ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ; ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್
ಕುವೈತ್‌ನಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಶುಕ್ರವಾರ ಬೆಳಿಗ್ಗೆ ಟಿಶ್ಯೂ ಪೇಪರ್‌ನಲ್ಲಿ ಬರೆದಿದ್ದ ಬಾಂಬ್ ಬೆದರಿಕೆ ಪತ್ರ ಲಭ್ಯವಾಗಿದೆ. ಬಾಂಬ್ ಮತ್ತು ಅಪಹರಣ ಬೆದರಿಕೆ ಪತ್ರ ಕಂಡುಬಂದ ನಂತರ ವಿಮಾನವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಸಂಗ್ರಹ ಚಿತ್ರ -
ನವದೆಹಲಿ: ಕುವೈತ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಶುಕ್ರವಾರ ಬೆಳಿಗ್ಗೆ ಟಿಶ್ಯೂ ಪೇಪರ್‌ನಲ್ಲಿ ಬರೆದಿದ್ದ ಬಾಂಬ್ ಬೆದರಿಕೆ ಪತ್ರ ಲಭ್ಯವಾಗಿದೆ. ಬಾಂಬ್ ಮತ್ತು ಅಪಹರಣ ಬೆದರಿಕೆ ಪತ್ರ ಕಂಡುಬಂದ ನಂತರ ವಿಮಾನವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ 180 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬೆಳಿಗ್ಗೆ 6:40 ರ ಸುಮಾರಿಗೆ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು ಅಧಿಕಾರಿಗಳು ತಿಳಿಸಿದರು.
ವಿಮಾನದೊಳಗೆ ಬಾಂಬ್ ಇದೆ ಎಂದು ಹೇಳುವ ಟಿಶ್ಯೂ ಪೇಪರ್ ಪ್ರಯಾಣಿಕರೊಬ್ಬರಿಗೆ ಸಿಕ್ಕಿದೆ. ನಂತರ ಪ್ರಯಾಣಿಕ ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ. ಲ್ಯಾಂಡಿಂಗ್ ನಂತರ, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಮತ್ತು ಭದ್ರತಾ ಸಂಸ್ಥೆಗಳು ವಿಮಾನವನ್ನು ಸಂಪೂರ್ಣವಾಗಿ ಶೋಧಿಸಿದವು. "ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ" ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಅಧಿಕಾರಿಗಳು ಮಾತನಾಡಿ, ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಇತರ ವಿಮಾನಗಳು ಎಂದಿನಂತೆ ಸಾಮಾನ್ಯ ಕಾರ್ಯಾಚರಣೆ ನಡೆಸಲಾಗಿದೆ. ಈ ಹುಸಿ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ವಿಷಯದ ಕುರಿತು ಎಲ್ಲಾ ಆಯಾಮದಲ್ಲಿ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದರು.
ಕಳೆದ ಡಿಸೆಂಬರ್ನಲ್ಲೂ ಕೂಡ ಕುವೈತ್‌ನಿಂದ ಹೈದರಾಬಾದ್ಗೆ ಆಗಮಿಸುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ಮುಂಬೈಗೆ ತಿರುಗಿಸಿ, ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು. ವಿಮಾನ ಹೈದರಾಬಾದ್ನಲ್ಲಿ ಇಳಿದ ಬಳಿಕ ರಿಮೋಟ್ ಕಂಟ್ರೋಲ್ಡ್ ಸ್ಫೋಟಕ ಸಾಧನಗಳನ್ನು ಬಳಸಿಕೊಂಡು ದಾಳಿ ನಡೆಸುತ್ತೇವೆ ಎಂಬ ಬೆದರಿಕೆ ಸಂದೇಶ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿತ್ತು.