ಹೊರ್ಮುಜ್ ಜಲಸಂಧಿಯಲ್ಲಿ 107 ದಿನಗಳಿಂದ 500ಕ್ಕೂ ಹೆಚ್ಚು ಭಾರತೀಯ ನಾವಿಕರು ಬಾಕಿ: ಅನಾರೋಗ್ಯದಿಂದ ನಿಶಾಂತ್ ಉರ್ಥನಾಥನ್ ನಿಧನ
Middle East Crisis: ಎಂಟಿ ಸೆಲೆಸ್ಟಿಯಲ್ ಹಡಗಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಭಾರತೀಯ ಪ್ರಜೆ ನಿಶಾಂತ್ ಉರ್ಥನಾಥನ್ ಅವರ ಮೃತದೇಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪಾರ್ಥೀವ ಶರೀರವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ವಾಪಸ್ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಜೂ. 14: ಹೊರ್ಮುಜ್ ಜಲಸಂಧಿ (Strait of Hormuz)ಯಲ್ಲಿ 107 ದಿನಗಳಿಂದ ಭಾರತೀಯ ಧ್ವಜ ಹೊತ್ತ 13 ಹಡಗುಗಳಲ್ಲಿ ಸುಮಾರು 562 ಭಾರತೀಯ ನಾವಿಕರು (Indian Sailors) ಬಾಕಿಯಾಗಿದ್ದಾರೆ. ಎಂಟಿ ಸೆಲೆಸ್ಟಿಯಲ್ ಹಡಗಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಭಾರತೀಯ ಪ್ರಜೆ ನಿಶಾಂತ್ ಉರ್ಥನಾಥನ್ ಅವರ ಮೃತದೇಹವನ್ನು ಶೀಘ್ರದಲ್ಲೇ ಭಾರತಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ದುರದೃಷ್ಟವಶಾತ್ ಅನಾರೋಗ್ಯದಿಂದ ನಿಧನರಾದ ನಿಶಾಂತ್ ಉರ್ಥನಾಥನ್ ಅವರ ಕುಟುಂಬದೊಂದಿಗೆ ಹಾಗೂ ಹಡಗಿನ ಸಿಬ್ಬಂದಿ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಒಮನ್‌ನ ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಅವರ ಪಾರ್ಥೀವ ಶರೀರವನ್ನು ಸಾಧ್ಯವಾದಷ್ಟು ಬೇಗ ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.
ಎಂಟಿ ಸೆಲೆಸ್ಟಿಯಲ್ ಹಡಗು ಪ್ರಸ್ತುತ ಒಮಾನ್‌ನ ಡುಕ್ಮ್ ಬಂದರಿನಲ್ಲಿದೆ. ಹಡಗಿನ ನಿರ್ವಹಣಾ ಸಂಸ್ಥೆಯೊಂದಿಗೆ ಭಾರತೀಯ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಲ್ಲದೆ, ಸಂಬಂಧಪಟ್ಟ ಎಲ್ಲರೊಂದಿಗೂ ಸಮನ್ವಯ ಸಾಧಿಸಿ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳುತ್ತಿದೆ. ಅವರ ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ತರಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ರಾಯಭಾರ ಕಚೇರಿ ಭರವಸೆ ನೀಡಿದೆ.
ಹೊರ್ಮುಜ್ ಜಲಸಂಧಿ ಸ್ಥಗಿತಗೊಂಡರೂ ಮುಂದುವರಿದ ಭಾರತೀಯ ಹಡಗುಗಳ ಸಂಚಾರ: ಇದು ಹೇಗೆ?
562 ಭಾರತೀಯ ನಾವಿಕರನ್ನು ಹೊತ್ತೊಯ್ಯುವ ಕನಿಷ್ಠ 13 ಭಾರತೀಯ ಧ್ವಜ ಹೊತ್ತ ಸರಕು ಹಡಗುಗಳು 107 ದಿನಗಳಿಂದ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಹಡಗು ಸಚಿವಾಲಯದ ಪ್ರಕಾರ, 329 ಜಲಸಂಧಿಯ ಪಶ್ಚಿಮಕ್ಕೆ ಸಿಲುಕಿದ್ದರೆ, 233 ಹಡಗುಗಳು ಜಲಸಂಧಿಯ ಪೂರ್ವಕ್ಕೆ ಇರುವ ಒಮನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಈ 562 ನಾವಿಕರು ಜಲಸಂಧಿ ಮತ್ತು ಒಮನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿದ್ದಾರೆ. ಭಯ ಮತ್ತು ಅನಿಶ್ಚಿತತೆಯ ವಾತಾವರಣದ ನಡುವೆ ಕಠಿಣ ಪರಿಸ್ಥಿತಿಯಲ್ಲಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿ ಪ್ರಾದೇಶಿಕ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳಿದ್ದಾಗ್ಯೂ ಒಮನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ಅಮೆರಿಕ ಹಾಗೂ ಭಾರತೀಯ ನೌಕಾಪಡೆ ರಕ್ಷಿಸಿದೆ. ಒಮನ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತ ತಲುಪಿದ್ದ ವಾಣಿಜ್ಯ ಹಡಗಿನಲ್ಲಿದ್ದ 14 ಭಾರತೀಯ ಪ್ರಜೆಗಳನ್ನು ಅಮೆರಿಕ ಮತ್ತು ಭಾರತೀಯ ನೌಕಾಪಡೆಗಳು ಜಂಟಿ ಕಾರ್ಯಾಚರಣೆಯ ಮೂಲಕ ಅತ್ಯಂತ ಯಶಸ್ವಿಯಾಗಿ ರಕ್ಷಿಸಿವೆ.