ಕದನ ವಿರಾಮ ಘೋಷಣೆಯ ಕೆಲವೇ ಗಂಟೆಗಳಲ್ಲಿ ಹೊರ್ಮುಜ್‌ನಿಂದ ಭಾರತದತ್ತ ಹೊರಟ ಹಡಗಿನ ಮೇಲೆ ಮತ್ತೆ ಇರಾನ್ ದಾಳಿ
Iran attacks two ships: ಪಾಕಿಸ್ತಾನದಲ್ಲಿ ಯೋಜಿತ ಕದನ ವಿರಾಮ ಮಾತುಕತೆಗಳು ವಿಫಲವಾದ ಕಾರಣ, ಹೊರ್ಮುಜ್ ಜಲಸಂಧಿಯಲ್ಲಿ ಇರಾನ್, ಎರಡು ಕಂಟೇನರ್ ಹಡಗುಗಳ ಮೇಲೆ ಗುಂಡು ಹಾರಿಸಿದೆ. ಈ ಹಡಗುಗಳ ಪೈಕಿ ಗುಜರಾತ್‌ನತ್ತ ತೆರಳುತ್ತಿತ್ತು ಎನ್ನಲಾಗಿದೆ. ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್–ಅಮೆರಿಕ ನಡುವೆ ಇರುವ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಿರುವ ಕೆಲವೇ ಗಂಟೆಗಳ ನಂತರ ನಡೆದಿದೆ.
ಸಾಂದರ್ಭಿಕ ಚಿತ್ರ -
ಲಂಡನ್, ಏ. 22: ಪಾಕಿಸ್ತಾನದಲ್ಲಿ ಯೋಜಿತ ಕದನ ವಿರಾಮ (US-Iran ceasefire) ಮಾತುಕತೆ ಕಾರ್ಯರೂಪಕ್ಕೆ ಬರದ ಕಾರಣ, ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಇರಾನ್, ಎರಡು ಕಂಟೇನರ್ ಹಡಗುಗಳ ಮೇಲೆ ಗುಂಡು ಹಾರಿಸಿದೆ. ಈ ಕ್ರಮವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್–ಅಮೆರಿಕ ನಡುವೆ ಇರುವ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸಿರುವ ಕೆಲವೇ ಗಂಟೆಗಳ ನಂತರ ನಡೆದಿದೆ. ಕದನ ವಿರಾಮ ವಿಸ್ತರಣೆಯ ಕುರಿತು ಟ್ರಂಪ್ ಘೋಷಣೆಗೆ ಇರಾನ್ ಇನ್ನೂ ಪ್ರತಿಕ್ರಿಯಿಸಿಲ್ಲ. ಒಪ್ಪಂದಕ್ಕೆ ಬರದಿದ್ದರೆ ಎರಡೂ ದೇಶಗಳು ಹೋರಾಟವನ್ನು ಪುನರಾರಂಭಿಸಲು ಸಿದ್ಧವೆಂದು ಎಚ್ಚರಿಸಿವೆ. ದಾಳಿಗೊಳಗಾದ ಹಡಗಿನ ಪೈಕಿ ಭಾರತಕ್ಕೆ ಹೊರಟ ಹಡಗೂ ಇತ್ತು.
ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಬೆಳಗ್ಗೆ 7:55ರ ಸುಮಾರಿಗೆ ಹೊರ್ಮುಜ್ ಜಲಸಂಧಿಯಲ್ಲಿ ಮೊದಲ ಕಂಟೇನರ್ ಹಡಗಿನ ಮೇಲೆ ದಾಳಿ ಮಾಡಿ ಹಡಗನ್ನು ಹಾನಿಗೊಳಿಸಿತು ಎಂದು ಬ್ರಿಟಿಷ್ ಮಿಲಿಟರಿಯ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ಕೇಂದ್ರವು ತಿಳಿಸಿದೆ. ಇರಾನಿನ ಗನ್‌ಬೋಟ್, ಹಡಗಿನ ಮೇಲೆ ಗುಂಡು ಹಾರಿಸುವ ಮೊದಲು ಅದಕ್ಕೆ ಎಚ್ಚರಿಕೆ ನೀಡಿರಲಿಲ್ಲ ಎಂದು ಯುಕೆಎಂಟಿಒ ತಿಳಿಸಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯಿಂದ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿದೆ.
ಶಾಂತಿ ಮಾತುಕತೆ ಇರಾನ್ ಅಸಹಕಾರ: ಇಸ್ಲಾಮಾಬಾದ್ ಪ್ರವಾಸ ಮುಂದೂಡಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್
ಎರಡನೇ ದಾಳಿಯಲ್ಲಿ ಒಂದು ಸರಕು ಹಡಗು ತನ್ನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿಸಲಾಗಿದೆ. ಆದರೆ ಹಡಗಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಎರಡು ದಾಳಿಗಳು, ಅಮೆರಿಕ ಇತ್ತೀಚೆಗೆ ಹೊರ್ಮುಜ್ ಜಲಸಂಧಿಯಲ್ಲಿ ಒಂದು ಇರಾನ್ ಕಂಟೇನರ್ ಹಡಗನ್ನು ಗುಂಡಿನ ದಾಳಿ ನಂತರ ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ನಡೆದಿವೆ.
ಶಾಂತಿ ಮಾತುಕತೆಗೆ ಟೆಹರಾನ್‌ಗೆ ಹೆಚ್ಚಿನ ಸಮಯಾವಕಾಶ ನೀಡಲು ಅಮೆರಿಕ ಕದನ ವಿರಾಮವನ್ನು ವಿಸ್ತರಿಸಿದ್ದರೂ, ಈಗಾಗಲೇ ಇರಾನ್‌ನ ಹಿಡಿತದಲ್ಲಿರುವ ಹೊರ್ಮುಜ್‌ನಲ್ಲಿ ದಿಗ್ಬಂಧನವನ್ನು ಮುಂದುವರಿಸಲು ನಮ್ಮ ಮಿಲಿಟರಿಗೆ ನಿರ್ದೇಶನ ನೀಡಿದ್ದೇನೆ ಎಂದು ಟ್ರಂಪ್ ಹೇಳಿದರು. ಮಿಲಿಟರಿ ನಿರ್ಬಂಧಗಳ ನಡುವೆಯೂ, ಹೊರ್ಮುಜ್ ಜಲಸಂಧಿಯ ಮೂಲಕ ಹಡಗು ಚಟುವಟಿಕೆಗಳು ಸ್ಥಗಿತಗೊಂಡಿವೆ. ಕಳೆದ 24 ಗಂಟೆಗಳಲ್ಲಿ ಕನಿಷ್ಠ ಹಡಗು ಚಲನೆ ವರದಿಯಾಗಿದೆ.
ಈ ಮಧ್ಯೆ, ಮಹತ್ವದ ಜಲಸಂಧಿಯನ್ನು ಮುಚ್ಚಿರುವುದರಿಂದ ಇರಾನ್ ಆರ್ಥಿಕವಾಗಿ ಕುಸಿಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.