ಶಾಲಾ- ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ನಿಷೇಧ; ಸರ್ಕಾರದಿಂದ ಮಹತ್ವದ ಆದೇಶ
ಶಾಲೆ ಹಾಗೂ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉಡುಪು ಕೂಡಾ ಸಭ್ಯವಾಗಿರಬೇಕು. ಅರೆಬರೆ ವಸ್ತ್ರಗಳನ್ನು ಧರಿಸುವ ಹಾಗಿಲ್ಲ ಎಂದು ತಿಳಿಸಲಾಗಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ಶಾಲೆ ಹಾಗೂ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು (Karnataka Government) ಹಾಗೂ ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿಗಳು ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಲ್ಲಿ ಅಸಭ್ಯ, ಅಶ್ಲೀಲ ಹಾಡುಗಳನ್ನು ಹಾಕಿ ನೃತ್ಯ ಮಾಡಿದ್ರೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಇಲಾಖೆ ತಿಳಿಸಿದೆ.
ಸುತ್ತೋಲೆಯಲ್ಲಿ, “ಅಶ್ಲೀಲ ಹಾಡುಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಶಿಸ್ತಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಹಾಗೂ ಶಿಕ್ಷಣ ಸಂಸ್ಥೆಗಳ ಗೌರವಕ್ಕೂ ಧಕ್ಕೆ ಉಂಟಾಗುತ್ತದೆ,” ಎಂದು ತಿಳಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ತಡೆಯಲು ಜಾಗೃತಿ ಮೂಡಿಸುವಂತೆ ಮತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಲಾಗಿದೆ.
ಸುತ್ತೋಲೆಯಲ್ಲೇನಿದೆ?
ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಉಡುಪು ಕೂಡಾ ಸಭ್ಯವಾಗಿರಬೇಕು. ಅರೆಬರೆ ವಸ್ತ್ರಗಳನ್ನು ಧರಿಸುವ ಹಾಗಿಲ್ಲ. ಜಾನಪದ, ದೇಶಭಕ್ತಿಗೀತೆ, ಪರಿಸರ ಕಾಳಜಿಯ ಗೀತೆಗಳು, ರಾಷ್ಟ್ರಪ್ರೇಮ, ಹಾಗೂ ಸಮಾಜಮುಖಿ ಚಿಂತನೆಯ ಹಾಡುಗಳನ್ನು ಆಯ್ಕೆ ಮಾಡಬೇಕು. ಅಶ್ಲೀಲ ಸಾಹಿತ್ಯಗಳನ್ನು ಹೊಂದಿರುವ ಹಾಡುಗಳು , ದ್ವಂದ್ವಾರ್ಥ ನೀಡುವ ಹಾಡುಗಳು, ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹಾಡುಗಳಿಗೆ ಮಕ್ಕಳ ನೃತ್ಯ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಶೇಕಡಾ 80ರಷ್ಟು ರಾಜಕಾರಣಿಗಳು ಅಶ್ಲೀಲ ವಿಡಿಯೊ ನೋಡುತ್ತಾರೆ; ಮತ್ತೊಂದು ಕಿಡಿ ಹೊತ್ತಿಸಿದ ಪಕ್ಷೇತರ ಸಂಸದ ಪಪ್ಪು ಯಾದವ್
ನಿಯಮ ಮೀರಿದರೆ, ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸಿದರೆ ಶಾಲಾ ಮುಖ್ಯೋಪಾದ್ಯಾಯರು ಹಾಗೂ ಸಂಬಂಧಿಸಿದ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಪ್ರೇರಣಾದಾಯಕ, ದೇಶಭಕ್ತಿ, ನೈತಿಕ ಮೌಲ್ಯಗಳು, ಗೌರವ ಮತ್ತು ಸಹೋದರತ್ವವನ್ನು ಉತ್ತೇಜಿಸುವ ಹಾಡುಗಳನ್ನು ಶಿಕ್ಷಕರು ಆಯ್ಕೆ ಮಾಡಬೇಕು ಎಂದು ಇಲಾಖೆ ತಿಳಿಸಿದೆ. ರಾಷ್ಟ್ರೀಯ ಅಭಿಮಾನವನ್ನು ಮೂಡಿಸುವ ಹಾಗೂ ಉತ್ತಮ ಸಕಾರಾತ್ಮಕ ಸಾಹಿತ್ಯವಿರುವ ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ತಿಳಿಸಲಾಗಿದೆ.