1,500 ಜನಸಂಖ್ಯೆಯ ಈ ಗ್ರಾಮದಲ್ಲಿ ಕೇವಲ 3 ತಿಂಗಳಲ್ಲಿ 27 ಸಾವಿರ ಶಿಶುಗಳ ಜನನ! ಏನಿದು ವೈಚಿತ್ರ್ಯ?
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 27 ಸಾವಿರ ಜನನ ನೋಂದಣಿಯಾಗಿರುವ ವಿಚಾರವೊಂದು ಇದೀಗ ಎಲ್ಲರ ಗಮನ ಸೆಳೆದಿದೆ. ವಿಶೇಷವೆಂದರೆ ಈ ಗ್ರಾಮದ ಜನಸಂಖ್ಯೆ ಕೇವಲ 15 ಸಾವಿರ. ಈ ವಿಚಾರವೀಗ ಅಧಿಕಾರಿಗಳ ನಿದ್ದೆಗೆಡಿಸಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಈ ಘಟನೆಯನ್ನು ರಾಜ್ಯದಲ್ಲಿ ನಡೆದಿರುವ ಅತೀ ದೊಡ್ಡ ಜನನ ದಾಖಲಾತಿ ಹಗರಣವೆಂದು ಪರಿಗಣಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಮುಂಬೈ, ಡಿ. 18: ಮಹಾರಾಷ್ಟ್ರದಲ್ಲಿರುವ (Maharashtra) ಯವತ್ನಾಳ್ (Yavatmal) ಎಂಬ ಸಣ್ಣ ಗ್ರಾಮದಲ್ಲಿ(Village) ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 27 ಸಾವಿರ ಜನನ (Bbnormal entries) ನೋಂದಣಿಯಾಗಿರುವ ವಿಚಾರ ಇದೀಗ ಎಲ್ಲರನ್ನು ಅಚ್ಚರಿಗೆ ದೂರಿದೆ. ವಿಶೇಷವೆಂದರೆ ಈ ಗ್ರಾಮದ ಜನಸಂಖ್ಯೆ ಕೇವಲ 15 ಸಾವಿರ. ಈ ವಿಚಾರವೀಗ ಅಧಿಕಾರಿಗಳ ನಿದ್ದೆಗೆಡಿಸಿದ್ದು, ತನಿಖೆಗೆ ಆದೇಶ ಹೊರಡಿಸಲಾಗಿದೆ. ಈ ಘಟನೆಯನ್ನು ರಾಜ್ಯದಲ್ಲಿ ನಡೆದಿರುವ ಅತೀ ದೊಡ್ಡ ಜನನ ದಾಖಲಾತಿ ಹಗರಣವೆಂದು ಪರಿಗಣಿಸಲಾಗಿದೆ.
2025ರ ಸೆಪ್ಟೆಂಬರ್ ಮತ್ತು ನವಂಬರ್ ತಿಂಗಳಿನಲ್ಲಿ ಶೆಂಡುರುಸಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಪರಿಷ್ಕರಣಾ ತಪಾಸಣೆಯನ್ನು ಕೈಗೊಂಡ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಜನನ ಮತ್ತು ಮರಣ ದಾಖಲಾತಿಯಲ್ಲಿ ವಿಳಂಬ ಕಂಡುಬಂದ ಸಂದರ್ಭದಲ್ಲಿ ಸಂಶಯಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಶಾಕಿಂಗ್ ವಿಚಾರ ಗೊತ್ತಾಗಿದೆ. ಪ್ರಾರಂಭದಲ್ಲಿ ಇದನ್ನು ಕಣ್ತಪ್ಪಿನಿಂದಾಗಿರುವ ಕ್ಲೆರಿಕಲ್ ಎರರ್ ಎಂದು ಪರಿಗಣಿಲಾಗಿತ್ತು. ಆದರೆ ಬಳಿಕ ಇದರ ಬಗ್ಗೆ ವಿಸ್ತೃತ ತನಿಖೆಗಿಳಿದ ಸಂದರ್ಭದಲ್ಲಿ ಇದೊಂದು ದೊಡ್ಡ ಮಟ್ಟದ ಸೈಬರ್ ವಂಚನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಪ್ರಕರಣ ಇದೀಗ ನಾಗರಿಕ ನೋಂದಣಿ ವ್ಯವಸ್ಥೆ (ಸಿಆರ್.ಎಸ್.)ಯ ಭದ್ರತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಿ.ಆರ್.ಎಸ್. ಎಂಬುದು ನಾಗರಿಕರ ಜನನ ಮತ್ತು ಮರಣ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ನೋಂದಾಯಿಸುವ ಮಾಡಿಕೊಳ್ಳುವ ವ್ಯವಸ್ಥೆ.
ಪ್ರಾರಂಭಿಕ ತನಿಖೆಯಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಶೆಂಡೂರುಸಾನಿ ಗ್ರಾಮ ಪಂಚಾಯತ್‌ನ ಸಿ.ಆರ್.ಎಸ್. ಲಾಗಿನ್ ವಿವರಗಳು ಸೋರಿಕೆಯಾಗಿರುವುದು ಕಂಡುಬಂದಿದೆ. ಇಲ್ಲಿನ ಸಿ.ಆರ್.ಎಸ್. ಐಡಿ ಮುಂಬೈನಲ್ಲಿ ಮ್ಯಾಪ್ ಆಗಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇದರ ಪ್ರಕಾರ ಇಲ್ಲಿನ ಜನನ, ಮರಣ ದಾಖಲಾತಿಗಳನ್ನು ಬೇರೊಂದು ಕಡೆಯಿಂದ ಎಂಟ್ರಿ ಮಾಡುತ್ತಿದ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಇದು ಸ್ಥಳೀಯ ವ್ಯಾಪ್ತಿ ಮತ್ತು ಪರಿಷ್ಕರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.
ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಾರದಂತೆ ಸಾವಿರಾರು ನಕಲಿ ಜನನ ನೋಂದಾವಣಿಗಳನ್ನು ಸಿಸ್ಟಮ್‌ಗೆ ಅಪ್‌ಲೋಡ್ ಮಾಡಿರುವುದು ಪತ್ತೆಯಾಗಿದ್ದು, ಬೃಹತ್ ಹಗರಣದ ವಾಸನೆ ಅಧಿಕಾರಿಗಳ ಮೂಗಿಗೆ ಬಡಿಯುವಂತೆ ಮಾಡಿದೆ.
Gen-Zಗಳಿಗಾಗಿಯೇ ಬೆಂಗಳೂರಿನಲ್ಲಿ ತೆರೆಯಲಾಯ್ತು ಅಂಚೆ ಕಚೇರಿ; ಏನಿದು ಹೊಸ ಥೀಮ್?
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಯವತ್ನಾಳ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೇ, ಜಿಲ್ಲಾ ಪರಿಷತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂದರ್ ಪಟ್ಕಿ, ಪಂಚಾಯತ್ ಇಲಾಖೆಯ ಉಪ ಸಿಇಒ ನೇತೃತ್ವದಲ್ಲಿ ಒಂದು ತನಿಖಾ ಸಮಿತಿಯನ್ನು ರಚಿಸಿದ್ದಾರೆ. ಶೆಂಡುರುಸಾನಿ ಗ್ರಾಮದಲ್ಲಿ ಖುದ್ದು ತಪಾಸಣೆ ನಡೆಸಿದ ಬಳಿಕ, 27,397 ಜನನ ದಾಖಲಾತಿಗಳು ಮತ್ತು 7 ಮರಣ ದಾಖಲಾತಿಗಳು ಸಂಪೂರ್ಣವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಹೊರತಾದದ್ದು ಎಂಬ ನಿರ್ಧಾರಕ್ಕೆ ಈ ಸಮಿತಿ ಬಂದಿದೆ.
ಇದಾದ ಬಳಿಕ, ಇದೀಗ ಈ ಸಿ.ಆರ್.ಎಸ್. ಐಡಿ ಹೇಗೆ ಸೋರಿಕೆಯಾಯ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ. ಈ ನಕಲಿ ದಾಖಲಾತಿಗಳನ್ನು ಯಾವೆಲ್ಲ ಸರಕಾರಿ ಯೋಜನಗೆಳಿಗೆ ಅಥವಾ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಈ ನಡುವೆ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಗ್ರಾಮಕ್ಕೆ ಭೇಟಿ ನೀಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತ್‌ನ ಕಂಪ್ಯೂಟರ್ ಅಪರೇಟರನ್ನು ಯಾರೋ ದುರ್ಬಳಕೆ ಮಾಡಿಕೊಂಡಿರುವಂತಿದೆ ಎಂದು ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ತಿಳಿಸಿದ್ದಾರೆ. ಈ ದಾಖಲಾತಿಗಳಲ್ಲಿ ಎಂಟ್ರಿಯಾಗಿರುವ ಹೆಸರಲ್ಲಿ 99% ಪಶ್ಚಿಮ ಬಂಗಾಲ, ಉತ್ತರ ಪ್ರದೇಶ ಮತ್ತು ಸಮೀಪದ ಪ್ರದೇಶಗಳಿಗೆ ಸೇರಿದವರದ್ದಾಗಿದೆ ಎಂದು ಅವರು ಹೇಳಿದ್ದಾರೆ. ʼʼಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಬಳಿ ಮಾತನಾಡಿದ್ದು, ಈ ಎಲ್ಲ ಜನನ ದಾಖಲಾತಿಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದೇನೆ’ʼ ಎಂದು ಅವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಚಾರಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.