ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ: ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ 31 ಲಕ್ಷ ರುಪಾಯಿ ದೋಚಿದ ಡಕಾಯಿತರು

Robbery in Bengaluru: ಬೆಂಗಳೂರು ನಗರದ ಬನ್ನೇರುಘಟ್ಟದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ನಡೆದ ದರೋಡೆ ಭೀತಿ ಮೂಡಿಸಿದೆ. ಖಾಸಗಿ ಕಂಪನಿಯ ಉದ್ಯೋಗಿಯ ಮೇಲೆ ದಾಳಿ ನಡೆಸಿ 31 ಲಕ್ಷ ರುಪಾಯಿಯನ್ನು ದರೋಡೆಕೋರರು ದೋಚಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಘಟನೆಯ ವಿಡಿಯೊ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಹಾಡಹಗಲೇ ದರೋಡೆ; 31 ಲಕ್ಷ ರುಪಾಯಿ ದೋಚಿದ ಖದೀಮರು

ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು -

Priyanka P
Priyanka P Feb 2, 2026 6:44 PM

ಬೆಂಗಳೂರು, ಫೆ. 2: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹಾಡಹಾಗಲೇ ವ್ಯಕ್ತಿಯೊಬ್ಬರಿಂದ 31 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ದೋಚಿ ನಂತರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದೆ. ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ ಭಾನುವಾರ (ಫೆಬ್ರವರಿ 1) ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗಿದೆ.

ಭಾನುವಾರ ಸಂಜೆ 4:20ರ ಸುಮಾರಿಗೆ ಈ ದರೋಡೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು 24 ವರ್ಷದ ಕೈಲಾಸ್ ಎಂದು ಗುರುತಿಸಲಾಗಿದೆ. ಖಾಸಗಿ ಇ-ಕಾಮರ್ಸ್ ಕಂಪನಿಯ ಹಲವು ಶಾಖೆಗಳಿಂದ ಹಣ ಸಂಗ್ರಹಿಸಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬನ್ನೇರುಘಟ್ಟದಲ್ಲಿ ಎರಡು ಸ್ಕೂಟರ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನನ್ನು ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ.

ಇಲ್ಲಿದೆ ವಿಡಿಯೊ:



ಕೈಲಾಸ್ ಉಡಾನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಕೈಲಾಸ್ ಉಡಾನ್‌ನ ಮೂರು ಶಾಖೆಗಳಿಂದ ಒಟ್ಟು 31,38,625 ರುಪಾಯಿ ಸಂಗ್ರಹಿಸಿದ್ದರು. ಅವರು ಸಂಪೂರ್ಣ ಹಣವನ್ನು ತಮ್ಮ ಸ್ಕೂಟರ್‌ನಲ್ಲಿ ಇಟ್ಟುಕೊಂಡಿದ್ದರು.

ಕೈಲಾಸ್‍ನನ್ನು ಬೆನ್ನಟ್ಟಿದ ದರೋಡೆಕೋರರು ಮಚ್ಚು ಹಿಡಿದು ಬೆದರಿಸಿದ್ದಾರೆ. ಬಳಿಕ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಆತನ ಸ್ಕೂಟರ್‌ನೊಂದಿಗೆ ಪರಾರಿಯಾಗಿದ್ದಾರೆ. ವರದಿಗಳ ಪ್ರಕಾರ, ಕೈಲಾಸ್ ಅವರ ಸ್ಕೂಟರ್‌ ಅನ್ನು ಸುಮಾರು ಒಂದು ಕಿಲೋ ಮೀಟರ್‌ವರೆಗೆ ತೆಗೆದುಕೊಂಡು ಹೋದ ನಂತರ ಆರೋಪಿಗಳು ಬಿಟ್ಟು ಹೋಗಿದ್ದಾರೆ. ಜತೆಗೆ ಸ್ಕೂಟರ್‌ನಲ್ಲಿದ್ದ ಎಲ್ಲ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.

ಮಾದರಿ ಈ 89 ವರ್ಷದ ವೃದ್ಧೆಯ ಜೀವನೋತ್ಸಾಹ: ಬದುಕಿನ‌ ಬಂಡಿ ಸಾಗಿಸಲು ರೈಲಿನಲ್ಲಿ ಬಳೆ ಮಾರಾಟ!

ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಬನ್ನೇರುಘಟ್ಟ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಪಡೆದರು. ಈ ಸಂಬಂಧ ವಿವರವಾದ ತನಿಖೆ ಆರಂಭಿಸಲಾಗಿದೆ. ದರೋಡೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅವರನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಹೈದರಾಬಾದ್‍ನಲ್ಲಿ ಗುಂಡು ಹಾರಿಸಿ 6 ಲಕ್ಷ ರೂ. ದರೋಡೆ

ನೆರೆಯ ತೆಲಂಗಾಣದ ಹೈದರಾಬಾದ್‍ನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಕೇರಳದ ಉದ್ಯಮಿಯ ಮೇಲೆ ಗುಂಡು ಹಾರಿಸಿ 6 ಲಕ್ಷ ರುಪಾಯಿ ದೋಚಲಾಗಿದೆ. 26 ವರ್ಷದ ಉದ್ಯಮಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಹಣ ಠೇವಣಿ ಇಡುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದರು.

ಜನವರಿ 31ರ ಬೆಳಗ್ಗೆ ಸುಮಾರು 7 ಗಂಟೆಗೆ, ರಿನ್ಶಾದ್ ತನ್ನ ಸ್ನೇಹಿತ ಅಮೀರ್ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನದಲ್ಲಿ ಕೋಟಿಯ ಬ್ಯಾಂಕ್ ಸ್ಟ್ರೀಟ್ ರಸ್ತೆಯಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಯ ಎಟಿಎಂಗೆ ಹೋಗಿದ್ದರು. ನಗದು ಚೀಲದೊಂದಿಗೆ ಎಟಿಎಂ ಬಳಿ ನಿಂತಿದ್ದಾಗ, ಇಬ್ಬರು ಅಪರಿಚಿತ ದುಷ್ಕರ್ಮಿಗಳು ಹಿಂದಿನಿಂದ ಅವನ ಬಳಿಗೆ ಬಂದಿದ್ದರು. ನಂತರ ಬಂದೂಕು ತೆಗೆದು ಗುಂಡು ಹಾರಿಸಿ, ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಸದ್ಯ, ರಿನ್ಶಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.