ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿವಿ ನೋಡುವ ವಿಚಾರದಲ್ಲಿ ಕಿರಿಕ್‌: 17 ವರ್ಷದ ಪುತ್ರಿಯನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಶಿಕ್ಷಕ; ಸಾಕ್ಷಿ ನಾಶಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದು ಹೇಗೆ?

Crime news: ಟಿವಿ ನೋಡುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಶಿಕ್ಷಕನೊಬ್ಬ ತನ್ನ 17 ವರ್ಷದ ಮಗಳ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯ ನಂತರ ಅಪರಾಧಿ ಶಿಕ್ಷಕ ಪುರುಷೋತ್ತಮ್ ದೇಹದ ಬಳಿ ಬಹಳ ಹೊತ್ತು ಕುಳಿತಿದ್ದ. ನಂತರ ಬೆಳಗ್ಗೆ ತನ್ನ ಪತ್ನಿಗೆ ಮಾಹಿತಿ ನೀಡಿದ್ದ.

17 ವರ್ಷದ ಪುತ್ರಿಯನ್ನು ಬ್ಯಾಟ್‌ನಿಂದ ಹೊಡೆದು ಕೊಂದ ಶಿಕ್ಷಕ

ಜೆಮಿನಿ ಎಐ ರಚಿತ ಚಿತ್ರ -

Priyanka P
Priyanka P Oct 6, 2026 7:09 PM

ಮುಂಬೈ, ಅ. 6: ಟಿವಿ ನೋಡುವ ವಿಚಾರದಲ್ಲಿ ನಡೆದ ಜಗಳದ ಬಳಿ ಶಿಕ್ಷಕನೊಬ್ಬ ತನ್ನ 17 ವರ್ಷದ ಮಗಳ ತಲೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಹಾರಾಷ್ಟ್ರ (Maharashtra)ದ ಸತಾರಾ ಜಿಲ್ಲೆಯಲ್ಲಿ ನಡೆದಿದೆ (Crime news). ಮೃತಳನ್ನು ಆರ್ಯ ಕದಮ್ ಎಂದು ಗುರುತಿಸಲಾಗಿದೆ. ಶನಿವಾರ (ಅಕ್ಟೋಬರ್‌ 3) ರಾತ್ರಿ ಮನೆಯಲ್ಲಿ ಟಿವಿ ನೋಡುವ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಯ ತನ್ನ ಕಿರಿಯ ಸಹೋದರ ಮತ್ತು ಸಹೋದರಿಯೊಂದಿಗೆ ಜಗಳವಾಡಿದ್ದಳು. ಈ ಸಮಯದಲ್ಲಿ, ಆರ್ಯ ತನ್ನ ಕಿರಿಯ ಸಹೋದರಿಯ ಕಣ್ಣಿಗೆ ಹೊಡೆದಿದ್ದಾಳೆ ಎನ್ನಲಾಗಿದೆ.

ಈ ವೇಳೆ ಶಿಕ್ಷಕ ತಂದೆ ಪುರುಷೋತ್ತಮ್ ಆರ್ಯಳನ್ನು ಗದರಿಸಿದ್ದಾನೆ. ಇದರಿಂದ ಕೋಪಗೊಂಡ ಆರ್ಯ ಆಕ್ರಮಣಕಾರಿಯಾಗಿ ಬ್ಯಾಟ್ ಹಿಡಿದು ತಂದೆಯ ಕಡೆಗೆ ಓಡಿಹೋಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ. ಇದರಿಂದ ಕೋಪಗೊಂಡ ಪುರುಷೋತ್ತಮ್ ತನ್ನ ಮಗಳು ಎನ್ನುವಿದನ್ನು ಮರೆತು ಅದೇ ಬ್ಯಾಟ್ ಅನ್ನು ಕಸಿದುಕೊಂಡು ಆರ್ಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ಗಾಯಗಳಿಂದಾಗಿ ಆರ್ಯ ಸ್ಥಳದಲ್ಲೇ ಮೃತಪಟ್ಟೊದ್ದಾಳೆ ಎಂದು ಮೂಲಗಳು ತಿಳಿಸಿವೆ.

