ಭಾರತೀಯ ಅತಿಥಿಯಾಗಿದ್ದ ಐಆರ್‌ಐಎಸ್ ದೇನಾ ಮೇಲಿನ ದಾಳಿಗೆ ಅಮೆರಿಕ ಪಶ್ಚಾತಾಪ ಪಡಲಿದೆ: ಇರಾನ್ ಗುಡುಗು
ಇರಾನ್ ಯುದ್ಧ ನೌಕೆ ಮೇಲೆ ಅಮೆರಿಕ ನಡೆಸಿರುವ ದಾಳಿ ಸಮುದ್ರದಲ್ಲಿ ನಡೆದ ದೌರ್ಜನ್ಯವಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ತಿಳಿಸಿದ್ದಾರೆ. ಐಆರ್‌ಐಎಸ್ ದೇನಾ ಭಾರತೀಯ ನೌಕಾಪಡೆಗೆ ಭೇಟಿ ನೀಡಲು ಹೋಗುತ್ತಿತ್ತು. ಈ ವೇಳೆ ಅಮೆರಿಕ ದಾಳಿ ನಡೆಸಿದೆ. ಇದಕ್ಕಾಗಿ ಅಮೆರಿಕ ಪಶ್ಚಾತಾಪ ಪಡಬೇಕು ಎಂದು ಅರಾಗ್ಚಿ ಎಚ್ಚರಿಸಿದ್ದಾರೆ.
ಸಂಗ್ರಹ ಚಿತ್ರ -
ಟೆಹರಾನ್: ಭಾರತದ ಅತಿಥಿಯಾಗಿದ್ದ ಇರಾನ್ (Iran) ಯುದ್ಧನೌಕೆ ಐಆರ್‌ಐಎಸ್ ದೇನಾ (IRIS Dena) ಮೇಲೆ ಅಮೆರಿಕ (US Strike) ನಡೆಸಿದ ದಾಳಿ ಸಮುದ್ರದಲ್ಲಿ ನಡೆದ ದೌರ್ಜನ್ಯ ಎಂದು ಇರಾನ್‌ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ (Iran's foreign minister Seyed Abbas Aragchi) ಹೇಳಿದ್ದಾರೆ. ಈ ಹಡಗು ತಾಲೀಮು ನಡೆಸುವ ಸಲುವಾಗಿ ಭಾರತೀಯ ನೌಕಾಪಡೆಗೆ ಭೇಟಿ ನೀಡುತ್ತಿತ್ತು. ಇದರಲ್ಲಿ ಸುಮಾರು 130 ನಾವಿಕರಿದ್ದರು. ಇದರ ಮೇಲೆ ಯುಎಸ್ ಸೇನಾ ಪದೇ ದಾಳಿ ನಡೆಸಿರುವುದಕ್ಕೆ ವಾಷಿಂಗ್ಟನ್ ತೀವ್ರ ವಿಷಾದ ವ್ಯಕ್ತಪಡಿಸಲಿದೆ ಎಂದು ಅರಾಗ್ಚಿ ಎಚ್ಚರಿಸಿದ್ದಾರೆ.
ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಹಿಂದೂ ಮಹಾಸಾಗರದದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯು ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾದ ಮೇಲೆ ದಾಳಿ ಮಾಡಿ ಮುಳುಗಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅರಾಗ್ಚಿ, ಅಂತಾರಾಷ್ಟ್ರೀಯ ಜಲ ಭಾಗದಲ್ಲಿ ಇರಾನ್ ಯುದ್ಧನೌಕೆ ಐಆರ್‌ಐಎಸ್ ದೇನಾ ಮೇಲೆ ಅಮೆರಿಕ ದಾಳಿ ನಡೆಸಿದೆ. ಇರಾನ್‌ನ ತೀರದಿಂದ ಬಹು ದೂರವಿದ್ದ ಈ ಹಡಗಿಗೆ ದಾಳಿ ನಡೆಸುವ ಮುನ್ನ ಯಾವುದೇ ಎಚ್ಚರಿಕೆಯನ್ನು ಕೂಡ ನೀಡಿಲ್ಲ ಎಂದು ಹೇಳಿದ್ದಾರೆ.
