Namma Metro: ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ; ರೈಲು ಸಂಚಾರದಲ್ಲಿ ವ್ಯತ್ಯಯ
ಮಂಗಳವಾರ ಮಧ್ಯಾಹ್ನ ಸುಮಾರು 1:31ರ ಸುಮಾರಿಗೆ ವಿಜಯನಗರ ನಿಲ್ದಾಣದ ಪ್ಲಾಟ್ಫಾರ್ಮ್ಗೆ ರೈಲು ಪ್ರವೇಶಿಸುತ್ತಿದ್ದ ಕ್ಷಣದಲ್ಲೇ ಪ್ರಯಾಣಿಕರೊಬ್ಬರು ಹಳಿಗೆ ಹಾರಿದ್ದಾರೆ. ಇದನ್ನು ತಕ್ಷಣವೇ ಗಮನಿಸಿದ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು, ಹಳಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
-
ಬೆಂಗಳೂರು: ನಮ್ಮ ಮೆಟ್ರೋದ ನೇರಳೆ ಮಾರ್ಗದ ವಿಜಯನಗರ ನಿಲ್ದಾಣದಲ್ಲಿ (Vijayanagar metro station) ವ್ಯಕ್ತಿಯೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮೆಟ್ರೋ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ ಘಟನೆ ಮಂಗಳವಾರ ನಡೆದಿದೆ.
ಮಧ್ಯಾಹ್ನ ಸುಮಾರು 1:31ರ ಸುಮಾರಿಗೆ ವಿಜಯನಗರ ನಿಲ್ದಾಣದ ಪ್ಲಾಟ್ಫಾರ್ಮ್ಗೆ ರೈಲು ಪ್ರವೇಶಿಸುತ್ತಿದ್ದ ಕ್ಷಣದಲ್ಲೇ ಪ್ರಯಾಣಿಕರೊಬ್ಬರು ಹಳಿಗೆ ಹಾರಿದ್ದಾರೆ. ಇದನ್ನು ತಕ್ಷಣವೇ ಗಮನಿಸಿದ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಳಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿ, ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಹಾಗೂ ಸುರಕ್ಷತಾ ತಪಾಸಣೆ ನಡೆಯುತ್ತಿದ್ದ ಸಮಯದಲ್ಲಿ ಸಾರ್ವಜನಿಕರಿಗೆ ಅನನುಕೂಲವಾಗದಂತೆ ಬಿಎಂಆರ್ಸಿಎಲ್ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಈ ವೇಳೆ ಘಟನೆಯಿಂದ ಬಾಧಿತವಲ್ಲದ ವಿಭಾಗಗಳಲ್ಲಿ ಮೆಟ್ರೋ ರೈಲುಗಳನ್ನು ಎಂದಿನಂತೆ ಚಲಾಯಿಸಲಾಯಿತು:
ರಕ್ಷಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಧ್ಯಾಹ್ನ 1:58 ರ ವೇಳೆಗೆ ನೇರಳೆ ಮಾರ್ಗದ ಸಂಪೂರ್ಣ ಸಂಚಾರವನ್ನು ಯಥಾಸ್ಥಿತಿಗೆ ತರಲಾಯಿತು. ಇನ್ನುಳಿದಂತೆ ಹಸಿರು ಮಾರ್ಗ ಹಾಗೂ ಹಳದಿ ಮಾರ್ಗದ ರೈಲು ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ, ಎಂದಿನಂತೆ ಸುಗಮವಾಗಿ ಸೇವೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರಿಗೆ ಉಂಟಾದ ತಾತ್ಕಾಲಿಕ ಅನಾನುಕೂಲತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವಿಷಾದ ವ್ಯಕ್ತಪಡಿಸಿದ್ದು, ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಹಕರಿಸಿದ ಮತ್ತು ಸಂಯಮ ಕಾಯ್ದುಕೊಂಡ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದೆ.