ಸೌದಿ ಅರೇಬಿಯಾದಲ್ಲಿ ಗುಂಡಿನ ಚಕಮಕಿ: ಭಾರತೀಯ ಸಾವು
ಪೊಲೀಸರು ಮತ್ತು ಕಳ್ಳ ಸಾಗಾಣೆದಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಭಾರತೀಯನೋರ್ವ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಕಳೆದ ಒಂಬತ್ತು ತಿಂಗಳಿನಿಂದ ಸೌದಿಯ ಖಾಸಗಿ ಕಂಪನಿಯೊಂದರಲ್ಲಿ ಟವರ್ ಲೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್‌ನ ವಿಜಯ್ ಕುಮಾರ್ ಮಹತೋ ಮೃತರು. ಕಂಪನಿಯ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಸಾಮಗ್ರಿಗಳನ್ನು ಖರೀದಿಗೆಂದು ವಿಜಯ್ ಕುಮಾರ್ ಕೆಲಸದ ಸ್ಥಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಜಯ್ ಕುಮಾರ್ ಮೃತದೇಹವನ್ನು ಸ್ವದೇಶಕ್ಕೆ ತರಲು ಆತನ ಕುಟುಂಬ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಿದೆ
-
ವಿದ್ಯಾ ಇರ್ವತ್ತೂರು
Nov 1, 2025 7:56 PM
ರಿಯಾದ್: ಪೊಲೀಸರು (Saudi police) ಮತ್ತು ಶಂಕಿತ ಮದ್ಯ ಕಳ್ಳ ಸಾಗಣೆದಾರರ (liquor smugglers) ನಡುವೆ ನಡೆದ ಗುಂಡಿನ ಚಕಮಕಿಯ (Crossfire) ವೇಳೆ ಭಾರತೀಯನೊಬ್ಬ ಸಾವನ್ನಪ್ಪಿರುವ ಘಟನೆ ಸೌದಿ ಅರೇಬಿಯಾದಲ್ಲಿ (Saudi Arabia) ನಡೆದಿದೆ. ಜೆಡ್ಡಾದಲ್ಲಿ ಸೌದಿ ಪೊಲೀಸರು ಮತ್ತು ಶಂಕಿತ ಮದ್ಯ ಕಳ್ಳಸಾಗಣೆದಾರರ ನಡುವಿನ ಗುಂಡಿನ ಚಕಮಕಿ ವೇಳೆ ಜಾರ್ಖಂಡ್ ನ ವಿಜಯ್ ಕುಮಾರ್ ಮಹತೋ (27) ಎಂಬವರು ಸಾವನ್ನಪ್ಪಿದ್ದಾರೆ. ಅವರ ಮೃತದೇಹವನ್ನು ಸ್ವದೇಶಕ್ಕೆ ಮರಳಿ ತರಲು ಅವರ ಕುಟುಂಬ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂವಹನ ನಡೆಸುತ್ತಿದೆ.
ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ದುಧಾಪಾನಿಯಾ ಗ್ರಾಮದ ನಿವಾಸಿ ವಿಜಯ್ ಕುಮಾರ್ ಮಹತೋ ಕಳೆದ ಒಂಬತ್ತು ತಿಂಗಳಿನಿಂದ ಸೌದಿಯ ಖಾಸಗಿ ಕಂಪೆನಿಯೊಂದರಲ್ಲಿ ಟವರ್ ಲೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಹುಂಡೈ ಎಂಜಿನಿಯರಿಂಗ್ ಮತ್ತು ನಿರ್ಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ಕಂಪನಿಯ ಹಿರಿಯ ಅಧಿಕಾರಿಗಳಸೂಚನೆಯ ಮೇರೆಗೆ ಸಾಮಗ್ರಿಗಳನ್ನು ಖರೀದಿಸಲು ಕೆಲಸದ ಸ್ಥಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ: Self Harming: ಮೈಸೂರಿನಲ್ಲಿ ಘೋರ ಘಟನೆ; ಇಬ್ಬರ ಮಕ್ಕಳ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ!
ಕಳ್ಳ ಸಾಗಣೆ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳೀಯ ಪೊಲೀಸರು ಹಾರಿಸಿದ ಗುಂಡು ಸ್ಥಳದಲ್ಲಿ ಹಾದುಹೋಗುತ್ತಿದ್ದ ವಿಜಯ್ ಕುಮಾರ್ ಮಹತೋ ಅವರಿಗೆ ಆಕಸ್ಮಿಕವಾಗಿ ತಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಲ್ಲಿ ಅಕ್ಟೋಬರ್ 24ರಂದು ಸಾವನ್ನಪ್ಪಿದ್ದಾರೆ.
ವಿಜಯ್ ತಂದೆ ಸೂರ್ಯನಾರಾಯಣ್ ಮಹತೋ, ತಾಯಿ ಸಾವಿತ್ರಿ ದೇವಿ, ಪತ್ನಿ ಬಸಂತಿ ದೇವಿ, ಪುತ್ರರಾದ ರಿಷಿ ಕುಮಾರ್ (5) ಮತ್ತು ರೋಶನ್ ಕುಮಾರ್ (3) ಅವರನ್ನು ಅಗಲಿದ್ದಾರೆ.
