ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lawrence Bishnoi Gang: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದನೆ ಗುಂಪು ಎಂದು ಘೋಷಿಸಿದ ಕೆನಡಾ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಗುಂಪು ಎಂದು ಕೆನಡಾ ಗುರುತಿಸಿದೆ. ಕೊಲೆ, ಭಯೋತ್ಪಾದನೆಯಲ್ಲಿ ಈ ಗ್ಯಾಂಗ್ ತೊಡಗಿಕೊಂಡಿದ್ದು, ಅದರ ಚಟುವಟಿಕೆಗಳು ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸುತ್ತಿವೆ ಎಂದು ಹೇಳಿದೆ. ಈ ಬಗ್ಗೆ ಸಚಿವ ಗ್ಯಾರಿ ಆನಂದಸಂಗರಿ ಮಾಹಿತಿ ನೀಡಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದಕರು ಎಂದ ಕೆನಡಾ

-

ಒಟ್ಟಾವಾ: ಭಾರತದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ (Lawrence Bishnoi Gang) ಅನ್ನು ದೇಶದ ಕ್ರಿಮಿನಲ್ ಕೋಡ್ (Criminal Code) ಅಡಿಯಲ್ಲಿ ಕೆನಡಾ (Canada) ಭಯೋತ್ಪಾದಕ ಗುಂಪು (Terrorist group) ಎಂದು ಪಟ್ಟಿ ಮಾಡಿದೆ ಎಂದು ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರಿ (Public Safety Minister Gary Anandasangaree) ಸೋಮವಾರ ಘೋಷಿಸಿದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಲೆ, ಭಯೋತ್ಪಾದನೆಯಲ್ಲಿ ತೊಡಗಿಕೊಂಡಿದ್ದು ಕೆಲವು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದನ್ನು ಕೆನಡಾದಲ್ಲಿ ಎಂದಿಗೂ ಸಹಿಸಲಾಗುವುದಿಲ್ಲ ಎಂದು ಅವರು ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದಕ ಗುಂಪಿನಡಿ ಸೇರ್ಪಡೆಯಾಗಿದೆ. ಈ ಗ್ಯಾಂಗ್‌ನ ಚಟುವಟಿಕೆಗಳು ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಹೇಳಿದ್ದಾರೆ.

ಬಿಷ್ಣೋಯ್ ಗ್ಯಾಂಗ್, ಅದರ ನಾಯಕ ಲಾರೆನ್ಸ್ ಬಿಷ್ಣೋಯ್ ಹೆಸರಿನಿಂದ ಕರೆಯಲ್ಪಡುತ್ತದೆ. ಇದು ಭಾರತ ಮತ್ತು ವಿದೇಶಗಳಲ್ಲಿ ಸುಲಿಗೆ, ಕಳ್ಳಸಾಗಣೆ ಮತ್ತು ಕೊಲೆ ಸೇರಿದಂತೆ ಹಲವು ಬಹುದೊಡ್ಡ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿವೆ ಎಂದು ತಿಳಿಸಿದ್ದಾರೆ.

ಬಿಷ್ಣೋಯ್ ಗ್ಯಾಂಗ್ ಅನ್ನು ಭಯೋತ್ಪಾದಕ ಗುಂಪೆಂದು ಪಟ್ಟಿ ಮಾಡುವ ಮೂಲಕ ಇದೀಗ ಕೆನಡಾದ ಅಧಿಕಾರಿಗಳು ಅದರ ಸದಸ್ಯರು ಮತ್ತು ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಲವಾದ ಕಾನೂನು ಪಡೆದಿದ್ದಾರೆ.

ಈ ಕಾನೂನಿನ ಮೂಲಕ ಅವರ ಆಸ್ತಿ, ವಾಹನಗಳು, ಹಣ ಸೇರಿದಂತೆ ಗುಂಪಿನ ಒಡೆತನದ ಅಥವಾ ನಿಯಂತ್ರಿಸಲ್ಪಡುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಅನುಮತಿ ಇದೆ. ಭಯೋತ್ಪಾದಕ ಹಣಕಾಸು, ಪ್ರಯಾಣ ಮತ್ತು ನೇಮಕಾತಿಗೆ ಸಂಬಂಧಿಸಿದ ಕ್ರಿಮಿನಲ್ ಆರೋಪಗಳನ್ನು ಮುಂದುವರಿಸಲು ಕಾನೂನು ಜಾರಿ ಸಂಸ್ಥೆಗಳಿಗೆ ಇದು ಅನುವು ಮಾಡಿಕೊಡುತ್ತದೆ.



ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಆಸ್ತಿಯೊಂದಿಗೆ ಉದ್ದೇಶಪೂರ್ವಕವಾಗಿ ವ್ಯವಹರಿಸುವುದು ಈಗ ದೇಶದಲ್ಲಿ ಕ್ರಿಮಿನಲ್ ಅಪರಾಧವಾಗಿದೆ. ಈ ಗುಂಪಿಗೆ ಯಾವುದೇ ಬೆಂಬಲ ಅಥವಾ ಸಂಪನ್ಮೂಲಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒದಗಿಸುವುದು ಸಹ ಕಾನೂನುಬಾಹಿರ.

ಅಲ್ಲದೇ ಗ್ಯಾಂಗ್‌ಗೆ ಸಂಪರ್ಕ ಹೊಂದಿದ ವ್ಯಕ್ತಿಗಳು ಕೆನಡಾಕ್ಕೆ ಪ್ರವೇಶ ಪಡೆಯಲು ಅಥವಾ ನಿರಾಕರಿಸಲು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕೂಡ ಅಧಿಕಾರಿಗಳಿಗೆ ನೀಡಲಾಗಿದೆ.

ಭಾರತದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸಂಪರ್ಕ

ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಉತ್ತರ ಭಾರತದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಲಾರೆನ್ಸ್ ಬಿಷ್ಣೋಯ್ ಇದೀಗ ಜೈಲಿನಲ್ಲಿದ್ದರೂ ಆತನ ಗ್ಯಾಂಗ್ ಕಾರ್ಯಾಚರಣೆಗಳನ್ನು ಮುಂದುವರಿಸಿದೆ. ಈ ಗ್ಯಾಂಗ್‌ 2022 ರಲ್ಲಿ ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯಲ್ಲಿ ಭಾಗಿಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ʻಬಿಎಸ್ಎನ್ಎಲ್ʼ ಪ್ರಾರಂಭಿಸಿದ ʻಇಂಟೆಲಿಜೆಂಟ್ ಸ್ವದೇಶಿ 4ಜಿ ನೆಟ್‌ವರ್ಕ್‌ʼ ಇನ್ನೂ 26,700 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲಿದೆ

ಬಾಲಿವುಡ್ ನಟ ಸಲ್ಮಾನ್ ಖಾನ್, ಹಾಸ್ಯನಟ ಕಪಿಲ್ ಶರ್ಮಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳಿಗೆ ಈ ಗ್ಯಾಂಗ್ ಪದೇ ಪದೆ ಬೆದರಿಕೆ ಹಾಕುತ್ತಿದೆ.