ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೋಗಿಗಳಿಗೆ ಸೂಕ್ತ ಸಮಯದಲ್ಲಿ ಅಂಗಾಂಗಗಳು ಲಭ್ಯವಾಗುವುದು ಸವಾಲು: ಅಂಗಾಂಗಗಳ ಕೊರತೆ: ಕಸಿಗಾಗಿ 6291 ಜೀವ ಕಾತರ

ಅಂಗಾಂಗ ದಾನದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಆಸ್ಪತ್ರೆಗಳಲ್ಲಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ದಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಈ ನಿಟ್ಟಿನಲ್ಲಿ ಅಗತ್ಯವಾಗಿದೆ. ರಾಜ್ಯದಲ್ಲಿ ಅಂಗಾಂಗಗಳ ಕೊರತೆ ನೀಗಿಸುವ ಉದ್ದೇಶ ದಿಂದ ಅಂಗಾಂಗ ಕಸಿ ಕ್ಷೇತ್ರದ ದೀರ್ಘಕಾಲೀನ ಯೋಜನೆ ರೂಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಅಂಗಾಂಗಗಳ ಕೊರತೆ: ಕಸಿಗಾಗಿ 6291 ಜೀವ ಕಾತರ

-

Profile
Ashok Nayak Oct 27, 2026 5:18 PM

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ಕಸಿಯ ಅಗತ್ಯವಿರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಅಂಗಾಂಗಗಳು ಲಭ್ಯವಾಗುವುದು ಇನ್ನೂ ಸವಾಲಾಗಿದೆ. ರಾಜ್ಯದಲ್ಲಿ ಒಟ್ಟು 6291 ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಅಂಗಾಂಗ ಕಸಿ ಅಗತ್ಯವಿರುವ ರೋಗಿಗಳಿಗೆ ದಾನಿಗಳಿಂದ ಅಂಗಾಂಗಗಳು ದೊರೆಯುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಅಂಗಾಂಗಗಳು ಲಭ್ಯವಾಗದ ಕಾರಣ ಅನೇಕರು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ವಿಶೇಷವಾಗಿ ಕಿಡ್ನಿ ಮತ್ತು ಯಕೃತ್ತಿನ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಈ ಕೊರತೆ ದೊಡ್ಡ ಸವಾಲಾಗಿದೆ.

ಅಂಗಾಂಗ ದಾನದ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಆಸ್ಪತ್ರೆಗಳಲ್ಲಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ದಾನಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಈ ನಿಟ್ಟಿನಲ್ಲಿ ಅಗತ್ಯವಾಗಿದೆ. ರಾಜ್ಯದಲ್ಲಿ ಅಂಗಾಂಗಗಳ ಕೊರತೆ ನೀಗಿಸುವ ಉದ್ದೇಶ ದಿಂದ ಅಂಗಾಂಗ ಕಸಿ ಕ್ಷೇತ್ರದ ದೀರ್ಘಕಾಲೀನ ಯೋಜನೆ ರೂಪಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಅಂಗಾಂಗ ದಾನದ ಪ್ರಮಾಣ ಹೆಚ್ಚಿಸುವುದು ಮತ್ತು ಅಗತ್ಯವಿರುವ ರೋಗಿಗಳಿಗೆ ಅಂಗಾಂಗಗಳು ಲಭ್ಯವಾಗುವ ವ್ಯವಸ್ಥೆಯನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅಂಗಾಂಗ ಕಸಿ ದೂರದೃಷ್ಟಿ ಸಮಿತಿ ರಚನೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: Health Tips: ಹಬ್ಬದ ಖಾದ್ಯಗಳ ನೋಡಿ ಸೋಲದಿರಲಿ ಮನಸ್ಸು; ಜೋಪಾನವಾಗಿರಲಿ ಆರೋಗ್ಯ

ಜನರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಹೊಸ ಕಾರ್ಯತಂತ್ರ ರೂಪಿಸುವುದರ ಜತೆಗೆ, ಜಿ ಆಸ್ಪತ್ರೆಗಳಲ್ಲಿ ಮಿದುಳು ನಿಷ್ಕ್ರಿಯತೆಯನ್ನು ದೃಢೀಕರಿಸುವ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಅಂಗಾಂಗಗಳನ್ನು ದಾನಕ್ಕಾಗಿ ಹಿಂಪಡೆಯುವ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಸೌಲಭ್ಯಗಳನ್ನು ವಿಸ್ತರಿಸುವುದು, ಅಂಗಾಂಗ ಹಂಚಿಕೆ ಪ್ರಕ್ರಿಯೆಯನ್ನು ಸುಧಾರಿಸುವುದು ಹಾಗೂ ರೋಗಿಗಳ ವಿವರಗಳನ್ನು ಸಮರ್ಪಕವಾಗಿ ನಿರ್ವ ಹಿಸಲು ಹೊಸ ತಂತ್ರಾಂಶ ಜಾರಿಗೆ ತರುವ ಯೋಜನೆಯೂ ಇದೆ. ಅಂಗಾಂಗ ದಾನ ಮಾಡಿ ದವರ ಕೊಡುಗೆಯನ್ನು ಗುರುತಿಸಿ ಗೌರವಿಸುವ ಕಾರ್ಯ ಕ್ರಮಗಳ ಮೂಲಕವೂ ದಾನದ ಮಹತ್ವವನ್ನು ಜನರಿಗೆ ತಿಳಿಸಲು ಇಲಾಖೆ ಉದ್ದೇಶಿಸಿದೆ.

ಕಿಡ್ನಿ, ಯಕೃತ್‌ಗೆ ಬೇಡಿಕೆ ಅಂಗಾಂಗಗಳ ಕೊರತೆಯ ಪರಿಣಾಮವಾಗಿ ಕಿಡ್ನಿ ಕಸಿಗಾಗಿ ಕಾಯುತ್ತಿರುವ ರೋಗಿಗಳು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕಿಡ್ನಿಗಾಗಿ ಕಾಯುವ ಅವಧಿ ಸುಮಾರು ಐದು ವರ್ಷಗಳವರೆಗೆ ತಲುಪಿದೆ. ಯಕೃತ್ತಿನ ಕಸಿಗಾಗಿ ಕಾಯುವ ಅವಽ ಸುಮಾರು ನಾಲ್ಕೂವರೆ ವರ್ಷಗಳಷ್ಟಿದೆ ಎಂದು ತಿಳಿಸಲಾಗಿದೆ.

ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಸರಕಾರದ ‘ಜೀವನ ಸಾರ್ಥಕತೆ’ ಯೋಜನೆಯ ನಿರೀಕ್ಷಿತ ಫಲಿತಾಂಶ ಸಾಧಿಸುವುದು ಇನ್ನೂ ಸವಾಲಾಗಿದೆ. ಅಂಗಾಂಗ ದಾನದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಒದಗಿಸುವುದು, ದಾನಕ್ಕೆ ಸಂಬಂಧಿಸಿದ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಬಲಪಡಿಸುವುದು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

image

ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ರಕ್ತದಾನ, ದೇಹದಾನ, ನೇತ್ರದಾನದಂತೆಯೇ ಅಂಗಾಂಗ ದಾನವೂ ಬಹಳ ಪವಿತ್ರವಾದ ದಾನವಾಗಿರುತ್ತದೆ. ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡಾ ಅಂಗಾಂಗ ದಾನ ಮಾಡಬಹುದು. ಸ್ವ ಇಚ್ಛೆಯಿಂದ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು.

-ಡಾ.ಶಿವಲಿಂಗಯ್ಯ,ನಿರ್ದೇಶಕರು ನೆಪ್ರೋ ಯುರಾಲಜಿ ಸಂಸ್ಥೆ