ಖಮೇನಿ ನಿಧನಕ್ಕೆ ಸಂತಾಪ ಸೂಚಿಸಿದ ಭಾರತ; ಇರಾನ್ ಬಗ್ಗೆ ಕೇಂದ್ರದ ನಿಲುವು ಬದಲಾಗಿದ್ದೇಕೆ?
ಏನಾಗಿತ್ತು?
ಎರಡನೇ ಮಹಾಯುದ್ಧದ ಅನಂತರ ಅಮೆರಿಕವು ಶತ್ರು ಹಡಗನ್ನು ಮುಳುಗಿಸಿದ ಮೊದಲ ಘಟನೆ ಇದಾಗಿದೆ. ಸಣ್ಣ ಯುದ್ಧನೌಕೆಯಾದ ಫ್ರಿಗೇಟ್ ಭಾರತದಲ್ಲಿ ಜಂಟಿ ನೌಕಾ ತಾಲೀಮಿನಿಂದ ಹಿಂದಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಐಆರ್‌ಐಎಸ್ ದೇನಾ ಫ್ರಿಗೇಟ್ ಕ್ಲಾಸ್ ಯುದ್ಧನೌಕೆಯು ಫೆಬ್ರವರಿ 18 ರಿಂದ 25 ರವರೆಗೆ ಬಂಗಾಳಕೊಲ್ಲಿಯಲ್ಲಿ ನಡೆದ ಮಿಲನ್ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಿತು. ಅಲ್ಲಿ ಭಾರತೀಯ ನೌಕಾಪಡೆಯು ಅದನ್ನು ಸ್ವಾಗತಿಸಿತು. ಹೀಗಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ತೆರಳಿ ಮರಳಿ ಬರುತ್ತಿದ್ದಾಗ ಅದರ ಮೇಲೆ ದಾಳಿಯಾಗಿದೆ.
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಇರಾನ್ ಕ್ಷಿಪಣಿ ದಾಳಿ: ಮೃತ ಇಬ್ಬರು ಭಾರತೀಯ ನಾವಿಕರ ಗುರುತು ಪತ್ತೆ
ಐಆರ್‌ಐಎಸ್ ದೇನಾದಲ್ಲಿದ್ದ ಸುಮಾರು 80 ಜನರು ಸಾವನ್ನಪ್ಪಿದ್ದಾರೆ. ಶ್ರೀಲಂಕಾ ನೌಕಾಪಡೆಯು ಸುಮಾರು 30 ನಾವಿಕರನ್ನು ರಕ್ಷಿಸಿದೆ. ಅವರನ್ನು ಚಿಕಿತ್ಸೆಗಾಗಿ ದಕ್ಷಿಣ ಬಂದರು ನಗರವಾದ ಗ್ಯಾಲೆಯಲ್ಲಿರುವ ಕರಪಿಟಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ರೇಲ್ ಮತ್ತು ಅಮೆರಿಕ ಸೇನಾ ಪಡೆಯು ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಸೇರಿದಂತೆ ಹಲವು ಉನ್ನತ ಶ್ರೇಣಿಯ ನಾಯಕರನ್ನು ಹತ್ಯೆಗೈದ ಬಳಿಕ ಇರಾನ್ ಅಮೆರಿಕನ್ ನೆಲೆಗಳನ್ನು ಹೊಂದಿರುವ ದೇಶಗಳ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ಸಂಪೂರ್ಣ ಮಧ್ಯಪ್ರಾಚ್ಯ ಪ್ರದೇಶವು ಸಂಘರ್ಷ ವಲಯವಾಗಿ ರೂಪುಗೊಂಡಿದೆ.