ಬೆಂಗಳೂರಿನ ಈ ಬೇಕರಿಯಲ್ಲಿ ಪನೀರ್ ಟಿಕ್ಕಾ ಖರೀದಿಸಿದರೆ ಹಲ್ಲಿ ಫ್ರೀ! ಗ್ರಾಹಕ ಆಸ್ಪತ್ರೆಗೆ ದಾಖಲು
Lizard found in Paneer Tikka: ಬೆಂಗಳೂರಿನ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ದೀಪು ಎನ್ಕೆ ಎಂಬವವರು ಪನೀರ್ ಟಿಕ್ಕಾ ಖರೀದಿಸಿದ್ದಾರೆ. ಪನೀರ್ ಟಿಕ್ಕಾವನ್ನು ಅರ್ಧದಷ್ಟು ತಿಂದ ನಂತರ ಅದರೊಳಗೆ ಹಲ್ಲಿ ಪತ್ತೆಯಾಗಿದೆ. ಅದನ್ನು ಕಂಡಾಕ್ಷಣ ಬೇಕರಿಯವರನ್ನು ಪ್ರಶ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಂದರ್ಭಿಕ ಎಐ ರಚಿತ ಚಿತ್ರ -
ಬೆಂಗಳೂರು, ಏ. 29: ಕೆಲವೊಂದು ಹೋಟೆಲ್ ಅಥವಾ ಬೇಕರಿಗಳಲ್ಲಿ ತಿಂಡಿಯಲ್ಲಿ ಹಲ್ಲಿ, ಜಿರಳೆ ಮುಂತಾದವುಗಳು ಕಂಡುಬಂದು ಗ್ರಾಹಕರು ದೂರು ನೀಡಿರುವಂತಹ ಪ್ರಕರಣಗಳು ನಡೆದಿವೆ. ಇದೀಗ ಇಂಥದ್ದೇ ಪ್ರಕರಣ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಏಪ್ರಿಲ್ 25ರಂದು ಮಾಗಡಿ ಮುಖ್ಯ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ದೀಪು ಎನ್ಕೆ ಎಂಬವವರು ಪನೀರ್ ಟಿಕ್ಕಾ ಖರೀದಿಸಿದ್ದಾರೆ. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿರುವ ಅವರು ತುಂಬಾ ಹಸಿದಿದ್ದರಿಂದ ಬೇಕರಿಯಲ್ಲಿ ಚಿಕನ್ ರೋಲ್ ಕೇಳಿದ್ದಾರೆ. ಆದರೆ ಅದು ಖಾಲಿಯಾಗಿದ್ದರಿಂದ ಪನೀರ್ ಟಿಕ್ಕಾ ಆರ್ಡರ್ ಮಾಡಿದ್ದಾರೆ. ಅದನ್ನು ತಿನ್ನುವಾಗ ಬೇಸ್ತು ಬೀಳುವ ಸರದಿ ದೀಪು ಅವರದ್ದಾಗಿತ್ತು.
ಪನೀರ್ ಟಿಕ್ಕಾವನ್ನು ಅರ್ಧದಷ್ಟು ತಿಂದ ನಂತರ ಅದರೊಳಗೆ ಹಲ್ಲಿ ಕಂಡು ಬಂದಿದೆ. ನಂತರ ವಾದ-ಪ್ರತಿವಾದ ನಡೆದಿದೆ. ದೀಪು ತಕ್ಷಣ ಆಸ್ಪತ್ರೆಗೆ ದಾಖಲಾದರು. ಪೊಲೀಸರಿಗೂ ದೂರು ನೀಡಿದ್ದಾರೆ. ಈ ಘಟನೆ ಮತ್ತೊಮ್ಮೆ ಆಹಾರದ ಸುರಕ್ಷತೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಗೋವಿಂದರಾಜ ನಗರ ಪೊಲೀಸರಿಗೆ ಸಲ್ಲಿಸಿದ ದೂರಿನ ಪ್ರಕಾರ, ಹಲ್ಲಿಯನ್ನು ನೋಡಿದ ನಂತರ ದೀಪು ಬೇಕರಿ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆದರೆ ಅವರ ಪ್ರತಿಕ್ರಿಯೆಯು ನಿರ್ಲಕ್ಷ್ಯದಿಂದ ಕೂಡಿತ್ತು ಎಂದು ಆರೋಪಿಸಿದರು.
