ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ವಾತಂತ್ರ್ಯೋತ್ಸವದಲ್ಲಿ ಹೊಸ ಸಂಪ್ರದಾಯ: ರಾಷ್ಟ್ರಗೀತೆಗೆ ಮುನ್ನ ಕೆಂಪುಕೋಟೆಯಲ್ಲಿ ಮೊಳಗಲಿದೆ ‘ವಂದೇ ಮಾತರಂ’

Vande Mataram: 2026ರ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಲ್ಲಿ ರಾಷ್ಟ್ರಗೀತೆಗೆ ಮುನ್ನ ‘ವಂದೇ ಮಾತರಂ’ ಗಾಯನ ನಡೆಯಲಿದೆ. ‘ವಂದೇ ಮಾತರಂ’ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿ ಯುವ ಸಾಧಕರಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, 2026ರ ಅಂತರರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.

ಕೆಂಪುಕೋಟೆ ಸ್ವಾತಂತ್ರ್ಯೋತ್ಸವದಲ್ಲಿ ‘ವಂದೇ ಮಾತರಂ’ಗೆ ಆದ್ಯತೆ

ಕೆಂಪು ಕೋಟೆ (ಸಂಗ್ರಹ ಚಿತ್ರ) -

Profile
Sushmitha Jain Aug 10, 2026 11:20 PM

ನವದೆಹಲಿ, ಆ. 10: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ (Independence Day) ಕೆಂಪುಕೋಟೆಯಲ್ಲಿ (Red Fort) ರಾಷ್ಟ್ರಗೀತೆಗೆ (National Anthem) ಮುನ್ನ ‘ವಂದೇ ಮಾತರಂ’ (Vande Mataram) ಹಾಡಿಸಲಾಗುತ್ತದೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ಆರ್.ಕೆ. ಸಿಂಗ್ (RK Singh) ತಿಳಿಸಿದ್ದಾರೆ. ಭಾರತವು ‘ವಂದೇ ಮಾತರಂ’ ರಚನೆಯ 150ನೇ ವರ್ಷವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಗೆ ಆಗಮಿಸಿದ ಬಳಿಕ ‘ವಂದೇ ಮಾತರಂ’ ಗಾಯನ ನಡೆಯಲಿದೆ. ಈ ವೇಳೆ ಎಲ್ಲರೂ ಎದ್ದು ನಿಂತಿರುತ್ತಾರೆ. ನಂತರ ಪ್ರಧಾನಿ ರಾಷ್ಟ್ರಧ್ವಜ ಹಾರಿಸಲಿದ್ದು, ಬಳಿಕ ರಾಷ್ಟ್ರಗೀತೆ ಮೊಳಗಲಿದೆ ಎಂದು ಆರ್.ಕೆ. ಸಿಂಗ್ ವಿವರಿಸಿದ್ದಾರೆ.

ಯುವಶಕ್ತಿಗೆ ಹೆಚ್ಚಿನ ಆದ್ಯತೆ

ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಯುವ ಶಕ್ತಿಗೆ ಆದ್ಯತೆ ನೀಡಲಾಗಿದ್ದು, ಯುವ ಸಾಧಕರು ಮತ್ತು ಜೆನ್‌ ಝೀ ಪ್ರತಿನಿಧಿಗಳಿಗೆ ವಿಶೇಷ ಪ್ರಾತಿನಿಧ್ಯ ದೊರೆಯಲಿದೆ. 2026ರ ಅಂತಾರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ ಒಲಿಂಪಿಯಾಡ್‌ಗಳಲ್ಲಿ ಪದಕ ಗೆದ್ದ 19 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ. ಅವರಿಗೆ ಕೆಂಪುಕೋಟೆಯಲ್ಲಿ ವಿಶೇಷ ಆಸನ ವ್ಯವಸ್ಥೆ ಮಾಡಲಾಗುತ್ತದೆ.

ಪ್ರಧಾನಿ ಇಂಟರ್ನ್‌ಶಿಪ್ ಯೋಜನೆಯ (PM Internship Scheme) ಇಂಟರ್ನ್‌ಗಳು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ವಿಜ್ಞಾನಿಗಳು, ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ (PMKVY) ಫಲಾನುಭವಿಗಳು, Startup India Seed Fund ಮೂಲಕ ಬೆಂಬಲ ಪಡೆದ ಸ್ಟಾರ್ಟ್‌ಅಪ್‌ಗಳು ಮತ್ತು MY Bharat ಸ್ವಯಂಸೇವಕರೂ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಗಳ ಕ್ವಿಜ್ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೂ ವಿಶೇಷ ಅತಿಥಿಗಳಾಗಿ ಆಹ್ವಾನ ನೀಡಲಾಗಿದೆ.

