HSRP Number Plate: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಆದೇಶ ಹಿಂಪಡೆದಿಲ್ಲ: ಸಾರಿಗೆ ಇಲಾಖೆ ಸ್ಪಷ್ಟನೆ
ಹೈಕೋರ್ಟ್ ಆದೇಶದಿಂದಾಗಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಬಗ್ಗೆ ಪ್ರಚಾರ ನಡೆಸಲು ಸಾಧ್ಯವಾಗಿಲ್ಲ. ಆದರೆ, HSRP ಅಳವಡಿಕೆ ಕಡ್ಡಾಯ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ. ಇದರಿಂದಾಗಿ ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳಬೇಕಾಗಿರುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (ಸಂಗ್ರಹ ಚಿತ್ರ) -
ಬೆಂಗಳೂರು: ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯವಲ್ಲ ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಕೆಲವು ಟಿ.ವಿ ಮತ್ತು ಇತರೆ ಮಾಧ್ಯಮಗಳಲ್ಲಿ ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP Number plate) ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಆದರೆ, HSRP ಕಡ್ಡಾಯ ನಿಯಮದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದೆ.
ಈ ಬಗ್ಗೆ ಬೆಂಗಳೂರು ದಕ್ಷಿಣ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 50ರಡಿ ಕೇಂದ್ರ ಸರ್ಕಾರವು ದಿನಾಂಕ: 04-12-2018 ರಂದು ಅಧಿಸೂಚನೆ ಹೊರಡಿಸಿ, 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (High Security Registration Plates) ಅಳವಡಿಸಲು ಕಡ್ಡಾಯಗೊಳಿಸಿ ಆದೇಶಿಸಿದೆ. ಅದರಂತೆ, ಕರ್ನಾಟಕ ಸರ್ಕಾರವು ದಿನಾಂಕ:17-8-2023 ರಂದು ಅಧಿಸೂಚನೆ ಹೊರಡಿಸಿ, 2019ರ ಏಪ್ರಿಲ್ 1ಕ್ಕಿಂತ ಮುಂಚಿತವಾಗಿ ನೋಂದಣಿಯಾದ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯವು WA No.1361/2023 ರಲ್ಲಿ ನಿರ್ದೇಶನಗಳನ್ನು ನೀಡಿ, ರಿಟ್ ಅಪೀಲುದಾರರ ಅಹವಾಲುಗಳನ್ನು ಆಲಿಸಿ ಇತ್ಯರ್ಥಪಡಿಸಲು ಪ್ರಕರಣವನ್ನು ಏಕಸದಸ್ಯ ಪೀಠಕ್ಕೆ ವರ್ಗಾಯಿಸಿ ಆದೇಶಿಸಿದೆ. ಇದೇ ಆದೇಶದಲ್ಲಿ ದಿನಾಂಕ 12-06-2024 ರಂದು ನೀಡಿದ ಆದೇಶವನ್ನು ಮುಂದುವರಿಸಿದ್ದು, ಕರ್ನಾಟಕದಲ್ಲಿ ವಾಹನಗಳಿಗೆ HSRP ಪ್ಲೇಟ್ ಅಳವಡಿಸುವ ಸಂಬಂಧ ಮುಂದೆ ಯಾವುದೇ ಕ್ರಮ, ನಿರ್ಣಯ ತೆಗೆದುಕೊಳ್ಳಬಾರದು ಎಂದು ತಿಳಿಸಿದೆ.
ಹೈಕೋರ್ಟ್ ಆದೇಶದಿಂದಾಗಿ, ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯ ಬಗ್ಗೆ ಪ್ರಚಾರ ನಡೆಸಲು ಸಾಧ್ಯವಾಗಿಲ್ಲ. ಆದರೆ, ವಾಹನಗಳಿಗೆ HSRP ಅಳವಡಿಕೆಯನ್ನು ಕಡ್ಡಾಯಗೊಳಿಸಿ ಆದೇಶಿಸಿರುವ ಅಧಿಸೂಚನೆಗೆ ಯಾವುದೇ ತಡೆಯಾಜ್ಞೆ ಇಲ್ಲ. ಇದರಿಂದಾಗಿ ಸಾರ್ವಜನಿಕರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳಬೇಕಾಗಿರುತ್ತದೆ.
ಹೊರಗುತ್ತಿಗೆ ನೌಕರರ ಬಿಡುಗಡೆ ಆದೇಶವೇ ನಕಲಿ: ಆರ್ಥಿಕ ಇಲಾಖೆ ಸ್ಪಷ್ಟನೆ
ಸುಪ್ರೀಂ ಕೋರ್ಟ್ ಸಹ WP No.13029/1985 (M.C.Mehta Vs Union of India & others) ಪ್ರಕರಣದಲ್ಲಿ Implementation of High Security Registration Plate Order, 2018 ಕುರಿತು ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ನೀಡುವಂತೆ ತಿಳಿಸಿದೆ. ಹೀಗಾಗಿ ವಾಹನಗಳಿಗೆ ಕಡ್ಡಾಯವಾಗಿ HSRP ಅಳವಡಿಸಬೇಕಾಗಿರುತ್ತದೆ. ಆದ್ದರಿಂದ, ಕೆಲವು ಟಿ.ವಿ. ಮತ್ತು ಇತರೆ ಮಾಧ್ಯಮಗಳಲ್ಲಿ ಹಳೆಯ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಲ್ಲ ಎಂಬ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.