ವಿಜಯ್ ಕೊನೆಯ ಬಾರಿಗೆ ತಮ್ಮ ಪತ್ನಿಗೆ ವಾಟ್ಸಾಪ್‌ನಲ್ಲಿ ಒಂದು ಧ್ವನಿ ಸಂದೇಶವನ್ನು ಕಳುಹಿಸಿದ್ದರು. ಅದರಲ್ಲಿ ಅವರು ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹೀಗಾಗಿ ಗಾಯಗೊಂಡ ಬಳಿಕ ಅವರು ಬದುಕುಳಿದಿದ್ದಾರೆ ಎಂದೇ ಅವರ ಕುಟುಂಬ ನಂಬಿತ್ತು ಎಂದು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ ಸಿಕಂದರ್ ಅಲಿ ತಿಳಿಸಿದ್ದಾರೆ.
ಜೆಡ್ಡಾ ಪೊಲೀಸರು ಮತ್ತು ಅಕ್ರಮ ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ ಸುಲಿಗೆ ಗ್ಯಾಂಗ್ ಅನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಅವರ ನಡುವೆ ಗುಂಡಿನ ಚಕಮಕಿ ನಡೆದಿದೆ. ವಿಜಯ್ ಕುಮಾರ್ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಇತ್ತು. ಆದರೆ ಅಕ್ಟೋಬರ್ 24ರಂದು ಅವರು ಕೆಲಸ ಮಾಡುತ್ತಿರುವ ಕಂಪನಿಯು ಅವರು ಸಾವನ್ನಪ್ಪಿರುವುದಾಗಿ ಕುಟುಂಬಕ್ಕೆ ತಿಳಿಸಿದೆ ಎಂದು ಅಲಿ ಹೇಳಿದ್ದಾರೆ.
ಮಹತೋ ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಸೌದಿ ಅಧಿಕಾರಿಗಳಿಂದ ಪರಿಹಾರವನ್ನು ಪಡೆಯಲು ರಾಜ್ಯ ಕಾರ್ಮಿಕ ಇಲಾಖೆ ಮತ್ತು ಗಿರಿದಿಹ್ ಜಿಲ್ಲಾಡಳಿತವನ್ನು ಒತ್ತಾಯಿಸಲಾಗಿದೆ ಎಂದು ಅಲಿ ತಿಳಿಸಿದ್ದಾರೆ.
ವಿಜಯ್ ಕುಮಾರ್ ಅವರ ಮೃತದೇಹವನ್ನು ಸ್ವದೇಶಕ್ಕೆ ಮರಳಿ ತರುವ ಪ್ರಯತ್ನ ನಡೆಸಲಾಗುತ್ತಿದೆ. ಘಟನೆಯ ಅನಂತರ ದುಮ್ರಿ ಶಾಸಕ ಜೈರಾಮ್ ಕುಮಾರ್ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ವಿಜಯ್ ಅವರ ಶವವನ್ನು ಶೀಘ್ರದಲ್ಲೇ ಭಾರತಕ್ಕೆ ತರಲು ವ್ಯವಸ್ಥೆ ಮಾಡಬೇಕು. ದುಃಖಿತ ಕುಟುಂಬಕ್ಕೆ ಕಾನೂನು ಮತ್ತು ಆರ್ಥಿಕ ನೆರವು ಒದಗಿಸುವಂತೆ ಅವರು ರಾಯಭಾರ ಕಚೇರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Online Scam: 'ಮೇಕ್ ಮೀ ಪ್ರೆಗ್ನೆಂಟ್' ಆನ್ಲೈನ್ ಜಾಹೀರಾತು ನಂಬಿದ ವ್ಯಕ್ತಿಗೆ ಲಕ್ಷ... ಲಕ್ಷ... ಪಂಗನಾಮ!
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಾರ್ಖಂಡ್‌ನ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಮಹಾತೋ ಅವರ ಶವವನ್ನು ಮನೆಗೆ ತರಲು ಸೌದಿ ಅರೇಬಿಯಾದಲ್ಲಿರುವ ಭಾರತೀಯ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ವಲಸೆ ನಿಯಂತ್ರಣ ಕೋಶದ ತಂಡದ ನಾಯಕಿ ಶಿಖಾ ಲಕ್ರಾ ಪ್ರತಿಕ್ರಿಯಿಸಿ, ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿದೆ. ಶವಗಳನ್ನು ಸ್ವದೇಶಕ್ಕೆ ತರುವಂತೆ ಗಿರಿದಿಹ್ ಅವರಿಂದ ಔಪಚಾರಿಕ ವಿನಂತಿ ಬಂದಿದೆ ಎಂದು ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ಶವವನ್ನು ತರಲು ಜೆಡ್ಡಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಲಕ್ರಾ ಹೇಳಿದ್ದಾರೆ.