ವೈದ್ಯನಾಗಲು ಕಾನೂನು ಹೋರಾಟ ನಡೆಸಿ ಗೆದ್ದ ಗಣೇಶ್ ಬಾರೈಯಾ
ಕನಸು ನನಸಾಗಿಸಬೇಕೆಂಬ ಛಲವಿದ್ದರೆ ಯಾವುದೇ ಸವಾಲುಗಳು ನಮಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಅನೇಕ ಸಾಧಕರು ಮಾಡಿ ತೋರಿಸಿದ್ದಾರೆ. ಇವರ ಸಾಲಿನಲ್ಲಿ ಗುಜರಾತ್‌ನ ಗಣೇಶ್ ಬಾರೈಯಾ ಅವರು ಕೂಡ ಸೇರಿದ್ದಾರೆ. ಇವರು ತಮ್ಮ ವೈದ್ಯನಾಗುವ ಕನಸು ನನಸಾಗಿಸಲು ನಡೆಸಿರುವ ಹೋರಾಟ ಅನೇಕರಿಗೆ ಸ್ಫೂರ್ತಿಯಾಗಿದೆ. ಅವರ ಸಾಧನೆಯ ಹಾದಿ ಹೇಗಿತ್ತು ? ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಗಣೇಶ್ ಬಾರೈಯಾ (ಸಂಗ್ರಹ ಚಿತ್ರ) -
ಗುಜರಾತ್: ದೇಹದ ಎತ್ತರದ ಕಾರಣಕ್ಕಾಗಿ ಎಂಬಿಬಿಎಸ್ (MBBS) ಪ್ರವೇಶ ನಿರಾಕರಿಸಿದರೂ ಛಲ ಬಿಡದೆ ಕನಸು ನನಸಾಗಿಸಿಕೊಂಡ ಗುಜರಾತ್‌ನ (Gurarat) ಗಣೇಶ್ ಬಾರೈಯಾ (Ganesh Baraiya) ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ವೈದ್ಯನಾಗಬೇಕು ಎನ್ನುವ ಕನಸು ಹೊತ್ತುಕೊಂಡಿದ್ದ ಗಣೇಶ್ ಇದಕ್ಕಾಗಿ ಕಾನೂನು ಹೋರಾಟಗಳನ್ನು ಮಾಡಬೇಕಾಯಿತು. ಅಂತಿಮವಾಗಿ ನ್ಯಾಯಾಲಯ ಇವರ ಪರವಾಗಿ ತೀರ್ಪು ನೀಡಿದ್ದರಿಂದ ಇವರು ತಮ್ಮ ಕನಸನ್ನು ನನಸಾಗಿಸಿಕೊಂಡರು. ಈ ಮೂಲಕ ತಮ್ಮ ಅಂಗವೈಕಲ್ಯತೆಯನ್ನು ಮೀರಿ ಸಾಧನೆಯ ಪಥದಲ್ಲಿ ಹೆಜ್ಜೆ ಹಾಕಿದ್ದಾರೆ.
ಗುಜರಾತ್ ನ ಗಣೇಶ್ ಬಾರೈಯಾ ಅವರಿಗೆ ವೈದ್ಯನಾಗಬೇಕು ಎನ್ನುವ ಕನಸು ಆದರೆ ದೇಹದ ಗಾತ್ರದ ಕಾರಣಕ್ಕಾಗಿ ಅವರು ತಿರಸ್ಕರಿಸಲ್ಪಟ್ಟರು. ಇದರಿಂದ ಅವರು ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು. ವೈದ್ಯನಾಗುವ ಕನಸನ್ನು ನನಸಾಗಿಸಲು ಕಾನೂನು ಹೋರಾಟಗಳನ್ನು ಗೆದ್ದ ಬಳಿಕ ಅವರು ಇದೀಗ ಸಾಧನೆಯ ಹಾದಿಯಲ್ಲಿ ನಡೆಯಬೇಕು ಎನ್ನುವವರಿಗೆ ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ: Viral Video: ಟಿಕೆಟ್ ತಗೊಂಡಿಲ್ಲಂತಾ ಹೀಗ್ ನಡೆಸ್ಕೊಳ್ಳೋದಾ? ರೈಲ್ವೆ TTEಯ ದರ್ಪವನ್ನೊಮ್ಮೆ ನೋಡಿ
ಗಣೇಶ್ ಬಾರೈಯಾ ಅವರಿಗೆ 2018 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ)ಯು ಎಂಬಿಬಿಎಸ್ ಗೆ ಪ್ರವೇಶವನ್ನು ನಿರಾಕರಿಸಿತ್ತು. ಇದಕ್ಕೆ ಮುಖ್ಯ ಕಾರಣ ಅವರ ದೇಹದ ಗಾತ್ರ. ಅವರು ಮೂರು ಅಡಿ ಎತ್ತರವಿದ್ದು ಕುಬ್ಜ ಶರೀರವನ್ನು ಹೊಂದಿದ್ದರು. ಅಲ್ಲದೇ ಕೇವಲ 20 ಕೆಜಿಗಿಂತ ಕಡಿಮೆ ತೂಕವಿದ್ದ ಅವರು ಶೇಕಡಾ 72 ರಷ್ಟು ಲೋಕೋಮೋಟಿವ್ ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ಎಂಬಿಬಿಎಸ್ ಗೆ ಪ್ರವೇಶವನ್ನು ನಿರಾಕರಿಸಲಾಯಿತು. ಭಾರತೀಯ ವೈದ್ಯಕೀಯ ಮಂಡಳಿ ಅವರ ದೈಹಿಕ ಮಿತಿಗಳನ್ನು ಉಲ್ಲೇಖಿಸಿ ಇದು ವೈದ್ಯನಾಗಿ ಕೆಲಸ ಮಾಡಲು ಅವರಿಗೆ ಅಡ್ಡಿಯಾಗುತ್ತದೆ ಎಂದು ಹೇಳಿತ್ತು.
