ಎಐಸಿಸಿ ಅಧ್ಯಕ್ಷರಾಗಿ ನಾಲ್ಕು ವರ್ಷ ಪೂರೈಸಿದ ಮಲ್ಲಿಕಾರ್ಜುನ ಖರ್ಗೆ: ಸಂಘಟನೆಯ ಬಲವರ್ಧನೆ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ: ಡಾ.ಆನಂದ ಕುಮಾರ್
24 ವರ್ಷಗಳ ಬಳಿಕ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್ನ ಪೂರ್ಣಾವಧಿ ಅಧ್ಯಕ್ಷರಾಗುವ ಮೂಲಕ ಪಕ್ಷದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದನ್ನು ದಾಖಲಿಸಿದರು. ಕಾರ್ಮಿಕ ಕುಟುಂಬದ ಖರ್ಗೆ ಅವರ ರಾಜಕೀಯ ಪಯಣ, ತಳಮಟ್ಟದ ಸಂಘಟನೆಯಿಂದ ರಾಷ್ಟ್ರೀಯ ನಾಯಕತ್ವದವರೆಗೆ ತನ್ನ ಹಾದಿಯನ್ನು ಸವೆಸಿದ್ದಾರೆ.
-
ಬೆಂಗಳೂರು: ಎಐಸಿಸಿ(AICC) ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ನಾಲ್ಕು ವರ್ಷಗಳ ಅವಧಿ ಪೂರ್ಣಗೊಳಿಸಿ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಪಕ್ಷ ಸಂಘಟನೆ, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಹೇಳಿದ್ದಾರೆ.
24 ವರ್ಷಗಳ ಬಳಿಕ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್ನ ಪೂರ್ಣಾವಧಿ ಅಧ್ಯಕ್ಷರಾಗುವ ಮೂಲಕ ಪಕ್ಷದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದನ್ನು ದಾಖಲಿಸಿದರು. ಕಾರ್ಮಿಕ ಕುಟುಂಬದ ಖರ್ಗೆ ಅವರ ರಾಜಕೀಯ ಪಯಣ, ತಳಮಟ್ಟದ ಸಂಘಟನೆಯಿಂದ ರಾಷ್ಟ್ರೀಯ ನಾಯಕತ್ವದವರೆಗೆ ತನ್ನ ಹಾದಿಯನ್ನು ಸವೆಸಿದ್ದಾರೆ.
ಐದು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ, ಸಂಸದೀಯ ವ್ಯವಹಾರಗಳಲ್ಲಿನ ಹಿಡಿತ, ಆಡಳಿತ, ಸಂಘಟನಾತ್ಮಕ ರಾಜಕಾರಣದ ಅರಿವು ಖರ್ಗೆ ಅವರ ನಾಯಕತ್ವದ ಪ್ರಮುಖ ಆಯಾಮಗಳಾಗಿವೆ. ಕಾಂಗ್ರೆಸ್ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಪಯಣದಲ್ಲಿ ಪಕ್ಷವನ್ನು ಪುನರ್ಸಂಘಟಿಸುವ ಪ್ರಯತ್ನಗಳನ್ನು ಅವರು ನಡೆಸಿದ್ದು, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟಿದ್ದಾರೆ.
ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D K Shivakumar) ಜೊತೆ ಸಮನ್ವಯ ಸಾಧಿಸಿದ್ದು ಅವರ ಚಾಣಾಕ್ಷ ನಾಯಕತ್ವದ ಪ್ರತೀಕವಾಗಿದೆ ಪ್ರತಿಪಕ್ಷ ರಾಜಕೀಯ ಪಾತ್ರದ ಹಿನ್ನೆಲೆಯಲ್ಲಿ ಅವರ ನಾಯಕತ್ವ ನಿರ್ಣಾಯಕ ವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಲಬುರಗಿಯಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ, 1969ರಲ್ಲಿ ಗುಲ್ಬರ್ಗ ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ತಮ್ಮ ಪಯಣ ಆರಂಭಿಸಿದರು. 1972ರಿಂದ 2009ರವರೆಗೆ ಕರ್ನಾಟಕ ವಿಧಾನಸಭೆಗೆ ಸತತ ಒಂಬತ್ತು ಬಾರಿ ಆಯ್ಕೆಯಾದ ಅವರು, ರಾಜ್ಯ ರಾಜಕಾರಣದಲ್ಲಿ ದೀರ್ಘ ಕಾಲದ ಪ್ರಭಾವ ಬೀರಿದರು. ಶಿಕ್ಷಣ, ಕಂದಾಯ, ಗ್ರಾಮೀಣಾಭಿವೃದ್ಧಿ, ನೀರಾವರಿ, ಸಾರಿಗೆ, ಗೃಹ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದರು. 2009ರಲ್ಲಿ ಲೋಕಸಭೆ ಪ್ರವೇಶಿಸಿದ ಖರ್ಗೆ, ಕೇಂದ್ರ ಸಚಿವರಾಗಿ ರೈಲ್ವೆ ಮತ್ತು ಕಾರ್ಮಿಕ ಸೇರಿದಂತೆ ಪ್ರಮುಖ ಖಾತೆಗಳ ಜವಾಬ್ದಾರಿ ನಿಭಾಯಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನಾಗಿಯೂ ಕಾರ್ಯನಿರ್ವಹಿಸಿದರು. 2020ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಅವರು, 2021ರಲ್ಲಿ ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾದರು. ಈ ಅನುಭವಗಳೇ ಅವರನ್ನು ರಾಷ್ಟ್ರೀಯ ಮಟ್ಟದ ಪಕ್ಷದ ನಾಯಕತ್ವಕ್ಕೆ ಸಿದ್ಧಗೊಳಿಸಿದವು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಸಂವಿಧಾನದ 371ಜೆ ವಿಧಿಯ ಜಾರಿಗಾಗಿ ನಡೆದ ಪ್ರಯತ್ನಗಳಲ್ಲಿನ ಅವರ ಪಾತ್ರವೂ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಗಮನಾರ್ಹವಾಗಿದೆ ಎಂದಿದ್ದಾರೆ.
ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಪಕ್ಷವು ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಲೋಕಸಭಾ ಚುನಾವಣೆಗಳಲ್ಲಿನ ಹಿನ್ನಡೆ, ಹಲವು ರಾಜ್ಯಗಳಲ್ಲಿ ಸಂಘಟನೆಯ ದುರ್ಬಲತೆ, ನಾಯಕತ್ವದ ಕುರಿತು ಚರ್ಚೆಗಳು ಕಾಂಗ್ರೆಸ್ ಮುಂದಿದ್ದ ಪ್ರಮುಖ ಸವಾಲುಗಳಾಗಿ ದ್ದವು. ಇಂತಹ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದ್ದಲ್ಲದೇ ರಾಜ್ಯ ಘಟಕಗಳನ್ನು ಸಕ್ರಿಯಗೊಳಿಸುವ ಮತ್ತು ಪಕ್ಷದ ರಾಜಕೀಯ ಸಂದೇಶವನ್ನು ಜನರ ಬಳಿಗೆ ತಲುಪಿಸುವ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು.
