ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ 4ನೇ ಮಹಡಿಯಿಂದ ಹಾರಿ ಡಿಆರ್‌ಡಿಒ ಹಿರಿಯ ವಿಜ್ಞಾನಿ ಆತ್ಮಹತ್ಯೆ; ತಂದೆಯ ಕಣ್ಣೆದುರೇ ನಡೆಯಿತು ದುರಂತ!​

Bengaluru News: ಬೆಂಗಳೂರು ನಗರದ ಸೀಗೆಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ. ಡಿಆರ್‌ಡಿಒ ಅಧೀನದಲ್ಲಿರುವ ಎಡಿಎ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಜ್ಞಾನಿ, ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆ.ಆರ್.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4ನೇ ಮಹಡಿಯಿಂದ ಹಾರಿ ಡಿಆರ್‌ಡಿಒ ಹಿರಿಯ ವಿಜ್ಞಾನಿ ಆತ್ಮಹತ್ಯೆ

-

Prabhakara R
Prabhakara R Oct 27, 2026 6:23 PM

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧೀನದಲ್ಲಿರುವ ವೈಮಾನಿಕ ಅಭಿವೃದ್ಧಿ ಸಂಸ್ಥೆಯ (ಎಡಿಎ) ಹಿರಿಯ ವಿಜ್ಞಾನಿಯೊಬ್ಬರು (DRDO Senior scientist), ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸೀಗೆಹಳ್ಳಿಯಲ್ಲಿ ನಡೆದಿದೆ. ಅಕ್ಟೋಬರ್ 21ರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಡಿಎ ಗ್ರೇಡ್ 'ಎಫ್'ನ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ (47) ಮೃತರು.

ಎಡಿಎದ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಟಿಯಾರ್, ಸೀಗೆಹಳ್ಳಿಯಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು.​ ಇವರು ಕಳೆದ ಒಂದು ತಿಂಗಳಿಗೂ ಅಧಿಕ ಸಮಯದಿಂದ ತೀವ್ರ ಕೆಲಸದ ಒತ್ತಡ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ವೈದ್ಯರಿಂದ ಚಿಕಿತ್ಸೆ ಮತ್ತು ಸಲಹೆಗಳನ್ನು ಪಡೆಯುತ್ತಿದ್ದರು. ದುರಂತ ಸಂಭವಿಸಿದ ದಿನದಂದು ಕೂಡ ಅವರು ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿ ಔಷಧಗಳನ್ನು ಪಡೆದುಕೊಂಡು ಬಂದಿದ್ದರು.

ಅ. 21ರ ಸಂಜೆ 7.30 ರಿಂದ 8 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ನಾಲ್ಕನೇ ಅಂತಸ್ತಿನ ಮೆಟ್ಟಿಲುಗಳಿಂದ ಜಿಗಿದಿದ್ದ ಕಟಿಯಾರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದರಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಕೆ.ಆರ್.ಪುರಂ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023ರ ಸೆಕ್ಷನ್ 194ರ ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ (UDR) ದಾಖಲಿಸಿಕೊಳ್ಳಲಾಗಿದೆ.

ತಂದೆಯ ಎದುರೇ ನಡೆಯಿತು ದುರಂತ!

ಘಟನೆಯ ದಿನ ಮಗ ಶರದ್ ಅವರ ವಿಚಿತ್ರ ಚಲನವಲನಗಳನ್ನು ಗಮನಿಸಿದ್ದ ಅವರ ವೃದ್ಧ ತಂದೆ, ಅನುಮಾನಗೊಂಡು ಮಗನ ಹಿಂದೆಯೇ ಮನೆಯಲ್ಲಿ ಸುತ್ತಾಡುತ್ತಿದ್ದರು. ಸಂಜೆ 7:30ರ ಸುಮಾರಿಗೆ ಶರದ್ ಏಕಾಏಕಿ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳನ್ನು ಹತ್ತಿ 4ನೇ ಮಹಡಿಗೆ ಧಾವಿಸಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ವೃದ್ಧ ತಂದೆ, ಮಗನನ್ನು ತಡೆಯಲು ಆತನ ಹಿಂದೆಯೇ ಓಡಿದ್ದಾರೆ. ಆದರೆ ವಯಸ್ಸಾದ ಕಾರಣ ಮೆಟ್ಟಿಲುಗಳನ್ನು ಹತ್ತಲಾಗದೆ ತಂದೆ ಆಯಾಸಗೊಂಡಿದ್ದಾರೆ. ತಂದೆ ಬಂದು ತಡೆಯುವಷ್ಟರಲ್ಲೇ ವಿಜ್ಞಾನಿ ಶರದ್ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಕೆಳಗೆ ಹಾರಿದ್ದಾರೆ. ರಕ್ತದ ಮಡುವಿನಲ್ಲಿ ಗಂಭೀರ ಗಾಯಗೊಂಡು ಬಿದ್ದಿದ್ದ ಶರದ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲು ಕುಟುಂಬಸ್ಥರು ಹಾಗೂ ಸ್ಥಳೀಯರು ಮುಂದಾದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.