ತಮ್ಮ ಆವರಣ ಸ್ವಚ್ಛವಾಗಿದೆ ಎಂದು ಅವರು ಹೇಳಿದರಂತೆ. ಅಲ್ಲದೆ, ಒಳಗೆ ಬಂದು ಸ್ವತಃ ಪರೀಕ್ಷಿಸಲು ಹೇಳಿದರು. ಪರಿಶೀಲಿಸುವಾಗ, ದೀಪು ಸ್ಥಳದಲ್ಲೇ ವಾಂತಿ ಮಾಡಿಕೊಂಡರು. ದೀಪು ಜತೆ ಬೇಕರಿ ಸಿಬ್ಬಂದಿಯೊಬ್ಬರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಬಳಿಯ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತೆರಳಿದರು.
ಹೈದರಾಬಾದ್ ವಿಮಾನ ನಿಲ್ದಾಣದ ಆಹಾರ ಮಳಿಗೆಯ ಜೀರಾ ರೈಸ್‌ನಲ್ಲಿ ಜಿರಳೆ ಪತ್ತೆ
ವೈದ್ಯರು ಅವರನ್ನು 24 ಗಂಟೆಗಳ ಕಾಲ ವೀಕ್ಷಣೆಯಲ್ಲಿ ಇರಿಸಿದರು. ಆ ಸಮಯದಲ್ಲಿ, ಬೇಕರಿ ಸಿಬ್ಬಂದಿ ಆಸ್ಪತ್ರೆಯ ವೆಚ್ಚವನ್ನು ಭರಿಸಲು ನಿರಾಕರಿಸಿದರು. ದೀಪು ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಕೇಳಿಕೊಂಡರು. ಅದಕ್ಕೆ ದೀಪು ನಿರಾಕರಿಸಿದರು. ʼʼದಾರಿಯಲ್ಲಿ ನನ್ನ ಸ್ಥಿತಿ ಹದಗೆಟ್ಟರೆ ಏನು ಮಾಡುವುದು?ʼʼ ಎಂದು ಪ್ರಶ್ನಿಸಿದರು.
ವಿಷಕಾರಿ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಬಿಎನ್‌ಎಸ್ ನಿಬಂಧನೆಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಯೊಬ್ಬರು ದೀಪು ಪನೀರ್ ಟಿಕ್ಕಾದಲ್ಲಿ ಹಲ್ಲಿಯಿದ್ದುದರ ಫೋಟೊ ಹಾಜರು ಪಡಿಸಿಲ್ಲ ಎಂದು ಹೇಳಿದರು. ಫೋಟೊ ಕ್ಲಿಕ್ ಮಾಡಲು ಭಯಭೀತರಾಗಿ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದುದಾಗಿ ದೀಪು ಹೇಳಿದರು. ಈ ಸಂಬಂಧ ಪ್ರಕರಣ ತನಿಖೆಯಲ್ಲಿದೆ.
ಹೋಟೆಲ್‌ನಲ್ಲಿ ಆಹಾರ ಸೇವಿಸುವಾಗ ಇಂತಹ ವಸ್ತು ಕಂಡುಬಂದರೆ ಅದನ್ನು ಎಸೆಯಬೇಡಿ. ತಕ್ಷಣ ಅದರ ಫೋಟೊ ತೆಗೆಯಿರಿ. ಬಳಿಕ ಅದನ್ನು ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ವರದಿ ಮಾಡಿ. ಇದರಿಂದ ಅಂತಹ ಹೋಟೆಲ್ ಅಥವಾ ಬೇಕರಿಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಬಹುದು ಪೊಲೀಸರು ತಿಳಿಸಿದ್ದಾರೆ.