Bengaluru News: ಕಟ್ಟಡ ಮಾಲೀಕನ ನಿರ್ಲಕ್ಷ್ಯ; ಇಟ್ಟಿಗೆ ಬಿದ್ದು 4 ವರ್ಷದ ಮಗು ಸಾವು
ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು 4 ವರ್ಷದ ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಸಂಭವಿಸಿದೆ. ಮೃತ ಮಗುವನ್ನು ಶ್ರೀಶೈಲ್-ದಂಪತಿಯ ಪುತ್ರಿ ಮನುಶ್ರೀ ಅಲಿಯಾಸ್ ಪಾರು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಕುಸಿದು ಬಿದ್ದ ಮನೆ -
ಬೆಂಗಳೂರು, ಡಿ. 18: ಕಟ್ಟಡ ಮಾಲೀಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲೆಯೊಂದು ಬಲಿಯಾಗಿದ್ದು, ಹೆತ್ತವರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಗುರುವಾರ (ಡಿಸೆಂಬರ್ 18) ನಿರ್ಮಾಣ ಹಂತದ ಕಟ್ಟಡದ 4ನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆ ಬಿದ್ದು 4 ವರ್ಷದ ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಎಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ಸಂಭವಿಸಿದೆ (Bengaluru News). ಮೃತ ಮಗುವನ್ನು ಶ್ರೀಶೈಲ್-ದಂಪತಿಯ ಪುತ್ರಿ ಮನುಶ್ರೀ ಅಲಿಯಾಸ್ ಪಾರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮತ್ತಿಬ್ಬರು ಮಕ್ಕಳಿಗೆ ಗಾಯಗಳಾಗಿವೆ.
ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಇದ್ದ ಮನೆಯ ಶೀಟ್‌ನ ಮೇಲೆ ಇಟ್ಟಿಗೆ ಬಿದ್ದು ಈ ದುರಂತ ಸಂಭವಿಸಿದೆ. 5ಕ್ಕೂ ಹೆಚ್ಚು ಹ್ಯಾಲೋ ಬ್ರಿಕ್ಸ್ ಬಿದ್ದ ಪರಿಣಾಮ ಮನೆಯೊಳಗಿದ್ದ ಮನಶ್ರೀ ಸ್ಥಳದಲ್ಲೆ ಮೃತಪಟ್ಟರೆ, ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯಪುರ ಜಿಲ್ಲೆಯ ದಂಪತಿ
ವಿಜಯಪುರ ಜಿಲ್ಲೆಯ ಸಿಂಧಗಿ ಮೂಲದ ಮಮತಾ ಮತ್ತು ಶ್ರೀಶೈಲ್ ದಂಪತಿಯ ಹಿರಿಯ ಮಗಳು ಮನುಶ್ರೀ. ಮಮತಾ 1 ತಿಂಗಳ ಬಾಣಂತಿಯಾಗಿದ್ದು, ಎರಡನೇ ಮಗುವಿನ ಹೆರಿಗೆಗೆ ಚಿನ್ನಪ್ಪನಹಳ್ಳಿಯ ತನ್ನ ಸಹೋದರಿಯ ಮನೆಗೆ ಬಂದು ಅಲ್ಲೇ ಉಳಿದುಕೊಂಡಿದ್ದರು. ಮನುಶ್ರೀ ಎಂದಿನಂತೆ ಶಾಲೆ ಮುಗಿಸಿ ಮಧ್ಯಾಹ್ನ 2:30ರ ಸುಮಾರಿಗೆ ಮನೆಗೆ ಬಂದು ತನ್ನ ದೊಡ್ಡಮ್ಮನ ಮಕ್ಕಳಾದ ಶೇಖರ್ ಹಾಗೂ ಶ್ರೀಯಾನ್ ಜತೆ ಹಾಲ್ನಲ್ಲಿ ಮಲಗಿದ್ದಳು.
ಮಕ್ಕಳು ಮಲಗಿದ ಸ್ವಲ್ಪ ಹೊತ್ತಿನಲ್ಲಿ ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ 4 ಅಂತಸ್ತಿನ ಕಟ್ಟಡದ ಮೇಲಿಂದ ಹಾಲೋಬ್ರಿಕ್ಸ್ ಇಟ್ಟಿಗೆಗಳು ಬಿದ್ದವು. ಮನುಶ್ರೀ ಮಲಗಿದ್ದ ಮನೆಯ ಶೀಟಿನ ಮನೆ ಅಪ್ಪಳಿಸಿದವು. ಭಾರ ತಾಳಲಾರದೆ ಶೀಟ್ ಕುಸಿದು ಬಿತ್ತು. ಜತೆಗೆ ಇಟ್ಟಿಗೆ ಮನುಶ್ರೀ, ತಾಯಿ ಮಮತಾ, ಸಹೋದರರಾದ ಶೇಖರ್ ಹಾಗೂ ಶ್ರೀಯಾನ್ ಮೇಲೆ ಬಿತ್ತು. ತಲೆಗೆ ಗಂಭೀರ ಗಾಯಗೊಂಡ ಮನುಶ್ರೀ ಸ್ಥಳದಲ್ಲೇ ಮೃತಪಟ್ಟರೆ ಗಾಯಗೊಂಡ ಶ್ರಿಯನ್ ಮತ್ತು ಶೇಖರ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಟ್ಟಡ ಮಾಲೀಕನ ನಿರ್ಲಕ್ಷ್ಯ
ಈ ಘಟನೆಗೆ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮಾಲೀಕನ ನಿರ್ಲಕ್ಷ್ಯವೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ನಿರ್ಮಾಣ ವೇಳೆ ಸುರಕ್ಷತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವುದೇ ದುರಂತ ಕಾರಣ ಎನ್ನುವುದು ಗೊತ್ತಾಗಿದೆ. ಮಾಲೀಕನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬೈಕ್‌ನಲ್ಲಿ ಹೋಗುವಾಗಲೇ ಗಂಡನಿಗೆ ಹೃದಯಾಘಾತ; ರಸ್ತೆಯಲ್ಲಿ ಪತ್ನಿ ಅಂಗಲಾಚಿದ್ರೂ ಸಿಗಲಿಲ್ಲ ಸಹಾಯ
ಮೂವರು ಯುವಕರ ದಾರುಣ ಸಾವು
ಬೊಲೆರೋ ವಾಹನ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಕೊಪ್ಪಳ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಗಳಾದ ವಾಜೀದ್, ರಾಜಾ ಹುಸೇನ್ ಹಾಗೂ ಗಂಗಾವತಿ ತಾಲೂಕಿನ ಶ್ರೀರಾಮನಗರದ ಆಸೀಫ್ ಎಂದು ಗುರುತಿಸಲಾಗಿದೆ. ಬೈಕ್ ಸವಾರರು ಶ್ರೀರಾಮನಗರದಿಂದ ಹೊಸಹಳ್ಳಿ ಗ್ರಾಮಕ್ಕೆ ಹೋಗುವಾಗ ಅಪಘಾತ ನಡೆದಿದೆ.