ಖರ್ಗೆ ನಾಯಕತ್ವದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹಾಗೂ ನಂತರದ ರಾಜಕೀಯ ಚಟುವಟಿಕೆಗಳು ಕಾಂಗ್ರೆಸ್ನ ಜನಸಂಪರ್ಕ ಪ್ರಯತ್ನಗಳಿಗೆ ವೇದಿಕೆಯಾದವು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು, ಪ್ರತಿಪಕ್ಷವಾಗಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಿತು ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಚಿಂತನೆಯ ಪ್ರಮುಖ ಅಂಶವೆಂದರೆ ಸಾಮಾಜಿಕ ನ್ಯಾಯ, ಸಂವಿಧಾನದ ಮೌಲ್ಯಗಳು ಮತ್ತು ದುರ್ಬಲ ವರ್ಗಗಳ ಹಕ್ಕುಗಳ ಪ್ರತಿಪಾದನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕಾರ್ಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ಸಮಸ್ಯೆಗಳನ್ನು ರಾಜಕೀಯ ಚರ್ಚೆಯ ಕೇಂದ್ರಕ್ಕೆ ತರಲು ಅವರು ಒತ್ತು ನೀಡಿದ್ದಾರೆ. ಜಾತಿ ಗಣತಿ, ಮೀಸಲಾತಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಸಮಾನ ಹಂಚಿಕೆ ಕುರಿತ ಕಾಂಗ್ರೆಸ್ನ ನಿಲುವುಗಳನ್ನು ಸಮರ್ಥಿಸುವಲ್ಲಿ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರಜಾಪ್ರಭುತ್ವದ ಸಂಸ್ಥೆಗಳ ಸ್ವಾಯತ್ತತೆ, ಸಂವಿಧಾನದ ಆಶಯಗಳು ಮತ್ತು ಸಂಸತ್ತಿನ ಚರ್ಚೆಗಳ ಮಹತ್ವವನ್ನು ಅವರು ತಮ್ಮ ಭಾಷಣಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಘೋಷಣೆಗಳು ಜನರ ಜೀವನದಲ್ಲಿ ಸ್ಪಷ್ಟ ಬದಲಾವಣೆಯನ್ನು ತರಬೇಕಾದರೆ, ಅವುಗಳಿಗೆ ಸಂಬಂಧಿಸಿದ ನೀತಿಗಳು, ಸಂಘಟನಾ ಕಾರ್ಯಕ್ರಮಗಳು ಮತ್ತು ನಿರಂತರ ಜನಸಂಪರ್ಕವೂ ಅಗತ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ಭರವಸೆಗಳನ್ನು ಜನರ ಅನುಭವ ದೊಂದಿಗೆ ಜೋಡಿಸುವುದು ಮುಖ್ಯವಾಗಿದೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಪಕ್ಷದ ಸಂಘಟನೆಯನ್ನು ಪುನರ್ವ್ಯವಸ್ಥಿತಗೊಳಿಸುವ ಪ್ರಯತ್ನಗಳು ನಡೆದಿವೆ. ವಿವಿಧ ರಾಜ್ಯಗಳಲ್ಲಿ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು, ಚುನಾವಣಾ ತಂತ್ರ ರೂಪಿಸುವುದು ಮತ್ತು ಮಿತ್ರಪಕ್ಷಗಳೊಂದಿಗೆ ಸಮನ್ವಯ ಸಾಧಿಸುವುದು ಅವರ ನಾಯಕತ್ವದ ಭಾಗವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಮತ್ತೊಂದೆಡೆ, ಅಧ್ಯಕ್ಷರಾಗಿ ಸಂಘಟನಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ವಿವಿಧ ನಾಯಕರ ನಡುವೆ ಸಮನ್ವಯ ಸಾಧಿಸುವ ಕೆಲವನ್ನು ನಿರ್ವಹಿಸುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಸಾಮಾಜಿಕ ನ್ಯಾಯ, ಮಹಿಳಾ ಮೀಸಲಾತಿ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕಾರ್ಯವೈಖರಿಯಂತಹ ವಿಷಯಗಳಲ್ಲಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸು ತ್ತಿದ್ದಾರೆ. ಆದರೆ ಪ್ರತಿಪಕ್ಷದ ರಾಜಕೀಯ ಪ್ರಭಾವವು ಕೇವಲ ಸರ್ಕಾರದ ವಿರುದ್ಧದ ಟೀಕೆಯಿಂದ ನಿರ್ಧಾರವಾಗುವುದಿಲ್ಲ.
ಪರ್ಯಾಯ ನೀತಿಗಳನ್ನು ಮುಂದಿಡುವುದು, ಜನರಿಗೆ ಅರ್ಥವಾಗುವ ಕಾರ್ಯಕ್ರಮಗಳನ್ನು ರೂಪಿಸುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಾಮರ್ಥ್ಯವೂ ಮುಖ್ಯವಾಗುತ್ತದೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.