‘ಟೇಬಲ್ ಆಫ್ ಪ್ರಿಸಿಡೆನ್ಸ್’ ಪ್ರಕಾರ ವಿಪಕ್ಷ ನಾಯಕನಿಗೆ ಆಸನ

ವಿಪಕ್ಷ ನಾಯಕನಿಗೂ ಹಿಂದಿನ ವರ್ಷಗಳಂತೆ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನ ನೀಡಲಾಗುವುದು. ಆಸನ ವ್ಯವಸ್ಥೆಯನ್ನು ಅಧಿಕೃತ ‘Table of Precedence’ ನಿಯಮದಂತೆ ಮಾಡಲಾಗುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. 2024ರ ಸ್ವಾತಂತ್ರ್ಯೋತ್ಸವದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕ್ಯಾಬಿನೆಟ್ ಸಚಿವರು ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತೀಯ ಕ್ರೀಡಾಪಟುಗಳ ತಂಡಕ್ಕಿಂತ ಹಲವು ಸಾಲುಗಳ ಹಿಂದೆ ಆಸನ ನೀಡಲಾಗಿತ್ತು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಟೇಬಲ್ ಆಫ್ ಪ್ರಿಸಿಡೆನ್ಸ್’ನಲ್ಲಿ ವಿಪಕ್ಷ ನಾಯಕನ ಸ್ಥಾನ ಕ್ಯಾಬಿನೆಟ್ ಸಚಿವರಿಗೆ ಸಮಾನವಾಗಿರುವುದರಿಂದ ಈ ಬಾರಿ ನಿಯಮಾನುಸಾರ ಆಸನ ವ್ಯವಸ್ಥೆ ಮಾಡಲಾಗುತ್ತದೆ.

250th Independence of USA: ಭಾರತ-ಅಮೆರಿಕ ಬೆಸುಗೆಯ ಸಿಹಿ-ಕಹಿ

‘ವಿಕಸಿತ ಭಾರತ @2047’ ಥೀಮ್

ಈ ವರ್ಷದ ಆಚರಣೆಯಲ್ಲಿ ‘Journey to Viksit Bharat @2047’ ಎಂಬ ಪರಿಕಲ್ಪನೆಯನ್ನು ಪ್ರದರ್ಶಿಸಲಾಗುತ್ತದೆ. ಗಾರ್ಡ್ ಆಫ್ ಆನರ್ ಪ್ರದೇಶದ ಸುತ್ತಮುತ್ತ ಅಣು ತಂತ್ರಜ್ಞಾನ, ಬಾಹ್ಯಾಕಾಶ ಸೇರಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಯನ್ನು ಬಿಂಬಿಸುವ ದೃಶ್ಯ ಪ್ರದರ್ಶನಗಳನ್ನು ಅಳವಡಿಸಲಾಗುತ್ತದೆ.

ಸ್ವಾತಂತ್ರ್ಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ‘ಸೇವಾ ತೀರ್ಥ’ಕ್ಕೆ (Seva Teerth) ಪ್ರಮುಖ ಸ್ಥಾನ ನೀಡಲಾಗಿದ್ದು, ಸಾರ್ವಜನಿಕ ಸೇವೆ ಮತ್ತು ‘ವಿಕಸಿತ ಭಾರತ @2047’ ದೃಷ್ಟಿಕೋನಕ್ಕೆ ಒತ್ತು ನೀಡಲಾಗಿದೆ.

ಇದೇ ವೇಳೆ, ಕೆಂಪುಕೋಟೆಯ ಆಸನ ವಿಭಾಗಗಳಿಗೆ ಭಾರತದ ಪ್ರಮುಖ ಸರೋವರಗಳ ಹೆಸರು ಇಡಲಾಗುತ್ತದೆ. ಜಲ ಸಂರಕ್ಷಣೆಗೆ ಒತ್ತು ನೀಡುವ ಈ ಕ್ರಮವು, ಈ ವರ್ಷದ ಗಣರಾಜ್ಯೋತ್ಸವದಲ್ಲಿ ಆಸನ ವಿಭಾಗಗಳಿಗೆ ನದಿಗಳ ಹೆಸರುಗಳನ್ನು ಇಟ್ಟಿದ್ದನ್ನು ಮುಂದುವರಿಸಿದೆ.