ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್‌ಸ್ಟಾಗ್ರಾಂ ಪೋಸ್ಟ್‌ ಮಾಡಿ ಆತ್ಮಹತ್ಯೆ ಯತ್ನ : 8 ನಿಮಿಷಗಳಲ್ಲಿ ಯುವಕನ ಜೀವ ಉಳಿಸಿದ ಪೊಲೀಸರು

ಮೀರತ್‌ನ 25 ವರ್ಷದ ಯುವಕನೊಬ್ಬ ಇನ್‌ಸ್ಟಾಗ್ರಾಂನಲ್ಲಿ ಅನುಮಾನಾಸ್ಪದ ವಿಡಿಯೋ ಪೋಸ್ಟ್ ಮಾಡಿದ ಬಳಿಕ ಮೆಟಾ ನೀಡಿದ ಆತ್ಮಹತ್ಯೆ ಎಚ್ಚರಿಕೆಯ ಆಧಾರದ ಮೇಲೆ ಪೊಲೀಸರು ಕೇವಲ 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ ಆತನ ಜೀವ ಉಳಿಸಿದ್ದಾರೆ. ಪ್ರೇಮ ಸಂಬಂಧ ಮುರಿದ ಕಾರಣ ಖಿನ್ನತೆಗೆ ಒಳಗಾಗಿದ್ದ ಯುವಕನಿಗೆ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ನೀಡಲಾಗಿದೆ.

ಇನ್‌ಸ್ಟಾಗ್ರಾಂ ಅಲರ್ಟ್‌ನಿಂದ ಉಳಿದ ಯುವಕನ ಜೀವ..!

ಚಾಟ್ ಜಿಪಿಟಿ ಚಿತ್ರ -

Profile
Sushmitha Jain Jun 9, 2026 9:23 PM

ಲಖನೌ: ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಒಂದು ವಿಡಿಯೋ 25 ವರ್ಷದ ಯುವಕನ ಜೀವ ಉಳಿಸಲು ಕಾರಣವಾದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೆಟಾ (Meta) ಸಂಸ್ಥೆ ನೀಡಿದ ಆತ್ಮಹತ್ಯೆ ಎಚ್ಚರಿಕೆ (Suicide Alert) ಆಧರಿಸಿ ಕೇವಲ 8 ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದ ಪೊಲೀಸರು ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜೂನ್ 7ರಂದು ಮೀರತ್ ಜಿಲ್ಲೆಯ ಸರಧನಾ ಪ್ರದೇಶದ ನಿವಾಸಿಯಾಗಿರುವ ಯುವಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಳಿ ಬಣ್ಣದ ದ್ರವವನ್ನು ಸೇವಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದ. ವಿಡಿಯೋಗೆ "Ab tum khush rehna apni life mein" (ಇನ್ನು ನೀನು ನಿನ್ನ ಜೀವನದಲ್ಲಿ ಸಂತೋಷವಾಗಿರು) ಎಂಬ ಭಾವನಾತ್ಮಕ ಸಂದೇಶವನ್ನು ಸೇರಿಸಲಾಗಿತ್ತು. ಈ ಪೋಸ್ಟ್ ಆತ್ಮಹತ್ಯೆಯ ಸೂಚನೆ ಹೊಂದಿರಬಹುದು ಎಂದು ಗುರುತಿಸಿದ ಮೆಟಾ, ಸಂಜೆ 6.53ಕ್ಕೆ ಉತ್ತರ ಪ್ರದೇಶ ಪೊಲೀಸ್ ಮುಖ್ಯ ಕಚೇರಿಯ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ ಕಳುಹಿಸಿತು.

ಪೊಲೀಸ್ ಮಹಾನಿರ್ದೇಶಕರ (DGP) ನಿರ್ದೇಶನದ ಮೇರೆಗೆ, ಸಾಮಾಜಿಕ ಮಾಧ್ಯಮ ಕೇಂದ್ರವು ತಕ್ಷಣವೇ ಮೀರತ್ ಪೊಲೀಸರಿಗೆ ಮಾಹಿತಿ ರವಾನಿಸಿತು. ಲಭ್ಯವಿದ್ದ ಮೊಬೈಲ್ ಸಂಖ್ಯೆ ಮತ್ತು ಸ್ಥಳ ಮಾಹಿತಿ ಆಧರಿಸಿ, ಹಿರಿಯ ಪೊಲೀಸ್ ಅಧೀಕ್ಷಕರ (SSP) ಮೇಲ್ವಿಚಾರಣೆಯಲ್ಲಿ ಸರಧನಾ ಪೊಲೀಸರು ಯುವಕನ ಮನೆಗೆ ಧಾವಿಸಿದರು.

Bagalkot Child Death: ಸಂಪ್‌ಗೆ ಬಿದ್ದು ಮಗು ಸಾವು; ಉಪ್ಪಿನ ರಾಶಿ ಮೇಲೆ ಮೃತದೇಹವಿಟ್ಟು, ಕುರಾನ್‌ ಪಠಿಸಿ ಬದುಕಿಸಲು ಪೋಷಕರ ಯತ್ನ

ಮನೆಗೆ ತಲುಪಿದಾಗ ಯುವಕನ ಸ್ಥಿತಿ ಗಂಭೀರವಾಗಿದ್ದು, ಆತನ ಬಳಿ ಅನುಮಾನಾಸ್ಪದ ದ್ರವವಿದ್ದ ಬಾಟಲಿಯೂ ಪತ್ತೆಯಾಯಿತು. ತಕ್ಷಣವೇ ಕುಟುಂಬ ಸದಸ್ಯರ ಸಹಾಯದೊಂದಿಗೆ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ತುರ್ತು ಚಿಕಿತ್ಸೆಯಿಂದ ಯುವಕನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.

ವಿಚಾರಣೆ ವೇಳೆ, ಪ್ರೇಮ ಸಂಬಂಧ ಮುರಿದ ಪರಿಣಾಮ ತೀವ್ರ ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದ ಆತ, ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾನೆ. ಬಳಿಕ ಪೊಲೀಸರು ಯುವಕ ಹಾಗೂ ಆತನ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡಿದ್ದು, ಅಗತ್ಯ ಮಾರ್ಗದರ್ಶನ ನೀಡಿದ್ದಾರೆ.

ಉತ್ತರ ಪ್ರದೇಶ ಪೊಲೀಸರು ಮತ್ತು ಮೆಟಾ ನಡುವಿನ ಈ ಸಮನ್ವಯ ವ್ಯವಸ್ಥೆ 2022ರಿಂದ ಜಾರಿಯಲ್ಲಿದೆ. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಆತ್ಮಹತ್ಯೆ ಅಥವಾ ಸ್ವಯಂ ಹಾನಿಯ ಸೂಚನೆ ನೀಡುವ ಪೋಸ್ಟ್‌ಗಳು ಕಂಡುಬಂದರೆ, ಮೆಟಾ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಈ ವ್ಯವಸ್ಥೆಯ ಮೂಲಕ 2023ರ ಜನವರಿ 1ರಿಂದ 2026ರ ಮೇ 31ರವರೆಗೆ 3,011 ಮಂದಿಯ ಜೀವ ಉಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.