ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ: 69 ಮಂದಿ ಸಾವು; ಭೀಕರ ವಿಡಿಯೊ ವೈರಲ್‌

Colombia Earthquake: ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 69 ಮಂದಿ ಮೃತಪಟ್ಟಿದ್ದಾರೆ. ಹಲವು ಕಟ್ಟಡಗಳು ಕುಸಿದು, ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಪೆರೇರಾ, ಕಾಲಿ ಮತ್ತು ಕ್ವಿಬ್ಡೊ ಸೇರಿ ಹಲವು ನಗರಗಳಲ್ಲಿ ಭಾರಿ ಹಾನಿಯಾಗಿದ್ದು, ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಕೊಲಂಬಿಯಾದಲ್ಲಿ ಭೀಕರ ಭೂಕಂಪ: 69 ಮಂದಿ ಬಲಿ

ಕೊಲಂಬಿಯಾದಲ್ಲಿ ಸಂಭವಿಸಿದ ಭೂಕಂಪ -

Profile
Sushmitha Jain Aug 10, 2026 11:42 PM

ಬೊಗೋಟಾ, ಆ. 10: ದಕ್ಷಿಣ ಅಮೆರಿಕದ ಪಶ್ಚಿಮ ಕೊಲಂಬಿಯಾದಲ್ಲಿ ಸೋಮವಾರ (ಆಗಸ್ಟ್‌ 10) ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿ ಜನರು ಸಿಲುಕಿಕೊಂಡಿದ್ದಾರೆ. ಹಲವರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಕೊಲಂಬಿಯಾದ ಚೋಕೊ ಪ್ರದೇಶದ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ ಸಮೀಪ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ.

ಬೊಗೋಟಾದಿಂದ ಸುಮಾರು 400 ಕಿ.ಮೀ. ಪಶ್ಚಿಮದಲ್ಲಿರುವ ಈ ಪ್ರದೇಶದಲ್ಲಿ ಸುಮಾರು 4,800 ಜನರು ವಾಸಿಸುತ್ತಿದ್ದಾರೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪವು 107 ಕಿ.ಮೀ. ಆಳದಲ್ಲಿ ಸಂಭವಿಸಿದೆ. ನೆರೆಯ ಈಕ್ವೆಡಾರ್‌ನಲ್ಲಿಯೂ ಭೂಕಂಪದ ಅನುಭವವಾಗಿದೆ.

ಕೊಲಂಬಿಯಾದಲ್ಲಿ ಸಂಭವಿಸಿದ ಭೂಕಂಪ:



ಪೆರೇರಾ ನಗರದ ಮೇಯರ್ ಮೌರಿಸಿಯೊ ಸಲಾಜರ್ ಅವರ ಪ್ರಕಾರ, ಮೃತಪಟ್ಟವರಲ್ಲಿ 18 ಮಂದಿ ಪೆರೇರಾ ನಗರದವರು. ಪರಿಸ್ಥಿತಿ 'ಗಂಭೀರವಾಗಿದೆ' ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ದೃಶ್ಯಗಳಲ್ಲಿ ಪೆರೇರಾ, ಕಾಲಿ ಮತ್ತು ಕ್ವಿಬ್ಡೊ ನಗರಗಳಲ್ಲಿ ಮನೆಗಳು ಹಾಗೂ ಸಣ್ಣ ಕಟ್ಟಡಗಳು ಕುಸಿದಿರುವುದು ಕಂಡುಬಂದಿದೆ.

ಬೊಗೋಟಾದಿಂದ ಸುಮಾರು 300 ಕಿ.ಮೀ. ಪಶ್ಚಿಮದಲ್ಲಿರುವ ಮನಿಜಾಲೆಸ್ ನಗರದಲ್ಲಿನ ನವ-ಗೋಥಿಕ್ ಶೈಲಿಯ ಕ್ಯಾಥೆಡ್ರಲ್‌ನ ಒಂದು ಗೋಪುರವೂ ಕುಸಿದಿದೆ. ಕೊಲಂಬಿಯಾದ ಮಧ್ಯ ಮತ್ತು ಪಶ್ಚಿಮ ಭಾಗಗಳಲ್ಲಿ ಸಣ್ಣ ಪ್ರಮಾಣದ ಭೂಕಂಪಗಳು ಸಾಮಾನ್ಯವಾಗಿದ್ದರೂ, 6.0ಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪಗಳು ಅಪರೂಪ.

ಜಪಾನ್‌ನಲ್ಲಿ 7.1 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ; ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌

ಈ ಹಿಂದೆ ಆರ್ಮೇನಿಯಾ ನಗರದ ಸಮೀಪ ಸಂಭವಿಸಿದ 6.2 ತೀವ್ರತೆಯ ಭೂಕಂಪದಲ್ಲಿ 1,100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಭೂಕಂಪದ ಬಳಿಕ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಕೊಲಂಬಿಯಾ ಅಧ್ಯಕ್ಷ ಅಬೆಲಾರ್ಡೊ ಡೆ ಲಾ ಎಸ್ಪ್ರೀಯೆಲ್ಲಾ ಸ್ಯಾನ್ ಜೋಸ್ ಡೆಲ್ ಪಾಲ್ಮಾರ್‌ನಲ್ಲಿ ಸರ್ಕಾರದ ಪರಿಹಾರ ಮತ್ತು ತುರ್ತು ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಕೊಲಂಬಿಯಾದಲ್ಲಿ ಸಂಭವಿಸಿದ ಭೂಕಂಪ:



“ನೀವು ಒಂಟಿಯಲ್ಲ. ಸರ್ಕಾರ ನಿಮ್ಮೊಂದಿಗಿದೆ ಮತ್ತು ಕ್ರಮ ಕೈಗೊಳ್ಳುತ್ತಿದೆ” ಎಂದು ಅವರು ಹೇಳಿದ್ದಾರೆ. ಭೂಕಂಪದಿಂದ ಪಶ್ಚಿಮ ಕೊಲಂಬಿಯಾದ ಆರು ವಿಮಾನ ನಿಲ್ದಾಣಗಳಿಗೆ ಹಾನಿಯಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ. ಪೆರೇರಾ, ಮನಿಜಾಲೆಸ್, ಕ್ವಿಬ್ಡೊ, ಆರ್ಮೇನಿಯಾ, ಕಾರ್ಟಾಗೊ ಮತ್ತು ಬುವೆನಾವೆಂಚುರಾ ನಗರಗಳಿಗೆ ಸೇವೆ ನೀಡುವ ವಿಮಾನ ನಿಲ್ದಾಣಗಳು ಹಾನಿಗೊಳಗಾಗಿವೆ.