಿಸಿ, ನಂತರ ಆಕೆಯ ದೇಹವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ನೇಣು ಬಿಗಿದುಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ -
ಅಹಮದಾಬಾದ್, ಸೆ.18: 40 ವರ್ಷದ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಪುತ್ರಿಯನ್ನು ಕೊಂದು ಮೃತದೇಹವನ್ನು ಫ್ರಿಡ್ಜ್‌ನಲ್ಲಿರಿಸಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಗುಜರಾತ್‌ನ (Gujarat) ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ತಂದೆಯು ತನ್ನ ಪುತ್ರಿಯನ್ನೇ ಕೊಲೆ ಮಾಡಿ, ತಾನು ನೇಣಿಗೆ ಕೊರಳೊಡ್ಡಿದ್ದಾನೆ. (Crime News) ಬಲೂನುಗಳು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಲ್ಪಟ್ಟ ಕೋಣೆಯೊಳಗೆ ಈ ಭಯಾನಕ ಘಟನೆ ನಡೆದಿದೆ .
ಮೃತ ಕಿಶೋರ್ ಧನಕ್ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದಾನೆ. ತನ್ನ ಮರಣದ ನಂತರ ಮಗಳು ಒಂಟಿಯಾಗಬಾರದು ಅನ್ನೋ ಕಾರಣದಿಂದ ಆಕೆಯನ್ನು ಸಾಯಿಸಿ ರೆಫ್ರಿಜರೇಟರ್‌ನಲ್ಲಿಟ್ಟಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾನೆ. ಪುತ್ರಿ ಹಿಮಾಂಶಿಯನ್ನು ಉಸಿರುಗಟ್ಟಿಸಿ, ನಂತರ ಆಕೆಯ ದೇಹವನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ನೇಣು ಬಿಗಿದುಕೊಂಡಿದ್ದಾನೆ ಎಂದು ರಾಜುಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ನಯನಾ ಗೊರಾಡಿಯಾ ತಿಳಿಸಿದ್ದಾರೆ.
ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರಕಾರ, ಧನಕ್ ಮೂರು ಆತ್ಮಹತ್ಯಾ ಪತ್ರಗಳನ್ನು ಬರೆದಿಟ್ಟು ಹಾಸಿಗೆಯ ಮೇಲೆ ಇಟ್ಟಿದ್ದ. ಒಂದು ಪತ್ರದಲ್ಲಿ, ವೈಯಕ್ತಿಕ ಸಾಲವನ್ನು ತೆಗೆದುಕೊಂಡು ಹಣವನ್ನು ನಿರ್ಮಾಣ ಕಾರ್ಯದಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದ್ದರು ಎಂದು ಧನಕ್ ಪತ್ನಿ ಮಂಜುಬೆನ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ.
ನಾಯಿಗಳಿಗೆ ಆಹಾರವಾದ ಅತ್ಯಾಚಾರ ಸಂತ್ರಸ್ತೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ
ಮೃತರಿಗೆ ರೂ. 7.25 ಲಕ್ಷ ಹಣ ಬರಬೇಕಿತ್ತು. ಆದರೆ ಅವರ ಜೊತೆ ವ್ಯವಹಾರ ಮಾಡುತ್ತಿದ್ದ ಸ್ನೇಹಿತರು ಹಣ ನೀಡಿರಲಿಲ್ಲ. ಹಣದ ಕೊರತೆಯಿಂದ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಸಮಸ್ಯೆಗೆ ಪರಿಹಾರ ಕಾಣದೆ, ತಮ್ಮ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.
ಎರಡನೇ ಪತ್ರದಲ್ಲಿ, ತನ್ನ ಮರಣದ ನಂತರ ಮಗು ತೊಂದರೆಗೊಳಗಾಗುವುದನ್ನು ಬಯಸದ ಕಾರಣ ತಾನು ಮಗುವನ್ನು ಕೊಂದಿದ್ದೇನೆ ಎಂದು ಬರೆದಿದ್ದರೆ, ಇನ್ನೊಂದು ಪತ್ರದಲ್ಲಿ, ಕ್ಷಮೆಯಾಚಿಸಿ ಮಗುವಿನ ದೇಹವನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದ್ದಾಗಿ ಬರೆದಿದ್ದಾನೆ. ಸೆಪ್ಟೆಂಬರ್ 14 ರಂದು ತನ್ನ ತಂದೆಯ ಮನೆಗೆ ಹೋಗಿದ್ದ ಮಂಜುಬೆನ್, ಧನಕ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಅವರು ಫೋನ್ ಕರೆಗಳಿಗೆ ಉತ್ತರಿಸಲಿಲ್ಲ.
ನಂತರ ಬುಧವಾರ (ಸೆ.16) ಸಂಜೆ ಧನಕ್‌ನನ್ನು ವಿಚಾರಿಸಲು ತನ್ನ ಸಹೋದರನನ್ನು ಮಂಜುಬೆನ್ ಕಳುಹಿಸಿದ್ದಳು. ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಬಾಗಿಲು ಒಡೆದು ನೋಡಿದಾಗ ಧನಕ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಸಾಯುವ ಮುನ್ನ ಕೋಣೆಯನ್ನು ಬಲೂನುಗಳು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಲಾಗಿತ್ತು. ಧನಕ್ ತನ್ನ ಮಗಳಿಗೆ ಬಿಳಿ ಬಟ್ಟೆಗಳನ್ನು ತೊಡಿಸಿ, ಅವಳ ತಲೆಯ ಮೇಲೆ ದುಪ್ಪಟ್ಟಾ ಇಟ್ಟು, ರೆಫ್ರಿಜರೇಟರ್‌ನಲ್ಲಿ ಕುಶನ್‌ಗಳನ್ನು ಇಟ್ಟಿದ್ದಾನೆ.
ಗನ್ ತೋರಿಸಿ ಬಿಜೆಪಿ ಮಾಜಿ ಶಾಸಕನಿಂದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಸಾಥ್ ನೀಡಿದ ಪೊಲೀಸ್ ಸಿಬ್ಬಂದಿ ಮೇಲೂ ಎಫ್ಐಆರ್
ಅವನು ಕೊನೆಯ ಬಾರಿಗೆ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಬಯಸಿದ್ದ ಎಂಬುದು ಅಲಂಕಾರವನ್ನು ನೋಡಿದರೆ ತಿಳಿದುಬಂದಿದೆ. ಕೋಣೆಯಲ್ಲಿ ಬಲೂನುಗಳು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಲ್ಪಟ್ಟ ವಿಗ್ರಹಗಳೊಂದಿಗೆ ಪೂಜೆಯನ್ನು ಸಹ ಮಾಡಲಾಗಿತ್ತು. ಕೊಠಡಿ ಮತ್ತು ರೆಫ್ರಿಜರೇಟರ್‌ನಲ್ಲಿ ಚಾಕೊಲೇಟ್‌ಗಳನ್ನು ಸಹ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಹುಟ್ಟುಹಬ್ಬವಲ್ಲದಿದ್ದರೂ, ಜನ್ಮದಿನದ ಶುಭಾಶಯಗಳು ಹಿಮಾಂಶಿ ಎಂದು ಬರೆದ ಕಾಗದವನ್ನು ರೆಫ್ರಿಜರೇಟರ್ ಮೇಲೆ ಇರಿಸಲಾಗಿತ್ತು ಎಂದು ಪೊಲೀಸರು ಹೇಳಿದರು. ಇನ್ನು ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.