ಕೊಲೆಯ ನಂತರ, ಪುರುಷೋತ್ತಮ್ ದೇಹದ ಬಳಿ ಬಹಳ ಹೊತ್ತು ಕುಳಿತಿದ್ದ. ಬೆಳಗ್ಗೆ ತನ್ನ ಪತ್ನಿಗೆ ಮಾಹಿತಿ ನೀಡಿದ್ದ. ನಂತರ ನೆಲದ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಸಾಕ್ಷ್ಯಗಳನ್ನು ಅಳಿಸಿಹಾಕಲು ಯತ್ನಿಸಿದ್ದ. ಆರ್ಯನ ಟಿ-ಶರ್ಟ್ ಅನ್ನು ಮೂರು ಬಾರಿ ತೊಳೆದು ರಕ್ತವನ್ನು ಸಂಪೂರ್ಣ ತೆಗೆದಿದ್ದ. ರಕ್ತಸಿಕ್ತ ಬ್ಯಾಟನ್ನು ಚಾವಣಿಗೆ ಎಸೆದು ಯಾವುದೇ ಸಾಕ್ಷಿ ಸಿಗದಂತೆ ನೋಡಿಕೊಂಡಿದ್ದ.

ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಗ್ರೆನೇಡ್ ಸ್ಫೋಟ: ಕೈ ಕಳೆದುಕೊಂಡ ಬಾಲಕ

ಮರುದಿನ ಬೆಳಗ್ಗೆ ಸಂಬಂಧಿಕರು ಮತ್ತು ನೆರೆಹೊರೆಯವರು ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಹುಡುಗಿ ತನ್ನ ತಲೆಗೆ ತಾನೇ ಹೊಡೆದಿದ್ದಾಳೆ ಎಂದು ಹೇಳುವ ಮೂಲಕ ಮನೆಯವರು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದರು. ಆದರೆ ಪೊಲೀಸರು ವಿಚಾರಿಸಿದಾಗ, ತಾಯಿ ಶೀಲಾ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ನಂತರ ಪುರುಷೋತ್ತಮ್‌ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಚಾವಣಿಗೆ ಎಸೆದ ಬ್ಯಾಟ್ ವಶಪಡಿಸಿಕೊಂಡಿದ್ದಾರೆ.

ಪುರುಷೋತ್ತಮ್‌ ಹೇಳಿದ್ದೇನು?

ʼʼನನ್ನ ಮಗಳು ದಾರಿ ತಪ್ಪಿದ್ದಳು. ಅವಳಿಗೆ ಕೆಟ್ಟ ವ್ಯಸನಗಳಿದ್ದವು. ಅವಳ ತಪ್ಪಿನಿಂದ ಬೇಸತ್ತು ನಾನು ಈ ಹೆಜ್ಜೆ ಇಡಬೇಕಾಯಿತುʼʼ ಎಂದು ಪುರುಷೋತ್ತಮ್ ವಿಚಾರಣೆಯ ಸಮಯದಲ್ಲಿ ಹೇಳಿದ್ದಾನೆ. ಆದರೆ ನೆರೆಹೊರೆಯವರು, ʼʼಮೃತ ಹುಡುಗಿ ಆರ್ಯ ತುಂಬಾ ಸ್ನೇಹಪರಳಾಗಿದ್ದಳು. ತುಂಬಾ ಪ್ರೀತಿಯಿಂದ ಮಾತನಾಡುತ್ತಿದ್ದಳು ಮತ್ತು ಎಲ್ಲರೊಂದಿಗೆ ಬೆರೆಯುತ್ತಿದ್ದಳುʼʼ ಎಂದು ಹೇಳಿದ್ದಾರೆ.

ಪುರುಷೋತ್ತಮ್ ಮತ್ತು ಅವರ ಪತ್ನಿ ಶೀಲಾ ಇಬ್ಬರೂ ಶಿಕ್ಷಕರು. ಆರ್ಯಳ ಮಾನಸಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಪುಣೆ ಮನೋವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಪ್ರತಿದಿನ ಔಷಧಗಳನ್ನು ನೀಡಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಅವಳು ಮೊಬೈಲ್ ಮತ್ತು ಟಿವಿಯನ್ನು ಅತಿಯಾಗಿ ಬಳಸುತ್ತಿದ್ದಳು. ಸಣ್ಣ-ಪುಟ್ಟ ವಿಷಯಗಳಿಗೂ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದಳು ಎನ್ನಲಾಗಿದೆ.

ಈ ವರ್ಷದ ಮೇಯಲ್ಲಿ ಆರ್ಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಳು. ಈ ವೇಳೆ ಪುರುಷೋತ್ತಮ್‌ ಕೈ ಮೂಳೆ ಮುರಿದಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಆಕೆ ಉದ್ರೇಕಗೊಳ್ಳುತ್ತಿದ್ದಳು. ಮಾನಸಿಕ ಸ್ಥಿತಿ ಮತ್ತು ಕಿರಿಕಿರಿ ಸಮಸ್ಯೆಗಳಿಂದಾಗಿ ಒಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸತಾರಾ ನಗರ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.