ಇದರಿಂದ ಹಿಂಜರಿಯದ ಬಾರೈಯಾ ಅವರು ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ನಿರ್ಣಯ ಕೈಗೊಂಡರು. ತಲಜಾದ ನೀಲಕಂಠ ವಿದ್ಯಾಪೀಠದಿಂದ ಪದವೀಧರರಾಗಿದ್ದ ಬಾರೈಯಾ ಅವರು ಪ್ರಾಂಶುಪಾಲರಾದ ಡಾ. ದಲ್ಪತ್‌ಭಾಯ್ ಕಟಾರಿಯಾ ಅವರ ಬೆಂಬಲದೊಂದಿಗೆ ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು. ಭಾವನಗರದ ಕೃಷಿ ಕುಟುಂಬದಿಂದ ಬಂದಿದ್ದ ಬಾರೈಯಾ ಅವರಿಗೆ ಕಾನೂನು ವೆಚ್ಚಗಳನ್ನು ಭರಿಸಲು ಅಸಾಧ್ಯ ಎಂಬುದನ್ನು ಅರಿತ ಕಟಾರಿಯಾ ಅವರಿಗೆ ಬೆಂಬಲ ನೀಡಲು ಮುಂದೆ ಬಂದರು. ಆರಂಭದಲ್ಲಿ ಎಂಸಿಐ ನಿರಾಕರಣೆಯನ್ನು ಹೈಕೋರ್ಟ್ ಎತ್ತಿಹಿಡಿದರೂ ಬರಯ್ಯಾ ತಮ್ಮ ಕನಸನ್ನು ತ್ಯಜಿಸಲು ನಿರಾಕರಿಸಿ ಕಾನೂನು ಸಮರ ಮುಂದುವರಿಸಿದರು.
ಈ ಕುರಿತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅವರು ಈ ವೇಳೆ ತಾತ್ಕಾಲಿಕವಾಗಿ ಬಿ.ಎಸ್ಸಿ. ಗೆ ಸೇರಿ ಅದನ್ನು ಪೂರ್ಣಗೊಳಿಸಿದರು. ನಾಲ್ಕು ತಿಂಗಳ ಬಳಿಕ ಸುಪ್ರೀಂ ಕೋರ್ಟ್ ಗಣೇಶ್ ಅವರ ದೇಹದ ಗಾತ್ರದ ಕಾರಣಕ್ಕಾಗಿ ಅವರ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿ ತೀರ್ಪು ನೀಡಿದ್ದು ಇದು ಅವರ ವೈದ್ಯಕೀಯ ಪದವಿ ಪಡೆಯುವ ಕನಸು ನನಸಾಗಿಸುವ ದಾರಿಯನ್ನು ಸುಗಮಗೊಳಿಸಿತ್ತು.
ಇದನ್ನೂ ಓದಿ: ಭುಜದ ಗಾಯ; ಕೊನೆ ಕ್ಷಣದಲ್ಲಿ ಡಬ್ಲ್ಯುಪಿಎಲ್ ಹರಾಜಿನಿಂದ ಹಿಂದೆ ಸರಿದ ಜೆಸ್ ಜೊನಾಸ್ಸೆನ್
ಈ ಬಳಿಕ ಬರಯ್ಯಾ ಅವರು 2019 ರಲ್ಲಿ ಭಾವನಗರ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಜನರಿಗೆ ಚಿಕಿತ್ಸೆ ನೀಡುವ ಕನಸು ಹೊಂದಿರುವ ಅವರು ವಿಶ್ವದ ಅತ್ಯಂತ ಕುಬ್ಜ ವೈದ್ಯನಾಗಿ ಗುರುತಿಸಿಕೊಂಡಿದ್ದಾರೆ. ಎತ್ತರದ ಕಾರಣದಿಂದಾಗಿ ತಾವು ಹಲವಾರು ರೀತಿಯ ಸವಾಲುಗಳನ್ನು ಎದುರಿಸುವುದಾಗಿ ಹೇಳಿರುವ ಅವರು ಇದೀಗ ಎಲ್ಲರೂ ತಮ್ಮನ್ನು ವೈದ್ಯ ಎಂದು ಸ್ವೀಕರಿಸಿದ್ದಾರೆ ಎಂದಿದ್ದಾರೆ ಬರಯ್ಯಾ.